ಮಗ ಕವಿಯಾಗಿದ್ದಾನೆ..

ಇದೊಂದು ಸೋಜಿಗ. ‘ಬಹುರೂಪಿ’ ತರುತ್ತಿರುವ ಒಂದು ಕವಿತಾ ಸಂಕಲನವೇ ನೆಪವಾಗಿ ಅಮ್ಮ-ಮಗ ಕವಿತೆ ಎಂದರೇನು ಎನ್ನುವ ಶೋಧಕ್ಕೆ ಹೊರಟಿದ್ದಾರೆ.

‘ಬಹುರೂಪಿ’ ಸದ್ಯದಲ್ಲೇ ಆಕರ್ಷ ಕಮಲ ಅವರ ಕವಿತಾ ಸಂಕಲನವನ್ನು ಹೊರತರುತ್ತಿದೆ. ಇದನ್ನು ಘೋಷಿಸಿದ ಸಂದರ್ಭದಲ್ಲಿ ಆಕರ್ಷ ಕಮಲ ಅವರ ತಾಯಿ, ಖ್ಯಾತ ಕವಯತ್ರಿ ಎಂ ಆರ್ ಕಮಲ ತಮ್ಮ ಮಗನಿಗೆ ಕವಿತೆಯ ಬಗ್ಗೆ ಪಿಸುನುಡಿಗಳನ್ನು ಆಡಿದರು. ಅದು ಇಲ್ಲಿದೆ.

ಇದಕ್ಕೆ ಉತ್ತರವಾಗಿ ಆಕರ್ಷ ನಾ ಬರೆಯಲಾಗದ ಕವಿತೆ ‘ಅಮ್ಮ’ನಿಗೆ ಬರೆದರು. ಅದು ಇಲ್ಲಿದೆ

ಈಗ ಖ್ಯಾತ ಕವಯತ್ರಿ ಲಲಿತಾ ಸಿದ್ಧಬಸವಯ್ಯ ಈ ಎರಡಕ್ಕೂ ತಮ್ಮ ಮಾತನ್ನೂ ಜೋಡಿಸಿದ್ದಾರೆ.

ನೀವೂ ಇದಕ್ಕೆ ಸೇರಿಸುವ ಪಿಸು ಮಾತುಗಳಿದ್ದರೆ avadhimag@gmail.com ಗೆ ಕಳಿಸಿ

ಲಲಿತಾ ಸಿದ್ಧಬಸವಯ್ಯ

ಪ್ರಿಯ ಕಮಲಾ ,

ಮಗ ಕವಿಯಾಗಿದ್ದಾನೆ. ಇಗೋ ಅಮ್ಮನಿಗೆ ನನ್ನ ಮೊದಲ ಅಭಿನಂದನೆಗಳು. ಆಕರ್ಷ್, ನಿಮಗೆ ಅಭಿನಂದನೆ ಹೇಳುವ ಮೊದಲು ಒಂದು‌ ಮಾತು ” ನಿಮ್ಮಮ್ಮನಂತಹ ಅಮ್ಮ ನಿಮಗೆ ಸಿಕ್ಕಿದ್ದು ನಿಮ್ಮ‌ ಭಾಗ್ಯ. ಉಳಿದೆಲ್ಲವನೂ ಮರೆತು ಬಿಡಿ.”

ಕಾವ್ಯದ ದಾರಿ ಆರಿಸಿಕೊಂಡು , ಅರಸಿಕೊಂಡು ಹೊರಟಿದ್ದೀರಿ. ನಿಮಗೆ ಒಳ್ಳೆಯದೇ ಆಗುತ್ತದೆ. ಒಳ್ಳೆಯದು ಬಿಟ್ಟು ಬೇರೇನೂ ಆಗುವುದಿಲ್ಲ ಎನ್ನಲಾರೆ. ಆದರೆ ಕಾವ್ಯದ ದಾರಿ ಇದೆಯಲ್ಲ , ಆ ದಾರಿಯೇ ಚೆಂದ ಆಕರ್ಷ್. ಗಮ್ಯದ ಬಗ್ಗೆ ಇಷ್ಟೂ ಚಿಂತಿಸಬೇಡಿ. ದಾರಿಯ ಸಣ್ಣಸಣ್ಣ ಬೇಲಿಯ ಹೂವನ್ನೂ ಬಿಡದೆ ಆನಂದಿಸಿ.

ಅಲ್ಲೊಂದು ಕೆಂಜಿಗ , ಇಲ್ಲೊಂದು ಜಗಳಗಂಟಿ ಮೈನಾ , ಅಗೋ ಹದ್ದು , ಹರಿವ ಹಾವೂ ,,, ಸಣ್ಣ ತೊರೆ, ಯಾರೋ ಪುಣ್ಯಾತ್ಮರು ತೋಡಿ ಹೋದ ಸೀನೀರ ಚಿಲುಮೆ, ಇನ್ನಾರೋ ಕುಣಿಕೆಗೆ ಕಟ್ಟಿ ಮರೆತು ಬಿಟ್ಟ ಬಿಂದಿಗೆ , ಯಾರು ಬಂದರೂ ತಣ್ಣಗೆ ಮಾಡುವ ಹೊಂಗೆಮರ, ಮುಳ್ಳೇ ನನ್ನ ಘನಒಡವೆ ಎನ್ನುವ ಸೀಮೇಜಾಲಿ,,, ಎಲ್ಲವನ್ನೂ ಆನಂದಿಸಿ.

ಹಾಗೆ ಆನಂದಿಸಬೇಕಾದರೆ ಮೊದಲು ಬೆಳೆಸಿಕೊಳ್ಳ ಬೇಕಾದುದು ದಪ್ಪ ಚರ್ಮ. ಅದಕ್ಕೆ‌ ಬೇರಾರೂ‌ ಬೇಡ , ಕಮಲರಿಗಿಂತ ದೊಡ್ಡ ‌ಗುರು. ಅವರಿಂದ ಕಲಿಯಿರಿ. ಹತ್ತಿದ್ದು ಅಲ್ಲೆ ಕೊಡವಿಕೊಂಡು ಹೋಗಿ.

ನಿಮ್ಮಮ್ಮ ಹೇಳಿರುವ ಒಂದು ಮಾತು ”ನಿರಾಳವಾಗಿ ಕಂಡರೂ ಕೆಂಡ ಒಳಗೆ” ಅದು ಅಮ್ಮನಷ್ಟೇ ನಮ್ಮೆಲ್ಲರದೂ. ನಿಮ್ಮಮ್ಮನ ಮುಖ ಸದಾ ಅರಳಿದ ತಾವರೆ. ನೋಡಿದರೆ ಈ ರಾಜಕುಮಾರಿಗೆ ಕಷ್ಟವೇ ಇಲ್ಲವೇನೋ ಎನಿಸುವ ಹಾಗೆ . ಅದಕ್ಕಿಂತ ಜೀವಂತ ಆದರ್ಶ ಬೇಕಿಲ್ಲ ಆಕರ್ಷ್,,, ಸುಮ್ಮನೆ‌ ನಡೆಯುತ್ತಿರಿ ಬರೆಯುತ್ತಿರಿ.

ಕಮಲಾ, ಈ ಬರಹ‌ಲೋಕದಲ್ಲಿ ನಿರಾಶ್ರಿತರಾಗಿರುವುದಷ್ಟು ಸುಖ ಬೇರೊಂದಿಲ್ಲ. ನಮ್ಮ ಅವಮಾನ ನಮ್ಮ ಸನ್ಮಾನ ಎರಡಕ್ಕೂ‌ ಹಂಗಿಲ್ಲ. ಎರಡೂ ನಮದೇ ಗಳಿಕೆ. ನನಗೆ‌ ಅದೇ ಇಷ್ಟ. ನಿಮಗೂ‌ ಕೂಡಾ ಅಂದುಕೊಂಡಿರುವೆ . ಏಕಾಂತದಲ್ಲೇಕೆ ? ಯಾರ ಖಾನೇಷುಮಾರಿಯೂ ಅಲ್ಲ, ನಮ್ಮ ಕಣ್ಣು , ನಮ್ಮ ಬಾಯಿ. ಅಳು ಬಂದಾಗ‌ ನಮ್ನಮ್ಮ‌ ಮನೆ‌ ಕದದ‌‌ ಮುಂದೆ ನಿಂತೇ ಅಳೋಣ ಬನ್ನಿ.

-ಲಲಿತಾ ಸಿದ್ಧಬಸವಯ್ಯ

7 comments

  1. ಎಷ್ಟು ಅಕ್ಕರೆ, ಅಂತಃಕರಣದಿಂದ ಬರೆದಿದ್ದೀರ ಲಲಿತಾ…ಅವನಿಗೆ ನಿಮ್ಮಂಥ ಹಿರಿಯ ಕವಿಗಳ ಮಾರ್ಗದರ್ಶನ ಹೀಗೆ ದೊರೆಯಿತಲ್ಲ…ಇದಕ್ಕಿಂತ ಖುಷಿ ಬೇರೇನಿದೆ ? ಅನಂತ ಧನ್ಯವಾದ ನಿಮಗೆ

  2. ನಿಮ್ಮ ಮಾತನ್ನು ತುಂಬಾ ಚೆನ್ನಾಗಿ ಜೋಡಿಸಿರುವಿರಿ.

  3. Eshtu preeti akkare tumbida patra. Innenu beku eega taane hejje haakuttiruva ee putta huduganige thank you madam

  4. ಕಮಲಾ , ಸೋಗಿಲ್ಲದೆ ಹೇಳುತ್ತಿದ್ದೇನೆ , ಆಕರ್ಷ್ ಗೆ ನಿಜವಾದ ಬೆನ್ನುಬಲ‌ ನೀವೇ! ಅದಕ್ಕೆ alternative ಇಲ್ಲ.
    ನಮ್ನಮ್ಮ ಮಕ್ಕಳನ್ನು ಎಂದೂ ತಪ್ಪು‌‌ ಒಪ್ಪುಗಳ ಸಮೇತ ಹೊಟ್ಟೆಗೆ ಹಾಕಿಕೊಂಡು ಸಂತೈಸುವ , ಅವರ ಅತಿ ಪುಟ್ಟ ಯಶಸ್ಸನ್ನೂ ಸಂಭ್ರಮಿಸುವ ಏಕೈಕ ವ್ಯಕ್ತಿಗಳು ‌ನಾವೇ ಯಾವಾಗಲೂ.

  5. ಕಲಾ ಅವರೇ, ಹೌದು . ನನಗೆ ಮಾತುಗಳನ್ನು ‌ಚೆನ್ನಾಗಿ ಜೋಡಿಸಲು ಬರುತ್ತದೆ.

Leave a Reply