ತಾವರೆ ಎಲೆ ಮತ್ತು ನೀರಹನಿ

ರಜನಿ ಕೆರೇಕೈ

ನೆಗೆಯುತ್ತ ಬಂದ ನೀರಹನಿ

ಕೊಳದ ತಾವರೆಯೆಲೆಯ ಮೇಲೆ

ಹಾರಿ ಮಧ್ಯ ತಗ್ಗು ಸೇರಿತು

 

ಹಸಿರು ತುಂಬಿ ಸೊಕ್ಕಿದೆಲೆ

ಫಳಗುಡುವ ನೀರ ಹನಿ

ಕಂಡು ಬೆರಗಾಗಿ

ಜೋಪಾನ ಹರಡಿ ಮೈಯ್ಯ

ಅಂಚಿಗೆ ಹರಿದು ಜಾರಿ ಬೀಳದಂತೆ

ಗಾಳಿಗೂ ಓಲಾಡದಂತೆ

ನೆಟ್ಟಗೆ ನಿಂತು ತುಳುಕದಂತೆ

ಮುದ ಬರುವಂತೆ ಲಾಲಿಸಿತು, ಪ್ರೇಮಿಸಿತು, ಸಲ್ಲಾಪಿಸಿತು …..

 

ಅದದೇ ಆಲಾಪಸಲ್ಲಾಪಕ್ಕೆ

ಬೇಸರಿಸಿ ಆಕಳಿಸಿತು ನೀರಹನಿ

ಎಲೆಯ ಜೊತೆಗಿನ ಹಸಿಬಿಸಿಯಾಟಕೆ ಕೊನೆಹಾಡಿ

ಎಲ್ಲೂ  ಎಲೆಗಂಟಿಕೊಳ್ಳದೆಯೆ

ಮತ್ತೊಂದೆಲೆಯ ನಟ್ಟ ನಡು ಸೇರಿತು

ಅಲ್ಲಿ ಹೊಸದೇ ಸಲ್ಲಾಪವ ಆಲಾಪಿಸಿತು…

ಅದಕೂ ಬೇಸರಿಸಿ

ಇನ್ನೊಂದಕೆ, ಮತ್ತೊಂದಕೆ

ನೆಗೆಯುತ್ತ ನೆಗೆಯುತ್ತ ನಡೆಯಿತು

 

ಸೊಕ್ಕಿದ  ಎಳೆ ಹಸಿರ ಎಲೆಯೊಂದು

ನೀರಹನಿಯ ಕಣ್ ಸೆಳೆಯಿತು

ಇಬ್ಬರೂ ಜೊತೆಗೂಡಿ, ಚಂದಕೆ ತೂಗಾಡಿ

ಸಂತಸದ ಹಡಗಿಗೆ ನಗೆಹಾಯಿ ಕಟ್ಟಿದರು

 

ನೆಗೆವ ಚಾಳಿಯ ನೀರಹನಿ ಇನ್ನೇನು

ಮತ್ತೊಂದಕೆ ನೆಗೆಯ ಬೇಕೆನುವಾಗಲೇ

ಎಲೆ ವಾಲಿ ಮೈಯ್ಯ ಕೊಡವಿ

ನಡುವಿದ್ದ ನೀರಹನಿಯ

ನೆಲಕೆ ಚಿಮ್ಮಿಬಿಟ್ಟಿತು

ಸದ್ದಿಲ್ಲದೆ, ಗುರುತಿಲ್ಲದೆ

ನೆಲದೊಳಿಂಗಿ

ನೀರಹನಿ ಮಣ್ಣಾಯಿತು

Leave a Reply