ಚುನಾವಣೆಯ ತುಂಬಾ ಹರಕು ಬಾಯಿಯವರು…

ನಮಸ್ಕಾರ ಫ್ರೆಂಡ್ಸ್…

ಎರಡನೇ ಸುತ್ತಿನ ಚುನಾವಣೆ ಅಖಾಡಕ್ಕೆ ರಂಗ ಸಜ್ಜಾಗಿರುವ ಬೆನ್ನಲ್ಲೇ ಪ್ರಶ್ನೆಗಳ ಮಹಾಪೂರ ಎದುರಾಗಿದೆ. ವಿದ್ಯಮಾನಗಳು ಮುಖಾಮುಖಿಯಾಗತೊಡಗಿವೆ.

ಸಾರ್ವಜನಿಕ ಬದುಕಲ್ಲಿ ರಾಜಕೀಯ ಪಕ್ಷಗಳು, ಅದರ ನಾಯಕರು ನಡೆದುಕೊಳ್ಳಬೇಕಾದ ರೀತಿ ನೀತಿ, ಜನ ಏನು ಅಂದುಕೊಳ್ಳಬಹುದು ಎಂಬ ಬಗ್ಗೆ ವಿವೇಚನೆ, ಸ್ವಲ್ಪವಾದರೂ ನಾಚಿಕೆ, ಮಾನ, ಮರ್ಯಾದೆ ಇದೆಯೇ ಎಂಬ ಬಗ್ಗೆ ಕಿಂಚಿತ್ತಾದರೂ ಹೇಳಬೇಕು.

ದೊಡ್ಡ ದೊಡ್ಡ ಸಭೆಗಳಲ್ಲಿ ಶಕ್ತಿ ಪ್ರದರ್ಶನ ನಡೆಸಿ ಮೌಲ್ಯಾಧಾರಿತ ರಾಜಕೀಯದ ಪುರಾಣ ಹೇಳೋದು ಏನು? ವಾಸ್ತವದಲ್ಲಿ ಮಾಡೋದೇನು?
ಮೊನ್ನೆ ನೋಡಿ, ಬೆಂಗಳೂರು ದಕ್ಷಿಣ ವಿಧಾನ ಸಭೆ ಕ್ಷೇತ್ರದ ಅಭ್ಯರ್ಥಿ ಎಂದು ತೇಜಸ್ವಿ ಸೂರ್ಯ ಎಂಬ “ಮಿನಿ ಅನಂತ್ ಕುಮಾರ್ ಹೆಗಡೆ “ ಹೆಸರನ್ನು ಘೋಷಿಸಿದ್ದೆ ತಡ ಆತನ ಲೀಲೆಗಳ ಬಗ್ಗೆ ಪುಂಖಾನುಪುಂಖವಾಗಿ ವರದಿಗಳು ಬರತೊಡಗಿದವು. ತನ್ನ ಗೆಳೆತಿಯರ ಬಗ್ಗೆ ಆತನ ವರ್ತನೆಗಳು, ಹೆಂಗಸರ ಕಾಮೋದ್ರೇಕ ಕುರಿತು ಆತನ ಅವಹೇಳನಕಾರಿ ಮಾತುಗಳು ರಾರಾಜಿಸತೊಡಗಿದವು.

ಆತನ ಮಾಜಿ ಗೆಳೆತಿಯರು ಈತ ಒಬ್ಬ ಅಪಾಯಕಾರಿ ಎನ್ನತೊಡಗಿದರು. ಈ ವ್ಯಕ್ತಿ ಹೆಣ್ಣು ಮಕ್ಕಳನ್ನು ಕ್ಷುಲ್ಲಕವಾಗಿ ನಡೆಸಿಕೊಳ್ಳುವ ಬಗ್ಗೆ ಹೇಳತೊಡಗಿದರು.

ಅಷ್ಟೆ ಅಲ್ಲ ಕರ್ನಾಟಕದಲ್ಲಿ ಹಿಂದೀ ಭಾಷೆ ಹೇರಿಕೆ ವಿಚಾರದಲ್ಲಿ ಈ ವ್ಯಕ್ತಿ ತಳೆದ ಕನ್ನಡ ವಿರೋಧಿ ನಿಲುವು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಈ ಅಭ್ಯರ್ಥಿ ಬಹಿರಂಗವಾಗಿ ಕಾರಿಕೊಂಡಿದ್ದ ಅಸಮಾಧಾನ ಇವೆಲ್ಲ ಚುನಾವಣೆ ವೇಳೆಯಲ್ಲಿ ಕಾಡತೊಡಗಿದ್ದು ಇದು ಬಿಜೆಪಿ ನಾಯಕರನ್ನು ಬೆಚ್ಚಿಬೀಳಿಸಿತು.
ಭಾರಿ ಒತ್ತಡ, ಚಡಪಡಿಕೆ, ಕನಸುಗಳನ್ನು ತನ್ನ ಒಡಲಾಳದಲ್ಲಿ ಹೊತ್ತಿರುವ ಬೆಂಗಳೂರಿಗೆ ಇಂಥ ಬೆಂಕಿ ಉಗುಳುವ ವ್ಯಕ್ತಿ ಬೇಕೆ? ಎಂಬುದನ್ನು ಈತನಿಗೆ ಟಿಕೆಟ್ ಕೊಟ್ಟ ಬಿಜೆಪಿ ನಾಯಕರಾದ ಸಂತೋಷ್ ಮತ್ತು ಆರೆಸಸ್ ನಾಯಕರಾದ ಮುಕುಂದ್ ಯೋಚಿಸಬೇಕಿತ್ತು.

ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸೋದು ಅವರ ತಂತ್ರ ವಿದ್ದಿದ್ದರೆ ಅದು ಅವರ ಪಕ್ಷದ ಗೋಳು ಎಂದುಕೊಂಡು ಸುಮ್ಮನೆ ಇರಬಹುದಿತ್ತು. ಆದರೆ ತೇಜಸ್ವಿ ಸೂರ್ಯ ಒಂದು ರಾಷ್ಟ್ರೀಯ ಪಕ್ಷದ ಕ್ಯಾಂಡಿಡೇಟ್. ಇವರೇ ಅಭ್ಯರ್ಥಿ ಆಗಬೇಕೆಂದು ಬಿಜೆಪಿ ಪಟ್ಟು ಹಿಡಿದರೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಿತ್ತು. ಹಾಗಲ್ಲ ಹೀಗೆ ಎಂದು ಮತದಾರರ ಮುಂದೆ ಅವರ ಸಕಾರಾತ್ಮಕ ಗುನಾವಲೋಕನ ಮಾಡಬೇಕಿತ್ತು.

ಅದ್ಯಾವುದೂ ಮಾಡದೆ ರಾಷ್ಟ್ರೀಯ ಪಕ್ಷದ ಈ ಅಭ್ಯರ್ಥಿ ಇದೆಲ್ಲ ಪ್ರಕಟಿಸಿದ ಮಾಧ್ಯಮ ಸ್ವಾತಂತ್ರವನ್ನು ಹತ್ತಿಕ್ಕುವ ಆದೇಶವನ್ನು ನ್ಯಾಯಾಂಗದಿಂದ ತರುವ ಮಟ್ಟಿಗೆ ಪ್ರದರ್ಶಿಸಿದ ದಾರ್ಷ್ಟ್ಯ ಇದೆಯಲ್ಲ..ಅದೀಗ ಚರ್ಚೆಯ ವಿಚಾರವಾಗಿದೆ.

ಈ ಚುನಾವಣೆಯ ಅಖಾಡದಲ್ಲಿ ಹೆಣ್ಣುಮಕ್ಕಳು, ಪತ್ರಿಕಾ ಸ್ವಾತಂತ್ರ, ಸಾರ್ವಜನಿಕ ಸೇವೆಯ ಕಳಕಳಿ, ಇಲ್ಲಿಯ ನೆಲ, ಭಾಷೆ ವಿಚಾರಗಳಿಗೆ ಬೆಲೆಯೇ ಇಲ್ಲವೇ? ಭಾವನಾತ್ಮಕ ವಿಚಾರಗಳನ್ನು ಬಿತ್ತಿ, ತಕ್ಷಣ ಓಟಿನ ಫಸಲು ಪಡೆಯುವ ತಂತ್ರಕ್ಕಷ್ಟೆ ಪ್ರಾಮುಖ್ಯತೆಯೇ?

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರೊಬ್ಬರನ್ನೆ ಗುರಿಯಾಗಿಟ್ಟು ಟೀಕಿಸುವುದು ನನ್ನ ಉದ್ದೇಶವಲ್ಲ. ಇದು ಸ್ಯಾಂಪಲ್ ಮಾತ್ರ. ಇವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿ, ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡದಿರುವ ಬಗ್ಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನು ಪ್ರಶ್ನಿಸಿದರೆ ಅವರು ತಾಳ್ಮೆಯಿಂದ ಉತ್ತರಿಸಬಹುದಿತ್ತು. ಚುನಾವಣೆ ರಾಜಕಾರಣದಲ್ಲಿ ಇವೆಲ್ಲ ಸಹಜ ಎಂದು ಹಾರಿಸಬಹುದಿತ್ತು.

ಇದಕ್ಕಾಗಿ ಈ ಮಹಾನುಭಾವರು ಜೀವಶಾಸ್ತ್ರದ ಮೊರೆಹೊಕ್ಕರು.“ಮಾನವನ ಜೀನ್ಸ್ , ಡಿ ಎನ್ ಎ ನೋಡಿ ಟಿಕೆಟ್ ನೀಡುವುದಿಲ್ಲ ‘ ಎಂದು ಹೇಯ ವ್ಯಂಗ್ಯವನ್ನು ಮಾಡಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಅವಮಾನ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದರು. ಒಂದು ಹೆಣ್ಣುಮಗಳ ಬಗ್ಗೆ ಅದರಲ್ಲೂ ಬಿಜೆಪಿ ನಾಯಕರಿಂದ ಇಂಥ ಉತ್ತರ.!!..ಇದು ಸರಿಯೇ?

ಜೀನ್ಸ್ , ಡಿ ಏನ್ ಎ ಹುಡುಕೋದು ಕುದುರೆ ರೇಸ್ ನಲ್ಲಿ. ಕುದುರೆಗಳ ತಂದೆ ತಾಯಿ ಹುಡುಕಿ ಅದರ ಗೆಲ್ಲುವ ಸಾಮರ್ಥ್ಯದ ಅಂದಾಜು ಮಾಡಿ ಜೂಜು ಕಟ್ಟುವ ಪದ್ಧತಿ ಕುದುರೆ ರೇಸ್ ನಲ್ಲಿ ಇದೆ. ಬೆಂಗಳೂರು ದಕ್ಷಿಣದ ಅಖಾಡವನ್ನು ಕುದುರೆ ರೇಸ್ ಎಂದು ಭಾವಿಸಲಾಗಿದೆಯಾ ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರು?

