‘ಭಾರತ ಭಾಗ್ಯವಿಧಾತ’ನಿಗೊಂದು ಪತ್ರ.

ಬುದ್ದಂ ಶರಣಂ ಗಚ್ಛಾಮಿ

ತೀರ್ಥರೂಪು ಸಮಾನರಾದ ಬಾಬಾಸಾಹೇಬ್‌ಅಂಬೇಡ್ಕರ್ ಜೀ ಅವರೆ

ನಿಮಗೆ ಸಾಷ್ಟಾಂಗ ನಮಸ್ಕಾರಗಳು.

ನಿಮ್ಮ ಶ್ರಮ, ಹೋರಾಟದ ಫಲವಾಗಿ ನಾವಿಲ್ಲಿ ಕ್ಷೇಮವಾಗಿದ್ದೇವೆ!, ನೀವು ಕೂಡ ಕ್ಷೇಮವಾಗಿದ್ದಿರ ಎಂದು ನಂಬಿದ್ದೇವೆ.

ಈ ಪತ್ರ ಬರೆದ ಉದ್ಧೇಶವೇನೆಂದರೆ ದೇಶದಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳುವ ಧೈರ್ಯವಾಗಲಿ ಇಲ್ಲ. ಯಾವ ಆಶಯಗಳನ್ನು ನೀವು ಬಿತ್ತಿದ್ದರೋ ಅದನ್ನೀಗ ಮಣ್ಣು ಪಾಲು ಮಾಡುವ ಎಲ್ಲಾ ಕುತಂತ್ರಗಳು ನಡೆಯುತ್ತಿವೆ. ಗಾಂಧಿ ಎಂಬ ಏಕತಾನದ ಪ್ರಭಾವಳಿಯ ನಡುವೆಯೂ ಈ ದೇಶದ ಬಹುಜನರಿಗೆ ತಮ್ಮ ಜನ್ಮಜಾತ ಹಕ್ಕುಗಳನ್ನು ಕೊಡಿಸಿದ ಮಹಾಬೆಳಕು ನೀವು.

ನೀವಿಲ್ಲದ ಈ ದೇಶದಲ್ಲಿ ನಿಮ್ಮನ್ನು ರಾಷ್ಟನಾಯಕನನ್ನಾಗಿ ಈ ಕಾಲಕ್ಕೂ ಒಪ್ಪಿಕೊಳ್ಳುವ ಮನೋಧರ್ಮವೊಂದು ಹುಟ್ಟಲೇ ಇಲ್ಲ ಎಂಬುದನ್ನು ನೋವಿನಿಂದ ಹೇಳಬೇಕಾಗಿದೆ. ಈ ನೆಲದ ದಲಿತ-ದಮನಿತರ ದನಿಯಾಗಿ ಸಮಸ್ತ ಜನಸಮುದಾಯಗಳಿಗೂ ಸಾಮಾಜಿಕ ನ್ಯಾಯ, ರಾಜಕೀಯ ಶಕ್ತಿಯನ್ನು ತುಂಬಿದ ನಿಮ್ಮನ್ನು ಕೇವಲ ಒಂದು ಸಮುದಾಯದ ನಾಯಕನನ್ನಾಗಿ ನಿಲ್ಲಿಸುವ ಮೂಲಕ ಗೋಡೆ ಕಟ್ಟಲಾಗಿದೆ. ಆದಿಯಿಂದಲೂ ನಿಮ್ಮನ್ನು ನಿರಾಕರಿಸುತ್ತಾ ನಿಮ್ಮ ಚಿಂತನೆ, ಕ್ರಿಯೆ, ಪರಿಣಾಮಗಳನ್ನು ಜಾತೀಯ ನಂಜಿನಿಂದ ಒಪ್ಪಲಾಗದೆ ತುಚ್ಛೇಕರಿಸುವ ಅಥವಾ ನಿಮ್ಮನ್ನು ಖಳನಾಯಕನಂತೆ ಕಾಣುತ್ತಾ ಬಂದ ಜನ ಸಮುದಾಯವೊಂದು ಸತ್ಯದ ಬದುಕನ್ನು ಮರೆಮಾಚುತ್ತಲೆ ಬರುತ್ತಿದೆ.

