ಗೌರೀಶ ಕಾಯ್ಕಿಣಿಯವರ ‘ಬಿಳಿ ಕೊಕ್ಕರೆ’

ಗೋಕರ್ಣದಲ್ಲಿ ಕೂತೇ ವಿಶ್ವಜ್ಞಾನವನ್ನು ಗ್ರಹಿಸಿ ಸಹಜೀವಿಗಳೊಂದಿಗೆ ಹಂಚಿಕೊಂಡ ಮೇಧಾವಿ ಬಹುಮುಖಿ ಸಾಹಿತಿ ಗೌರೀಶ ಕಾಯ್ಕಿಣಿಯವರ ಬಿಳಿ ಕೊಕ್ಕರೆ ಎಂಬ ವಿಶ್ವದ ಆಯ್ದ ಕಿರುಗತೆ ಮತ್ತು ಅಖ್ಯಾಯಿಕೆಗಳ ಪುಸ್ತಕದ ಹೊಸ ಆವೃತ್ತಿ 70 ವರ್ಷಗಳ ನಂತರ ಈಗ ಪ್ರಕಟವಾಗಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಇದನ್ನು ಪ್ರಕಟಿಸಿದೆ.

ಜಾಕ್ ಲಂಡನ್, ವಿಲಿಯಂ ಫಾಕ್ನರ್ ಇಂಥ ಶ್ರೇಷ್ಠ ಕತೆಗಾರರ ಕತೆಗಳ ಜೊತೆ, ಈಗಾಗಲೇ ಐತಿಹ್ಯಗಳಾಗಿ ಹೋಗಿರುವ ಈಡಿಪಸ್, ರಿಪ್ ವ್ಯಾನ್ ವಿಂಕಲ್, ಜಾನ್ ಆಫ್ ಆರ್ಕ್, ಪೆಂಡೋರಾ ಪೆಟ್ಟಿಗೆ, ಟ್ರಾಜನ್ ಕುದುರೆ, ವಿಲಿಯಂ ಟೆಲ್- ಇತ್ಯಾದಿ ವೈವಿಧ್ಯಮಯ ಕಿರುಗತೆಗಳೂ ಇದರಲ್ಲಿವೆ. ಈ ಮುನ್ನ 1956ರಲ್ಲಿ ಕುಮಟಾದ ಸುಲಭ ಸಾಹಿತ್ಯದಿಂದ ಬಿಳಿಕೊಕ್ಕರೆ ಮತ್ತು 1972ರಲ್ಲಿ ಧಾರವಾಡ ಸಮಾಜ ಪುಸ್ತಕಾಲಯದಿಂದ ವಿಶ್ವದ ಆಖ್ಯಾಯಿಕೆಗಳು ಪ್ರಕಟವಾಗಿದ್ದವು. ಇವೆರಡು ಈಗ ಕುವೆಂಪು ಭಾಷಾ ಭಾರತಿ ಪ್ರಧಿಕಾರದ ಮೂಲಕ ಒಂದೇ ಆಕರ್ಷಕ ಸಂಪುಟವಾಗಿ ಪ್ರಕಟಗೊಂಡಿವೆ.

ಇದು ಗೌರೀಶರ 107ನೇ ಹುಟ್ಟುಹಬ್ಬದಂದು (12-09-2019) ಪ್ರಕಟಗೊಳ್ಳಲಿರುವುದು ಕನ್ನಡದ ಓದುಗರಿಗೂ, ಕಾಯ್ಕಿಣಿ ಅಭಿಮಾನಿಗಳಿಗೂ ಉತ್ಸಾಹದ ಸಂಗತಿಯಾಗಿದೆ. ಪ್ರಾಧಿಕಾರದ ಅಧ್ಯಕ್ಷ ಡಾ. ಕೆ ಮರುಳಸಿದ್ಧಪ್ಪ ಅವರ ಸಂಪಾದಕೀಯ ಮಾತುಗಳು ಹೀಗಿವೆ.

ಬಿಳಿಕೊಕ್ಕರೆ ಮತ್ತು ವಿಶ್ವದ ಆಖ್ಯಾಯಿಕೆಗಳು ಕ್ರಮವಾಗಿ ಜಗತ್ತಿನ ಅತ್ಯುತ್ತಮ ಕತೆಗಳು ಮತ್ತು ಜಗತ್ತಿನ ಕ್ಲಾಸಿಕ್ ಎನ್ನಬಹುದಾದ ಆಖ್ಯಾಯಿಕೆಗಳನ್ನು ಒಳಗೊಂಡಿರುವ ಕೃತಿಯಾಗಿದೆ . ಅಮೆರಿಕ ಮತ್ತು ಇಂಗ್ಲೆಂಡಿನ ಪ್ರಸಿದ್ದ ಕತೆಗಾರರು ಮತ್ತು ಗ್ರೀಕ್ ಮತ್ತು ಚೀನಾ, ಅಮೆರಿಕದ ಶ್ರೇಷ್ಠ ಲೇಖಕರ ಕೃತಿಗಳಿಂದಾಯ್ದ ಇಪ್ಪತ್ತು ಆಖ್ಯಾಯಿಕೆಗಳು ಮತ್ತು ಆರು ಕಥೆಗಳು ಇಲ್ಲಿವೆ.

ಈ ಕತೆಗಳು ಮತ್ತು ಆಖ್ಯಾಯಿಕೆಗಳಲ್ಲಿ ಆತ್ಮಚರಿತ್ರಾತ್ಮಕ ಸ್ವರೂಪದ ಕತೆಗಳಿವೆ. ಆಯಾ ದೇಶಗಳ ಜನಜೀವನದ ಬದುಕಿನ ಸ್ವರೂಪದ ಚಿತ್ರಣವಿದೆ. ಮನುಷ್ಯನೊಳಗಿನ ಸಂಘರ್ಷಕ್ಕಿಂತ ನಿಸರ್ಗದಲ್ಲಿರುವ ಹಿಂಸಾತ್ಮಕ ಹೋರಾಟಗಳು ಕಡಿಮೆ ಮಟ್ಟದವು, ಮನುಷ್ಯ ಪ್ರಾಣಿಗಳಿಗಿಂತ ಹೆಚ್ಚು ಹಿಂಸಾಮಯಿ ಎಂಬುದರ ಚಿತ್ರಣವಿದೆ. ಮಾನವ ಮತ್ತು ಪ್ರಕೃತಿ ವಲಯದ ಮನೋಹರವಾದ ಹೋರಾಟವಿದೆ. ದೈವವು ಮಾನವನನ್ನು ಆಡಿಸಿ ಕೊಲ್ಲುವ ವಿಧಿವಿಲಾಸದ ಸ್ವರೂಪದ ವಿವರಗಳಿವೆ.

One thought on “ಗೌರೀಶ ಕಾಯ್ಕಿಣಿಯವರ ‘ಬಿಳಿ ಕೊಕ್ಕರೆ’”

Leave a Reply

%d bloggers like this: