ಹಿಪ್ ಹಿಪ್ ಹುರ್ರೇಎಎಎಎಎ…

ಗೀತಾ ಹೆಗ್ಡೆ ಕಲ್ಮನೆ

ಇಷ್ಟೊಂದು ಸಂತೋಷಕ್ಕೆ ಆದ ಕಾರಣಗಳನ್ನು ಅದೇಗೆ ವರ್ಣಿಸಲಿ? ಭಯಂಕರ ಸಂತೋಷವಾದಾಗ ತಡೆದುಕೊಳ್ಳಲಾಗದೇ ಇರೋ ಜಾಗಾನೂ ಮರೆತು ಕುಣಿಯೋದೊಂದು ಬಾಕಿ.

ಆದರೂ ನನ್ನ ವಯಸ್ಸು ಈ ಸಂತೋಷ ಮಕ್ಕಳಂತೆ ಕುಣಿದು ಸಂಭ್ರಮಪಡಲು ಬಹಳ ಬಹಳ ಅಡ್ಡಿಪಡಿಸ್ತಾ ಇದೆ.  ಆಗೆಲ್ಲಾ ನನಗೆ ನನ್ನೀ ದೇಹದ ಮೇಲೆ ಸಿಕ್ಕಾಪಟ್ಟೆ ಕೋಪ. ಆದರೆ ನಾನು ನನ್ನ ಮನಸ್ಸನ್ನು ಬಹಳ ಬಹಳ ಪ್ರೀತಿಸ್ತೀನಿ. ಅದೆಷ್ಟು ಅನ್ನೋದು ನನಗೆ, ಅದಕೆ ಮಾತ್ರ ಗೊತ್ತು.  ಜೀವನದ ಪ್ರತಿಯೊಂದು ಚಿಕ್ಕ ಚಿಕ್ಕ ಕ್ಷಣಗಳನ್ನು ಅದು ಸಂತೋಷವೇ ಆಗಿರಬಹುದು, ದುಃಖವೇ ಆಗಿರಲಿ ಮನಸ್ಪೂರ್ತಿಯಾಗಿ ಅನುಭವಿಸಿ ಹಗುರಾಗಿ ಬಿಡುತ್ತದೆ.

ಒಂದಷ್ಟು ಚಿಂತೆ ಒಂದಷ್ಟು ದಿನ ಕಾಟಾ ಕೊಟ್ಟರೂ ಈ ಸಂತೋಷದ ಆ ಒಂದು ಕ್ಷಣ ಇದೆಯಲ್ಲಾ ಎಲ್ಲವನ್ನೂ ತೊಡೆದು ಹಾಕಿ ಮೈ ಮನವೆಲ್ಲ ಹೂವಾಗಿಸಿ ಬಿಡುತ್ತದೆ.  ಅಂತಹ ಕ್ಷಣದಲ್ಲಿ ಮನೆಯಲ್ಲಿ ಏನಾರೂ ಇದ್ದರೆ ಕ್ಯಾರೇ ಅನ್ನದೇ ಕುಣಿಯೋದೇ… ಯಾಕೆಂದರೆ ಆ ಕ್ಷಣ ಮತ್ತೆ ಸಿಗುತ್ತಾ ಹೇಳಿ?  ಇಲ್ಲಾ ಈ ಮನಸ್ಸಿಗೆ ನಾವು ಕಡಿವಾಣ ಹಾಕೋದು ತಪ್ಪಲ್ವಾ.

ಹಾಗೆ ದುಃಖ ಆದಾಗಲೂ ಇನ್ನೇನು ತಡಿಲಾರೆ ಅಂದಾಗ ಸಾಮಾನ್ಯವಾಗಿ ಯಾರ ಹತ್ತಿರವೂ ಹೇಳಿಕೊಳ್ಳುವ ಜಾಯಮಾನ ನನ್ನದಲ್ಲ. ಯಾರಿಲ್ಲದಾಗ ಒಬ್ಬಳೇ ದೇವರ ಕೋಣೆಯಲ್ಲಿ ಕೂತು ಜೋರಾಗಿ ರಾಗವಾಗಿ ಅತ್ತು ಮನಸ್ಸು ಹಗುರ ಮಾಡಿಕೊಂಡಿದ್ದೂ ಇದೆ. ಏಕೆಂದರೆ ನಮ್ಮ ದುಃಖ ನಮಗೇ ಇರಲಿ, ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಂಡರೆ ಮನಸ್ಸಿಗೆ ಮತ್ತಷ್ಟು ಖುಷಿ ಸಿಗೋದು ಗ್ಯಾರಂಟಿ. ಮನಸ್ಸಿಗಾದ ಆ ಕ್ಷಣದ ಥ್ರಿಲ್ ಏನಪ್ಪಾ ಅಂದ್ರೆ…;

