ಫಕೀರನಾಗುವ ಬಗೆ..

ಸಂಗನಗೌಡ

ಹಿಂದೊಂದು ಭಾಷಣದಲ್ಲಿ ಪ್ರಧಾನಮಂತ್ರಿಗಳು “ನಾನೊಬ್ಬ ಫಕೀರ (ಹಮ್ ತೋ ಫಕೀರ್ ಆದಮಿ ಹೈ) ಎಂದು ಮಾತನಾಡಿದ್ದರು..
ಈ ಫಕೀರನಾಗುವ ಪರಿಕಲ್ಪನೆ ಇದೆಯಲ್ಲಾ, ಅದು ನಮ್ಮ ಪ್ರಧಾನಮಂತ್ರಿಗಳು ಹೇಳಿದಂತಿಲ್ಲ! ಫಕೀರನಿಗೆ ಯಾವುದೇ ಅಧಿಕಾರದ ಮೋಹ ಇರುವುದಿಲ್ಲ.

ಷಹಜಾನನ ಮಗ ಔರಂಗಜೇಬ, ಅಧಿಕಾರಕ್ಕೆ ಅಡ್ಡಿಯಾದ ತನ್ನ ಅಣ್ಣ (ಫಕೀರ) ದಾರಾಶಿಕೊನನ್ನು  ಕೊಂದು ರಕ್ತದ ಮಡುವಿನ ಖಡ್ಗ ಹಿಡಿದು ನಿಂತಾಗ ಇವರೀರ್ವರ ತಂಗಿ ಲಾವಂಗಿಯು ದುಃಖದಿಂದ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತಾ “ನೆನಪಿದಿಯಾ ಔರಂಗಜೇಬ್, ಬಾಲ್ಯದಲ್ಲಿದ್ದಾಗ ನಿನಗೆ ಬಟ್ಟೆ ತೊಡುವ ಹುಚ್ಚು; ಅಣ್ಣ ದಾರಾಶಿಕೊನಿಗೆ ಬೆತ್ತಲಾಗುವ ಹುಚ್ಚು” (ರಸಗಂಗಾಧರ.ವಿಕ್ರಮ್ ವಿಸಾಜಿ) ಇಲ್ಲಿ ಲಾವಂಗಿ ಮೈ ಬೆತ್ತಲೆ ಬಗ್ಗೆ ಅಷ್ಟೆ ಹೇಳುತ್ತಿಲ್ಲ ಮನಸ್ಸಿನ ಬೆತ್ತಲೆಯ ಬಗ್ಗೆಯೂ ಹೇಳುತಿದ್ದಾಳೆ.

ಇದು ನಿಜವಾಗಿಯೂ ಫಕೀರನಾಗುವ ಪ್ರಕ್ರಿಯೆ. ಇದು ಅಧಿಕಾರದ ವ್ಯಾಮೋಹವಿರುವ ಔರಂಗಜೇಬನಿಗಿರಲಿಲ್ಲ; ಬದಲಾಗಿ ಎಲ್ಲವನ್ನೂ ಕಳಚಿಕೊಂಡ ದಾರಾಶಿಕೊನಿಗೆ ಇತ್ತು. ಇಡೀ ನಾಟಕದ ಉದ್ದಕ್ಕೂ ಲಾವಂಗಿ ತನ್ನ ಇನ್ನೊಬ್ಬ ಅಣ್ಣ ಔರಂಗಜೇಬನಿಗೆ ಒಂದು ಬಾರಿಯೂ ‘ಅಣ್ಣ’ ಎಂದು ಕರೆಯುವುದಿಲ್ಲ. ನಾಟಕಕಾರರು ಸೂಕ್ಷವಾಗಿ ಹಿಡಿದಿಟ್ಟಿದ್ದಾರೆ.

ಫಕೀರನಾಗಲು ಬಂದ ಚೆನ್ನೂರ ಜಲಾಲ್ ಸಾಬನಿಗೆ  ಕಡಕೋಳದ ಮಡಿವಾಳಪ್ಪ ತನ್ನ ತತ್ವಪದದಲ್ಲಿ ಹೀಗೆ ಹೇಳುತ್ತಾನೆ..

“ಫಕೀರನಾಗಬೇಕಾದರೆ ಈ ಮನ
ಧಿಕ್ಕಾರ ಮಾಡಿಕೊಂಡಿರಬೇಕು
ನಕಾರ ಮಕಾರ ಶಿಕಾರ ವಕಾರ
ಯಕಾರ ಓಂಕಾರ ತಿಳಿದಿರಬೇಕೊ|

ಹೀಗೆ ಮುಂದೊರೆದ ತತ್ವಪದವು,
“ನಾಮ ಸೀಮೆಗಳ ಬಿಟ್ಟೇನೆಂಬ ದೃಢ
ಪ್ರೇಮದ ಲುಂಗಿ ಉಟ್ಟಿರಬೇಕೊ”
[ತತ್ವಪದ ಸಂ.೩ಮೀನಾಕ್ಷಿ ಬಾಳಿ]

ಫಕೀರನಿಗೆ ದೇಶ ಭಾಷೆ ಗಡಿಗಳೆಲ್ಲಾ ಸೀಮಾತೀತವಾಗಿರುತ್ತವೆ. ಫಕೀರರಾದವರು ಇವುಗಳ ಹೆಸರಮೇಲೆ ಭಾಷಣ ಮಾಡಿ ಅಧಿಕಾರ ಮತ್ತು ಪ್ರಚಾರ ಗಿಟ್ಟಿಸಿಕೊಳ್ಳುವುದಿಲ್ಲ.ಗಿಟ್ಟಿಸಿಕೊಳ್ಳಬಾರದು ಕೂಡಾ!

ದೆಹಲಿಯ ಸುಲ್ತಾನ ಅಲ್ಲಾವುದ್ದಿನ್ ಖಿಲ್ಜಿಯ ಆಸ್ತಾನದಲ್ಲಿ ನಿಜಾವತ್ ಅಲದಿನ್ ಜೌಲಿಯೆಂಬ ಫಕೀರನಿದ್ದನಂತೆ ಆತನು ಒಮ್ಮೆ “ನನ್ನ ಜೋಪಡಿಗೆ ಎರಡು ಬಾಗಿಲು ಇಡಿಸಿದ್ದೇನೆ; ಅಕಸ್ಮಾತ್ ಒಂದರ ಮೂಲಕ ಸುಲ್ತಾನ ಬಂದರೆ, ಇನ್ನೊಂದರ ಮೂಲಕ ನಾನು ಹೊರನಡಿಯುತ್ತೇನೆ” ಇದು ಫಕೀರರ ಮನೋಧರ್ಮಕ್ಕೆ ಪ್ರಾತಿನಿಧಿಕವಾಗಬಲ್ಲ ಮಾತು. ಇಂದು ಹೊರನಡೆಯ ಬೇಕಾದವರು, ಒಳಬರುವ ಸ್ಥಿತಿಯಲ್ಲಿ ಇರುವಾಗ ಅದು ಹೇಗೆ ಫಕೀರರಾಗಲು ಸಾದ್ಯ!?

ನಿಜವಾದ ಪಕೀರನಿಗೆ ಏನನ್ನೂ ಕಂಡರೂ ಅದು ಅವರಿಗೆ ಹೆಣದ ವಾಸನೆ ತರಹ ಕಾಣುತ್ತದೆ. ಬಿಜಾಪುರ ಸುಲ್ತಾನನ ಆಸ್ತಾನದಲ್ಲಿ ಇದ್ದ ಷಹನುಂಗ ನೆಂಬ ಫಕೀರನು ಅರಮನೆಯಿಂದ ಹೆಣದ ವಾಸನೆ ಹೆಣದ ವಾಸನೆ ಎಂದು ಕಿರುಚುತ್ತಾ ಹೊರಗೆ ಓಡಿಬಂದಿದ್ದನಂತೆ. ಇಂಥ ಮಾತು ಕೇಳಿದ ಖಾಕಂಡಿಗಿ ಮಹಿಪತಿದಾಸರು ಅವನಿಗೆ ಒಂದು ಮುದ್ರೆಯುಂಗರ ಕೊಟ್ಟರು. ಆತ ಅದನ್ನು ಹೆಣದ ವಾಸನೆ ಎಂದು ಚರಂಡಿಗೆ ಎಸೆದನಂತೆ… ಇದನ್ನು ಗಮನಿಸಿದ ಮಹಿಪತಿದಾಸರು ತಮ್ಮ ಹುದ್ದೆಯನ್ನು ತ್ಯಜಿಸಿ ದಾಸರಾದ ಕತೆ ನಮಗೆ ಸಿಗುತ್ತದೆ….(ಬಿಜಾಪುರದ ಸೂಫಿಗಳು.ಜಿ.ರಾಜಶೇಖರ)

ಫಕೀರನಾಗಬೇಕಾದವರು,
“ಓ ನನ್ನ ಪಾಪಿ ಮನಸ್ಸೆ!
ನಿನ್ನ ಇರುವಿಕೆಗೆ ನಾನೇ
ಸಾಕ್ಷಿಯಾಗಿದ್ದರೂ ನನ್ನನ್ನೇ
ಹತ್ತಿಕ್ಕಲು ಪ್ರಯತ್ನಿಸುವೆಯಲ್ಲಾ?? (ಕಬೀರದಾಸರು.ದ.ರಾ.ಬೇಂದ್ರೆ) ಎಂದು ತನ್ನ ತಾ ಪ್ರಶ್ನೆ ಮಾಡಿಕೊಳ್ಳವವರು ತನ್ನ ಅಳತೆಮೀರಿದಾಗ ಹತೋಟಿಯಲ್ಲಿಟ್ಟುಕೊಳ್ಳುವವರು ಮಾತ್ರ ಯೋಗ್ಯರು…

ಯಾರು ಬಹುತ್ವವನ್ನು ಪ್ರಿತಿಸುತ್ತಾರೋ, ಯಾರು ಸಮಾಜ ಅರಾಜಕತೆಯಲ್ಲಿರುವಾಗ ಕಾವ್ಯ, ನಾಟಕ, ಕತೆ, ಕವಿತೆ, ಕಾದಂಬರಿ, ಹಾಡಿನ ಮುಖಾಂತರ ಮುಖಾಮುಖಿ ಆಗುತ್ತಾರೊ ಹಾಗೂ ತಾತ್ವಿಕವಾಗಿ ಪ್ರತಿಭಟಿಸುತ್ತಾರೊ,ಅವರು ಮಾತ್ರ ನಿಜವಾದ ಫಕೀರರು. ಅಂಥ ಫಕೀರರು ಶರಣರಾದಿಯಾಗಿ ದಾಸರು, ಸೂಫಿಗಳು, ತತ್ವಪದಕಾರರು, ಮತ್ತು ಇವತ್ತಿನ ಸೂಕ್ಷ್ಮ ಬರೆಹಗಾರರಾಗಿದ್ದಾರೆ ವಿನಃ, ಬೀದಿಯಲ್ಲಿ ಭಾವಚಿತ್ರವನ್ನು ಹಿಡಿದು ಒಣರಂಪಾಟ ಮಾಡುವವರಲ್ಲ.. ಮೊದಲಿಗೆ ಎಲ್ಲಾ ಜ್ಞಾನಶಿಸ್ತುಗಳನ್ನು ಅರಿತುಕೊಳ್ಳಬೇಕು..

ನಿಜವಾದ ಫಕೀರ ಅಧಿಕಾರದಲ್ಲಿರುವುದಿಲ್ಲ, ಅದು ಆತನಿಗೆ ಹೆಣದವಾಸನೆ. ಪ್ರಭುತ್ವ ಎಚ್ಚರ ತಪ್ಪಿದಾಗ ಎಚ್ಚರಿಸಿ ಸದಾ ಜಾಗ್ರತೆಯಿಂದ ಇರುವಂತೆ ನೋಡಿಕೊಳ್ಳವವನು. ಇದು ಗ್ರೀಕ್ ತತ್ವಜ್ಞಾನಿಗಳಾದಿಯಾಗಿ ಭಾರತೀಯ ಭಕ್ತಿ ಪರಂಪರೆಯಿಂದ ಹುಲುಸಾಗಿ ಬೆಳೆದು ಬಂದಿದೆ…

4 Comments

 1. ಎಷ್ಟು ಚೆನ್ನಾಗಿದೆ. ತುಂಬಾ ಒಳ್ಳೆಯ ಲೇಖನ.

 2. ಫಕೀರನಾಗುವದೆಂದರೆ………
  “ಅವಧಿ”ಯಲ್ಲಿ ಪ್ರಕಟವಾದ ವಿಭಿನ್ನ ವಿಷಯವಸ್ತುವಿನ ವಿಶಿಷ್ಟ ಲೇಖನ.
  ಮಾನವೀಯತೆಯ ಅಡಿಪಪಾಯದ ಮೇಲೆ ಅಧ್ಯಾತ್ಮದ ಸ್ಪರ್ಶವನ್ನಿಟ್ಟು ಜನ ಮನದಲ್ಲಿ ಮರೆಯಲಾಗದ ಸೋದರತೆಯ ಮುದ್ರೆಯೊತ್ತಿ ಮರೆಯಾದ ಈ ಫಕೀರ ಪರಂಪರೆ ಮತಧರ್ಮ ಗಳನ್ನು ಮೀರಿದ್ದೆಂದು ತಿಳಿಸುವ ಆಚರಣೆಗಳನ್ನು (ಉರ್ಸು ಮೇಲಾ) ಇಂದಿಗೂ ಕಾಣುತ್ತೇವೆ.
  ಲೇಖನದಲ್ಲಿ ಉದ್ಧೃತವಾದ
  ಮಡಿವಾಳಪ್ಪನವರ, ನಿಜಾವವತ್ ಅಲ್ಲಾವುದ್ದೀನ ಔಲಿಯಾ, ಷಹನುಂಗ್ ರ ಮಾತುಗಳು ಇಂದಿನ ರಾಜಕೀಯಕ್ಕೆ ಹಿಡಿದ ಕನ್ನಡಿಯಾಗಿವೆ.
  ಲೇಖಕರಿಗೆ, ‘ಅವಧಿಗೆ’ಅಭಿನಂದನೆಗಳು.
  ಡಿ.ಎಮ್ ನದಾಫ.
  ಅಫಜಲಪುರ

 3. ಧನ್ಯವಾದಗಳು ಸರ್… ಇನ್ನೂ ಪ್ರೇಮ ಸೂಫಿ ಬಂದೇನವಾಜರ ಬಗ್ಗೆ ಬರೆಬೇಕಿತ್ತು…

Leave a Reply