ಬಿ ವಿ ಭಾರತಿ ಹೊಸ ಕಥೆ ‘ಅಹವಿ’

ಭಾರತಿ ಬಿ ವಿ

Photo By Venkatesh Murthy 

ಉದ್ದನೆಯ ಏರಿಯೊಂದರ ಮೇಲೆ ನಡೆದು ಹೋಗುತ್ತಿದ್ದಾಳೆ ಅವಳು. ಕಣ್ಣು ಹಾಯಿಸಿದಷ್ಟೂ ಮುಗಿಯದಷ್ಟು ಉದ್ದದ ಏರಿ. ಚೆಂದಕ್ಕೆ ಗಾಳಿ ಬೀಸುತ್ತಿದೆ ಅಂದುಕೊಂಡು ಇನ್ನಿಷ್ಟು ಉತ್ಸಾಹದಿಂದ ನಡೆಯಲು ಶುರು ಮಾಡುತ್ತಾಳೆ. ಏರಿಯ ಎಡಭಾಗದಲ್ಲಿ ಇದ್ದಕ್ಕಿದ್ದ ಹಾಗೆ ನೆಲಮಾಳಿಗೆಗೆ ಹೋಗುವಂಥ ಮೆಟ್ಟಿಲುಗಳು ಕಾಣಿಸುತ್ತವೆ. ಎಲ್ಲಿಗೆ ಒಯ್ಯುತ್ತವೆ ಈ ಮೆಟ್ಟಿಲುಗಳು? – ಕುತೂಹಲ ಹುಟ್ಟುತ್ತದೆ. ಹಿಂದೆ ಮುಂದೆ ಯೋಚಿಸದೇ ಇಳಿದು ನೋಡೇಬಿಡೋಣ ಅಂತ ಹೊರಡುತ್ತಾಳೆ.

ಏರಿಯ ಮೇಲಿನಿಂದ ನೋಡಿದಾಗ ಕಾಣಿಸಿದ ಸ್ವಲ್ಪ ಮೆಟ್ಟಿಲುಗಳು ಈಗ ಇಳಿಯುತ್ತಾ ಹೊರಟ ನಂತರ ಬೆಳೆಯುತ್ತಾ ಹೋದಂತೆ ಅನ್ನಿಸುತ್ತದೆ. ಅಷ್ಟೇನೂ ಅಗಲವಿಲ್ಲದ ಆ ಕಲ್ಲಿನ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದಂತೆ ಒಂದು ರೀತಿ ಆತಂಕ. ನೀರವ ಪ್ರಪಂಚ. ಅಕ್ಕ-ಪಕ್ಕ, ಮೇಲೆ-ಕೆಳಗೆ ಯಾವ ಕಡೆಗೆ ಕಣ್ಣು ಹಾಯಿಸಿದರೂ ಒಂದೇ ಒಂದು ನರಪ್ರಾಣಿಯಿಲ್ಲ.

ಇಷ್ಟು ಸಲ ಈ ಏರಿಯ ಮೇಲೆ ಓಡಾಡಿದ್ದರೂ ಈ ಮೆಟ್ಟಿಲುಗಳನ್ನು ನಾನು ಯಾವತ್ತೂ ನೋಡೇ ಇರಲಿಲ್ಲವಲ್ಲ, ಇದ್ದಕ್ಕಿದ್ದ ಹಾಗೆ ಎಲ್ಲಿಂದ ಪ್ರತ್ಯಕ್ಷವಾಯ್ತು ಅಂದುಕೊಂಡಳು. ಅಳುಕುತ್ತಾ ಇಳಿಯಲು ಶುರು ಮಾಡಿದ ಮೇಲೆ, ಸುಮಾರು ಹೊತ್ತು ಕಳೆದ ನಂತರ ಏರಿ ಕಾಣದಾಯ್ತು. ಈಗ ಮೇಲೆ, ಕೆಳಗೆ ಬರೀ ಮೆಟ್ಟಿಲೋ ಮೆಟ್ಟಿಲುಗಳು. ಆತಂಕದಲ್ಲೂ ಸರಸರ ಇಳಿದಳು. ಉಹೂಂ, ಅಷ್ಟು ಸುಲಭಕ್ಕೆ ಮುಗಿಯುವ ದಾರಿಯಾಗಿರಲಿಲ್ಲ ಅದು. ಇಳಿದಳು … ಇಳಿದಳು … ಇಳಿದಳು … ಬೆಳಕಿರುವಾಗಲೇ ಈ ಪ್ರಯಾಣ ಮುಗಿಸಬೇಕು ಅಂದುಕೊಂಡು ಜೀವ ಪಣಕ್ಕಿಟ್ಟವಳಂತೆ ಹೆಜ್ಜೆ ಹಾಕಿದಳು.

ಎಷ್ಟು ಹೊತ್ತು ಇಳಿದರೂ ಕೊನೆಗಾಣದಾದಾಗ ಎದೆ ಭಯದಿಂದ ನಡುಗಲು ಶುರುವಾಯ್ತು. ಕಂಗೆಟ್ಟ ಮುಖದಲ್ಲಿ ಸುತ್ತಲಿನ ಪರಿವೆಯಿಲ್ಲದಂತೆ ನಡೆಯುತ್ತಿದ್ದವಳಿಗೆ ಇದ್ದಕ್ಕಿದ್ದ ಹಾಗೆ ಮೌನ ಕರಗಿಹೋಗಿ ಸದ್ದು ಕಿವಿಗೆ ಬೀಳಲು ಶುರುವಾಯ್ತು. ಮನುಷ್ಯರು! ಮನುಷ್ಯರಿದ್ದಾರೆ ಇಲ್ಲಿ!! ಸಂತೋಷದಿಂದ ಕುಣಿದಾಡುವ
ಹಾಗೆನ್ನಿಸಿತು. ಓಡು ನಡಿಗೆಯಲ್ಲಿ ಇನ್ನಿಷ್ಟು ಮೆಟ್ಟಿಲುಗಳನ್ನು ಹಾರುವವಳಂತೆ ಇಳಿಯುತ್ತಾ ಹೋದ ಹಾಗೆ ಕಂಡಿತು ಜನರಿಂದ ಗಿಜಿಗುಡುವ ರಸ್ತೆ!

ಎಷ್ಟೊಂದು ಜನ! ಅದೊಂದು ಮಾರ್ಕೆಟ್ ರಸ್ತೆ. ಇಡೀ ರಸ್ತೆಯ ತುಂಬ ವ್ಯಾಪಾರಿಗಳು, ಬಣ್ಣ ಬಣ್ಣದ ಛತ್ರಿ ಹಿಡಿದು, ಸಿನೆಮಾದಲ್ಲಿ ಸಹ ಕಲಾವಿದರು ಅತ್ತಿಂದಿತ್ತ ಸುಮ್ಮನೇ ನಡೆದಾಡುವಂತೆ, ಭಾವರಹಿತ ಮುಖದಲ್ಲಿ, ಅತ್ತಿತ್ತ ನೋಡದೇ ನಡೆದಾಡುತ್ತಿದ್ದ ಜನರು, ಚಿತ್ರ ವಿಚಿತ್ರ ವೇಷ ಭೂಷಣಗಳು … ಬಣ್ಣದ ಟೋಪಿ ಹಾಕಿದ ಜನರು!! ಅಲ್ಲಿದ್ದ ಜನರ ಚಹರೆಯೇ ವಿಚಿತ್ರವಾಗಿತ್ತು. ಸಣ್ಣ ಕಣ್ಣು, ಕುಚ್ಚಿನ ಟೋಪಿ, ನಿಲುವಂಗಿಯಂತಾ
ಡ್ರೆಸ್ಸು ಎಲ್ಲವೂ ಹೊಸ ಥರ. ನಮ್ಮೂರಿನ ಜನರ ಹಾಗೆ ಕಾಣುತ್ತಿಲ್ಲವಲ್ಲ ಇವರು … ಎಲ್ಲಿಗೆ ಬಂದಿದ್ದೇನೆ ನಾನು? ಎಲ್ಲಿಗೆ … ಎಲ್ಲಿಗೆ! ಪೂರ್ತಿ ಅಪರಿಚಿತವಾದ ಜನರಿರುವ ಈ ಜಾಗ ಯಾವುದು? ಕಕ್ಕಾಬಿಕ್ಕಿಯಾದವಳು ರಸ್ತೆಯಲ್ಲಿ ಹೋಗುತ್ತಿದ್ದ ಮುದುಕನೊಬ್ಬನನ್ನು ಭುಜ ಹಿಡಿದು ನಿಲ್ಲಿಸಿ – ಇದು ಯಾವ ಊರು ಅಂದಳು. ಇದು ಜಪಾನ್
ಅಂದ!!  ಜಪಾನ್‌ಗೆ ಹೇಗೆ ಬಂದೆ ನಾನು !! ನನಗೆ ಭಯವೆನಿಸುತ್ತಿದೆ. ಅಯ್ಯೋ ವಾಪಸ್ ಮೆಟ್ಟಿಲು ಹತ್ತಿ ಹೋದರೆ ನಾನು ಹೊರಟ ಏರಿ ಸಿಗುತ್ತದಾ? ಗೊತ್ತಿಲ್ಲದೇ ಹೊರಟುಬಂದು, ಇಲ್ಲಿಗೆ ತಲುಪಿದ್ದೇನೆ  ಅಂದಮಾತ್ರಕ್ಕೆ ಜಪಾನಿನಲ್ಲೇ ಉಳಿಯಬೇಕಾ? ಭಯವಾಯಿತು.