ಇವತ್ತು ಒಂದೆರಡು ಬ್ಯಾಂಕಿಗೆ ಹೋಗೊ ಕೆಲಸ ಇತ್ತು. ಮನೆಯಿಂದ ಹೊರಗೆ ಹೋಗಬೇಕು ಅಂದರೆ ನಾ ಸ್ವಲ್ಪ ಸೋಂಬೇರಿ. ಹೊರಟೆ ಎಂದರೆ ಇರೋ ಬರೋ ಕೆಲಸ ಎಲ್ಲ ಪೇರಿಸಿಕೊಂಡು ಸ್ಕೂಟಿ ಹತ್ತಿ ಹೊರಟರೆ ಮುಗಿಸಿಯೇ ಮನೆಗೆ ಬರೋದು. ಇವತ್ತೂ ಹಾಗೆ ಏನೆಲ್ಲಾ ನೆನಪಿಸಿಕೊಂಡು ಅಂತೂ ಒಂದು ಬ್ಯಾಂಕಿನ ಮೆಟ್ಟಿಲೇರಿದೆ.

ಒಳಗಡೆ ಹೋಗಿ ಇನ್ನೇನು ಪರ್ಸ್ ತೆಗಿತೀನಿ…ಗೆಲಿಲಿಯೊ ‘ಯುರೇಕಾ, ಯುರೇಕಾ’ ಎಂದು ಬರಿ ಮೈಯಲ್ಲಿ ಓಡಿದ ಹಾಗೆ ನನಗೂ ಅದಕ್ಕಿಂತ ಹೆಚ್ಚು ಖುಷಿ, ತಕಧಿಮಿ ತಕಧಿಮಿ ಕುಣಿಯೋ ಹಾಗಾಯಿತು. ಯಪ್ಪಾ… ಜನ ಯಾರೂ ಇರಲಿಲ್ಲ ಅದೇನೊ ಸ್ವರದಲ್ಲಿ ವಾವ್!.. ಸಿಕ್ಕಿತು ಸಿಕ್ಕಿತು ಅಂದುಕೊಂಡು ಸೀದಾ ಹೊರಗೆ ಬಂದು ಮಗಳಿಗೆ ಫೋನಾಯಿಸಿದೆ.  ನನ್ನ ಮನಸ್ಸು 200 ಮೀಟರ್ ಸ್ಪೀಡಲ್ಲಿ ಇತ್ತು.  ಆ ಕಡೆಯಿಂದ ಅಷ್ಟೇ ಕೂಲಾಗಿ “ಹೌದಾ ಅಮ್ಮಾ, ಗುಡ್” ಅಷ್ಟೇ ಹೇಳಬೇಕಾ?  ಪಿಚ್ಚಾ… ಇಷ್ಟೊಂದು ಖುಷಿ ವಿಷಯ ಹೇಳಿದಾಗ ಹೀಂಗಾ ರಿಯಾಕ್ಟ್ ಮಾಡೋದು ಅಂತ ಅನಿಸಿದರೂ ತಡಿಲಾರದೇ ನಾನೇ ಮುಂದುವರಿಸಿ “ನೀ ಆರ್ಡರ್ ಮಾಡಿದ್ದು ಕ್ಯಾನ್ಸಲ್ ಮಾಡು. ಬೇಡಾ ತರಿಸೋದು.  ಹಂಗೆ ಈ ಸ್ಯಾಟರ್ಡೆ ಊಟ ಕೊಡಸ್ತೀನಿ ಕಣೆ” ಅಂದೆ.  ಆಗ ಅವಳ ಕಿವಿ ನೆಟ್ಟಗಾಗಿ “ಹಾಂ, ಹೌದಾ? ಎಲ್ಲಿ? ಹೋಗೋಣ, ಯಸ್ ಓಕೆ….”.  ಅವಳ ಖುಷಿ ಅವಳಿಗೆ. ಅವಳಾಗಲೇ ಹೊಸ ಹೊಸದು ಕೊಡಿಸೊ ಯೋಚನೆಯಲ್ಲಿ ಇದ್ಜವಳು, ನಾನು “ತಡಿ ಇರು ಸ್ವಲ್ಪ “ಅನ್ನೋಕೆ.  ಇದು ಸುಮಾರು ದಿನದಿಂದ ನಡೀತಾ ಇತ್ತು.

