ಸೆಖೆಗಾಲವೂ ಸುಖವಾಗಲಿ

ಕಲಾ ಚಿದಾನಂದ 

ಇತ್ತೀಚಿನ ದಿನಗಳಲ್ಲಿ ನಾನು ಕಂಡಂತೆ ಪರಿಚಯಸ್ತರು, ನೆಂಟರಿಷ್ಟರು, ಸ್ನೇಹಿತರು, ವಿಶೇಷವಾಗಿ ಮಧ್ಯ ವಯಸ್ಸಿನಿಂದ ಹಿಡಿದು ಇಳಿ ವಯಸ್ಸಿನವರೆಗಿನವರು ಯಾರೇ ಸಿಕ್ಕರೂ ಕುಶಲೋಪರಿ ವಿಚಾರಿಸಿದ ನಂತರ ಮಾತನಾಡುವುದೇ ಹವಾಮಾನದ ವಿಷಯ. ದೂರದ ಊರಲ್ಲಿ ಇರುವವರಿಗೆ ಫೋನಾಯಿಸಿದರೂ ಇದೇ  ಪ್ರಸ್ತಾವನೆ. ಅದರಲ್ಲೂ ಬೇಸಿಗೆಯೆಂದರೆ.. ಕೇಳಬೇಕೇ?

ಊರಿಗೆ ಹೋದಾಗ ಮಟಮಟ ಮಧ್ಯಾಹ್ನ ಇಬ್ಬರು ಪರಿಚಿತರು ಆಮಂತ್ರಣ ಕೊಡಲು ನಮ್ಮ ಮನೆಗೆ ಬಂದಾಗ ನನಗೋ.. ಅವರ ಮೇಲೆ ಕನಿಕರ.. ಫ್ಯಾನ್ ಗಾಳಿಯ ವೇಗವನ್ನುಹೆಚ್ಚಿಸಿದೆ.. ಅವರಿಗದು ಅಸಹನೀಯವಾಯಿತು. ಕೃತಕ ಗಾಳಿಯಿಂದ ತಪ್ಪಿಸಿಕೊಂಡು ದೂರ ಹೋಗಿ ಕುಳಿತರು. ಕುಡಿಯಲು ಬಿಸಿ ಬಿಸಿ ಕಶಾಯವನ್ನು ಕೇಳಿದರು.. ಏನಾಶ್ಚರ್ಯ! ನಾನು ತಂಪು ನೀರಿನ ಶರಬತ್ತು ಕೇಳಬಹುದೆಂದುಕೊಂಡಿದ್ದೆ. ಅವರಲ್ಲಿ ಪ್ರಶ್ನಿಸಿಯೂ ಬಿಟ್ಟೆ. ಅದಕ್ಕವರು ದೇಹದ ಉಷ್ಣತೆಯ ಸಮತೋಲನ ಕಾಪಾಡಲು ಬಿಸಿಯನ್ನೇ ಕುಡಿಯಬೇಕೆಂದರು.

ವಿದ್ಯುತ್ತಿನ ಮಿತಬಳಕೆ ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳಬೇಕೆಂಬ ಪಾಠವನ್ನು  ರೂಢಿಸಿಕೊಂಡು ಬಂದವರವರು. ಮತ್ತದೇ ಬಿಸಿಲಿನಲ್ಲಿ ಸರಸರನೆ ಹೊರಟೇಬಿಟ್ಟರು. ನಮಗೆ ಈ ಹವಾಮಾನವೆನ್ನುವುದು ನೈಸರ್ಗಿಕವಾಗಿ ಪ್ರಕೃತಿಯ ಕೊಡುಗೆಯಾದುದರಿಂದ ಅದನ್ನು ಖುಷಿಯಿಂದ ಅನುಭವಿಸಿದರೆ ಮಾನಸಿಕ, ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗುವದೇನೋ.. ಬಿಸಿಲು, ಗಾಳಿ, ಮಳೆ, ಛಳಿಗಳಿಗೆ ಅಳುಕದೆ ಮುಂದೆ ಸಾಗುವುದೇ ಜಾಣತನ.

ಮನುಷ್ಯನನ್ನು ಅತೀ ಹೆಚ್ಚು ಪೀಡಿಸುವ ಈ ಕಾಲದಲ್ಲಿಯೇ ಮಾಮರಗಳಿಗೆ, ಚಿಗುರಿ ಹೂಹಣ್ಣುಗಳ ಬಿಡುವ ಸಂಭ್ರಮ, ಕೋಗಿಲೆಗೆ ಹಾಡುವ ಸಂಭ್ರಮ, ಮಕ್ಕಳಿಗೆ ರಜೆಯ ಸಂಭ್ರಮ.. ಸೆಖೆಯ ಬಗೆಗಿನ ಕೆರಳಿಕೆ ನಮ್ಮ ಸ್ಪಂದನೆಯ ಮೇಲೂ ಅವಲಂಬಿತವಾಗಿದೆಯೇನೋ..

ಬೇಸಿಗೆಯ ಉಷ್ಣತೆ ನನ್ನನ್ನು ಅತಿಯಾಗಿ ಕಾಡುವಾಗ ನಾನೊಮ್ಮೆ ನನ್ನೂರಿನ ಕಡೆ ಮನಸ್ಸನ್ನು ಹರಿಯಬಿಡುತ್ತೇನೆ. ಕರಾವಳಿಯ ತೀರದಲ್ಲಿರುವ ನನ್ನೂರಿನ ಪೂರ್ವಕ್ಕೆ ಸಹ್ಯಾದ್ರಿಯ ಸಾಲು ಹಾಗೂ ಪಶ್ಚಿಮಕ್ಕೆ ಅರಬ್ಬೀ ಸಮುದ್ರ. ವಾತಾವರಣದ ಆರ್ದೃತೆಯಿಂದ ಬೇಸಿಗೆಯಲ್ಲಿ ಅತಿಯಾದ ಬೆವರು. ಆದರೂ ಹಳ್ಳಿಯ ಜನಗಳು ಅದಾವುದನ್ನೂ ಲೆಕ್ಕಿಸದೇ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಊರಲ್ಲಿ ಈಗ ಗದ್ದೆಗಳಿಗೆ  ಶೇಂಗಾ (ಕಡ್ಲೆಕಾಯಿ), ಉದ್ದು, ಅಳಸಂಡೆ, ಉಳ್ಳಾಗಡ್ಡೆ, ಬೆಳೆಗಳ ಹಸಿರುಡುಗೆ. ನಡುನಡುವೆ ಕೆಂಪು ಹರಿವೆಸೊಪ್ಪಿನ ವಿನ್ಯಾಸ.. ಭೂಮಿ ತನ್ನೊಳಗೆ ಶೇಖರಿಸಿಟ್ಟ ತನಿಸನ್ನೇ ಬಳಸಿ ಬೆಳೆಗೆ ಅನುವಾಗಿಸುವ ಪರಿ ತಾಯ್ತನದ ಸಿರಿ..

ಬೆಳ್ಳಂಬೆಳಗ್ಗೆ ನವಿಲುಗಳ ಹಿಂಡು, ನರ್ತನ..ಸೊಬಗ ನೋಡಲು ಕಣ್ಣುಸಾಲದು.. ಇವೆಲ್ಲದರ ಜೊತೆಗೆ ರೈತರ ಬೆವರ ಹನಿಗಳ ಗಂಧ.. ಒಂದೊಂದು ಹನಿಯೂ ಬೆಲೆಕಟ್ಟಲಾಗದ್ದು. ಗದ್ದೆ ಹೂತು, ಎಲ್ಲೋ ದೂರದ ಮನೆಗಳಿಂದ ಗೊಬ್ಬರ ಹೊತ್ತು ತಂದು,ಹರಡಿ, ಹದಗೊಳಿಸಿ, ಬೀಜ ಬಿತ್ತಿ, ಮೊಳೆತು ಬೆಳೆದು ನಿಂತ ಬೆಳೆಯನ್ನು ನೋಡುವ ಸಂತೋಷ ರೈತರಿಗೆ. ಬೆವರುಹನಿಗಳಿಂದ ತೊಯ್ದ ಮೈಗೆ, ಶರಧಿ ತಂಪಾಗಿಸಿ ಕಳಿಸಿದ ಗಾಳಿಯೇ ಹಿತ. ಬಳಲಿ ಮನೆಗೆ ಬಂದು ಯಾವಾಗ ನೆಲಕಾಣುವೆನೋ ಎಂಬಂತಾದಾಗ ಸುಖ ನಿದ್ರೆ. ಶ್ರಮಜೀವಿಗಳಿಗೆ ಅದೊಂದು ವರವೇ ಇರಬಹುದೇ? ! ಚೆನ್ನಾಗಿ ಬೆಳೆಬಂದರೆ ಸ್ವರ್ಗಕ್ಕೆ ಮೂರೇ ಗೇಣು…ಕೈ ಕೊಟ್ಟರೆ ಹೈರಾಣು..

ಈ ಋತುವಿನಲ್ಲಿ ನಮ್ಮ ಅಡಿಗೆಯಲ್ಲಿ ಮಾವಿನಕಾಯಿ, ಮಾವಿನ ಹಣ್ಣುಗಳ ಪಾಲು ದೊಡ್ಡದು. ಸಾಂಬ್ರಾಣಿ, ಗೊಜ್ಜು, ಸಾಸಿವೆ, ರಸಾಯನ, ಹೀಗೇ ಹಲವು ಬಗೆ. ಇಂಗಿನ ಒಗ್ಗರಣೆಯ ಜೊತೆ ಮಾವಿನಕಾಯಿಯ ಎಲ್ಲಾ ಬಗೆಗಳೂ ರುಚಿ. ದೋಸೆ, ಚಪಾತಿ, ಪುರಿ ಎಲ್ಲದಕ್ಕೂ ರಸಾಯನ ಅನ್ಯೋನ್ಯ . ಸವಿಯಲೂ ಹಿತ. ಈ ಎರಡು ತಿಂಗಳು ಹಪ್ಪಳ ಸಂಡಿಗೆಗಳ ಅಬ್ಬರದ ಹಬ್ಬ. ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ದಿನ. ಆ ದಿನ ಮನೆಯ ತುಂಬೆಲ್ಲ ಉದ್ದಿನ ಹಪ್ಪಳದ ಘಮ ಘಮ. ಮಲಗಿದ್ದವರ ಮೂಗಿಗೆ ನಾಟಿ ಥಟ್ಟನೆ ಎಬ್ಬಿಸುವಷ್ಟು.. ಬೇಗನೇ ಎದ್ದು, ಮನೆಗೆಲಸ ಮುಗಿಸಿ, ಎಂಟು ಘಂಟೆಯಾಗುವಾಗ ಕುಟ್ಟಿ ಹದಮಾಡಿದ ಕುಂಬಳಕಾಯಿ ಗಾತ್ರದ ಹಿಟ್ಟಿನ ಮುದ್ದೆ ತಯಾರಾಗಿಬಿಡುವುದು. ಅಜ್ಜಿ, ಅತ್ತೆಯರು, ಮನೆಯ ಮಕ್ಕಳು, ಗಂಡಸರು, ಕೇರಿಯವರು, ಎಲ್ಲರೂ ಕೈ ಜೋಡಿಸುವರು.ಎಲ್ಲಕ್ಕಿಂತ ಮೊದಲು ಹಿಟ್ಟಿನ ರುಚಿ ನೋಡುವ ಕೆಲಸ.. ಲಟ್ಟಿಸಿದ ಹಪ್ಪಳದ ಒಳಗೆ, ಹುಡಿ ಹಿಟ್ಟು, ತೆಂಗಿನೆಣ್ಣೆಯ ಹೂರಣ ಮಾಡಿ ಚಟಾಯಿಸುವ ನೆನಪು ವರ್ಷಗಳುರುಳಿದರೂ ಮಾಸದು.

ಅಂಗಳದಲ್ಲಿ ಒಣ ಹಾಕುವ ಕೆಂಪು ಬಿಳಿ ಹಪ್ಪಳಗಳ ಕಲೆಗಾರರು ಎಲ್ಲಾ . ಮುಂದಿನ ವಾರ ಹಲಸಿನ ಕಾಯಿ, ಬಾಳೆಕಾಯಿ, ಹಪ್ಪಳಗಳ ಪಾಳಿ..ಅವುಗಳಿಗೋ.. ಇನ್ನೂ ಹೆಚ್ಚಿನ ಶ್ರಮ.. ಅದಾವುದರ ಪರಿವೆಯೇ ಇರದು, ಒಟ್ಟಾಗಿ ಮಾಡುವಾಗ.. ಮಾತುಗಳ ನಡುವೆ ಹಾಸ್ಯದ ಚಟಾಕಿಗಳು ದಣಿವ ದೂಡಿಬಿಡುವವು.ಸಬ್ಬಕ್ಕಿ,ಕುಂಬಳಕಾಯಿ ಸಂಡಿಗೆಗಳು ತಾವೇನೂ ಕಡಿಮೆಯಿಲ್ಲವೆಂಬಂತೇ ಹಪ್ಪಳದ ಜೊತೆಗೂಡುವವು.. ಒಂದು ತಿಂಗಳ ಚಟಗುಡುವ ಬಿಸಿಲಿನಲ್ಲಿ ಗರಿ ಗರಿಯಾಗಿ, ಹಲವು ಬಣ್ಣಗಳಲ್ಲಿ, ಸವಿಯಲು ಸಿದ್ಧವಾಗುವವು. ನೆಂಟರಿಷ್ಟರಿಗೆ, ನೆರೆ ಹೊರೆಯವರಿಗೆ ಹಂಚಿ, ಉಳಿದವು ಮಳೆಗಾಲವ ಇದಿರುನೋಡುತ್ತಿರುವವು. ಈ ಎಲ್ಲದರ ನಡುವೆ ಸೆಖೆಯ ಬವಣೆ ಸುಳಿಯುವುದೂ ಇಲ್ಲ. ಮಾಮಿಡಿಯ ವಿವಿಧ ಬಗೆಯ ತಾಜಾ ಉಪ್ಪಿನಕಾಯನ್ನು ಬಾಣಲೆಗಳಲ್ಲಿ ತುಂಬಿ, ರಜೆ ಮುಗಿಸಿ ಹೋಗುವವರಿಗೆಲ್ಲ ಡಬ್ಬಗಳಲ್ಲಿ ತುಂಬಿಸಿ ಕೊಡುವ ರಿವಾಜು.

ಇತ್ತೀಚೆಗೆ ಇವೆಲ್ಲವೂ ಕಾಣಸಿಗುವುದು ಅಪರೂಪ. ಹೊಸ ಜೀವನ ಶೈಲಿಗೆ ಹೊಂದಿಕೊಂಡ ಜನರಿಗೆ ಸಮಯವೂ ಇರುವುದಿಲ್ಲ ‘ಇವೆಲ್ಲಾ ಯಾಕೆ ಕಷ್ಟ? ಹಣಕೊಟ್ಟು ಫ್ಯಾಕ್ಟರಿಗಳಲ್ಲಿ ತಯಾರಿಸಿರುವುದನ್ನೇ ಕೊಂಡರಾಯಿತು’ ಎನ್ನುವ ಮನೋಭಾವವೇ ಹೆಚ್ಚಾಗಿದೆ.
ಆ ಖುಷಿಯನ್ನು ಅನುಭವಿಸುವ ನಾವೇ ಪುಣ್ಯವಂತರು.

ರಜೆಯಲ್ಲಿ ದೂರದೂರಿನಲ್ಲಿರುವ ನೆಂಟರು, ಮಕ್ಕಳು,ಮನೆಯಲ್ಲಿ ಜಮಾಯಿಸುವರು.ಮಕ್ಕಳಿಗೋ.. ಮಾವಿನ ಮರ, ಗೇರು ಮರಗಳಿಗೆ ಕಲ್ಲೆಸೆದು ಉದುರಿಸಿ ತಿನ್ನುವುದೇ  ಆಟ.ಅದರ ಸವಿಯೆಷ್ಟು! ತೃಪ್ತಿಯೆಷ್ಟು! ಊರ ಹೊಳೆಗಳಲ್ಲೂ.. ಮಕ್ಕಳ ದಂಡು. ಖುಷಿಯಿಂದ ನೀರಲ್ಲಿ  ಮುಳುಗಿ ಕೈಕಾಲು ಬಡಿಯುವಾಗ ಅವರಿಗರಿವಿಲ್ಲದಂತೆ ಈಜಾಡಲು ಕಲಿತುಬಿಡುವರು. ಸಂಜೆಯವೇಳೆ ಸಮುದ್ರ ತಟ. ಆಹಾ..ಎಷ್ಟು ಮಜಾ!

ಮನೆಯ ನಾಲ್ಕು ಗೋಡೆಗಳ ನಡುವೆ ಸೆಖೆಯೆಂದು ಚಡಪಡಿಸುತ್ತಾ ಪಂಖದ ವೇಗವನ್ನು ಹೆಚ್ಚಿಸಿಯೋ.. ಹವಾನಿಯಂತ್ರಕ ಬಳಸಿಯೋ.. ಕುಳಿತು ಹಣ್ಣಿನ ರಸ ಹೀರುವ  ಬದಲಾದ ಜೀವನ ಶೈಲಿ ಈಗ ಬೇಸರ ತರಿಸುವುದು ಸಹಜ..ಅನಿವಾರ್ಯತೆಯ ಹೊರತಾದ ಯಾವುದೇ ಐಷಾರಾಮವೂ ಬೇಕೆನಿಸುವದಿಲ್ಲ . ದುಡಿಮೆಗಾರರೇ ಇರುವ ಪರಿಸರದಲ್ಲಿ ಬೆಳೆದುದರ ಪ್ರಭಾವವಿರಬಹುದೇನೋ.. ಅವರಂತೆಯೇ ನಾವೂ ಯಾಕೆ ಇರಬಾರದು..? ಎಂಬ ಮನೋಭಾವ. .ಅದು ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ  ಗಟ್ಟಿಯಾಗಿರಿಸಿದೆ ಎಂಬುದು ಗಮನಾರ್ಹ ಅಂಶ.

ಬೇಸಿಗೆ ರಜೆ ಬಂತೆಂದರೆ, ಪಟ್ಟಣಗಳಲ್ಲಿ  ಮಕ್ಕಳದ್ದು ಹಿಲ್ ಸ್ಟೇಷನ್ ಗಳಿಗೆ ಪ್ರವಾಸಕ್ಕೆ ಹೋಗುವ ಬೇಡಿಕೆ. ಅವರಿಗೂ ವೇಳೆ ಕಳೆಯಬೇಕಲ್ಲಾ.. ಬೇರೆ ಮಾರ್ಗವಿಲ್ಲ. ಊರ ಮನೆಯಲ್ಲಿ ಒಬ್ಬರೋ ಇಬ್ಬರೋ ಇರುವ ಕುಟುಂಬದವರು ಊರಿಗೆ ಹೋಗಲು ಇಷ್ಟಪಡುವುದಿಲ್ಲ. ‘ಅಲ್ಲಿ ಆಟವಾಡಲು ಯಾರೂ ಇರಲ್ಲ, ನಾನು ಬರಲ್ಲ’ ಎಂದು ಮಕ್ಕಳು ಖಡಾಖಂಡಿತವಾಗಿ ಹೇಳಿಬಿಡುತ್ತಾರೆ.. ಪಾಲಕರ ಮನೋಭಾವವೂ ಅವರಿಗೆ ಬೆಂಬಲವಾಗಿಯೇ ಇರುವುದು. ವಾಟರ್ ಪಾರ್ಕ್ ಗಳಲ್ಲಿ, ರೆಸಾರ್ಟ್ ಗಳಲ್ಲಿ, ಟಿಕೆಟ್ ಗಳು, ರೂಮ್ ಗಳು ಸಿಗುವುದೇ ಕಷ್ಟ. ಸಿಕ್ಕಿತೆಂದು ಖುಷಿಯಿಂದ ಹೋದರೋ..  ಜನ ಜಂಗುಳಿ. ಯಾವುದನ್ನೂ ಸರಿಯಾಗಿ ಆನಂದಿಸಲು ಆಗದು. ಸುಮ್ಮನೆ ಒಂದಿಷ್ಟು ಹಣ ಸುರಿದು ತಂಪಾಗಿ ಬರುತ್ತಾರೆ. ಅದನ್ನು ಆಚೆ ಈಚೆಯವರ ಹತ್ತಿರ ಹೇಳಿಕೊಂಡೋ.. ಫೋನ್ ಗಳಲ್ಲಿ ಸಂದೇಶ ಕಳಿಸಿಯೋ.. ಇನ್ನಷ್ಟು ತಂಪಾಗುತ್ತಾರೆ.ಕಾಲಕ್ಕೆ ತಕ್ಕಂತೇ ಕುಣಿಯಲೇ ಬೇಕು..

ಸೆಖೆಗಾಲ ಬಂತೆಂದರೆ ನೀರಿನ ಹಾಹಾಕಾರ. ಪಶು ಪಕ್ಷಿಗಳ ಮೂಕರೋದನೆ. ಬಾಲ್ಕನಿಯಲ್ಲಿ ಹತ್ತು ಬಾರಿ ಬಂದು ಚಿಂವ್ ಚಿಂವ್ ಎನ್ನುವ ಗುಬ್ಬಚ್ಚಿಯ ಕೂಗು, ಬಟ್ಟೆಯಿಂದ ತೊಟ್ಟಿಕ್ಕುವ ನೀರ ಹನಿಯನ್ನು ಗುಟುಕರಿಸಲು ಹವಣಿಸುವ ಪಾರಿವಾಳ, ಹಸಿರಲ್ಲೇ ಅಡಗಿರುವ ಮುದ್ದು ಗಿಣಿ.. ಆಚೆ ಈಚೆ ಹಾರಾಡುವ ಪರಿ , ಬೀದಿಯ ನಾಯಿಗಳು , ಪುಟ್ಟ ಮರಿಗಳು, ಕಾಲ ಸುತ್ತ ಸುಳಿದಾಡುವ ದೃಶ್ಯ ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಾಗಲೇ ಅದರ ಅರಿವಾಗುವುದು. ದಿನವೂ ಪುಟ್ಟ ಪಾತ್ರೆಯಲ್ಲಿಡುವ ನೀರು ಅದೆಷ್ಟೋ ಜೀವಿಗಳ ದಾಹ ತಣಿಸೀತು. ಕಿತ್ತುತಂದ ಹೂವನ್ನು ನೀರಲ್ಲಿಟ್ಟು ಸಿಂಗರಿಸಿ ಆನಂದಿಸುವಾಗ ಮೂಕ ಜೀವಿಗಳ ಕೂಗಿಗೂ ಕಿವಿಗೊಟ್ಟರೆ ಸಾರ್ಥಕ.

ಒಟ್ಟಾರೆ ಸೆಖೆಗಾಲವೆಂದು ಚಡಪಡಿಸುವದಕ್ಕಿಂತ, ನಮ್ಮ ಯಾಂತ್ರಿಕ ,ಆಧುನಿಕ, ಜೀವನಶೈಲಿಯಿಂದ ಅಪರೂಪಕ್ಕಾದರೂ ಹೊರಗೆ ಬಂದು, ಪ್ರಕೃತಿಯ ಸೇವೆಯಲ್ಲಿ ಸಕ್ರಿಯರಾಗಬೇಕು. ಅಂದರೆ ಮಾತ್ರ ಹಸಿರಾದ, ಹಸನಾದ, ಹಸಿಯಾದ ಭೂತಾಯಿ ತನ್ನ ಮಡಿಲಲ್ಲಿ ತಂಪಾದ ಆಸರೆ ನೀಡಲು ಸಾಧ್ಯವಾದೀತು.  ನಿಸರ್ಗದ ನಿಯಮಗಳನ್ನು ಬದಲಿಸಲಂತೂ ನಮ್ಮಿಂದ ಸಾಧ್ಯವೇ ಇಲ್ಲ.. ಆದಷ್ಟು ಹಿತ ಮಿತದಲ್ಲಿ ಪ್ರಕೃತಿ ನೀಡಿದ ಕಾಣಿಕೆಗಳನ್ನು ಬಳಸಿ,ಆಹಾರ ಇಳಿಸಿ, ಪರಿಸರವನ್ನೂ ಆರೋಗ್ಯವನ್ನೂ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಲಿ..

ಸೆಖೆಗಾಲ ಎಲ್ಲರಿಗೂ ಸುಖ ನೀಡಲಿ.

6 comments

  1. ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ…ಕಲಾ ಅವರೇ ಬಹಳ ಚನ್ನಾಗಿ ಬರೆದಿದ್ದೀರಿ ನಮಗೂ ಈ ಬೇಸಿಗೆಗೂ ಇರಬೇಕಾದ ಹೊಂದಾಣಿಕೆಯ ಬಗ್ಗೆ.

    • ತುಂಬಾ ಧನ್ಯವಾದಗಳು ರೇಣುಕಾ…

  2. ಸಮರಸವೇ ಜೀವನ ಎಂಬುದನ್ನು ಚೆನ್ನಾಗಿ ವಿಶ್ಲೇಷಿಸಿದ್ದೀರಿ. ಅಭಿನಂದನೆಗಳು.

  3. ಬೇಸಿಗೆ ಬರೀ ಬವಣೆಯಲ್ಲ, ಆಯಾ ಕಾಲದ ಋಉತುಮಾನದ ಜೀವನ ಶೈಲಿ ಹೇಗೆ ಚೆನ್ನಾಗಿಸಿಕೊಳ್ಳಬಹಿದೆಂದು ಉತ್ತಮವಾಗಿ ಬರೆದಿದ್ದೀರಿ. ಉತ್ತಮ ಲೇಖನ. – ಡಿ.ಎಸ. ರಮೇಶ್, ಖಾರ್ಘರ್.

Leave a Reply