ರಂಗಶಂಕರದಲ್ಲಿ ಹೀಗಾಯ್ತು..

ಲಕ್ಷ್ಮಣ್ ವಿ ಎ 

ತಾಯಿ ತೊರೆದ ಮಗುವನ್ನು ಕವಿಯಲ್ಲದೆ ಇನ್ನ್ಯಾರು ಸಲುಹಬಲ್ಲರು? ಎಂದು ಲಕ್ಷ್ಮೀಶ ತೋಳ್ಪಾಡಿಯವರು ಪಂಪಭಾರತದಲ್ಲಿ ಪಂಪ ಕರ್ಣನ ಪಾತ್ರ ಪೋಷಣೆಯ ಬಗ್ಗೆ ಒಳನೋಟ ನೀಡಿದಾಗ ನಾನು ನಿಜಕ್ಕೂ ದಂಗಾಗಿ ಹೋದೆ. ಮಹಾಭಾರತದಲ್ಲಿ ಕರ್ಣ ಒಬ್ಬ ದುರಂತನಾಯಕನಾಗಿ ಇನ್ನೂ ಹೆಚ್ಚು ಆಪ್ತವಾಗುತ್ತ ಹೋಗುವುದು ಇದೇ ಕಾರಣಕ್ಕೆ. ಪಂಪ ತನ್ನ ರಾಜ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ ಬರೆದನು ನಿಜ ,ಆದರೆ ಅರ್ಜುನನಿಗಿಂತ ಮಿಗಿಲಾಗಿ ಕರ್ಣನ ಮೇಲೊಂದು ಅವನಿಗೆ ವಿಶೇಷ ಮಮಕಾರವಿದೆ.

ಅದು ಸ್ವರ್ಗ, ಹುಲುಮಾನವರಿಗಲ್ಲಿ ಪ್ರವೇಶವಿಲ್ಲ. ಸ್ವರ್ಗದಲ್ಲಿ ದುಃಖವಿಲ್ಲ ವಿರಹವಿಲ್ಲ ಅಲ್ಲಿ ಕದನವಿಲ್ಲ ಕುತೂಹಲವಿಲ್ಲ ಇಂತಹ ಕೇಡಿಲ್ಲದ ರೂಹಿಲ್ಲದ ಬೋರಾಗುವ ಸ್ವರ್ಗ ಸುಖ ಯಾರಿಗೆ ಬೇಕು ? ಇಂತಹ ಸ್ವರ್ಗದ ಅಪ್ಸರೆಯಾದ ಊರ್ವಶಿಯ ಶಾಪಕ್ಕೆ ಅರ್ಜುನ ಬಲಿಯಾಗುತ್ತಾನೆ.

‘ರಂಗಶಂಕರದಲ್ಲಿ ಯುಗಾದಿ’ಯಂದು ನಡೆದ ಹಳೆಗನ್ನಡದ ಕಾವ್ಯ ವಾಚನವನ್ನು ಸಾಭಿನಯವಾಗಿ ಕಲಾವಿದ ಎಂ ಗಣೇಶ ಪಂಪಭಾರತವನ್ನು ವಾಚಿಸಿದರು. ಅರ್ಜುನ ಊರ್ವಶಿಯ ಪ್ರಸಂಗವನ್ನು ಅಷ್ಟೇ ಮನಮುಟ್ಟುವಂತೆ ತಮಿಳು ಸೆಲ್ವಿ ವಾಚಿಸಿದರು.

ನಮ್ಮ ದೇಸೀ ಕಾವ್ಯ ಪ್ರಕಾರಗಳಲ್ಲಿ “ಮಂಟೇಸ್ವಾಮಿ ಕಾವ್ಯ ” ತುಂಬ ಜನಪ್ರಿಯವಾದ ಪ್ರಕಾರ. ಇದರ ಬಗ್ಗೆ ಕೃಷ್ಣಮೂರ್ತಿ ಹನೂರು ಸರ್ ಬಹಳ ಆಸಕ್ತಿದಾಯಕವಾದ ಮಾಹಿತಿ ನೀಡುತ್ತಾರೆ. ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣದಲ್ಲಿ ಶರಣರ ಮೇಲೆ ಅವ್ಯಾಹತವಾದ ಹಲ್ಲೆಗಳು ಶುರುವಾದಾಗ ಈ ಶರಣರೆಲ್ಲರೂ ದಿಕ್ಕಾಪಾಲಾಗುತ್ತಾರೆ,

ಉತ್ತರ ದೇಶದಿಂದ ದಕ್ಷಿಣ ದ ಕತ್ತಲೆಯ ರಾಜ್ಯ ಕಡೆಗೆ ತಳ ಸಮುದಾಯವೆನ್ನಿಸಿಕೊಂಡ ಶಿವ ಶರಣರು ಕಾಡು ಮತ್ತು ಕತ್ತಲೆಯ ನಾಡಾದ ಈಗಿನ ಮಲೇಮಹದೇಶ್ವರ ಸ್ವಾಮಿ ಸನ್ನಿಧಿಗೆ ಬಂದವರೇ ಈ ಮಂಟೇಸ್ವಾಮಿ ಹಾಗು ಮಲೆ ಮಹದೇಶ್ವರ ಸ್ವಾಮಿಯ ಪೂಜ್ಯರು ಎಂಬ ನಂಬಿಕೆ. ಈ ಪ್ರಕರಣ ಈ ಕಾವ್ಯ ಪ್ರಕಾರದ ಹಾಡಿನಲ್ಲೂ ಕೇಳಬಹುದಾಗಿದೆ. ಮೈಸೂರಿನ ಗುರುರಾಜ್ ತಂಡದವರು ಸಧ್ಯ ಕರ್ನಾಟಕದಲ್ಲಿ ಅತೀ ಯಶಸ್ವಿಯಾಗಿ ಈ ಮಂಟೇಸ್ವಾಮೀ ಕಾವ್ಯ ವನ್ನು ಸುಶ್ರಾವ್ಯವಾಗಿ ಹಾಡಿ ಜನಪ್ರಿಯಗೊಳಿಸುತ್ತಿದ್ದಾರೆ.

ಈ ಕಾವ್ಯ ಪ್ರಕಾರದ ಅಧ್ಯಯನ ಕುರಿತು ಪ್ರೊ.ಸಿ ಎನ್. ರಾಮಚಂದ್ರ ಸರ್ ಹೆಚ್ವಿನ ಬೆಳಕು ಚೆಲ್ಲಿದರು. ಜೊತೆಗೆ ಜುಂಜಪ್ಪನ ಕಾವ್ಯ ಹೀಗೆ ಇನ್ನೂ ಸುಮಾರು ಹನ್ನೊಂದು ಬಗೆಯ ದೇಸೀ ಕಾವ್ಯಗಳು ಜನಪರಂಪರೆಯಲ್ಲಿ ಹಾಸು ಹೊಕ್ಕಾಗಿ ಈಗ ಅವು ಅಳಿವಿನಂಚಲ್ಲಿರುವ ಬಗ್ಗೆ ಖೇದ ವ್ಯಕ್ತಪಡಿಸಿದರು.

ಇನ್ನು ದಿನದ ಕೊನೆಗೆ ಶುರುವಾದ ಕವಿಗೋಷ್ಠಿಗೆ ಸಾಕಷ್ಟು ಪ್ರೇಕ್ಷಕರು 50 ರೂ .ಗಳ ಟಿಕೀಟು ಪಡೆದುಕೊಂಡು ಬಂದಿದ್ದು ವಿಶೇಷವಾಗಿ ಗಮನಿಸುವಂತಹದ್ದು. ಕವಿತೆ ವಾಚನಕ್ಕೆ ನಾನೂ ಕೂಡ ತಿಕೀಟು ಪಡೆದೇ ಬಂದಿರುವೆನೆಂದು ಜಯಂತ್ ಸರ್ ತಮ್ಮ ಜೇಬಿನಲ್ಲಿ ದ್ದ ಟಿಕೀಟು ತೋರಿಸಿದಾಗ ನನಗಂತೂ ತುಂಬ ಮುಜುಗರವಾಯಿತು, ಪ್ರೇಕ್ಷರಿಗೆ ಟಿಕೇಟು ಸರಿ… ವೇದಿಕೆಯ ಮೇಲಿದ್ದ ಕವಿಗಳಿಗೆ ಯಾಕೆ ಟಿಕೇಟು ? ಜಯಂತ ಸರ್ ತಮ್ಮ ಎಂದಿನ ಲವಲವಿಕೆಯಲ್ಲಿ ತಿರಮಲೇಶರ ಪದ್ಯಗಳನ್ನು ಓದಿದರು.

ಕವಿಗೋಷ್ಠಿಗೆ ತುಂಬ ದೂರದ ಊರಿನಿಂದ ಹಿರಿಯರಾದ ಸುಬ್ರಾಯ ಚೊಕ್ಕಾಡಿ ಸರ್, ಧಾರವಾಡದಿಂದ ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್, ಮಂಡ್ಯದಿಂದ ರಾಜೇಂದ್ರ ಪ್ರಸಾದ, ತಮ್ಮ ಕಾಲು fracture ಆಗಿದ್ದರೂ ಕುಂಟುತ್ತ ಬಂದು ಕಾವ್ಯ ಪ್ರೀತಿ ವ್ಯಕ್ತಪಡಿಸಿದ ಟಿ ಎನ್ ಸೀತಾರಾಮ್ ಸರ್, ಯೋಗರಾಜ್ ಭಟ್ ಸರ್, ಚಿದಂಬರ ನರೇಂದ್ರ ಸರ್, ಪ್ರೀತಿಯ ರಾಜಶೇಖರ ಬಂಡೆ, ಪ್ರತಿಭಾ ನಂದ ಕುಮಾರ , ವಿದ್ಯಾರಶ್ಮಿ , ಭಾರತಿ ಬಿ ವಿ, ಹೇಮಲತಾ ಮೂರ್ತಿ, ಸಂಯುಕ್ತ ಪುಲಿಗಲ್, ಹಿರಿಯರಾದ ಎಸ್ ದಿವಾಕರ ಸರ್ ,ಇನ್ನೂ ಹಲವರು ಕವಿತೆ ಓದಿ ಕವಿಗೋಷ್ಠಿ ಸಾರ್ಥಕಗೊಳಿಸಿದರು.

ಸಂಧ್ಯಾರಾಣಿ ಮೇಡಮ್ ಮೂರುಗೋಷ್ಠಿಗಳನ್ನು ತಮ್ಮ ಎಂದಿನ ಲವ ಲವಿಕೆಯ ಶೈಲಿಯಲ್ಲಿ ನಿರೂಪಿಸಿ ಯುಗಾದಿಯನ್ನು ಮತ್ತೆ ಮತ್ತೆ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದರು

 

2 comments

  1. ಧನ್ಯವಾದಗಳು ಪಲ್ಲವಿ ಮೇಡಮ್.ಈ ಬರಹದಲ್ಲೊಂದು ತಪ್ಪಾಗಿದೆ.ಟಿಕೇಟು ಪಡೆದು ಬಂದವರಿಗೆಲ್ಲ ಧನ್ಯವಾದ ಹೇಳಿದ್ದು ಜಯಂತ್ ಸರ್.ನಾನು ಟಿಕೇಟು ಪಡೆದೇ ಕವಿತೆವಾಚಿಸುತ್ತೇನೆಂದು ಹೇಳಿದ್ದು ಬಿ.ಸುರೇಶ ಸರ್…ಈ ತಪ್ಪಿಗಾಗಿ ನಾನು ಜಯಂತ್ ಸರ್ ರಲ್ಲಿ ಕ್ಷಮೆ ಕೋರುತ್ತೇನೆ.

Leave a Reply