ಚುನಾವಣಾ ಸಮಯಕ್ಕೆ ಮತ್ತೆ, ಮತ್ತೆ ನೆನಪಾಗೋ ಲಂಕೇಶ್ ಪತ್ರಗಳು

ಸಿರೂರ್ ರೆಡ್ಡಿ 

ಎಲ್ಲ ಪತ್ರಕರ್ತರಲ್ಲೂ ಚುನಾವಣೆ ಬಂದಕೂಡಲೇ ಸುದ್ದಿ ಬಿತ್ತೋ ಕುತೂಹಲ ಮತ್ತು ರೋಮಾಂಚನ ಸಹಜ.

ಚುನಾವಣೆ ಅಂದಕೂಡಲೇ ನಾನು ಈಗಲೂ ಗರಿಗೆದರೋ ನವಿಲಿನಂತಾಗುತ್ತೇನೆ. ೧೯೮೦ರ ದಶಕದಲ್ಲಿ ನಾವೆಲ್ಲ ‘ಲಂಕೇಶ್ ಪತ್ರಿಕೆ’ಯ ರಾಜಕೀಯ ವರದಿಗಾರರಾಗಿ ಹಲವು ಐತಿಹಾಸಿಕ ಚುನಾವಣಾ ಸಂಘರ್ಷಗಳನ್ನ ನೋಡಿದ್ದು, ಬರೆದದ್ದು ಮತ್ತು ನಮ್ಮ ವರದಿಗಳು ಫಲಿತಾಂಶಕ್ಕೆ ಹತ್ತಿರವಾಗಿದ್ದವೇ ಅನ್ನೋ ಕಾಯುತ್ತಿದ್ದ ದಿನಗಳು ಈಗಲೂ ನೆನಪಾಗುತ್ತಿದೆ.

೧೯೯೦ರ ದಶಕದ ಕೊನೆಯಲ್ಲಿ ನಾನು ಅಮೇರಿಕಾ ಸೇರಿಕೊಂಡಮೇಲೆ ಕೂಡಾ ಲಂಕೇಶ್ ಮೇಷ್ಟ್ರ ಜೊತೆ ಅವರು ತೀರಿಕೊಳ್ಳೋವರೆಗೂ ಸಂಪರ್ಕ ಮುಂದುವರಿದಿತ್ತು.

ಆ ಕಾಲಮಾನದಲ್ಲಿ ನಾನು ಬೆಂಗಳೂರಿಗೆ ಹೋದಾಗಲೆಲ್ಲ ಅವರಿಗಿಷ್ಟವಾಗೋ ಪುಸ್ತಕಗಳು, ಡಿವಿಡಿ ಮತ್ತಿತರೇ ವಸ್ತುಗಳನ್ನ ತೆಗೆದುಕೊಂಡು ಹೋಗುತ್ತಿದ್ದೆ. ಹೋಗೋ ಮುನ್ನ ಫೋನ್ ಮಾಡಿದರೆ ಖುಷಿಯಿಂದ ಅವರಿಗೆ ಬೇಕಾಗಿರೋ ಕ್ಲಾಸಿಕ್ ಸಿನೆಮಾಗಳ ಡಿವಿಡಿ (ಗಾನ್ ವಿತ್ ದಿ ವಿಂಡ್, ಡಾಕ್ಟರ್ ಝಿವಾಗೋ ಮುಂತಾದವು), ಪುಸ್ತಕ ಮತ್ತು ಅಮೇರಿಕಾ ಮತ್ತು ಇಂಗ್ಲೆಂಡ್ನಲ್ಲಿ ಪ್ರಕಟವಾಗೋ ಟ್ಯಾಬ್ಲಾಯ್ಡ್ಗಳು … ಇತ್ಯಾದಿ ಬೇಡಿಕೆ ಅವರದ್ದಾಗಿತ್ತು.

ಆ ಸಂದರ್ಭದಲ್ಲಿ ಈಗಿನ ಇಂಟರ್ನೆಟ್ ಅನ್ನೋ ಕಲಿಯುಗ ಇರಲಿಲ್ಲವಾದ್ದರಿಂದ ಪತ್ರಗಳೇ ನಮ್ಮ ಸಂಪರ್ಕ ಸಾಧನಗಳು. ನಾನು ಮೇಷ್ಟ್ರಿಗೆ ಬರೆದ ಪತ್ರಗಳ ನಕಲು ನನ್ನಲ್ಲಿಲ್ಲ. ಆದರೆ ಅವರು ಬರೆದ ಹಲವು ಪತ್ರಗಳು ಕಾಲನ ಹೊಡೆತಕ್ಕೆ ಸಿಕ್ಕಿ ನಾಲ್ಕಾರು ತುಂಡುಗಳ ಪಳೆಯುಳಿಕೆಯ ರೂಪದಲ್ಲಿ ಈಗಲೂ ನನ್ನಲ್ಲಿವೆ. ಮೀತೇರಾ (Mitterand) ಪುಸ್ತಕ “dying without god” ಬಗ್ಗೆ ಅವರು ಬರೆದ ಪತ್ರದ ಪೂರ್ಣ ವಿವರ ಇನ್ನೊಮ್ಮೆ ಹಂಚಿಕೊಳ್ಳುತ್ತೇನೆ.

