ನಾನೂ ಒಂದಿಷ್ಟು ಏನನ್ನೋ ಹೇಳುವುದಿದೆ..

ಇದೊಂದು ಸೋಜಿಗ. ‘ಬಹುರೂಪಿ’ ತರುತ್ತಿರುವ ಒಂದು ಕವಿತಾ ಸಂಕಲನವೇ ನೆಪವಾಗಿ ಅಮ್ಮ-ಮಗ ಕವಿತೆ ಎಂದರೇನು ಎನ್ನುವ ಶೋಧಕ್ಕೆ ಹೊರಟಿದ್ದಾರೆ.

‘ಬಹುರೂಪಿ’ ಸದ್ಯದಲ್ಲೇ ಆಕರ್ಷ ಕಮಲ ಅವರ ಕವಿತಾ ಸಂಕಲನವನ್ನು ಹೊರತರುತ್ತಿದೆ. ಇದನ್ನು ಘೋಷಿಸಿದ ಸಂದರ್ಭದಲ್ಲಿ ಆಕರ್ಷ ಕಮಲ ಅವರ ತಾಯಿ, ಖ್ಯಾತ ಕವಯತ್ರಿ ಎಂ ಆರ್ ಕಮಲ ತಮ್ಮ ಮಗನಿಗೆ ಕವಿತೆಯ ಬಗ್ಗೆ ಪಿಸುನುಡಿಗಳನ್ನು ಆಡಿದರು. ಅದು ಇಲ್ಲಿದೆ.

ಇದಕ್ಕೆ ಉತ್ತರವಾಗಿ ಆಕರ್ಷ ‘ನಾ ಬರೆಯಲಾಗದ ಕವಿತೆ ‘ಅಮ್ಮ’ನಿಗೆ..’ ಬರೆದರು. ಅದು ಇಲ್ಲಿದೆ

ಖ್ಯಾತ ಕವಯತ್ರಿ ಲಲಿತಾ ಸಿದ್ಧಬಸವಯ್ಯ ಈ ಎರಡಕ್ಕೂ ತಮ್ಮ ಮಾತನ್ನೂ ಜೋಡಿಸಿದ್ದಾರೆ. ಅದು ಇಲ್ಲಿದೆ

ಈಗ ಧಾರವಾಡದಿಂದ ಬರಹಗಾರ, ಚಿಂತಕ ಅಶೋಕ್ ಶೆಟ್ಟರ್ ತಮ್ಮ ದನಿಗೂಡಿಸಿದ್ದಾರೆ. ಅದು ಇಲ್ಲಿದೆ

ಈಗ ಅಂಕೋಲೆಯಿಂದ ಕವಯತ್ರಿ ರೇಣುಕಾ ರಮಾನಂದ ತಮ್ಮೊಳಗೆ ಕವಿತೆ ಉಕ್ಕುವ ಬಗೆಯನ್ನು ಬಿಡಿಸಿಟ್ಟಿದ್ದಾರೆ. ಓದಿ

ನೀವೂ ಇದಕ್ಕೆ ಸೇರಿಸುವ ಪಿಸು ಮಾತುಗಳಿದ್ದರೆ avadhimag@gmail.com ಗೆ ಕಳಿಸಿ

ರೇಣುಕಾ ರಮಾನಂದ

ನಿಮ್ಮ ಮೊದಲ ಪುಸ್ತಕ ಬರುವ ನೆವದಲ್ಲಿ ನಾನೂ ನನ್ನದಾದ ಒಂದಿಷ್ಟು ಏನನ್ನೋ ಹೇಳುವುದಿದೆ.

ಪ್ರೀತಿಯ ಆಕರ್ಷ..

ನಾನು ನಿಮ್ಮನ್ನು ನೋಡಿಲ್ಲ.ನೋಡದೆಯೂ ಒಬ್ಬ ವ್ಯಕ್ತಿಯ ಮುಗ್ಧ ಮೌನವನ್ನು ಅರ್ಥಮಾಡಿಕೊಂಡು ಮೆಚ್ಚುವ, ಇಬ್ಬಗೆಯ ಮನೋಭಾವವನ್ನು ಗುರ್ತಿಸಿ ದೂರಸರಿದುಬಿಡುವ ಯಾವುದೋ ಒಂದು ಅಂತರ್ ದೃಷ್ಟಿ ಹೇಗೋ ಈ ಕವಿತೆಯ ಮೂಲಕವಾಗಿ ಒಲಿದುಬಿಟ್ಟಿದೆ ಅನ್ನಿಸಿದೆ ನನಗೆ.

ನೋಡಿದರೆ… ಒಡನಾಡಿದರೆ.. ಒಂದೊಂದೇ ಇಲ್ಲದ ಅವಗುಣಗಳೂ ಇರುವ ಹಾಗೆ ಕಾಣಿಸುವ ಕಾರಣಕ್ಕೋ ಏನೋ ನಾನು ಕವಿತೆಯ ಮೂಲಕ ಇಷ್ಟವಾದ ವ್ಯಕ್ತಿಗಳನ್ನು ಅತ್ಯವಶ್ಯಕ ಕಾರಣದ ಹೊರತು ಭೇಟಿಯಾಗಲು ಇಚ್ಛಿಸುವುದಿಲ್ಲ…”ಕವಿತೆಯ ಮೂಲಕವಾಗಿ” ಎಂದೇಕೆ ಹೇಳಿದ್ದೆಂದರೆ ಬರೆದರೂ ಬರೆಯದಿದ್ದರೂ ನನ್ನೊಳಗೆ ಇರುವ ಹಾಗೂ ಎದುರಿನವರಲ್ಲಿ ನಾನು ಕಾಣುವ ಸಂಗತಿ ಅದೊಂದು ಮಾತ್ರ.

ಬದುಕೇ ಬಂದು ಕವಿತೆ ಅಲ್ಲವಾ..
ಕೆಲವೊಂದು ಕ್ಲಿಷ್ಟ..ಕೆಲವೊಂದು ಸರಳ..
ಕೆಲವೊಂದು ಮುಗ್ಧ.. ಕೆಲವೊಂದು ಕಪಟಿ..
ಕೆಲವೊಂದು ವ್ಯಸನಿ.. ಕೆಲವೊಂದು ಪ್ರೇಮಿ..
ಹೀಗೆ…

ಏನನ್ನೂ ಒತ್ತಾಯಪೂರ್ವಕವಾಗಿ ತುರುಕದ, ಎಲ್ಲವನ್ನೂ ಮೀರಿದ
ಒಂದು ಸೀದಾ ಸಾದಾ ಸರಳ ಹಗುರ ಹೂವಿನಂತೆ ತೋರುತ್ತ ಹೇಳಬೇಕಾದ ಎಲ್ಲವನ್ನೂ ಹೇಳುವ ಕವಿತೆ, ಮನಗಾಣಿಸುವ ಕವಿತೆ ಏನೆಲ್ಲವನ್ನು ಬರೆದವನಿಗೆ ಮತ್ತದನ್ನು ಪ್ರೀತಿಯಿಂದ ಓದುವವನಿಗೆ ದಯಪಾಲಿಸುತ್ತದೆ ಎಂಬುದು ವಿಚಿತ್ರ ಹಾಗೂ ಖುಷಿಯ ಸಂಗತಿ ನನಗೆ.

ಇಂಥ ಖುಷಿಯನ್ನು ಹಸ್ತಪ್ರತಿಯ ಹಂತದಲ್ಲಿ ಓರ್ವ ಓದುಗಳಾಗಿ ಒಂದು ಸ್ಪರ್ಧೆಯ ಸಂದರ್ಭದಲ್ಲಿ ನಿಮ್ಮ ಕವಿತೆಗಳು ನನಗೆ ದೊರಕಿಸಿಕೊಟ್ಟಿವೆ. ಅಶೋಕ್ ಶೆಟ್ಟರ್ ಸರ್ ಹೇಳುವ ಹಾಗೆ ಅಕೃತ್ರಿಮವಾದ ಸೃಜನಶೀಲ ಗುಣ ಇದರ ಇನ್ನೊಂದು ಕಾರಣ.

ನಿಮ್ಮಮ್ಮ ಹೇಳುವಂತೆ ಕವಿಯಾಗುವುದು ಸುಲಭವಲ್ಲ ಹೊರಗಿನ ಅನ್ಯಾಯ ಅಸೂಕ್ಷ್ಮತೆ ಅಸಮಾನತೆ ತಾರತಮ್ಯ ಮುಂತಾದ ಎಲ್ಲ ಸಂಗತಿಗಳು ತಳಮಳ ಸಂಕಟ ಅಳು ಎಲ್ಲವನ್ನೂ ಕವಿಯ ಎದೆಗೆ ತಂದು ಒತ್ತರಿಸುತ್ತವೆ. ಅವೆಲ್ಲವುಗಳಿಗೆ ದನಿಯಾಗುವ, ತಾನೇ ಎಲ್ಲರಿಗಿಂತ ಮೊದಲಾಗಿ ಪ್ರತಿಕ್ರಿಯಿಸುವ ಭರದಲ್ಲಿ ಕವಿತೆ ಆ ಸಂಗತಿಗಳಿಗೆ ಇನ್ನಷ್ಟು ಕಿಚ್ಚು ಹಚ್ಚಿಸದೇ ಮುಲಾಮಾಗಿ ಪರಿಹಾರಾತ್ಮಕವಾಗಿ ಕೆಲಸ ಮಾಡಬೇಕು ಎಂಬುದು ನನ್ನ ನಂಬುಗೆ.

ಕವಿತೆಯ ಬಗ್ಗೆ ಹೇಳು ಎಂದರೆ ವಿಮರ್ಶಾತ್ಮಕವಾಗಿ ತರ್ಕಬದ್ಧವಾಗಿ ಉದಾಹರಣೆಗಳನ್ನಿಟ್ಟು ಏನನ್ನೂ ಹೇಳಲು ಬರದವಳು ನಾನು. ಆ ಕ್ಷಣಕ್ಕೆ ದಕ್ಕಿದ ಅರಿವಷ್ಟೇ ನನ್ನದು ಮತ್ತು ನಾ ಓದುವಾಗ ನನ್ನದೇ ಎನ್ನಿಸುವ ಆ ಕವಿತೆಯದು. (ಜಗದ ಎಲ್ಲ ಕವಿತೆಗಳೂ ನಮ್ಮವೇ ಎಂಬ ಪ್ರೀತಿ ಬೆಳೆಸಿಕೊಳ್ಳದ ಹೊರತು ಕವಿ ಹೇಗೆ ಹಸನ್ಮುಖಿಯಾದಾನು..?)
ಹೆಚ್ಚಿಗೆ ತಲೆಕೆಡಿಸಿಕೊಳ್ಳುವವಳೂ ನಾನಲ್ಲ..

ಕವಿತೆ ಒಬ್ಬೊಬ್ಬರಿಗೆ ಒಂದೊಂದು ತರಹ ಸಿಕ್ಕುತ್ತದೆ.. ಹಾಗಾಗಿ ಯಾವ ಕವಿತಾ ಪುಸ್ತಕದ ಮುನ್ನುಡಿ ಬೆನ್ನುಡಿಗಳನ್ನೂ ನಾನು ಕವಿತೆ ಓದುವದಕ್ಕಿಂತಲೂ ಮೊದಲು ಓದುವುದೇ ಇಲ್ಲ.
ಇದು ನಾನು ಬೆಳೆಸಿಕೊಂಡ ಗುಣ ಅಷ್ಟೇ.. ಅವುಗಳನ್ನು ಮೊದಲು ಓದಲೇಬಾರದು ಅನ್ನೋದಕ್ಕೆ ಪ್ರಬಲ ಕಾರಣವೇನೂ ಅಲ್ಲ..ಸಲಹೆಯೂ ಅಲ್ಲ..

