ಫ್ಯಾಸಿಸ್ಟ್ ದೇಶ ಅಂದ್ರೆ ಹೀಗಿರುತ್ತೆ..

ಚಿದಂಬರ ನರೇಂದ್ರ 

ಹಲವಾರು ಫ್ಯಾಸಿಸ್ಟ್ ದೇಶಗಳನ್ನು ಅಧ್ಯಯನ ಮಾಡಿದ ಪ್ರಸಿದ್ಧ ರಾಜಕೀಯ ವಿಜ್ಞಾನಿ ಡಾ. ಲಾರೆನ್ಸ್ ಬ್ರಿಟ್ ನಿರಂಕುಶ ಪ್ರಭುತ್ವದ ಮುಖ್ಯ 14 ಗುಣ ಲಕ್ಷಣಗಳನ್ನು ಹೀಗೆ ಪಟ್ಟಿ ಮಾಡಿದ್ದಾನೆ. ಈ ಎಲ್ಲ ಗುಣ ಲಕ್ಷಣಗಳನ್ನು ಹೊಂದಿರುವ ಸರಕಾರ ಈಗ ಅಧಿಕಾರದಲ್ಲಿರುವುದು ಹಾಗು ಮತ್ತೆ ಅಧಿಕಾರಕ್ಕೆ ಬರಲು ಎಲ್ಲ ದಮನಕಾರಿ ಅಂಶಗಳನ್ನು ಬಳಸುತ್ತಿರುವುದು ಕಳವಳದ, ಎಚ್ಚರಿಕೆಯ ಸಂಗತಿ.

1. ಉಗ್ರ ದೇಶಭಕ್ತಿ : ನಿರಂಕುಶ ಪ್ರಭುತ್ವದಲ್ಲಿ ದೇಶಭಕ್ತಿಯನ್ನು ಬಿಂಬಿಸುವ ಸಂಕೇತಗಳ, ಹಾಡುಗಳ, ಘೋಷಣೆಗಳ ಮತ್ತು ಇತರ ಸಾಮಗ್ರಿಗಳ ಯಥೇಚ್ಛ ಬಳಕೆಯನ್ನು ಕಾಣಬಹುದು. ಎಲ್ಲಿ ನೋಡಿದಲ್ಲಿ ಧ್ವಜಗಳ ಹಾರಾಟ, ಸಾರ್ವಜನಿಕ ಪ್ರದರ್ಶನದ ಜಾಗಗಳಲ್ಲಿ, ಜನ ಉಡುವ ಬಟ್ಟೆ ಬರೆಗಳ ಮೇಲೆ ರಾಷ್ಟ್ರೀಯ ಧ್ವಜ, ಸಂಕೇತಗಳ ಬೇಕಾಬಿಟ್ಟಿ ಬಳಕೆ.

2. ಮಾನವ ಹಕ್ಕುಗಳನ್ನು ಗುರುತಿಸುವಲ್ಲಿ ಉಪೇಕ್ಷೆ : ವೈರಿ ದೇಶಗಳ ಭಯ ಹುಟ್ಟಿಸಿ, ದೇಶದ ರಕ್ಷಣೆಯ ಕಾರಣ ಹೇಳಿ ನಿರಂಕುಶ ಪ್ರಭುತ್ವ, ಮಾನವ ಹಕ್ಕುಗಳನ್ನು ಕೆಲ ಸಂದರ್ಭಗಳಲ್ಲಿ ಉಲ್ಲಂಘಿಸಿದರೆ ತಪ್ಪಿಲ್ಲ ಎಂದು ಜನರಿಗೆ ಸಮಜಾಯಿಶಿ ಹೇಳಿ ನಂಬಿಸುವ ಪ್ರಯತ್ನ ಮಾಡುತ್ತದೆ. ಆಗ ಸಾಮಾನ್ಯ ಜನ ಹಿಂಸೆ, ಹತ್ಯೆ, ಮರಣ ದಂಡನೆ, ರಾಜಕೀಯ ಕೈದಿಗಳ ಸುದೀರ್ಘ ವಿಚಾರಣೆ ಮುಂತಾದವನ್ನು ಸಮರ್ಥಿಸಿಕೊಳ್ಳಲು ಶುರು ಮಾಡುತ್ತಾರೆ.

3. ವೈರಿಗಳನ್ನು / ಬಲಿ ಪಶುಗಳನ್ನು ಗುರುತಿಸಿ ಅವರ ವಿರುದ್ಧ ಜನರನ್ನು ಎತ್ತಿಕಟ್ಟುವುದು : ಆಗ ದೇಶ ಭಕ್ತಿಯ ಉನ್ಮಾದದಲ್ಲಿರುವ ಜನ ತಮ್ಮ ಈ ಏಕಿಕೃತ ವೈರಿಯ ವಿರುದ್ಧ, ಅಪಾಯದ ವಿರುದ್ಧ ಕಾನೂನು ಕೈಗೆತ್ತಿಕೊಳ್ಳುವರು. ಬಹುತೇಕ ಈ ವೈರಿ, ಈ ಅಪಾಯ ಬೇರಾರೂ ಅಲ್ಲ, ಧಾರ್ಮಿಕ ಹಾಗು ಜನಾಂಗೀಯ ಅಲ್ಪ ಸಂಖ್ಯಾತರು, ಪ್ರಗತಿಪರರು, ಕಮ್ಯುನಿಸ್ಟರು, ಸಮಾಜವಾದಿಗಳು ಅಥವಾ ವೈರಿ ದೇಶ.

4. ಮಿಲಿಟರಿಯ ಸಾರ್ವಭೌಮತ್ವ : ದೇಶದಲ್ಲಿ ಬೇಕಾದಷ್ಟು ಬಹು ಮುಖ್ಯ ಸಮಸ್ಯೆಗಳಿರುವಾಗಲೂ ಮಿಲಿಟರಿಯ ಮೇಲೆ ಅನಾವಶ್ಯಕ ದುಂದು ವೆಚ್ಚ ಮಾಡುವುದು ಮತ್ತು ಮಿಲಿಟರಿಯನ್ನ ಮತ್ತು ಅದರ ಸೇವೆಯನ್ನ ಅನಾವಶ್ಯಕವಾಗಿ ಗ್ಲಾಮರೈಝ್ ಮಾಡುವುದು.

5. ಅಪಾಯಕಾರಿ ಸೆಕ್ಸಿಸಂ : ನಿರಂಕುಶ ಪ್ರಭುತ್ವ ದ ಸರಕಾರಗಳು ಬಹುತೇಕ ಪುರುಷ ಪ್ರಧಾನ. ಈ ದೇಶಗಳಲ್ಲಿ ಸಾಂಪ್ರದಾಯಿಕ ಲಿಂಗಾಧಾರಿತ ಕೆಲಸ ಕಾರ್ಯಗಳು ಇನ್ನೂ ನಿಷ್ಠುರ. ಗರ್ಭಪಾತಕ್ಕೆ ವಿರೋಧ, ಸಲಿಂಗ ಪ್ರೇಮಕ್ಕೆ ಆಕ್ಷೇಪ, ಅತ್ಯಾಚಾರಗಳ ಬಗ್ಗೆ ಉಡಾಫೆ, ಸಾಮಾಜಿಕ ಜೀವನದಲ್ಲಿ ಸ್ತ್ರೀಯರ ಹಕ್ಕುಗಳ ಬಗ್ಗೆ ನಿರ್ಲಕ್ಷ್ಯ ಮುಂತಾದವು ಕಣ್ಣಿಗೆ ರಾಚುವ ಉದಾಹರಣೆಗಳು.

6. ಮಾಧ್ಯಮಗಳ ಮೇಲೆ ನಿರ್ಬಂಧ : ಬಹುತೇಕ ಮಾಧ್ಯಮ, ಸರಕಾರದ ನೇರ ನಿಯಂತ್ರಣದಲ್ಲಿ. ಉಳಿದ ಮಾಧ್ಯಮಗಳ ಮೇಲೆ ಕಾನೂನಿನ ರೂಪದಲ್ಲಿ, ತನ್ನ ಹಿಂಬಾಲಕ ಕಂಪನಿಗಳ ಒಡೆತನದ ಮೂಲಕ, ಸರಕಾರದ ಬಾಲಂಗೋಚಿ ಪತ್ರಕರ್ತರ ಮೂಲಕ, ಸೆನ್ಸರ್’ಶಿಪ್ ಮೂಲಕ ಸರಕಾರಗಳು ನಿಯಂತ್ರಣ ಸಾಧಿಸಿರುತ್ತವೆ.