ಇಷ್ಟೆಲ್ಲವನ್ನೂ ಯಾಕೆ ಹೇಳಿದೆ ಎಂದರೆ ಚುನಾವಣೆ ರಾಜಕೀಯದಲ್ಲಿ ಒಲವು ನಿಲುವು ಏನೇ ಇರಲಿ. ಎಲ್ಲದಕ್ಕೂ ಸಂವಿಧಾನ ಇರುತ್ತೆ. ಕಾನೂನು ಇದೆ. ಚುನಾವಣೆ ಆಯೋಗ ಇದೆ. ಚುನಾವಣೆ ಅಖಾಡದಲ್ಲಿ ಹೇಳಿಕೆಯನ್ನು ನೀಡುವಾಗ ಜವಾಬ್ದಾರಿ ಇರಬೇಕು. ಅದರಲ್ಲೂ ಮಹಿಳೆಯರ ಬಗ್ಗೆ, ಜಾತಿ , ಧರ್ಮ, ಭಾವೈಕ್ಯತೆಯ ಬಗ್ಗೆ ನಾಯಕರು ಬೇಕಾಬಿಟ್ಟಿ ಹೇಳಿಕೆ (hate speech)ನೀಡಿದರೆ ಅದಕ್ಕೆಂತಲೆ ಪ್ರತ್ಯೇಕ ಕಾಯ್ದೆಗಳೆ ಇವೆ.
ಅಷ್ಟೆ ಏಕೆ? ಈ ಬಾರಿಯಂತೂ ಅಭ್ಯರ್ಥಿಗಳು ತಮ್ಮ ಮೇಲಿರುವ ಪೊಲೀಸ್ ದೂರು, ಮೊಕದ್ದಮೆಗಳ ಬಗ್ಗೆ ಚುನಾವಣೆ ಆಯೋಗಕ್ಕೆ ತಿಳಿಸುವುದು , ಬಹಿರಂಗ ಪಡಿಸುವುದು ಕಡ್ಡಾಯ ಮಾಡಿದೆ. ಹೀಗಾಗಿ ಈ ಎಲ್ಲಾ ನೀತಿ ಸಂಹಿತೆ ಚುನಾವಣೆ ಅಖಾಡದಲ್ಲಿ ಪರಿಪಾಲನೆ ಆಗುತ್ತಿದೆಯೇ ಎನ್ನುವುದೇ ನನ್ನ ಪ್ರಶ್ನೆ.

ಇನ್ನು ರಾಷ್ಟ್ರೀಯತೆಯ ಸ್ಲೋಗನ್ ವಿಚಾರಕ್ಕೆ ಬರೋಣ. ರಾಷ್ಟ್ರೀಯತೆ ಎನ್ನುವುದು ಸಮೂಹ ಸನ್ನಿಯೆಂಬಂತೆ ಬಿಂಬಿತವಾಗಿದೆ. ಒಂದು ಪಕ್ಷದ ನಾಯಕನನ್ನು ಬೆಂಬಲಿಸುವುದೇ ರಾಷ್ಟ್ರೀಯತೆ ಎಂಬ ಹೊಸ ವ್ಯಾಖ್ಯಾನ ನೀಡಿ ದೇಶಭಕ್ತಿ, ದೇಶಪ್ರೇಮಕ್ಕೆ ಹೊಸ ಸ್ವರೂಪ ನೀಡುವ ಹೇಳಿಕೆಗಳು
ನಾಲಿಗೆಯ ಮೇಲೆ ಲಗಾಮಿಲ್ಲದೆ ಹರಿದಾಡತೊಡಗಿವೆ. ವಿಶೇಷವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಇದು ವಿಜೃಂಭಿಸುತ್ತಿದೆ. ರಾಷ್ಟ್ರೀಯತೆ ಬಗ್ಗೆ ಇತ್ತೀಚೆಗೆ ಹಿರಿಯ ಪತ್ರಕರ್ತ ಎನ್.ಎಸ್. ಶಂಕರ್ ‘ವಾರ್ತಾ ಭಾರತಿ ‘ ದೈನಿಕದ ಚುನಾವಣೆ ಚರ್ಚೆಯಲ್ಲಿ ಅತ್ಯಂತ ಸಮರ್ಪಕವಾಗಿ ಮನದಟ್ಟು ಮಾಡಿದ್ದಾರೆ.

ಇದರ ಜೊತೆಗೆ ಒಂದು ಅಂಶವನ್ನು ನಾನು ಸೇರಿಸುತ್ತೇನೆ. ಸಿಲಿಕಾನ್ ಸಿಟಿ ಬೆಂಗಳೂರಿಗರ ಬದುಕಿನ ಸೌಂದರ್ಯವೆ ಅಪ್ಪಟ ರಾಷ್ಟ್ರೀಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎನ್ನುವುದು ಈ ವ್ಯಕ್ತಿಗಳಿಗೆ ಏಕೆ ಅರ್ಥವಾಗುತ್ತಿಲ್ಲ.? ಕನ್ನಡ, ತೆಲುಗು, ತಮಿಳು, ಮರಾಠಿ, ಮಲೆಯಾಳಂ, ಹಿಂದೀ, ಇಂಗ್ಲಿಷ್, ಅಸ್ಸಾಮಿ, ಒರಿಯಾ ಮೊದಲಾದ ಭಾಷಿಕರಿಂದ ಮಹಾನಗರಿ ಬೆಂಗಳೂರು ಮಹಾನದಿಯಂತೆ ಹರಿಯುತ್ತಿದೆ. ಇಡೀ ಬೆಂಗಳೂರೇ ಒಂದು “ಮಿನಿ ಭಾರತ“ ವೆ ಆಗಿದೆ. ಇಲ್ಲಿ ವಿವಿಧ ರಾಜ್ಯದ ಜನ ಕನಸು ಕಟ್ಟಿ ಅಪ್ಪ, ಅಮ್ಮ, ಮಕ್ಕಳು ಮರಿಗಳ ಜೊತೆ ನೆಮ್ಮದಿ, ಪ್ರೀತಿಯ ಬದುಕು ಸಾಗಿಸುತ್ತಿದ್ದಾರೆ.

ಇದಕ್ಕಿಂತ ಭಾವೈಕ್ಯತೆ, ಇದಕ್ಕಿಂತ ರಾಷ್ಟ್ರೀಯತೆ ಇನ್ನೊಂದಿಲ್ಲ. ರಾಷ್ಟ್ರೀಯತೆಯ ಪಾಠವನ್ನು ಬೆಂಗಳೂರು ಜನ ಯಾರಿಂದಲೂ ಕಲಿಯಬೇಕಿಲ್ಲ.
ಆದರೆ ರಾಷ್ಟ್ರೀಯತೆ ಹೆಸರಲ್ಲಿ ಭಾವೈಕ್ಯತೆಗೆ ಧಕ್ಕೆ ತರುತ್ತಿರುವ ವ್ಯಕ್ತಿಗಳ ವಿರುದ್ಧ ಚುನಾವಣೆ ಆಯೋಗ ಕ್ರಮ ಜರುಗಿಸುವುದು ಈಗ ಅನಿವಾರ್ಯ ಎನ್ನುವುದಕ್ಕೆ ಇಷ್ಟೆಲ್ಲ ಹೇಳಬೇಕಾಗಿ ಬಂತು.

ಇಂಥ ಕೆಟ್ಟ ಮನಸ್ಥಿತಿಗಳು ಯಾವ ಮಟ್ಟಿಗೆ ಪೈಪೋಟಿ ನಡೆಸಿವೆ ಅಂದರೆ ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಇದರ ನಾಯಕತ್ವ ವಹಿಸಿದಂತೆ ಕಾಣುತ್ತಿದ್ದಾರೆ. ಮುಸ್ಲಿಮರ ರಾಷ್ಟ್ರೀಯತೆ ಬಗ್ಗೆ ಕೆರಳಿಸುವ ಹೇಳಿಕೆ ನೀಡಿದ ಈಶ್ವರಪ್ಪ ಈ ಸಮುದಾಯ ಬಿಜೆಪಿ ಕಚೇರಿಗೆ ಬಂದು ಕಸ ಗುಡಿಸಲಿ ಎಂದು ಹೀಯಾಳಿಸಿದರು. ಕ್ರಿಶ್ಚಿಯನ್ ಸಮುದಾಯದ ಬಗ್ಗೆ ಮಾತನಾಡಿ ಭಾರತಕ್ಕೆ ಅವರ ಬದ್ಧತೆಯನ್ನು ಪ್ರಶ್ನಿಸಿದರು. ಇಡೀ ಸಮುದಾಯಗಳನ್ನು ಜಾತಿ, ಧರ್ಮದ ಮೇಲೆ ವಿಂಗಡಿಸಿ ಅಪಮಾನಿಸುವ ಈ ಹೇಳಿಕೆಗೆ ಏನೆನ್ನಬೇಕು? ಅಲ್ಪಸಂಖ್ಯಾತರು ತಮ್ಮ ರಾಷ್ಟ್ರೀಯತೆಯನ್ನು ಸಾಬೀತು ಮಾಡಲು ಈಶ್ವರಪ್ಪ ಬಳಿ ಪ್ರಮಾಣ ಪತ್ರ ಪಡೆಯಬೇಕೆ?

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು ಹಾಕಿರುವ ಶಾಸಕ ಸಿ.ಟಿ. ರವಿ ಅವರಂತೂ ಮೋದಿ ನಾಯಕತ್ವ ಒಪ್ಪದ, ಬಿಜೆಪಿಗೆ ಮತ ಚಲಾಯಿಸದವರನ್ನು” ತಾಯಿಗಂಡರು “ ಎಂದು ಹೀನಾಯವಾಗಿ ಟೀಕಿಸಿದ್ದಾರೆ. ಇದನ್ನು ಚುನಾವಣೆ ಆಯೋಗ ಸುಮ್ಮನೆ ನೋಡಿಕೊಂಡು ಕೂರುವುದಿಲ್ಲ ಎಂದು ನಾನಂತೂ ಭಾವಿಸಿದ್ದೇನೆ.

ಇನ್ನೂ ಬರೀ ಬಿಜೆಪಿಯೇ ಎಲ್ಲದ್ದಕ್ಕೂ ಹೊಣೆ ಎನ್ನುವುದು ಸರಿಯಲ್ಲ. ಅಧಿಕಾರದ ದುರಾಸೆ, ಶತಾಯಗತಾಯ ಗದ್ದುಗೆ ಗೆಲ್ಲಬೇಕೆಂಬ ಜಿದ್ದು ಮನುಷ್ಯತ್ವವನ್ನೇ ಮರೆಸುತ್ತದೆ ಎನ್ನುವುದಕ್ಕೆ ಮಂಡ್ಯ ಹಣಾಹಣಿ ಸಾಕ್ಷಿ. ತಲೆ ಎತ್ತಿ ತನ್ನ ಸ್ವಂತಿಕೆಯನ್ನು ಪ್ರತಿಷ್ಠಾಪಿಸಲು ಬಯಸುವ ಹೆಣ್ಣುಮಕ್ಕಳು ಎಂಥ ಟೀಕೆಗಳಿಗೆ ಗುರಿಯಾಗಬೇಕಾಗುತ್ತದೆ ಎಂದರೆ ಪಕ್ಷೇತರ ಅಭ್ಯರ್ಥಿ ಸುಮಲತಾ ಬಗ್ಗೆ ನಿಂಬೆಹಣ್ಣು ರೇವಣ್ಣ ಹೇಳಿದ್ದು ಎಲ್ಲರಿಗೂ ಗೊತ್ತೇ ಇದೆ.

ಇನ್ನು ಕೆಲವು ವರ್ಷಗಳ ಹಿಂದೆ ತನ್ನ ಚುನಾವಣೆ ಒಂದರ ಪ್ರಚಾರದಲ್ಲಿ ಅರೆ ನಗ್ನ ಹೆಣ್ಣಿನ “ನಂಗಾನಾಚ್ “ಏರ್ಪಡಿಸಿ ಮತಯಾಚನೆ ಮಾಡಿದ್ದ ಶಿವರಾಮೇಗೌಡ ಈ ಚುನಾವಣೆಯಲ್ಲಿ ಸುಮಲತಾ ಅವರನ್ನು ಅಪಮಾನಿಸುವ ನಾಯಕತ್ವ ವಹಿಸಿದ್ದಾರೆ. ಅವರನ್ನು ಮಾಯಾಂಗನೆ ಎಂದು ನಿಂದಿಸಿದ್ದಾರೆ. ಇದು ಟೀಕೆ ಅಷ್ಟೆ ಅಲ್ಲ..ಮಾನಸಿಕ ಹಿಂಸೆಗೆ ಸಮ. ಹೀಗೆ ಹೇಳುತ್ತಾ ಹೋದರೆ ಅಖಾಡದಲ್ಲಿ ಕೆಟ್ಟ ಮನಸ್ಥಿತಿಯ ಉದಾಹರಣೆ ಹೆಚ್ಚಾಗುತ್ತಲೇ ಹೋಗುತ್ತಿವೆ.

