ಶೀರ್ಷಿಕೆ ಇರದ ಕವಿತೆ!

ಸೌಮ್ಯಶ್ರೀ ಎ.ಎಸ್. ಮೈಸೂರು

 

ಗಾಳಿಯ ಒಲವಿನ ಪಿಸುಮಾತಿಗೆ

ಮಾರುಹೋಗಿ ಕೈ ಹಿಡಿದು ಮುಗಿಲೆತ್ತರಕ್ಕೆ

ಹಾರಿದ ಗಾಳಿಪಟದ ಸೂತ್ರಕಿತ್ತು

ಮತ್ತೆಲ್ಲೂ ಉಸಿರುಗಟ್ಟಿ

ನೇಣು ಹಾಕಿಕೊಂಡು ತೂಗಾಡುವರೆಗೂ

ಅದಕ್ಕೆ ಗಾಳಿಯ ಹುನ್ನಾರ ಅರಿವಿಗೆ ಬರಲೇ ಇಲ್ಲ!

ಹರಿವ ತೊರೆಯಲ್ಲಿ ಪಾದಗಳ

ಇಳಿಬಿಟ್ಟು ಕಣ್ಮುಚ್ಚಿ‌ ಕುಳಿತಾಗ

ಮೀನುಗಳ ಸಿಹಿ ಮುತ್ತಿಗೆ

ಕಚಗುಳಿ ಕೊಟ್ಟಂತೆ ಕುಣಿಯುತ್ತಿದ್ದ

ನನ್ನ ಮನಸ್ಸಿಗೆ ಮೊಸಳೆಯೊಂದು

ಅಪ್ಪಿ ಮುದ್ದಾಡುತ್ತಿರುವುದೆಂಬ

ಸಣ್ಣದೊಂದು ಕಲ್ಪನೆಯು

ಮೊಳೆತಿರಲಿಲ್ಲ!

ನಿನ್ನ ಒಲವಿನ ಮಾತನ್ನು

ಬೆರಗುಗಣ್ಣಿನಿಂದ ಕೇಳುತ್ತಾ ಕುಳಿತವನಿಗೆಂದು

ನೀನು ಭಾವನೆಗಳಿಗೆ

ಬಣ್ಣ ಹಚ್ಚಿ ಸೊಗಸಾಗಿ

ನಟಿಸುತ್ತಿರುವೆಂದು ತಿಳಿಯಲೇ ಇಲ್ಲ!

ನಾನು ಹಳಿಗಳ ಮೇಲೆ

ಮೈ ಮನಸ್ಸನ್ನು ಇಳಿಬಿಟ್ಟು

ಮೈಮರೆತು ನಮ್ಮ ಒಲವ

ಕಾವ್ಯಕ್ಕೊಂದು ಶೀರ್ಷಿಕೆ

ಹುಡುಕುತ್ತಾ ಕುಳಿತಿದ್ದೆ ಅಷ್ಟೇ!

ಕಿವಿಗೆ ಅವಳ ಕಿಲಕಿಲನೆ

ನಗುವ ಶಬ್ಧ, ಅವಳದೇ ಗೆಜ್ಜೆ ಲಜ್ಜೆಯ ನಿನಾದ! ಕಿವಿಗೊಟ್ಟು ಕಣ್ಮುಚ್ಚಿದ್ದೆ, ರೈಲು ಚಕ್ರಗಳು ತನ್ನ

ಹಸಿವು ನೀಗಿಸಿಕೊಂಡು ಸಾಗಿತ್ತು!

ಉಸಿರು ಬಿಗಿ ಹಿಡಿದು

ಶೀರ್ಷಿಕೆ ಹುಡುಕತ್ತಲೇ ಇದ್ದೆ

ಅದಾಗಲೇ ಅವಳು ಕವಿತೆ

ಬರೆದು ಮುಗಿಸಿದ್ದಳು!

1 Comment

Leave a Reply