ʼತಾಯಿ ನಾಡಿʼಗೆ ಸ್ವಾಗತ…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. 

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

ಸಂಕ'ಸಂದರ್ಶನದಲ್ಲಿ ನಾನು ಸೋತಿದ್ದೆ. ಸದಾಶಿವ ಆಯ್ಕೆಯಾಗಿದ್ದರು. ಎಂ ಎ ಸ್ನಾತಕೋತ್ತರ ಪದವೀಧರರಾದ ಅವರ ಆಯ್ಕೆ ಸಹಜವೇ ಆಗಿತ್ತು. ಕೆಲಸ ಸಿಗದಿದ್ದರೂ ಸದಾಶಿವನ ಪರಿಚಯವಾದ್ದು ನನ್ನಲ್ಲಿ ಸಂತೋಷ ಉಂಟುಮಾಡಿತ್ತು. ಹೀಗೆ ಪತ್ರಿಕಾ ವ್ಯವಸಾಯದ ಮೊದಲ ಮೆಟ್ಟಿಲಿನಲ್ಲೇ ಎಡವಿದ ನಾನು ನನ್ನ ಮನಸೋ ಇಚ್ಛೆ ಓದು ಮತ್ತು ಬರವಣಿಗೆಯನ್ನು ಮುಂದುವರಿಸಿದ್ದೆ. 'ಇಂದಿರಾತನಯ'ರ ಮಂತ್ರಶಕ್ತಿ, ಶಕ್ತಿಪೂಜೆ, ಸೇಡಿನ ಕಿಡಿ, ಪೂಜಾ ತಂತ್ರ ಕಾದಂಬರಿಗಳನ್ನು ಸರ್ಕ್ಯೂಲೇಟಿಂಗ್ ಲೈಬ್ರರಿಯಿಂದ ತಂದು ಓದಿದೆ. ಇಂಥ ದೊಡ್ಡ ಲೇಖಕರ ಪರಿಚಯವಾದುದು ನನ್ನ ಪುಣ್ಯ ಎಂದುಕೊಂಡು ಹಿಗ್ಗಿದೆ.

1960ರ ಕಾಲಘಟ್ಟ. ರೆವಿನ್ಯೂ ಗುಮಾಸ್ತಗಿರಿಯ ದಿನಗಳು. ಆ ದಿನಗಳಲ್ಲೇ ಒಂದು ದಿನ ಕವಿ ನಿಸಾರ್ ಅಹಮದ್ ಅವರ ಪರೋಕ್ಷ ಪರಿಚಯವಾಯಿತು. ನಿಸಾರ್ ಅವರ ತಂದೆ ಹೈದರ್ ಸಾಹೇಬರು ಡೆಪ್ಯುಟಿ ಕಮೀಷನರ್ ಆಫೀಸಿನಲ್ಲಿ ಸೂಪರಿಂಟೆಂಡೆಂಟ್ ಆಗಿದ್ದರು.

ಆಗ ನಾನು ಮತ್ತು ದೇಶ ಕುಲಕರ್ಣಿ(ಅಷ್ಟೇನೂ ಪ್ರಸಿದ್ಧಿಗೆ ಬರದ ಕನ್ನಡದ ಒಬ್ಬ ಒಳ್ಳೆಯ ಕವಿ) ಅಲ್ಲಿ ಗುಮಾಸ್ತರು. ಶ್ರಾವಣದ ಒಂದು ಸಂಜೆ ಕಚೇರಿ ಮುಗಿಸಿ ಮನೆಗೆ ಹೋಗುವ ಮುನ್ನ ಹೈದರ್ ಸಾಹೇಬರು ನನ್ನ ಕರೆದು "ಸ್ವಲ್ಪ ಟೈಪಿಂಗ್ ಕೆಲಸವಿದೆ ಮಾಡಿಕೊಡ್ತೀಯ" ಎಂದರು.

"ನಂಮ ಹುಡುಗ ನಿಸಾರ್, ಜಿಯಾಲಜಿ ಎಂ.ಎಸ್ಸೀ., ಅಮೆರಿಕಕ್ಕೆ ಹೋಗಬೇಕೋಂತ ಇದಾನೆ..."

"ಸಾರ್ ಕವಿತೆ ಬರೀತಾರಲ್ಲ ನಿಸಾರ್ ಅಹಮದ್ ಅವರೇನಾ... ನಿಮ್ಮ ಮಗ" ನಾನು ಉದ್ಗರಿಸಿದೆ. ಆಗ ತಾನೆ "ಮನಸು ಗಾಂಧೀ ಬಜಾರು" ಪ್ರಕಟವಾಗಿತ್ತು.

"ನಿನಗೆ ಗೊತ್ತೇನಪ್ಪ?"

"ಹೌದು ಸಾರ್ ಗಾಂಧೀಬಜಾರಿನಲ್ಲಿ ನೋಡ್ತಿರ್ತೇನೆ..."

ಆ ದಿನಗಳಲ್ಲಿ ಸಂಜೆಯ ಆಕರ್ಷಣೆ ಗಾಂಧೀ ಬಜಾರಿನ ಕಲಾಮಂದಿರ'ವಾಗಿತ್ತು. ಅಲ್ಲಿ ಎ ಎಸ್ ಮೂರ್ತಿ, ದಾಶರಥಿ ದೀಕ್ಷಿತ್, ನವರತ್ನರಾಮ್ ಇವರುಗಳ ನಾಟಕದ ಆಕರ್ಷಣೆ. ಮಿಗಿಲಾಗಿ ಮೈಸೂರು ಅನಂತಸ್ವಾಮಿಯವರ ಸಂಗೀತದ ಆಕರ್ಷಣೆ. ಅ ನ ಸುಬ್ಬರಾಯರ ಕಲೆಯ ಆಕರ್ಷಣೆ. ಇದರಿಂದಾಗಿ ರಂಗಭೂಮಿ, ಸಂಗೀತ ಕಲೆಗಳಲ್ಲಿ ಆಸಕ್ತಿ ಬೆಳೆಯಿತು.

ಇದೇ ಕಲಾಮಂದಿರದಲ್ಲಿ ಅನಕೃ, ತಿ ತಾ ಶರ್ಮ, ಪಿ ಆರ್ ರಾಮಯ್ಯ ಇವರುಗಳನ್ನು ಹತ್ತಿರದಿಂದ ಕಾಣುವ, ಅವರ ಮಾತುಗಳನ್ನು ಕೇಳುವ ಸೌಭಾಗ್ಯವೂ ನನ್ನದಾಯಿತು. ನಿಸಾರ್ ಅಹಮದ್ ಅವರು ಕಲಾ ಮಂದಿರಕ್ಕೆ ಬರುತ್ತಿದ್ದರು. ನಿಸಾರ್ ಅಹಮದ್ ಅವರೊಂದಿಗೆ ಪರಿಚಯ ಗಾಢವಾಗಿ ಅವರ ಹೊಸ ಕವಿತೆಗಳನ್ನು ಮೊದಲು ಕೇಳುವ ಸೌಭಾಗ್ಯ ನನ್ನದಾಯಿತು.

ಬಸವನಗುಡಿಯ ಮಹಮಡನ್ ಬ್ಲಾಕಿನಲ್ಲಿ ಅವರ ಮನೆ. ಮಹಡಿಯ ಮೇಲೆ ಹೈದರ್ ಸಾಹೇಬರ ಸಂಸಾರ. ಕೆಳಗೆ ಮಗನ ಓದಿಗಾಗಿ ಪ್ರತ್ಯೇಕ ಕೋಣೆ. ಭಾನುವಾರಗಳಂದು ಗಾಂಧೀ ಬಜಾರಿನಲ್ಲಿ ಭೇಟಿಯಾದಾಗ ನಿಸಾರ್ ಅಹಮದ್ "ಬನ್ರೀ ಮನೇಗೆ ಹೋಗೋಣ" ಅಂದರೆ ಹೊಸ ಕವಿತೆ ಬರೆದಿದಾರೆ ಎಂದೆ ಇಂಗಿತ. ಕೆಳಗಿನ ಕೋಣೆಯಲ್ಲಿ ನಿಸಾರ್ ಕವಿತೆಗಳನ್ನು ಓದುತ್ತಿದ್ದರೆ ಮಧ್ಯೆ ಮಧ್ಯೆ ಅವರ ತಾಯಿ ಚಹಾ ತಂದು ಕೊಡುತ್ತಿದ್ದರು.

‘ಸಂಕ’ದ ನಿರಾಶೆ ಕೊಡವಿಕೊಂಡು ಮತ್ತೆ ಇಂದಿರಾತನಯರನ್ನು ಭೇಟಿ ಮಾಡಿದೆ. ಅವರು ನೀವು 'ತಾಯಿನಾಡು' ಪತ್ರಿಕೆಯಲ್ಲಿ ಏಕೆ ಪ್ರಯತ್ನಿಸಬಾರದು. ಅಲ್ಲಿ ಉಪಸಂಪಾದಕರು ಬೇಕಾಗಿದಾರಂತೆ' ಎಂದರು. ‘ತಾಯಿನಾಡು’ ಸ್ವಾತಂತ್ರ್ಯ ಹೋರಾಟ ಕಾಲದ ಪತ್ರಿಕೆ. ಕನ್ನಡದ ಮೊಟ್ಟಮೊದಲ ಬ್ರಾಡ್ ಶೀಟರ್, ಮೊಟ್ಟಮೊದಲು ರೋಟರಿ ಮುದ್ರಣ ಯಂತ್ರ ಹೊಂದಿದ ಪತ್ರಿಕೆ ಎಂಬೆಲ್ಲ ಖ್ಯಾತಿ ಅದರದು. ಆಗಲಿ ಸರ್ ಎಂದೆ. ಹಾಗಿದ್ದಲ್ಲಿ ನೀವು ನಾಳೆ ತಾಯಿನಾಡು ಪತ್ರಿಕೆಯ ಸುದ್ದಿ ಸಂಪಾದಕ ಡಿ ಎಚ್ ಶ್ರೀನಿವಾಸ್ ಅವರನ್ನು ಕಾಣಿ ಎಂದರು.

ತಾಯಿನಾಡು ಕಚೇರಿ ಆಗ ಕಂಟೋನ್ಮೆಂಟಿನ ಬಿ ಆರ್ ವಿ ಚಿತ್ರಮಂದಿರದ ಹಿಂದೆ ಇತ್ತು. ಆಗ ತಿ ಸಿದ್ದಪ್ಪ ತಾಯಿ ನಾಡು ಸಂಪಾದಕರು. ಮರುದಿನ ಬೆಳಗ್ಗೆ ಹನ್ನೊಂದರ ಸುಮಾರಿಗೆ ಡಿ ಎಚ್ ಶ್ರೀನಿವಾಸ್ ಅವರನ್ನು ಕಂಡೆ. ಇನ್ನೊಬ್ಬ ಅಭ್ಯರ್ಥಿ ಇದ್ದರು. ಇಬ್ಬರನ್ನೂ ಶ್ರೀನಿವಾಸ್ ಸಂಪಾದಕರ ಬಳಿ ಕರೆದೊಯ್ದು ನಮ್ಮ ಬಗ್ಗೆ ತಿಳಿಸಿದರು. ಟೆಸ್ಟ್ ಕೊಡಿ ಎಂದರು. ಸುದ್ದಿಯ ಭಾಷಾಂತರದ ಪರೀಕ್ಷೆ ನಡೆಯಿತು. ಎರಡು ದಿನ ಬಿಟ್ಟು ಬನ್ನಿ ನೋಡೋಣ ಎಂದರು ಸುದ್ದಿ ಸಂಪಾದಕರು.

ಎರಡು ದಿನಗಳ ನಂತರ ʼತಾಯಿ ನಾಡಿಗೆ ಸ್ವಾಗತ.‌ ನಾಳೆಯಿಂದ ಕೆಲಸಕ್ಕೆ ಬನ್ನಿ’ ಎಂದರು ಸುದ್ದಿ ಸಂಪಾದಕರು. ಅರುವತ್ತು-ಎಪ್ಪತ್ತರ ದಶಕ, ಕನ್ನಡ ಪತ್ರಿಕಾ ವ್ಯವಸಾಯ ಉದ್ಯಮವಾಗಿ ಅಭಿವೃದ್ಧಿ ಹೊಂದುತ್ತಿದ್ದ ದಿನಗಳು ಅವು. ಅಂಥ ದಿನಗಳಲ್ಲಿ ನಾನು ಕನ್ನಡ ಪತ್ರಿಕೋದ್ಯಮ ಪ್ರವೇಶಿಸಿದ್ದೆ. ನನ್ನ ಪ್ರವೇಶ ನಗರದ ಮಹಾದ್ವಾರ ಅಥವಾ ಹೆಬ್ಬಾಗಿಲಿನಿಂದ ಆಗಿರಲಿಲ್ಲ, ದಿಡ್ಡಿಬಾಗಿಲಿನಿಂದಾಗಿತ್ತು.

ಪ್ರಜಾವಾಣಿಗೆ ಪ್ರಬಲ ಪೈಪೋಟಿ ನೀಡಲಾಗದೆ ʼತಾಯಿ ನಾಡು' ಬಸವಳಿಯುತ್ತಿದ್ದ ದಿನಗಳು ಅವು. ಹಣ, ಸುದ್ದಿ ಹೀಗೆ ಎಲ್ಲ ಬಗೆಯ ಸಂಪನ್ಮೂಲಗಳ ಕೊರತೆಯಿಂದ ಪತ್ರಿಕೆ ಸೊರಗುತಿತ್ತು. ಪಿ ಆರ್ ರಾಮಯ್ಯನವರಿಂದ ʼತಾಯಿ ನಾಡು’ ಧನಾಢ್ಯರಾದ ಎಂ ಎಸ್ ರಾಮಯ್ಯನವರ ಕೈಗೆ ಹೋಗಿತ್ತು. ಆದರೂ ಸಂಪದ್ಬಲ ಕೂಡಿ ಬಂದಿರಲಿಲ್ಲ. ರಾಜಧಾನಿಯಲ್ಲಿದ್ದಷ್ಟು ಮಾನವ ಸಂಪನ್ಮೂಲವಾಗಲೀ ಸುದ್ದಿ ಜಾಲವಾಗಲಿ ರಾಜ್ಯದ ಇತರೆಡೆಗಳಲ್ಲಿ ಇರಲಿಲ್ಲ. ಜಾಹಿರಾತು, ಪ್ರಸರಣ ಮೊದಲಾದ ಬಾಬುಗಳಲ್ಲಿ ವೃತ್ತಿಪರತೆಯ ಕೊರತೆ ಎದ್ದು ಕಾಣುತ್ತಿತ್ತು.

ಸಂಪಾದಕೀಯ ವಿಭಾಗ ಸಾಕಷ್ಟು ಸಶಕ್ತವಾಗಿಯೇ ಇತ್ತು. ಸುದ್ದಿ ಸಂಪಾದಕ ಡಿ ಎಚ್ ಶ್ರೀನಿವಾಸ್, ಸಂಪಾದಕೀಯ ಬರಹಗಾರ ಎಂ ಎಸ್ ಆರ್ ಅಯ್ಯಂಗಾರ್, ಪಿ ಬಿ ಶ್ರೀನಿವಾಸನ್, ಹಿ ಮಾ ನಾಗಯ್ಯ, ಹಿರಿಯ ವರದಿಗಾರರಾರದ ಬಿರುಗಾಳಿ ವೆಂಕಟರಾಮಯ್ಯ, ಮುಖ್ಯ ಉಪ ಸಂಪಾದಕರಾದ ಮೈ ಸು ಶೇಷಗಿರಿ ರಾವ್, ರಾಜಾ ರಾವ್, ಪುರವಣಿ ಸಂಪಾದಕರಾದ ಶ್ರೀ ಕೃಪಾ ಮೊದಲಾದ ಕ್ರಿಯಾಶೀಲ ಪತ್ರಕರ್ತರ ಪಟಾಲಮ್ಮೇ ಇತ್ತು.

ನಾನು ಸೇರುವುದಕ್ಕೆ ಒಂದೆರಡು ತಿಂಗಳು ಮುಂಚೆ ವೈಕುಂಠರಾಜು ಮತ್ತು ಶ್ರೀಮತಿ ನಾಗಮಣಿ ʼತಾಯಿನಾಡು'ಇಂದ ನಿರ್ಗಮಿಸಿದ್ದರು. ವೈಕುಂಠರಾಜು ʼಪ್ರಜಾವಾಣಿ’ ಸೇರಿ ಸಾ. ಪು. ಸಂಪಾದಕರಾಗಿ ಪ್ರಸಿದ್ಧಿ ಪಡೆದರು. ನಾಗಮಣಿ ಆಕಾಶವಾಣಿ ಸೇರಿ ಸುದ್ದಿ ಪ್ರಸಾರಕಿಯಾಗಿ ಒಳ್ಳೆ ಹೆಸರು ಪಡೆದರು.

ಹಾಗೆಯೇ ಕೆಲವು ಐಷಾರಾಮಿ ಪತ್ರಕರ್ತರಿಗೆ ʼತಾಯಿ ನಾಡು' ಆಶ್ರಯಧಾಮವೂ ಆಗಿತ್ತು. ಇನ್ನು ಕೆಲವರಿಗೆ ರಾಜಕೀಯದಲ್ಲಿ ಕಾಲೂರಲು ಮೆಟ್ಟಿಲೂ ಆಗಿತ್ತು. ತಾಯಿನಾಡು ವರದಿಗಾರ ಎಂದು ವಿಸಿಟಿಂಗ್ ಕಾರ್ಡ ಇಟ್ಟುಕೊಂಡು ಬೇಳೆ ಬೇಯಿಸಿಕೊಳ್ಳುತ್ತಿದ್ದ ಮಂದಿ ಇವರು. ದಿನದಲ್ಲಿ ಯಾವಾಗಲೋ ಒಮ್ಮೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿಹಾಕಿ, ಸಂಪಾದಕ/ಸುದಿ ಸಂಪಾದಕರಿಗೆ ಒಂದು ನಮಸ್ಕಾರ ಹಾಕಿ ಹೋಗುತ್ತಿದ್ದ ಪರಿ ನನ್ನನ್ನು ಚಕಿತಗೊಳಿಸಿದ್ದೂ ಉಂಟು. ಪತ್ರಿಕಾ ವೃತ್ತಿಯ ಈ ಮುಖ ಕಂಡು ವಂಚನೆಗೊಳಗಾದ್ದೂ ಉಂಟು.

ಆಗೆಲ್ಲ ಡಾಕ್ ಎಡಿಷನ್ ಸಂಜೆ ಎಂಟಕ್ಕೆ ಮುದ್ರಣಗೊಂಡು ರೈಲು,ಬಸ್ಸು,ಅಂಚೆಗಳಲ್ಲಿ ಗ್ರಾಮಾಂತರ ಪ್ರದೇಶಗಳನ್ನು ಮರುದಿನ ಮಧ್ಯಾಹ್ನ, ಸಂಜೆ ವೇಳೆಗೆ ತಲುಪುತ್ತಿತ್ತು. ಈ ಡಾಕ್ ಎಡಿಷನ್ ಸಿದ್ಧಪಡಿಸುವ ಹೊಣೆ ಮೊದಲನೆಯ ಪಾಳಿಯದಾಗಿತ್ತು. ಎರಡನೆಯ ಪಾಳಿಯವರು ಸಿಟಿ ಎಡಿಎಷನ್ (ನಗರ ಆವೃತ್ತಿ) ಸಿದ್ಧಪಡಿಸುತ್ತಿದ್ದರು. ನಗರ ಆವೃತ್ತಿ ಬೆಂಗಳೂರು ನಗರ ಮತ್ತು ಆಜೂಬಾಜಿ ಹೊಸಕೋಟೆ, ಕನಕಪುರ, ಮಾಗೆಇಡಿ, ದೊಡ್ಡಬಳ್ಳಾಪುರ, ನೆಲಮಂಗಲಗಳನ್ನು ತಲುಪುತ್ತಿತ್ತು.

ಮೊದಲ ಪಾಳಿ ಹನ್ನೆರಡಕ್ಕೆ ಶುರುವಾಗುತ್ತಿತ್ತು. 6ರಿಂದ 8ರವರೆಗೆ ಮೊದಲನೆಯ ಪಾಳಿ, 8ರಿಂದ 2ರವರೆಗೆ ಎರಡನೆಯ ಪಾಳಿ. ನಾನು ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡ ದಿನ ಮೈ ಸು ಶೇಷಗಿರಿ ರಾವ್ ಅವರದು ಮೊದಲನೆಯ ಪಾಳಿಯಾಗಿತ್ತು ಸುದ್ದಿ ಸಂಪಾದಕರ ಮುಂದೆ ನಿಂತು,"ಸಾರ್, ತಮ್ಮ ಸೇವೆಯಲ್ಲಿ" ಎಂದು ತುಸು ನಾಟಕೀಯವಾಗಿಯೇ ಹೇಳಿದೆ. ‘ಪತ್ರಿಕೆಯ ಸೇವೆಯಲ್ಲಿ’ ಎಂದು ತೀಕ್ಷ್ಣವಾಗಿ ನುಡಿದ ಸುದ್ದಿ ಸಂಪಾದಕರು ಮೈ ಸು ಶೇ ಅವರತ್ತ ತಿರುಗಿ, “ಶೇಷಗಿರಿ ರಾಯರೇ, ಇವರು ರಂಗನಾಥ ರಾವ್, ನಿಮ್ಮ ಪಾಳಿ ಸೇರಲಿರುವ ಹೊಸ ಉಪಸಂಪಾದಕರು” ಎಂದು ಅವರತ್ತ ನನ್ನನು ಸಾಗ ಹಾಕಿದರು.

ಇಷ್ಟೆಲ್ಲ ಆದರೂ ನನಗಿನ್ನೂ ನೇಮಕಾತಿ ಪತ್ರ ದೊರೆತಿರಲಿಲ್ಲ. “ನನ್ನ ನೇಮಕಾತಿ ಪತ್ರ” ಎಂದು ಕೇಳಿದೆ.

‘ಬರುತ್ತೆ, ಹೋಗ್ರಿ ಮೊದಲು ಕೆಲಸ ಶುರು ಮಾಡಿ”

ಮೈ ಸು ಶೇಷಗಿರಿ ರಾವ್ ಅನಕೃ ಶಿಷ್ಯರಾಗಿದ್ದರು. ಅನಕೃ ಧಾಟಿಯಲ್ಲೇ ಹಲವಾರು ಕಾದಂಬರಿಗಳನ್ನು ಬರೆದು ಪ್ರಸಿದ್ಧರಾಗಿದ್ದರು.

ನಾನು ನಿಮ್ಮ ಕಾದಂಬರಿಗಳನ್ನು ಓದಿದ್ದೇನೆ ಎಂದೆ. “ಒಳ್ಳೆಯದು. ನೀವು ಆ ಮೇಜಿನಲ್ಲಿ ಕುಳಿತುಕೊಳ್ಳಿ” ಎಂದು ಖಾಲಿ ಇದ್ದ ಜಾಗವೊಂದನ್ನು ತೋರಿಸಿದರು. ಅಷ್ಟರಲ್ಲಿ ವಿದ್ಯುತ್ ಸಂಚಾರವಾದಂತೆ ಟಿನೋಪಾಲ್ ಬಿಳುಪಿನ ಕಚ್ಚೆ ಪಂಚೆ, ಜುಬ್ಬ ಧರಿಸಿದ್ದ ವ್ಯಕ್ತಿಯೊಬ್ಬರು “ಗುಡ್ ಮಾರ್ನಿಂಗೆ ಎವ್ವರಿ ಬಡಿ” ಎನ್ನುತ್ತಾ ಪ್ರವೇಶಮಾಡಿದರು. ಮೈ ಸು ಶೇ ಪಕ್ಕದ ಮೇಜಿನಲ್ಲಿ ಆಸೀನರಾದರು.

“ಯಾರಿದು ಹೊಸ ಮುಖ?”
“ಹೊಸ ಮುಖ, ರಂಗನಾಥ ರಾವ್ ಅಂತ”
-ಮೈ ಸು ಶೇ ಉವಾಚ.
ವ್ಯಕ್ತಿ ನನ್ನ ಮೇಜಿಗೆ ಎದ್ದು ಬಂದು-
“ನಾನು ನಾರಾಯಣ ಸ್ವಾಮಿ ಅಂತ, ಸೀನಿಯರ್ ಸಬೆಡಿಟರ್. ನಿಮಗೆ ಸ್ವಾಗತ”
-ಎಂದು ಪರಿಚಯ ಮಾಡಿಕೊಂಡು ಕುಶಲೋಪರಿ ವಿಚಾರಿಸಿದರು.
ಮರು ನಿಮಿಷವೇ ಸುದ್ದಿ ