ನಾ ಬರೆಯಲಾಗದ ಕವಿತೆ ‘ಅಮ್ಮ’ನಿಗೆ

ಇದೊಂದು ಸೋಜಿಗ. ಬಹುರೂಪಿ ತರುತ್ತಿರುವ ಒಂದು ಕವಿತಾ ಸಂಕಲನವೇ ನೆಪವಾಗಿ ಅಮ್ಮ-ಮಗ ಕವಿತೆ ಎಂದರೇನು ಎನ್ನುವ ಶೋಧಕ್ಕೆ ಹೊರಟಿದ್ದಾರೆ.

ಬಹುರೂಪಿ ಸದ್ಯದಲ್ಲೇ ಆಕರ್ಷ ಕಮಲ ಅವರ ಕವಿತಾ ಸಂಕಲನವನ್ನು ಹೊರತರುತ್ತಿದೆ. ಇದನ್ನು ಘೋಷಿಸಿದ ಸಂದರ್ಭದಲ್ಲಿ ಆಕರ್ಷ ಕಮಲ ಅವರ ತಾಯಿ, ಖ್ಯಾತ ಕವಯತ್ರಿ ಎಂ ಆರ್ ಕಮಲ ತಮ್ಮ ಮಗನಿಗೆ ಕವಿತೆಯ ಬಗ್ಗೆ ಪಿಸುನುಡಿಗಳನ್ನು ಆಡಿದರು. ಅದು ಇಲ್ಲಿದೆ.

ಇದಕ್ಕೆ ಉತ್ತರವಾಗಿ ಆಕರ್ಷ ಬರೆದ ನುಡಿ ಇಲ್ಲಿದೆ-

ನೀವೂ ಇದಕ್ಕೆ ಸೇರಿಸುವ ಪಿಸು ಮಾತುಗಳಿದ್ದರೆ avadhimag@gmail.com ಗೆ ಕಳಿಸಿ

ಪ್ರೀತಿಯ ಅಮ್ಮ,

ಸ್ಕೂಲ್ ಮುಗಿದ ತಕ್ಷಣ ಓಡೋಡಿ ಬಂದು ಬೆಚ್ಚಗೆ ನಿನ್ನ ಪಕ್ಕದಲ್ಲಿ ಮಲಗಿ ದಿನಕ್ಕೊಂದು ಕಥೆ ಹೇಳು ಅಂತ ಪೀಡಿಸುತ್ತಿದ್ದ ಹುಡುಗ ನಾನು.

ಅಮೇರಿಕಾ ದೇಶದಲ್ಲಿ ನನಗೆ ಕಾಡಿದ ಒಂಟಿತನ, ಆದ ಹತಾಶೆ , ನೋವು, ಅವಮಾನ ಅಥವಾ ಆ ವಯಸ್ಸಿನಲ್ಲಿ ಎಲ್ಲವನ್ನು ಗೆಲ್ಲುತ್ತೇನೆ ಎಂದು ಹೊರಟು, ನನಗಾದ ಅನುಭವಗಳನ್ನು ಹೇಳಿಕೊಳ್ಳುವುದಕ್ಕೆ ಬರವಣಿಗೆ ಮಾಧ್ಯಮವಾಯಿತು. ಕುದಿಯುತ್ತಿದ್ದ ಕೋಪ, ಮನಸ್ಸಿನಲ್ಲಿ ಆಗುತ್ತಿದ್ದ ತುಮುಲಗಳನ್ನು ಹೊರಹಾಕಲು ನೆಮ್ಮದಿಯ ತಾಣವೊಂದು ಬೇಕಿತ್ತು.

ನನ್ನ ಪೀಳಿಗೆಯವರ ಅಥವಾ ನನ್ನಂಥವರ ದೊಡ್ಡ ಸಮಸ್ಯೆಯೆಂದರೆ ಭವಿಷ್ಯದ ದಿನಗಳನ್ನು ನೆನೆಯುತ್ತ ಈಗಿನ ಬದುಕನ್ನು ಸಂಪೂರ್ಣವಾಗಿ ನಿರಾಕರಿಸುವುದು. ಚಿಕ್ಕ ಚಿಕ್ಕ ವಿಷಯಗಳನ್ನು ಹೆಕ್ಕಿ ಸಂತಸಪಡುವ ಮನಸ್ಥಿತಿಯನ್ನು ಕಳೆದುಕೊಂಡಿದ್ದೇನೆ ಎನ್ನುವ ಭಾವ ನನ್ನನ್ನು ಕಾಡುತ್ತಿದೆ. ಲೌಕಿಕ ಅನುಭವಗಳಿಗೆ ಮೊರೆಹೋಗಿ ನನ್ನ ದನಿಯನ್ನೇ ಕಳೆದುಕೊಳುತ್ತಿದ್ದೇನೆ ಎನ್ನುವ ಭಯವೂ ಕೂಡ. ಹೀಗೆ ಅನ್ನಿಸಿದಾಗೆಲ್ಲ ಕವಿತೆ ನನಗೆ ನೆಮ್ಮದಿ ದಕ್ಕಿಸಿಕೊಟ್ಟಿದೆ.

ಹೊಸತನ್ನು ಸೃಷ್ಟಿಸುವ ಕ್ರಿಯೆಯ ಖುಷಿ ಮತ್ತೊಂದರಲಿಲ್ಲ ಎಂದು ನನಗರಿವಾಗಿದೆ. ನೀನೇ ಹೇಳಿದ ಹಾಗೆ ಸುಡುಬೆಂಕಿಯಂತಹ ದಾರಿಗೆ ಕಾಲಿಡುತ್ತಿದ್ದೇನೆ. ಹೊಸ ಕಾರ್, ಅಪಾರ್ಟ್ಮೆಂಟ್, onsite ಸಿದ್ಧಾಂತಗಳ ಆಫೀಸ್ ಡಿಸ್ಕಶನ್ಸ್ ಮಧ್ಯೆ ನನ್ನದೇ ಲೋಕವನ್ನು ಕಟ್ಟಿಕೊಳ್ಳುತ್ತಿರುವುದರ ಬಗ್ಗೆ ನನಗೆ ಹೆಮ್ಮೆಯಿದೆ.

ಅವರದ್ದೇನು ತಪ್ಪಿಲ್ಲ. ಕವಿತೆಗಿಂತಲೂ ಬದುಕು ದೊಡ್ಡದು. ನಗರದ ಧಾವಂತದ ಬದುಕಲ್ಲಿ ನನ್ನದೇ ದನಿ ಕೇಳಿಸಿಕೊಳ್ಳುವುದು ಸುಲಭದ ಮಾತಲ್ಲ. ಎಲ್ಲ ಗೊಂದಲಗಳ ಮಧ್ಯೆ ಸಿಕ್ಕಿಕೊಂಡು ಒದ್ದಾಡಿ ಹಾಳೆಯ ಮುಂದೆ ಕೂತ ತಕ್ಷಣವೇ ಕವಿತೆ ಹುಟ್ಟುವುದಿಲ್ಲ. ಹಿಂದೆ ನಿರಾಕರಿಸಿದ ಬದುಕನ್ನು, ಚಿಕ್ಕ ಸಂಗತಿಗಳನ್ನು, ನಗರದ ಬೀದಿಗಳನ್ನು, ನಿಯಾನ್ ದೀಪದ ನೆರಳುಗಳನ್ನು, ಫುಟ್ಪಾತಿನ ಕಥೆಯೊಂದನ್ನು ಮತ್ತೆ ಹುಡುಕುವುದರ ಪ್ರಯತ್ನವನ್ನು ಮಾಡುತ್ತಿದ್ದೇನೆ.

ನೀನು ಹೇಳುತ್ತಿದ್ದ ನೀತಿ ಕಥೆಗಳು, ಕೇಳಿಸುತ್ತಿದ್ದ ಹಳೆಯ ಹಾಡುಗಳು, ಕಲಿಸಿಕೊಟ್ಟ ಬದುಕಿನ ಮೌಲ್ಯಗಳು, ಭಾಷಾಭಿಮಾನ, ಜೀವನ ಪ್ರೀತಿ ಇವೆಲ್ಲವನ್ನು ತುಂಬಿಕೊಂಡ ಜೋಳಿಗೆ ನನ್ನ ಬಳಿಯೇ ಇದೆ. ಹೆಗಲ ಮೇಲೆ ಹಾಕಿಕೊಂಡು ಕವಿತೆಗಳನ್ನು ಹುಡುಕಿಕೊಂಡು ಹೊರಟಿದ್ದೇನೆ. ದಾರಿಯ ತುಂಬೆಲ್ಲ ಬರಿ ಕವಿತೆಗಳಿರುವುದಿಲ್ಲ. ಕವಿತೆಯನ್ನು ಬರೆಯಲು ಹೊರಟಾಗಲೆಲ್ಲ ಬದುಕು ಅರ್ಥವಾಗುತ್ತಿದೆ.