ಪಕ್ಕದಲ್ಲಿ ನಡೆದುಹೋಗುತ್ತಿದ್ದವರೆಲ್ಲ ಅವಳನ್ನು ಗಮನಿಸಿಯೇ ಇಲ್ಲವೇನೋ ಅನ್ನುವ ಹಾಗೆ, ಅವಳೊಂದು ಅದೃಶ್ಯ ಆತ್ಮವೇನೋ ಅನ್ನುವ ಹಾಗೆ ಅವಳ ಇರುವಿಕೆಯನ್ನೇ ಗಮನಿಸದೇ ನಡೆದುಹೋಗುತ್ತಿದ್ದರು. ಮುದುಕನೊಬ್ಬ ಉತ್ತರ ಕೊಟ್ಟ ಅಂದಮೇಲೆ ನಾನು ಅದೃಶ್ಯಳಾಗಂತೂ ಇರಲು ಸಾಧ್ಯವಿಲ್ಲ. ಯಾಕೆ ಹಾಗೆ ನಾನು ಇರುವುದರ ಅರಿವೇ ಇಲ್ಲವೇನೋ ಅನ್ನುವ ಹಾಗೆ ನನ್ನ ಕಡೆ ನೋಡದೇ ಓಡಾಡುತ್ತಿದ್ದಾರೆ? ಆತಂಕದಿಂದ ನಡೆದು ಹೋಗುತ್ತಿದ್ದ ಮತ್ಯಾರದ್ದೋ ಭುಜ ಗಟ್ಟಿಯಾಗಿ ಹಿಡಿದು – ಈ ಮೆಟ್ಟಿಲುಗಳನ್ನು ಹತ್ತಿ ಹೋದರೆ ನನ್ನ ಊರು ಸಿಗುತ್ತದಾ ಎಂದಳು. ಅವನಿಗೆ ಅವಳ ಮಾತು ಅರ್ಥವಾಗದವನಂತೆ ಕೈ ಕೊಡವಿ ನಡೆದೇಬಿಟ್ಟ.

ಅವಳಿಗೆ ಗಾಬರಿ ಹುಟ್ಟಿತು. ಈಗೇನು ಮಾಡುವುದು? ಹೇಗೂ ಜಪಾನಿಗೆ ಬಂದುಬಿಟ್ಟಿದ್ದೇನೆ, ಇದನ್ನೆಲ್ಲಾ ನೋಡಿ ಮುಗಿಸಿದ ನಂತರವೇ ಮೆಟ್ಟಿಲು ಹತ್ತಲು ಶುರು ಮಾಡಲಾ? ಅಥವಾ ವಾಪಸ್ ಹೊರಟುಬಿಡಲಾ? ಹೊಸ ದಾರಿಯಲ್ಲಿ ಕತ್ತಲಾಗಿ ಹೋಗಿ ನನ್ನೂರು ಸಿಗದೇ ದಾರಿ ತಪ್ಪಿಸಿಕೊಂಡರೆ?? ಬೇಡ, ಬೇಡ, ಬೆಳಕಿರುವಾಗಲೇ ಹೊರಟುಬಿಡ್ತೀನಿ … ಜಪಾನ್ ನೋಡೋದಿಲ್ಲ ನಾನು … ಇನ್ನೊಂದು ಸಲ ನೋಡಿದರಾಯ್ತು. ಬಂದ ದಾರಿಯಲ್ಲೇ ಹತ್ತಲು ಶುರು ಮಾಡಲೇ? ಅಥವಾ ಮತ್ತೆ ಯಾವುದಾದರೂ ದಾರಿ ಇರಬಹುದಾ? ಶಾರ್ಟ್ ಕಟ್ ಇರಬಹುದಾ? ಯಾರನ್ನಾದರೂ ಕೇಳಲೇ? ರೀ ಏರಿ ತಲುಪೋದಿಕ್ಕೆ ಹೇಗೆ ಹೋಗ್ಬೇಕು ….. ರೀ ಈಗ  ಮತ್ತೆ
ಏರಿಯ ಮೇಲಕ್ಕೆ ಹೋಗೋದಿಕ್ಕೆ ಹೇಗೆ ಹೋಗ್ಬೇಕು …..

ಹೇಗೆ ಹೋಗ್ಬೇಕು ಈಗ? – ಪಕ್ಕದಿಂದ ಇನ್ಯಾರದ್ದೋ ಧ್ವನಿ. ಅಯ್ಯೋ ನನಗೇ ದಾರಿ ಗೊತ್ತಿಲ್ಲ ಅಂತ ನಾನು ಸಾಯ್ತಿದ್ದರೆ ಇವನು ಯಾರೋ ಹೇಗೆ ಹೋಗ್ಬೇಕು ಅಂತ ನನ್ನ ಕೇಳ್ತಾನಲ್ಲ. ಇನ್ಯಾರೂ ಸಿಗಲಿಲ್ಲವಾ ಇವನಿಗೆ ದಾರಿ ವಿಚಾರಿಸೋದಿಕ್ಕೆ ಅಂತ ಸಿಡಿಮಿಡಿಗೊಂಡವಳು ಉರಿಯುವ ದನಿಯಲ್ಲಿ ನನಗೇನ್ರೀ ಗೊತ್ತು – ಅಂದಳು ದನಿ ಎತ್ತರಿಸಿ. ಏನಂದ್ರಿ ಅನ್ನುವ ಮಾತು ಕಿವಿಗೆ ಬಿತ್ತು. ಬೆಚ್ಚಿ ನಿದ್ರೆಯಿಂದ ಮುಚ್ಚುತ್ತಿದ್ದಕಣ್ಣುಗಳನ್ನು ಬಲವಂತವಾಗಿ ಬಿಡಿಸಿಕೊಳ್ಳುತ್ತಾ ನೋಡಿದಾಗ ಅವಳಿಗೆ ಅರಿವಿಗೆ ಬಂತು ತಾನೊಂದು ಆಟೋದಲ್ಲಿ ಹೋಗುತ್ತಿದ್ದೇನೆ ಎಂದು. ನಿದ್ರೆ ಮಾಡುತ್ತಿದ್ದೆನಾ ಇಷ್ಟು ಹೊತ್ತೂ? – ಮನಸ್ಸನ್ನು ಪ್ರಶ್ನಿಕೊಳ್ಳುವಷ್ಟರಲ್ಲೇ ಆಟೋ ಡ್ರೈವರ್ ಮತ್ತೆ ಅದೇ ಪ್ರಶ್ನೆ ಕೇಳಿದ. ಮಂಪರಿನಿಂದ ಆಚೆ ಬರಲು ಪ್ರಯತ್ನಿಸಿದಳು. ಆಗುತ್ತಿಲ್ಲ … ಅಯ್ಯೋ, ಕಣ್ಣು ಮೆತ್ತಿಕೊಳ್ಳುವ ಹಾಗೆ ನಿದ್ರೆ ಎಳೆಯುತ್ತಿದೆ. ಮತ್ತೆ ಈಗ ಆಟೋದ ಡ್ರೈವರ್‌ಗೆ
ರಸ್ತೆ ಹೇಳಬೇಕಂತೆ … ಹೇಗೆ ಹೇಳಲಿ? ಆಗುತ್ತಲೇ ಇಲ್ಲವಲ್ಲ. ಮತ್ತೆ ಆ ಮೆಟ್ಟಿಲುಗಳನ್ನು ಇಳಿದಿದ್ದು, ಜಪಾನ್‌ಗೆ ಹೋದದ್ದು ಎಲ್ಲವೂ ಕನಸಿನಲ್ಲಾ?! ಇಂಥ ಗಾಢನಿದ್ರೆ ಹೇಗೆ ಬಂತು! ಮನೆಯಲ್ಲಿ ಹಾಸಿಗೆಯ ಮೇಲೆ ಮಲಗಿದರೇನೇ ಮಧ್ಯರಾತ್ರಿಯವರೆಗೆ ನಿದ್ರೆ ಸುಳಿಯದ ನನಗೆ, ಈ ಆಟೋದಲ್ಲಿ ಕನಸು ಬೀಳುವಂತೆ ಆವರಿಸುವಂಥ ನಿದ್ದೆ ಬಂದದ್ದಾದರೂ ಹೇಗೆ!

ಮೇಡಮ್  ನೀವು ವಿದ್ಯಾರಣ್ಯಪುರ ಅಂದ್ರಿ. ಕರೆದುಕೊಂಡು ಬಂದೆ. ಈಗ ನಿಮ್ಮನೆ ಎಲ್ಲಿ ಅಂತ ನೀವೇ ಹೇಳ್ಬೇಕು ತಾನೇ ಅಂದ ಡ್ರೈವರ್. ಇದೇ ವಿದ್ಯಾರಣ್ಯಪುರವಾ … ನಿದ್ದೆಯಿಂದ ಎಚ್ಚೆತ್ತ ಮಿದುಳಿನ ಮಂಕನ್ನು ಸರಿಸಲು ಪ್ರಯತ್ನಿಸುತ್ತಾ ಸುತ್ತಲೂ ನೋಡಿದಳು. ಪೂರ್ತಿ ಅಪರಿಚಿತತೆ. ಯಾವ ಜಾಗ ಅಂತಲೇ ತಿಳಿಯುತ್ತಿಲ್ಲ. ಎಲ್ಲೆಲ್ಲಿ ನೋಡಿದರೂ ಅಂಗಡಿಗಳು, ಮನೆಗಳು, ರಸ್ತೆಗಳು, ಕಾರು-ಬೈಕುಗಳು … ಆದರೆ ನಾನು ಎಲ್ಲಿದ್ದೇನೆ! ಮನಸ್ಸು
ಇದ್ದಕ್ಕಿದ್ದ ಹಾಗೆ ಶೂನ್ಯವಾದಂತೆ ಅನ್ನಿಸಿತು. ಸುತ್ತಲಿದ್ದ ಪ್ರಪಂಚ ಪೂರ್ತಿ ಸೂರ್ಯನ ಬೆಳಕಲ್ಲಿ ಅದ್ದಿ ತೆಗೆದಂತೆ ಕಣ್ಣು ಚುಚ್ಚುವ ಬೆಳಕು. ಹಿಂದೆಂದೂ ಈ ಜಾಗವನ್ನೆಲ್ಲ ನೋಡಿಯೇ ಇಲ್ಲ ಅನ್ನುವಂಥ ಕನ್‌ಫ್ಯೂಷನ್ ಮಿದುಳಿನಲ್ಲಿ. ಯಾಕೆ ಹೀಗಾಗುತ್ತಿದೆ? ಏನಾಯ್ತು ನನಗೆ … ಅಲ್‌ಜ಼ೈಮರ್ಸ್? ಅಮ್ನೀಷಿಯಾ? ಹೇಗೆ … ಇದು ಹೇಗೆ ಸಾಧ್ಯ!! ಒಂದೇ ಒಂದು ದಿನಕ್ಕೂ ಆ ರೀತಿಯ ಯಾವ ಸೂಚನೆಯನ್ನೂ ಮೆದುಳು
ಕೊಟ್ಟಿರಲಿಲ್ಲವಲ್ಲ. ಇದ್ದಕ್ಕಿದ್ದ ಹಾಗೆ ಮನೆಯ ದಾರಿ ಮರೆತು ಹೋಗುವುದು ಹೇಗೆ ಸಾಧ್ಯ?

ಬಿಸಿಲಿಗೋ ಏನೋ, ಕವಿದುಕೊಂಡು ಬಂದಂಥ ನಿದ್ದೆಯಿಂದ ಎಚ್ಚರವಾದ ನಂತರ ಪೂರ್ತಿ ಅಪರಿಚಿತ ಜಗತ್ತಿನೊಳಕ್ಕೆ ಕಾಲಿರಿಸಿದ ಅನುಭವ .. ಅಯ್ಯೋ! ಈಗೇನು ಗತಿ? ಆಟೋದವನಿಗೆ ಈಗ ನಾನು ಉತ್ತರ ಹೇಳ್ಬೇಕು. ಆದರೆ ಏನು ಉತ್ತರ ಹೇಳಲಿ … ನಾನೆಲ್ಲಿದ್ದೀನಿ ಅಂತ ಗೊತ್ತಾಗುತ್ತಿಲ್ಲ ಅನ್ನಲಾ? ಇದ್ದಕ್ಕಿದ್ದ ಹಾಗೆ ನೆನಪು ಸತ್ತು ಹೋಗಿದೆ ಅನ್ನಲಾ? ಉಹೂಂ, ನನ್ನ ಪರಿಸ್ಥಿತಿ ಹೇಳಬಾರದು ಈಗಲೇ. ಒಂದಿಷ್ಟು ಹೊತ್ತು ರಸ್ತೆ ಗೊತ್ತಿರುವ ರೀತಿಯಲ್ಲಿ ಲೆಫ್ಟ್, ರೈಟ್ ಅನ್ನುತ್ತಾ ಹುಡುಕುವುದು ಒಳ್ಳೆಯದು. ಅಷ್ಟರಲ್ಲಿ ನೆನಪಾಗಬಹುದು, ಆಗಬೇಕು. ಇಂಥ ಪರಿಸ್ಥಿತಿಯಲ್ಲಿ ಗಾಬರಿ ಬಿದ್ದರೆ ಪ್ರಯೋಜನವಿಲ್ಲ, ಮತ್ತೂ ಟೆನ್ಷನ್ ಆಗುತ್ತದಷ್ಟೇ. ಸಮ ಮನಸ್ಸಿನಿಂದ ಯೋಚಿಸಬೇಕು ಅಂದುಕೊಳ್ಳುತ್ತಾ ನೆನಪು ಮಾಡಿಕೊಳ್ಳುವ ಕೆಲಸ ಶುರು ಮಾಡಿದಳು…

ಏನೂ ಆಗೇ ಇಲ್ಲ ಅನ್ನುವಂತೆ ಹೀಗೇ ನೇರವಾಗಿ ಹೋಗಿ – ಅಂದಳು ಉತ್ತರಕ್ಕೆ ಕಾಯುತ್ತಿದ್ದ ಡ್ರೈವರ್ ಗೆ ಅವನಿಗೆ ಸರಿಯಾಗಿ ಕೇಳಿಸಲಿಲ್ಲವೇನೋ ಅನ್ನುವಂತೆ ಉತ್ತರಕ್ಕಾಗಿ ಹಿಂದಿರುಗಿ ನೋಡಿದ. ಸ್ಟ್ರೈಟ್ ಹೋಗಪ್ಪಾ ಅಂದಳು ಈ ಸಲ. ಅವನು ಅರ್ಥವಾದವನಂತೆ ತಲೆಯಾಡಿಸಿ ಮುಂದಕ್ಕೆ ಆಟೋ ಓಡಿಸಿದ. ಅವಳು ರಸ್ತೆಯಲ್ಲಿನ ಎಲ್ಲ ಅಂಗಡಿಯ ಹೆಸರುಗಳನ್ನೂ ಎಚ್ಚರಿಕೆಯಿಂದ ಗಮನಿಸುತ್ತಾ ಕೂತಳು … ಯಾವುದೋ ಹೆಸರು, ನೆನಪಿನ ಯಾವುದೋ ಕೊಂಡಿಯನ್ನು ಎಲ್ಲಿಯೋ ತಾಕಬಹುದು ಅನ್ನುವ ಭರವಸೆಯಲ್ಲಿ…

ಈ ಪಕ್ಕದಲ್ಲಿ ಕಾಣುತ್ತಿರುವ ಹೋಟೆಲ್‌ಗೆ ಯಾವತ್ತಾದರೂ ಹೋಗಿದ್ದೆನಾ? ಚಂದ್ರಿಕಾ ರೆಸ್ಟೊರೆಂಟ್ ಅಂತೆ ಅದರ ಹೆಸರು. ಉಹೂಂ, ಕೇಳಿದ ನೆನಪೂ ಆಗುತ್ತಿಲ್ಲ. ಎಡಕ್ಕಿದ್ದ ಅಂಗಡಿ ಸಾಲಿನಲ್ಲಿದ್ದ  ಸೋನು ಬ್ಯಾಂಗಲ್ ಸ್ಟೋರ್, ಅಯೋಧ್ಯಾ ಹೋಟೆಲ್, ಐಯ್ಯಂಗಾರ್ ಬೇಕರಿಗಳು ಕಂಡವು. ಎದುರು ರಸ್ತೆಯಲ್ಲಿ ಯೂನಿವರ್ಸೆಲ್ ಮೊಬೈಲ್ ಅಂಗಡಿ, ಮುಖೇಶ್ ಮೆಡಿಕಲ್ಸ್, ರಾಮಕೃಷ್ಣ ಪ್ರಾವಿಷನ್ ಸ್ಟೋರ್ಸ್ … ನೋಡುತ್ತಾ ಹೋದಂತೆ ಒಂದೇ ಒಂದು ಹೆಸರಾದರೂ ನೆನಪಾದರೆ ಅದೇ ಸೈ. ಇಲ್ಲಿರುವ ತರಕಾರಿ ಗಾಡಿಗಳಲ್ಲಿ ಯಾವತ್ತಾದರೂ ತರಕಾರಿ
ಕೊಂಡಿದ್ದೆನಾ? ಆ ಗಡ್ಡದವನ ಹತ್ತಿರ ಸೀಬೇಕಾಯಿ ತಿಂದ ನೆನಪು? ಹಲಸಿನ ಹಣ್ಣು ಮಾರುತ್ತಿರುವ ಈ ಪುಟ್ಟ ಹುಡುಗನನ್ನು ನೋಡಿದ್ದೀನಾ? ಒಂದೊಂದೇ ಜಾಗವನ್ನು, ಮನುಷ್ಯರನ್ನು ಪರೀಕ್ಷಿಸುವಂತೆ ನೋಡುತ್ತಾ ಸಾಗಿದಳು. ಇಡೀ ಮಾರ್ಕೆಟ್ ರಸ್ತೆ ಮುಗಿದು ಹೋದರೂ ಯಾವ ನೆನಪಿನ ಕುರುಹೂ ಸಿಗಲಿಲ್ಲ. ಮುಂದೇನು?? ಮುಂದೆ ಏನು ಮಾಡಲೂ ತೋಚದೇ, ಹಾಗೇ ಬಲಕ್ಕೆ ಆಟೋ ತಿರುಗಿಸಲು ಹೇಳಿದಳು.

ಅದು ರೆಸಿಡೆನ್ಷಿಯಲ್ ರಸ್ತೆ. ಆ ಸಾಲಿನಲ್ಲಿದ್ದ ಒಂದೊಂದೇ ಮನೆ ನೋಡುತ್ತಾ ಸಾಗಿದಾಗಲೂ ಸಣ್ಣ ಚಿಕ್ಕೆಯಷ್ಟೂ ನೆನಪಾಗಲಿಲ್ಲ. ಎದೆಯಲ್ಲೀಗ ಅಪಾಯದ ಸದ್ದು! ನಿಜಕ್ಕೂ ಅವಳು ಪ್ಯಾನಿಕ್ ಆಗುತ್ತಾ
ಹೋದಳು … ಅರ್ರೇ! ನೆನಪು ಒಂದಿಷ್ಟು ಹೊತ್ತಿನ ನಂತರವಾದರೂ ಬಂದರೆ ಸರಿ. ಆದರೆ, ಕೊನೆಗೂ ಬಾರದೇ ಹಾಗೇ ಉಳಿದುಬಿಟ್ಟರೆ ಏನು ಮಾಡಬೇಕು!! ಪೊಲೀಸ್ ಸ್ಟೇಷನ್‌ಗೆ ಹೋಗಬೇಕಾ? ಹೋಗಿ ನನ್ನ ಮನೆ ಮರೆತುಹೋಗಿದೆ ಅಂತ ಹೇಗೆ ಹೇಳುವುದು! ಮನೆ ಕೆಲಸದವಳು ಒಂದು ಸಲ ಸಾವಿರಗಟ್ಟಳೆ ದುಡ್ಡನ್ನು ತೆಗೆದುಕೊಂಡು, ನಾನು ನೋಡೇ ಇಲ್ಲ ಅಂತ ಸಾಧಿಸಿದಾಗ ವಿಧಿಯಿಲ್ಲದೇ ಪೊಲೀಸ್ ಸ್ಟೇಷನ್ನಿಗೆ ಹೋಗಿದ್ದೆನಲ್ಲ. ಅಲ್ಲಿದ್ದ ಇನ್ಸ್‌ಪೆಕ್ಟರ್ ನಾನೇ ಕಳ್ಳತನ ಮಾಡಿದ್ದೀನೇನೋ ಅನ್ನುವ ಹಾಗೆ ಕುಳಿತುಕೊಳ್ಳಲೂ ಸಹಾ ಹೇಳದೇ, ನಿಲ್ಲಿಸಿಯೇ ಮಾತಾಡಿಸಿದ್ದು ನೆನಪಾಯಿತು. ಇನ್ನು ಈ ಪರಿಸ್ಥಿತಿಯಲ್ಲಿ ಅಲ್ಲಿಗೆ ಕಾಲಿಟ್ಟರೆ ಅವರ ರಿಯಾಕ್ಷನ್ ಏನಿರಬಹುದು. ಇದು ನಿಜಕ್ಕೂ ಸ್ವಲ್ಪ ಸೀರಿಯಸ್ ಆಗುವ ಲಕ್ಷಣ ಕಾಣುತ್ತಿದೆಯಲ್ಲ. ದಾರಿಯಲ್ಲಿ ಧುತ್ತೆಂದು ಪರಿಚಯದವರು ಯಾರಾದರೂ ಕಾಣಿಸಬಾರದಾ? ಅವರಲ್ಲಾದರೆ ನಗೆಪಾಟಲಾದರೂ ಸರಿ ಅಂತ ‘ನನ್ನ ಮನೆ ತೋರಿಸಿ’ ಅನ್ನಬಹುದು. ಅದು ಸರಿ, ಪರಿಚಯದವರು ಕಂಡರೂ ಅವರು ತನಗೆ ಪರಿಚಯ ಅನ್ನುವುದಾದರೂ ಗೊತ್ತಾಗುತ್ತದಾ? ರಸ್ತೆ ಮತ್ತು ಮನೆ ಮರೆತ ಹಾಗೆ ಎಲ್ಲ ಮುಖ ಚಹರೆಗಳೂ ಮರೆತು ಹೋಗಿದ್ದರೆ? ಎದೆ ಧಸಕ್ ಅಂದಿತು.

‘ಲೆಫ್ಟೋ, ರೈಟೋ’ ಆಟೋದವನ ಪ್ರಶ್ನೆ ಕೇಳಿಸಿತು. ಯಾರಿಗೆ ಗೊತ್ತು! ಯಾವ ಕಡೆ ಅನ್ನಲಿ
ಈಗ? ಏನೂ ಉತ್ತರಿಸದಿದ್ದರೆ ಅವನು ನನ್ನನ್ನು ಎಲ್ಲೆಲ್ಲಿಯೋ ಕರೆದುಕೊಂಡು ಹೋದರೆ!
ಬೋಳು ಕಿವಿ, ಕತ್ತು, ಕೈ ನೋಡಿದ ಮೇಲೆ ಅವನು ನನ್ನ ಕರೆದುಕೊಂಡು ಹೋಗಲಾರ … ಒಂದು
ತುಣುಕು ಚಿನ್ನ ಇಲ್ಲ ಮೈಮೇಲೆ, ನನ್ನನ್ನು ಕರೆದುಕೊಂಡು ಹೋದರೂ ಪ್ರಯೋಜನವಿಲ್ಲ
ಅನ್ನಿಸಿತು. ಆದರೆ ನಾನಿದ್ದೀನಲ್ಲ! ಅಂಥಾ ವಯಸ್ಸೇನೂ ಆಗದ ನಾನು! ರೇಪ್ ಮಾಡಿಯಾನಾ?
ನಾಲಿಗೆ ಒಣಗಿತು. ಈಗ ರಸ್ತೆ ಗೊತ್ತಿಲ್ಲವೆಂಬುದನ್ನು ಅವನಿಗೆ ತೋರಿಸಿಕೊಳ್ಳಬೇಕಾ,
ಬೇಡವಾ ಅನ್ನುವ ಜಿಜ್ಞಾಸೆ. ಹೇಳುವುದು ಒಳ್ಳೆಯದೋ, ಹೇಳದಿರುವುದು ಒಳ್ಳೆಯದೋ ಅನ್ನುವ
ತಾಕಲಾಟದಲ್ಲಿ ಬಿದ್ದಳು.

ಹಿಂದಿನ ಸೀಟಿನಿಂದ ಸದ್ದೇ ಇಲ್ಲವಾದಾಗ ಆಟೋದವ ಗಾಬರಿಯಾದ. ಹಾರ್ಟ್ ಅಟ್ಯಾಕ್ ಏನಾದರೂ ಆಗಿ ಸತ್ತು ಗಿತ್ತು ಹೋದಳಾ ಈಯಮ್ಮ?! ಅಂದುಕೊಳ್ಳುತ್ತಾ ರಸ್ತೆಯ ಒಂದು ಬದಿಗೆ ಆಟೋ ನಿಲ್ಲಿಸಿ ಹಿಂದೆ ತಿರುಗಿ ನೋಡಿದ. ಬೆವರುತ್ತಾ ಕೂತವಳು ಕಂಡಳು. ಸಧ್ಯ ಬದ್ಕವ್ಳೆ ಅಂತ ನಿಟ್ಟುಸಿರಾದ. ಮೇಡಮ್ ದಾರಿ ಹೇಳದಿದ್ರೆ ನಾನು ಯಾವ ಕಡೆ ತಿರುಗಿಸಲಿ? ಅಂತ ಸಿಡುಕಿದ. ಅವಳು ನಡುಗುವ ದನಿಯಲ್ಲಿ ದಾರಿ … ದಾರಿ ಗೊ ..ತ್ತಾ ..ಗ್ತಿ … ಲ್ಲ ಎಂದು ತೊದಲಿದಳು. ದಾರಿ ಗೊತ್ತಾಗ್ತಿಲ್ವಾ? ಅಂದ್ರೆ?! ಹೊಸ್ದಾಗಿ ಬಂದಿದೀರಾ ಈ ಊರಿಗೆ? ಇಲ್ಲ, ಇದೇ ಊರಲ್ಲೇ ತುಂಬ ವರ್ಷದಿಂದ ಇರೋದು. ಆದ್ರೆ ನನ್ಗೆ ನಮ್ಮನೆ ಎಲ್ಲಿದೆ ಅಂತ ಗೊತ್ತಾಗ್ತಿಲ್ಲ. ಮನೆ ಮಾತ್ರ ಅಲ್ಲರೀ, ರಸ್ತೆ, ಅಂಗಡಿ, ಏರಿಯಾ ಯಾವ್ದೂ ಗೊತ್ತಾಗ್ತಿಲ್ಲ … ನನಗೆ ಎಲ್ಲ ಮರೆತುಹೋಗಿದೆ – ಅಂದಳು ಅಳು ದನಿಯಲ್ಲಿ.

