ನನ್ನ ಪ್ರೀತಿಯ ಗುಡ್ಡೆಮನೆ ಬಾಗಿಲಿಕ್ಕಿಕೊಂಡಿದೆ..

ವಿಶು ಹಬ್ಬದ ಆ ಸಂಭ್ರಮ

ಶ್ಯಾಮಲಾ ಮಾಧವ 

ಸುಡುಬಿಸಿಲ ಬೇಗೆಯಲ್ಲೂ ತಂಪೆರೆವ ವಿಶುಹಬ್ಬದ ಸಂಭ್ರಮ, ಬಾಲ್ಯದಿಂದಲೂ ಕೂಡಿಟ್ಟ ಮಧುರ ಬಾಂಧವ್ಯದ ಸವಿನೆನಪು.

ವಿಶು ಹಬ್ಬಕ್ಕಾಗಿ ಸಾರಿಸಿ ಸ್ವಚ್ಛವಾಗಿಸಿದ ಮನೆ, ಅಂಗಣ! ಚಂದನವರೆದು ಹಚ್ಚಿ ಸಿಂಗಾರವಾಗಿಸಿದ ಒಲೆ, ಮಣೆ, ದೇವರ ಹಲಗೆ, ಇತರ ಪರಿಕರಗಳು. ಎರಡಡಿ ಅಗಲ ಉದ್ದದ  ಸಾಣೆಕಲ್ಲಿನಲ್ಲಿ ಚಂದನವರೆವ ಮೋಡಿ.

ಮುಸ್ಸಂಜೆಗೆ “ಬೊಲ್ದುಲೇ”, ಎನ್ನುತ್ತಾ ಬಂದ ಚಂದ್ರು, ಕೊರತಿಯರು ಬಾವಿಕಟ್ಟೆಯೆದುರಿಗೆ ಬಚ್ಚಲ ಪಕ್ಕದಲ್ಲಿ ಸೋಗೆಸೂಡಿ ಹೊತ್ತಿಸಿ ನಮ್ಮದೇ ಮರದ ರಾಶಿ ಗೇರುಬೀಜಗಳನ್ನು ಸುಡುವ ಕಡುಕಂಪು. ಹೊತ್ತಿಕೊಂಡು ಸೀದು ಟಪ್ಪನೆ ಒಡೆವ ಗೇರುಬೀಜಗಳು ಕಣ್ಣಿಗೆ, ಮೈಗೆ ರಟ್ಟುವ ಅಪಾಯವೆಂದು ಸುತ್ತ ನೋಡುತ್ತಾ ನಿಲ್ಲುವ ನಮ್ಮನ್ನು ದೂರ, ದೂರ ಎಂದು ಓಡಿಸುವ ಹಿರಿಯರು.

ಸುಟ್ಟ ಬೀಜದ ಕಂಪಿನೊಡನೆ ಸ್ಪರ್ಧಿಸುವಂತೆ ತುಳಸೀಕಟ್ಟೆಯಲ್ಲಿ ಬುಟ್ಟಿಯಲ್ಲಿರಿಸಿದ ಮಂಗಳೂರು ಮಲ್ಲಿಗೆ ಚೆಂಡಿನ ಘಮ! ಅಂಗಳದ ಸುತ್ತ ಕೈತೋಟದಲ್ಲಿ ಬಿರಿವ ದುಂಡುಮಲ್ಲಿಗೆ, ಮಲ್ಲಿಗೆ, ಮಧುಮಾಲತಿ, ಪಾರಿಜಾತದ ನರುಗಂಪು! ಒಳಗಿನ ಲಾಟೀನ್ ಬೆಳಕಿನಲ್ಲಿ ಮಸುಕಾಗಿ ಚದುರಿದಂತೆ ಕಾಣುವ ಕರವೀರ, ದಾಸವಾಳ, ನಂದಿಬಟ್ಟಲು ಪೊದೆಗಳು.

ಮರುಬೆಳಗಿನಲ್ಲಿ ಸೂರ್ಯೋದಯಕ್ಕೆ ಮುನ್ನವೇ ಸರ್ವಸಿಂಗಾರವಾದ ಕಣಿ. ಚಂದನ ಹಚ್ಚಿದ ಮಣೆಯ ಮೇಲೆ ಬಾಳೆಲೆಯಿರಿಸಿ, ಅಕ್ಕಿ ಸುರುವಿ ಅದರ ಮೇಲೆ ಕುಂದಿಲ್ಲದ ದೊಡ್ಡ ಚೀನಿಕುಂಬಳಕಾಯನ್ನಿರಿಸಿ, ಮಲ್ಲಿಗೆ ಮಾಲೆ ತೊಡಿಸಿ, ಇಕ್ಕೆಲಗಳಲ್ಲೂ ಸೌತೆಕಾಯಿ, ತೊಂಡೆಕಾಯಿಗಳನ್ನಿಟ್ಟು,ಹಿತ್ತಿಲ ಮಾವು, ಗೇರುಹಣ್ಣುಗಳನ್ನು ಜೊತೆಗಿರಿಸಿ ದೀಪ ಬೆಳಗಿ, ಅಗರ್‌ಬತ್ತಿ ಹಚ್ಚಿ, ಕಾಯಿ ಒಡೆದು, ಕಾಯಿಹೋಳುಗಳಲ್ಲಿ ಸುಟ್ಟ ಗೇರುಬೀಜಗಳನ್ನೂ, ಓಲೆಬೆಲ್ಲದ ತುಂಡುಗಳನ್ನೂ ಇರಿಸಿ ಸಿಧ್ಧವಾದ ವಿಶುಕಣಿ.

ಕಣಿಯ ಪಕ್ಕದಲ್ಲಿ ನಿಂತ ಪ್ರೀತಿ, ವಾತ್ಸಲ್ಯದ ಸಾಗರವಾದ ನಮ್ಮಜ್ಜಿಯ ಕಾಲಿಗೆರಗಿ ಆಶೀರ್ವಾದ ಪಡೆವಾಗ ಕಣ್ಣು ಮನಸೆಲ್ಲ ಅಜ್ಜಿ ಕೈತುಂಬ ನೀಡುವ ಗೇರುಬೀಜ, ಓಲೆಬೆಲ್ಲಗಳ ಮೇಲೆ.

ಒಳಗೆ ಒಲೆಯಲ್ಲಿ ಹಬೆಯಾಡುತ್ತಿರುವ ದೊಡ್ಡ ತಾಮ್ರದ ಇಡ್ಲಿ ಅಟ್ಟಿ. ಗಡ ಗಡಯೆಂದು ಕಡೆವ ಕಲ್ಲಿನಲ್ಲಿ ತಿರುಗುವ ಕಾಯಿಚಟ್ನಿ. ಕಾಫಿ, ತಿಂಡಿ ಆಗಿ ಹೊಟ್ಟೆ ತುಂಬಿದ ನಮ್ಮ ಮಕ್ಕಳ ಸೈನ್ಯ ಹಿತ್ತಿಲಿಗಿಳಿದರೆ ಸಿಹಿ ಸಿಹಿ ಮಾವಿನ ಮರಗಳಡಿ, ಗೇರು ಮರದಡಿ ಮಾವು, ಗೇರುಹಣ್ಣುಗಳನ್ನು ಮೆಲ್ಲುತ್ತಾ ತೀರದ ಅರಕೆ.

ಹಿತ್ತಿಲಲ್ಲಿ ಜೂಟಾಟ. ಕೇಪಳ ಪೊದೆಗಳ ಹಿಂದೆ ಅಡಗಿರುವಂತೆಯೇ ಪೊದೆಯಿಂದ ಕಳಿತ ಕೆಂಪು, ಕಪ್ಪು ಹಣ್ಣುಗಳನ್ನು ಕಿತ್ತು ಬಾಯ್ಗೆಸೆದುಕೊಳ್ಳುವ ಚಪಲ. ಮತ್ತೆ ಗದ್ದೆಗಿಳಿದು ನೀರಾರಿ ಬಿರುಕು ಬಿಟ್ಟ ಗದ್ದೆಯಲ್ಲಿ ಬಯಲಾಟ, ಭಾಷಣ, ಇತ್ಯಾದಿ ಅಣ್ಣಂದಿರ ಆಟಗಳು.

ಅಲ್ಲಿಂದ ಮುಂದಕ್ಕೆ ಪಕ್ಕದ ಹೊಳೆಯಲ್ಲಿ ಮನದಣಿಯೆ ನೀರಾಟ. ಹೊಳೆಯಲ್ಲಿ, ಗದ್ದೆಯ ಕೈತೋಡಿನಲ್ಲಿ, ಹುಣಿಕಡಿದಲ್ಲಿ ಕಾಲಿಗೆ ಕಚಗುಳಿಯಿಡುವ ಮೀನಮರಿಗಳು! ಸ್ವಚ್ಛ ಕನ್ನಡಿಯಂತೆ ಹೊಳೆವ ಹೊಳೆ ನೀರು. ಸುತ್ತ ಹಾಸಿ ಹರಡಿದ ವಿಶಾಲ ಭತ್ತದ ಗದ್ದೆಗಳು. ಹೊಂಗೆಹೂವ ಮರಗಳಿಂದಾವೃತ ಕೊಳದಲ್ಲಿ ಕೆಂದಾವರೆಗಳು. ಕೊಳದಿಂದೆದ್ದು ಹಾರುವ ಕೊಕ್ಕರೆಗಳು. ಪುಳಕ್ಕನೆ ನೀರಿಗೆ ಜಿಗಿವ ಪುಂಡಕೋಳಿಗಳು.

ಗದ್ದೆಗಳಾಚೆ ರೈಲು ಹಳಿಗೇರುವಲ್ಲಿ ಕೇದಗೆ ಬಲ್ಲೆಗಳು. ಹಳಿ ಮೇಲೆ ನಿಶ್ಚಿತ ಸಮಯಕ್ಕೆ ಸಿಳ್ಳೆಯೂದುತ್ತಾ ಹಾದುಹೋಗುವ, ಸಂಕದ ಮೇಲೆ ಘಡ, ಘಡ ಎನ್ನುವ ಸತತ ಆಕರ್ಷಣೆಯ ರೈಲುಗಳು. ಒಮ್ಮೆ ಮಂಗಳೂರಿಂದ ಸಾಗಿಹೋಗುವ ರೈಲಿನಲ್ಲಿ ಪಯಣಿಸಲಿದ್ದ ಚಾಚಾ ನೆಹರೂಗೆ ಕೈಯಾಡಿಸಲು ಗದ್ದೆಯಲ್ಲಿ ನಮ್ಮೊಡನೆ ಕಾದು ಕಾದು ಮತ್ತೆ ಸ್ನಾನಕ್ಕೆ ಹೋದ ಸುರೇಶಣ್ಣ, ರೈಲು ಕೊನೆಗೂ ಸಿಳ್ಳೆಯೂದುತ್ತಾ ಬಂದಾಗ, ಹುಟ್ಟುಡುಗೆಯಲ್ಲೇ ಸ್ನಾನದ ಮನೆಯಿಂದ ಓಡೋಡುತ್ತಾ ಬಂದು ನೆಹರೂಗೆ ಕೈ ಬೀಸಿದ ದೃಶ್ಯ ಮರೆತೀತಾದರೂ ಹೇಗೆ?

ಪಕ್ಕದ ಐಸ ಕುಂಞಯ (ಆಯಿಶಾ) ಹಿತ್ತಿಲಂತೂ ನಮಗೆ ಎರಡನೇ ಸ್ವರ್ಗ. ಹಲವಾರು ಮರಗಳಿದ್ದ ಒಂದೆಕರೆಗೂ ಮಿಕ್ಕು ವಿಶಾಲವಾಗಿದ್ದ ಆ ತಂಪಿನಾಗರದಲ್ಲಿ ಬಂಡೆಯೊರತೆಯ ತಂಪು ತಂಪು ಸಿಹಿನೀರ ಬಾವಿಯೇ ನಮ್ಮ ಅಜ್ಜಿಮನೆಗೆ ಕುಡಿವ ನೀರಿನಾಸರೆ. ಹೊಳೆ ಪಕ್ಕದ ನಮ್ಮ ಬಾವಿ ನೀರು ಸದಾ ಉಪ್ಪುಪ್ಪು. ಸೆಖೆಯ ಬೇಸಗೆಯ ರಜಾ ದಿನಗಳಲ್ಲಿ ಐಸಕುಂಞಯ ಬಾವಿಯ ಪಕ್ಕದ ಕಲ್ಲುಚಪ್ಪಡಿಯ ಮೇಲೆ ನಮ್ಮನ್ನು ಕುಳ್ಳಿರಿಸಿ, ಅತ್ತೆ, ದೊಡ್ಡಮ್ಮ, ಅಮ್ಮ ಆ ತಂಪಾದ ನೀರನ್ನು ಕೊಡಗಟ್ಟಲೆ ಸೇದಿ ಸೇದಿ ನಮ್ಮ ತಲೆಗೆ ಹೊಯ್ಯುತ್ತಿದ್ದರು.

ಐಸಕುಂಞ, ಅವರಮ್ಮ ನೈತರು, ದೊಡ್ಡಮ್ಮ ಮರಿಯತರು ಮಾತ್ರ ಇದ್ದ ಆ ಪ್ರೀತಿಯ ಮನೆ ಐಸಕುಂಞಯ ಪ್ರೀತಿ, ಮಾರ್ದವ ತುಂಬಿದ ಜಿಂಕೆಯ ಕಣ್ಣುಗಳಂತಹ ಸ್ವಚ್ಛ ನೀಲ ಕಣ್ಗಳಷ್ಟೆ ನಮಗೆ ಪ್ರಿಯವಾಗಿತ್ತು.

ಈ ಬಾರಿ ಊರಿಗೆ ಹೋದಾಗ ನನಗೆ ಪರಮಾಶ್ಚರ್ಯ ಕಾದಿತ್ತು. ನಮ್ಮ ಕಣ್ಣುಮುಚ್ಚಾಲೆಯಾಟಕ್ಕೆ ತಾಣವಾಗಿದ್ದ ಆ ವಿಶಾಲ ಹಿತ್ತಿಲಲ್ಲಿ ಈಗ ಅದೆಷ್ಟೋ ತಾರಸಿ ಮನೆಗಳೆದ್ದು ನಿಂತಿವೆ. ನಮ್ಮ ಆ ಪ್ರೀತಿಯ ಬಾವಿ ಈಗ ಪಂಪ್ ಇಡಿಸಿಕೊಂಡು ಹಿಂದಿನ ಆ ತಂಪನ್ನೂ, ಸವಿಯನ್ನೂ ಕಳೆದುಕೊಂಡಿದೆ. ಏನೆಂಥ ಪರಿವರ್ತನೆಗಳು!

ರೈಲುಹಳಿಯ ಪಕ್ಕದಿಂದ ದಿಬ್ಬವಿಳಿದು, ಗದ್ದೆಹುಣಿಗಳಲ್ಲಿ ನಡೆ ನಡೆದು ಬರುತ್ತಿರುವವರು ಯಾರೆಂದು ಗುರುತು ಹಿಡಿದು ಮನೆಯಲ್ಲಿರುವವರಿಗೆ ಸಾರುವ ಪೈಪೋಟಿ. ವಿಶು ಹಬ್ಬವೆಂದು ನಮ್ಮಜ್ಜಿಗೆ ನಮಿಸಿ ಆಶೀರ್ವಾದ ಪಡೆಯ ಬರುವ ಬಂಧುಗಳು ಹಲವರು. ನಮ್ಮ ಊಟಕ್ಕೆ ಮುನ್ನ ಪ್ರೀತಿಯ ಐಸ ಕುಂಞಯ (ಆಯಿಶಾ) ಮನೆಗೆ ಪಾಯಸದ ಬೇಳೆ, ತೆಂಗಿನ ಕಾಯಿ, ಬೆಲ್ಲ ಕೊಂಡೊಯ್ದು ಕೊಡುವ ಸಂತೋಷ!

