Quantcast

ಶಾಂತಲಾ ಭಂಡಿ ಮತ್ತು ‘The King’s Speech’

ಆಡಲಾಗದ ಮಾತು

ಶಾಂತಲಾ ಭಂಡಿ

ಇವತ್ತು ‘The King’s Speech’ ಮೂವಿ ನೋಡಿದೆ. ನೋಡುವಾಗ ಆರಂಭದಲ್ಲಿ ಪಕ್ಕದಲ್ಲಿ ಕುಳಿತಿದ್ದ ಅಮೇರಿಕನ್ ಮಹಿಳೆಯೋರ್ವಳ ಕಣ್ಣಿನಲ್ಲಿ ಧಾರಾಕಾರ ನೀರು ಕೆನ್ನೆಗುಂಟ ಹರಿಯುತ್ತಿದ್ದರೆ ಯಾರೂ ಕಾಣದೇ ಇರುವಾಗ ಅವಳು ಭುಜದಿಂದಳಿಸಿಕೊಂಡಷ್ಟೂ ಇಳಿಯುತ್ತಲಿದ್ದ ನೀರು ಸಿನೇಮಾ ಮುಗಿಯುವ ಹಂತಕ್ಕೆ ಬರುವಷ್ಟರಲ್ಲಿ ಮೂಗಿನಲ್ಲಿಳಿದು ಸದ್ದು ಮಾಡತೊಡಗಿತ್ತು. ಕಣ್ಣೀರನ್ನು ಎಲ್ಲಬಾರಿಗೂ ನ್ಯಾಪ್ಕಿನ್ನಿನಿಂದಲೋ, ಸಾಫ್ಟ್ ಟಿಶ್ಯೂವಿನಿಂದಲೋ ಅಳಿಸಿಕೊಳ್ಳಲು ಸಾಧ್ಯವಿಲ್ಲ. ಕಣ್ಣೀರಿನ ತೀವೃತೆಗೆ ಆಪ್ತಬಂಧುಗಳೆಂದರೆ ಭುಜ ಮತ್ತು ಹಸ್ತ ಅಂತನ್ನಿಸಿತು. ಈ ಪಕ್ಕದಲ್ಲಿ ಕುಳಿತಿದ್ದವನು ಅವಳ್ಯಾಕೆ ಇಷ್ಟೊಂದು ಅಳ್ತಿದ್ದಾಳೆ? ಅಂತ ಕೇಳಿದ.

ನಿಜ, ನಾನೂ ಮತ್ತೆ ನನ್ನನ್ನೊಮ್ಮೆ ಈ ಪ್ರಶ್ನೆ ಕೇಳಿಕೊಂಡೆ. ‘ಇವಳ್ಯಾಕೆ ಇಷ್ಟೊಂದು ಅಳಬೇಕು?’

ನನಗೆ ತೋಚಿದ ಆ ಉತ್ತರವನ್ನು ಪಕ್ಕದವನಿಗೂ ಪಿಸುಗುಟ್ಟಿದೆ, ‘ಅವಳೂ… ಮಾತು ತೊದಲುವ ಮಗನಿಗೆ ತಾಯಿಯೋ, ಮಾತು ತೊದಲುವ ಸ್ನೇಹಿತನಿಗೆ ಆಪ್ತ ಗೆಳತಿಯೋ, ಮಾತು ತೊದಲುವ ಗಂಡನ ಮುದ್ದಿನ ಹೆಂಡತಿಯೋ, ಮಾತು ತೊದಲುವ ಅಪ್ಪನ ಅಕ್ಕರೆಯ ಮಗಳೋ, ಮಾತು ತೊದಲುವ ಅತ್ಯಂತ ಪ್ರೀತಿಯ ವಿದ್ಯಾರ್ಥಿಯ ನೆಚ್ಚಿನ ಶಿಕ್ಷಕಿಯೋ, ಅಥವಾ ಮಾತು ತೊದಲುವ ವ್ಯಕ್ತಿಗೆ ಅತೀ ಹತ್ತಿರದ ವ್ಯಕ್ತಿ ಅವಳಾಗಿರಬೇಕು. ಅದಕ್ಕೇ ಅಷ್ಟು ಅಳ್ತಿದ್ದಾಳೆ ನೋಡು’ ಅಂದೆ. ಪಕ್ಕದಲ್ಲಿದ್ದವನಿಗೆ ಹೌದೆನ್ನಿಸಿರಬೇಕು, ಊದ್ದನೆಯ ಉಸಿರಿಗೆ ಉತ್ತರವೆಂಬಂತೆ ಕಾಲನ್ನ ಊದ್ದಕ್ಕೆ ನೀಡಿ ಸಮಾಧಾನವಾಗಿ ಕುಳಿತವನೇನೋ ಸಿನೇಮಾ ನೋಡತೊಡಗಿದ. ಈ ಪಕ್ಕದ ಕಣ್ಣೀರು ನನ್ನನ್ನ ಹಿಂದಕ್ಕೆ ತೇಲಿಸಿಕೊಂಡು ಹೋಗುತ್ತಿತ್ತು.