ಆಟೋದವನು ಬೆಪ್ಪು ಮುಖದಿಂದ ನಂಬಲಾರದವನಂತೆ ಅವಳನ್ನೇ ನೋಡಿದ. ಇಷ್ಟು ವರ್ಷಗಳಿಂದ ಆಟೋ
ಓಡಿಸ್ತಿದ್ದೀನಿ, ಇಂಥ ವಿಚಿತ್ರ ಗಿರಾಕಿ ಸಿಕ್ಕಿದ್ದು ಇದೇ ಮೊದಲು ಅಂದುಕೊಂಡವನಿಗೆ ಒಳಗೊಳಗೇ ಗಾಬರಿಯೂ ಶುರುವಾಗಿ, ಮುಖವೆಲ್ಲ ಬೆವರಲಾರಂಭಿಸಿತು. ತನ್ನ ಗಾಬರಿಯನ್ನು ಅದುಮಿಕೊಳ್ಳುತ್ತಾ – ಇರಿ ಗಾಬ್ರಿ ಆಗ್ಬೇಡಿ. ನಿಧಾನಕ್ಕೆ ಯೋಚಿಸಿ. ಮನೆ ಕಂಡು ಹಿಡೀಬಹುದು. ಮೊದಲಿಗೆ ಏನಾಯ್ತು ಅಂತ ನಾನು ಗ್ನಾಪಿಸ್ತೀನಿ. ನೀವು ಜೆಪಿ ನಗರದಲ್ಲಿ ನನ್ನ ಗಾಡಿ ಹತ್ತಿದಾಗ ವಿದ್ಯಾರಣ್ಯಪುರಕ್ಕೆ ಹೋಗ್ಬೇಕು ಅಂದ್ರಿ. ಜೆಪಿ ನಗರದಲ್ಲಿ
ಸೆಂಟ್ರಲ್ ಮಾಲ್ ಹತ್ರ ಆಟೋ ಹತ್ತಿದ್ದು…’ ಅನ್ನುವಷ್ಟರಲ್ಲಿ ‘ಉಹೂಂ, ಒಂದೂ ನೆನಪಾಗ್ತಿಲ್ಲರೀ’ ಅಂತ ತಲೆಯಾಡಿಸಿದಳು ಅಹವಿ. ಆಟೋದವನಿಗೆ ಗಾಬರಿ ಶುರುವಾಯ್ತು – ಈಯಮ್ಮನಿಗೆ ಗೊತ್ತಾಗದಿದ್ರೆ ಪೊಲೀಸ್ ಸ್ಟೇಷನ್‌ಗೆ ಕರ್ಕೊಂಡು ಹೋಗ್ಬೇಕಾ? ಹೋಗಿ ಹೋಗಿ ಅವರತ್ರ ಸಿಕ್ಕಾಕಂಡ್ರೆ ದೇವ್ರೇ ಗತಿ. ನೀನೇ ಏನೋ ಮಾಡಿದೀಯ ಅಂತ ಕೂತ್ಕತಾರೆ …ಒಳ್ಳೆ ಕರ್ಮ ಆಯ್ತಲ್ಲ …

ಕ್ರಾಸು, ಮೇನು, ಮನೆ ನಂಬರ್ರು …. ಯಾವ್ದಾರ ನೆನಪೈತಾ …. ಜ್ಞಾಪಿಸ್ಕಳಿ …. ಅನ್ನುವಷ್ಟರಲ್ಲಿ ನಂಬರ್ರು ಅನ್ನುವ ಪದ ಬಾಯಿಂದ ಬಂದಿದ್ದೇ ಆಟೋದವನ ಮುಖ ಅರಳಿತು……

ಅಯ್ಯೋ ಇದ್ಯಾಕಿಷ್ಟು ಟೆಂಗ್ಸನ್ ತಗತೀರಾ. ಮೊಬೈಲ್ ಐತಲ್ಲ, ಯಾವ್ದಾರ ನಂಬರಿಗೆಫೋನ್ ಮಾಡಿ … ಅವನ ವಾಕ್ಯ ಮುಗಿಯುವಷ್ಟರಲ್ಲಿ ಅಹವಿ ಮೆಲ್ಲನೆಂದಳು – ಮೊಬೈಲ್ಮರೆತು ಬಂದಿದೀನಿ ಇವತ್ತು ! ಮೊಬೈಲ್ ಮರೆತು ಬಂದ್ರಾ?! ಮೊಬೈಲಿಲ್ದೇ ಮನೆಬಿಟ್ಟು ಓಯ್ತಾರೇನ್ರೀ ಯಾರಾರ … ಅಸಹಾಯಕತೆಯಲ್ಲಿ ದನಿ ಎತ್ತರಿಸಿದ. ಅಹವಿ ಮತ್ತಿಷ್ಟು ತಬ್ಬಿಬ್ಬಾದಳು. ನೆನ್ನೆ ರಾತ್ರಿ ಗೀತಾಂಜಲಿ ಫೋನ್ ಬಂದಿದ್ದು ನೆನಪಿದೆ. ತುಂಬ ವರ್ಷಗಳ ನಂತರ ಬೆಂಗಳೂರಿಗೆ ಬಂದಿದ್ದೀನಿ. ಬಂದು ಆಗಲೇ ಹದಿನೈದು ದಿನವಾಯ್ತು. ನಾಡಿದ್ದು ವಾಪಸ್
ನನ್ನ ಅಮೆರಿಕಾದ ಗೂಡಿಗೆ. ನಿನ್ನ ನೋಡಬೇಕು ಅನ್ನಿಸ್ತಿದೆ ಅಹವಿ, ಬರ್ತೀಯಾ
ಅಂದಿದ್ದಳು. ಅಷ್ಟು ನೆನಪಿದೆ.

ಪ್ರತಿ ದಿನ ಬೇಗ ಎದ್ದು ಆಫೀಸಿಗೆ ಓಡಿ ಸುಸ್ತಾಗೋದ್ರಿಂದ ಶನಿವಾರ, ಭಾನುವಾರ ಲೇಟಾಗಿ ಏಳುವುದು ಅಭ್ಯಾಸವಾಗಿ ಹೋಗಿತ್ತು. ಹಾಗಾಗಿ ಇವತ್ತು ಎಚ್ಚರವೇ ಆಗಲಿಲ್ಲ. ಕಣ್ಣುಬಿಟ್ಟಾಗ ಗೀತಾಂಜಲಿಗೆ ಹತ್ತೂವರೆಗೆ ಸಿಗ್ತೀನಿ ಅಂದಿದ್ದು ನೆನಪಿಗೆ ಬಂತು. ಟೈಮ್ ನೋಡಿದರೆ ಆಗಲೇ ಒಂಭತ್ತೂ ಮುಕ್ಕಾಲು. ಸತ್ತೆ !! ಅಂತ ಹೌಹಾರಿ, ಗಾಬರಿ ಬಿದ್ದು, ಸರಿಯಾಗಿ 120 ಸೆಕೆಂಡುಗಳಲ್ಲಿ ಹಲ್ಲುಜ್ಜಿ, 600 ಸೆಕೆಂಡುಗಳಲ್ಲಿ ಸ್ನಾನ ಮುಗಿಸಿ
ಸ್ವಲ್ಪ ಲೇಟ್ ಆಗಬಹುದು ಅಂತ ಗೀತಾಂಜಲಿಗೆ ಫೋನ್ ಮಾಡಿದವಳು, ಅದೇ ಅವಸರದಲ್ಲೇ ಅದನ್ನು
ಅಲ್ಲೇ ಇಟ್ಟು ಮರೆತು ಮನೆ ಬಿಟ್ಟಿದ್ದಳು. ಸ್ವಲ್ಪ ದೂರ ಬಂದ ಮೇಲೆ ಮೊಬೈಲ್ ನೆನಪಾಯಿತಾದರೂ, ಮತ್ತೆ ತರಲು ಹೋದರೆ ಮತ್ತಿಷ್ಟು ತಡವಾಗಬಹುದು ಅಂತ ಹಾಗೇ ಹೊರಟು ಬಂದಿದ್ದಳು. ಎಲ್ಲ, ಎಲ್ಲವೂ ನೆನಪಿದೆ … ಮನೆಯ ದಾರಿಯೊಂದನ್ನು ಬಿಟ್ಟು! ಗಂಡನ ನಂಬರ್ ನೆನಪಿಸಿಕೊಳ್ಳಲು ಪ್ರಯತ್ನಿಸಿದಳು … ಕರ್ಣ ಮಂತ್ರ ಮರೆತ ಸ್ಥಿತಿ ಅವಳದ್ದು. ಮೊಬೈಲ್‌ನಲ್ಲಿ ನಂಬರ್‌ಗಳನ್ನು ಸ್ಟೋರ್ ಮಾಡುವ ಅಭ್ಯಾಸ ಬೆಳೆದ ಮೇಲೆ ಯಾವ ನಂಬರ್ ಕೂಡಾ ಬಾಯಲ್ಲಿರೋದಿಲ್ಲ. ಹತಾಶಳಾಗಿ ಹೋದಳು ಅಹವಿ

ಒಂದು ಕೆಲಸ ಮಾಡಿ, ನಿಮ್ಮನ್ನ ಎಲ್ಲಾದರೂ ಇಳಿಸ್ತೀನಿ. ನಡ್ಕೊಂಡು ಹುಡುಕಿದ್ರೆ ಸಿಗ್ಬಹುದು. ಎಷ್ಟು ಹೊತ್ತೂ ಅಂತ ಆಟೋದಲ್ಲಿ ಕೂತಿರ್ತೀರಾ? ಅಂದ ಆಟೋದವ. ಈಗ ಐದು ನಿಮಿಷದ ಕೆಳಗೆ ಆಟೋದವನನ್ನು ಕಂಡು ಹೆದರಿದ್ದ ಮನಸ್ಸು ಈಗ ಇನ್ನಷ್ಟು ಗಾಬರಿ ಬಿದ್ದಿತು. ಈ ವಿಶಾಲ ವಿಶ್ವದಲ್ಲಿ ಅವಳಿಗೆ ನೆನಪಿದ್ದ ಜನ್ಮಕ್ಕೂ, ಈಗ ಮರೆವು ಆವರಿಸಿದ ಜನ್ಮಕ್ಕೂ ಮಧ್ಯೆಯ ಏಕೈಕ ಕೊಂಡಿ ಈ ಆಟೋದವನು ಮಾತ್ರ. ಅವನೂ ಹೊರಟುಹೋದರೆ ನನ್ನ ಗತಿಯೇನು? ಅಂತನ್ನಿಸಿತು. ಸುತ್ತಾಡಿದ್ರೆ ಹೇಗೂ ದುಡ್ಡು ಬರತ್ತೆ ಅಂತ ಗೊತ್ತಿದ್ರೂ ದುರುಪಯೋಗ ಪಡಿಸಿಕೊಳ್ಳದವನು ಒಳ್ಳೆಯವನೇ ಇರಬೇಕು ಅನ್ನಿಸಿತು. ಮರುಕ್ಷಣವೇ ಅನುಮಾನ – ನನಗೆ ನೆನಪೇ ಬಾರದಿದ್ದರೆ ನಾನೆಲ್ಲಿ ಅವನಿಗೇ ಗಂಟು ಬೀಳ್ತೀನೋ ಅಂತ ಜಾರಿಕೊಳ್ಳಲು ಈ ಥರ ಸಲಹೆ ಕೊಡ್ತಿದ್ದಾನಾ!