ಇದು ನಿಮಗೆ ಹೊಸತಲ್ಲ., ನೀವು ಈ ಭವ್ಯ ದೇಶದ ಕಾನೂನು ಸಚಿವರಾಗಿದ್ದಾಗಲೆ ನಿಮ್ಮ ಪಾದಗಳು ಪಾರ್ಲಿಮೆಂಟ್‌ನ ನೆಲಹಾಸನ್ನು ಸೋಕದಂತೆ ಸುತ್ತಿಡಲಾಗುತ್ತಿತ್ತು. ಜವಾನನೊಬ್ಬ ಮರೆಯಲ್ಲಿ ನಿಂತು ಫೈಲ್‌ಗಳನ್ನು ನಿಮ್ಮ ಟೇಬಲ್ ಗೆ ದೂರದಿಂದಲೇ ಎಸೆದು ತನ್ನ ‘ಗೊಡ್ಡು ಪಾವಿತ್ರ್ಯತೆ’ ಯನ್ನು ಕಾಯ್ದುಕೊಂಡ ದೇಶವಿದು. ಅಗಲೂ ನೀವು ಮೂಕವೇದನೆ ಅನುಭವಿಸುತ್ತಾ ‘ಮೂಕನಾಯಕ’ನಾಗಿ ಕಂಡಿರಿ.

ಮನುಷ್ಯರೆನಿಸಿಕೊಂಡವರು ತನ್ನಂತೆ ಇರುವ ಮನುಷ್ಯರನ್ನು ಅತ್ಯಂತ ಹೀನಾಯವಾಗಿ ಕಂಡು, ಕೊಂದು ತಮ್ಮ ದಾಹ ತೀರಿಸಿಕೊಳ್ಳುವ ಕಾಲದಲ್ಲಿ ನೀವು ಅದನ್ನು ಅಹಿಂಸೆಯ ಧಾರಣಾಶಕ್ತಿಯಿಂದ ಎದುರುಗೊಂಡ ಸ್ವರೂಪ ಅನನ್ಯ. ಚೌಡಾರ ಕೆರೆ ಚಳವಳಿಯ ಸಂದರ್ಭ. ಮೇಲ್ಜಾತಿಗಳ ದಾಳಿಯಿಂದ ನಿಮ್ಮ ತಲೆಗೆ ಪೆಟ್ಟಾಗಿ ರಕ್ತಸೋರುವಾಗ ಆ ಕ್ಷಣ ನೀವು ತಾಳ್ಮೆಯನ್ನು ಕಳೆದುಕೊಂಡಿದ್ದಿದ್ದರೆ ಅವತ್ತಿಗೆ ಈ ದೇಶದ ಅಸ್ಪೃಶ್ಯತೆ ಸಮಸ್ಯೆ ಬಹುಶಃ ಇತ್ಯರ್ಥವಾಗುತ್ತಿತ್ತು, ಆದರೆ ನೀವು ಹಿಂಸೆಯ ಚರಿತ್ರೆಯಲ್ಲಿ ಕಾಲವಾಗಿಬಿಡುತ್ತಿದ್ದಿರಿ. ಶಾಂತಿ, ಅಹಿಂಸೆಯನ್ನೇ ಪ್ರತಿಪಾದಿಸಿ ಚಳವಳಿಯನ್ನು ಗೆದ್ದಿರಿ, ಗುರಿ ಮುಟ್ಟಿದಿರಿ. ನಿಮ್ಮೊಳಗಿನ ಶಾಂತಿಧೂತನೊಬ್ಬ ಎಚ್ಚರಗೊಂಡ ಕಾರಣ ನೀವಿಂದು ವಿಶ್ವಮಾನ್ಯರಾಗಿ ಮಿನಿಗುತ್ತಿದ್ದೀರಿ. ನೀವು ಪರಮೋಚ್ಛ ಶಾಂತಿದೂತನೇ ಸರಿ. ಇದು ನೆಲಮೂಲದ ಪರಂಪರೆಯ ಬಳುವಳಿಯೇ ಎಂದು ನಂಬಿದ್ದೇನೆ. ನೀವು ಹುಟ್ಟಿದ ಈ ದೇಶದಲ್ಲಿ ನಾನೂ ಹುಟ್ಟಿದ್ದೇನೆ ಎಂಬುದೇ ಒಂದು ಸಾರ್ಥಕ ನೆಮ್ಮದಿ.

ಭೀಮ್ ಜೀ.. ನಿಮಗೆ ಗೊತ್ತಾ..?

ಇಂದು ನೀವಿಲ್ಲದ ದೇಶದಲ್ಲಿ ಸುಳ್ಳುಗಳೇ ದೇಶವನ್ನು ಆಳುತ್ತಿವೆ. ಸತ್ಯ, ಅಹಿಂಸೆ, ಮಾನವೀಯತೆಯ ನೆಲದಲ್ಲಿ ಸುಳ್ಳು, ಹಿಂಸೆ, ಅಮಾನವೀಯತೆ ತನ್ನ ಕಬಂಧಬಾಹುಗಳನ್ನು ಚಾಚಿ ಆರ್ಭಟಿಸುತ್ತಿದೆ. ಪರಂಪರಾಗತವಾಗಿ ಬಹುಜನರನ್ನು ವಿರೋಧಿಸುತ್ತಾ, ಶೋಷಿಸುತ್ತಾ ಬಂದ ಶಕ್ತಿ. ವ್ಯಕ್ತಿಗಳು ಕೊನೆಗೂ ಈ ದೇಶದ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿವೆ. ಮಂದಿರ, ಹಿಂದೂ ಧರ್ಮ ಎಂಬ ಜಡ ಸಿದ್ದಾಂತವನ್ನೆ ಮುಂದಿಟ್ಟುಕೊಂಡು ಜನರನ್ನು ಭಾವನಾತ್ಮಕವಾಗಿ ದಿಕ್ಕುತಪ್ಪಿಸಿದ ಪಕ್ಷವೊಂದು ಈ ದೇಶದ ಅಮಾಯಕ ಜನರ ರಕ್ತ, ಹೆಣಗಳ ಮೇಲೆ ಅಧಿಕಾರದ ಸೌಧವನ್ನು ಕಟ್ಟಿದರು.

ಸ್ವತಂತ್ರ ಭಾರತದಲ್ಲಿ ಅಧಿಕಾರಕ್ಕಾಗಿ ವೈದ್ದಿಕ ಧರ್ಮ ಪ್ರೇರಿತ ರಾಜಕೀಯ ಪಕ್ಷವೊಂದು ಜನರ ನಡುವೆಯೇ ಕಿಚ್ಚು ಹಾಯಿಸಿ ಅಧಿಕಾರವನ್ನು ದಕ್ಕಿಸಿಕೊಳ್ಳುತ್ತಿರುವುದು ಮತ್ತು ಈಗಾಗಲೆ ದಕ್ಕಿಸಿಕೊಂಡಿರುವುದು ದೇಶದ ಸಮಗ್ರತೆಯನ್ನು ನುಚ್ಚುನೂರು ಮಾಡ ಹೊರಟಿರುವುದು ಸಂವಿಧಾನದ ಅಸ್ತಿತ್ವವನ್ನೆ ಪ್ರಶ್ನಿಸುವ ಮಟ್ಟಿಗೆ ಬಂದಿದೆ.

ಸರ್ವರ ಕಲ್ಯಾಣವೇ ಪರಮೋಚ್ಛಗುರಿ ಎಂಬ ಮೂಲಮಂತ್ರದ ನೀವು ಬರೆದ ಸಂವಿಧಾನವನ್ನು ಬದಲಾಯಿಸಿ ಮನುಪ್ರೇರಿತ ಸಂವಿಧಾನವೊಂದನ್ನು ಪುನರ್ ಸ್ಥಾಪಿಸುವ ಹುನ್ನಾರವೊಂದು ನಡೆಯುತ್ತಿದೆ. ದೇಶ ನಾಗರೀಕ ಕಾಲಘಟ್ಟದ ಮುನ್ನಡೆಯಿಂದ ಅನಾಗೀಕರ ಕಾಲದ ಮೂಲ ಸ್ಥಾನಕ್ಕೆ ತಳ್ಳುವುದು, ಊಟ. ಬಟ್ಟೆ, ಸಂಸ್ಕೃತಿ, ಅಚಾರ-ವಿಚಾರ ಎಲ್ಲವೂ ಧರ್ಮಲೇಪಿತವಾಗಿ ವಿಂಗಡಿಸುವುದು, ಅಷ್ಟೇ ಅಲ್ಲ, ಜನರನ್ನು ಧರ್ಮ, ಜಾತಿಯ ಕಾರಣಕ್ಕಾಗಿ ಹಾಡುಹಗಲೆ ನಟ್ಟನಡು ಬೀದಿಯಲ್ಲಿ ಬಡಿದು ಕೊಲ್ಲಲಾಗುತ್ತಿದೆ. ‘ನೀವೊಬ್ಬ ದೇಶದ್ರೋಹಿ ಯಾಕಾಗಬಾರದು’ ಎಂದೂ ಕೂಡ ಕೇಳುವ ಅವಿವೇಕಿಗಳು ಇಂದು ನಿಮ್ಮ ಪ್ರಭೆ ಮರೆಮಾಚಲಾಗದೆ ಕೊನೆಗೆ ನಿಮ್ಮನ್ನೆ ಹೊತ್ತು ಮೆರವಣಿಗೆ ಹೊರಡುವುದು ಅನಿವಾರ‍್ಯವಾಗಿದೆ. ಗಾಂಧಿಯನ್ನು ಕೊಂದವರೆ ಇಂದು ಗಾಂಧಿಯ ಪೋಟೋ ಹೊತ್ತು ಮೆರಯುವುದು ಇದೆಲ್ಲವೂ ಅಂತಿಮವಾಗಿ ಅಧಿಕಾರದ ಅಟ.

