ನಾನೂ, ನನ್ನ ರಾಮನೂ..

ಪ್ರಸಾದ್ ನಾಯ್ಕ್ 

ಲೈಫು ಸಿಂಪಲ್ಲಾಗಿತ್ತು.

ನಮ್ಮ ಮನೆಯ ಹಿರಿಯರೊಬ್ಬರು ಯಾವಾಗಲೂ ”ರಾಮಾ ರಾಮಾ…” ಅನ್ನುತ್ತಿದ್ದರು. ರಾಮನಾಮ ಸ್ಮರಣೆ ಮಾಡಿದರೆ ಮುಕ್ತಿ ಸಿಗುತ್ತದೆಂಬ ನಂಬಿಕೆ ಅವರದ್ದು. ”ರಾಮ ಮಂತ್ರವ ಜಪಿಸೋ…”, ಎಂದು ನಾವುಗಳು ಬಾಲ್ಯದಲ್ಲಿ ಭಜನೆ ಹಾಡಿದ್ದಕ್ಕೆ ಲೆಕ್ಕವೇ ಇಲ್ಲ. ಹಿಂದಿನಿಂದಲೂ ಒಂದೊಳ್ಳೆಯ ಕಥೆಯಾಗಿ ನನಗೆ ವೈಯಕ್ತಿಕವಾಗಿ ಮಹಾಭಾರತ ಇಷ್ಟವಾಗಿದ್ದರೂ ರಾಮಾಯಣದ ಬಗ್ಗೆ ಅಂಥಾ ದೂರೇನೂ ಇರಲಿಲ್ಲ. ಅಲ್ಲೂ ಅಸಂಖ್ಯಾತ ಉಪಕಥೆಗಳಿದ್ದವು. ಶ್ರೀರಾಮಚಂದ್ರ ಸರ್ವಗುಣಸಂಪನ್ನನಾಗಿದ್ದ. ಹನುಮಂತ ಪ್ರಿಯವಾಗಿದ್ದ. ಆವತ್ತಿಗೆ ದಶಾವತಾರಗಳಲ್ಲಿ ರಾಮನ ಅವತಾರವೂ ಒಂದಾಗಿತ್ತೇ ಹೊರತು ಅದಕ್ಕೆ ಇನ್ನೇನೂ ವಿಶೇಷ ಪ್ರಭಾವಳಿಗಳಿರಲಿಲ್ಲ. ಒಟ್ಟಿನಲ್ಲಿ ಬದುಕು ಸರಳವಾಗಿತ್ತು.

ಇತ್ತ ಮೇಲೆ ಹೇಳಿರುವ ಮನೆಯ ಹಿರಿಯರು ರಾಮನ ಬಗ್ಗೆ ಭಾರೀ ಎಮೋಷನಲ್ ಏನೂ ಆಗಿರಲಿಲ್ಲ. ”ರಾಮಾ ರಾಮಾ…” ಅನ್ನುವ ಬದಲು ”ಶಿವ ಶಿವ…” ಅನ್ನಿ ಎಂದರೆ ಅವರಿಗೇನೂ ಅಭ್ಯಂತರವಿರಲಿಲ್ಲ. ನಾನು ಸುಮ್ಮನೆ ಹಿಂದಿಚಿತ್ರದ ಹಾಡುಗಳನ್ನು ಗುನುಗುತ್ತಿದ್ದರೆ ”ರಾಮ… ರಾಮ… ಅನ್ನುವುದನ್ನು ಬಿಟ್ಟು ಅದೇನೋ ದಿನವಿಡೀ ವಟಗುಟ್ಟೋದು”, ಎಂದು ನಮ್ಮ ಮನೆಯಲ್ಲಿ ಯಾವಾಗಲೂ ಗೊಣಗೋರು. ಇಲ್ಲಿ ‘ರಾಮ’ ಅನ್ನುವುದು ಸಾತ್ವಿಕ ಜೀವನಶೈಲಿಯ ಒಂದು ಸಾಂಕೇತಿಕ ರೂಪವಷ್ಟೇ ಆಗಿತ್ತು. ರಾಮನನ್ನು ಒಂದರೆಕ್ಷಣ ಬದಿಗಿಟ್ಟು ”ಓಹ್ ಜೀಸಸ್!” ಎಂದರೆ ತಲೆ ಹೋಗುವಂಥದ್ದೇನೂ ಇರಲಿಲ್ಲ. ಹೀಗೆ ‘ರಾಮ’ ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಮನೆಮನಗಳಲ್ಲಿ ಬಂದು ಹೋಗುತ್ತಿದ್ದ. ಬದುಕಿನ ಭಾಗವಾಗಿದ್ದ.

ಆದರೆ ಬದಲಾವಣೆ ಅನ್ನೋದು ಹೇಗಾಗುತ್ತೆ ನೋಡಿ!

ಉದಾಹರಣೆಗೆ ಹಿಂದಿ ಸಿನೆಮಾ ಜಗತ್ತಿನಲ್ಲಾದ ಬದಲಾವಣೆಯ ಬಗ್ಗೆ ಕವಿ ಜಾವೇದ್ ಅಖ್ತರ್ ಬಹಳ ಚೆನ್ನಾಗಿ, ಮನಮುಟ್ಟುವಂತೆ ಹೇಳುತ್ತಾರೆ. ಅವರು ಹೇಳುವಂತೆ ಎಪ್ಪತ್ತರ ದಶಕದಲ್ಲಿದ್ದ ಬಾಲಿವುಡ್ ಚಿತ್ರಗಳ ಹೀರೋ ಒಬ್ಬ ಸಾಮಾನ್ಯ ಮನುಷ್ಯನಾಗಿದ್ದ. ಆತ ಆಟೋ ಡ್ರೈವರ್ ಆಗಿದ್ದ, ಅಡುಗೆಯವನಾಗಿದ್ದ, ನೌಕರನಾಗಿದ್ದ… ಒಟ್ಟಿನಲ್ಲಿ ನಮ್ಮನಿಮ್ಮಂತೆ ಜನಸಾಮಾನ್ಯನಾಗಿದ್ದ. ಆದರೆ ಎಂಭತ್ತರ ದಶಕದಲ್ಲಿ ಎಂಟ್ರಿ ಕೊಟ್ಟ ಹೀರೋ ಮಾತ್ರ ‘ಆಂಗ್ರೀ ಯಂಗ್ ಮ್ಯಾನ್’. ಆತನಿಗೆ ಜಮೀನ್ದಾರರ, ಊಳಿಗಮಾನ್ಯ ವ್ಯವಸ್ಥೆಯ, ದಬ್ಬಾಳಿಕೆಯ ಪ್ರತಿರೂಪವಾಗಿದ್ದ ಸಿರಿವಂತರ ಮೇಲೆ ರೋಷವಿತ್ತು.

ಮುಂದೆ ತೊಂಭತ್ತು ಮತ್ತು ನಂತರದ ಒಂದು ದಶಕಗಳಲ್ಲಿ ಬಂದ ಹೀರೋ ಖುದ್ದು ಶ್ರೀಮಂತನೇ ಆಗಿದ್ದ. ಆತ ಮೈಮುರಿದು ದುಡಿಯುವವನಾಗಿರಲಿಲ್ಲ. ಬೇಜಾರಾದರೆ ಹೊರದೇಶಗಳಲ್ಲಿ ಸುತ್ತಾಡಿ ಬರುತ್ತಿದ್ದ. ಆತನ ಮತ್ತು ಆತನ ಸುತ್ತಲಿದ್ದವರ ಬದುಕು ಅಪ್ಪಟ ಪಂಚತಾರಾ ವಿಲಾಸದ್ದಾಗಿತ್ತು. ಆದರೆ ಸದ್ಯ ಬಾಲಿವುಡ್ ಮತ್ತೆ ಹೊಸದೇನನ್ನೋ ಪ್ರಯತ್ನಿಸುತ್ತಿದೆ. ಈಗ ಅದರ ಕಣ್ಣ ಮುಂದಿರುವುದು ಮಧ್ಯಮವರ್ಗ. ಅದರಲ್ಲೂ ನಗರ ಪ್ರದೇಶಗಳಲ್ಲಿರುವ, ಅತ್ತ ಹಳ್ಳಿಯೆಂದರೆ ನಿರ್ಲಕ್ಷ್ಯವಿರುವ ಇತ್ತ ಮಹಾನಗರಗಳ ವೇಗಕ್ಕೆ ಸುಸ್ತು ಹೊಡೆದಿರುವ, ಎಲ್ಲೂ ಸಲ್ಲದಿರುವ ಗೊಂದಲಭರಿತ ಯುವವರ್ಗ. ಹೀಗಾಗಿ ನಮ್ಮ ಮುಂದಿರುವ ಸಾಕಷ್ಟು ಚಿತ್ರಗಳು, ಕಿರುಚಿತ್ರಗಳು ಈ ವರ್ಗದಲ್ಲಿ ನಡೆಯುವ ಕಥೆಗಳನ್ನೇ ತೆರೆಯ ಮೇಲೆ ತರುವಲ್ಲಿ ಆಸಕ್ತಿಯನ್ನು ತೋರಿಸುತ್ತಿವೆ ಎನ್ನುತ್ತಾರೆ ಜಾವೇದ್ ಅಖ್ತರ್.

ಸಿನೆಮಾ ಒಂದು ಉದಾಹರಣೆಯಷ್ಟೇ. ಬದಲಾವಣೆಯಿಲ್ಲದ ಕ್ಷೇತ್ರವಾದರೂ ಎಲ್ಲಿದೆ? ಬದಲಾವಣೆಗೆ ಭಗವಂತನೂ ಹೊರತಲ್ಲ. ಶತಮಾನಗಳು ಉರುಳಿದಂತೆ ಹಲವು ಧರ್ಮಗಳು ವಿವಿಧ ರೂಪವನ್ನು ಮೈಗೂಡಿಸಿಕೊಳ್ಳುತ್ತಾ ಹೋದಂತೆ ರಾಮ ಕೂಡ ಕಾಲಕ್ರಮೇಣ ಬದಲಾಗುತ್ತಾ ಬಂದಿದ್ದಾನೆ. ಹಿಂದೆಲ್ಲಾ ಸೀತೆ-ಲಕ್ಷ್ಮಣ-ಹನುಮನನ್ನೊಳಗೊಂಡ ರಾಮನ ಫ್ಯಾಮಿಲಿ ಫೋಟೋಗಳು ಹೆಚ್ಚು ಬರುತ್ತಿದ್ದವು. ಇಂದಿನ ಬ್ಯಾನರ್, ಫ್ಲೆಕ್ಸ್, ಸ್ಟಿಕರ್ ಗಳಲ್ಲಿ ಕಾಣುವ ರಾಮ ಧನುರ್ಧಾರಿಯಾಗಿ ಎದೆಯುಬ್ಬಿಸಿ ನಿಂತಿದ್ದಾನೆ. ಆತನೀಗ ಸದಾ ಯುದ್ಧಸನ್ನದ್ಧ.

ವಿಚಿತ್ರವೆಂದರೆ ಇದು ರಾಮನನ್ನಷ್ಟೇ ಬಿಡದೆ ಹನುಮನಲ್ಲೂ ಬಂದಿದೆ. ನನಗಿನ್ನೂ ನೆನಪಿದೆ. ಹತ್ತರಿಂದ ಹದಿನೈದು ವರ್ಷಗಳ ಹಿಂದೆ ನಾವು ನೋಡುತ್ತಿದ್ದ ಹನುಮನ ಚಿತ್ರಗಳೆಲ್ಲವೂ ಸಾಮಾನ್ಯವಾಗಿ ಶಾಂತಚಿತ್ತದ ಹನುಮನದ್ದೇ ಆಗಿದ್ದವು. ಸ್ವತಃ ಚಿತ್ರಕಲಾವಿದನಾದ ನಾನು ಶಾಲಾದಿನಗಳಲ್ಲಿ ಅದೆಷ್ಟೋ ಪೌರಾಣಿಕ ಕಥಾಪಾತ್ರಗಳನ್ನು ಚಿತ್ರಿಸಿದ್ದಿದೆ. ಆಗೆಲ್ಲಾ ಹನುಮನೆಂದರೆ ರಾಮನ ಬಗೆಗಿನ ಭಕ್ತಿಯೇ ಮೈವೆತ್ತಂತಿದ್ದ ಚಿತ್ರಣವಿತ್ತು. ಆದರೆ ಈ ದಶಕದ ಹನುಮ ಸಾಕಷ್ಟು ಅಗ್ರೆಸಿವ್ ಆಗಿ ಕಾಣುತ್ತಿದ್ದಾನೆ. ಹನುಮ ಲಂಕೆಯನ್ನು ಸುಡುತ್ತಿದ್ದಾಗ ತೆಗೆದ ಚಿತ್ರವೇ ಹೆಚ್ಚು ಲೈಕುಗಳನ್ನು ಪಡೆಯಿತೋ ಎಂಬಂತೆ ಈಗಿನ ಹನುಮನಿಗಾಗಿ ರಣೋತ್ಸಾಹಿಯ ಇಮೇಜ್ ಚಾಲ್ತಿಗೆ ಬಂದಿದೆ. ಹೀಗೆ ಒಂದು ಕಾಲದಲ್ಲಿ ಕಾಣಸಿಗುತ್ತಿದ್ದ ಭಕ್ತರ ಭಕ್ತ, ಬಂಟರ ಬಂಟ, ರಾಮಭಕ್ತ ಹನುಮ ಮೆಲ್ಲಗೆ ಮರೆಯಾಗಿದ್ದಾನೆ. ಆತನ ಪಿ.ಆರ್ ತಂಡವು ಬಹುಷಃ ಆತನಿಗೆ ಹೊಸ ಇಮೇಜ್ ಅನ್ನು ಸೃಷ್ಟಿಸುವ ಅವಸರದಲ್ಲಿದೆ.

ಎಲ್ಲವನ್ನೂ ತನ್ನ ಅನುಕೂಲಕ್ಕೆ ತಕ್ಕಂತೆ ಹೊಸದಾಗಿ ವ್ಯಾಖ್ಯಾನ ಮಾಡುವ ಭರಕ್ಕೆ ಬಿದ್ದ ಮನುಷ್ಯ ಒಟ್ಟಿನಲ್ಲಿ ಭಗವಂತನನ್ನೂ ಬಿಡಲಿಲ್ಲವೆನ್ನಿ. ಈ ಬಗ್ಗೆ ನನಗೆ ದೂರೇನೂ ಇಲ್ಲ. ಆದರೆ ಇದನ್ನು ತಳ್ಳಿಹಾಕುವಂತೆಯೂ ಇಲ್ಲ. ಅಸಲಿಗೆ ಬದಲಾಗಿದ್ದು ಮನುಷ್ಯನಷ್ಟೇ. ಆದರೆ ಮನುಷ್ಯನೋ ತನ್ನ ಅನುಕೂಲಕ್ಕೆ ತಕ್ಕಂತೆ ಭಗವಂತನನ್ನೂ ಬದಲಾಯಿಸುತ್ತಾ ಬಂದ. ತನ್ನ ಗುಣ-ಅವಗುಣಗಳನ್ನೇ ಅವನಿಗೂ ಧಾರೆಯೆರೆದ. ಹಾಗೆ ನೋಡಿದರೆ ಭಗವಂತನನ್ನು ಮುಂದಿಟ್ಟು ಮನುಷ್ಯರು ಮಾಡಿದ ಮೆರೆದಾಟ ಹೊಸತೇನಲ್ಲ. ಹಿಂದೆ ಬಿಳಿಯರು ಆಫ್ರಿಕಾದಲ್ಲಿ ತಮ್ಮ ಸಾಮ್ರಾಜ್ಯಗಳನ್ನು ಸ್ಥಾಪಿಸತೊಡಗಿದಾಗ ಸೈನ್ಯ-ಆಡಳಿತಾಧಿಕಾರಿಗಳ ಜೊತೆಯಲ್ಲಿ ಚರ್ಚಿನ ಪಾದ್ರಿಗಳೂ ಬಂದರು. ಆಫ್ರಿಕನ್ನರ ಸ್ಥಳೀಯ ಹೆಸರನ್ನೆಲ್ಲಾ ನಾಶಪಡಿಸಿ ಅವರಿಗೆ ಬೈಬಲ್ಲಿನ ಹೆಸರುಗಳನ್ನಿಡಲಾಯಿತು. ಧರ್ಮಗ್ರಂಥಗಳ ಹೆಸರಿನಲ್ಲಿ ಯೋನಿಗಳನ್ನು ಬರ್ಬರವಾಗಿ ಕುಯ್ಯಲಾಯಿತು, ಇನ್ನೆಲ್ಲೋ ಬಂದೂಕು ಹಿಡಿಯಲಾಯಿತು, ಮತ್ತೆಲ್ಲೋ ಕೆಲವರು ಬಡಿದಾಡಿದರು.

ಭಗವಂತನೆಂಬುದು ‘ನಂಬಿಕೆ’ಯ ಪ್ರಶ್ನೆಯಾಗಿರುವುದರಿಂದ ಮತ್ತು ಸಾಮಾಜಿಕ-ಸಾಮುದಾಯಿಕ ನೆಲೆಗಟ್ಟಿನಲ್ಲಿ ನೋಡಿದರೆ ಒಂದು ದೊಡ್ಡಮಟ್ಟಿನ ಜನಬೆಂಬಲವನ್ನು ಪಡೆಯುವುದು ಇದರಿಂದ ಸಾಧ್ಯವಾಗುವ ಕಾರಣದಿಂದಾಗಿ ಭಗವಂತನನ್ನು ಮುಂದಿಟ್ಟು ರಾಜಕೀಯ ಶಕ್ತಿಗಳು ಇತಿಹಾಸದುದ್ದಕ್ಕೂ ಮೆರೆದಾಡಿದವು. ಇಂದಿಗೂ ಮಾಡುತ್ತಿದ್ದಾರೆ. ಮುಂದೆಯೂ ಇದರ ಸಾಧ್ಯತೆಗಳಿಲ್ಲದಿಲ್ಲ. ದಬ್ಬಾಳಿಕೆ-ಓಲೈಕೆಗಳೂ ಇದರ ಒಂದು ಭಾಗ. ಆದರೆ ಸ್ವರ್ಗ-ನರಕಗಳ ಕಲ್ಪನೆಗಳು ನಿಧಾನವಾಗಿ ನಶಿಸುತ್ತಿರುವ ನಿಟ್ಟಿನಲ್ಲಿ ಇವೆಲ್ಲಾ ಮುಂದೆ ಅದೆಷ್ಟು ವರ್ಷಗಳ ಕಾಲ ಕೆಲಸ ಮಾಡಬಲ್ಲವು ಎಂಬುದನ್ನು ಲೆಕ್ಕಹಾಕುವುದು ಮಾತ್ರ ಕಷ್ಟ.

ಇನ್ನು ಈ ಮಟ್ಟಿಗೆ ಭಗವಂತನಷ್ಟೇ ಸುಸ್ತು ಹೊಡೆಯುತ್ತಿರುವ ಮತ್ತೊಂದು ವರ್ಗವೆಂದರೆ ಸತ್ತವರದ್ದು. ಭಗವಂತನಿಗೂ ಸತ್ತವರಿಗೂ ಇರುವ ಸಾಮ್ಯತೆಗಳೆಂದರೆ ಇದೇ. ಇವರಿಬ್ಬರ ಹೆಸರಿನಲ್ಲಿ ಏನು ಬೇಕಾದರೂ ಹೇಳಿಕೊಂಡು ಓಡಾಡಬಹುದು, ಆಪಾದನೆಗಳನ್ನು ಮಾಡಬಹುದು, ಆಣೆ-ಪ್ರಮಾಣ ಹಾಕಬಹುದು. ಕತ್ತಿನ ಪಟ್ಟಿ ಹಿಡಿದು ಕೇಳಲು ಹೇಗೂ ಇವರಿಬ್ಬರೂ ಬರುವುದಿಲ್ಲವಲ್ಲಾ! ಹೀಗಾಗಿ ಯಾವತ್ತಿಗೂ ಇದೊಂದು ಸೇಫ್ ಗೇಮ್.

ಅಷ್ಟಕ್ಕೂ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಚುನಾವಣೆಗಿಂತ ಸ್ವಾರಸ್ಯಕರವಾಗಿರುವ ಮತ್ತೊಂದು ಸಂಗತಿಯಾದರೂ ಏನಿದೆ! ಪ್ರಚಾರಕ್ಕಾಗಿ ಹಿಂದೆ ‘ಗರೀಬಿ ಹಟಾವೋ’ ಇತ್ತು. ನಂತರ ರಾಮ ಬಂದ. ಸದ್ಯ   ಸೈನ್ಯದ ಟ್ರೆಂಡ್. ಮುಂದೆ ಮತ್ತೇನೋ ಬರಬಹುದು. ಅಷ್ಟಕ್ಕೂ ಗರೀಬಿ ಅಳಿಯಲಿಲ್ಲ, ರಾಮಮಂದಿರದ ಗಲಾಟೆ ತಣ್ಣಗಾದಂತೆ ಕಂಡರೂ ಸಮಾಧಾನಕರವಾಗಿ ಇತ್ಯರ್ಥವಾಗಲಿಲ್ಲ. ಒಂದು ಮಟ್ಟಿಗೆ ಏನೋ ಶಾಂತಿಯಿದೆ ಎಂದು ನಿಟ್ಟುಸಿರಿಟ್ಟರೆ ಮತ್ಯಾರೋ ವಿನಾಕಾರಣ ರೊಳ್ಳೆ ತೆಗೆದ ಸುದ್ದಿ ಅಪ್ಪಳಿಸುತ್ತದೆ. ಹಿಂದೊಮ್ಮೆ ನಾನು ನಾಗಾಲ್ಯಾಂಡಿಗೆ ಹೋಗಿದ್ದಾಗ ಓರ್ವ ಅಧಿಕಾರಿಯೊಬ್ಬ ನಾಗಾ ಆದಿವಾಸಿಗಳ ಬಗ್ಗೆ ಸಿನಿಕನಾಗಿ ಹೇಗೆ ಹೇಳಿದ್ದ: ”ನಾಗಾ ಆದಿವಾಸಿಗಳು ಯಾವಾಗ ತಮ್ಮ ಸಾಂಪ್ರದಾಯಿಕ ಬುಡಕಟ್ಟು ವಸ್ತ್ರಗಳನ್ನು ಕಳಚಿಟ್ಟು ನಮ್ಮಂತೆ ಪ್ಯಾಂಟು-ಶರ್ಟು ಧರಿಸುತ್ತಾರೋ ಅಂದು ನಮ್ಮ ಪ್ರವಾಸೋದ್ಯಮಕ್ಕೆ ಬರುವ ಆದಾಯ ನಿಂತುಹೋಗುತ್ತದೆ”, ಎಂದು. ಹೀಗಾಗಿ ಕೆಲವು ಸಮಸ್ಯೆಗಳು ಯಾವತ್ತೂ ದಡ ಸೇರುವುದಿಲ್ಲ. ದೇಶದ ಶಕ್ತಿಕೇಂದ್ರಗಳಿಗೆ ಇದರ ಅವಶ್ಯಕತೆಯೂ ಇಲ್ಲ.

ಇವೆಲ್ಲದರ ನಡುವೆಯೂ ಸಂತಸದ ಸಂಗತಿಯೆಂದರೆ ‘ರಾಮ’ ಹೆಚ್ಚಾಗಿ ಸುದ್ದಿಯಲ್ಲಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿವಾಹಿನಿಗಳಲ್ಲಿ ಮಾತ್ರ. ಇನ್ನು ಈ ದೇಶದ ಜನಸಾಮಾನ್ಯರಿಗೆ ತಮ್ಮ ಜೀವನದ ಜಂಜಾಟಗಳೇ ಸಾಕಷ್ಟಿರುವಾಗ ಭಗವಂತನ ಹೊಸ ರಗಳೆಗಳು ಬೇಡವೆನ್ನಿಸುವುದು ಸಹಜ. ಉತ್ತರಭಾರತದ ಕೆಲಭಾಗಗಳಲ್ಲಿ ಇಂದಿಗೂ ”ನಮಸ್ಕಾರ” ಎನ್ನುವ ಬದಲು ”ರಾಮ್ ರಾಮ್” ಎನ್ನುತ್ತಾರೆ. ಪೊಳ್ಳು ರಾಜಕೀಯ ಕುತಂತ್ರಗಳು ಜನರನ್ನು ಆಪ್ತವಾಗಿ ಎದುರುಗೊಳ್ಳುವ ಈ ಭಾಗಗಳ ಜನರ ಸಂಸ್ಕøತಿಯನ್ನು ಒಂದಿಷ್ಟೂ ಅಲುಗಾಡಿಸಿಲ್ಲ. ಇದು ಈ ದೇಶದ, ಇಲ್ಲಿಯ ಸಂಸ್ಕಾರದ ಗಟ್ಟಿತನಕ್ಕೆ ಸಾಕ್ಷಿ. ಸಾಮಾನ್ಯವಾಗಿ ಭಗವಂತ ಯಾವಾಗ ಸುದ್ದಿಯಾಗುತ್ತಾನೆ ಎಂಬುದು ಈಗ ಜನರಿಗೂ ಗೊತ್ತಾಗಿರುವುದರಿಂದ ನಿಧಾನವಾಗಿಯಾದರೂ ರಾಮ-ರಹೀಮರೆಲ್ಲಾ ಇಷ್ಟಿಷ್ಟೇ ತಮ್ಮ ಪ್ರಾಮುಖ್ಯತೆಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಸದ್ಯ ಭಗವಂತನ ಅಜೆಂಡಾವನ್ನು ಉಳಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಕೊನೆಯ ಅಸ್ತ್ರವೆಂಬಂತಿರುವುದು ಸೋಷಿಯಲ್ ಮೀಡಿಯಾ ಮತ್ತು ಸುದ್ದಿವಾಹಿನಿಗಳು ಮಾತ್ರ.

ರಾಮ ಬದುಕಿಗೊಂದು ಆದರ್ಶವಾಗಬಹುದಿತ್ತು. ಆದರೆ ಆತನೋ ರಾಜಕೀಯ ದಾಳವಾಗಿರುವಂತೆ ಕಾಣುತ್ತಿದ್ದಾನೆ. ಮಾನವ ಮಹಾಕಿಲಾಡಿ. ಭಗವಂತ ಮನುಷ್ಯನನ್ನು ಸೃಷ್ಟಿಸಿದ ತಪ್ಪಿಗೆ ಸೇಡು ತೀರಿಸುವವನಂತೆ ಮನುಷ್ಯ ಕ್ರಮೇಣ ಹೊಸ ಭಗವಂತನನ್ನೇ ಸೃಷ್ಟಿಸಿದ. ಸಮಯ-ಸಂದರ್ಭ-ಅನುಕೂಲಗಳಿಗೆ ತಕ್ಕಂತೆ ವಿವಿಧ ಆವೃತ್ತಿಗಳನ್ನೂ ಬಿಕರಿಗೆ ಬಿಟ್ಟ. ಹೀಗಾಗಿ ಸದ್ಯದ ರಾಮನಿಗೀಗ ಒಂದು ಬಣ್ಣ ಬಂದುಬಿಟ್ಟಿದೆ, ಏಕಾಏಕಿ ಆತ ಒಂದು ಸಮುದಾಯದ ಮುಖವಾಗಿಬಿಟ್ಟಿದ್ದಾನೆ. ಬಹುತೇಕರು ಆತನನ್ನು ತಮಗಿಷ್ಟ ಬಂದಂತೆ ಎಳೆದಾಡುತ್ತಿದ್ದಾರೆ. ದುರಾದೃಷ್ಟವಶಾತ್ ತ್ರೇತಾಯುಗಕ್ಕಿಂತಲೂ ಹೆಚ್ಚಿನ ಜವಾಬ್ದಾರಿ, ಜಂಜಾಟ, ಸಮಸ್ಯೆಗಳು ಈಗಿನ ರಾಮನಿಗಿವೆ.

ಕವಯತ್ರಿ ಶ್ರೀದೇವಿ ಕೆರೆಮನೆಯವರ ‘ರಾಮರಾಜ್ಯ’ ಅನ್ನುವ ಚಂದದ ಕವಿತೆಯೊಂದು ಅಂತ್ಯವಾಗುವುದು ಹೀಗೆ:

ನಮ್ಮ ಮಾತು, ನಡತೆ, ಯೋಚನೆ

ಜೊತೆಗೆ ನಮ್ಮ ಆಲೋಚನೆ…

ಉಡುಗೆ ತೊಡುಗೆ

ಕೊನೆಗೆ ನಾವು ತಿನ್ನುವ ಆಹಾರವನ್ನೂ

ರಾಮರಾಜ್ಯಕ್ಕೆ ಅನುಗುಣವಾಗಿ ಮಾರ್ಪಡಿಸಿಕೊಂಡು

ಸುಖಲೋಲುಪ್ತತೆಯಲ್ಲಿ ಮೈ-ಮನಸ್ಸನ್ನು ಮರೆತುಬಿಡೋಣ

 

ಕಾಲ ದೇಶ, ರಾಜ್ಯ ಊರು ಯಾವುದಾದರೇನು?

ನಮ್ಮನ್ನು ಆಳುವ ಪ್ರಭು ಯಾರಾದರೇನು…

ನಾವು ಸದಾ ರಾಮರಾಜ್ಯದಲ್ಲೇ ಇರುತ್ತೇವೆ..

ಕವಯತ್ರಿಯ ಸಾಮಾಜಿಕ ಕಾಳಜಿಯು ಮೆಲ್ಲನೆ ನಮ್ಮನ್ನೂ ಎಚ್ಚರಿಸುತ್ತಿದೆ!

 

Leave a Reply