ಭಾರತವನ್ನು ಉಳಿಸಿಕೊಟ್ಟ…ಅಂಬೇಡ್ಕರ್ 

ಪ್ರಸಾದ್ ರಕ್ಷಿದಿ

ನಾವು ದಿನದಿಂದ ದಿನಕ್ಕೆ ಅಸಹನೆ ಸಮಾಜವಾಗಿ ಪರಿವರ್ತನೆಯಾಗುತ್ತಿದ್ದೇವೆ. ಎಲ್ಲದರಲ್ಲೂ ಪರ ಮತ್ತು ವಿರೋಧ ಎಂಬ ಎರಡೇ ಗುಂಪುಗಳಾಗುತ್ತಿವೆ. ಎರಡೂ ಅಲ್ಲದೆ ಇರಬಹುದಾದ ಮೂರನೆಯ ಸಾಧ್ಯತೆಯನ್ನೇ ನಿರಾಕರಿಸಲಾಗುತ್ತಿದೆ .

ಇದು ಇಂದು ಬಹುಷಃ ಎಲ್ಲಾ ಪ್ರಜ್ಞಾವಂತರನ್ನೂ ಕಾಡುತ್ತಿರುವ ಸಮಸ್ಯೆ. ಕೆಲವು ವ್ಯಕ್ತಿಗಳನ್ನು ಟೀಕೆಮಾಡುವುದಿರಲಿ ವಿಮರ್ಶಿಸಲೂ ಬಾರದೆಂಬ ಅಲಿಖಿತ ನಿಯಮವೊಂದು ಜಾರಿಗೆ ಬರುತ್ತಿದೆ ಇದೂ ಕೂಡಾ ನಮ್ಮೆಲ್ಲರ ಅನುಭವವೇ ಆಗಿದೆ. ಇದಕ್ಕೆ ಕಾರಣ ನಮ್ಮ ಅನೇಕ ನಾಯಕರನ್ನು, ಮಹಾನ್ ಚೇತನರನ್ನು ಕೆಲವು ವರ್ಗ-ಜಾತಿಗಳು ತಮ್ಮ ಸ್ವತ್ತನ್ನಾಗಿ ಕಾಣುವುದು.

ಇನ್ನು ಕೆಲವರನ್ನು ಉಳಿದವರೇ ಒಂದು ವರ್ಗಕ್ಕೆ ಸೀಮಿತಗೊಳಿಸಿ ನೋಡುವುದು. ಅಂಬೇಡ್ಕರ್ ಅವರ ವಿಚಾರ ಬಂದಾಗ ಅವರನ್ನು ಇತರರೇ ದಲಿತರಿಗೆ ಸೀಮಿತಗೊಳಿಸಿ ನೋಡುತ್ತಿರುವುದನ್ನು ಹೆಚ್ಚಾಗಿ ಕಾಣಬಹುದು.

ಆದರೆ ಮೇಲಿನ ಈ ಸಂಗತಿಗೆ ಇದಿಷ್ಟೇ ಕಾರಣವೆಂದು ನನಗನಿಸುತ್ತಿಲ್ಲ. ಇದರೊಂದಿಗೆ ನಾವು ಬದುಕಿನ ಎಲ್ಲ ವಿಭಾಗಗಳಲ್ಲೂ ಸಹ ಯಾವುದನ್ನೇ ಆಗಲಿ ಸಮಗ್ರವಾಗಿ ನೋಡದೆ ಬಿಡಿಬಿಡಿಯಾಗಿ ನೋಡುವದು ಕೂಡಾ ಕಾರಣವೆನ್ನಿಸುತ್ತದೆ. (ಇರಲಿ ಇದೊಂದು ಬೇರೆಯೇ ವಿದ್ಯಮಾನವಾಗಿದ್ದು ಈ ಸಂದರ್ಭದಲ್ಲಿ ಪ್ರಸ್ತುತವಲ್ಲ)

ಎಲ್ಲ ಮಹಾನ್ ವ್ಯಕ್ತಿಗಳ ಜೀವನವನ್ನು (ಪ್ರಪಂಚದಾದ್ಯಂತ) ಗಮನಿಸಿದರೆ ಅವರೆಲ್ಲರೂ ತಮ್ಮ ಜೀವಿತಾವಧಿಯಲ್ಲಿ ಬೆಳೆಯುತ್ತ ಸ್ವವಿಮರ್ಶೆಗೊಳಪಡುತ್ತ ಅನೇಕಬಾರಿ ತಾವು ಹಿಂದೆ ಹೇಳಿದ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿ ತೀರ್ಮಾನಿಸಿರುವುದನ್ನು ಕಾಣುತ್ತೇವೆ. ಆದರೆ ಇಂದು ಈ ಪರ ವಿರೋಧಿ ಗುಂಪುಗಳು ಅವರು ನಡೆದುಬಂದ ದಾರಿ ಮತ್ತು ನಂತರದ ತೀರ್ಮಾನಗಳನ್ನು ಸಮಗ್ರವಾಗಿ ಗ್ರಹಿಸದೆ, ಯಾವುದೋ ಕಾಲಘಟ್ಟದಲ್ಲಿನ ಅವರ ನಡೆಯನ್ನು ಉಲ್ಲೇಖಿಸುತ್ತಿರುತ್ತಾರೆ.

ಇದರಿಂದ ಸಾಕಷ್ಟು ಗೊಂದಲ ಮತ್ತು ತಪ್ಪು ಗ್ರಹಿಕೆಗಳಾಗುತ್ತಿರುತ್ತದೆ. ಗಾಂಧಿ ಅಂಬೇಡ್ಕರ್, ಕುವೆಂಪು, ವಿವೇಕಾನಂದ, ರವಿಂದ್ರನಾಥ ಟಾಗೋರ್, ಹೀಗೆ ಅನೇಕರ ಬಗ್ಗೆ ನಡೆಯುತ್ತಿರುವ. ಹಾಗೇ ಅನೇಕ ಸಾಹಿತ್ಯ-ಕಾವ್ಯ ಕೃತಿಗಳಬಗ್ಗೆ ಆಗುತ್ತಿರುವ ವಾಗ್ವಾದಗಳಲ್ಲೂ ನಾವಿದನ್ನು ಕಾಣಬಹುದು.

ಇಂದು ಅಧಿಕಾರದಲ್ಲಿರುವವರು ಅಸಹನೆಯನ್ನೇ ಬಿತ್ತಿ ಬೆಳೆದು ಉಣಬಡಿಸುತ್ತಿರುವಾಗ, ಈವಿಚಾರಗಳು ಇನ್ನೂ ಮುಖ್ಯವಾಗುತ್ತದೆ. ಎಲ್ಲ ಮಾನವತಾವಾದಿಗಳನ್ನು, ಜನಪರ ಚಿಂತಕರನ್ನು ಹೈಜಾಕ್ ಮಾಡಿ ಅವರ ಮುಖವಾಡ ತೊಟ್ಟು ನಿಂತಿರುವವರ ಜೊತೆ ಅಂಬೇಡ್ಕರ್ ಅವರ ಅನುಯಾಯಿಗಳು ಎಂದು ಕೊಂಡವರು ಸೇರುತ್ತಿರುವುದು ಇನ್ನಷ್ಟು ಅಪಾಯವನ್ನು ತಂದೊಡ್ಡಿದೆ.