ಪಾಯಸವನ್ನೇ ಏಕೆ ಕೊಡಬಾರದೆಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಮಧ್ಯಾಹ್ನದ ಭೂರಿ
ಭೋಜನದಲ್ಲಿ ತಮ್ಮ ಪಾಲಿಗೆಂದು ಬಂದು ಗದ್ದೆಹುಣಿಯಲ್ಲಿ ಕಾದುಕುಳಿತ ಕೊರತಿ, ಚಂದ್ರು ಹಾಗೂ ಇತರ ಶ್ರಮಿಕರ ಸಾಲು. ಯಥೇಚ್ಛ ಗೇರುಬೀಜ ಹಾಕಿದ ಬೇಳೆ ಪಾಯಸಕ್ಕಾಗಿಯೇ ವಿಶೇಷವಾಗಿ ಕಾದುಕುಳಿತ ಶ್ರಮಜೀವಿಗಳವು. 

ಸಂಜೆಯಾಗುತ್ತಿದ್ದಂತೇ ಇತರ ಬಂಧುಗಳ ಮನೆಗೆ ಹಿರಿಯರ ಆಶೀರ್ವಾದಕ್ಕಾಗಿ ಹೋಗುವ ಉತ್ಸಾಹ! ಹೊರಡುವಾಗ ಪುನಃ ಪಾಯಸ ತಿಂದು ಹೋಗಿ, ಮಕ್ಕಳೇ, ಎನ್ನುವ ಅಜ್ಜಿಯ ವಾತ್ಸಲ್ಯ! ಹಲಸಿನ ಹಣ್ಣಿನ ಕಲ್ತಪ್ಪ, ನೈಯಪ್ಪ, ಪಾಳಪ್ಪ; ಬೆಲ್ಲ, ತೆಂಗಿನಕಾಯಿ ಹಾಕಿ ಎಲೆಯಲ್ಲಿ ಕಾಯಿಸಿದ ರೊಟ್ಟಿ, ಹೀಗೆ ಮನೆ ಮನೆಗಳಲ್ಲಿ ಎದುರಾಗುವ ವಿವಿಧ ಭಕ್ಷ್ಯಗಳಿಗಿಂತಲೂ ನಮ್ಮನ್ನು ಆಕರ್ಷಿಸುವುದು ಕಣಿಯ ಗೇರುಬೀಜ, ಓಲೆಬೆಲ್ಲಗಳೆ.

ಚೆಂಬೂರ್ ಮಾರ್ಕೆಟ್‌ಗೆ ವಿಶುವಿಗಾಗಿ ಖರೀದಿಗೆಂದು ಹೋಗಿದ್ದೆ. ವಿಶು ದಿನಗಳಲ್ಲಿ ಚೆಂಬೂರ್ ಮಾರ್ಕೆಟ್‌ಗೆ ಕಾಲಿಡುವಂತಿಲ್ಲ. ಅಂಬೇಡ್ಕರ್ ಜಯಂತಿ ಪ್ರಯುಕ್ತ ನಗರಕ್ಕಾಗಮಿಸಿ ಚೆಂಬೂರ್ ಮಾರ್ಕೆಟ್ ರಸ್ತೆಗಳಲ್ಲಿ ಖರೀದಿಯ ಹುಮ್ಮಸ್ಸಿನಲ್ಲಿರುವ ಜನಸಾಗರದ ನಡುವೆ ಗಗನಕ್ಕೇರಿದ ಬೆಲೆಯ ಹೂ, ಹಣ್ಣು, ಎಲೆಗಳನ್ನು ಖರೀದಿಸುವುದು ಸುಲಭಸಾಧ್ಯವಲ್ಲ.

ಕಣಿಗಾಗಿ ಕುಂದಿಲ್ಲದ ಇಡೀ ಚೀನೀಕಾಯಿ, ಬಾಳೆಲೆ, ಹೂ, ಹಲಸು, ಮಾವು, ತರಕಾರಿ, ಪೊನ್ನಿಪೂ, ಕರ್ನಾಟಕ ಸ್ಟೋರ್‌ನಿಂದ ಓಲೆಬೆಲ್ಲ ಎಂದೆಲ್ಲ ಲಿಸ್ಟ್ ಮಾಡಿಕೊಂಡು ಹೋಗಬೇಕು. ಅದೃಷ್ಟವಿದ್ದರೆ ಗೇರುಹಣ್ಣೂ ಸಿಗುವುದಿದೆ. ಪಾಯಸಕ್ಕೆ ಹಸಿ ಗೇರುಬೀಜ ಮಾತ್ರ ಈಗ ಕರ್ನಾಟಕ ಸ್ಟೋರ್‌ನಲ್ಲೂ ಅಲಭ್ಯ.

ಅಜ್ಜಿಮನೆ ನೆನಪಿನಿಂದ ಹೃದಯ ಭಾರವಾಗಿದೆ. ಸುತ್ತಣ ಎಕರೆಗಟ್ಟಲೆ ಗದ್ದೆಗಳೆಲ್ಲ ಪಾಳು ಬಿದ್ದಿವೆ. ಹೊಳೆಯ ಜುಳು ಜುಳು ಹರಿವ ಸ್ವಚ್ಛ ಸಲಿಲ ನಾಗರಿಕತೆಯ ಕಶ್ಮಲಗಳನ್ನು ಹೇರಿಕೊಂಡು ಮಲಿನವಾಗಿದೆ. ಪುಣ್ಯಕ್ಕೆ ಮಳೆಗಾಲದಲ್ಲಿ ಉಕ್ಕೇರಿ ಬರುವ ಹೊಳೆಯ ಅಪಾಯದಿಂದಾಗಿ ಆ ನನ್ನ ಪ್ರಿಯ ಗದ್ದೆಗಳು ನಿವೇಶನಗಳಾಗಿ ಮಾರ್ಪಟ್ಟಿಲ್ಲ. ಹಿಂದೆ ತೋಡು, ಕೈತೋಡು, ಕೆರೆ, ಹೊಂಡಗಳಲ್ಲಿದ್ದ ನನ್ನ ಪರಮಪ್ರಿಯ ಬೆಳ್ದಾವರೆಗಳು ಈಗ ಈ ಗದ್ದೆಗಳಲ್ಲೂ ಮೂಡುತ್ತಾ, ಮಾಯವಾಗುತ್ತಾ ಕಣ್ಣುಮುಚ್ಚಾಲೆ ಆಡುತ್ತಿವೆ.

ಕೂಡುಕುಟುಂಬದ ನಮ್ಮ ಪ್ರಿಯ ತುಂಟ ದೊಡ್ಡಣ್ಣ ಸುರೇಶಣ್ಣ, ಚಿಕ್ಕ ತಂಗಿ ಸುಕ ನಮ್ಮನ್ನಗಲಿದ್ದಾರೆ. ಅಜ್ಜಿ, ದೊಡ್ಡಪ್ಪ, ತಂದೆ, ಅತ್ತೆ, ದೊಡ್ಡಮ್ಮ, ಚಿಕ್ಕಮ್ಮ, ಚಿಕ್ಕಪ್ಪ ಯಾರೂ ಇಂದಿಲ್ಲ. ನನ್ನ ಪ್ರೀತಿಯ ಗುಡ್ಡೆಮನೆ ಬಾಗಿಲಿಕ್ಕಿಕೊಂಡಿದೆ.

1 comment

  1. ನೆನಪುಗಳ ಮಾತು ಮಧುರ!!!!!!!!!!!! ಆತ್ಮೀಯವಾಗಿದೆ ನಿಮ್ಮ ಬರಹ.

    ಧನ್ಯವಾದಗಳು
    ಅನುರಾಧ

Leave a Reply