ಇದೀಗ ತಾನೇ ಒಂದು ಕವಿತೆಯ ಪುಸ್ತಕವನ್ನು ಹೊರತಂದು ಅದಕ್ಕೊಂದಿಷ್ಟು ಪ್ರಶಸ್ತಿಗಳನ್ನೂ ಬಹುಮಾನಗಳನ್ನೂಅನಿರೀಕ್ಷಿತವಾಗಿ ಪಡೆದು ಮುಂದೇನು ಅಂತ ಅಂದುಕೊಳ್ಳದೆಯೇ ಇರುವವಳು ನಾನು. “ಕವಿತೆ ಹುಟ್ಟುತ್ತಿಲ್ಲ ಸತ್ತು ಹೋಗುವೆ ರೇಣುಕಾ” ಎಂಬ ಹತ್ತು ಪುಸ್ತಕದ ಸರದಾರರಿಗೂ ಖಾಲಿಯಾದೆ ಎಂಬ ಹೊತ್ತಿನಲ್ಲಿ ಸಮಾಧಾನಿಸಿ ಮರುದಿನದ ಕವಿತೆಯವರೆಗೆ ಬದುಕಿಸಿದ ಅನುಭವವೂ ನನಗುಂಟು. ಯಾಕಿವರೆಲ್ಲ ನಿಯಮಿತವಾಗಿ ಬರೆಯದಿದ್ದರೆ ಸತ್ತಂತೆ ಅಂದುಕೊಳ್ಳುವರು. ಓದಿನ ಕುರಿತಾಗಿಯೂ ಯಾಕಿವರು ಹಾಗೇ ಅಂದುಕೊಳ್ಳಲಾರರು ಎಂಬುದಕ್ಕೆ ನನ್ನಲ್ಲಿ ಉತ್ತರಗಳಿಲ್ಲ.

ಅಂದೂ ಇಂದೂ ಕಾಡಿದಾಗಲೊಮ್ಮೆ ಬರೆದು ಕಾಡಿದರೂ ಬರೆಯಲಾಗದ ಸಂದರ್ಭಗಳಿಗೆ ನಾನು ಚಡಪಡಿಸಿಕೊಂಡವಳಲ್ಲ .ಇಂದೂ ಹಾಗೆಯೇ. ನನಗೆ ಬರೆಯದ ನನ್ನ ಎಲ್ಲ ದೈನಂದಿನ ಕೆಲಸಗಳೂ ಕವಿತೆಗಳೇ. ಕಮಲಾ ಮೇಡಂ ಹೇಳುವ ಹಾಗೆ ಹೊರಗಿನ ಖ್ಯಾತಿ ಪ್ರಶಸ್ತಿ ಇತ್ಯಾದಿಗಳಿಗೆಲ್ಲ ಮೊಗದಿರುಹಿ ನಾವು ಮಾತ್ರ ಬರೆಯಬಹುದಾದ ಕವಿತೆಗಳಿಗಾಗಿ ನಾವು ಕಾಯುವುದು..ಮುಂದುವರಿದು ನಾನು ಹೇಳುವೆ. ಅದನ್ನು ಎದುರುಗೊಳ್ಳುವುದು.. ಸಲ್ಲಾಪ ನಡೆಸುವುದು.. ಅದನ್ನು ಓರ್ವ ಬಸುರಿಯಂತೆ ಹೊತ್ತುಕೊಳ್ಳುವುದು.. ಹೆರುವುದು… ಅದು ನಾವೊಬ್ಬರೇ ಅನುಭವಿಸುವ ಆನಂದ.

ನನ್ನ ಮನೆಯ ಕೋಣೆಯಿಂದ ಕೋಣೆಗೆ ಹಬ್ಬದ ದಿನ ಸರಭರ ಓಡಿಯಾಡುತ್ತಲೇ, ಕೆಲಸ ಮಾಡುತ್ತಲೇ ಹತ್ತಾರು ಹೆಂಗಸರ ಮುಂದೆ ಮುಜುಗರವಿಲ್ಲದೇ ಸೀರೆ ಉಡಬಲ್ಲೆ ನಾನು: ಆದರೆ ಬರೆದು ಮುಗಿಸುವವರೆಗೆ ನನ್ನ ಕವಿತೆಯೊಳಗೆ ಯಾರೂ ಹಣಕಿಹಾಕುವುದನ್ನು ನಾನು ಇಷ್ಟಪಡೆ. ಹಾಗಾಗಿ ನೀವು ನಿನ್ನಮ್ಮನಿಂದ ತಿದ್ದಿಸಿಕೊಳ್ಳದ ಕವಿತೆಯಂತೆ ನಾನೂ ನನ್ನ ಕವಿತೆಯನ್ನು ಬಹುಕಾಲದವರೆಗೆ ನಾನೊಬ್ಬಳೇ ಓದಿಕೊಂಡಿದ್ದೆ.