7. ರಾಷ್ಟ್ರೀಯ ಭದ್ರತೆಯ ಉನ್ಮಾದ : ಈ ಭಯದ ಮೂಲಕ ಜನರ ಬದುಕಿನ ಮೇಲೆ ಸರಕಾರದ ನೇರ ಹತೋಟಿ.

8. ರಾಜಕೀಯದ ಜೊತೆ ಧರ್ಮದ ಬಳಕೆ: ನಿರಂಕುಶ ಪ್ರಭುತ್ವದ ಸರಕಾರಗಳು ಬಹುಸಂಖ್ಯಾತ ಧರ್ಮದ ದಬ್ಬಾಳಿಕೆಯ, ಅಮಾನವೀಯ ಅಂಶಗಳನ್ನು, ಸಂಕೇತಗಳನ್ನು, ವಿಚಾರಗಳನ್ನು, ಇತರ ಧರ್ಮಗಳ ಮೇಲೆ ಹೇರುವ ಮೂಲಕ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಪ್ರಯತ್ನ ಮಾಡುವುದು. ಸರಕಾರದ ನಾಯಕರ ಮಾತುಗಳಲ್ಲಿ ಬಹುಸಂಖ್ಯಾತ ಧರ್ಮದ ವಿಚಾರಗಳ ಬಗ್ಗೆ ಸತತ ಪ್ರಸ್ತಾವ, ಅಲ್ಪಸಂಖ್ಯಾತ ಧರ್ಮದ ವಿಚಾರಗಳ ಬಗ್ಗೆ ಜನರಲ್ಲಿ ಭಯ ಮೂಡಿಸುವುದು.

9. ಕಾರ್ಪೊರೇಟ್ ಗಳ ಹಿತಾಸಕ್ತಿಯ ರಕ್ಷಣೆ : ಬಹುತೇಕ ನಿರಂಕುಶ ಪ್ರಭುತ್ವಗಳನ್ನು ಅಧಿಕಾರದಲ್ಲಿ ಕೂಡಿಸಿರುವುದೇ ಈ ಕಾರ್ಪೊರೇಟ್ ಗಳಾಗಿರುವುದರಿಂದ ಅವುಗಳ ಹಿತಾಸಕ್ತಿಗಳನ್ನು ಕಾಪಾಡುವುದು ಈ ಸರಕಾರಗಳ ಪ್ರಥಮ ಆದ್ಯತೆಯಾಗಿರುತ್ತದೆ.

10. ಕಾರ್ಮಿಕ ಅಧಿಕಾರಗಳ ಮೊಟಕುಗೊಳಿಸುವಿಕೆ : ನಿರಂಕುಶ ಪ್ರಭುತ್ವಕ್ಕೆ ಕಾರ್ಮಿಕ ವರ್ಗ ನೇರ ಸವಾಲಾಗಿರುವುದರಿಂದ ಕಾರ್ಮಿಕ ಸಂಘಗಳನ್ನು ನಾಶ ಮಾಡುವುದು ಅಥವಾ ಹತ್ತಿಕ್ಕುವುದು ಈ ಸರಕಾರಗಳ ಮುಖ್ಯ ಲಕ್ಷಣ.

11. ಬುದ್ಧಿಜೀವಿಗಳ ಮತ್ತು ಕಲಾವಿದರ ವಿರುದ್ಧ ಸಂಚು : ಉನ್ನತ ಶಿಕ್ಷಣ ಸಂಸ್ಥೆಗಳ, ಯೂನಿವರ್ಸಿಟಿಗಳ, ಅಕಾಡಮಿಗಳ ಕಾರ್ಯ ವೈಖರಿಯಯ ಬಗ್ಗೆ ವಿರೋಧವನ್ನು ಪ್ರೋತ್ಸಾಹಿಸುವುದು, ಪ್ರೊಫೆಸರ್ ಗಳನ್ನು, ಚಿಂತಕರನ್ನು ಕಾನೂನಿನ ಮರೆಯಲ್ಲಿ ನಿಂತು ಹಿಂಸಿಸುವುದು, ಬಂಧಿಸುವುದು. ಕಲಾ ಪ್ರಕಾರಗಳಲ್ಲಿ ಮುಕ್ತ ಸಂವಾದವನ್ನು ಸೆನ್ಸಾರ್ ಮಾಡುವುದು. ಮತ್ತು ಈ ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಸಲ್ಲಬೇಕಾದ ನ್ಯಾಯಯುತ ಹಣಕಾಸಿನ ನೆರವನ್ನು ನಿರಾಕರಿಸುವುದು.

12. ಅಪರಾಧ ಮತ್ತು ಶಿಕ್ಷೆಯ ಬಗ್ಗೆ ಅತ್ಯುತ್ಸಾಹ : ಈ ಪ್ರಭುತ್ವಗಳಲ್ಲಿ ಪೋಲೀಸರಿಗೆ ಅನವಶ್ಯಕ ಅಧಿಕಾರ ನೀಡಿ ಸಾಮಾನ್ಯರ ಮೇಲೆ ಕಾನೂನು ಹೇರಲು ಪ್ರಯತ್ನ ಮಾಡುವುದು. ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಪೋಲೀಸರ ಮತ್ತು ಸೈನಿಕರ ಕೃತ್ಯಗಳನ್ನು ಮತ್ತು ಅದನ್ನು ವಿರೋಧಿಸುವ ಜನರ ದನಿಯನ್ನು ಉಪೇಕ್ಷೆ ಮಾಡುವುದು.

13. ವ್ಯಾಪಕ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ : ನಿರಂಕುಶ ಪ್ರಭುತ್ವದ ಸರಕಾರದ ಮುಖ್ಯ ಹುದ್ದೆಗಳಲ್ಲಿ ಎಲ್ಲ ಅವರವರೇ, ಒಂದೇ ಹಿತಾಸಕ್ತಿಯ ಜನ ಎಲ್ಲ ತಮ್ಮ ತಮ್ಮ ಹಿತಾಸಕ್ತಿಗಳ ರಕ್ಷಣೆಯಲ್ಲಿ ನಿರತರು.

14. ಕುಟಿಲ ಚುನಾವಣೆಗಳು : ಇಲ್ಲಿ ಚುನಾವಣೆ ಒಂದು ನಾಟಕ ಮಾತ್ರ. ವಿರೋಧಿ ಬಣಗಳನ್ನು ನಾಶ ಮಾಡುವುದು, ಹತ್ತಿಕ್ಕುವುದು, ಕೊಲ್ಲಿಸುವುದು. ತನ್ನ ಹಿಡಿತದಲ್ಲಿರುವ ಸ್ವಾಯತ್ತ ಸಂಸ್ಥೆಗಳ, ಕಾನೂನು, ಪೋಲೀಸು, ಮಾಧ್ಯಮ ಮುಂತಾದವುಗಳನ್ನು ದುರುಪಯೋಗ ಮಾಡಿಕೊಂಡು ಸಾರ್ವಜನಿಕ ಅಭಿಪ್ರಾಯ ರೂಪಿಸಲು ಪ್ರಯತ್ನಿಸುವುದು, ಚುನಾವಣಾ ಯಂತ್ರ, ವ್ಯವಸ್ಥೆಯನ್ನು ಮ್ಯಾನುಪುಲೇಟ್ ಮಾಡಿ ಮತಗಳನ್ನು ಪಡೆಯುವುದು.

1 comment

  1. ದೇಶಪ್ರೇಮ/ಧರ್ಮ/ದೇವರ ಹೆಸರಿನಲ್ಲಿ ಜನರನ್ನು ಮರುಳು ಮಾಡುವವರ ಮನದಲ್ಲಿರುವ ಹುನ್ನಾರಗಳು ಏನೆಂಬುದನ್ನು ವಾಸ್ತವದ ನೆಲೆಯಲ್ಲಿ ಗುರುತಿಸಿ ವಿಶ್ಲೇಷಣೆ ಮಾಡಿರುವ ಬರಹ.

Leave a Reply