‘ಇನ್ನೊಂದಿಷ್ಟು ಹೊತ್ತು ಹುಡುಕೋಣಪ್ಪಾ, ನನಗೆ ಒಂಚೂರು ಸಹಾಯ ಮಾಡು ಪ್ಲೀಸ್ …’ ಅಂದಳು ದೈನ್ಯದ ದನಿಯಲ್ಲಿ. ಆಟೋದವನಿಗೆ ಏನನ್ನಿಸಿತೋ ಗೊತ್ತಿಲ್ಲ – ಈಗ ಹೇಳಿ ಎಲ್ಲಿಂದ ಶುರು ಮಾಡಣ ಅಂತ ಎಂದ. ಏನೂ ಗೊತ್ತಿಲ್ಲದ ನನಗೆ ಎಲ್ಲಿಂದ ಹುಡುಕೋಣ ಅಂದರೆ ಏನು ಹೇಳಲಿ? ಎಲ್ಲಿಂದ ಶುರು ಮಾಡಿದರೂ ಒಂದೇ. ಹುಡುಕಾಟ ಮೊದಲ ಹೆಜ್ಜೆಯಿಂದ ಶುರುವಾಗಬೇಕು … ಮಗುವಿನ ಮೊದಲ ಹೆಜ್ಜೆಯ ಥರ. ಎಲ್ಲಿ ಹೆಜ್ಜೆ ಇಟ್ಟರೆ ಬೀಳುತ್ತೀನಿಗೊತ್ತಿಲ್ಲ, ಎಲ್ಲಿಟ್ಟರೆ ಹುಡುಕಾಟ ಮುಗಿಯಬಹುದು ಅಂತಲೂ ಗೊತ್ತಿಲ್ಲ …

ಮುಂದಿನ ಕ್ರಾಸಲ್ಲಿ ರೈಟ್ ತಗೋ ನೋಡೋಣ ಅಂದಳು. ರಸ್ತೆಯುದ್ದದ ವಿವಿಧ ವಿನ್ಯಾಸದ ಮನೆಗಳನ್ನು ಒಂದೊಂದಾಗಿ ನೋಡುತ್ತಾ ಸಾಗಿದಳು. ಮನೆಗಳೆಲ್ಲ ಮುದ್ದಾಗಿದ್ದವು, ಆದರೆ ಯಾವ ಮನೆಯೂ ಅವಳದ್ದಾಗಿರಲಿಲ್ಲ. ಹಾಗೇ ಮುಂದಿನ ರಸ್ತೇಲಿ ರೈಟ್ ತಗೊಂಡು ಮತ್ತೆ ರೈಟ್ ತಗೊಂಡು ಪಕ್ಕದ ರಸ್ತೆಗೆ ಹೋಗಪ್ಪಾ …

ಪಕ್ಕದ ರಸ್ತೆಯಲ್ಲಿ ಹುಡುಕಾಟ ಮುಂದುವರೆಯಿತು. ನಿಮ್ಮ ಹೆಸರೇನು – ಆಟೋದವನ ಪ್ರಶ್ನೆ ಕೇಳಿ ನಗು ಬಂತು. ಸಿನೆಮಾದಲ್ಲಾದ ಹಾಗೆ ಹೆಸರೂ ಮರೆತು ಹೋಗಿದೆಯೇನೋ ಅಂತ ಗಾಬರಿ ಆಗಿರಬೇಕು ಪಾಪ ಅನ್ನಿಸಿ ಅಹವಿ ಅಂದಳು. ಆ ಒಂದು ಪ್ರಶ್ನೆಯಿಂದ ಶುರುವಾದ ಮಾತು ಹಾಗೇ ಮುಂದುವರೆಯುತ್ತಾ ಹೋಯ್ತು. ಮನೇಲಿ ಯಾರಿದ್ದಾರೆ, ಕೆಲಸ ಮಾಡ್ತೀರಾ? ಮನೆಗೆ ಯಾವ ಬಣ್ಣ ಹೊಡೆಸಿದ್ದೀರ? ಮಕ್ಕಳಿದ್ದಾರ? ಅಪ್ಪ – ಅಮ್ಮ? ಅತ್ತೆ-ಮಾವ? … ಅವನೂ ಪ್ರಶ್ನಿಸುತ್ತಾ ಹೋದ. ಎಲ್ಲರ ಹೆಸರೂ ತಡವರಿಸದೇ ಹೇಳಿದಳು. ಆದರೆ ಮನೆಯ ಬಣ್ಣ ಮಾತ್ರ ನೆನಪಾಗಲಿಲ್ಲ. ನೆನಪಿಗೆ ಶಾಪ ಬಡೆದ ಹಾಗಾಗಿತ್ತು ಅದೊಂದು ವಿಷಯದಲ್ಲಿ.

ಆಟೋ ಬೀದಿ ಬೀದಿಗಳಲ್ಲಿ ಉತ್ಸವ ಮಾಡುತ್ತಾ ಸಾಗಿತು. ಸಾವಿರಾರು ಮನೆಗಳು … ನಾನಾ ಬಣ್ಣದ್ದು, ನಾನಾ ಆಕಾರದ್ದು, ಮನೆಯ ಮುಂದೆ ತೋಟವಿರುವುದು, ಒಂದು ಸಣ್ಣ ಹಸಿರಿನ ಸುಳಿವೂ ಇಲ್ಲದೆ ಕಳೆಗುಂದಿರುವುದು, ಬಣ್ಣಗೆಟ್ಟಿದ್ದು, ಪಾಚಿ ಕಟ್ಟಿದ್ದು, ವೈಭವದ್ದು, ಅತೀ ಸಾಧಾರಣವಾದದ್ದು … ಯಾವ ಮನೆ ನೋಡಿದರೂ ಅದು ತನ್ನ ಮನೆಯಲ್ಲ ಅನ್ನಿಸುತ್ತಲೇ ಹೋಯಿತು. ಅಹವಿ ಕಂಗೆಟ್ಟಳು. ಹೊಟ್ಟೆ ಚುರುಗುಟ್ಟಲು ಶುರುವಾಯ್ತು.
ಗೀತಾಂಜಲಿಯ ಜೊತೆ ತಿಂದ ಫ್ರೈಡ್ ರೈಸ್ ಖಾಲಿಯಾಗಿ ಹೋದ ಹಾಗೆ ಅನ್ನಿಸಿ, ಮತ್ತೆ ಹಸಿವು. ಇಲ್ಲಿ ನಿಲ್ಲಿಸಿ ಸ್ವಲ್ಪ – ಅಂದಳು. ಆಟೋದವ ನಿಲ್ಲಿಸಿದ. ಸಣ್ಣ ಸಮಾಧಾನದ ನಿಟ್ಟುಸಿರೊಂದು ಅವನಿಗೆ ಅರಿವಿಲ್ಲದೇ ಬಿತ್ತು. ಮನೆ ಸಿಕ್ತೇನೋ ಸಧ್ಯ ಈಯಮ್ಮಂದು, ಬದುಕಿದೆ. ಇನ್ನು ಮುಂದೆ ಆಟೋ ಹತ್ತುವಾಗಲೇ ಮನೆ ಅಡ್ರೆಸ್ ಬರೆದುಕೊಡಿ ಅಂತ ಬರೆಸಿ ಇಟ್ಟುಕೊಳ್ಳಬೇಕು. ಇಂಥಾ ಜನ ಸಿಕ್ಕಿಬಿಟ್ಟರೆ ಹುಚ್ಚು ಹಿಡಿದು, ಆಟೋ ಓಡಿಸೋದನ್ನ ನಿಲ್ಲಿಸಬೇಕಾಗತ್ತೆ ಅಂದುಕೊಳ್ಳುತ್ತಾ ಗಾಡಿ ನಿಲ್ಲಿಸಿದ.

