ಉಳಿದುಹೋದ ಮಾತುಗಳು..

ಸಂದೀಪ್ ಈಶಾನ್ಯ

ಅದೆಷ್ಟು ಮಾತುಗಳು ಉಳಿದುಹೋಗಿವೆ ಹೀಗೆ ಬರಿಯದಾಗಿ
ಕನಸುಗಳೂ ನಿಶಬ್ಧತೆಗೆ ಹೊಂದಿಕೊಂಡಿರುವಂತೆ ನಟಿಸುತ್ತಿರುವಾಗ ಕಳೆದ ರಾತ್ರಿಯ
ಬಿಕ್ಕಳಿಗೆಗಳೂ ಕೂಡ ಮಹಾಸ್ಪೋಟದಂತೆ ಕೇಳಿಸಿದೆ
ನಾವಿಬ್ಬರೂ ಬಿಗಿದ ಹಾವುಗಳಂತೆ
ಒಬ್ಬರನೊಬ್ಬರು ಸುತ್ತಿಕೊಂಡು ಹೊರಳಾಡುತ್ತಿರುವಾಗ
ಆಕಾಶದ ಮೂಲೆಯಲ್ಲಿ ಒಂಟಿಯಾಗಿದ್ದ
ನಕ್ಷತ್ರ ದೇವರಿಗೆ ಶಾಪವಿಕ್ಕಿತ್ತಂತೆ

ನಿನ್ನ ಮೊಲೆಗಳ ಸೀಳಿನ ನಡುವೆ ಮುಖವನ್ನಿಟ್ಟು ಅಜ್ಞಾತಲೋಕದ ಗುಟ್ಟುಗಳನ್ನು ಕೇಳಿಸಿಕೊಂಡ ನನಗೆ
ಆ ಎಲ್ಲವನ್ನೂ ನಿನ್ನ ಕಿವಿಯಲ್ಲಿ ಪಿಸುನುಡಿಯುವ ಮೊದಲು ನಿನ್ನದೇ ಎದೆಯೊಳಗಿನ
ಮಾತುಗಳನ್ನು ಕೇಳಲು ಅನುವಾಗಬೇಕು ಎನಿಸುತ್ತದೆ
ಹಗಲು ಮೂಡುವ ಮೊದಲು
ನನ್ನ ನೀಳ ತೋರಬೆರಳನ್ನು ಮೃದುವಾಗಿ
ಅದುಮಿ ಬೆತ್ತಲೆ ಬೆನ್ನನ್ನು ತಿರುಗಿಸಿ ಕವಿತೆ ರಚಿಸು ಎಂದು ಬೋರಿಟ್ಟರೂ
ಬಹುಶಃ ನಾನು ಒಂದೇ ಒಂದು ಸಾಲನ್ನು ಬರೆಯಲು ಸೋಲಬಹುದು
ಬೇವನ್ನು ಸಿಹಿಗೊಳಿಸಬಲ್ಲ‌ ನಿನ್ನ ತುಟಿಗಳನ್ನು ಉತ್ಕಟವಾಗಿ ಚುಂಬಿಸಿದ್ದಷ್ಟೇ ಒಂದು ಮಹಾಕಾವ್ಯ
ಮಾತುಗಳನ್ನೂ ಬರಿದು ಮಾಡಿಕೊಂಡಿರುವ ನಮ್ಮಿಬ್ಬರ ನಡುವೆ ಉಳಿದಿರುವುದು
ನಿರುಪಯುಕ್ತ ಕವಿಯೊಬ್ಬನ ಕಡೆಯ ದಿನದ
ದೀರ್ಘ ಮೌನ
ಮತ್ತು
ಅವನೂ ಎಂದಿಗೂ ಅಕ್ಷರಕ್ಕಿಳಿಸಲಾರದ ಅವನದೇ ಎದೆ ಭಾರದಂತ ಕೊನೆಯ ಕವಿತೆ ಸಾಲು

3 thoughts on “ಉಳಿದುಹೋದ ಮಾತುಗಳು..

Leave a Reply

%d bloggers like this: