ಗ್ಯಾಲರಿಯ ತುಂಬಾ ಅವಳದ್ದೇ ಸೆಲ್ಫಿ..

ಕಾಲು ಸಂಕ

ಪಿ ಎಸ್ ಸಂಧ್ಯಾರಾಣಿ, ಹೆರವಟ್ಟಾ

ಇತ್ತೀಚೆಗೆ ಅವಳಿಗೆ ಸರಿಯಾಗಿ
ಹೊರಗಾಗುತ್ತಿಲ್ಲ
ಬೆಚ್ಚಿಬೀಳುವಳು ಬೆಳ್ಳಿ ಕೂದಲಿಗೆಲ್ಲ
ಅವಳೀಗ ಸಿಡಿವ ಸಾಸಿವೆ
ಹೊತ್ತಲ್ಲದ ಹೊತ್ತಿನ
ವೈಶಾಖದ  ಮಳೆ

ಘಳಿಗೆಗೊಮ್ಮೆ ಕನ್ನಡಿಯ ಮುಂದಿನ ಪ್ರಶ್ನೆ
ಗ್ಯಾಲರಿಯ ತುಂಬಾ ಅವಳದ್ದೇ ಸೆಲ್ಫಿ ಹಾಗಾಗಿ
ಕೆಲವು ವ್ಯವಸ್ಥೆಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಸಂದೇಶಗಳು
ಮೇಲಿಂದ ಮೇಲೆ

ಚಾಳೀಸಿನಿಂದ ಪಾದರಸಕ್ಕೆ ಫ್ರೇಮು
ಅದೆಷ್ಟು ಬಾರಿಯೋ ಹಾಲು ಸಾರು ಉಕ್ಕಿದ್ದು
ಈಗ ಚಾಳೀಸಿನ ಪೆಟ್ಟಿಗೆಯಲ್ಲೇ
ಕ್ಯಾಲ್ಸಿಯಂ ಗುಳಿಗೆಗಳು

ಬಿಸಿ ಕಾಫಿ  ಫ್ಲಾಸ್ಕಿನಂತ ದೇಹ
ಒಳಗೆಲ್ಲ ಉರಿಬೆಂಕಿ
ಇಡೀ ಜನ್ಮದ ಶ್ರಮವೆಲ್ಲ ಬೆವರಾಗಿ
ಹರಿದು ಬರಿದಾಗಲಿದೆಯೇ ಒಡಲು?

ಅದೇನ್ ಭಾರಿ ನಾವ್ ಕಾಣದ್ದು?
ಮೈಯೆಲ್ಲ ಅಲರ್ಜಿ ಗುಳ್ಳೆಗಳ ಕಿರಿಕಿರಿ
ಬೊಗಸೆಯೊಳಗಿಂದ ಸೋರುವ ಮರಳು
ಈಗ ಅವಳ ಕನಸ ತುಂಬಾ
ಮನ್ವಂತರವೀಗ ಅವಳಿಗೆ
ಅಡಿಕೆ ಎಳೆಯ ಕಾಲುಸಂಕ…!

Leave a Reply