ಸಧ್ಯ ಸಿಕ್ತಲ್ಲಾ – ಅವನ ಮಾತಿನ್ನೂ ಮುಗಿಯುವಷ್ಟರಲ್ಲಿ ಇದು ನಮ್ಮನೆ ಅಲ್ಲ, ಹೋಗಿ ಕೇಳ್ಕೊಂಡು ಬರ್ತೀನಿ ಆ ಮನೆಯವರನ್ನ, ಅದಕ್ಕೇ ನಿಲ್ಸಿದೆ ಅಷ್ಟೇ – ಅನ್ನುತ್ತಾ ಇಳಿದು ಹೋದಳು. ಆಟೋ ಡ್ರೈವರ್- ದುಡ್ಡು ಇಲ್ದಿದ್ರೂ ಪರವಾಗಿಲ್ಲ. ಈಯಮ್ಮ ತಲೆ ತಿನ್ತಾ ಇದಾಳೆ. ಬಿಟ್ಟು ಓಡಿ ಹೊರಟುಹೋದ್ರೆ ಹೇಗೆ ಅಂದುಕೊಂಡ. ಬಗ್ಗಿ ಮೀಟರ್ ನೋಡಿದ ಮುನ್ನೂರೂ ಚಿಲ್ಲರೆ ತೋರಿಸುತ್ತಿತ್ತು. ಹೋದರೆ ಹೋಗಲಿ, ನಾಳೆ ರಾತ್ರಿ ಶಿಫ್ಟಲ್ಲಿ ಗಾಡಿ ಓಡಿಸಿದ್ರೆ ಈ ದುಡ್ಡನ್ನ ದುಡಿದು ಬಿಡಬೋದು, ಈಗ ತಪ್ಪಿಸಿಕೊಂಡು ಹೋಗಿಬಿಡ್ಲಾ … ಮನಸ್ಸುಕೇಳುತ್ತಿದ್ದರೂ ಯಾಕೋ ಎಲ್ಲ ಮರೆತು ನಿಂತ ಆ ಹೆಂಗಸನ್ನು ಬಿಟ್ಟು ಓಡಿಹೋಗಲು ಅವನ ಮನಸ್ಸು ಒಪ್ಪಲೇ ಇಲ್ಲ. ಕಾಲೆಳೆದುಕೊಂಡು ಯಾವುದೋ ಮನೆಯ ಗೇಟು ತೆಗೆದು ಒಳಗೆ ಹೋಗುತ್ತಿದ್ದವಳನ್ನೇ ನೋಡುತ್ತಾ ಕೂತ. ಅವಳು ಬಾಗಿಲು ತಟ್ಟಿದ್ದು ಕಂಡಿತು. ಒಂದೆರಡು ನಿಮಿಷ ಕಾದ ಮೇಲೆ ಬಾಗಿಲು ತೆಗೆದದ್ದೂ ಕಂಡಿತು. ಅವಳೇನೋ ಕೇಳ್ತಿದ್ದದ್ದು ಕಾಣಿಸಿತು. ದೇವರೇ ಈಯಮ್ಮನಿಗೆ ಮನೆ ಒಂದು ಸಿಕ್ಕಿ ಬುಡ್ಲಪ್ಪ ಪಾಪ ಅಂತ ಮನಸಾರೆ ಹಾರೈಸಿದ. ಅಷ್ಟರಲ್ಲಿ ವಾಪಸ್ ಬರುತ್ತಿದ್ದ ಅವಳ ಸೋತ ನಡಿಗೆ ನೋಡಿಯೇ ಅವಳು ಹೋಗಿ ಕೇಳಿದ್ದರಿಂದ ಯಾವ ಪ್ರಯೋಜನವೂ ಆಗಿಲ್ಲ ಅಂತ ಗೊತ್ತಾಗಿಹೋಯಿತು ಅವನಿಗೆ.

ವಾಪಸ್ ಬಂದವಳು ಆಟೋ ಹತ್ತಿ ಕುಕ್ಕರಿಸಿದವಳು ಹತಾಶೆಯ ದನಿಯಲ್ಲಿ – ನಂಗೆ ಹಸಿವು ಕಣ್ರೀ ಅಂದಳು. ಡ್ರೈವರ್‌ಗೆ ಯಾಕೋ ತುಂಬ ಪಾಪವೆನ್ನಿಸಿತು. ಬರುವಾಗ ದಾರಿಯಲ್ಲಿ ಕಂಡಿದ್ದ ಚಂದ್ರಿಕಾ ಹೋಟೆಲ್ ಹತ್ತಿರ ಆಟೋ ನಡೆಸಿದ. ಅಲ್ಲಿ ನಿಲ್ಲಿಸಿ – ನಿಧಾನಕ್ಕೆತಿಂದು ಬನ್ನಿ ಮೇಡಮ್, ಪರ್ವಾಗಿಲ್ಲ. ನಾನು ಕಾಯ್ತೀನಿ ಅಂದ. ಅವಳು ನಾಲ್ಕು ಹೆಜ್ಜೆ ಹೋದವಳು ವಾಪಸ್ ಬಂದು ನೀವೂ ಬನ್ನಿ, ತಿನ್ನುವಿರಂತೆ ಅಂದಳು ಜಗತ್ತಿನ ಏಕೈಕ
ಕೊಂಡಿಯಾಗಿದ್ದ ಅವನನ್ನು ಕೃತಜ್ಞತೆಯಿಂದ ನೋಡುತ್ತಾ. ಅವನು ಇಲ್ಲ ನೀವು ಹೋಗ್ಬನ್ನಿ ಅಂದವನೇ ಅವಳಿಗಾಗಿ ಕಾಯುತ್ತಾ ಕೂತ.

ಹೋಟೆಲ್ ಒಳಹೊಕ್ಕವಳು ಹೊಟ್ಟೆಗೆ ಕಂಡು ಎಷ್ಟೋ ಜನ್ಮವಾಯಿತೇನೋ ಅನ್ನುವ ಹಾಗೆ ತಿಂದಳು. ಮನಸ್ಸಿನ ತುಂಬ ಇಷ್ಟೊಂದು ಕಳವಳ ಇರುವಾಗಲೂ ಹೊಟ್ಟೆ ಹಸಿಯುತ್ತದಲ್ಲ ಅಂತ ಆಶ್ಚರ್ಯವೆನ್ನಿಸಿತು. ತಿನ್ನುತ್ತಲೇ ಮನಸ್ಸು ಯೋಚನೆಗೆ ಬಿದ್ದಿತು. ಸಮಯ ನೋಡಿಕೊಂಡರೆ ಆಗಲೇ ಐದು ಘಂಟೆ! ಅಂದರೆ ಹೆಚ್ಚು ಕಡಿಮೆ ಮೂರು ಘಂಟೆಗಳಿಂದಲೂ ಹುಡುಕುತ್ತಿದ್ದೇನೆ ಅಂತಾಯಿತು. ಇನ್ನು ಸ್ವಲ್ಪ ಹೊತ್ತಿಗೆ ಕತ್ತಲು ಆವರಿಸುತ್ತದೆ. ಅಷ್ಟರೊಳಗೆ ಮನೆ ಸಿಗದಿದ್ದರೆ …? ಸಮಯ ಜಾಸ್ತಿಯಿಲ್ಲ ಅಂತ ಎದ್ದಳು. ಆಟೋದವ ಕಾಯುತ್ತಾ ಕೂತಿದ್ದ. ಅವಳು ಬಂದ ಕೂಡಲೇ – ಒಂದು ಕೆಲಸ ಮಾಡೋಣ್ವಾ? ನೀವು ಹತ್ತಿದ ಜಾಗಕ್ಕೆ ಮತ್ತೆ ಕರ್ಕೊಂಡು ಹೋಗಲಾ? ಆಗಲಾದ್ರೂ ಏನಾದ್ರೂ ಜ್ಞಾಪಕ ಬರತ್ತೇನೋ ಅಂದ. ನನ್ನ ಮನೇನೆ ನೆನಪಾಗ್ತಿಲ್ಲ ಅಂದರೆ ಇನ್ನು ಹತ್ತಿದ ಜಾಗಕ್ಕೆ ಹೋದ್ರೂ ಏನೂ ಯೂಸ್ ಇಲ್ಲ ಅನ್ನಿಸ್ತಿದೆ. ಬೇಡಪ್ಪ, ಇನ್ನೊಂದು ಕೆಲಸ ಮಾಡೋಣ, ಆರು ಘಂಟೆವರೆಗೂ ಹುಡುಕೋಣ,ಅಷ್ಟರವರೆಗೂ ಸಿಗದಿದ್ದರೆ ನನ್ನನ್ನು ಬಿಟ್ಟು ನೀನು ಹೊರಡು ಎಂದಳು.

