ನೀವು ದೇವರನ್ನು ನಂಬಬೇಡಿ..

ಜೋಗಿ 

ನಾನು ದೈವ ವಿರೋಧಿಯಲ್ಲ. ದೇವರನ್ನು ವಿರೋಧಿಸಲು ನನ್ನಲ್ಲಿ ಕಾರಣಗಳೂ ಇಲ್ಲ. ಹಾಗೆ ನೋಡಿದರೆ ನಾನು ನನ್ನಷ್ಟು ಎಷ್ಟು ಪ್ರೀತಿಸುತ್ತೇನೋ ಅದಕ್ಕಿಂತ ತುಸು ಹೆಚ್ಚೇ ದೇವರನ್ನೂ ಪ್ರೀತಿಸುತ್ತೇನೆ. ಪ್ರೀತಿಯಲ್ಲಿ ಹೇಗೆ ವಿಧಿವಿಧಾನಗಳಿಲ್ಲವೋ ದೇವರ ಮೇಲಿನ ಪ್ರೀತಿಯಲ್ಲೂ ವಿಧಿವಿಧಾನಗಳಿಲ್ಲ ಎಂದು ನನಗೆ ಚಿಕ್ಕಂದಿನಿಂದಲೇ ಅನ್ನಿಸುತ್ತಿತ್ತು. ಎಲ್ಲರಂತೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವನೊಬ್ಬ ಇದ್ದಕ್ಕಿದ್ದಂತೆ ಮಹಾ ಭಕ್ತನಂತೆ ನಟಿಸುವುದು, ದೇವರನ್ನು ಪೂಜಿಸುವುದು, ಪೂಜೆ ಮುಗಿದ ನಂತರ ಮತ್ತೆ ಎಂದಿನಂತೆ ಪೊಟ್ಟು ಮಾತಾಡುತ್ತಾ ಇದ್ದುಬಿಡುವುದು ನನಗೇಕೋ ಸರಿ ಅನ್ನಿಸುತ್ತಲೇ ಇರಲಿಲ್ಲ. ದೇವರಿಗೂ ಮನುಷ್ಯನಿಗೂ ಇರುವ ಸಂಬಂಧ ಅದನ್ನೆಲ್ಲ ಮೀರಿದ್ದು ಅನ್ನಿಸುತ್ತಿತ್ತು.

ದಕ್ಷಿಣ ಕನ್ನಡದ ದೇವಸ್ಥಾನಗಳನ್ನೂ ದೈವಾರಾಧನೆಯನ್ನೂ ನೋಡುತ್ತಾ ಬಂದ ನನಗೆ ದೇವರ ಮೇಲಿನ ಭಕ್ತಿಯೆಂದರೆ ಬಹುದೊಡ್ಡ ಕಲಾಪ್ರಕಾರ ಅಂತಲೇ ಅನ್ನಿಸತೊಡಗಿತ್ತು. ನಮ್ಮ ಮನೆಗೆ ಪೂಜೆಗೆ ಬರುತ್ತಿದ್ದ ಪುರೋಹಿತರು ಪೂಜೆ ಶುರುವಾಗುವುದಕ್ಕೆ ನಾಲ್ಕಾರು ಗಂಟೆ ಮೊದಲೇ ಬಂದು, ನಮ್ಮ ಮನೆಯ ಚಾವಡಿಯಲ್ಲಿ ಬಣ್ಣಬಣ್ಣದ ರಂಗೋಲಿ  ಹಾಕಿ ಚಿತ್ರ ಬಿಡಿಸಿ, ಅದರ ಮಧ್ಯೆ ದೇವರ ಮೂರ್ತಿಯನ್ನಿಟ್ಟು, ಅದಕ್ಕೆ ಚೆಂದದ ಹೂವಿನ ಅಲಂಕಾರ ಮಾಡಿ, ಗೆಳೆಯನನ್ನು ಮಾತಾಡಿಸುತ್ತಿದ್ದೇನೇನೋ ಎಂಬಷ್ಟು ಅಕ್ಕರೆಯಿಂದ ದೇವರ ಜೊತೆ ನಮಗೆ ಅರ್ಥವಾಗದ ಭಾಷೆಯಲ್ಲಿ ಮಾತಾಡುತ್ತಾ, ತಮಗಿಷ್ಟವಾದ ತಿಂಡಿಗಳನ್ನೆಲ್ಲ ದೇವರ ಮುಂದಿಟ್ಟು ಇದೆಲ್ಲ ನಿನಗೇ ಅಂತ ನೈವೇದ್ಯ ಮಾಡುವ ಕ್ರಮವಂತೂ ನನ್ನನ್ನು ರೋಮಾಂಚನಗೊಳಿಸುತ್ತಿತ್ತು.