ನನ್ನಿಷ್ಟದ ಫ್ರೆಂಚ್ ಸಿನಿಮಾ l ‘auberge espagnole ನಾಯಕ ಬೇರೆ ದೇಶಕ್ಕೆ ಹೊರಟು ಕಳೆದುಹೋಗಿ , ದನಿಯನ್ನು ಹುಡುಕಿಕೊಂಡು ತನ್ನ ದೇಶಕ್ಕೆ ಮರಳಿ, ಮರದ ಕಪಾಟಿನಲ್ಲಿದ್ದ ಬಾಲ್ಯದ ಫೋಟೋವೊಂದನ್ನು ಹುಡುಕುತ್ತಾನೆ. ಮುಂದೆ ನೀನೇನಾಗಬಯಸುವೆ ಎನ್ನುವ ಪ್ರಶ್ನೆಗೆ ಆ ಪುಟ್ಟ ಹುಡುಗ ಕೊಡುತ್ತಿದ್ದ ಉತ್ತರ ‘ ನಾನು ಬರಹಗಾರನಾಗಬೇಕು’ . ಆ ಪುಟ್ಟ ಹುಡುಗನ ಮಾತೇ ನಾನೂ ಹೇಳುತ್ತಿದ್ದೆ ಎನ್ನುವುದು ನಿನಗೆ ಚೆನ್ನಾಗಿ ನೆನಪಿದೆ ಎಂದು ಭಾವಿಸುತ್ತೇನೆ.

ಆ ಪುಟ್ಟ ಹುಡುಗನನ್ನ ಹುಡುಕಿಕೊಂಡು ಹೊರಟಿರುವ ಹಾದಿಯಲ್ಲಿ ನನಗೆಲ್ಲವೂ ಅಚ್ಚರಿಯ ವಿಷಯವೇ.

ಈ ನನ್ನ ಮೊದಲ ಕವಿತೆ ಸಂಕಲನವೂ ಕೂಡ . ಕವಿತೆಗಳನ್ನು ಬರೆದಂತೆಲ್ಲ ಮುಗ್ಧತೆಯನ್ನು ಮತ್ತೆ ತುಂಬಿಕೊಂಡು, ಬದುಕನ್ನು ಹಾಡಾಗಿಸಿಕೊಂಡು, ತೆರೆದ ಆಕಾಶದಲ್ಲಿ ರೆಕ್ಕೆಯನ್ನು ಬಡಿಯುತ್ತ ಹಾರುತ್ತ ಎಲ್ಲವನ್ನು ನನ್ನದಾಗಿಸಿಕೊಳ್ಳುತ್ತೇನೆ.

ಕವಿತೆ ಇಲ್ಲಿ ನೆಪ ಮಾತ್ರ.

ಅಲ್ಲಿಯ ತನಕ ನಾನು ಸ್ಕೂಲಿನಿಂದ ಓಡೋಡಿ ಬಂದು ಬೆಚ್ಚಗೆ ನಿನ್ನ ಪಕ್ಕದಲ್ಲಿ ಮಲಗಿ ಇನ್ನೊಂದು ಕಥೆ ಹೇಳು ಎನ್ನುವ ಪುಟ್ಟ ಹುಡುಗ.

4 comments

  1. ತಾಯಿಗೆ ತಕ್ಕ ಮಗ. ಅಭಿನಂದನೆಗಳು ಕಮಲಾ, ಆಕರ್ಷ

  2. ಬರೆಯುವವರ ತಲ್ಲಣಗಳನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟಿರುವ ಕಮಲ, ಆಕರ್ಷರ ನುಡಿಗೆ ನನ್ನೆರಡು ಮಾತುಗಳು. ಬರೆದಂತೆ ಬರೆದಂತೆ ವಿಸ್ತಾರವಾಗುವ, ವಿಶಾಲ ಅನುಭವ ಆಕರ್ಷನದಾಗಲಿ ಎಂದು ಆಶಿಸುತ್ತೇನೆ. ಇಬ್ಬರಿಗೂ ಅಭಿನನಂದನೆಗಳು.

  3. ಆಕರ್ಷ್ ನ ಕಾವ್ಯದ ಕುರಿತು ನನಗೆ ಕುತೂಹಲ ಮತ್ತು ಪ್ರೀತಿ ಇದೆ. ಆರಂಭಿಕವಾಗಿ ಇಂಗ್ಲೀಷ್ ನಲ್ಲಿ ಬರೆಯುವ ವ್ಯಾಮೋಹದಲ್ಲಿದ್ದು ಸಕಾಲದಲ್ಲಿ ದೊರೆತ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಕನ್ನಡದಲ್ಲಿ ಬರೆಯತೊಡಗಿದ, ಉಜ್ವಲ ಸಾಹಿತ್ಯ ಸೃಷ್ಟಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ತನ್ನ ಅಮ್ಮನ “ಶಕುಂತಳೋಪಾಖ್ಯಾನ” ಸಂಕಲನದಲ್ಲಿರುವಂಥ ಕಾವ್ಯಸೃಷ್ಟಿಯ ಸಂದರ್ಭಕ್ಕಿಂತ ಭಿನ್ನವಾದ ಕಾಲಘಟ್ಟದಲ್ಲಿ, ಅದರೆಲ್ಲ ಗೊಂದಲಗಳ ಸಮೇತ ಬದುಕುತ್ತಿರುವ, ಬರೆಯುತ್ತಿರುವ ಆಕರ್ಷ ಬಾಲಕನಾಗಿದ್ದಾಗ ತನ್ನ ಅಮ್ಮನ ಮಡಿಲಲ್ಲಿ ಕಾವ್ಯವೆಂಬ ಲೋಕದ ಸೆಳೆತಕ್ಕೆ ಪ್ರಾರಂಭಿಕವಾಗಿ ಒಳಗಾದ ಸೆಳೆತವನ್ನು ಗಟ್ಟಿಯಾಗಿ ನೆನಪಿಟ್ಟುಕೊಂಡು ಸಂಭ್ರಮಿಸುತ್ತಿರುವದರಲ್ಲೂ ಒಂದು ಚೆಲುವಿದೆ…

    ಹೀಗೇ ಹೇಳುತ್ತ ಹೋಗಬಹುದು. ಆಕರ್ಷನ ಕಾವ್ಯರಚನೆಯಲ್ಲಿ ಅಕೃತ್ರಿಮವಾದ ಸೃಜನಶೀಲ ಗುಣವಿದೆ ಎಂದು ನನಗೆ ಅನ್ನಿಸುತ್ತದೆ. ಪ್ರಯೋಗಶೀಲತೆ ತುಸು ಹಿನ್ನೆಲೆಯಲ್ಲಿ ಉಳಿದರೂ ತೊಂದರೆಯಿಲ್ಲ. ಈ ಗುಣ ಗಟ್ಟಿಯಾಗಲಿ. ಇಂಗ್ಲೀಷ್ ನಲ್ಲಿ ಕಾವ್ಯ ಸೃಜಿಸುವ ಮೋಹವೂ ಕ್ರಮೇಣ ಕಡಿಮೆಯಾಗಿ ಅದು ಕನ್ನಡದಲ್ಲ್ಲಿ ಬೇರೂರಲಿ. ಆಮೇಲೆ ಬೇಕಾದರೆ ಅವು ಇಂಗ್ಲೀಷ್ ನಲ್ಲಿ ಅನುವಾದಗೊಳ್ಳಲಿ. ಆಕರ್ಷ್ ನ ಕಾವ್ಯ ತನ್ಬ ಸಿದ್ಧಿಯನ್ನು ಸಾಧಿಸಿದೆ ಅಂತ ಅಲ್ಕ. ಅದು ಪರಿಚಿತ ಇಡಿಯಂ ಗಳಿಗಿಂತ ಭಿನ್ನವಾಗಿದೆ. ಈ ಕ್ಷಣಕ್ಕೆ ಅದು ಮುಖ್ಯ..

Leave a Reply