ಏನೇ ಇದ್ದರೂ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಅದರಲ್ಲೂ ಚುನಾವಣೆ ಸಂದರ್ಭದ ಇಂಥ ಅವಾಂತರ ಹತ್ತಿಕ್ಕಲೆಂದೆ ಪ್ರತ್ಯೇಕ ಕಾಯಿದೆಗಳು ಇವೆ. ಸೌಹಾರ್ದತೆಗೆ ಧಕ್ಕೆ ತಂದರೆ ಐಪಿಸಿ 153 (a), ರಾಷ್ಟ್ರೀಯ ಭಾವೈಕ್ಯತೆ ಧಕ್ಕೆ ತಂದರೆ 153 (b), ಇದೆ. ಇದನ್ನು ಇನ್ನಷ್ಟು ಬಿಗಿ ಮಾಡಲು ಐ ಪಿಸಿ 153(c) ಜಾರಿಗೆ ತನ್ನಿ ಎಂದು ಲಾ ಕಮಿಷನ್ ಶಿಫಾರಸು ಮಾಡಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದರೆ, ಅಪಮಾನ ಮಾಡಿದರೆ ಕ್ರಮ ಕೈಗೊಳ್ಳಲು ಅದಕ್ಕೂ ಕಾಯಿದೆ ಇದೆ. ಪ್ರಚೋದನೆ, ಭಾವೈಕ್ಯತೆಗೆ ಮಿತಿ ಮೀರಿ ಧಕ್ಕೆ ಆದರೆ ಅಂಥವರನ್ನು ಚುನಾವಣೆ ಅಖಾಡದಿಂದ ಹೊರದಬ್ಬಲೂ ಕಾನೂನಿನಲ್ಲಿ ಅವಕಾಶವಿದೆ.

ಚುನಾವಣೆ ಆಯೋಗದ ಮೂಗಿನ ಕೆಳಗೆ ಇಷ್ಟೆಲ್ಲಾ ನಡೆದಿದ್ದು ಯಾವ ಕ್ರಮವನ್ನೂ ಆಯೋಗ ಜರುಗಿಸಲಿದೆ ಎನ್ನುವುದು ಕುತೂಹಲಕಾರಿ. ಆಯೋಗ ತಡ ಮಾಡಬಾರದು ಎನ್ನುವುದು ಹಲವರ ವಿನಂತಿ. ಯಾರ ಮೇಲೆ ದ್ವೇಷಕ್ಕಾಗಲಿ, ಇಲ್ಲವೇ ಪೂರ್ವಾಗ್ರಹ ಪೀಡಿತರಾಗಿ ಆಗಲಿ ಇದನ್ನು ವಿಶ್ಲೇಷಣೆ ಮಾಡಿಲ್ಲ. ಜನ ತಮಗೆ ಬೇಕಾದ್ದನ್ನು ತೀರ್ಮಾನಿಸುತ್ತಾರೆ.

ಚುನಾವಣೆ ಪ್ರಜಾಸತ್ತೆಯ ಮಹಾಹಬ್ಬ. ಇದು ಪ್ರಜಾಸತ್ತೆಯ ಸೌಂದರ್ಯ. ಈ ಸೌಂದರ್ಯ ಯಾವತ್ತೂ ವಿರೂಪ ಆಗಬಾರದು. ಅಷ್ಟೆ.

1 comment

  1. ಚುನಾವಣೆಯ ತುಂಬಾ ಹರಕು ಬಾಯಿಯವರು ……
    ಸರಿಯಾಗಿ ಹೇಳಿದೀರಾ, ಸೂಪರ್ ವಿಶ್ಲೇಷಣೆ,

Leave a Reply