ಲಲಿತಾ ಸಿದ್ಧಬಸವಯ್ಯ ಅಕ್ಕ ಹೇಳುವ ಹಾಗೆ ಕವಿತೆ ಒಂದು ಒಂಟಿ ಹಸಿರು ಕಾಲುಹಾದಿಯ ಸುತ್ತಮುತ್ತಲೂ ಸಿಗುವ ಯಾವುದನ್ನು ನೋಡಲಿ ಯಾವುದನ್ನು ಬಿಡಲಿ ಎಂಬ ಉಮೇದು ಹೆಚ್ಚಿಸುವ ಚಿಕ್ಕಪುಟ್ಟ ಸಂಗತಿಗಳ ಹಾಗೆ. ಕಾವ್ಯದ ದಾರಿ ನಿಮ್ಮಮ್ಮ ಹೇಳುವ ಹಾಗೆ ಸುಡುಬೆಂಕಿಯದೂ ಹೌದು ಅಕ್ಕ ಹೇಳುವ ಹಾಗೆ ಚಂದವೂ ಹೌದು ಎಲ್ಲವನ್ನೂ ನಾವು ಇರುವ ಹಾಗೆ ತೆಗೆದುಕೊಳ್ಳೋಣ.ಗಮ್ಯದ ಚಿಂತೆ ಬೇಡ. ಅಕ್ಕನ ಸಲಹೆಯನ್ನು ನಾನೂ ಜತನವಾಗಿಟ್ಟುಕೊಂಡಿರುವೆ.. ಒಪ್ಪುವ ಎಲ್ಲವುಗಳಿಂದಲೂ ನಾವು ಕಲಿಯುವುದು ಬಹಳಷ್ಟಿದೆ.

ಒಂದೆರಡು ಸಾಲು ಕವಿತೆ ಬರೆದಾದ ಮೇಲೆ ನನಗೆ ಕೊಟ್ಟಿಗೆಯೊಳಗಿನ ಹಸುವಿಗೆ ಒಂದು ಕಟ್ಟು ಹುಲ್ಲು ಹಾಕದೇ ಬಹಳ ಹೊತ್ತಾಯಿತು ಎಂಬುದು ನೆನಪಾಗುತ್ತದೆ. ಸೌದೆ ಹೊರೆ ಹೊತ್ತು ಬೆಟ್ಟದ ಇಳಿಜಾರಿನಲ್ಲಿ ಇಳಿದು ನಮ್ಮನೆಯ ದಣಪೆಯ ಮೂಲಕವೇ ಹಾದುಹೋಗುವ ಹಾಲಕ್ಕಿ ಹೆಂಗಸರಿಗೆ ಒಂದು ಕೊಡ ಕುಡಿಯುವ ನೀರು, ಚೆಂಬು, ಎರಡು ಉಪ್ಪಿನಕಾಯಿ ಹೋಳು ಇಡಲು ಮರೆತುಹೋಯ್ತು ಇಂದು ಎಂಬುದು ನೆನಪಾಗುತ್ತದೆ. ಅಂಗಳದ ತೆಂಗಿನ ಮರಗಳಿಗೆ ನೀರು ಹಾಕದೇ ಮೂರು ದಿನವಾಯ್ತು ಎಂದು ಒನ್ನಮೂನೆ ಸಂಕಟವಾಗ್ತದೆ. ಶಾಲೆಯ ಮಕ್ಕಳಿಗೆ ನಾಳೆಗೊಂದು ಹೊಸ ಕಥೆ ಓದಿಕೊಂಡು ಬರುವೆ ಹೇಳಲು ಎಂದು ಮಾತುಕೊಟ್ಟದ್ದು ನೆನಪಾಗುತ್ತದೆ.

ಆಗೆಲ್ಲ ನನ್ನ ಕವಿತೆ ಹೊರಡು ಎಂದು ನನ್ನ ಕೆಲಸಕ್ಕೆ ನನ್ನ ದಬ್ಬಿಬಿಡುತ್ತದೆ. ಹೊರತು ತನ್ನನ್ನೆತ್ತಿಕೊಂಡು ಕುಳಿತುಕೋ ಎಂದು ಎಂದೂ ಹೇಳುವುದಿಲ್ಲ. ಮತ್ತು ಹೆಜ್ಜೆಗೊಮ್ಮೆ ಹೀಗೆ ಕವಿತೆಯನ್ನು ಎತ್ತಿಕೊಳ್ಳದಿರುವ ಕೆಲಸಗಳು ನನಗೆ ಸಿಗುತ್ತಲೇ ಹೋಗುತ್ತವೆ.. ಅದೆಲ್ಲವನ್ನು ಮುಗಿಸಿಯೇ ಕವಿತೆಯ ತೆಕ್ಕೆಗೆ ಬಂದು ಕುಳಿತುಕೊಳ್ಳುವುದು ನನಗೆ ಆರಾಮದಾಯಕವೆನಿಸುತ್ತದೆ.. ಮತ್ತು ಎಲ್ಲ ಒಳ್ಳೆಯ ಕೆಲಸಗಳೂ ಕವಿತೆಗಳೇ ಎಂಬುದನ್ನು ನಾನು ನಂಬುತ್ತೇನೆ.

ಹಾಗಾಗಿ ತಿಂಗಳಾನುಗಟ್ಟಲೆ ಬರೆಯದಿದ್ದರೂ ಏನೂ ಬರೆಯದ ಹತಾಶಭಾವ ನನ್ನನ್ನು ಎಂದಿಗೂ ಕಾಡುವುದಿಲ್ಲ.. ಯಾವುದೂ ನಮ್ಮನ್ನು ಆಪೋಷಣೆ ತೆಗೆದುಕೊಳ್ಳಬಾರದು.. ಗೀಳಾಗಬಾರದು… ಎಂಬುದಷ್ಟೇ ನನ್ನ ಅಭಿಪ್ರಾಯ

ನಿಮ್ಮಂತೆಯೇ ಒಂಟಿತನ ಅಸಹಾಯಕತೆ ತಳಮಳ ಕಾಡಿದಾಗ.. ಯಾವ್ಯಾವುದೋ ಕಾರಣಗಳಿಗೆ ಗಂಟಲುಬ್ಬಿ ಬಂದಾಗ ಇತ್ತೀಚೆಗೆ ಕವಿತೆಯನ್ನು ಹಚ್ಚಿಕೊಂಡವಳು ನಾನು. ಎಲ್ಲಿಂದದು ನನ್ನೊಳಗೆ ಬಂತೋ ಅಲ್ಲಿಂದಿಲ್ಲಿಯವರೆಗೂ ನನ್ನನ್ನು ಪೊರೆಯುತ್ತಲೇ ಇದೆ. ಜಗದ ಎಲ್ಲ ಮೋಸ ಸಂಕಟ ಹಸಿವೆಗೆ ಮದ್ದಾಗಬಲ್ಲ ಏನೋ ಒಂದು ಅದರಲ್ಲಿದೆ ಎಂಬುದು ಕವಿತೆಯನ್ನು ಎದೆಗೊತ್ತಿಕೊಂಡವರಿಗೆ ಮಾತ್ರ ಗೊತ್ತು.. ಈಗಿನ ಹುಡುಗರೆಲ್ಲ ಎಷ್ಟೊಂದು ಚಂದವಾಗಿ ಬರೆಯುತ್ತಿದ್ದಾರೆ ಇತ್ತೀಚೆಗೆ. ಅವರನ್ನೆಲ್ಲ ಓದುವಾಗ ನನಗೆ ಅವರಿಗೆಲ್ಲ ಓರ್ವ ಅಕ್ಕನಾಗಿ ಅಮ್ಮನಾಗುವ ಅಕ್ಕರೆ ಸುರಿರುಬಿಡುತ್ತದೆ ಒಳಗೊಳಗೆ. ಸುಮ್ಮನೆ ಬರೆಯೋದು ಬಿಟ್ಟು ಓದುತ್ತ ಇದ್ದುಬಿಡೋಣ ಅವರನ್ನೆಲ್ಲ ಅನ್ನಿಸಿಬಿಡುತ್ತದೆ.. ನಿಮ್ಮ ಕವಿತೆಗಳೂ ನನಗೆ ಇದೇ ಖುಷಿಯನ್ನು ಒದಗಿಸಿಕೊಟ್ಟಿವೆ.

