ತನ್ನತನ ಹುಡುಕುವ ಕವಿತೆಗಳು..

ಅವಧಿಯ ಮಹತ್ವದ ಪ್ರಯೋಗಗಳಲ್ಲಿ ಮುಖ್ಯವಾದದ್ದು ‘Poet of the Week’

ಹೊಸ ಬನಿಯ ಕವಿತೆಗಳನ್ನುಪರಿಚಯಿಸುವ, ಆ ಮೂಲಕ ಕನ್ನಡ ಕಾವ್ಯ ಲೋಕವನ್ನು ಪ್ರವೇಶಿಸುತ್ತಿರುವ ಕವಿಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ.

ಅಷ್ಟೇ ಅಲ್ಲದೆ ಪ್ರಕಟಿಸಿದ ಕವಿತೆಗಳನ್ನು ಕಾವ್ಯ ಪ್ರಿಯರಿಗೆ ಕಳಿಸಿಕೊಟ್ಟು ಅವರ ಅಭಿಪ್ರಾಯವನ್ನು ಪ್ರಕಟಿಸುವುದು. ಇದರಿಂದ ಕವಿಗಳಿಗೆ ಮೊದಲ ಅಭಿಪ್ರಾಯವನ್ನು ಧಕ್ಕಿಸಿಕೊಟ್ಟು ಅವರು ಇನ್ನಷ್ಟು ಬರೆಯಲು ಕುಮ್ಮಕ್ಕು ನೀಡುವುದು ಉದ್ಧೇಶ.

ಕಳೆದ ವಾರ POET OF THE WEEK ನಲ್ಲಿ ಪ್ರೇಮಾ ಟಿ ಎಮ್ ಆರ್  ಅವರ ಕವಿತೆಗಳನ್ನು ಪ್ರಕಟಿಸಿತ್ತು ಅದು ಇಲ್ಲಿದೆ.

ಅದಕ್ಕೆ ವಿಮರ್ಶಕಿ ಡಾ ಶ್ವೇತಾರಾಣಿ ಅವರು ಬರೆದ ಮೊದಲ ನೋಟ ಇಲ್ಲಿದೆ-

ಬೈಯುವವರ ಮುಂದೆ ಬಿಲ್ಲಾಗಬೇಕು ಎನ್ನುವ ಪ್ರೇಮಾ ಅವರ ಕವಿತೆ ಪ್ರಾರಂಭವಾಗುವುದೇ ಹೆಣ್ಣಿನ ದಿನ ನಿತ್ಯದ ಕಾಯಕವಾಗಿರುವ ರಂಗೋಲಿ ಬಿಡಿಸುವಲ್ಲಿಂದ. ವ್ಯವಸ್ಥೆ ನೀಡಿದ ವ್ಯಕ್ತಿತ್ವ ಪಡೆದ ಹೆಣ್ಣು ತಗ್ಗಿ ಬಗ್ಗಿ ಬಾಳುವಲ್ಲಿ ತನ್ನತನವನ್ನು ಕಳೆದುಕೊಂಡಿದ್ದಾಳೆ. ಅದ ಹುಡುಕುವ ಯತ್ನವನ್ನು ಇಲ್ಲಿನ ಕವಿತೆಗಳು ಮಾಡುತ್ತವೆ.

ತನ್ನ ಹಾಗೆ ತನ್ನನ್ನು ಬದುಕಲು ಬಿಡದವರ ನಡುವೆ ನಗುವನ್ನು ಧರಿಸಬೇಕಾದ ಅನಿವಾರ್ಯತೆ, ತಾನು ಪ್ರತಿ ಹೆಜ್ಜೆಯನ್ನು ಅಂಜಿಕಯಿಂದಲೇ ಇಡಬೇಕಾದ ವಾತಾವರಣದಲ್ಲಿನ ಹೆಣ್ಣಿನ ಚಿತ್ರಣವಿದೆ. ಹೆಣ್ಣನ್ನು ಹೆಣ್ಣಾಗಿಸುವ ವ್ಯವಸ್ಥೆಯ ಹುನ್ನಾರವನ್ನು ವ್ಯವಸ್ಥಿತವಾಗಿ  ಇಲ್ಲಿ ನಿರೂಪಿಸಿದ್ದಾರೆ.

ಸಂಪ್ರದಾಯದ ಸಂಕೋಲೆಯಲ್ಲಿ ಉಸಿರನ್ನು ಬಿಗಿಹಿಡಿದು‌ ತನ್ನದಲ್ಲದ ವ್ಯಕ್ತಿತ್ವವನ್ನು ಹೊದ್ದುಕೊಂಡು ಬದುಕುವ ಬಹುತೇಕರ ಜೀವನವನ್ನು ಕವಿತೆ ತೆರೆದಿಡುತ್ತದೆ. ಅವಳ ಕನಸಕಾಣುವ ಹಕ್ಕನ್ನು ಕಸಿದಿರುವ ಈ ವ್ಯವಸ್ಥೆ ಅವಳನ್ನು ದ್ವಿತೀಯ ದರ್ಜೆಯ ಪ್ರಜೆಯನ್ನಾಗಿಯೇ ಉಳಿಸಿಕೊಂಡಿದೆ. ಅವಳ ಸ್ವತಂತ್ರ ಕಸಿದು ಶೂನ್ಯಚಿತ್ತಳನ್ನಾಗಿಸಿರುವ ಪರಿ ಇಲ್ಲಿ ಅಡಗಿದೆ.

ನಿಲ್ಲಿ ಬರುತ್ತೇನೆ‌ ಕವಿತೆಯಲ್ಲಿ ಅಕ್ಷರ ಕಲಿಯಲು ಹೆಣ್ಣಿಗೆ ಅವಕಾಶ ಸಿಕ್ಕಾಗ ಕಲಿತ ಹೆಣ್ಣು ಜ್ಞಾನವನ್ನು ಹಂಚುವ ಪರಿ, ಅಕ್ಷರ ಸ್ವತಂತ್ರ ಸಿಕ್ಕಾಗ

ಹಕ್ಕಿಯಾಗಿ ಹಾರಬೇಕೆಂಬುದು
ಬಹುದಿನದ ಕನಸು
ಮುಗಿಲಿಗೇರುವಮುನ್ನ
ನೆಲದೆಲ್ಲ ಬೇಲಿಗುಟ್ಟಗಳ
ಕಿತ್ತಿಟ್ಟು ಬಂದುಬಿಡುತ್ತೇನೆ”

ಎನ್ನುವ ಸಾಲುಗಳು ಮುಂದೆ ಬರುವ ತೊಡಕನ್ನು ನಿವಾರಿಸಿ. ಕಲಿಕೆಗೆ ಮುಕ್ತ ಅವಕಾಶ ಮಾಡಿಕೊಡಬೇಕೆಂಬ ಅವಳ ಮನದ ಹಂಬಲವನ್ನು ಕಾಣಬಹುದು

ಕುದಿವೆಸರ ಅಗುಳಾಗಬೇಕು ಕವಿತೆಯಲ್ಲಿ

ತನ್ನ ಹೀಗಿಟ್ಟವರನ್ನೆಲ್ಲ
ಶಾಪ ಹಾಕಬೇಕೆಂದುಕೊಂಡಿದ್ದು
ಅದೆಷ್ಟುಬಾರಿಯೋ
ತನಗಿಷ್ಟಬಂದಂತೆ
ಇರಬಹುದಾಗಿದ್ದರೂ
ಅವರಿಟ್ಟ ಪಾತ್ರೆಯೊಳಗೇ
ತುಂಬಿಕೊಂಡಂತೆ
ಬದುಕಿದ್ದು ತನ್ನದೂ
ತಪ್ಪಲ್ಲವಾ?”

ಸ್ವತಂತ್ರ ಸಿಕ್ಕ ನಂತರವೂ ವ್ಯವಸ್ಥೆಯ ಹೇರಿಕೆಗಳನ್ನು ಒಪ್ಪಿ ಬದುಕುವ ಅವಳ ರೀತಿಗೆ ಸಂಬಂಧದ ಹೆಸರಿದೆ. ಅದರೊಟ್ಟಿಗೆ ಹೆಣ್ಣಿನ ಜಾಯಮಾನದ ಕಟ್ಟಳೆಗಳನ್ನು ಮೀರಲಾಗದೆ ತಾನೇ ಹೆಣೆದುಕೊಂಡ ಸಂಕೋಲೆಯಲ್ಲಿ ವೃತ್ತಾಕಾರದಲ್ಲಿ ಪರಿಭ್ರಮಿಸುವ, ಬಿಡಿಸಿಕೊಳ್ಳಲಾಗದೆ ಪರಿತಪಿಸುವ ಮಾನಸಿಕ ದ್ವಂದ್ವದ ದೃಶ್ಯವಿದೆ.

 

ಮತ್ತೊಂದು ಕವಿತೆ

ಕಡಲಾಗಬೇಕು ಕವಿತೆಯೂ

ಗೋಡೆಯಾಗಿ ಎದ್ದುನಿಲ್ಲುವದಲ್ಲ
ಹಾಂ ಬದಲಾವಣೆಯಿಲ್ಲದಿರೆ
ಬದುಕೆಂಬ ಸತ್ಯವೂ
ಒಂದು ವಿಭ್ರಾಂತಿಯೇ”

ಇರುವ ಎಲ್ಲ ಅಡೆತಡಗಳನ್ನು ಮೀರಿ ಬೆಳೆಯಬೇಕು ಎಂಬ ಆಶಯವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಒಟ್ಟಾರೆ ಪ್ರೇಮಾ ಅವರ ಕವಿತೆಗಳು ಸ್ತ್ರೀ ಸಂಕುಲದ ಕಥೆ -ವ್ಯಥೆ ಯನ್ನು ಹೇಳುತ್ತವೆ. ಅವಳ ಮನೋಬೇಗುದಿಯನ್ನು ಅಕ್ಷರದಲ್ಲಿ ಹಿಡಿದಿಟ್ಟಿವೆ.

1 comment

  1. ಪ್ರೇಮಾ ಕವಿತೆ ನನಗೆ ಬಹಳ ಇಷ್ಟವಾಯ್ತು. “ಶ್ವೇತಾ ನೋಟ” ಕೈ ಮರದಂತಿದೆ.

Leave a Reply