ಇದೇ ತರ ಸನ್ನಿವೇಶ ಇತ್ತೀಚೆಗೆ ನನ್ನ ಮೆಚ್ಚಿನ ಸರ್ ಒಬ್ಬರು ಮನೆಗೆ ಬರ್ತೀವಿ ಎರಡು ಮೂರು ಜನ ಅಂದು ಫೋನಾಯಿಸಿದಾಗ ಮನೆಯಲ್ಲಿ ಮಧ್ಯಾಹ್ನ ಮಲಗಿದ್ದವರನ್ನೆಲ್ಲ ಎಬ್ಬಿಸಿ ಖುಷಿಯಲ್ಲಿ ಮನೆಯೆಲ್ಲ ಓಡಾಡಿ ಏನು ಮಾಡಲಿ ಏನು ಮಾಡಲಿ ಎಂದು ಕೊನೆಗೆ ಶಿರಾ ಮಾಡಿ ಹಣ್ಣು ಕಟ್ ಮಾಡಿ ಇರೊ ಬರೊ ಕುರುಕಲು ಎಲ್ಲಾ ತಟ್ಟೆಯಲ್ಲಿ ಪೇರಿಸಿ ಕಾಯ್ತಾ ಕೂತರೆ ಕೊನೆಗೆ ಬಂದಿದ್ದು ಅವರೊಬ್ಬರೇ ಆದರೂ ಸಂಪೂರ್ಣ ನಿರೀಕ್ಷೆ ನಾವೆಲ್ಲಾ ಅವರಿಗೇ ಮೀಸಲಿಟ್ಟಿರೋದರಿಂದ ಬಹಳ ಬಹಳ ಖುಷಿ ಆಗಿತ್ತು. ಆದರವರು ತಿಂದದ್ದು ಬರೀ ಕೋಳಿಯಷ್ಟು ಮಾತ್ರ!  ದೊಡ್ಡ ಮನುಷ್ಯರು ಇಷ್ಟಾದರೂ ತಿಂದ್ರಲ್ಲಾ, ಕೊನೆಗೂ ಈ ಬಡವಳ ಮನೆಗೆ ಬಂದ್ರಲ್ಲಾ ಅನ್ನೋ ಹೆಮ್ಮೆ ನನಗೆ. ಎಲ್ಲವೂ ಈ ಬರವಣಿಗೆ ತಂದು ಕೊಟ್ಟ ವರ.  ಚಿರಋಣಿ

ಇನ್ನೊಂದು ಏನು ಗೊತ್ತಾ? ಈ ಮೊಬೈಲ್ ಕಥೆ. ಇದಂತೂ ಕೈಕೊಡ್ತಾ ಇದ್ದರೆ ಆಕಾಶವೇ ತಲೆ ಮೇಲೆ ಬಿದ್ದಂತೆ ಆಡೋದು ಗ್ಯಾರೆಂಟಿ.  ಕರೆಂಟಿಲ್ಲಾ ಅಂದರೆ ಒದ್ದಾಡಿಕೊಂಡು ತೆಪ್ಪಗಿರ್ತೀವಿ. ಅದೇ ಸಾಧನವೇ ಖರಾಬಾದರೆ? ಸುಮಾರು ತಿಂಗಳಿಂದ ಯಡವಟ್ಟಾಗಿದ್ದು ಒಂದು ವಾರದಿಂದ ಮೊಬೈಲು, ಐ ಪ್ಯಾಡ್ ಎರಡೂ ನಾ ದುರಸ್ತಿ.  ಯಾರಿಗೆ ಹೇಳಲಿ ನನ್ನ ಕಷ್ಟನಾ?