ಆದರೆ ಆ ಪತ್ರದ “ನೀನು ಕಳಿಸಿದ ಡೈಯಿಂಗ್ ವಿಥೌಟ್ ಗಾಡ್ ಪುಸ್ತಕ ತುಂಬಾ ಚೆನ್ನಾಗಿದೆ. ಒಂದು ರೀತಿಯಲ್ಲಿ ಮಿತೇರಾ ಸ್ಥಿತಿಯೇ ಮನುಷ್ಯರೆಲ್ಲರ ಸ್ಥಿತಿ. ಮತ್ತೆ ಮತ್ತೆ ಖಾಯಿಲೆಯಿಂದ ನರಳುತ್ತಿರುವವರಂತೂ ಯಥಾವತ್ ಹಾಗೇ ಇರುತ್ತಾರೆ. ಆದರೆ ಈ ಮಿತೇರಾ ತರಹ ಅಷ್ಟು ಹೀರೋಯಿಕ್ ಆಗಿ ಇರುವವರು ಮತ್ತು ಸಾವನ್ನ ಮರೆತು ಬದುಕಿರುವವರು ಕಮ್ಮಿ” ಅನ್ನೋ ಸಾಲುಗಳು ನಮ್ಮಂಥವರಿಗೆ ಇಂದಿಗೂ ಮುಖ್ಯವಾಗುತ್ತವೆ.

ಅದಿರಲಿ. ಈಗ ಚುನಾವಣಾ ವಿಷಯಕ್ಕೆ ಬರುತ್ತೇನೆ. ೧೯೯೦ರ ಕೊನೆಯ ದಿನಗಳಲ್ಲಿ ಹೀಗೇ ಅಮೆರಿಕಕ್ಕೆ ಬಂದಮೇಲೂ ಹಲವು ವಿಷಯಗಳ ಒಂದು ದೀರ್ಘ ಪತ್ರದಲ್ಲಿ ನನ್ನ ಅಶಿಸ್ತಿನ ಬಗ್ಗೆ ಬಯ್ದು ಮರು ಸಾಲಿನಲ್ಲೇ ಪ್ರೀತಿ ತೋರೊ ಲಂಕೇಶ್ ಆಗ ತಾನೇ ಭಾರತದಲ್ಲಿ ನಡೆದ ಚುನಾವಣೆಯ ಬಗ್ಗೆ ಹೀಗೆ ಬರೆದಿದ್ದಾರೆ:

” ಏನಯ್ಯಾ, ನೀನು ಕಳಿಸಿದ ಎರಡು ಪುಸ್ತಕಕ್ಕೆ ಥ್ಯಾಂಕ್ಸ್. ಆಲ್ಬರ್ಟ್ ಕಾಮು ಹೊಸ ಪುಸ್ತಕ ಪರವಾಗಿಲ್ಲ ಆದರೆ ಷಿಂಡ್ಲರ್ಸ್ ಲಿಸ್ಟ್ ಪುಸ್ತಕದ ಬಗ್ಗೆ ನನ್ನ ಸಹಾನುಭೂತಿಯಿಲ್ಲ. Thanks a lot for sending them. ಈಗ ತಾನೇ ಓಟು ಕೊಟ್ಟು ಫಲಿತಾಂಶಕ್ಕಾಗಿ ಕಾಯುತ್ತಾ ಕೂತಿದ್ದೇನೆ. ಇದೊಂದು wretched ದೇಶ. ಯಾವ ದೇಶದಲ್ಲಾದರೂ ಫಲಿತಾಂಶಕ್ಕಾಗಿ ಹದಿನೈದು ಕಾಯುವುದು ನೋಡಿದ್ದೀಯಾ? ಅವರು ಕೊಡೊ ನೆಪ – communications – ರಸ್ತೆ, ಫೋನ್ ಸರಿ ಇಲ್ಲ. ಅರ್ಧ ಶತಮಾನದ ಮೇಲೂ ರಸ್ತೆ, power, ಫೋನ್ ಯಾವುದೂ ಸರಿ ಇಲ್ಲ. ಟೀಕೆ ಟಿಪ್ಪಣಿ ನಿಲ್ಲಿಸಿ ಈ ಕಾಗದ ಬರೆದಿದ್ದೇನೆ. Take care ….”

ಈಗ ಮತ್ತೊಮ್ಮೆ ಚುನಾವಣೆ. ಮೂರು ದಶಕಗಳ ಹಿಂದೆ ಲಂಕೇಶರು ಹೇಳಿದಂತೆ ಚುನಾವಣೆ ನಡೆದು ನಾವೆಲ್ಲ ಫಲಿತಾಂಶಕ್ಕಾಗಿ ಮತ್ತೆ ಕಾಯಬೇಕಾಗಿದೆ. ಈ ಪುಟ್ಟ ಬರಹದ ತಲೆಬರಹ ಮತ್ತು ವಿಷಯ ಅಷ್ಟು ಹೊಂದಾಣಿಕೆಯಾಗಿಲ್ಲ ಅನ್ನೋ ಸಂಗತಿ ನನಗೂ ಗೊತ್ತು. ಇಲ್ಲಿ ಹಲವು ಸಂಗತಿಗಳಿವೆ ಮತ್ತು ಆ ಬಗ್ಗೆ ವಿವರವಾಗಿ ಬರೆಯೋ ಹುಸಿ ಭರವಸೆ ಖಂಡಿತಾ ಕೊಡಬಲ್ಲೆ. ಅಷ್ಟೇ ….

ನಿಮ್ಮ ನೆಚ್ಚಿನ ನಾಯಕರ ಫಲಿತಾಂಶಕ್ಕಾಗಿ ಕಾಯುತ್ತ ಇರಿ.

Leave a Reply