ಪುಲ್ವಾಮಾದಲ್ಲಿ ನಮ್ಮ ದೇಶದ ಸೈನಿಕರು ಉಗ್ರರ ದಾಳಿಗೆ ತುತ್ತಾದರು. ಅವರ ತ್ಯಾಗ ನಮ್ಮ ಅಧಿಕಾರ ರಾಜಕಾರಣಕ್ಕೆ ಕೊಟ್ಟ ಬಲಿಯೇ ಆಗಿದೆ. ಈ ಬಲಿಗೆ ಕಾರಣವಾದ ಲೋಪಕ್ಕೆ ಯಾರೊಬ್ಬರು ಹೊಣೆ ಹೊರಲಿಲ್ಲ. ಆದರೆ ಅದಕ್ಕೆ ಪ್ರತಿ ಎಂಬಂತೆ ನಡೆದ ನಮ್ಮ ಸೈನಿಕರ ಶೌರ‍್ಯಕ್ಕೆ ವಾರಸುದಾರರು ಹುಟ್ಟಿ ಎದೆ ಎದೆ ತಟ್ಟಿಕೊಳ್ಳುತ್ತಿದ್ದಾರೆ.

ಈ ದೇಶದ ಪ್ರಧಾನಿ ಮತ್ತವರ ಭಕ್ತ ಬಳಗಕ್ಕೆ ಇಲ್ಲಿ ಸೈನಿಕರ ಶೌರ್ಯ, ವಿಜ್ಞಾನಿಗಳ ಸಾಧನೆ, ರಾತ್ರೋರಾತ್ರಿ ನೋಟು ಅಪಮೌಲೀಕರಣಗೊಳಿಸಿ ತನ್ನ ವೃದ್ದತಾಯಿಯನ್ನು ಎಟಿಎಂ ಮುಂದೆ ಕ್ಯೂ ಮುಂದೆ ನಿಲ್ಲಿಸುವುದು ಎಲ್ಲವೂ ಅಧಿಕಾರ ಹೆಗ್ಗಳಿಕೆಯ ಮಾರ್ಕೆಟಿಂಗ್ ಸರಕೇ ಆಗುವುದು. ಮನೆಯ ಫ್ರಿಡ್ಜ್ನಲ್ಲಿ ಒಂದೊತ್ತಿನ ಊಟಕ್ಕಾಗಿ ಕೂಡಿಟ್ಟ ಮಾಂಸದ ಕಾರಣಕ್ಕಾಗಿ, ಸತ್ತ ದನಗಳನ್ನು ಹೊತ್ತದ್ದಕ್ಕೆ, ದಲಿತನೋರ‍್ವ ಕುದುರೆ ಏರಿ ಓಡಾಡಿದ್ದಕ್ಕೆ, ಭಿನ್ನ ಧರ್ಮದ ಹುಡುಗ-ಹುಡುಗಿ ಪ್ರೇಮಿಸಿದ ಕಾರಣಕ್ಕೆ ಅಮಾನುಷವಾಗಿ ಬಡಿಯುವ, ಕೊಲ್ಲುವ ಕೆಲಸ ಪ್ರಭುತ್ವದ ಮೂಗಿನಡಿಯಲ್ಲೆ ನಡೆದು ಹೋಗುತ್ತಿದೆ. ಅಲ್ಲಿ ಭಾರತ್ ಮಾತಾ ಕೀ ಜೈ ಘೋಷಣೆ ಮೊಳಗುತ್ತದೆ.

ಎಂಟು ವರ್ಷ ಹಾಲುಗಲ್ಲದ ಆಸೀಫಾಳನ್ನು ಧರ್ಮದ ಕಾರಣಕ್ಕಾಗಿ ಅತ್ಯಾಚಾರ ಮಾಡಿ ಕೊಲ್ಲುವುದು ಮನುಷ್ಯ ಲೋಕವೆಂಬುದರ ಕ್ರೌರ್ಯವನ್ನು ಸಾಬೀತುಪಡಿಸುತ್ತದೆ. ರಾಷ್ಟ್ರೀಯತೆ ಎಂಬುದು ಅಖಂಡ ಭಾರತದ ಬಹುತ್ವವನ್ನು ಒಳಗೊಳ್ಳದೆ. ಪ್ರತ್ಯೇಕಿಸಿ ಒಂದು ನಿರ್ಧಿಷ್ಟ ಧರ್ಮ, ಜಾತಿಗೆ ಸೀಮಿತಗೊಳಿಸುವ, ವ್ಯಾಖ್ಯಾನಗೊಳಿಸುವ, ಸಾಮಾಜಿಕ ಮೌಲ್ಯಗಳನ್ನು ಅಪಮೌಲ್ಯಗೊಳಿಸುವ, ಸಾಂಸ್ಕೃತಿಕ ರಾಜಕಾರಣವನ್ನು ದ್ವೇಷ-ರಕ್ತಪಾತದ ರಾಜಕಾರಣವನ್ನಾಗಿಸುವ ಈ ಹೊತ್ತಿಗೆ ನೀವಿದ್ದಿದ್ದರೆ ಅದೆಷ್ಟು ಕಣ್ಣೀರು ಸುರಿಸುತ್ತಿದ್ದಿರೋ..ಏನೋ..?!