ಹಾಗೆ ಮಾಡಿದಾಗ ಅಲ್ಲಿ ದೇವರು ಪ್ರತ್ಯಕ್ಷನಾಗಿ ಕಾಣಿಸದೇ ಹೋದರೂ ಎಲ್ಲಿಯೋ ಕೂತು ಅದನ್ನೆಲ್ಲ ನೋಡುತ್ತಾ ನನ್ನಂತೆಯೇ ಬೆರಗಾಗುತ್ತಿರಬಹುದು ಅಂದುಕೊಳ್ಳುತ್ತಿದ್ದೆ. ಆಮೇಲೆ ಆ ಪುರೋಹಿತರು ನಾಟ್ಯಭಂಗಿಯಲ್ಲಿ ವಿವಿಧ ಆರತಿಯನ್ನು ಬೆಳಗುವ ಕ್ರಮ, ಅದಕ್ಕೆ ಹಿನ್ನೆಲೆಯಾಗಿ ಕೇಳುತ್ತಿದ್ದ ಜಾಗಟೆಯ ಸದ್ದು, ಶಂಖನಾದ, ಅವರ ಕೈಯ ಘಂಟಾಮಣಿಯ ನಾದ, ಜೊತೆಗೇ ಅವರ ಲಯಬದ್ಧ ಮಂತ್ರಗಳೆಲ್ಲ ಆಪ್ಯಾಯಮಾನವೆಂಬಂತೆ ಭಾಸವಾಗುತ್ತಿದ್ದವು. ಅಲ್ಲೊಂದು ಅಪೂರ್ವ ಕಲಾವಂತಿಕೆಯ ಜಗತ್ತು ಸೃಷ್ಟಿಯಾಗಿ ಪೂಜೆ ನಡೆಯುತ್ತಿದ್ದಷ್ಟು ಹೊತ್ತೂ ನಾವೆಲ್ಲ ತನ್ಮಯರಾಗಿ ಕೂರುತ್ತಿದ್ದೆವು.

ಇದನ್ನು ನಾನು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಈಗಲೂ ದೇವಸ್ಥಾನಗಳಿಗೆ ಹೋದಾಗ ನಾನು ಆ ಕಲೆಗಾರಿಕೆಯ ಕ್ಷಣಕ್ಕಾಗಿ ಕಾಯುತ್ತಿರುತ್ತೇನೆ. ದೇವರಿಗೆ ಅಲಂಕಾರ ಮಾಡುವ ಭಟ್ಟರು ನನಗೆ ದೇವರ ಆಪ್ತಮಿತ್ರನಂತೆಯೇ ಕಾಣಿಸುತ್ತಾರೆ. ಅವರ ತನ್ಮಯತೆ, ಶ್ರದ್ಧೆ, ಏಕಾಗ್ರತೆಗಳೆಲ್ಲ ಸುಳ್ಳು ಎಂದು ತಳ್ಳಿಹಾಕುವ ಧೈರ್ಯ ನನಗಂತೂ ಬಂದಿಲ್ಲ. ನನಗಿಷ್ಟವಾದ ಕತೆಯನ್ನೋ ಪದ್ಯವನ್ನೋ ಓದುವಾಗ ಅದೇ ರೀತಿಯ ತಾದಾತ್ಮವನ್ನು ನಾನೂ ಅನುಭವಿಸಿದ್ದಿದೆ.

ವಾರಾನುಗಟ್ಟಲೆ ಸ್ನಾನವನ್ನೇ ಮಾಡದ, ದಿನವೂ ರಾತ್ರಿ ಕುಡಿದು ತೂರಾಡುತ್ತಾ ಮನೆ ಸೇರುವ ನಮ್ಮೂರಿನ ಮಂದಿ ಅಯ್ಯಪ್ಪ ಸ್ವಾಮಿಯನ್ನು ನೋಡುವುದಕ್ಕೆ ಮಾಲೆ ಹಾಕಿದ ಒಂದು ತಿಂಗಳು, ಬೆಳಗಾಗೆದ್ದು, ಕೊರೆಯುವ ಚಳಿಯಲ್ಲಿ ತಣ್ಣೀರಿನಲ್ಲಿ ಮಿಂದು ಏರುಧ್ವನಿಯಲ್ಲಿ ಅಯ್ಯಪ್ಪಸ್ವಾಮಿಯ ಭಜನೆ ಮಾಡುತ್ತಿರುವುದನ್ನು ಕಂಡ ಮೇಲಂತೂ ದೇವರ ಭಕ್ತಿಗಿರುವ ಅನನ್ಯ ಶಕ್ತಿಗೆ ನಾನು ಬೆರಗಾಗುತ್ತಿದ್ದೆ. ದೇವರಿಗಿಂತ ದೇವರ ಭಕ್ತಿಯೇ ದೊಡ್ಡದು ಅಂತಲೂ ಆಗಾಗ ಅನ್ನಿಸುತ್ತಿತ್ತು. ದೇವರ ಭಕ್ತಿ ಗರಗಸದಂತೆ ಹೋಗುತ್ತಾ ಕೊಯ್ಯುವುದು, ಬರುತ್ತಾ ಕೊಯ್ಯುವುದು ಎಂಬ ಸಾಲಂತೂ ನನಗೆ ಇನ್ನೂ ಅರ್ಥವಾಗದ ಕವಿತೆಯಂತೆ ನನ್ನನ್ನು ರೋಮಾಂಚಗೊಳಿಸುತ್ತಲೇ ಇದೆ.