ನಿಮ್ಮ ಮೊದಲ ಪುಸ್ತಕದ ಸಂಭ್ರಮ ಇದೀಗ ತಾನೇ ತೆರೆದುಕೊಳ್ಳುತ್ತಲಿದೆ. ಈ ಸಂಬಂಧ ಕಳೆದ ನಾಲ್ಕಾರು ದಿನದ “ಅವಧಿ”ಯಲ್ಲಿ ನಾನು ಓದುತ್ತಿರುವ ಜುಗಲ್‌ಬಂಧಿ ನನ್ನಲ್ಲಿ ಒಂದೇ ಗುಕ್ಕಿಗೆ ಇಷ್ಟನ್ನು ಬರೆಸಿತು… ನನ್ನ ಮೊದಲ ಪುಸ್ತಕ ಬಂದದ್ದೂ ಕೂಡ ಕಳೆದವರ್ಷ ಇದೇ ಸಮಯಕ್ಕೆ. ಇದು ನಿಮ್ಮ ಪುಸ್ತಕದ ನೆಪದಲ್ಲಿ ನನ್ನೊಳಗಿನ ಹೇಳದೇ ಇದ್ದ ಏನೋ ಒಂದನ್ನು ಹೇಳಿಕೊಂಡ ಸಮಾಧಾನ…

ನಾವೆಲ್ಲರೂ ಎಲ್ಲದರಲ್ಲೂ ಒಂದೊಳ್ಳೆಯ ಕವಿತೆಯನ್ನು ಕಾಣೋಣ. ಕಾಣಿಸೋಣ.

ಶುಭಾಶಯಗಳು ನಿಮಗೆ ಮತ್ತು ನಿಮ್ಮ ಪುಸ್ತಕಕ್ಕೆ

_ರೇಣುಕಾ ರಮಾನಂದ

6 comments

 1. ಬರೆಯದ ನನ್ನ ಎಲ್ಲ ದೈನಂದಿನ ಕೆಲಸಗಳೂ ಕವಿತೆಗಳೇ ನನಗೆ.
  ಖಂಡಿತಾ ಅದು ನನ್ನ ಮಾತೂ ಹೌದು ರೇಣುಕಾ.
  ಹೀಗಿರುವುದಕ್ಕೇ ನಿಮ್ಮ ಕವಿತೆಗಳೆಂದರೆ ಮುದ್ದು ಉಕ್ಕಿ ಬರುತ್ತದೆ.
  ಒಂದು ಹೊಸಾ ಕವಿತೆ ಬರೆಯಿರಿ ಎಂದು ಹೇಳಬೇಕು ಅಂದುಕೊಂಡಿದ್ದೆ ಇವತ್ತು. ಅಷ್ಟರಲ್ಲಿ ಸಿಕ್ಕಿಬಿಟ್ಟಿರಿ!

 2. ಒಳ್ಳೆಯ, ಕವಿ, ಲೇಖಕ,ಕಥೆಗಾರರ
  ಬರಹಗಳನ್ನು
  ಓದುವುದು ಚಾ, ಕಾಫಿ ಕುಡಿದಂತೇ.. ಒಂದು ಚಟ.
  ಓದಿ ಮುಗಿದ ಮೇಲೆ ಏದುಸಿರು ಬಿಟ್ಟು
  ಅಡಿಗೆ ಮನೆಗೆ ಹೋದರೆ,
  ಪಾತ್ರೆಗಳಿಗೂ ಅದೇ ಗುಂಗು..
  ರೇಣುಕಾ. .ನಿಮ್ಮ ಕವಿತೆಗಳನ್ನು ಓದಿ ಈ ಭಾವವನ್ನು ಹಂಚಿಕೊಂಡಿದ್ದೆ. ಆಕರ್ಷ್ ಅವರ ಕವಿತೆಗಳಿಗೂ ಅದೇ ಭಾವ.. ನಿಮ್ಮ ಹಾಗೇ ಅಕ್ಕನಾಗಿ, ತಾಯಿಯಾಗುವ ಅಕ್ಕರೆ ಒಳಗೊಳಗೇ. ನಿಮ್ಮ ಬರಹಕೊಂದು ಮುದ್ದು.

  • ಕಲಾ ನಿಮ್ಮ ಪ್ರೀತಿಗೆ ಶರಣು.. ನಮ್ಮೂರ ಹುಡುಗಿ ನಿಮ್ಮ ಬರಹದಲ್ಲೂ ಕಾವ್ಯದ್ದೇ ಪಲಕು

Leave a Reply