ಆಟೋ ಮತ್ತೆ ಹೊರಟಿತು. ಯಾವ ಬೀದಿಗಳಲ್ಲಿ ಹುಡುಕಿದ್ದು ಆಯಿತು ಅನ್ನುವುದು ಕೂಡಾ ನೆನಪಾಗಲಿಲ್ಲ ಅಹವಿಗೆ. ಆಟೋ ಡ್ರೈವರ್ ಸಾಹೇಬ ತಾನೇ ಹೊಸ ಹೊಸ ರಸ್ತೆಗಳಲ್ಲಿ ಆಟೋ ಚಲಾಯಿಸಿದ. ಅಲ್ಲಲ್ಲಿ ನಿಲ್ಲಿಸಿದ. ಅಹವಿ ಹೆಚ್ಚಿದ ಆತಂಕದ ಜೊತೆಯೇ ಮತ್ತಿಷ್ಟು ಮನೆಗಳ ಬಾಗಿಲು ತಟ್ಟಿ – ನಾನು ಮನೆ ಮರೆತು ಬಿಟ್ಟಿದೀನಿ. ನಿಮ್ಮ ರೋಡಿನಲ್ಲಿ ನನ್ನ ಎಲ್ಲಾದ್ರೂ ಕಂಡಿದ್ರಾ ಅಂತ ಪ್ರಶ್ನೆ ಹಾಕಿದಳು. ಕೆಲವರು ಹುಬ್ಬು ಗಂಟಿಕ್ಕಿ ತಲೆಯಾಡಿಸಿದರೆ, ಮತ್ತೆ ಕೆಲವರ ಅನುಮಾನದ ದೃಷ್ಟಿ ಅವಳನ್ನು ಹಿಂಬಾಲಿಸಿತು ಕೂಡಾ.
ಕೆಲವು ಮನೆಗಳಲ್ಲಿ ಅವಳು ಹಿಂತಿರುಗಿದ ಕೂಡಲೇ – ಯಾರನ್ನೂ ನಂಬಕ್ಕಾಗಲ್ಲ ಈ ಕಾಲದಲ್ಲಿ, ಕಳ್ಳರೂ ಚೆನ್ನಾಗೇ ಡ್ರೆಸ್ ಮಾಡಿಕೊಂಡಿರ್ತಾರೆ. ಮನೆ ನೆನಪಿಲ್ಲ ಅಂದ್ರೆ ನಂಬಕ್ಕಾಗತ್ತಾ ಅನ್ನುವ ಮಾತು ಕಿವಿಗೆ ಬಿದ್ದಾಗ ಅಹವಿಗೆ ಅಳು ಬಂತು. ನಂಗೇ ನಂಬಕ್ಕಾಗ್ತಿಲ್ಲ ಅಂತ ಕಿರುಚಲಾ ಅನ್ನಿಸುವಷ್ಟು ಸಿಟ್ಟು ಕೂಡಾ ಬಂದಿತು. ಇನ್ನು ಸಾಧ್ಯವಿಲ್ಲ ಅನ್ನಿಸಿ, ಆಟೋ ಹತ್ತಿರ ಬಂದು, ನಾನು ಇಲ್ಲಿ ಇಳ್ಕೊಳ್ತೀನಿ, ನೀನು ಹೋಗಪ್ಪಾ ಅಂದಳು. ಇಲ್ಲಿ ಇಳ್ಕೊಂಡು ಏನ್ಮಾಡ್ತೀರಾ? ಬನ್ನಿ ಪೊಲೀಸ್ ಸ್ಟೇಷನ್‌ಗಾರ ಹೋಗಣ. ಅವ್ರು ಟಿವಿ, ಪೇಪರ್‌ಲೇನಾರ ಹಾಕ್ಸಿ ನಿಮ್ಮನೆ ಹುಡುಕಿಸ್ತಾರೆ ಅಂದ. ನಾನು ಅಲ್ಲಿಗೆಲ್ಲ ಬರಲ್ಲ. ಮೀಟರ್ ಎಷ್ಟಾಗಿದೆ ಹೇಳು. ನಾನೂರ ಮೂವತ್ತಾ? ಸರಿ, ಈ ಸಾವಿರ ರೂಪಾಯಿ ಇಟ್ಕೋ. ಮಧ್ಯಾಹ್ನದಿಂದ ನನ್ಗೆ ತುಂಬ ಸಹಾಯ ಮಾಡಿದೆ. ಥ್ಯಾಂಕ್ಸ್ ಕಣಪ್ಪಾ –
ಅನ್ನುತ್ತಾ ದುಡ್ಡು ಕೊಟ್ಟಳು. ಆಟೋದವನಿಗೆ ಒಂಥರಾ ಸಿನೆಮಾ ಅರ್ಧದಲ್ಲಿ ನಿಂತು ಹೋದಂಥ ಕಸಿವಿಸಿ … ಇಷ್ಟು ಹುಡುಕಿಯೂ ಮನೆ ಸಿಗಲಿಲ್ವಲ್ಲಾ ಅಂತ ಬೇಜಾರಾಯ್ತು. ಇನ್ನೊಂದು ಸ್ವಲ್ಪ ಹೊತ್ತು ಹುಡುಕಕ್ಕೆ ನಾನಂತೂ ರೆಡಿರೀ ಅಂದ. ಇಲ್ಲಪ್ಪಾ ನಾನು ಒಬ್ಳೇ ಕೂತುಯೋಚನೆ ಮಾಡಿಕೊಳ್ತೀನಿ. ನೀನಿನ್ನು ಹೊರಡು ಅಂದವಳ ಧ್ವನಿಯಲ್ಲಿ ನಿರ್ಧಾರವಿತ್ತು.

ಆಟೋದವನು ಕಣ್ಮರೆಯಾಗುವವರೆಗೂ ನೋಡುತ್ತಾ ನಿಂತಿದ್ದಳು ಅಹವಿ. ಮೂಲೆಯ ತಿರುವಿನಲ್ಲಿ ತಿರುಗಿ ಕಾಣೆಯಾದ ನಂತರ ಅಲ್ಲೇ ಒಂದು ಮನೆಯ ಮುಂದೆ ಹಾಕಿದ್ದ ಸಿಮೆಂಟ್ ಕಟ್ಟೆಯ ಮೇಲೆ ಕೂತಳು. ಯೋಚನೆಯಿಂದ ಸಪ್ಪಗಾದ ಮುಖದಲ್ಲಿ ಕಾಲು ಚಾಚಿ ಕೂತಳು. ಇಡೀ ರಸ್ತೆಯಲ್ಲಿ ಒಂದು ನರಪ್ರಾಣಿಯಿಲ್ಲ. ಯಾರ ಮನೆಯ ಬಾಗಿಲು ತಟ್ಟುವ ಉತ್ಸಾಹವೂ ಉಳಿದಿರಲಿಲ್ಲ. ಮುಳುಗುತ್ತಿರುವ ಸೂರ್ಯನನ್ನೇ ನೋಡುತ್ತಾ ಕೂತಳು. ಸೂರ್ಯ ಹೊರಟ ಮೇಲೆ ಕತ್ತಲೂ ಆವರಿಸಿತು. ಅಹವಿ ಮಾತ್ರ ಕೂತ ಜಾಗ ಬಿಟ್ಟು ಏಳಲಿಲ್ಲ. ಎದ್ದು ಎಲ್ಲಿಗೆ ಹೋಗಬೇಕು ಅಂತಲೇ ಗೊತ್ತಿಲ್ಲದ ಮೇಲೆ ಎದ್ದಾದರೂ ಏನು ಮಾಡಬೇಕು ಅವಳು. ಈಗಂತೂ ತಲೆಯಲ್ಲಿ ಯೋಚನೆಯ ತಂತುವೂ ಇಲ್ಲದಷ್ಟು ಖಾಲಿ ಖಾಲಿ. ಇದೆಲ್ಲ ನಿಜಕ್ಕೂ ನಡೆಯುತ್ತಿದೆಯೋ ಅಥವಾ ಕನಸೋ ಅನ್ನಿಸಿತು ಕೂಡಾ. ಹುಡುಕಾಟ ಸುಸ್ತು ತರಿಸಿತ್ತು. ಅಷ್ಟರಲ್ಲಿ ಕಾರೊಂದು ಬಂದು ಎದುರು ನಿಂತಿತು. ಅದರ ಹೆಡ್‌ ಲೈಟಿನ ಬೆಳಕು ಕಣ್ಣಿಗೆ ಬಿದ್ದಾಗ ಅಹವಿ ಗಡಬಡಿಸಿ ಎದ್ದು ನಿಂತಳು. ಮನೆಯ ಮುಂದೆ ಕೂತಿದ್ದಕ್ಕೂ ಏನಾದರೂ ಅನ್ನುತ್ತಾರೋ ಏನೋ … ಜಾಗ ಖಾಲಿ ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಕಾರಿನಿಂದ ‘ಯಾಕೆ ಇಲ್ಲಿ ಕೂತಿದೀ. ಮನೆ ಕೀ ತೆಗೆದುಕೊಂಡು ಹೋಗಕ್ಕೇನು ರೋಗ’ ಅನ್ನುವ ಮಾತು ಕೇಳಿಸಿತು. ತಲೆಯೆತ್ತಿ ನೋಡಿದರೆ ಯಾರೋ ಅಪರಿಚಿತ…

ಅವನು ಎರಡೂ ಗೇಟು ತೆರೆದು ಕಾರನ್ನು ಕಾಂಪೌಂಡಿನೊಳಗೆ ನಿಲ್ಲಿಸಿ ಕೆಳಗಿಳಿದು ಲಾಕ್ ಮಾಡಿ, ಬಾಗಿಲು ತೆರೆದು ಶೂ ತೆಗೆಯುವಾಗ ನಿಂತಲ್ಲೇ ನಿಂತಿದ್ದ ಅವಳನ್ನು ಕಂಡು ಹುಬ್ಬು ಗಂಟಿಕ್ಕಿ ನೋಡಿದಾಗ ಅತ್ತ ಹೆಜ್ಜೆ ಹಾಕಲೇ ಬೇಕಾಯಿತು. ಒಳ ಹೊಕ್ಕ ನಂತರವಾದರೂ ಈ ಮನೆಯ ಪರಿಚಯ ಸಿಗಬಹುದಾ – ಅಹವಿ ಉಸಿರು ಬಿಗಿಹಿಡಿದು ಕಾದಳು…

11 comments

    • ಥ್ಯಾಂಕ್ಸ್ ಸರಯು!
      ನಿಮ್ಮ ಹೆಸರು ನನಗೆ ತುಂಬ ಪ್ರಿಯ

  1. ಅದ್ಭುತ… ಈ ದಿನ ಒಂದೇ ಗುಕ್ಕಿಗೆ ಓದುವಂತದ್ದು ಏನಾದ್ರೂ ಸಿಗಲಿ ಅಂತ ದೇವರಲ್ಲಿ ಕೇಳಿಕೊಂಡಿದ್ದೆ. ಇಂಥದ್ದೊಂದು ಅದ್ಭುತ ಕತೆ ಸಿಗುತ್ತೆ ಅಂದುಕೊಂಡಿರಲಿಲ್ಲ….

    • ಬರೆದಿದ್ದು ಸಾರ್ಥಕ ಅನ್ನಿಸಿತು

Leave a Reply