ನಾನು ಯಾವತ್ತೂ ದೇವರ ಅಸ್ತಿತ್ವದ ಕುರಿತು ಚರ್ಚೆ ಮಾಡಿದವನೇ ಅಲ್ಲ. ದೇವರಿದ್ದಾನೋ ಇಲ್ಲವೋ ಎಂಬ ಚರ್ಚೆ ಬಂದಾಗೆಲ್ಲ ನಾನು ದೂರ ಸರಿದು ನಿಂತಿದ್ದೇನೆ. ದೇವರನ್ನು ನೀನು ನಂಬುತ್ತೀಯೋ ಅಂತ ಯಾರಾದರೂ ಕೇಳಿದರೆ ನನಗೆ ಕಿರಿಕಿರಿಯಾಗುತ್ತದೆ. ಅಂಥ ಪ್ರಶ್ನೆಗಳನ್ನು ಯಾರೂ ಯಾರಿಗೂ ಕೇಳಬಾರದು. ಯಾಕೆಂದರೆ ದೇವರ ಮೇಲಿನ ನಂಬಿಕೆಯನ್ನು ಯಾರೂ ಕೂಡ ಇನ್ನೊಬ್ಬರಿಗೆ ಸಾಬೀತು ಮಾಡಿ ತೋರಿಸಬೇಕಾಗಿಲ್ಲ. ಅದು ಭಕ್ತಿಯೇ ಆಗಿರಬೇಕು ಅಂತೇನೂ ಇಲ್ಲ. ಅದು ಪ್ರೀತಿಯೋ ಅಕ್ಕರೆಯೋ ತನ್ಮಯತೆಯೋ ತನ್ನನ್ನು ತಾನು ಮೀರುವ ಪ್ರಯತ್ನವೋ ಆಗಿರಬಹುದಲ್ಲ!

ಕ್ರಮೇಣ ನಾನು ದೇವರ ಬಗ್ಗೆ ಯೋಚಿಸುವುದನ್ನು ಬಿಟ್ಟೇ ಬಿಟ್ಟೆ. ಆದರೆ ಶರಣರ ವಚನಗಳನ್ನೋ ದಾಸರ ಪದಗಳನ್ನೋ ಓದುವಾಗೆಲ್ಲ ನನಗೆ ಅನಿರ್ವಚನೀಯ ಆನಂದವಾಗುತ್ತಿರುತ್ತದೆ. ನಿನ್ನಯ ತಾವರೆ ತೆರನಡಿಗಳಲಿ, ನನ್ನದೆಂಬ ಈ ತನುಮನಗಳನ್ನು ಚೆನ್ನಕೇಶವಾ ಇರಿಸುತೆ ಒಂದು ಬಿನ್ನಹ ಕುಸುಮವನಿದ ನೀಡಿರುವೆನು ಎಂಬ ಸಾಲುಗಳಂತೂ ಯಾರನ್ನು ತಾನೇ ಪುಲಕಗೊಳಿಸುವುದಿಲ್ಲ.

ಹೀಗಾಗಿ ನಮ್ಮ ಸಮಸ್ಯೆ ದೇವರಿದ್ದಾನೋ ಇಲ್ಲವೋ ಅನ್ನುವುದು ಅಲ್ಲವೇ ಅಲ್ಲ. ದೇವರು ಅಂದರೆ ನಮ್ಮ ಪಾಲಿಗೆ ದುಃಖಗಳೇ ಇಲ್ಲದ ಗೆಳೆಯನಿದ್ದಂತೆ. ಈ ಜಗತ್ತಿನ ಎಲ್ಲವನ್ನೂ ಆನಂದದಿಂದ ಸವಿಯಬಲ್ಲ, ಯಾವ ಸಂಕಟವನ್ನೂ ತನ್ನದಾಗಿಸಿಕೊಳ್ಳದ ಅಪೂರ್ವ ಚೈತನ್ಯ ಅಂತಲೂ ಎಷ್ಟೋ ಬಾರಿ ಅನ್ನಿಸುತ್ತದೆ. ದೇವರು ನಮಗೆ ಆಗಾಗ ಉಂಟಾಗುವ ಸಾಕ್ಷಾತ್ಕಾರ ಯಾಕಿರಬಾರದು? ಈ ಪ್ರಕೃತಿಯನ್ನು ಕಂಡಾಗ ಆಗುವ ಆನಂದವೇ ದೇವರಲ್ಲವೇ?

