ಮುಂಜಾವಿಗೆ ಕಾದವಳು ಇಳಿಸಂಜೆಯಲ್ಲೇ ಬಿಟ್ಟು ಹೋದವಳು..

ಮುಂಜಾವಿಗೆ ಕಾದವಳು ಇಳಿಸಂಜೆಯಲ್ಲೇ ಬಿಟ್ಟು ಹೋದವಳು –  ತುಳಸಿ ವೇಣು ಗೋಪಾಲ್

ಹೇಮಾ ಸದಾನಂದ್ ಅಮೀನ್ /ಮುಂಬೈ

ಬದುಕಿನಲಿ ಕೆಲಮೊಮ್ಮೆ ಕೆಲವರು ಬಹು ಬೇಗನೆ ನಮಗೆ ಆತ್ಮೀಯರಾಗುತ್ತಾರೆ. ಅಷ್ಟೇ ಬೇಗನೆ ನಮ್ಮಿಂದ ದೂರವಾಗುತ್ತಾರೆ. ಅಂತಹವರಲ್ಲಿ ಮುಂಬಯಿ ಕನ್ನಡ ಸಾರಸ್ವತ ಲೋಕದ ಸಾಹಿತಿ ತುಳಸಿ ವೇಣುಗೋಪಾಲ್ ಅವರೂ ಒಬ್ಬರು.

ತಾರೀಖು ಮೂರನೆಯ ಬೆಳಿಗ್ಗೆ ನಾನು  ನನ್ನ ಕೆಲಸ ಮುಗಿಸಿ ವಾಟ್ಸಾಪ್ ನೋಡಲು ‘ ‘ Tulsi is critical’  ಎಂಬ ಸಂದೇಶ ನೋಡಿ ದಿಗಿಲು ಹಾರಿತು.  ಒಂದು ಕ್ಷಣಕ್ಕೆ ಏನು ಮಾಡಬೇಕೆಂದು ತೋಚಲಿಲ್ಲ. ‘ಸೃಜನ’ದ ಸಂಚಾಲಕಿ ಮೀನಾಕ್ಷಿ ಕಳಾವರ್ ಅವರಿಗೆ ಈ ವಿಷಯ ತಿಳಿಸಿದೆ. ಅವರೂ ಗೊಂದಲಗೊಂಡರು.  ಇದ್ಯಾರೋ ತಮಾಷೆ ಮಾಡುತ್ತಿರಬಹುದೆಂದು ನೇರವಾಗಿ ಅವ್ರ ಮೊಬೈಲಿಗೆ ಫೋನಾಯಿಸಿದೆ. ಎದುರಿಗೆ ಮಾತನಾಡುತ್ತಿರುವ ವ್ಯಕ್ತಿ ಅವರಾಗಿರಲಿಲ್ಲ. ಅವರ ತಂಗಿ  ತುಳಸಿ ಅವರ ಅರೋಗ್ಯ ತೀರ ಗಂಭೀರವಾಗಿದ್ದು. “ಅವರೀಗ ಸೆಮಿ ಕೋಮದಲ್ಲಿದ್ದಾರೆ”. ಎಂದಾಗ ನನಗೆ ನಂಬಲಸಾಧ್ಯ.

ಅವರಿಗೆ ಯಕೃತ್ತಿನಲ್ಲಿ ಕ್ಯಾನ್ಸರ್ ಆಗಿರುವುದಾಗಿ ಅದು ನವೆಂಬರ್ ತಿಂಗಳಲ್ಲೇ ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದಿದ್ದು.  ಮುಂದಿನ ಚಿಕಿತ್ಸೆ ಮಂಗಳೂರಿನಲ್ಲಿ ಮಾಡಲಾಗಿತ್ತು. ಎರಡು ತಿಂಗಳಲ್ಲಿ ಅವರ ದೇಹ ಹಾಗೂ ಮನಸ್ಸು ಚಿಕಿತ್ಸೆಗೆ ಸ್ಪಂದಿಸುತ್ತಾ ಸುಧಾರಿಸಿಕೊಂಡಿತ್ತು. ಆದರೆ ಕಳೆದ ತಿಂಗಳಿನಿಂದ ಇದ್ದಕ್ಕಿದ್ದ ಹಾಗೆ ದೇಹ ಸ್ಪಂದಿಸುವುದೂ ಕಡಿಮೆಯಾಗಿ ತುಳಸಿ ಅವರು ಮಾನಸಿಕವಾಗಿಯೂ ಖಿನ್ನರಾದರೆಂದು ಅವರ ತಂಗಿ ಹೇಳುತಿದ್ದಾಗ ಒಂದೇ ಸವನೆ ಕಣ್ಣೀರು.

ಫೋನ್ ಇಟ್ಟ ನನಗೆ ತಡೆಯಲಾಗದೆ ನಾನು ಸೃಜನದ  ಸದಸ್ಯೆಯರಲ್ಲಿ ಈ ವಿಷಯ ಹೇಳಿಕೊಂಡಿದ್ದೆ.  ಎಲ್ಲರಿಗೂ ಈ ವಿಷಯ ಚೋದ್ಯವಾಗಿಯೇ ಕಂಡಿತು. ಅವರ ಮನೆಯವರಿಗೆ ತೊಂದರೆಯಾಗಬಾರದೆಂದು ನಾನು ಮೆಸೇಜ್ ಮೂಲಕ ಅವರ ಆರೋಗ್ಯದ ಬಗ್ಗೆ ವಿಚಾರಣೆ ಮಾಡುತ್ತಲೇ ಇದೆ. ಎರಡು ದಿನ ಮುಂಚೆ ಸ್ಥಿತಿ ಚಿಂತಾಜನಕವಾಗಿದೆ ಎಂದು ಉತ್ತರ ಬಂದಿತ್ತು. ಆ ಬಳಿಕ  ನಿನ್ನೆ ತಾರೀಖು ೦೮.೦೪.೨೦೧೯ ರ  ಬೆಳಿಗ್ಗೆ ಅವರ ಮಗನ ಸಂದೇಶ “ amma is no more “  ನೋಡಿದಾಕ್ಷಣ  ದುಃಖ ತಡೆಯಾಲಾಗಲಿಲ್ಲ.

ನನ್ನ ಮತ್ತು ತುಳಸಿ ವೇಣುಗೋಪಾಲ ಅವರ ಪರಿಚಯವಾದದ್ದೇ  ಸೃಜನ ಮುಂಬಯಿ ಲೇಖಕಿಯರ ಬಳಗದ ವ್ಹಾಟ್ ಆಪ್ ಗ್ರೂಪಿನಲ್ಲಿ. ನಮ್ಮ ‘ ಓದು ಮುಗಿಸಿದ ಬಳಿಕ’  ಕೃತಿ ವಿಮರ್ಶಾ ಸಂಗ್ರಹಕ್ಕೆ ಎಲ್ಲಾ  ಬರಹಗಾರರು ತಮ್ಮ ವಿಮರ್ಶೆಗಳನ್ನು ಕಳುಹಿಸಿದರೂ ತುಳಸಿ ಅವರ ಕೃತಿ ಬಂದಿರಲಿಲ್ಲ.

ಡಾ. ಸುನೀತಾ ಶೆಟ್ಟಿಯವರೊಂದಿಗೆ ಮಾತಾಡಿ  ನಾನು ಸೃಜನದ ಕಾರ್ಯದರ್ಶಿ ಹಾಗೂ ಕೃತಿಯ ಸಂಪಾದಕೀಯಾಗಿ ಅವರಿಗೆ ಪ್ರತೇಕ ಮೆಸೇಜ್ ಮಾಡಿ ಅವರ ಕೃತಿಗಳನ್ನು ತರಿಸಿದ್ದೆ. ಅವರಲ್ಲಿ ಅದರ ಹೆಚ್ಚು ಪ್ರತಿಗಳು ಇದ್ದಿರಲಿಲ್ಲ. ಹಾಗಾಗಿ  ಅವರ ‘ಪುಟಗಳ ಮಧ್ಯದಲ್ಲೊಂದು ನವಿಲುಗರಿ’ ಕವನ ಸಂಕಲನ ಹಾಗೂ “ಮುಂಜಾವಿಗೆ ಕಾದವಳು’ ಕಥಾ ಸಂಕಲನವನ್ನು ನನಗೆ ಕಳುಹಿಸಿದ್ದರು. ಅವುಗಳನ್ನು  ಕವಿ ರಂಗ ನಿರ್ದೇಶಕ ಸಾ. ದಯಾ  ಹಾಗೂ ಡಾ. ಪೂರ್ಣಿಮಾ ಶೆಟ್ಟಿ ಅವರು ಬಹಳ ಅರ್ಥ ಪೂರ್ಣವಾಗಿ ವಿಮರ್ಶಿಸಿದ್ದರು.

ಅವರ ಈ ಎರಡು ಕೃತಿಗಳು ನನಗೆ ಬಹಳ ಇಷ್ಟವಾಗಿ ನಾನು ಈ ಕೃತಿಗಳನ್ನು ಹಿಂತಿರುಗಿಸುವುದಿಲ್ಲ ಎಂದಾಗ ನಕ್ಕು ‘ಇರಲಿ ತೊಂದರೆ ಇಲ್ಲ’ ಎಂದು ಹೇಳಿದ್ದರು.

ಚಿತ್ರ: ಜಯಶ್ರೀ ಕಾಸರವಳ್ಳಿ ಅವರ ಸಂಗ್ರಹ

ಈ ಮಧ್ಯ ತೀಯಾ ಸಮಾಜದ “ತೀಯಾ ಬೆಳಕು “  ಎಂಬ ಪತ್ರಿಕೆಯ ಹದಿನೈದನೆಯ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಒಂದು ವಿಶೇಷ ಸಂಚಿಕೆಯನ್ನು ಹೊರತರುವವರಿದ್ದರು. ನಾನು ಕಳೆದ  ಐದು ವರುಷಗಳಿಂದ ಅದರ ಸಲಹಾ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವುದರಿಂದ ಈ ಸಂಚಿಕೆಯ ಕನ್ನಡ ವಿಭಾಗಕ್ಕೆ ಕಥೆ, ಕವನ, ಲೇಖನಗಳನ್ನು ಎಲ್ಲರಿಂದಲೂ ತರಿಸುತ್ತಿದ್ದೆ. ತುಳಸಿ ವೇಣುಗೋಪಾಲ್ ಅವರಿಂದಲೂ  ಕವನ ಕೇಳಿದ್ದು ಎರಡು ಹೊಸ ಕವನಗಳನ್ನು ಬರೆದು ಕಳುಹಿಸಿದ್ದರು.  ಹಾಗೆಯೇ ತೀಯಾ ಬೆಳಕಿನ ಮೊದಲ ಸಂಚಿಕೆಯನ್ನು ತುಳಸಿ ವೇಣು ಗೋಪಾಲ್ ಅವರೇ ಬಿಡುಗಡೆಗೊಳಿಸಿದ್ದರಿಂದ  ಅವರನ್ನು ಆ ಕಾರ್ಯಕ್ರಮದ ಉದ್ಘಾಟಕಿಯಾಗಿ ಬರಬೇಕೆಂಬ ಪ್ರಸ್ತಾಪವಿಟ್ಟಿದ್ದೆವು. ಆದರೆ ಕಾರಣಾಂತರಗಳಿಂದ ಅಂದು ಬರಲು ಆಗಲಿಲ್ಲ. ವಾಟ್ಸ್ ಆಪ್ ಗೀಳು ಅವರಿಗೆ ಇರಲಿಲ್ಲ. ಅವರ ಮೊಮ್ಮಗಳು ಬೇರೆ ಬೇರೆ ಫೋಟೋಗಳನ್ನು ಬದಲಾಯಿಸುತ್ತಿದ್ದಾಗ ನಾನು ಆ ಫೋಟೋಗಳ ಬಗ್ಗೆ ನನ್ನ ಪ್ರತಿಕ್ರಿಯೆ ಕಳುಹಿಸುತ್ತಿದ್ದೆ. ಬಹಳ ಹಳೆಯ ಪರಿಚಯ ನಮ್ಮದಲ್ಲದಿದ್ದರೂ ಈ ಮಧ್ಯ ನಮ್ಮ ಸಂದೇಶಗಳು ಸರಾಗವಾಗಿರುತ್ತಿದ್ದವು. ತಿಳಿಯದೆ ಅವರು ನನಗೆ ಅತ್ಮೀಯರಾಗಿದ್ದರು. ಅದಕ್ಕೆ ಅವರ ಬರಹ ಹಾಗೂ ಸೌಮ್ಯ ಸ್ವಭಾವವೇ ಕಾರಣವ ಏನೊ ಗೊತ್ತಿಲ್ಲ.

ಕಳೆದ ಜನವರಿ ತಿಂಗಳಲ್ಲಿ ಹೊರನಾಡ ಕನ್ನಡಿಗ ಸಮಾವೇಶ ಕಾರ್ಯಕ್ರಮದಲ್ಲಿ  ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಭಿನಂಧನೆ ಕಳಿಸಿದ್ದೆ. ಅಲ್ಲಿ ಹೊರಗಿಂದ ಬಂದವರಿಗೆ ಇಲ್ಲಿ ಉಳಿಯುವ ವ್ಯವಸ್ಥೆ ಮಾಡಲಾಗಿತ್ತು.  ತುಳಸಿ ಅವರ ಸಂಕೋಚ ಸ್ವಭಾವದಿಂದಾಗಿ ಅವರು ಆ ಬಗ್ಗೆ ವಿಚಾರಣೆ ಸಹ  ಮಾಡಲಿಲ್ಲ. ಮತ್ತೆ ನಾನೇ ಮುಂಬಯಿ ವ್ಯವಸ್ಥಾಪಕರಲ್ಲಿ ಕೇಳಿ ಹೇಳಿದ್ದೆ.  ಅಂದು ಆ ಕಾರ್ಯಕ್ರಮದಲ್ಲಿ ಅವರ ಮುಖಾ ಮುಖಿಯಾದಾಗ ನನಗೆ ಎಲ್ಲಿಲ್ಲದ ಸಂತೋಷ.  ಆವರ ಆ ಅಪ್ಪುಗೆ ನನಗೆ ಈಗಲೂ ಬೆಚ್ಚಗಿನ ಅನುಭವ.  ನಾನು ಹೊಸ ಬರಹಗಾರ್ತಿ ಎಂಬ ತಾತ್ಸರ್ಯ ಅವರಲ್ಲಿ ಒಂದು ಚೂರು ನಾ ಕಂಡಿರಲಿಲ್ಲ.

ಬಹುಶಃ ಮುಂಬೈ ಸಾಹಿತಿಗಳನ್ನು ಅವರ ಸಮಕಾಲೀನರನ್ನು ಅಂದೇ ಅವರು ಕಡೆಯದಾಗಿ ಭೇಟಿಯಾಗಿರುವುದು.  ಬಹಳ ಆನಂದದಿಂದಿದ್ದರು ಆ ದಿನ. ಸೌಮ್ಯವಾಗಿಯೇ ಎಲ್ಲರೊಂದಿಗೆ ಮಾತನಾಡುತ್ತಾ ಹಳೆಯ ನೆನಪುಗಳನ್ನು ಮರಕಳಿಸುತ್ತಿದ್ದರು.  ಕಾರ್ಯಕ್ರಮ ಮುಗಿದ ಬಳಿಕ ನಾವಿಬ್ಬರೂ ಅಟೋಗಾಗಿ  ಕಾಯುತ್ತಿರುವಾಗ, “ ನಾನು ಮಹಾಕಾಳಿ ಕೇವ್ಸ್ ವರೆಗೆ ಬಿಡುತ್ತೇನೆ” ಎಂದು ಕರೆದರು.  ಅಷ್ಟರವರೆಗೆ ಕೇವಲ ಸಾಹಿತ್ಯದ ಬಗ್ಗೆಯೇ ಅವರ ಮಾತು. “ಮುಂಬಯಿಯ ಹೊಸ ಬರಹಗಾರರು ಚೆನ್ನಾಗಿ ಬರೆಯುತ್ತಾರೆ.  ಆದರೆ ಅವರಿಗೆ ಒಳ್ಳೆಯ ವೇದಿಕೆ ಸಿಕ್ತಿಲ್ಲ”  ಎಂದು ವಿಷಾಧ ವ್ಯಕ್ತಪಡಿಸಿದರು. ಆ ನಡುವೆ ತನ್ನ ಆರೋಗ್ಯದ ಬಗ್ಗೆ ಏನೂ ಹೇಳಿಕೊಂಡವರಲ್ಲ.  ಮಗ ಕಾರ್ ಕಳಿಸಿದ್ದಾನೆ ರಾತ್ರಿ  ಹನ್ನೊಂದಕ್ಕೆ ಪುಣೆ ತಲುಪುತ್ತೆನೆಂದು, ಹೇಳಿ ತಲುಪಿದ  ಬಳಿಕ ಮೆಸೇಜ್ ಸಹ ಮಾಡಿದ್ದರು. ಪುಣೆಯಲ್ಲಿ ನಿಮ್ಮ ಅಣ್ಣನ ಮನೆಗೆ ಬಂದಾಗ ಖಂಡಿತ ಬನ್ನಿ ಎಂದು ಹೇಳಿದ್ದರು.

ತುಳಸಿ ಅವರು ಹುಟ್ಟಿ ಬೆಳೆದದ್ದು ಮಂಗಳೂರಿನಲ್ಲಿ . ಪತಿ ಲೇಖಕ ಪತ್ರಕರ್ತ ಕೆ. ಟಿ ವೇಣುಗೊಪಾಲರ  ಪ್ರೋತ್ಸಾಹದಿಂದಾಗಿ  ಅವರ ಸೃಜನಾತ್ಮಕ ಬರಹಗಳನ್ನು ಬರೆಯಲಾರಂಭಿಸಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ  ಗುರುತಿಸಿಕೊಂಡ ತುಳಸಿ ಅವರ ಕೃತಿಗಳಿಗೆ ಜಿ. ಎಸ. ಶಿವರುದ್ರಪ್ಪ ಬಹುಮಾನ ಸಂದಿದೆ. ಕನ್ನಡ ಸಾಹಿತ್ಯದಲ್ಲಿ ಎಂ. ಎ. ಪದವಿ ಪಡೆದಿರುವ ತುಳಸಿ ವೇಣು ಗೋಪಾಲ್ ಮುಂಬಯಿಯ “ಸ್ಟಾರೋ”  ಸಂಸ್ಥೆಯಲ್ಲಿ ಕನ್ನಡ ಭಾಷಾ ಸಮನ್ವಯಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕಳೆದ ದೀಪಾವಳಿ ನಮ್ಮ ಮನೆಯವರೆಲ್ಲಾ ನನ್ನ ಕಿರಿಯ ಅಣ್ಣ ಜಗಧೀಶ ಅವರಲ್ಲಿಗೆ ಹೋದಾಗ ಅವರಿಗೆ ಹಾಗೂ ಇನೋರ್ವ ಆಪ್ತ ಕವಿ ಮಿತ್ರರಾದ ಪೊಳಲಿ ಮಹೇಶ್ ಹೆಗ್ಡೆ ಅವರಿಗೆ ಸಂದೇಶ ರವಾನಿಸಿದ್ದೆ.  ಅದನ್ನು ನೋಡಿ ಇಬ್ಬರೂ ಮನೆಗೆ ಬರಬೇಕೆಂದು ಆಗ್ರಹಿಸಿದರು. ಅವರನ್ನೇ ಅಣ್ಣನ ಮನೆಗೆ ಬರಲು ಹೇಳಿದಾಗ ಸ್ವಲ್ಪ ಅರೋಗ್ಯ ಸರಿ ಇಲ್ಲ ನೀವೇ ಬನ್ನಿ ಎಂದಾಗ ನಾನು ಸದಾನಂದ, ನನ್ನ ಅಕ್ಕ ಪ್ರೇಮ ಕೃಷ್ಣಾ ಪೂಜಾರಿ , ಅಣ್ಣ ಎಲ್ಲರೂ ಮೊದಲು ಮಹೇಶ್ ಅವರ ಮನೆಗೆ ಹೋಗಿ ಅಲ್ಲಿಂದ ತುಳಸಿ ಅವರ ಮನೆಗೆ ಹೋಗುವುದಾಗಿ . ಹೊರಟೆವು.  ನಾವು ಮಹೇಶ ಅವರ ಮನೆ ಹೊಕ್ಕಂತೆ  ತುಳಸಿ ಅವರ ಮೆಸೇಜ್, “ ಎಲ್ಲಿದ್ದೀರಿ ಹೇಮಾ”  ಹೇಗೆ ಬರ್ತಿರಿ? ಎಂಬ ಕಾಳಜಿ ಅವರಲ್ಲಿ. ಆ ಬಳಿಕ ಹತ್ತತ್ತು ನಿಮಿಷಗಳಲ್ಲಿ ಅವರ ಮೆಸೇಜ್ ಬರ್ತಾ ಇತ್ತು.

ನಮ್ಮನ್ನು ಅಕ್ಕರೆಯಿಂದ ಬರಮಾಡಿಸಿದವರು ಅವರ ಮಗ ವಿಕಾಸ್ ಹಾಗೂ ಸೊಸೆ ರಿಚ.  ಮನೆ ನೋಡಿದಾಕ್ಷಣ ನಮ್ಮಲ್ಲಿ ಮೂಡಿದ ಬೆರಗು ಬಹುಶಃ ನನ್ನ ಜೊತೆ ಇದ್ದವರ ಕಣ್ಣಲ್ಲೂ ಕಂಡಿತು.  ಎಲ್ಲಾ ಹಮ್ಮು ಗಿಮ್ಮುಗಳ ಪರೆ ಕಳಚಿದ ನಗು ಮೊಗದ ತುಳಸಿವರನ್ನು ಕಂಡು ನನ್ನ ಕಣ್ಣುಗಳು ತೇವಗೊಂಡಿತ್ತು.  ಅವರ ಪ್ರೀತಿಯ ಧಾರೆ ಆ ಮನೆಯಲ್ಲಿ ಸಲೀಸಾಗಿ ಹರಿಯುತ್ತಿತು ಎಂಬುದರ ಕುರುಹು ಅವರ ಮಕ್ಕಳು. ಅಷ್ಟೇ ಯಾಕೆ ಅವರ ಮೊಮ್ಮಗಳಲ್ಲೂ ಮಾತಿನ ವಿನಮ್ರತೆ ಹಾಗೂ ಹಿರಿಯರ ಬಗ್ಗೆ ಇರುವ  ಸಹಜ ಗೌರವ ಕಂಡು ಸಂತೋಷವಾಯಿತು.

ತುಳಸಿ ಅವರಿಗೆ ತಮ್ಮ ಮಾತೃ ಭಾಷೆಯ ತುಳು, ಮಲಯಾಳಿ ಮಿಶ್ರಿತ ತುಳು ಕನ್ನಡದ ಬಗ್ಗೆ ಅಪಾರ ಪ್ರೀತಿ ಇತ್ತು. ಅದರಿಂದಾಗಿ ಅಂಗ್ಲ ಮಾಧ್ಯಮದಲ್ಲಿ ಕಲಿಯುವ ತನ್ನ ಮುದ್ದಿನ ಮೊಮ್ಮಗಳಿಗೆ ತುಳು  ಕನ್ನಡ ಹಾಡನ್ನು ಕಲಿಸುತ್ತಿದ್ದರು.  ಅಂದೇ ಡಾ. ಸುನೀತ ಶೆಟ್ಟಿಯವರ ತುಳು  ಕವನವೊಂದನ್ನು ಸುಶ್ರಾವ್ಯವಾಗಿ ಅಜ್ಜಿಯ ತೊಡೆಯಲ್ಲಿ ಕುಳಿತು ಹಾಡಿದ್ದ ಆ ಚಿತ್ರ ಇಂದಿಗೂ ನನ್ನ ಕಣ್ಣಲ್ಲಿ ಅಚ್ಚ ಹಸಿರಾಗಿದೆ.

ಅವರ ಮುಂಬಯಿ ಲೋಕಲಿನ ಲೇಡಿಸ್ ಕಂಪಾರ್ಟ್ಮೆಂಟ್ ಬಗೆಗಿನ ಕವನ

“ ಯಾರದೋ ತಲೆಗೆ ಯಾರದೋ ಕೈ ಮೊಟಕಿ

ಕದನ ವಿರಾಮಗಳ ಮಧ್ಯೆ ಯಾತನಾ ಶಿಬಿರದ

ನಿರ್ವಿಣ್ಣ ಜೀವಿಗಳಿಗೆ ಸ್ಟ್ರೆಚರ್  ಹಿಡಿಯುವ

ಸ್ಟೇಷನ್ಗಳಲ್ಲಿ ಕೈ ಕಾಲು ಚೆಲ್ಲಿ ಬದುಕುಳಿಯುತ್ತಾರೆ

ವಿದಾಯಕ್ಕೆ ಅಣಿಯಾಗುವ ಸ್ಟೇಷನ್

ನಗುತ್ತದೆ ಸ್ನೇಹದ ಕೈಯಾಡಿಸುವಿಕೆಯಲ್ಲಿ

ಬದುಕು ದೀರ್ಘವಾಗಿರುವುದೆಂದು ನಾವು ಎಂದೂ ಮುಗಿಯದ ನಮ್ಮ ಕೆಲಸಗಳಲ್ಲಿ  ಮುಳುಗಿರುತ್ತೇವೆ. ಆದರೆ ಕಾಲಕ್ಕೆ ಎಲ್ಲಿಲ್ಲ್ಲದ ಎಚ್ಚರಿಕೆ . ಅದು ಯಾವ ದಾಕ್ಷಿಣ್ಯ ತೋರದೆ ತನ್ನ ಕಾರ್ಯನಿರ್ವಹಿಸುತ್ತಾ ಕೆಲವು ನೆನಪುಗಳ ಮುತ್ತುಗಳನ್ನು ಮನಸ್ಸಿನ ಚಿಪ್ಪಿನೊಳಗೆ ಬಿಟ್ಟು ಮುಂದೆ ಸಾಗುತ್ತಿರುತ್ತದೆ.

 

4 comments

Leave a Reply