ಗಾಂಧಿ ಮತ್ತು ಅಂಬೇಡ್ಕರ್ ಅವರಿಬ್ಬರ ಭಿನ್ನಾಭಿಪ್ರಾಯಗಳ ಬಗ್ಗೆ ನಾವು ಸಾಕಷ್ಟು ತಿಳಿದಿದ್ದೇವೆ. ಅಂಬೇಡ್ಕರ್ ಅವರಷ್ಟು ತೀಕ್ಷ್ಣವಾಗಿ ಗಾಂಧಿಯನ್ನು ವಿಮರ್ಶೆಗೊಳಪಡಿಸಿದವರು- ಟೀಕಿಸಿದವರು, ಇರಲಾರರು, ಆದರೆ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರಲ್ಲೂ ಕೆಲವು ಸಾಮಾನ್ಯ ಅಂಶಗಳಿದ್ದವು. ಇಬ್ಬರೂ ಅಹಿಂಸೆಯ ಪ್ರಬಲ ಪ್ರತಿಪಾದಕರಾಗಿದ್ದರು.

ಗಾಂಧಿ ಹೊರಗಿನಿಂದ ಅಂದರೆ ಹಿಂಸೆಯನ್ನು ನೋಡಿ ಅಹಿಂಸಾವಾದಿಯಾದರೆ, ಅಂಬೇಡ್ಕರ್ ಒಳಗಿನಿಂದಲೇ ಹಿಂಸೆಯನ್ನು ಅನುಭವಿಸುತ್ತ ಅಹಿಂಸಾವಾದಿಯಾಗಿದ್ದರು. ಇದರಿಂದಾಗಿಯೇ ಅವರು ಕೆಲವುಸಾರಿ ಒಲ್ಲದ ಮನಸ್ಸಿನಿಂದಲೇ ತಮ್ಮ ತೀರ್ಮಾನಗಳನ್ನು ಬಿಟ್ಟುಕೊಟ್ಟಿದ್ದಾರೆ. .

ಈ ಇಬ್ಬರು ವ್ಯಕ್ತಿಗಳ ಸಂಗಮದಂತಿರುವ ವ್ಯಕ್ತಿಯೋರ್ವರಿಂದ ಮುಂದೆ ಹೋರಾಟ ನಡೆಸಿದ್ದು ಭಾರತದಲ್ಲಲ್ಲ ಬದಲಿಗೆ ಗಾಂಧಿ ತನ್ನ ಹೋರಾಟವನ್ನು ಪ್ರಾರಂಭಿಸಿದ ದಕ್ಷಿಣ ಆಫ್ರಿಕಾದಲ್ಲಿ-ನೆಲ್ಸನ್ ಮಂಡೇಲಾರಿಂದ
ಈ ವಿಚಾರಗಳನ್ನು ಮಾತಾನಾಡುವಾಗ ನನ್ನ ಅನೇಕ ಗೆಳೆಯರು ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರಿಗೂ ನೊಬೆಲ್ ಪ್ರಶಸ್ತಿ ಬರಬೇಕಿತ್ತು ಅನ್ನುತ್ತಾರೆ. ಅವರ ಅಭಿಪ್ರಾಯ ಸರಿಯೇ ಆದರೆ ನನ್ನ ಅಭಿಪ್ರಾಯದಲ್ಲಿ ಇವರಿಬ್ಬರೂ ನೊಬೆಲ್ ಪ್ರಶಸ್ತಿಗಿಂತಲೂ ದೊಡ್ಡವರು. ಹಾಗೇನಾದರೂ ಕೊಡಬೇಕೆನ್ನಿಸಿದರೆ, ಸುಡುಮದ್ದಿನ ವ್ಯಾಪಾರಿಯಾಗಿ ಕೊನೆಗೊಂದು ಒಳ್ಳೆಯ ಕೆಲಸ ಮಾಡಿದ ನೊಬೆಲ್‌ಗೆ ಇವರ ಹೆಸರಿನ ಪ್ರಶಸ್ತಿಯನ್ನು ಕೊಡಬಹುದು!

ನಾನೀಗ ನನ್ನ ನಂಬಿಕೆಯ ಪ್ರಕಾರ ಅಂಬೇಡ್ಕರ್ ಅವರ ಎರಡು ಮಹೋನ್ನತ ಕೊಡುಗೆಗಳ ಬಗ್ಗೆ ಹೇಳುತ್ತೇನೆ
ಮೊದಲನೆಯದಾಗಿ ನಮ್ಮ ಎಲ್ಲ ಮೇಲ್‌ವರ್ಗದ ಜನರೂ ಅಂಬೇಡ್ಕರ್ ಅವರ ಬಗ್ಗೆ ನೆನಪಿಡಬೇಕಾದ ಹಾಗೂ ಕೃತಜ್ಞರಾಗಿಬೇಕಾದ ಸಂಗತಿಯೆಂದರೆ. ಒಂದು ವೇಳೆ ಅಂಬೇಡ್ಕರ್ ಅವರು ತಮ್ಮ ಹಿಂದಿರುವ ಬಲುದೊಡ್ಡ ಶೋಷಿತ ಸಮುದಾಯಕ್ಕೆ ಅಹಿಂಸೆಯ ದೀಕ್ಷೆ ನೀಡದಿದ್ದರೆ ಭಾರತದೇಶ ಇಂದು ಒಂದಾಗಿ ಇರುತ್ತಿರಲಿಲ್ಲ.

ಮೇಲ್ವರ್ಗದ ನೆಮ್ಮದಿಯೂ ಕನಸಾಗಿರುತ್ತಿತ್ತು. ಶತಮಾನಗಳಿಂದ ನೋವು ಅವಮಾನಗಳನ್ನು ಅನುಭವಿಸಿದ ಜನಾಂಗಗಳು ಎಲ್ಲವನ್ನೂ ಭೂಮಿತಾಯಿಯಂತೆ ಸಹಿಸಿಕೊಂಡು ಇಂದೂ ಅಹಿಂಸಾತ್ಮಕವಾಗಿಯೇ ಇದ್ದರೆ, ಇದರ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಸಹಿಷ್ಣುತೆ, ಮಾನವೀಯತೆ, ದೂರದೃಷ್ಟಿ ಇದೆ. ಆ ಕಾರಣಕ್ಕಾಗಿಯಾದರೂ ನಾವಿಂದು ಅಂಬೇಡ್ಕರ್ ಅವರಿಗೆ ಕೃತಜ್ಞತಾರೂಪವಾಗಿ ಸಮಾನತೆಯ ಸಮಾಜದ ಅಗತ್ಯದ ಮನಗಾಣಬೇಕು.

ಎರಡನೆದಾಗಿ, ಅಂಬೇಡ್ಕರ್ ಅವರಿಗೆ ಕೊನೆಗೆ ಏನೇ ಆದರೂ ಭಾರತದ ಈ ಹಿಂದೂ ಸಮಾಜ ತಮ್ಮ ಸಮುದಾಯವನ್ನು ಮನುಷ್ಯರನ್ನಾಗಿ ಕಾಣಲಾರರು ಅನ್ನಿಸತೊಡಗಿತ್ತು. ತಮ್ಮ ಹಿಂದಿದ್ದ ದೊಡ್ಡ ಜನ ಸಮುದಾಯದ ಅಸ್ಮಿತೆಯನ್ನು ಕಾಪಾಡುತ್ತ ಅವರನ್ನು ಮಾನವರನ್ನಾಗಿ ಪರಿಗಣಿಸುವಂತ ಸಮಾಜದ- ಧರ್ಮದ ಅವರ ಹುಡುಕಾಟ ನಿರಂತರವಾಗಿತ್ತು, ಅಂತಿಮವಾಗಿ ಅವರು ತೀರ್ಮಾನಿಸಿದ್ದು ಬೌಧ್ಧದರ್ಮದತ್ತ ಪಯಣ.

ಆದರೆ ನನಗೆ ಅನ್ನಿಸುತ್ತಿರುವುದು ಅಂಬೇಡ್ಕರ್ ಅವರ ಎರಡು ಮಹೋನ್ನತ ಕೆಲಸಗಳಲ್ಲಿ ಅತಿ ಮುಖ್ಯವಾದದ್ದೆಂದು ನಾನು ಭಾವಿಸುವ ಈ ನಡೆಯಲ್ಲಿ ಅವರು ಬುದ್ಧಧಮ್ಮದತ್ತ ಸಾಗಲಿಲ್ಲ ಬದಲಿಗೆ ನಾವು ನಮ್ಮೊಳಗಿನಿಂದ ಓಡಿಸಿದ-ಕಳೆದುಕೊಂಡ ಬುದ್ಧನನ್ನು ಮರಳಿ ಕರೆತಂದುಕೊಟ್ಟರು. ಎಲ್ಲ ಅರಿವಿನಿಂದ, ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳದ, ಪ್ರಬುದ್ಧರಾಗುವ ಅವಕಾಶವನ್ನು ಎಲ್ಲರಿಗೂ ಸಮಾನವಾಗಿ ನೀಡುವ ಬುದ್ಧನನ್ನು ದೊರಕಿಸಿಕೊಟ್ಟರು. (ಪ್ರಶ್ನಿಸುವುದೇ ಅಪರಾಧವಾಗಿರುವ ಈದಿನಗಳಲ್ಲಿ ಇದು ಬಹಳ ಮುಖ್ಯ)

ಇಂದು ಬುದ್ಧದಮ್ಮವೂ ಕೂಡಾ ಇತರ ಧರ್ಮಗಳಂತೆ ಹಲವು ರೀತಿಯಲ್ಲಿ ಕಲುಷಿತವಾಗಿ ಹೋಮ ಹವನ ಮಾಡುವ, ಮೂಢ ನಂಬಿಕೆಗಳನ್ನು ಗಾಢವಾಗಿ ಅಪ್ಪಿಕೊಂಡಿರುವ ಪಂಥಗಳಾಗಿ ಒಡೆದಿವೆ. ಬುದ್ಧನ ಕಾಲಾನಂತರ ಹಲವು ಶತಮಾನಗಳ ಕಾಲ ಬುಧ್ಧನ ಮೂರ್ತಿಯೇ ಇರಲಿಲ್ಲ ಬುದ್ಧನನ್ನು ಸಂಕೇತಗಳಲ್ಲಿ ಪೂಜಿಸಲಾಗುತ್ತಿತ್ತು, ನಿಧಾನವಾಗಿ ಬುದ್ಧನನ್ನೂ ಆಲಯಗಳಲ್ಲಿ ಬಂಧಿಸಲಾಯಿತು.

ಇಂದು ಈಗಾಗಲೇ ನಾವು ಅಂಬೇಡ್ಕರ್ ದೇವಾಲಯವನ್ನು ಕಟ್ಟಿ ಅರ್ಚಕನ್ನು ನೇಮಿಸಿದ್ದೇವೆ. ಆದ್ದರಿಂದ ಗೆಳೆಯರೆ ನಮಗೆ ಬೇಕಾಗಿರುವದು, ಅವೆಲ್ಲದರಿಂದ ಬೇರೆಯಾದ, ಅಂಬೇಡ್ಕರ್ ನಮಗೆ ದೊರಕಿಸಿಕೊಟ್ಟಿರುವ ಪ್ರಖರ ವಿಚಾರವಾದಿ ಬುದ್ಧ, ಬಯಲಿನಲ್ಲಿರುವ ಬುದ್ಧ. ಸ್ಥಾವರನಲ್ಲ- ನಮ್ಮನ್ನು ಬೆಳಕಿನತ್ತ ಕರೆದೊಯ್ಯಬಲ್ಲ ಜಂಗಮ ಬುಧ್ಧ.

ಬುದ್ಧನ ಬೆಳಕಿನಲ್ಲಿ ನಾವೆಲ್ಲ ಪ್ರಬುದ್ಧರಾಗಲು ಪ್ರಯತ್ನಿಸುವುದೇ ಅಂಬೇಡ್ಕರ್ ಅವರಿಗೆ ನಾವು ಸಲ್ಲಿಸಬಹುದಾದ ಅತಿ ದೊಡ್ಡ ಗೌರವ.

Leave a Reply