ಹೀಗೆಲ್ಲ ಯೋಚಿಸುವುದನ್ನೂ ಕೂಡ ಬಿಟ್ಟು ಎಷ್ಟೋ ವರ್ಷಗಳೇ ಆದ ನಂತರ ನಾನೊಮ್ಮೆ ಮುಂಬಯಿಗೆ ಹೋಗಿದ್ದೆ. ಅಲ್ಲಿ ನನಗೆ ಹೊಸದಾಗಿ ಮಿತ್ರರಾಗಿದ್ದ ನಟೇಶ್ ಪೋಲೇಪಲ್ಲಿಯವರು ಸಿಕ್ಕಿದ್ದರು. ಅವರ ಜೊತೆ ನಾನು ಎಲಿಫೆಂಟಾ ಗುಹೆಗಳನ್ನು ನೋಡಲು ಹೋಗಿದ್ದೆ. ಜೊತೆಗೆ ನನ್ನ ಮಗಳು, ಹೆಂಡತಿಯೂ ಇದ್ದರು. ನಟೇಶ್ ಅವರ ಮಗಳೂ ಬಂದಿದ್ದಳು. ನಾವಲ್ಲಿ ಸುತ್ತಾಡುತ್ತಾ ಒಂದು ಕಲ್ಲಿನ ಮೇಲೆ ಕೂತಿರುವಾಗ ನಟೇಶ್ ನೀವೇಕೆ ದೇವರನ್ನು ನಂಬುವುದಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ಅದಕ್ಕೆ ಉತ್ತರಿಸಬೇಕು ಅಂತೇನೂ ನನಗೆ ಅನ್ನಿಸಲಿಲ್ಲ. ತಕ್ಷಣಕ್ಕೆ ಯಾವ ಉತ್ತರವೂ ಹೊಳೆಯಲಿಲ್ಲ. ದೇವರ ಕುರಿತು ಅನೇಕ ಚರ್ಚೆಗಳನ್ನು ಅಷ್ಟರಲ್ಲಾಗಲೇ ನಾನು ಕೇಳಿದ್ದೆ. ತಾರುಣ್ಯದ ಹುಮ್ಮಸ್ಸಿನಲ್ಲಿ ಅಂಥ ಚರ್ಚೆಗಳಲ್ಲಿ  ಮನಸ್ಸಿಲ್ಲದಿದ್ದರೂ ಭಾಗಿಯಾಗಿದ್ದೆ. ನಾನು ದೇವರನ್ನು ನಂಬುವುದಿಲ್ಲ ಅಂತಲೋ ನಂಬುತ್ತೇನೆ ಅಂತಲೋ ನನಗೆ ಯಾವತ್ತೂ ಅನ್ನಿಸಿರಲೇ ಇಲ್ಲ. ಅದು ಯೋಚಿಸಿ ನಂಬಬೇಕಾದದ್ದು ಅಂತಲೂ ನನಗೆ ಅನ್ನಿಸಿರಲಿಲ್ಲ.

ಆದರೆ ನಟೇಶ್ ಈ ಪ್ರಶ್ನೆ ಕೇಳಿದಾಗ ನಾನು ಯೋಚಿಸದೇ ಹೇಳಿದೆ: ನಾನೇಕೆ ದೇವರನ್ನು ನಂಬಬೇಕು. ದೇವರು ನನ್ನನ್ನು ನಂಬಬೇಕು. ಯಾಕೆಂದರೆ ನನಗೆ ಏನನ್ನಾದರೂ ಕೊಡುವವನು ಅವನು. ಹೀಗಾಗಿ ಅವನಿಗೆ ನನ್ನ ಮೇಲೆ ನಂಬಿಕೆ ಇರಬೇಕೇ ಹೊರತು, ನಾನು ದೇವರನ್ನು ನಂಬಬೇಕಾಗಿಲ್ಲ!

ಇದನ್ನೇ ಕೊಂಚ ವಿಸ್ತರಿಸಿ ನೋಡಿದರೆ, ನಾವೇಕೆ ದೇವರನ್ನು ನಂಬಬೇಕು? ನಂಬಿಕೆ ಎಂದರೇನು? ನಾನು ಬಂದು ನಿಮ್ಮ ಹತ್ತಿರ ಒಂದು ಲಕ್ಷ ರುಪಾಯಿ ಸಾಲ ಕೊಡುತ್ತೇನೆ ಅಂತಿಟ್ಟುಕೊಳ್ಳಿ. ನೀವು ನನಗೆ ಸಾಲ ಕೊಡಬೇಕಾಗಿದ್ದರೆ, ನೀವು ನನ್ನನ್ನು ನಂಬಬೇಕು. ನಾನು ವಾಪಸ್ಸು ಕೊಡುತ್ತೇನೆ ಅನ್ನುವ ನಂಬಿಕೆ ನಿಮಗಿರಬೇಕು. ಅಂದರೆ ನಾವು ಯಾರಿಗಾದರೂ ಏನನ್ನಾದರೂ ಕೊಡುವುದಾದರೆ ಅವರನ್ನು ನಾವು ನಂಬಬೇಕು. ದೇವರ ವಿಚಾರಕ್ಕೆ ಇದನ್ನು ಹೊಂದಿಕೆ ಮಾಡಿದರೆ ನಮಗೇನಾದರೂ ಕೊಡುವವನು ಅವನೇ ಅಲ್ಲವೇ? ಅಂದ ಮೇಲೆ ಅವನು ನಮ್ಮನ್ನು ನಂಬಬೇಕೇ ವಿನಾ, ನಾವೇಕೆ ಅವನನ್ನು ನಂಬಬೇಕು?

ಹಾಗಿದ್ದರೆ ನಾವು ಮಾಡಬೇಕಾದ್ದೇನು? ನಾವು ದೇವರನ್ನು ನಂಬುವುದು ಮುಖ್ಯವಲ್ಲ. ದೇವರು ನಮ್ಮನ್ನು ನಂಬುವಂತೆ ನಾವು ಬದುಕುವುದು ಮುಖ್ಯ. ದೇವರು ಇರುವುದೇ ಆದಲ್ಲಿ, ಈ ಭೂಮಿ ಆತನ ಸೃಷ್ಟಿಯೇ ಆಗಿದ್ದಲ್ಲಿ, ಈ ಭೂಮಿಗೆ ನಮ್ಮನ್ನು ತಂದು ಬಿಡುವ ಮೊದಲು ಅವನಿಗೆ ನಮ್ಮ ಮೇಲೆ ನಂಬಿಕೆ ಇರಬೇಕಾಗುತ್ತದೆ. ಈತ ದುಷ್ಟನಲ್ಲ. ವಂಚಕನಲ್ಲ, ಕ್ರೂರಿಯಲ್ಲ, ಕೇಡು ಮಾಡುವವನಲ್ಲ. ಇವನ ಕೈಗೆ ಈ ಭೂಮಿಯನ್ನು ಕೊಡಬಹುದು. ಅವನಿಗೆ ಶಕ್ತಿ ತುಂಬಬಹುದು. ಆ ಶಕ್ತಿಯನ್ನು ಅವನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂಬ ನಂಬಿಕೆ ಇರಬೇಕಾದದ್ದು ದೇವರಿಗೇ ತಾನೇ?

ನೀವು ದೇವರನ್ನು ನಂಬಬೇಡಿ. ದೇವರು ನಿಮ್ಮನ್ನು ನಂಬುವಂತೆ ನೀವು ಬದುಕಿ ಅಂತ ನಾನು ನಟೇಶರಿಗೆ ಹೇಳಿದೆ. ಆಗ ನನ್ನ ಮನಸ್ಸಿನಲ್ಲಿ ಅಪಾತ್ರದಾನದ ಕಲ್ಪನೆ ಕೂಡ ಇದ್ದಿತೆಂದು ನೆನಪು. ದೇವರು ರಾಕ್ಷಸರನ್ನು ನಂಬಿ ಅವರಿಗೆ ವರ ಕೊಟ್ಟದ್ದು. ಅದನ್ನು ರಾಕ್ಷಸರು ದುರುಪಯೋಗ ಪಡಿಸಿಕೊಂಡು ದರ್ಪದಿಂದ ಎಲ್ಲವನ್ನೂ ನಾಶ ಮಾಡುತ್ತಾ ನಡೆದದ್ದು. ಕೊನೆಗೆ ವರ ಕೊಟ್ಟ ದೇವರೇ ಅವರನ್ನು ಸಂಹರಿಸಬೇಕಾಗಿ ಬಂದದ್ದು. ದೇವರು ಆ ರಾಕ್ಷಸರ ಮೇಲಿಟ್ಟಿದ್ದ ನಂಬಿಕೆ ಸುಳ್ಳಾದದ್ದು- ಇವೆಲ್ಲವೂ ನೆನಪಾಗಿ ನಾನು ದೇವರು ನಂಬುವಂತೆ ಬದುಕೋಣ ಅಂದೆ.

ನಟೇಶ್ ಪೋಲೇಪಲ್ಲಿ ಈ ಕಲ್ಪನೆ ತಮಗಿಷ್ಟವಾಯಿತು ಎಂದು ಹೇಳಿದರು. ಈ ಕುರಿತು ಬರೆಯಿರಿ ಅಂದರು. ಅವರು ಹಾಗೆ ಹೇಳಿ ವರ್ಷಗಳೇ ಕಳೆದಿವೆ. ಈ ಯೋಚನೆ ಕೂಡ ಕೊಂಚ ಬಾಲಿಶವಾದದ್ದು ಅಂತಲೂ ನನಗೆ ಆಗಾಗ ಅನ್ನಿಸುತ್ತಿತ್ತು. ಇದು ಒಂದು ಸುಂದರವಾದ ವಾದದಂತೆ ಕಾಣಿಸುತ್ತಿತ್ತೇ ವಿನಾ, ಆ ಕ್ಷಣಿಕವಾದ ಚಾಕಚಕ್ಯತೆಯನ್ನು ಮೀರಿದ್ದೇನೂ ಇದರಲ್ಲಿಲ್ಲ ಅಂತಲೂ ನನಗೆ ಗೊತ್ತಿತ್ತು.

