ʼಅಂದೋರಾʼ ಅಂಡೋರಾ ಅಲ್ಲ

ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು.

ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ.

ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ ಎಂಜಿನಿಯರ್ ತಂದೆ ಸುಧೀಂದ್ರ ಹಾಲ್ದೊಡ್ಡೇರಿ, ತಾತ, ಖ್ಯಾತ ಪತ್ರಕರ್ತ ಎಚ್ ಆರ್ ನಾಗೇಶರಾವ್ ಅವರಿಂದ ಪಡೆದದ್ದು ಬಹಳಷ್ಟು.

ಪ್ರಸ್ತುತ ಬಾರ್ಸಿಲೋನಾದಲ್ಲಿ ತಾವು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕಂಡ ನೋಟಗಳ ಚಿತ್ರಣ ಇಲ್ಲಿದೆ

“ಅದೇನೋ ಟ್ರಿಪ್ ಗಿಪ್ ಎಂದು ಹಾರಾಡಿ ಕಡೆಗೆ ಸಾವಿನ ಬಗ್ಗೆ ಮಾತಾಡಿದ್ದಾಯಿತು” ಎಂದು ಹುಡುಗರು ಮತ್ತು ಹುಡುಗಿ ಪೇಚಾಡಿಕೊಂಡೇ ಮಾಂಸೆರಾಟಿನಿಂದ ವಾಪಸ್ಸು ಬಂದರು. ಮನೆಗೆ ಬಂದಾಗ ಮನೆಯೊಡತಿ “ಹೆಂಗಿತ್ತು ಟ್ರಿಪ್ಪು” ಎಂದು ಖುಷಿಯಿಂದಲೇ ಕೇಳಿದಳು. “ಏನೋ” ಎಂದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ ನಂತರ ಈ ಸಾವು ಎಂಬುದು ಅವಳಿಗೆ ಕಾಡುತ್ತಲೇ ಇತ್ತು.

“ಇವತ್ತು ಮನೆಯಲ್ಲಿ ಪಾರ್ಟಿ ಇದೆ” ಎಂದು ಲೈಫೇ ಪಾರ್ಟಿಯ ಹಾಗೆ ಜೀವಿಸುವ ಮನೆಯೊಡತಿ ಬಾಗಿಲು ಕುಟ್ಟಿ ಹೇಳಿದಳು. ಪ್ರತಿ ಸಲ ಪಾರ್ಟಿ ಮಾಡೋದು, ಆಮೇಲೆ ಮನೆ ಎಲ್ಲಾ ಗಲೀಜು ಮಾಡಿದ್ದನ್ನ ನಾನು ಎತ್ತಬೇಕು ಎಂಬುದು ಇವಳ ಪ್ರತಿ ಪಾರ್ಟಿಯ ನಂತರದ ಸೀನ್. ಹಂಗಾಗಿಯೂ ತನ್ನ ಮನೆಯಲ್ಲಿ ಇದ್ದು ಹೋದ ಹೆಣ್ಣುಮಕ್ಕಳು ಮತ್ತೆ ಬಾರ್ಸಾಗೆ ಬಂದಾಗ ಏನಾದರೂ ಆಗಲಿ ಅವರನ್ನ ಮನೆಗೆ ಕರೆದು ಸತ್ಕರಿಸುವುದು ಅವಳು ಪಾಲಿಸಿಕೊಂಡು ಬಂದ ನಿಯಮ.

“ಸರಿಯಾಗಿ ಪಾರ್ಟಿ ಡ್ರೆಸ್ ಹಾಕಿಕೋ” ಎಂದು ಸಹ ಸಲಹೆಕೊಟ್ಟು ತನ್ನ ಪಾಡಿಗೆ ಹಾಡು ಹಾಡಿಕೊಂಡು ಮನೆ ಕ್ಲೀನ್ ಮಾಡಲು ತೊಡಗಿದಳು. ಪಾರ್ಟಿ ಮೋಡಿನಲ್ಲಿ ತುಂಬಾ ಜಾಲಿಯಾಗಿರುವ ಮನೆಯೊಡತಿಯನ್ನ ನೋಡಿ ಹುಡುಗಿಗೆ ಅಶ್ಚರ್ಯವಾಯಿತು. ಅಡುಗೆ ಮನೆಯ ಒಲೆಯ ಮೇಲೆ ನಾಲ್ಕೈದು ಪಾತ್ರೆಗಳು ನಲಿಯುತ್ತಿತ್ತು. ವಾರ್ಡ್ರೋಬಿನಲ್ಲಿರುವ ಬಟ್ಟೆಗಳನ್ನೆಲ್ಲ ಕಿತ್ತುಹಾಕಿ ಪಾರ್ಟಿಗೆ ಸರಿಹೋಗುವ ಬಟ್ಟೆಯನ್ನ ಹುಡುಕುತ್ತಿದ್ದಳು ವೆಸ್ಟಲ್ಲಿ ಜನ ಏಕಾಂಗಿಯಾಗಿರುತ್ತಾರೆ, ಅವರ್ಗೆ ಸಂಬಂಧಗಳ ಬಗ್ಗೆ ಕಿಂಚಿತ್ತೂ ಅಭಿಮಾನ ಇಲ್ಲ ಎಂಬುದು ಶಾಲಾ ಪಠ್ಯಗಳಲ್ಲಿ ಅವಳು ಓದಿದ ನೆನಪು.

ಆದರೆ ಇಲ್ಲಿ ಬೇರೆ ಥರದ ಸಂಬಂಧಗಳು ಕಂಡಿತು. ಅಪ್ಪ ಅಮ್ಮನ್ನ ಬಿಟ್ಟು ಹೋಗುತ್ತಾರೆ, ಅಮ್ಮ ಬೇರೆ ಮದುವೆಯಾಗುತ್ತಾಳೆ ಎಂದು ಏನೇನೋ ತಲೆಗೆ ತುಂಬಿದ್ದ ವಿಷಯಗಳು ಇಲ್ಲಿ ಸುಳ್ಳು ಆಗುತ್ತಿತ್ತು. ಅವರಿಗೆ ಬೇಕಾದ ಹಾಗೂ ಹಾಯಾದ ಸಂಬಂಧಗಳನ್ನ ಮಾತ್ರ ಅವರು ಇಟ್ಟುಕೊಳ್ಳುತ್ತಿದ್ದರು ಹೊರತಾಗಿ ಯಾವುದೇ ಮುಲಾಜಿಗೆ ಒಳಪಡುತ್ತಿರಲ್ಲಿಲ್ಲ.

ಒಂದು ಲೆವೆಲ್ಲಿನ ಬೌದ್ಧಿಕ ಮಟ್ಟ ಕಂಡುಕೊಂಡ ಮೇಲೆ ಅವರ ಬುದ್ಧಿಮತ್ತೆಯನ್ನ ಇನ್ಕ್ರೀಸ್ ಮಾಡುವ ಸಂಬಂಧಗಳು ಎಲ್ಲರಿಗೂ ಬೇಕೆ ಹೊರತು ಅವರ ಜೀವನದಲ್ಲಿ ನಡೆಯುವುದನ್ನೆಲ್ಲಾ ಹೇಳಿ ಮಿಕ್ಕವರ ಜೀವನ ಡಸ್ಟ್ಬಿನ್ ಮಾಡುವ ಯೋಜನೆಯಲ್ಲಿರುವ ಯಾವ ಸಂಬಂಧಗಳನ್ನು ಅವರೆಲ್ಲಾ ಎಂಟರಟೈನ್ ಮಾಡುತ್ತಿರಲ್ಲಿಲ್ಲ. ಅವರದ್ದು ಫೂಲ್ ಫ್ರೂಫ್ ಸಿಸ್ಟಮ್ ಅಲ್ಲದಿದ್ದರೂ ಸಹ ಅಟ್ಲೀಸ್ಟ್ ಕೆಲವು ಸಂಬಂಧಗಳು ಟಾಲರೆಬಲ್ ಆಗಿದ್ದವು.

ನಮ್ಮ ಹಾಗೆ ಎಲ್ಲಾದಕ್ಕೂ ಅತೀ ಭಾವುಕತೆ ಬೆರೆಸಿ ಇದ್ದರೆ ಸಂಪೂರ್ಣ ತ್ಯಾಗ, ಇಲ್ಲದಿದ್ದರೆ ಡೋಂಟ್ ಕೇರ್ ಅನ್ನುವ ಎಕ್ಸ್ಟ್ರೀಮ್ ಎಂಡಿಗೆ ಹೋಗುತ್ತಿರಲ್ಲಿಲ್ಲ. ಜಗಳಗಳು ಅಷ್ಟು ಅಗ್ಲಿಯಾಗುತ್ತಿರಲ್ಲಿಲ್ಲ.

ಕಡೆಗೆ ವಾರ್ಡ್ರೋಬಿನಲ್ಲಿ ಸಿಕ್ಕ ನಾಲ್ಕೈದು ಬಟ್ಟೆಗಳಲ್ಲಿ ಒಂದನ್ನ ಆಯ್ದುಕೊಂಡು ಪಾರ್ಟಿಗೆ ರೆಡಿ ಆಗೋಕೆ ಶುರು ಮಾಡಿದಳು. ಅಷ್ಟರಲ್ಲಿ ದಬ ದಬ ಬಾಗಿಲು ಕುಟ್ಟಿ ಒಂದು ಬ್ಲೋ ಡ್ರೈಯರ್ ಮತ್ತು ಬಾಚಣಿಗೆ ಇಟ್ಟುಕೊಂಡು ನಿಂತಿದ್ದಳು ಮನೆಯೊಡತಿ. “ಹೇರ್ ಕೇರ್” ಎಂದು ಹುಡುಗಿಯನ್ನ ಒಂದು ಕಡೆ ಕುಕ್ಕರಿಸಲು ಹೇಳಿದಳು. ಹುಡುಗಿಯ ಕೂದಲು ಆ ಕಡೆ ಸ್ಟ್ರೈಟು ಅಲ್ಲದೆ ಈ ಕಡೆ ಗುಂಗುರೂ ಅಲ್ಲದೆ ಎರಡರ ಮಧ್ಯೆ ಇತ್ತು. ಅದನ್ನ ಎಳೆದೆಳೆದು ಸ್ಟ್ರೈಟ್ ಮಾಡುತ್ತಿದ್ದಳು. ಮನೆಯೊಡತಿಗೇನು ಗೊತ್ತು ಕೂದಲು ಸಹ ಹುಡುಗಿಯ ಹಾಗೆ ಮೊಂಡು ಎಂದು. ಅದು ಸ್ಟ್ರೈಟ್ ಆಗುತ್ತಿರಲ್ಲಿಲ್ಲ ಇವಳು ಬಿಡುತ್ತಿರಲ್ಲಿಲ್ಲ. ಇದೇ ಹೇರ್ ಕೇರನ್ನ ಮನೆಯಲ್ಲಿದ್ದ ನಾಲ್ಕು ಹುಡುಗಿಯರಿಗೂ ಮಾಡಿ, ತಾನೂ ಮಾಡಿಕೊಂಡು ನೋಡು ನಿನ್ನನ್ನ ಟ್ರಾನ್ಸ್ಫಾರಂ ಮಾಡಿಬಿಟ್ಟೆ ಎಂದು ನಗುತ್ತಿದ್ದಳು.

ಪಾರ್ಟಿಗೆ ಇವಳ ಸ್ನೇಹಿತೆಯರು ಬಂದರು. ಎಲ್ಲರೂ ನಗುತ್ತಲೇ ಮಾತಾಡುತ್ತಿದ್ದರು. ಕೆಲವರೆಲ್ಲಾ ಇವಳನ್ನ ಅಮ್ಮ ಎಂದು ಅದೆಷ್ಟೋ ಜನ ಕರೆಯುತ್ತಿದ್ದರು, “ನಿನ್ನ ಹಾಗೆ ಚರಿತ್ರೆಯ ಹುಚ್ಚಿ ಇನ್ನೊಬ್ಬಳಿದ್ದಾಳೆ ಮಾತಾಡಿಸು” ಎಂದು ಐಂಡ್ರಿಯಾಳನ್ನ ಪರಿಚಯ ಮಾಡಿಕೊಟ್ಟಳು. ಅವಳು ಹಾಯ್ ಎಂದು ಕೈಕುಲುಕಿ, “ಯಾವ ದೇಶ?” ಎಂದಳು, “ಭಾರತ” ಎಂದಳು ಹುಡುಗಿ. ಎರಡೂ ಕೈಯೆತ್ತಿ ನಮಸ್ಕಾರ ಎಂದಳು. “ನನಗೆ ಓಂ ಗೊತ್ತು, ಯೋಗಾ ಗೊತ್ತು..” ಎಂದು ಹೇಳೋದಕ್ಕೆ ಶುರು ಮಾಡಿದಳು.”ನಾನು ಅಂದೋರಾದಿಂದ ಬಂದಿದ್ದೇನೆ” ಎಂದಳು.

“ಅಂಡೋರಾ ಎಲ್ಲಿದೆ” ಎಂದು ಯೋಚನೆ ಮಾಡಲು ಶುರುಮಾಡಿದಳು. ಆಮೇಲೆ ಐಂಡ್ರಿಯಾನೆ ಇದು ಫ್ರಾನ್ಸ್ ಮತ್ತು ಸ್ಪೇನ್ ಮಧ್ಯ ಇದೆ, ಇದು ಸಹ ಪ್ರಪಂಚದ ಚಿಕ್ಕ ದೇಶಗಳಲ್ಲಿ ಒಂದು ಎಂದು ತನ್ನ ದೇಶದ ಬಗ್ಗೆ ಹೇಳಿಕೊಂಡಳು. ಕತಲೂನ್ಯಾಗಿಂತ ಮುಂಚೆ ನಾವೇ ಮೊದಲ ಕತಲಾನ್ ದೇಶ ಈಗಿನ ಕಾಲದಲ್ಲಿ ಎಂದು ಹೆಮ್ಮೆಯಿಂದ ಹೇಳಿದಳು.

ನಮ್ಮ ಹೋರಾಟ ಇಷ್ಟು ಉಗ್ರವಾಗಿರಲ್ಲಿಲ್ಲ , ನಮ್ಮ ಕತಲಾನ್ ಭಾಷೆ ತುಂಬಾ ಪ್ಯೂರೂ ಎಂದು ಸಹ ಹೇಳಿದಳು. ಈ ಥರಹದ ನಮ್ಮ ಭಾಷೆ ಪ್ಯೂರೂ ಎಂದು ಕೇಳಿದ್ದು ಮೊದಲು ಶ್ರೀಲಂಕನ್ನರಲ್ಲಿ. ಅವರ ಹತ್ತಿರ ತಮಿಳಿನಲ್ಲಿ ಮಾತಾಡಿದರೆ ನಿಮ್ಮ ತಮಿಳು ಬಹಳ ಇಂಪ್ಯೂರ್ ಎಂದು ಹೇಳುತ್ತಿದ್ದರು.

ರಕ್ತ ಮೆತ್ತಿದ ಕತಲೂನ್ಯ ಹೋರಾಟದಲ್ಲಿ ಇವರು ತಟಸ್ಥವಾಗಿದ್ದರು. ಹಾಗೆ ನೋಡಿದರೆ ಯುರೋಪಿನಲ್ಲಿ ವಿಶ್ವಯುದ್ಧದ ಸಮಯದಲ್ಲಿ ಅದೆಷ್ಟೋ ತಟಸ್ಥ ದೇಶಗಳು ಇಲ್ಲಿದ್ದವು. ಏಷಿಯಾದಲ್ಲೇ ಜಾಸ್ತಿ ಜನ ಇದರ ಸಲುವಾಗಿ ಗುಲಾಮರಾಗಿ, ಸೈನಿಕರಾಗಿ ಯಾವ ಗೌರವವಿಲ್ಲದೇ ಸತ್ತರು. ಇವರೆಲ್ಲರ ಸಾವಿನ ಸಂಖ್ಯೆ ಮತ್ತು ಸ್ಮಾರಕಗಳು ಅದೆಷ್ಟೋ ದೇಶಗಳಲ್ಲಿ ಇವೆ.

“468 ಸ್ಕ್ವೇರ್ ಕಿಲೋಮೀಟರ್ ಮತ್ತು 77 ಸಾವಿರ ಜನ ಇರುವ ಅತ್ಯಂತ ಪುಟ್ಟ ದೇಶ ಈ ಅಂದೋರಾ” ಎಂದಳು. “ಆಮೇಲೆ ಇದು ಅಂದೋರಾ ಅಂಡೋರಾ ಅಲ್ಲ, ತಿದ್ದುಕೋ” ಎಂದು ತಾಕೀತು ಮಾಡಿದಳು. 77 ಸಾವಿರ ಜನ ಮೋಸ್ಟ್ಲಿ ಸೌತ್ ಬೆಂಗಳೂರಿನಲ್ಲೇ ಇರುತ್ತಾರೆ ಇವರು ಇದನ್ನ ದೇಶ ಎಂದು ಕರೆದುಕೊಂಡು ಬೇರೆ ಶೋಕಿ ಮಾಡೋದು ಎಂದೆಲ್ಲಾ ಅಂದುಕೊಂಡು ನಕ್ಕು, “ಸೋ ಇಷ್ಟು ಚಿಕ್ಕ ದೇಶವನ್ನ ಹೇಗೆ ಕಾಪಾಡಿಕೊಳ್ಳುತ್ತೀರಾ” ಎಂದು ಕೇಳಿದಳು. “ಅರ್ಧ ವರ್ಷ ನಮ್ಮನ್ನ ಸ್ಪೇನ್ ಆಳತ್ತೆ, ಇನ್ನರ್ಧ ವರ್ಷ ಫ್ರಾನ್ಸ್.

ಆದ್ದರಿಂದ ಅವೆಲ್ಲ ಅವರ ತಲೆನೋವು, ನಮ್ಮ ಮುಖ್ಯ ಆದಾಯ ಬರೀ ಪ್ರವಾಸೋದ್ಯಮ , ನಾನು ಇಲ್ಲಿ ಟ್ರಾವೆಲ್ ಡಿಪ್ಲೊಮಾ ಮಾಡೋದಕ್ಕೆ ಬಂದಿದ್ದು, ಈಗ ನಮ್ಮ ದೇಶಕ್ಕೆ ಕಸ್ಟಮೈಸ್ಡ್ ಟೂರ್ ಮಾಡಿಕೊಡುತ್ತೇನೆ, ನೀನು ಪ್ರಿನ್ಸೆಸ್ ಡೈರೀಸ್ ನೋಡಿದೀಯಲ್ಲ, ಜೆನೋವಿಯಾದಷ್ಟೇ ಸುಂದರ ನಮ್ಮ ದೇಶ, 10 ಮಿಲಿಯನ್ ಪ್ರವಾಸಿಗರು ವರ್ಷಕ್ಕೆ ಬರುತ್ತಾರೆ, ನಾವು ಬಹಳ ಖುಷಿಯಾಗಿ ಬದುಕುವ ಮನುಷ್ಯರು, ನಮ್ಮ ದೇಶದಲ್ಲಿ ಜನ ಮಿಮಿಮಮ್ 81 ವರ್ಷ ಬದುಕುತ್ತಾರೆ ಗೊತ್ತಾ” ಎಂದು ಉದ್ದ ಪಟ್ಟಿಯನ್ನೇ ಕೊಟ್ಟು ಕಣ್ಣರಳಿಸುವಂತೆ ಮಾಡಿದಳು.

“ಈ ಥರ ಎಂದು ಗೊತ್ತಿದ್ದರೆ ನಾನು ನಿಮ್ಮ ದೇಶಕ್ಕೆ ಬಂದು ಓದುತ್ತಿದ್ದೆ” ಎಂದಳು. “ನೋ ನೋ ನಾವೆಲ್ಲ ಇಲ್ಲಿಗೆ ಬಂದೇ ಓದೋದು, ನಮಗೆ ಇಲ್ಲಿ ಹೆಲ್ತ್ ಅಸಿಸ್ಟೆನ್ಸ್ ಇದೆ, ಇಲ್ಲಿನ ಪೈರನೀಸ್ ಕತಲನ್ನರು ನಮ್ಮ ಆಸ್ಪತ್ರೆಗೆ ಬರಬಹುದು, ನಮ್ಮ ಏರ್ಪೋರ್ಟ್ ಸಹ ಇಲ್ಲೇ ಇರೋದು, ನಾವು ಅವರನ್ನ ನಮ್ಮವರೆಂದು ಅಂದುಕೊಳ್ಳುತ್ತೇವೆ ಆದರೆ ನಾವು ಅವರೊಟ್ಟಿಗೆ ಹೋರಾಟದಲ್ಲೆಲ್ಲಾ ಸೇರಿಕೊಳ್ಳಲ್ಲ ನೋಡು” ಎಂದು ಮುಂದೆ ಹುಡುಗಿ ಕೇಳುವ ಪ್ರಶ್ನೆಗೆ ಉತ್ತರವಾಗಿ ಹೇಳಿದಳು.

“ನಾನು ಇವಳಿಗೆ ಇದೇ ಪ್ರಶ್ನೆ ಕೇಳುತ್ತೇನೆ ಎಂದು ಹೇಗೆ ಅಂದುಕೊಂಡಳು” ಎಂದು ಯೋಚಿಸುತ್ತಲೇ ಇದ್ದ ಹುಡುಗಿಯನ್ನು ಎಚ್ಚರಿಸಿದ್ದು ಫ್ರಾನ್ಸಿನ ಮರ್ಜಿಯಾ. “ಹೇ ಕಮಾನ್ ಚಿಲ್ ಯಾ, ನಮ್ಮ ದೇಶ ಮತ್ತು ನಿನ್ನ ದೇಶ ಅಂದೋರಾನ ಚೆನ್ನಾಗಿಯೇ ನೋಡಿಕೊಳ್ಳತ್ತೆ” ಎಂದು ಅಂದಳು, “ನನ್ನ ದೇಶನಾ” ಎಂದು ಪ್ರಶ್ನೆ ಮಾಡಿದಾಗ, “ನೀನು ಎಲ್ಲಿದ್ದಿಯೋ ಅದೇ ನಿನ್ನ ದೇಶ,” ಎಂದು ಥೇಟ್ ಶಂಕರ್ ನಾಗ್ ’ನೋಡಿ ಸ್ವಾಮಿ ನಾವಿರೋದೆ ಹೀಗೆ’ ಸಿನಿಮಾದಲ್ಲಿ, “ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು, ಯಾರು ಸ್ನೇಹದಿ ಬರುವರೋ ಅವರೇ ನಮ್ಮೋರು” ಎಂಬುದನ್ನು ಬಹಳ ಸರಳವಾಗಿ ಹೇಳಿ ಮುಗಿಸಿದ್ದರೋ ಹಾಗೆ ಇವಳು ಅದನ್ನೇ ಹೇಳಿದಳು.

“ಆರು ತಿಂಗಳು ಸರ್ಕಾರದಲ್ಲಿ ನೀವು ಯಾವ ಭಾಷೆ ಮಾತಾಡುತ್ತೀರಾ?” ಎಂದು ಕೇಳಿದಾಗ, “ನಾವು ಅತ್ತರೂ ಕತಲಾನಿನಲ್ಲೇ ಅಳೋದು, ನಮ್ಮನ್ನ ಆಳೋದು ಫ್ರೆಂಚರು ಮತ್ತು ಸ್ಪೇನಿನವರು, ನಾವು ಇಬ್ಬರ ಭಾಷೆಯನ್ನೂ ಮಾತಾಡೋದಿಲ್ಲ” ಎಂದು ಕಿಸಕಿಸನೆ ನಕ್ಕಳು.

“ನಾವು ಮಾರ್ಕಾ ಹಿಸ್ಪಾನಿಕಾದ ಕೊನೆಯ ಸರ್ವೈವರ್ಸ್ ಗೊತ್ತಾ” ಎಂದು ಹೇಳಿ ಐಂಡ್ರಿಯಾ ಹೇಳಿ ನಕ್ಕಳು, “ಏನಿವಳು ಹೊಸ ಹೊಸದ್ದೇನೋ ಹೇಳಿಕೊಂಡು ಕೂತಿದ್ದಾಳೆ” ಎಂದು ಡೈನಿಂಗ್ ಟೇಬಲ್ಲಿನ ಮೇಲೆ ಏನೇನು ತಿಂಡಿ ಪದಾರ್ಥಗಳಿದೆ ಎಂದು ಹುಡುಕಲು ಹೋದಳು ಹುಡುಗಿ… “ಹೇ ಇದು ತಿನ್ನು ಕ್ರೆಮಾ ಅಂದೋರಾನಾ ಇದು ನಮ್ಮ ದೇಶದ ತಿನಿಸು, ಇದನ್ನ ತಿನ್ನುವಷ್ಟರಲ್ಲಿ ನಮ್ಮ ಕಥೆಯನ್ನು ಹೇಳುತ್ತೀನಿ” ಎಂದು ನಾಲ್ಕು ಸ್ಪೂನ್ ಹಾಕಿ ಹುಡುಗಿಯನ್ನ ಪಕ್ಕದಲ್ಲೇ ಕೂರಿಸಿಕೊಂಡಳು….

| ಮುಂದಿನ ವಾರಕ್ಕೆ |

September 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!

ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This