ಈಗ ಮಣಿ ಕಾಲೇಜಿಗೆ ಹೋಗುತ್ತಿದ್ದರೆ ಈ ವರ್ಷ ಅವನಿಗೆ ಡಿಗ್ರಿ ಮುಗಿಯುತ್ತದೆ. ಮಾತನಾಡುವಾಗ, ಓದುವಾಗ ತೊದಲಿ ತೊದಲಿ ಎಲ್ಲ ಟೀಚರ್ಸ್ ಹತ್ತಿರ ಬೈಸಿಕೊಳ್ಳುತ್ತಿದ್ದ ಮಣಿ ಕಣ್ಮುಂದೆ ಬಂದು ‘ಮ್ಯಾಮ್’ ಅಂತ ಕರೆದಂಗೆ ಅನ್ನಿಸತೊಡಗಿತು.

ಮನೆಯ ಹತ್ತಿರದ ಕಾಲೇಜುಗಳಲ್ಲೆಲ್ಲ ಕೆಲಸಕ್ಕೆ ಪ್ರಯತ್ನಿಸಿ ಕೆಲ ಕಾಲೇಜುಗಳಲ್ಲಿ ಹೊಸಬರನ್ನ ತಗೋಳೋಲ್ಲ ಅಂದ್ರೆ ಇನ್ನು ಕೆಲ ಕಾಲೇಜುಗಳಲ್ಲಿ ಜಿಯಾಗ್ರಫಿ ಸಬ್ಜೆಕ್ಟೇ ಇರಲಿಲ್ಲ. ಕೆಲವೆಡೆ ನಂಗೆ ಕೆಲಸ ಸಿಗದೇ ಹೈಸ್ಕೂಲೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಸರೀ ಹೊತ್ತಿಗೆ ಒಂಬತ್ತನೇ ತರಗತಿಯ ‘ಕ್ಲಾಸ್ ಟೀಚರ್’ ರಿಸೈನ್ ಮಾಡಿದ್ದರಾದ್ದರಿಂದ ಒಂಬತ್ತನೇ ತರಗತಿಗೆ ‘ಕ್ಲಾಸ್ ಟೀಚರ್’ ಪಟ್ಟ ನನ್ನ ಹೆಗಲಿಗೆ ಬಿತ್ತು. ಆ ಕ್ಲಾಸಿನಲ್ಲಿ ಓದುತ್ತಿದ್ದ ಮಣಿಯ ಬಗ್ಗೆ ‘ಓದಿನಲ್ಲಿ ಸ್ವಲ್ಪ ಹಿಂದೆ, ಮಾತನಾಡುವಾಗ ತೊದಲುತ್ತಾನೆ’ ಎಂಬ ಎರಡು ಮುಖ್ಯ ದೂರುಗಳಿದ್ದವು. ಕೆಲ ಸಬ್ಜೆಕ್ಟುಗಳ ಟೀಚರುಗಳು ಅವನನ್ನು ಅಸಡ್ಡೆಯಿಂದ ನೋಡುತ್ತಿದ್ದ ಕಾರಣವಿರಬೇಕು ನನಗೆ ನನ್ನ ಜವಾಬ್ಧಾರಿಯಲ್ಲಿದ್ದ ಆ ಕ್ಲಾಸಿನಲ್ಲಿಯೇ ಓದುತ್ತಿದ್ದ ಮಣಿಯ ಬಗ್ಗೆ ಕಾಳಜಿ ಮತ್ತು ಹೆಚ್ಚಿನ ಗಮನ ಅನಿವಾರ್ಯವೂ ಸಹಜವೂ ಆಯಿತು.

ಪ್ರತೀಸಲದ ಟೀಚರ್ಸ್ ಮೀಟಿಂಗಿನಲ್ಲಿ ಏನೂ ತಪ್ಪು ಮಾಡದ ಆ ಹುಡುಗನ ಬಗ್ಗೆ ‘ಮಾತು ತೊದಲುತ್ತಾನೆ, ಸರಿಯಾಗಿ ಓದೋಲ್ಲ, ಮಾರ್ಕ್ಸ್ ಕಡಿಮೆ ತಗೋತಾನೆ’ ಅನ್ನುವ ಕಂಪ್ಲೇಂಟುಗಳು ಆಯಾ ಸಬ್ಜೆಕ್ಟಿನ ಟೀಚರುಗಳ ಕಡೆಯಿಂದ.

ಕ್ಲಾಸುಗಳ ಹೊರತಾಗಿ ಕರೆಕ್ಷನ್ಸ್ ಸಲುವಾಗಿ ಸಿಗುತ್ತಿದ್ದ ಮುಕ್ಕಾಲುಗಂಟೆಯನ್ನು ಮಣಿಯ ಸಲುವಾಗಿ ಕಳೆಯಲಾರಂಭಿಸಿದೆ. ‘ನಿಧಾನಕ್ಕೆ ಓದು, ಟೀಚರುಗಳು ಬೈದ್ರೆ ಕೋಪ ಮಾಡ್ಕೋಬೇಡ. ಕನ್ನಡ ಓದೋಕೆ ಕಷ್ಟವಾದ್ರೆ ಮನೇಲಿ ನಿಧಾನಕ್ಕೆ ಪದೇ ಪದೇ ಓದಿ ಪ್ರ್ಯಾಕ್ಟೀಸು ಮಾಡ್ಕೋ, ನಿಮ್ಮ ಕನ್ನಡ ಟೀಚರ್ ಹತ್ರ ನಾನು ಮಾತಾಡ್ತೀನಿ, ನಿನಗೆ ಓದೋಕೆ ಕಷ್ಟವಾದಲ್ಲಿ ನಿಲ್ಸು, ಅವ್ರು ತಿದ್ದಿ ಹೇಳಿಕೊಟ್ಟಿದ್ದನ್ನ ನಿಧಾನಕ್ಕೆ ಎರಡೆರಡು ಬಾರಿ ಓದು, ಒಂದು ಪ್ಯಾರಾ ಓದೋಕೆ ಹೇಳಿದ್ರೆ ನಿಧಾನಕ್ಕೆ ತಪ್ಪದ ಹಾಗೆ ಒಂದೇ ಸಾಲು ಓದಿದ್ರೂ ಪರವಾಗಿಲ್ಲ, ಅವಸರ ಮಾಡ್ಕೋಬೇಡ, ಯಾರೂ ನಿನ್ನ ಅನ್ನೋಲ್ಲ’ ಅಂತೆಲ್ಲ ದಿನವೂ ಹೇಳಿದ್ದನ್ನೇ ಹೇಳ್ತಿದ್ದೆ. ದಿನಾಲೂ ಒಂದು ಪುಟದಷ್ಟು ಯಾವುದಾದರೂ ಸಬ್ಜೆಕ್ಟಿನ ಯಾವುದಾದರೊಂದು ಪೇಜನ್ನ ಓದ್ಸೋಕೆ ಶುರು ಮಾಡಿದೆ.

ಮಣಿಯ ಕ್ಲಾಸಿಗೆ ಕಲಿಸೋ ಎಲ್ಲ ಟೀಚರುಗಳ ಹತ್ತಿರವೂ ಆ ಬಗ್ಗೆ ಹೇಳಿಟ್ಟೆ. ‘ಮಣಿ ಸ್ವಲ್ಪ ದಿನ ಎಷ್ಟಾಗತ್ತೋ ಅಷ್ಟೇ ಓದ್ತಾನೆ, ಅವನು ತಪ್ಪಿದ್ರೆ ದಯವಿಟ್ಟು ಅವನನ್ನ ಬೈಬೇಡಿ, ಅವನ ಮೇಲೆ ತೀರ ಕೋಪ ಬಂದ್ರೆ ಬಂದು ನನ್ನ ಬೈದು ಹೋಗಿ ಅಂತ ಕೇಳಿಕೊಂಡೆ. ಕೆಲವರು ಒಪ್ಪಿಕೊಂಡ್ರು. ಇನ್ನು ಕೆಲವರು ಮಧ್ಯಾಹ್ನದ ಲಂಚು ಟೈಮಲ್ಲಿ ನನ್ನ ಬೈಯೋಕೆ ಶುರುಮಾಡಿದ್ರು. ನನಗೆ ಅರ್ಧ ಊಟ ಮಾಡೋಷ್ಟ್ರಲ್ಲಿ ಹೊಟ್ಟೆ ತುಂಬಿಹೋಗ್ತಿತ್ತು. ‘ಏನ್ರೀ ಮೇಡಮ್… ನಿಮ್ಮ ಮಣಿ ಅದೇನ್ ಓದ್ತಾನೋ, ಸುಸ್ತಾಗೋಯ್ತಪ್ಪ’ ಅನ್ನುವಲ್ಲಿಂದ ಶುರುಮಾಡಿ ‘ಈ ಸಲ ಮಣಿ ಡುಮ್ಕಿ ಬಿಡಿ’ ಅನ್ನುವಲ್ಲಿಗೆ ನಿಂತು ಈ ಸಲದ ನೈನ್ತ್ ಕ್ಲಾಸ್ ಎವರೇಜ್ ಸ್ಕೋರಿನ ತನಕ ರಿಸಲ್ಟೂ ರೆಡಿಮಾಡಿಕೊಟ್ಟು ನಗುವ ಅವರ ಜೊತೆ ನಾನೂ ನಕ್ಕು ಇನ್ನೂ ಊಟ ಮಾಡುತ್ತಿರುತ್ತಿದ್ದ ಮಕ್ಕಳ ಜೊತೆ ಬಂದು ಕೂತಿರುತ್ತಿದ್ದೆ. ಲಂಚ್ ಟೈಮಲ್ಲಿ ಮಕ್ಕಳ ಜೊತೆ ಕನ್ನಡದಲ್ಲಿ ಮಾತನಾಡಿದ್ದಕ್ಕೆ ‘ಐವತ್ತು ರೂಪಾಯಿ ಫೈನ್ ಕಟ್ಟಬೇಕೆಂಬ ನೋಟೀಸು’ ಸಂಜೆ ಶಾಲೆ ಬಿಡುವ ಬೆಲ್ಲಾಗುವುದಕ್ಕೆ ಹತ್ತು ನಿಮಿಷಕ್ಕೆ ಮೊದಲು ನನ್ನ ಕೈಸೇರುತ್ತಿತ್ತು.

ಆ ಸಲದ ಟೀಚರ್ಸ್ ಮೀಟಿಂಗಿನಲ್ಲಿ ಪ್ರಿನ್ಸಿಪಾಲ್ ಸರ್ ಕೇಳ್ತಿದ್ರು ‘ಏನ್ರೀ ಮೇಡಮ್, ಲಂಚ್ ಅವರಿನಲ್ಲಿ ಸ್ಟೂಡೆಂಟ್ಸ್ ಜೊತೆ ಕನ್ನಡದಲ್ಲಿ ಮಾತಾಡ್ತೀರಿ ಅಂತ ತುಂಬಾನೇ ಕಂಪ್ಲೇಟ್ಸ್ ಬರ್ತಿದೆಯಲ್ರೀ ನಿಮ್ಮ ಮೇಲೆ’ ಅನ್ನೋರು. ‘ನಿಜಾ ಸರ್, ಮಕ್ಕಳಿಗೆ ಊಟದ ಹೊತ್ತಿನಲ್ಲಾದ್ರೂ ಮನೆವಾತಾವರಣ ಸ್ವಲ್ಪ ಸಿಗಲಿ ಅನ್ಸಿಬಿಡತ್ತೆ ಸಾರ್, ಕನ್ನಡದಲ್ಲಿ ಮಾತಾಡಿಬಿಡ್ತೀನಿ, ಸಾರೀ ಸರ್’ ಅಂದರೆ ಪ್ರಿನ್ಸಿಪಾಲರು ಮುಗುಳ್ನಗುತ್ತಿದ್ದರು.

ಆ ವರ್ಷ ಮುಗಿಯುತ್ತಿತ್ತು. ಪರೀಕ್ಷೆಗೆ ಇನ್ನೆರಡು ತಿಂಗಳಿವೆ ಅನ್ನುವ ಹೊತ್ತಿಗೆ ‘ಮಣಿ ಈ ವರ್ಷ ಪಾಸಾಗ್ತಾನೆ ಬಿಡಿ’ ಅನ್ನುವ ಉದ್ಘಾರ ಎಲ್ಲ ಟೀಚರುಗಳ ಬಾಯಲ್ಲಿ ಕೇಳುವಾಗ ನಂಗೆ ಸಮಾಧಾನವಾಗ್ತಾ ಇತ್ತು.

‘ಮಕ್ಕಳನ್ನ ತುಂಬ ಪ್ರೀತಿಸ್ತಾರೆ, ಬೈಯ್ಯೋದಿಲ್ಲ’ ಅನ್ನುವ ಕಂಪ್ಲೇಂಟು ನನ್ನ ಮೇಲೆ ದಿನೇ ದಿನೇ ಬರತೊಡಗಿ ಒಂದು ದಿನ ಈ ಕಂಪ್ಲೇಂಟು ಪ್ರಿನ್ಸಿಪಾಲರ ಕಿವಿಗೂ ಬಿತ್ತು. ಅವರು ನನ್ನ ಕರೆಸಿ ‘ನೀವು ಮಕ್ಕಳಿಗೆ ಏನೂ ಅನ್ನೋದೇ ಇಲ್ಲವಂತೆ, ಮಕ್ಕಳನ್ನ ತುಂಬ ಪ್ರೀತಿಸ್ತೀರಂತೆ ಅನ್ನೋ ಕಂಪ್ಲೇಂಟು ಇದೆ ನಿಮ್ಮ ಮೇಲೆ’ ಅಂತ ಹೇಳಿದರು. ‘ಮಕ್ಕಳನ್ನು ಪ್ರೀತಿಸುವುದೊಂದು ಕಂಪ್ಲೇಂಟು’ ಅಂತನ್ನಿಸುವ ಜಾಗದಲ್ಲಿ ನಾನಿರಬೇಕು ಅಂತ ಅನ್ನಿಸಲಿಲ್ಲ. ಆ ವರ್ಷಕ್ಕೆ ನಾನು ನನ್ನ ಮಕ್ಕಳಿಗೆ ಹೇಳಬೇಕಾದ ಸಿಲಬಸ್ ಮುಗಿದಿತ್ತು. ಮರುದಿನವೇ ರಿಸೈನ್ ಮಾಡಿದೆ. ಮೊಬೈಲ್ ಫೋನು ಸ್ವಿಚ್ ಆಫ್ ಮಾಡಿಟ್ಟು ಮನೆಯಲ್ಲಿ ಕುಳಿತೆ. ಎರಡು ದಿನ ಕಳೆದಿರಲಿಲ್ಲ. ಸಂಜೆ ಸುಮಾರು ಐದೂವರೆ ಹೊತ್ತಿರಬೇಕು. ಮನೆಯ ಕರೆಗಂಟೆ ಸದ್ದಿಗೆ ಬಾಗಿಲು ತೆರೆದರೆ ಮಣಿ ನಿಂತಿದಾನೆ ಬಾಗಿಲಲ್ಲಿ. ‘ಗುಡ್ ಮಾರ್ನಿಂಗ್ ಮ್ಯಾಮ್, ಯಾಕ್ ಬರ್ತಿಲ್ಲ ಸ್ಕೂಲಿಗೆ ಮ್ಯಾಮ್?’ ಜಬರದಸ್ತಿ ಮಾಡ್ತಿದಾನೆ ಮಣಿ. ಮಾತಲ್ಲಿ ತೊದಲು ಗಿದಲೂ ಏನೂ ಇಲ್ಲ, ಖುಷಿಯಾಯ್ತು. ‘ಸ್ಕೂಲು ಬಿಟ್ಟ ತಕ್ಷಣ ಮನೆಗೆ ಹೋಗ್ಬೇಕು ತಾನೆ, ಈವಾಗ್ ಮನೆಗೆ ಹೋಗು, ಎಗ್ಸಾಮ್ಸ್ ಹತ್ರ ಬಂತು ಓದ್ಕೋ ನಡಿ’ ಅಂದೆ. ‘ನಾಳೆ ನೀವು ಸ್ಕೂಲಿಗೆ ಬರ್ತೀನಿ ಅಂದ್ರೆ ಹೋಗ್ತೀನಿ ಮ್ಯಾಮ್’ ಅಂದ. ‘ಸರಿ ಬರ್ತೀನಿ, ನೀನೀಗ ಹೋಗು, ಹುಷಾರಾಗಿ ಮನೆಗೆ ಹೋಗು’ ಅಂತ ಹೇಳಿ ಕಳಿಸಿದೆ. ಹಾಗಂತ ಮರುದಿನ ಸ್ಕೂಲಿಗೆ ಹೋಗಲಿಲ್ಲ.

ಗೇಟು ಸದ್ದಾಯ್ತು ಅಂತ ಹೋಗಿ ನೋಡಿದರೆ ಮನೆಯ ಗೇಟಿನ ಮುಂದೆ ಮಧ್ಯಾಹ್ನದ ಎರಡು ಗಂಟೆ ಬಿಸಿಲಲ್ಲಿ ಶಾಲೆಯ ಐದಾರು ಮಕ್ಕಳು. ‘ಎಲ್ರುನ್ನೂ ಪ್ರಿನ್ಸಿಪಾಲ್ ಸರ್ ಬರೋಕೆ ಬಿಟ್ಟಿಲ್ಲ, ಇಷ್ಟೇ ಜನ ಹೋಗಿ ಅಂದ್ರು, ಅದಕ್ಕೇ ನಾವಿಷ್ಟೇ ಜನ ಬಂದ್ವಿ, ಪ್ಲೀಸ್…ಬನ್ನಿ ಮ್ಯಾಮ್ ಸ್ಕೂಲಿಗೆ’ ಅನ್ನುತ್ತ ಗೇಟಿನ ಹೊರಗೆ ಕಣ್ಣೊರೆಸಿಕೊಳ್ಳುತ್ತ ನಿಂತ ಮಕ್ಕಳನ್ನ ಗೇಟಿನೊಳಗೆ ಬರಮಾಡಿಕೊಂಡೆ. ಮಕ್ಕಳನ್ನ ನಮ್ಮನೆಯ ಮುಂದೆ ಕಳಿಸಿ ರಸ್ತೆಯ ಆ ಪಕ್ಕದಲ್ಲಿ ಸ್ಕೂಲಿನ ಆಯಾ ನಿಂತಿದ್ದರು. ‘ಊಟ ಆಯ್ತಾ ನಿಮ್ಮದು?’ ಅಂತ ಕೇಳಿದೆ. ‘ಇಲ್ಲ ವಾಪಸ್ಸು ಹೋಗಿ ಮಾಡ್ತೀವಿ, ಈ ಮಕ್ಕಳ್ದೂ ಇನ್ನೂ ಊಟ ಆಗಿಲ್ಲ’ ಅಂದ್ರು.

‘ಸರಿ ಬರ್ತೀನಿ, ನೀವು ಹೋಗಿರಿ ಮುಂದೆ’ ಅಂದೆ. ಎಲ್ಲ ಮಕ್ಕಳು ಖುಷಿಯಿಂದ ಹೊರಟ್ರು. ರೆಡಿಯಾಗಿ ಮನೆ ಹೊರಗೆ ಬಂದ್ರೆ ಗೇಟಿನ ಹತ್ರ ಮಣಿ ಮತ್ತು ಕಾವ್ಯ ನಿಂತೇ ಇದ್ರು. ‘ನಿನ್ನೆ ಬರ್ತೀನಿ ಅಂದು ಇವತ್ತು ನೀವು ಬಂದೇ ಇಲ್ವಲ್ಲ ಮ್ಯಾಮ್, ಅದಕ್ಕೇ ಇವತ್ತೂ ನೀವು ಹಾಗೇ ಮಾಡ್ಬಹುದು ಅಂತ ನಾವಿಬ್ರು ಇಲ್ಲೇ ನಿಂತಿದ್ವಿ ಮ್ಯಾಮ್’ ಅಂದ ಮಣಿ ಇದ್ದಷ್ಟೂ ಹಲ್ಲು ತೋರಿಸುತ್ತ. ಸ್ಕೂಲು ತಲುಪೋ ತನಕವೂ ಮಣಿ ಮಾತಾಡ್ತಲೇ ಇದ್ದ. ಮಧ್ಯೆ ಮಾತಾಡೋ ಅವಸರದಲ್ಲಿ ಮಣಿ ತೊದಲಿದರೆ ಕಾವ್ಯ ಬೈತಾ ಇದ್ದಳು ಮಣಿಯನ್ನ. ‘ಮ್ಯಾಮ್ ಹೇಳಿಲ್ವೇನೋ…ಸ್ಲೋ ಮಾತಾಡೂ ಅಂತ’ .

ನಂಗೆ ನಗು ಬರ್ತಾ ಇತ್ತು. ಇಂಥ ಮಕ್ಕಳನ್ನ ಪ್ರೀತಿಸದೇ ಗದರೋದು ಹೇಗೆ ಅಂತ ದಾರಿಯುದ್ದಕ್ಕೂ ಯೋಚಿಸ್ತಾ ನಡೀತಿದ್ದೆ. ಸ್ಕೂಲಿನ ಗೇಟು ತೆರೆಯೋಷ್ಟರಲ್ಲಿ ಎಲ್ಲರೂ ಚಪ್ಪಾಳೆ ತಟ್ತಾ ಇದ್ರು. ‘The king’s speech’ ಮುಗಿದು ಎಲ್ರೂ ಚಪ್ಪಾಳೆ ತಟ್ತಿದಾರೆ ಅಂತ ಗೊತ್ತಾಯ್ತು.

ಪಕ್ಕದಲ್ಲಿ ಕುಳಿತಿದ್ದ ಮಹಿಳೆ ಈಗ ಎಲ್ಲರೆದುರಿಗೇ ಸೊರ ಸೊರ ಮೂಗು ಸೇದುತ್ತ ಎರಡೂ ಕೈಯಿಂದ ಕಣ್ಣೊರೆಸಿಕೊಳ್ಳುತ್ತಿದ್ದರು. AMC Theatres Mercado ನಿಂದ ಹೊರಬಿದ್ದರೆ ಮನಸ್ಸು ಸುರಿ ಮಳೆಯಡಿಯ ನೆಲದಂತೆ ಆರ್ದ್ರವೆನ್ನಿಸಿತು.

ಮಾತು ತೊದಲೀತೆಂಬ ಕಾರಣಕ್ಕೆ ತೀರ ಕಡಿಮೆ ಮಾತನಾಡುವ ಲೇಖಕರೊಬ್ಬರು ‘ನಾಳೆ ನನ್ನ ಪುಸ್ತಕ ಬಿಡುಗಡೆಯಲ್ಲಿ ನೀನು ಹಾಡು ಹೇಳ್ತೀಯ?’ ಅಂತ ಕೇಳಿದ್ದರು. ‘ಇಲ್ಲಪ್ಪ, ನಂಗೆ ಹಾಡೋಕೆ ಬರೋಲ್ಲ, ಯಾಕೆ, ನಾನೇ ಯಾಕೆ ಹಾಡಬೇಕು?’ ಅಂತ ಕೇಳಿದ್ದಕ್ಕೆ ‘ನಿನ್ನ ಹಾಡು ಕೇಳಿದ ಜನ ನನ್ನ ಭಾಷಣ ಚೆನ್ನಾಗಿತ್ತು ಅಂತಲಾದರೂ ಅಂದುಕೊಳ್ಳಲಿ’ ಅಂತ ಹೇಳಿದ್ದು ನೆನಪಿಗೆ ಬಂತು. ನೋವಲ್ಲೂ ಜನ ಹೆಂಗೆ ನಗಿಸ್ತಾರಲ್ಲ ಅಂತ ನನ್ನಷ್ಟಕ್ಕೇ ನಗು ಬಂತು.

ಮಾತು ತೊದಲುತ್ತದೆಯೆಂಬ ಕಾರಣಕ್ಕೆ ಬಿಜಿನೆಸ್ ಮ್ಯಾನೇಜ್ಮೆಂಟ್ ಫೀಲ್ಡಿನಲ್ಲಿದ್ದ ಸ್ನೇಹಿತನೊಬ್ಬ ‘ಒಂದು ಕಡೆ ಕೂತು ಯಾರ ಜೊತೆ ಮಾತನಾಡುವ ಉಸಾಬರಿಯಿಲ್ಲದೇ ಬರೆಯುವ ಕೆಲಸ ಸಿಕ್ಕರೆ ಮಾಡೋಣ ಅಂದುಕೊಳ್ತಿದ್ದೀನಿ ಕಣೇ, ಮೀಡಿಯಾ ಸೈಡು ಹೋಗೋಣ ಅಂತ ನಿರ್ಧಾರ ಮಾಡಿದೀನಿ’ ಅಂದ ಸ್ನೇಹಿತನ ನೋವು ಈಗ ನೆನಪಾಗುತ್ತಿದ್ದರೆ ಪಕ್ಕದಲ್ಲಿ ಕುಳಿತಿದ್ದ ಆ ಮಹಿಳೆಯ ಕಣ್ಣೀರಿಗೆ ಮನೆ ತಲುಪುವ ತನಕವೂ ಅದೇ ಅರ್ಥ ಸಿಗುತ್ತಿತ್ತು.

ಮನೆಗೆ ಬಂದು ಸುಮಾರು ಹೊತ್ತಾದ ಮೇಲೆ ಹುಡುಗನನ್ನ ಕೇಳಿದೆ ‘ಆ ಪಕ್ಕದ ಮಹಿಳೆ ಆಮೇಲಾಮೇಲೆ ಸದ್ದಿಲ್ಲದೇ ಬಿಕ್ಕುತ್ತಿದ್ದರಲ್ಲ, ನಿಂಗೆ ಅದರ ಅರ್ಥ ಗೊತ್ತಾಯ್ತಾ?’ ಅಂತ.

‘ಹ್ಮ್.. ಆಪ್ತರಲ್ಯಾರಿಗೋ ಮಾತು ತೊದಲುತ್ತಲೋ ಅಥವಾ ಮಾತೇ ಬರದೇ…’ ಮುಂದೆ ಹುಡುಗನೂ ಹೇಳಲಿಲ್ಲ. ‘ಮುಂದೆ?’ ಅಂತ ನಾನೂ ಕೇಳಲಿಲ್ಲ.

‘ಮಾತು’ ಎಂದರೆ ಹೀಗೆಯೇ ಕೆಲವೊಮ್ಮೆ ಮುಗಿಯದಲೇ ಮುಗಿಯುತ್ತದೆ. ಕೆಲವೊಮ್ಮೆ ಹೇಳದೆಯೇ ಮುಗಿಸುತ್ತೇವೆ. ಇನ್ನು ಕೆಲವೊಮ್ಮೆ ಹೇಳಲಾಗದೆಯೇ …

 

 

 

6 Comments

 1. H.LAKSHMANA RAO
  March 10, 2011
 2. M G Harish
  March 9, 2011
 3. Poornima Bhat
  March 9, 2011
 4. jogimane
  March 9, 2011
 5. ಜಯಲಕ್ಷ್ಮಿ
  March 9, 2011

Add Comment