ಆ ಕ್ಷಣದಿಂದ ನಾನು ಸ್ವಗತ ಎಂಬಂತೆ ನನ್ನೊಂದಿಗೆ ಮಾತಾಡುತ್ತಾ ಹೋದ ಸಂಗತಿಗಳನ್ನು ಇಲ್ಲಿ ಬರೆದಿದ್ದೇನೆ. ಇದು ನಾಸ್ತಿಕವಾದವಂತೂ ಅಲ್ಲವೇ ಅಲ್ಲ. ಆಸ್ತಿಕತೆ ಮತ್ತು ನಾಸ್ತಿಕತೆ ಎಂಬುದು ಅವರವರ ಮನಸ್ಸಿನಲ್ಲಿ ಹುಟ್ಟಿ ಸಾಯುವ ಆಲೋಚನೆಗಳು ಮಾತ್ರ. ಯಾರು ಕೂಡ ಸದಾ ಆಸ್ತಿಕನಾಗಿರಲಾರ, ಸದಾ ನಾಸ್ತಿಕನಾಗಿಯೂ ಉಳಿಯಲಾರ. ಅವನೊಳಗೆ ನಂಬಿಕೆ ಅಪನಂಬಿಕೆಗಳ ಜಗತ್ತು ಸದಾಕಾಲ ನೆಲೆಸಿರುತ್ತದೆ ಎಂದೇ ನಾನು ನಂಬಿದ್ದೇನೆ.

ಭಯವನ್ನು ಹಿಮ್ಮೆಟ್ಟಿಸಲಿಕ್ಕೆ ನಾವು ಮಾಡಿಕೊಂಡ ಉಪಾಯ ಭಕ್ತಿ. ಭಕ್ತಿಯನ್ನು ನಮ್ಮ ಬುದ್ಧಿ ಹಿಮ್ಮೆಟ್ಟಿಸಿದಾಗ ಹುಟ್ಟುವುದು ಭಯ. ಈ ಭಯಭಕ್ತಿಯ ಸಂಗಮವೇ ನಮ್ಮ ಬದುಕು. ಇಡೀ ಜೀವನವನ್ನೇ ನಾವು ಭಯ ಮತ್ತು ಭಕ್ತಿಯ ನಡುವೆ ತುಯ್ಯುತ್ತಾ ಕಳೆಯುತ್ತೇವೆ ಅಂತ ನನಗೀಗ ಅನ್ನಿಸುತ್ತದೆ. ಅಮರರಾಗುವ, ಸಾವನ್ನು ಗೆಲ್ಲುವ ಆಸೆ, ಸಾವನ್ನು ಯಾರೂ ಗೆಲ್ಲಲಾರರು ಎಂಬ ಅರಿವು, ನಿನ್ನ ಜೀವಂತಿಕೆ ಮುಗಿಯಿತು ಎಂದು ಘೋಷಿಸುವ ಪ್ರಕೃತಿ, ನಮ್ಮ ಪ್ರತಿಭೆ, ಶ್ರಮ, ಪ್ರಾಮಾಣಿಕತೆ, ಶ್ರದ್ಧೆ, ಕವಿತ್ವ, ಕಾಳಜಿ ಎಲ್ಲವನ್ನೂ ಒಂದೇ ಏಟಿಗೆ ಯಾವ ಮುಲಾಜೂ ಇಲ್ಲದೇ ಒರೆಸಿಹಾಕುವ ಸಾವು- ಇವೆಲ್ಲದರ ನಡುವೆಯೇ ನಾವು ಸಂತೋಷವನ್ನು ಹುಡುಕುತ್ತಾ, ನೆಮ್ಮದಿಗಾಗಿ ಪರದಾಡುತ್ತಾ, ನಿರ್ಭಯದ ಸ್ಥಿತಿಯನ್ನು ಪಡೆದುಕೊಳ್ಳಲು ಹೆಣಗುತ್ತಾ ಇರುತ್ತೇವಲ್ಲ!

ಹೀಗಾಗಿ ನೀವು ದೇವರನ್ನು ನಂಬಬೇಡಿ ಅನ್ನುವುದು ಸಲಹೆಯೂ ಅಲ್ಲ. ಆಜ್ಞೆಯೂ ಅಲ್ಲ, ಅದು ನಮ್ಮೆಲ್ಲರ ಸ್ಥಿತಿ. ದೇವರೇ ನನ್ನನ್ನು ನಂಬು. ನಾನು ದುಷ್ಟನೇ ಇರಬಹುದು. ನನಗೆ ಗೊತ್ತಿಲ್ಲ. ನನ್ನ ದುರಾಸೆಯೂ ಮೂಲ, ಅಧಿಕಾರದ ದಾಹ, ಸುಳ್ಳಾಡುವ ಅಭೀಪ್ಸೆ, ಮತ್ತೊಬ್ಬರನ್ನು ಮಟ್ಟ ಹಾಕುವ ಛಲ, ಮೀರಬಲ್ಲೆ ಎಂಬ ಅಹಂಕಾರ ಎಲ್ಲವನ್ನೂ ಒಪ್ಪಿಕೋ. ಆದರೂ ನನ್ನನ್ನು ನಂಬು. ನಾನೇನು ಅಂತ ನನಗೆ ಗೊತ್ತಿಲ್ಲ. ನಿನಗೂ ಗೊತ್ತಿಲ್ಲ ಅಂತ ಹೇಳಬೇಡ. ನಾನು ಕಂಡುಕೊಳ್ಳಲು ಸಾಧ್ಯವಾಗದೇ ಇರುವ ನನ್ನನ್ನು ನೀನಾದರೂ ಹುಡುಕಿಕೊಡು ಎನ್ನುವುದೇ ನಮ್ಮೆಲ್ಲರ ಮೂಲಭೂತ ಪ್ರಾರ್ಥನೆ ಇರಬಹುದೇನೋ ಅಂತ ನನಗೆ ಎಷ್ಟೋ ಸಲ ಅನ್ನಿಸಿದೆ.

ಈ ಎಲ್ಲಾ ಮಿಶ್ರಭಾವಗಳೂ ಸೇರಿ ರೂಪುಗೊಂಡಿರುವ ಕೃತಿ ಇದು. ಇದು ಭಕ್ತಿವೇದಾಂತವೂ ಅಲ್ಲ, ನೇತಿಸಿದ್ಧಾಂತವೂ ಅಲ್ಲ. ನನ್ನ ಹುಡುಕಾಟ ಅಷ್ಟೇ. ಈ ಹುಡುಕಾಟ ನಿಮ್ಮದೂ ಆಗಿರಬಹುದು ಎಂಬ ಕಾರಣಕ್ಕೆ ಇದನ್ನು ನಾನು ಬರೆಯುವ ಧೈರ್ಯ ಮಾಡಿದ್ದೇನೆ. ಎಷ್ಟೇ ಆದರೂ ನಾನು ಎಂಬುದು ನಿಮ್ಮೆಲ್ಲರ ಮೊತ್ತ.

ಈ ಹುಡುಕಾಟವನ್ನು ನಾವೆಲ್ಲ ಸೇರಿ ಮುಂದುವರಿಸೋಣ. ನಾವು ದೇವರನ್ನು ಹುಡುಕುತ್ತಿಲ್ಲ. ಸಂತೋಷವಾಗಿರುವ ನಮ್ಮನ್ನೇ ನಾವು ಅರಸುತ್ತಿದ್ದೇವೆ. ಆ ನಾವು ಸಿಕ್ಕುವುದು ಅನೂಹ್ಯವಾದ ಯಾವುದೋ ಒಂದರ ಹುಡುಕಾಟದಲ್ಲಿ. ಅಮೂರ್ತದ ಆನಂದದಲ್ಲಿ. ನಮಗೆ ಅರ್ಥವಾಗದ ನುಡಿಗಟ್ಟಿನಲ್ಲಿ, ನಾವು ಪರಿಹರಿಸಿಕೊಳ್ಳಲಾರದ ಸುಂದರವಾದ ಒಗಟಿನಲ್ಲಿ.

ಹಾಗಂತ ನಾನಂತೂ ನಂಬಿದ್ದೇನೆ.

19 thoughts on “ನೀವು ದೇವರನ್ನು ನಂಬಬೇಡಿ..

 1. ದೇವರೇ ನಮ್ಮನ್ನು ನಂಬಬೇಕು.
  ಕಲ್ಪನೆ ತುಂಬಾ ಇಷ್ಟವಾಯಿತು.
  ಮನಸ್ಸಲ್ಲಿದ್ದರೂ ನಿಮ್ಮಂತೆ ಬರೆಯುವುದು ಕಠಿಣ.

 2. Abba nanna manassinalliruvudanne barediddireno annistu. Tumba ishtavaythu. Pustakavannu tappade kondu oduttene Jogiyavre.

 3. ಚಿಂತನೆ, ಅಭಿವ್ಯಕ್ತಿ ಚೆನ್ನಾಗಿದೆ.. ಧನ್ಯವಾದ.

 4. ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ / ಇದು ಮೆಲ್ಲಮೆಲ್ಲನೆ ಕಲ್ಲಾಗಿ ಬರುತ್ತಿದೆ / ಇದ ನಾನೊಲ್ಲೆ ಬಲ್ಲವರು ಹೇಳಿ / ಉಂಬಡೆ ಬಾಯಿಲ್ಲ ನೋಡುವಡೆ ಕಣ್ಣಿಲ್ಲ / ಎನ್ನ ಬಡತನಕ್ಕೆ ಬೇಡುವಡೆ ಏನೂ ಇಲ್ಲ / ಆತುರ ವೈರಿ ಮಾರೇಶ್ವರ.
  —ನಗೆಯ ಮಾರಿತಂದೆ ಕ್ರಿ.ಶ.12 ನೆಯ ಶತಮಾನದ ವಚನಕಾರ.

 5. ದೇವಸ್ಥಾನದ ಗರ್ಭಗುಡಿಗೆ ತೆರಳುವ ತನಕವೂ ತೆರೆದಿದ್ದ ಕಣ್ಣು ದೇವರ ಬಿಂಬವನ್ನು ಕಂಡ ತಕ್ಷಣ ಕಣ್ಣು ಮುಚ್ಚುವಂತೆ; ಅಲಂಕಾರ, ಆಚರಣೆಗಳಿಗೆ ತೆರೆದಿಟ್ಟ ನೋಟ ಅಲ್ಲೇ ದಿಟ್ಟಿಸಿದಾಗ ಒಳಒಳಗೊಳಗೆ ಕರಗುವಂತೆ; ಇರುವಿಕೆ ಮತ್ತು ಅರಿಯುವಿಕೆಗಳ, ಮೂರ್ತ ಅಮೂರ್ತಗಳ ದ್ವಂದದ ಕ್ಷೀಷೆಯ ಸೃಜಿಸುವಿಕೆ, ಅನಿರ್ವಚನೀಯ ಭಾವಗಳ ಅಭಿವ್ಯಕ್ತಿಯ ಅನುಭವ ನೀಡುತ್ತಿದೆ.
  ಇದೊಂದು ರೀತಿ ಪ್ರೀತಿಸುತ್ತಾ, ಕೋಪಿಸುತ್ತಾ, ಪ್ರಶ್ನಿಸುತ್ತಾ, ಸಮಾಧಾನಿಸುತ್ತಾ ಮತ್ತೆ ಹಿಗ್ಗಿ, ಕುಗ್ಗಿ ಸಂತೈಸಿಕೊಂಡು ಮುನ್ನಡೆಯುವ ಸ್ವಗತದೊಳಗಿನ ವಿವಿಧ “ದರ್ಶನ”ಗಳಲ್ಲಿಯೇ ಹುದುಗಿರುವ, ಮೊಗೆದಾಗಷ್ಟೇ ಗೋಚರವಾಗುವ ದೇವರ ದರ್ಶನದಂತೆ ತೋರುತ್ತದೆ.

  ಸ್ವಗತ ಎಂದ ಕೂಡಲೇ, ಅವಕಾಶ ಸಿಕ್ಕಲ್ಲೆಲ್ಲ, ಜನಸಾಗರದ ನಡುವಿದ್ದರೂ ಸಾಗರತಟ ನಾಡಿನ ಬಾಲ್ಯದ ದಟ್ಟ ಅನುಭವಗಳೊಂದಿಗೆ ಸಂಪರ್ಕ ಸಾಧಿಸುವ ಮತ್ತು ಅವುಗಳಿಂದ ತಮ್ಮ ಮೇಲಾದ ಪರಿಣಾಮಗಳನ್ನು ಸುಲಲಿತವಾಗಿ ಕಟ್ಟಿಕೊಡುವ ಶ್ರೀ ಜೋಗಿಯವರಿಗೆ ಹೊಸ ಪುಸ್ತಕ “ನೀವು ದೇವರನ್ನು ನಂಬಬೇಡಿ”, ಲೋಕಾರ್ಪಣೆಯ ಶುಭಾಶಯಗಳು. ನೋಟ ಮಾತ್ರವಲ್ಲ, ಕಾಣ್ಕೆಯನ್ನೂ ವಿಸ್ತರಿಸಲಿ ಎಂದು ಆಶಿಸುತ್ತೇನೆ. ಶುಭವಾಗಲಿ.

  ಕೊನೆಯಲ್ಲೊಂದು ತಿಳಿಸಾಲು: ಬರೀ ಈ ಪುಸ್ತಕದ ಶೀರ್ಷಿಕೆಯನ್ನು ನೋಡಿಯೇ, ಯಾರಾದರೂ “ನಿವೇಕೆ ದೇವರನ್ನು ನಂಬಲೇಬೇಕು” ಎಂಬ ಪುಸ್ತಕವನ್ನು ಹೊರತರಬಹುದು.
  -ಶ್ರೇಯಾಂಕ ಎಸ್ ರಾನಡೆ.

 6. Thanks Shreyanka. ನಿಮ್ಮ ಪ್ರತಿಕ್ರಿಯೆ ಖುಷಿ ಕೊಟ್ಟಿತು.

 7. ನೀಮ್ಮ ಅನಿಸಿಕೆ ಒಪ್ಪಿಕೊಳ್ಳುವಬಹುದು ?

Leave a Reply

%d bloggers like this: