Breaking News: ಮುಂಬೈ ಸಾಹಿತಿ ತುಳಸಿ ವೇಣುಗೋಪಾಲ್ ಇನ್ನಿಲ್ಲ

ಮುಂಬೈ ಸಾಹಿತ್ಯ ಲೋಕದ ಮುಖ್ಯ ಕೊಂಡಿಗಳಲ್ಲೊಬ್ಬರಾದ ಸಾಹಿತಿ ತುಳಸಿ ವೇಣುಗೋಪಾಲ್ ಅವರು ಇಂದು ಮಂಗಳೂರಿನಲ್ಲಿ ನಿಧನ ಹೊಂದಿದರು.

ಮುಂಬೈನ ಸಾಹಿತ್ಯ ಲೋಕದ ಮುಖ್ಯ ಸಂಘಟನೆಯಾದ ‘ಸೃಜನಾ’ದಲ್ಲಿ ಹಾಗೂ ‘ಸ್ಪಾರೋ’ ಎನ್ನುವ ಮಹಿಳಾ ಆಶಯಗಳ ಬರಹ ಸಂಸ್ಥೆಯಲ್ಲಿ ಅವರು ಪ್ರಮುಖವಾಗಿ ಗುರುತಿಸಿಕೊಂಡಿದ್ದರು.
ಅವರ ಪತಿ ಕೆ ಟಿ ವೇಣುಗೋಪಾಲ್ ಅವರು ಉದಯವಾಣಿ ಬಳಗದ ಪ್ರತಿನಿಧಿಯಾಗಿದ್ದರು.
ತುಳಸಿ ವೇಣುಗೋಪಾಲ ಅವರು ‘ಪುಟಗಳ ಮಧ್ಯದಲ್ಲೊಂದು ನವಿಲುಗರಿ’ ಕವನ ಸಂಕಲನ, ‘ಮುಂಜಾವಿಗೆ ಕಾದವಳು’ ಕಥಾ ಸಂಕಲನ ಪ್ರಕಟಿಸಿದ್ದರು. ಪತಿ ಕೆ ಟಿ ವೇಣುಗೋಪಾಲ್ ಅವರ ಜೊತೆ ‘ಜುಗಲಬಂದಿ’ ಕಥಾ ಸಂಕಲನ ಹೊರತಂದಿದ್ದರು.

ಈ ಹೊತ್ತಿಗೆ’ ಬಳಗ ಈ ಕೃತಿಯ ಕುರಿತು ಚರ್ಚೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿತ್ತು. ಈ ಬಗ್ಗೆ ಸವಿತಾ ಗುರುಪ್ರಸಾದ್ ಅವರು ವಿವರವಾದ ವರದಿಯನ್ನು ಪ್ರಕಟಿಸಿದ್ದು ಸಾಹಿತ್ಯದ ಓದುಗರಿಗಾಗಿ ಅದು ಇಲ್ಲಿ ನೀಡುತ್ತಿದ್ದೇವೆ.

16-11-2014ರಂದು ‘ಈ ಹೊತ್ತಿಗೆ’ಯಲ್ಲಿ ನಡೆದ ತುಳಸಿ ವೇಣುಗೋಪಾಲ ಮತ್ತು ಕೆ. ಟಿ. ವೇಣುಗೋಪಾಲ ಅವರ ಕಥಾ ಸಂಕಲನ ‘ಜುಗಲಬಂದಿ’ ಚರ್ಚೆಯ ವರದಿ.
*****
ಸವಿತಾ ಗುರುಪ್ರಸಾದ್

‘ಈ ಹೊತ್ತಿಗೆ’ಯ ಚರ್ಚೆಯಲ್ಲಿ ಆ ಹೊತ್ತಿಗೆ ಅಲ್ಲಿ ಉಪಸ್ಥಿತರಿದ್ದವರು ಜಯಲಕ್ಷ್ಮೀ ಪಾಟೀಲ್, ಜಯಶ್ರೀ ಕಾಸರವಳ್ಳಿ ,ತೇಜಸ್ವಿನಿ ಹೆಗಡೆ, ಎಸ್. ದಿವಾಕರ್, ವೀರೇಂದ್ರ ಗೌಡ, ಮುರಳಿ ಪಿ.ಬಿ, ಅಶೋಕ್ ಪಾಟೀಲ್ ಮತ್ತು ಸವಿತಾ ಗುರುಪ್ರಸಾದ್.

ಚರ್ಚೆಯನ್ನಾರಂಭಿಸಿದ ಜಯಶ್ರೀ ಕಾಸರವಳ್ಳಿ ಅವರು : ತುಳಸಿಯವರು ಬರೆಯಬೇಕಾದ ಕಥೆಯನ್ನು ವೇಣು ಗೋಪಾಲ್ ಅವರು ಬರೆದಿದ್ದಾರೆ ಹಾಗೂ ವೇಣುಗೋಪಾಲ್ ಅವರು ಬರೆಯಬೇಕಾದ ಕಥೆಯನ್ನ ತುಳಸಿಯವರು ಬರೆದಿದ್ದಾರೆ ಅನಿಸುತ್ತದೆ ಅಂದರೆ ಸಾಮಾನ್ಯವಾಗಿ ಮಹಿಳಾ ಲೇಖಕರು ತುಂಬಾ ಭಾವನಾತ್ಮಕವಾಗಿ ಬರೆಯುತ್ತಾರೆ ಎಂಬ ಆರೋಪ ಇದೆ ಆದರೆ ಇಲ್ಲಿ ನಮಗೆ ಇಬ್ಬರೂ ಬರೆದ ವಿಭಿನ್ನ ಕಥೆಗಳು ಸಿಕ್ಕಿವೆ ಹಾಗೆಯೇ ತುಳಸಿಯವರ ನಾಲ್ಕು ಕಥೆಗಳೂ ತುಂಬಾ ವಿಭಿನ್ನವಾಗಿದ್ದು ಎಲ್ಲಿಯೂ ತುಳಸಿಯವರ ಪಾತ್ರ ಕಾಣಿಸಿಕೊಳ್ಳುವುದಿಲ್ಲ . ತುಂಬಾ ನಿರ್ಭಾವುಕರಾಗಿ ಕಥೆಯನ್ನ ಹೊರಗಿನಿಂದ ನಿಂತು ಕಥೆಯನ್ನಷ್ಟೇ ಹೇಳಿದ್ದಾರೆ, ಕಥೆಗಳಲ್ಲಿ ನಿರೂಪಕನ ದೃಷ್ಟಿಕೋನವನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ . ಹಾಗೂ ತುಂಬಾ ಸ್ಥಿತ ಪ್ರಜ್ಞವಾದ ದೃಷ್ಟಿಕೋನದಿಂದ ಬರೆದಿದ್ದಾರೆ ಎಂದು ಹೇಳಿದರು , ಆದರೆ ವೇಣುಗೋಪಾಲ್ ಅವರ ಗೇಟ್ ವೇ ಕಥೆಯೊಂದನ್ನು ಹೊರತುಪಡಿಸಿ ಉಳಿದೆಲ್ಲಾ ಕಥೆಗಳೂ ವರದಿಯ ವಿಸ್ತಾರಗೊಳಿಸಿದ ಕಥೆಗಳಾಗಿವೆ ಎನ್ನುವ ಅಭಿಪ್ರಾಯ ಸೂಚಿಸಿದರು .

ಎಸ್. ದಿವಾಕರ್ ಅವರು ತುಳಸಿ ವೇಣುಗೋಪಾಲ್ ಅವರು ತುಂಬಾ ಸಶಕ್ತ ಕತೆಗಾರ್ತಿ ಎಂದರು.

ಜಯಲಕ್ಷ್ಮೀ ಪಾಟೀಲ್ ಅವರು ಮಾತನಾಡಿ : ತುಳಸಿ ಅವರ ಕಥೆಗಳಲ್ಲಿ ಬರುವ ಪಾತ್ರವನ್ನು ಪಾತ್ರವಾಗಿ ಬರೆದಿದ್ದಾರೆ . ನಿರೂಪಕರಾಗಿ ಅವರು ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಆವಿಷ್ಕಾರ , ಹೊಂಚು, ಕೊನೆಯ ಸಾಲಿನ ಹುಡುಗ ಕಥೆಗಳು, ಆ ಕಥೆಗಳ ವಸ್ತುಗಳಿಂದ ತುಂಬಾ ಇಷ್ಟವಾಗುತ್ತದೆ. ಅವರು ಬರೆದ ರೀತಿ ತುಂಬಾ ಓದಿಸಿಕೊಂಡು ಹೋಯಿತು ಅಷ್ಟು ಚೆನ್ನಾಗಿ ಸೂಕ್ಷ್ಮತೆಗಳನ್ನ ಬರೆದಿದ್ದಾರೆ ಅದರ ಧ್ವನಿ ತುಂಬಾ ಚೆನ್ನಾಗಿದೆ ,ಇಲ್ಲಿ ಭಾವನೆಗಳನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು .

ಸವಿತಾ ಗುರುಪ್ರಸಾದ್ ಅವರು ಮಾತನಾಡಿ : ವೇಣುಗೋಪಾಲ್ ಅವರ ಕಥೆಗಳಿಗಿಂತ ತುಳಸಿಯವರ ಕಥೆಗಳು ಹೆಚ್ಛು ಆಪ್ತವೆನಿಸುತ್ತವೆ ಸೂಕ್ಷ್ಮ ಸಂವೇದನೆಗಳನ್ನ ಚೆನ್ನಾಗಿ ಸರಳವಾಗಿ ಹೇಳಿದ್ದಾರೆ ಹಾಗೂ ವೇಣುಗೋಪಾಲ್ ಅವರ ಕಥೆಯಲ್ಲಿ ಗೇಟ್ ವೇ ಕಥೆಯನ್ನು ಹೊರತುಪಡಿಸಿ ಉಳಿದೆಲ್ಲ ಕಥೆಗಳು ಅಷ್ಟು ಹತ್ತಿರವಾಗಲಿಲ್ಲ ಎಂದರು .

ತೇಜಸ್ವಿನಿ ಹೆಗಡೆಯವರು ಮಾತನಾಡಿ: ಇಡೀ ಕಥಾ ಸಂಕಲನ ಕಥೆಯ ಹೆಸರು ಹೇಳಿದ ತಕ್ಷಣ ಆಯಾ ಕಥೆಯು ನೆನಪಿಗೆ ಬರುತ್ತದೆ ಅಂದರೆ ಓದುಗನ ನೆನಪಲ್ಲಿ ಛಾಪು ಮೂಡಿಸುವಲ್ಲಿ ಇಡೀ ಕಥಾ ಸಂಕಲನ ಸಶಕ್ತವಾಗಿದೆ ಎಂಬ ಅಭಿಪ್ರಾಯ ಪಟ್ಟರು . ಹಾಗೂ ಎಲ್ಲಾ ಕಥೆಗಳನ್ನು ಕಮ್ಮಟದಲ್ಲಿ ದಿವಾಕರ್ ಸರ್ ಹೇಳಿದ ಕೆಲವು ಅಂಶಗಳನ್ನು ಉದಾ : ಕಥಾ ರಚನೆಯಲ್ಲಿ ನಿರೂಪಣೆ, ನಿರೂಪಣಾ ತಂತ್ರ, ಧ್ವನಿ ಅವುಗಳನ್ನು ಗಣನೆಯಲ್ಲಿಟ್ಟುಕೊಂಡು ಎಲ್ಲ ದೃಷ್ಟಿಕೋನದಿಂದ ಓದಿದ್ದರಿಂದ ಕಥೆಯನ್ನು ಹೊರಗೆ ನಿಂತು , ಓದಲು ಸಹಾಯವಾಯಿತು ಎಂದು ಹೇಳಿದರು . ಬೇಂದ್ರೆಯವರ ಸಾಲನ್ನು ಉದಾಹರಿಸುತ್ತಾ ‘ಇದು ಬೆಳಗಲ್ಲೋ ಅಣ್ಣ’ ಎಂಬ ಸಾಲಿನಂತೆ ಯಾವುದೋ ಒಂದು ಅನಿರ್ವಚನೀಯ ಅನುಭೂತಿಯನ್ನು ತುಳಸಿಯವರು ಬರೆಯುವ ಒಂದು ಸಾಲಿನಲ್ಲಿ ಕಾಣಿಸುತ್ತದೆ ಎಂದರು .ವೇಣುಗೋಪಾಲ್ ಅವರ ಕಥೆ ವರದಿ ರೀತಿಯಲ್ಲಿದೆ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸುತ್ತಾ . ಗೇಟ್ ವೇ ಕಥೆಯಲ್ಲಿ ಕರ್ತವ್ಯ ಮುಖ್ಯವೋ ಮಾನವೀಯತೆ ಮುಖ್ಯವೋ ಅನ್ನುವುದರ ಮೂಲಕ ಪತ್ರಿಕೋದ್ಯಮದ ಚಿತ್ರಣವನ್ನು ತೆರೆದಿಟ್ಟಿದ್ದಾರೆ . ತುಳಸಿಯವರ ಕಥೆಯಲ್ಲಿ ಬರುವ ಒಂದು ಸಾಲಿನಲ್ಲಿ ಇಡೀ ಕಥೆಯನ್ನು ತಿಳಿಸುವ ಹಾಗೆ ವೇಣುಗೋಪಾಲ್ ಅವರ ರಾಜೀವ ಕಥೆಯಲ್ಲಿ ಬರುವ ”ಕಾಲ ಕೆಳಗಿನ ಮರಳನ್ನು ಕೊರೆದು ,ಕೊಚ್ಚಿ ಕೊಂಡೊಯ್ಯುವ ತೆರೆಗಳ ಕುಟಿಲತನಕ್ಕೆ ಸಡ್ಡು ಹೊಡೆದು ಸಮತೋಲನದಲ್ಲಿ ನಿಲ್ಲುತ್ತಿದ್ದ ರಾಜೀವನ ನಗು ಈಗಲೂ ಕಿವಿಯೊಳಗೆ ಮಾರ್ಧನಿ ಕೊಟ್ಟಂತಾಯಿತು ”. ಈ ಸಾಲು ಇಡೀ ಕಥೆಯನ್ನು ಚೆನ್ನಾಗಿ ಕಟ್ಟಿ ಕೊಡುವಲ್ಲಿ ತುಂಬಾ ಸಶಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು . ಅಪಘಾತ ಕಥೆ ಸಾಮಾನ್ಯ ಕಥೆ ಎಂದು ಅನಿಸಿದರೂ ಎಲ್ಲಾ ಕಥೆಗಳೂ ಇಷ್ಟವಾಯಿತು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು .

ಅಶೋಕ್ ಪಾಟಿಲ್ ಅವರು ಮಾತನಾಡಿ : ವೇಣುಗೋಪಾಲ್ ಅವರು ಬರೆದ ಅಪಘಾತ ಕಥೆ ತುಳಸಿ ಅವರು ಬರೆದ ಕಥೆಯ ಹಾಗೆ ಅನಿಸುತ್ತದೆ .ಎಲ್ಲಾ ಕಥೆಗಳೂ ಇಷ್ಟವಾಯಿತು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು .

ಮುರಳಿಯವರು ಮಾತನಾಡುತ್ತಾ : ತುಳಸಿಯವರ ನಾಲ್ಕೂ ಕಥೆಳೂ ತುಂಬಾ ಇಷ್ಟವಾದವು ,ಅವರು ಯಾವುದೇ ವಾಕ್ಯವನ್ನು ವಾಚ್ಯವಾಗಿ ಹೇಳದೆ ಸೂಚ್ಯವಾಗಿ ಹೇಳಿದ್ದಾರೆ ,ಎಲ್ಲಿಯೂ ಆಡಂಭರವಾಗಿರದೆ ಸರಳವಾಗಿ ಹೇಳಿದ್ದಾರೆ ,ಕಥೆಯಲ್ಲಿ ಬರುವ ಪಾತ್ರಗಳ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳನ್ನ ನಿರ್ಭಾವುಕರಾಗಿ ಹೇಳುವುದರ ಮೂಲಕ ಇನ್ನಷ್ಟು ನಮ್ಮನ್ನು ಆಳಕ್ಕೆ ಇಳಿಸುತ್ತದೆ ಹಾಗೂ ಒಟ್ಟು ಇಬ್ಬರ ಕಥೆಗಳಲ್ಲಿ ಹೇಳುವುದಾದರೆ ತುಳಸಿಯವರ ಕಥೆಯಲ್ಲಿ ಹೆಚ್ಚಿನ ಕಾವ್ಯಗುಣವನ್ನು ಕಾಣುತ್ತೇವೆ ವೇಣುಗೋಪಾಲ್ ಅವರ ಕಥೆಗಳು ಅಷ್ಟು ಆಳಕ್ಕೆ ಇಳಿಯದೆ ವರದಿಯ ರೂಪದಲ್ಲಿ ಕಾಣಿಸುತ್ತದೆ ಎಂಬ ಅಭಿಪ್ರಾಯ ಸೂಚಿಸಿದರು.

ಇಡೀ ಕಥಾಸಂಕಲನದಲ್ಲಿ ತುಳಸಿಯವರ ಕಥೆಗಳು ಅತ್ಯುತ್ತಮವಾಗಿದೆ ಎನ್ನುವುದು ಒಮ್ಮತದ ಅಭಿಪ್ರಾಯವಾಗಿತ್ತು.

ಚರ್ಚೆಯಲ್ಲಿ, ವಿಶ್ವದ ಅನೇಕ ಬೇರೆ ಉತ್ತಮ ಬರಹಗಾರರ ಬರಹಗಳ ಕುರಿತೂ ಜಯಶ್ರೀ ಕಾಸರವಳ್ಳಿಯವರು ಮತ್ತು ಎಸ್. ದಿವಾಕರ್ ಅವರು ಚರ್ಚಿಸಿದರು..

2 comments

  1. ತುಳಸಿಯವರು ಹೋಗಿಬಿಟ್ಟರೇ ? ,,,, ನಂಬಲಾಗುತ್ತಿಲ್ಲ. ಬಹಳ ಲವಲವಿಕೆಯ ಮಹಿಳೆ. ಒಳ್ಳೆಯ ‌ಕತೆಗಾರ್ತಿ. ಇಷ್ಟು ಬೇಗ ? ನಂಬಲಾಗುತ್ತಿಲ್ಲ,,

  2. ಫೋಟೋದಲ್ಲಿರುವ ಮೂವರಲ್ಲಿ ತುಳಸಿ ಅವರು ಯಾರೆಂಬುದನ್ನು ಸೂಚಿಸಬೇಕಾಗಿತ್ತು.

Leave a Reply