ನಂಗೊತ್ತಿಲ್ಲ, ಅದ್ಯಾವುದೋ ಕಾರಣಕ್ಕೆ ನನ್ನ ಪಾಸ್ ವರ್ಡ್ ಆತ್ಮೀಯರೊಬ್ಬರಿಗೆ ಕೊಟ್ಟಿದ್ದೆ ಅದೇನೊ ಸ್ವಲ್ಪ ಸರಿ ಮಾಡಿಕೊಡಿ ಅಂತ. ಅವರೇನೋ ಆಪರೇಟ್ ಮಾಡುವಾಗ ನನಗೆ ಮೆಸೇಜ್.  ನಿಮ್ಮ ಪಾಸ್ವರ್ಡ್ ಬೇರೆಯವರು ಉಪಯೋಗಿಸುತ್ತಿದ್ದಾರೆ. ನಂಗೊತ್ತು ಕಂಡ್ರೀ ಅಂತ ಸೈಲಂಟಾಗ್ಬಿಟ್ಟಿದ್ದೆ.  ಅಲ್ಲಿಂದ ಶುರುವಾದ ತೊಂದರೆ. ಮೇಲ್ ಬರಲ್ಲ, ಹೋಗಲ್ಲಾ, ವಾಟ್ಸಾಪ್ ಕೈ ಕೊಡ್ತಿದೆ ಆಗಾಗ. ಮೊಬೈಲ್ ಡೈರಿ, ಐ ಪ್ಯಾಡ್ ಡೈರಿಯಲ್ಲಿ ಬರೆದದ್ದೆಲ್ಲಾ ಡಿಲೀಟ್ ಆಗೋದ್ರೆ?  ಶಿವನೆ ಅದೆಷ್ಟು ಒದ್ದಾಟ.   ಅದ್ಯಾವುದೋ  ಯ್ಯಾಪ್ ಡೌನ್ಲೋಡ್ ಮಾಡಿ ಅದು ಕ್ಲೀನ್ ಮಾಡಿ ಕ್ಲೀನ್ ಮಾಡಿ ಹೇಳೋಕೆ ನಾ ಮಾಡೋಕೆ.

ಚಾರ್ಜ್ ಹಾಕಲು ಮೊಬೈಲ್ ಬಿಸೀ ಆಗೋದು ಸ್ವಲ್ಪ ಹೊತ್ತಲ್ಲಿ ಚಾರ್ಜ್ ಹೊರಟು ಹೋಗೋದು. ವಾಟ್ಸಾಪ್ ಗ್ರೂಪ್ ಚಾಟೆಲ್ಲಾ ಡಿಲೀಟ್ ಮಾಡ್ದೆ, ಎಷ್ಟೊಂದು ಫೋಟೊ ಡಿಲೀಟ್ ಮಾಡಿದೆ. ಊಹೂಂ ಒಟ್ಟಿನಲ್ಲಿ ಇದರಲ್ಲೇ ದಿನದ ಟೈಮೆಲ್ಲಾ ವೇಸ್ಟ್ ಆಗಿ ಕೊನೆಗೆ ಬಂದಿರೊ ಕಾಲ್ ರಿಸೀವ್ ಮಾಡಲಾಗದೇ ಹೊರಟೆ ಮೊಬೈಲ್ ಅಂಗಡಿಗೆ. ಒಬ್ಬರಂದ್ರು ಇದು ಬ್ಯಾಟರಿ ಬದಲಾಯಿಸಿ, ಇನ್ನೊಬ್ಬರು ಸ್ವಿಚ್ ಆಫ್ ಮಾಡಿ ಅಂತೂ ಮೊಬೈಲ್ ಆನ್ ಆಯಿತು, ಇದು ಡೌನ್ಲೋಡ್ ಬೇಡಾ ಅದು ಬೇಡಾ ಮಾಡಬೇಡಿ ಅಂದು ಅಂತೂ ನನ್ನ ಮೊಬೈಲ್ ಒಂದು ಹಂತಕ್ಕೆ ಬಂತು.

ಮನೆಗೆ ಬಂದ ಮೇಲೆ ಅದೇನೊ ಮೆಸೇಜು ಸೈನ್ ಮಾಡಿ ಅಂತ. ನಂಗೆ ಭಯಾ ಇನ್ನೇನಾಗುತ್ತೊ ಅಂತ. ಮಗಳು ಬೇರೆ ಬಯ್ತಾಳೆ “ಏನೇನೊ ಒತ್ತಿ ಇನ್ನೇನೊ ಮಾಡಿಕೊಂಡು ಆಮೇಲೆ ಏನಾಯ್ತು ನೋಡೆ ಅಂತಿಯಾ.”  ಏನಾದರಾಗಲಿ ಧೈರ್ಯವಾಗಿ ಸೈನ್ ಮಾಡಿದೆ ಪಾಸ್ವರ್ಡ್ ಕೇಳುತ್ತೆ.  ನಂಗೊ ಈ ಪಾಸ್ವರ್ಡ್ ಪ್ರತೀ ಸಾರಿ ಮರೆಯೋದು. ಅಂತೂ ಈಗ ಹೊಸಾ ಪಾಸ್ವರ್ಡ್ ಸ್ಟೋರ್ ಆಯ್ತು ಬರೆದು ಇಟ್ಟುಕೊಂಡೆ. ಆಹಾ! ನನ್ನ ಮೊಬೈಲೇ ಅದೆಷ್ಟು ಆಟ ಆಡಿಸಿದೆ ಒಂದು ವಾರದಿಂದ? ಅಬ್ಭಾ! ಅಂತೂ ಈಗ ಸರಿ ಹೋಯಿತು .  ಐ ಪ್ಯಾಡೂ ಹೊಸಾ ಪಾಸ್ವರ್ಡ್ ಒತ್ತಿದ ಮೇಲೆ ಅದೂ ತನ್ನಷ್ಟಕ್ಕೇ ಸರಿಯಾಯ್ತು.  ಇದಂತೂ ಮತ್ತೂ ಮತ್ತೂ ಧಿಲ್ ಪಸಂದ ಹಿಪ್ ಹಿಪ್ ಹುರ್ರೇಎಎಎಎಎ…

ಅದೇನೊ ಹೇಳ್ತಾರಲ್ಲಾ “ರವಿ ಕಾಣದ್ದು ಕವಿ ಕಂಡಾ” ಹಾಗಾಯ್ತು ಆ ಕ್ಷಣ ನನ್ನ ಇನ್ನೊಂದು ಕಥೆ.  ಮನಸ್ಸು ಆಗಲೇ ಏನು, ಹೇಗೆ, ಎತ್ತ, ಹೀಗಿದ್ದರೆ ಸರಿ, ಇಲ್ಲ ಹಾಗೆ ಇದ್ದರೆ ಸರಿ. ಒಟ್ಟಿನಲ್ಲಿ ಬರಿಯಲೇಬೇಕು ಈ ಖುಷಿಯ ಸನ್ನಿವೇಶವನ್ನು ಅಂತ ಮೆಲುಕು ಹಾಕಲು ಶುರುವಾಯಿತು.

ಅಂದಾಗೆ ಈ ಮೊದಲೆ ಬರೆದ ಖುಷಿಯ ಕಾರಣ ಹೇಳಲೇ ಇಲ್ಲ ಅಲ್ವಾ?  ಎರಡು ತಿಂಗಳಿಂದ ಕಾಣೆಯಾಗಿದ್ದ ಅಮೂಲ್ಯ ವಸ್ತು ಸಡನ್ನಾಗಿ ಕಣ್ಣಿಗೆ ಬಿದ್ದರೆ ಎಷ್ಟು ಸಂತೋಷವಾಗಿರಲಿಕ್ಕಿಲ್ಲ ನೀವೇ ಹೇಳಿ?  ಇಲ್ಲಾ ಅನ್ನುವುದು ಇದೆಯೆಂದು ಭ್ರಮಿಸೋದು ಬೇರೆ ಇಲ್ಲವಾದದ್ದು ಪ್ರತ್ಯಕ್ಷವಾಗಿ ಕಣ್ಮುಂದೆ ನಿಂದರೆ ಹೇಗೆ? ಅಂತಹ ಸಂತೋಷ ಬ್ಯಾಂಕಲ್ಲಿ ನನಗಾಯ್ತು.

ಇತ್ತೀಚೆಗೆ ಬರೆದದ್ದೆಲ್ಲ ಕಾಪಿ ತೆಗೆಸುವ ಯೋಚನೆ. ಎಲ್ಲಾ ಪೆನ್ ಡ್ರೈವ್ ಲ್ಲಿ ಪೇರಿಸಲು ಮಗಳಿಗೆ ಒಂದಿನ್ನೂರು ಬರಹ ಮೇಲ್ ಮಾಡಿದ್ದೆ.  ಪಾಪ ಅವಳೆಲ್ಲ ಅದರಲ್ಲಿ ತೂರಿಸಿ ನನ್ನ ಕೈಗೆ ತಂದು ಕೊಟ್ಟಿದ್ದೂ ಆಯಿತು.  ನಾನೋ ಇವತ್ತು ನಾಳೆ ಅಂತ ನಾಲ್ಕಾರು ದಿನ ಮುಂದೂಡಿ ಕೊನೆಗೆ ದೂರ ಪ್ರದೇಶಕ್ಕೆ ಹೋಗೊ ಗಡಿಬಿಡಿಯಲ್ಲಿ ಪರ್ಸಲ್ಲೇ ಇಟ್ಟು ಕೊಂಡೊಯ್ದು ಅಲ್ಲೇ ಎಲ್ಲೋ ಕಳೆದು ಹೋಯ್ತು ಅನ್ನುವ ಸಂಶಯವಿದ್ದರೂ ಮನೆಗೆ ಬಂದ ಮೇಲೆ ಎಲ್ಲಾ ಕಡೆ ತಡಕಾಡಿ ಎಲ್ಲೂ ಸಿಗದೆ ಒಂದಷ್ಟು ದುಃಖ ಪಟ್ಟು ಆತ್ಮೀಯರಲ್ಲಿ ಅಯ್ಯೋ ಹೀಂಗಾಗೋಯ್ತು ಅಂತ ಅಲವತ್ತುಕೊಂಡು ಮೌನವಾಗಿ ಅತ್ತು ಒಂದೆರಡು ರಾತ್ರಿ ನಿದ್ದೆಗೆಟ್ಟು ಅದೇ ಕೊರಗಲ್ಲಿ ಇದ್ದೆ.  ಕಳೆದದ್ದು ಮತ್ತೆ ಖರೀದಿಸಬಹುದು ಆದರೆ ಅದರಲ್ಲಿರೋದು ಮತ್ತೆ ಮಗಳಿಗೆ ಗೋಳು ಕೊಡಬೇಕಲ್ಲಾ,ನನಗೆ ಬರಲ್ಲ ದಡ್ಡಿ ಅಂತ ನನ್ನನ್ನೇ ಬಯ್ಕಂಡು ಚಿಂತೆಗೀಡಾಗಿದ್ದೆ. ಸಿಕ್ಕಿದ ಖುಷಿಯಲ್ಲಿ ಇದರಿಂದ ಹೊರಗೆ ಬಂದರೂ ಇದರ ಜೊತೆಗೆ ಇನ್ನೂ ಒಂದಷ್ಟು ಬೇಸರವೂ ಮೇಳೈಸಿತು ಇದೇ ದಿನ ;

ಕಾಪಿ ತೆಗೆಸಲು ಹೋದರೆ ಬರ್ತಾನೇ ಇಲ್ಲ. “ನುಡಿ” ಗೆ ಹಾಕಲು ಹೇಳಿ. ಇದರ ಬಗ್ಗೆ ಗಂಧಗಾಳ ನಂಗೊತ್ತಿಲ್ಲ, ಒಂದು ಕಾಪಿಗೆ ಎರಡು ಮೂರು ರೂ. ಅಂತಾರೆ. ಅಲ್ಲಿ ನೋಡಿದರೆ ಆ ಅಂಗಡಿಯಪ್ಪಾ ಟೈಪಿಸ್ಟ್ ಹತ್ತಿರ “ರೀ ಅದಾಗೊಲ್ಲ ಕೊಟ್ಟು ಕಳಿಸ್ರೀ.. ತಗೊಳ್ಳಿ ಇದು ಮಾಡಿ.” ಅರೆ ಇಸಕಿ!  ಇವನೇನು ನನಗೆ ಪುಕ್ಕಟೆ ಮಾಡಿಕೊಡ್ತಾನಾ? ನಂಗೆ ಬೇರೆ ಏನೂ ಗೊತ್ತಿಲ್ಲ. ” ಕೊಬ್ಬು” ಮನಸಲ್ಲೇ ಬಯ್ಕಂಡು ಇನ್ನೂ ಒಂದೆರಡು ಕಡೆ ವಿಚಾರಿಸಿ ಕಣ್ಣೆಲ್ಲ ಒದ್ದೆ ಮಾಡಿಕೊಂಡು ಪೆಚ್ಚು ಮೋರೆ ಹಾಕಿ  ಸರಕ್ಕನೆ ಗಾಡಿ ಹತ್ತಿ ಧುಮು ಧುಮು ಅಂದ್ಕೊಂಡು ಸೀದಾ ಮನೆಗೆ ಬಂದೆ.

ಒಂದಷ್ಟು ಗಟ ಗಟ ನೀರು ಕುಡಿದು ತಟಸ್ಥವಾಗಿ ಕೂತೆ. ತತ್ತರಕಿ ಇವರ ಮನೆ ಕಾಯಾ. ಯಾರೂ ಬೇಡಾ ನಾನೇ ಯಾಕೆ ಕಲೀಬಾರದು? ಹಚ್ಚಿದೆ ಫೋನು. ಬರೀ ರಿಂಗು ಉತ್ತರ ಇಲ್ಲ.  ವಾಟ್ಸಾಪ್ ನಂಬರಿಗೆ ಚಾಟ್ ಮಾಡಿದೆ. ಎರಡು ಗೀಟು ಬಂತು. ಯಸ್ ಗೊಟ್ ಇಟ್. ನಂಬರು ಬದಲಾಗಿಲ್ಲ.  ಏಕೆಂದರೆ “ಸಂಕಟ ಬಂದಾಗ ವೆಂಕಟರಮಣ” ಅಂದಂತೆ ಎರಡು ವರ್ಷಗಳ ಹಿಂದೆ ಅವರ ಮನೆ ಆಫೀಸಿಗೆಲ್ಲ ಭೇಟಿ ಕೊಟ್ಟಿದ್ದು ಬಿಟ್ಟರೆ ಇವತ್ತೇ ಫೋನಾಯಿಸಿದ್ದು! ಮಾಡ್ತಾರೆ ಅಂತ ಕಾದೆ ಕಾದೆ, ಅಂತೂ ಒಂದು ತಾಸಾದ ಮೇಲೆ ಕಾಲ್ ಬಂತು ರಿಸೀವ್ ಮಾಡೋಕಾಗ್ದೆ ಒದ್ದಾಟ.

ಪಟಕ್ ಅಂತ ನಾನೇ ಮಾಡಿ ನಾಮಕಾವಸ್ಥೆ ಒಂದೆರೆಡು ಲೋಕಾ ರೂಢಿ ಮಾತಾಡಿ ಬುಡಕ್ಕೆ ಬಂದು “ಒಂದು ಹೆಲ್ಪ್ ಆಗಬೇಕಿತ್ತು” ಅಂದೆ.  ಅವರೊ ಇಪ್ಪತ್ತೆಂಟು ವರ್ಷಗಳಿಂದ ಪರಿಚಯ, ಆಗ ಇನ್ನೂ ಡಿಪ್ಲೊಮಾ ಓದೊ ಹುಡುಗ, ನಾವೆಲ್ಲಾ ಒಂದೇ ಕಂಪೌಂಡಲ್ಲಿ ಬಾಡಿಗೆ ಇದ್ದವರು ಆಗ ಗಳಸ್ಯ ಕಂಠಸ್ಯ ನನ್ನ ಮಗಳಿಂದ ಹಿಡಿದು. ಪುಣ್ಯಾತ್ಮ ಅದೇ ಅಭಿಮಾನ ನಮ್ಮ ಕಂಡರೆ. ಈಗ ಪಾರ್ಟನರ್ ಶಿಪ್ನಲ್ಲಿ ದೊಡ್ಡ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದು ಜೋಷಾಗಿದ್ದಾರೆ.  ಆದರೆ ಮನಸ್ಸು ಇನ್ನೂ ಚಿನ್ನ!

ಕೂಡಲೇ “ಹೇಳಿ ಆಂಟಿ” “ನೋಡ್ರೀ ನಿಮ್ಮ ಹತ್ತಿರ ತಗಂಡಿರೋ ಕಂಪ್ಯೂಟರ್ ಪ್ರಿಂಟರ್ ಇನ್ನೂ ಸುಸ್ತಿತಿಯಲ್ಲಿ ಇದೆ. ಒಬ್ಬರನ್ನು ಕಳಿಸಿ ಸೆಟ್ ಮಾಡಿಕೊಡಿ.” ನನ್ನ ಸಮಾಚಾರ ಎಲ್ಲಾ ಅರುಹಿದೆ.  “ಓಹ್! ಹೌದಾ ಆಂಟಿ ಬಹಳ ಸಂತೋಷ ” ಇತ್ಯಾದಿ ಇತ್ಯಾದಿ ಮಾತಾಡಿ ನಾಳೆ ಕಳಿಸ್ತೀನಿ ಅಂತ ಫೋನಿಟ್ಟ. ನನಗೊ ಗುಡ್ಡ ಕಡಿದಷ್ಟು ಖುಷಿ. ಆಗೋದೆಲ್ಲಾ ಒಳ್ಳೆದಕ್ಕೆ ಅಂತ ಸಮಾಧಾನಲ್ಲಿದೆ ಸಧ್ಯಕ್ಕೆ ಮನಸ್ಸು.  ಆದರೂ ಒಂದು ಸಣ್ಣ ಆತಂಕ ನಾನು ಕಲಿತು ಕಾಪಿ ತೆಗಿತೀನಾ?  ನೋಡ್ವಾ… ಅವರ ನಿರೀಕ್ಷೆ ಈಗ ನನ್ನ ಪರೀಕ್ಷೆ ಎರಡೂ ನನ್ನ ಮುಂದಿದೆ.

ಅಲ್ಲಾ ಮರೆತೇ ಬಿಟ್ಟಿದ್ದೆ ; ಇಲ್ಲೇ ಇರೊ ನನ್ನ ಫ್ರೆಂಡ್ ಹತ್ತಿರ ಪೆನ್ ಡ್ರೈವ್ ಕಳೆದಿರೊ ವಿಚಾರ ಹೇಳಿದಾಗ “ಅಲ್ಲೇ ಎಲ್ಲೋ ಇರ್ತೆ,ಮತ್ತೊಂದು ಸಲ ಹುಡುಕು. ಯಮ್ಮಲ್ಲೂ ಹೀಂಗೆ ಆಗಿ ಕಡಿಗೆ ನೋಡತಂಕ ತೊಳೆದ ಪ್ಯಾಂಟ್  ಇಸ್ತ್ರಿ ಮಾಡಕರೆ ಪ್ಯಾಂಟ್ ಜೋಬಲ್ಲೇ ಇತ್ತು ಮಾರಾಯ್ತಿ, ಸಿಕ್ತು ತಗ” ಅಂದಿದ್ದು ಈಗ ನಂಗೂ ಸಿಕ್ಕ ವಿಷಯ ಹೇಳಬೇಕು ಅಲ್ವಾ?  ಅವಳು ನಾ ಹೋದ ಹಾಗೆ “ಚಾ ಕುಡಿತ್ಯನೆ ಹೇಳ್ತಾ ಚಾಕ್ಕಿಡೋದು ಮಾತಾಡ್ತಾ ಮಾತಾಡ್ತಾ ಚಾ ತಂದಿಡೋದು, ನಾ ಬ್ಯಾಡ್ ಬ್ಯಾಡ್ದೆ ಹೇಳ್ತಾ ಚಾ ಹೀರಿ ಬರೋದು ಈಗ ಹತ್ತು ವರ್ಷಗಳಿಂದ ನಡೀತಾ ಬಂದಿರೊ ಮಾಮೂಲಿ. ಅವಳ ಕೈ  ಖಡಕ್ ಚಾ ಕುಡದು “ನಿನ್ನ ಬಾಯಿಗೆ ಸಕ್ಕರೆ ಹಾಕವೆ ”  ಇದು ಮಾತ್ರ ಮುದ್ದಾಂ ಹೇಳಿಯೇ ಬರಬೇಕು. ಇಗೋ ಹೊರಟೆ. ಬರ್ಲಾ..?

1 comment

Leave a Reply