ಈ ದೇಶದಲ್ಲಿ ಎಲ್ಲವೂ ಪ್ರಶ್ನಾರ್ಹ, ಪ್ರಶ್ನಿಸದೆ ಯಾವುದನ್ನು ಒಪ್ಪಿಕೊಳ್ಳಬೇಡಿ. ಪ್ರಶ್ನೆ-ಉತ್ತರ, ಚರ್ಚೆ-ಸಂವಾದ ಗಳೇ ಪ್ರಜಾಪ್ರಭುತ್ವದ ಜೀವಂತಿಕೆ ಗುಣಲಕ್ಷಣ ಎಂದು ನೀವು ಹೇಳಿದ್ದಿರಿ, ಅದನ್ನೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಸಾರಿದ್ದಿರಿ ನಿಜ, ಆದರೆ ಇಂದು ಪ್ರಶ್ನಿಸುವುದೇ ಅಪರಾಧವಾಗಿ ಹೋಗಿದೆ. ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಈ ದೇಶದ ಪ್ರಧಾನಿ ಚಿನ್ನದ ನೂಲಿನಲ್ಲಿ ಮೇಲಂಗಿ ಹೊಲಿಸಿಕೊಂಡು ಪರದೇಶ ಸುತ್ತುತ್ತಾರೆ. ಪ್ರಶ್ನಿಸುವವರನ್ನು ದೇಶದ್ರೋಹಿ ಎಂದು ಘೋಷಿಸಲಾಗುತ್ತಿದೆ. ಸುಳ್ಳುಗಳನ್ನು ಸತ್ಯವೆಂದೇ ನಂಬಿಸಲು ದೇಶದ ತುಂಬಾ ಗೊಬೆಲ್ ಸಂತತಿಗಳು ಹುಯ್ಯಿಲಿಕ್ಕುತ್ತಿವೆ. ಸತ್ಯ ಮತ್ತು ಸುಳ್ಳಿನ ನಡುವಿನ ಅಂತರವೇ ಈ ದೇಶದ ಜನರಿಗೆ ಗೋಚರಿಸದಷ್ಟರ ಮಟ್ಟಿಗೆ ಸುಳ್ಳುಗಳನ್ನು ಬಿತ್ತಲಾಗುತ್ತಿದೆ.

ಈ ದೇಶಕ್ಕೆ ವ್ಯಕ್ತಿ ನಾಯಕನಲ್ಲ. ಪ್ರಜಾಪ್ರಭುತ್ವವೇ ನಾಯಕ, ಆದರೆ ದೇಶದಲ್ಲಿ ವ್ಯಕ್ತಿ ಕೇಂದ್ರಿ ನಾಯಕತ್ವವನ್ನು ಪ್ರತಿಷ್ಠಾಪಿಸಲು ಹವಣಿಸಲಾಗುತ್ತಿದೆ. ಇದರ ಹಿಂದೆ ಪ್ರಜಾಪ್ರಭುತ್ವವನ್ನು ‘ವ್ಯಕ್ತಿ ಪ್ರಭುತ್ವ’ ವನ್ನಾಗಿಸುವ ಉದ್ಧೇಶ ಅಡಗಿದೆ. ದೇಶಪ್ರೇಮ ಮತ್ತು ಹಿಂದೂತ್ವ ರಾಜಕೀಯ ಪಕ್ಷದ ಸದಸ್ಯತ್ವದ ಮಾನದಂಡದ ಆಧಾರದ ಮೇಲೆ ನಿಷ್ಕರ್ಷ್ಯೆ ಮಾಡುವ ಹಕ್ಕನ್ನು ಹೇರಲಾಗುತ್ತಿದೆ.

ಇನ್ನೊಂದು ಮುಖ್ಯವಾದ ವಿಷಯ ಭೀಮ್ ಜೀ..!

ದಲಿತ ಸಮುದಾಯ ನಿಮ್ಮನ್ನು ಅತ್ಯಂತ ಭಾವುಕತೆಯಿಂದ ಆರಾಧಿಸುತ್ತಿದೆ. ಈ ಜನ ಮನುಷ್ಯ ಮನುಷ್ಯನನ್ನು ಮೃಗದಂತೆ ನೋಡುವ ಶೋಷಣೆಗೆ ಮೂಲವಾದ ದೇವರ ಪರಿಕಲ್ಪನೆಯನ್ನೆ ವಿರೋಧಿಸಿದ ನಿಮ್ಮನ್ನೆ ದೇವರನ್ನಾಗಿಸಿ ಪೂಜಿಸತೊಡಗಿದ್ದಾರೆ. ಇದೊಂದು ದೊಡ್ಡ ವೈರುಧ್ಯ. ನೀವು ಸಮತೆ, ಸ್ವಾತಂತ್ರ್ಯ, ಭ್ರಾತೃತ್ವ ಎಂಬ ಬಲಿಷ್ಠ ಅಡಿಗಲ್ಲನ್ನು ತಂದದ್ದು ಸಾಮ್ರಾಜ್ಯಶಾಹಿ ರಾಷ್ಟ್ರಗಳ ಪ್ರಭಾವಿತ ಆಳದ ಸಮುದ್ರದಿಂದಲ್ಲ. ಬುದ್ದ, ಬಸವ ಎಂಬ ನೆಲಮೂಲದ ಮಹಾಮಾರ್ಗಗಳಲ್ಲಿ ಹೆಕ್ಕಿ ತಂದ ಅಡಿಗಲ್ಲುಗಳೇ ಆಗಿದ್ದವು. ಅದು ಈ ನೆಲದಲ್ಲಿ ತುಳಿಯಲ್ಪಟ್ಟ ಹುಟ್ಟು ಜನಪದ ಪರಂಪರೆಯ ಜೀವಧಾತುವೆ ಆಗಿದ್ದವು.

ಇವುಗಳ ಎದೆಗವುಚಿಕೊಂಡು ಶ್ರಮ, ಹೋರಾಟ, ಪ್ರಖರ ವಿದ್ವತ್ತಿನಿಂದ ರೂಪಿಸಿಕೊಟ್ಟ, ಜೀವ ಜಗತ್ತು ಎಂದೆಂದಿಗೂ ಮಾದರಿಯಾಗಿ ಸ್ವೀಕರಿಸಲ್ಪಡುತ್ತಿರುವ ‘ಸಂವಿಧಾನ’ವಿಂದು ಅಪಾಯದ ಅಂಚಿಗೆ ದೂಡಲ್ಪಡುತ್ತಿದೆ. ಇದೊಂದು ಆತಂಕದ ಸಂಗತಿ. ಸಾಮಾಜಿಕ ನ್ಯಾಯ, ಸಮಾನತೆ, ಸ್ವಾತಂತ್ರ್ಯವೇ, ಭ್ರಾತೃತ್ವವೇ ಪ್ರಜಾಸತ್ತೆಯ ಪ್ರಧಾನ ಪ್ರಮೇಯವಾಗಿರುವಾಗ ಅದಿಂದು ಏಕವ್ಯಕ್ತಿ ಕೇಂದ್ರಿತ ಮತ್ತು ನಿಯಂತ್ರಕ ಶಕ್ತಿಯೊಂದನ್ನು ಹೊಂದಿರುವ ಯಥಾಸ್ಥಿತವಾದಿ ಶಕ್ತಿ ಕೇಂದ್ರಿತ ದ ಕಪಿಮುಷ್ಟಿಯಲ್ಲಿ ಸಿಲುಕಿ ನಾಶಗೊಳ್ಳುವ ಅಪಾಯದ ಸಂಕೇತವೊಂದು ಗೋಚರಿಸುತ್ತಿದೆ.

ಯಾರಿಗಾಗಿ ಜೀವನಪರ್ಯಂತ ತಮ್ಮ ಸರ್ವಸ್ವವನ್ನೂ ಗಂಧದಂತೆ ತೇಯ್ದಿದ್ದಿರೋ ಅಂತಹವರ ಬಗ್ಗೆ ಈ ಮಾತು; ಸಂವಿಧಾನ ಮತ್ತು ಅದು ಕೊಟ್ಟ ಮೀಸಲಾತಿಯಿಂದಾಗಿ ಸದೃಢರಾದ ಈ ಜನಸಮುದಾಯ ನಿಮ್ಮನ್ನು ಅರ್ಥಮಾಡಿಕೊಳ್ಳುವ , ನಿಮ್ಮನ್ನು ಅನುಸರಿಸುವ ದಾರಿಯಲ್ಲೇ ಎಡವುತ್ತಿದೆ. ದೇವರು ಎಂಬ ಸ್ಥಾವರ ಭಾವದ ಸಿದ್ದಮಾದರಿಗಳಿಗೆ ಜೊತು ಬಿದ್ದು, ದಂತಕತೆಗಳ ಭ್ರಮೆಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ನಿಮ್ಮನ್ನು ಕಲ್ಲಿನ ಮೂರ್ತಿಯಾಗಿಸಿ ಕಾಣುವ ಈ ಜನ ನಿಮ್ಮೊಳಗಿನ ಜ್ಞಾನ,ವಿಜ್ಞಾನ, ಹೋರಾಟ, ಅಪಾರ ಮಾನವೀಯತೆ, ಚಲನಶೀಲತೆಯ ಬೆಳಕಿಗೆ ಮುಖವೊಡ್ಡುತ್ತಿಲ್ಲ. ನಿಮ್ಮನ್ನು ಇಂತಹ ಐತಿಹ್ಯ, ಸಿದ್ದಮಾದರಿಗಳಿಂದ ಬಿಡಿಸದೆ ಬದುಕಿಲ್ಲ.

ನೀವು ಹಾಕಿಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟದ ದಿಕ್ಸೂಚಿಯಲ್ಲಾ ದಿಕ್ಕಾಪಾಲಾಗಿ ಹೋಗಿದೆ. ನಿಮ್ಮ ಹೆಸರಲ್ಲಿ ನಾಯಕರಾಗಿ ಬೆಳೆದವರು ಅಂತಿಮವಾಗಿ ಯಾವ ಧರ್ಮ , ಜಾತಿ, ಸಂಪ್ರದಾಯ ಪೀಡಿತ ಶಕ್ತಿಗಳ ವಿರುದ್ದ ನೀವು ಹೋರಾಡಿದ್ದಿರೋ ಅದೇ ಶಕ್ತಿಗಳ ಬಗಲಿಗೆ ಜಾರಿ ಹೊಸ ಸ್ವರೂಪದ ಜೀತಕ್ಕೆ ಬಿದ್ದಿದ್ದಾರೆ. ಸ್ವಾರ್ಥ, ಅಧಿಕಾರದ ದುರಾಸೆಯ ಬಚ್ಚಲಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ರೂಪಾಂತರ ಕೂಂಡು ತಮ್ಮತನವನ್ನು ಕಳೆದುಕೊಂಡ ನವ ಬ್ರಾಹಣ್ಯವನ್ನು ಹೊದ್ದು ಹೊರಟಿದ್ದಾರೆ. ಅಲ್ಲಿ ನಿಮ್ಮ ನೆನಪು ಮಸುಕುಗೊಂಡಿದೆ.

ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ. ಹಿಂದೂ ಆಗಿ ಸಾಯಲಾರೆ ಎಂದು ಬೌದ್ಧ ಧರ್ಮಕ್ಕೆ ಹೋದ ನೀವು ಹಿಂದೂ ಧರ್ಮದೊಳಗಿನ ಕರಾಳತೆಗೆ ಕನ್ನಡಿ ಹಿಡಿದಿರಿ. ಹಿಂದೂ ಧರ್ಮದ ಸುಧಾರಣೆಗೆ ತಾವು ಪಟ್ಟ ಪಾಡು ಕೊನೆಗೂ ಫಲಿಸದಂತೆ ತಡೆಯಲಾಯಿತು. ಇಂತಹ ಹಿಂದೂ ಧರ್ಮ ಇಂದಿಗೂ ಜನರನ್ನು ಕೂಡಿ ಕಟ್ಟುವ ಬದಲು ಒಡೆದು ಹೋಳು ಮಾಡುತ್ತಿದೆ. ಅದು ಇನ್ನಷ್ಟು ಕ್ರೌರ್ಯದೊಂದಿಗೆ ಮುನ್ನಡೆಯುತ್ತಿದೆ. ಈ ಹಿಂದೂ ಧರ್ಮದ ಹೆಸರಿನಲ್ಲಿ ನಡೆಯುವ ಸಂಘರ್ಷಗಳಿಗೆ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳೆ ಕಾಲಾಳುಗಳಾಗಿ ದುಡಿಯುತ್ತಿರುವುದು, ಜೀವ ತ್ಯಾಗ ಮಾಡುತ್ತಿರುವುದು, ಜೈಲು ಪಾಲಾಗುತ್ತಿರುವುದು ದೊಡ್ಡ ದೌರ್ಭಾಗ್ಯ. ಅವರೆಲ್ಲಾ ಇಂದು ನಿಮ್ಮ ಬೆಳಕಿಗೆ ಮುಖವೊಡ್ಡಿ ಸಾಗದೆ ಸಂವಿಧಾನದ ಅಂತ್ಯಕ್ಕೆ ಕಾದು ಕುಳಿತಿರುವ ಚೌಕಿದಾರನೆಂಬ ಮಹಾ ಮೋಸಗಾರನ ನ ಭಜನೆಯಲ್ಲಿ ಮುಳುಗಿದ್ದಾರೆ. “ಸಂವಿಧಾನ ಎಷ್ಟೇ ಉತ್ತಮವಾಗಿರಲಿ, ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಅದೂ ಕೂಡ ಕೆಟ್ಟದಾಗಿ ಬಿಡುತ್ತದೆ” ನಿಮ್ಮ ಈ ಊಹೆ ನಿಜವಾಗುವ ಕಾಲವೇ ಬಂದೊರಗಿದ ಕಾರ್ಮೋಡಗಳು ಆವರಿಸುತ್ತಿರುವಂತೆ ಗುಡುಗು ,ಮಿಂಚು ಸುಳಿದಾಡುತ್ತಿವೆ.

ಇದೀಗ ದೇಶದಲ್ಲಿ ನಡೆಯುತ್ತಿರುವ ಚುನಾವಣೆ ಸುಳ್ಳು-ಸತ್ಯ, ನಕಲಿ-ಅಸಲಿ ದೇಶಪ್ರೇಮ, ಏಕಸಂಸ್ಕೃತಿ-ಬಹುಸಂಸ್ಕೃತಿ , ಕೋಮುವಾದ- ಜಾತ್ಯಾತೀತವಾದ, ಅಂತಿಮವಾಗಿ ಭೀಮ ಸಂವಿಧಾನ- ಮನು ಸಂವಿಧಾನದ ನಡುವೆ ನಡೆಯುತ್ತಿದೆ. ಅಂತಿಮ ವಿಜಯ ಸತ್ಯ ಮತ್ತು ಪ್ರಜಾಪ್ರಭುತ್ವದ್ದೇ ಆಗಿರುತ್ತದೆ ಎಂಬ ವಿಶ್ವಾಸವಿದೆ.

ಬಾಬಾಸಾಹೇಬ್ ಅಂಬೇಡ್ಕರ್ ಜೀ…

ಕ್ಷಮಿಸಿ, ಇಷ್ಟೆಲ್ಲಾ ಹೇಳಿ ನಿಮಗೆ ದುಃಖ ತಂದಿದ್ದೇನೆ ಎನಿಸುತ್ತಿದೆ. ನೀವು ಹುಟ್ಟಿ ಇದೇ ಏಪ್ರಿಲ್ ೧೪ಕ್ಕೆ ೧೨೮ ವರ್ಷಗಳು ತುಂಬಲಿವೆ. ಈ ಸಂದರ್ಭದಲ್ಲಿ ನಿಮಗೆ ಜನ್ಮ ದಿನದ ಶುಭಾಶಯಗಳು.

ಇನ್ನಷ್ಟು ವಿಚಾರಗಳು ಬರೆಯುವುದಿತ್ತು. ಆದರೆ ಕಾಗದದಲ್ಲಿ ಸ್ಥಳವಿಲ್ಲದ ಕಾರಣ ಮುಂದಿನ ಪತ್ರದಲ್ಲಿ ಬರೆಯುತ್ತೇನೆ.
ಉಳಿದಂತೆ ಇಲ್ಲಿ ಎಲ್ಲರೂ ಕ್ಷೇಮವಾಗಿದ್ದಾರೆ. ನೀವು ಕ್ಷೇಮವಾಗಿರುತ್ತೀರ ಎಂಬ ನಂಬಿ ಇಲ್ಲಿಗೆ ನಿಲ್ಲಿಸುತ್ತೇನೆ.
ಯಾವುದಕ್ಕೂ ನಿಮ್ಮ ಪತ್ರವನ್ನು ಎದುರು ನೋಡುತ್ತಿರುತ್ತೇನೆ. ಪತ್ರ ತಲುಪಿದ ತಕ್ಷಣ ಪತ್ರ ಬರೆಯಿರಿ,

ಇಂತಿ ನಿಮ್ಮ ವಿಧೇಯ
-ಎನ್.ರವಿಕುಮಾರ್

2 comments

  1. ರವಿ ಕುಮಾರ ಅವರ ಲೇಖನ ಅದ್ಭುತ.!

Leave a Reply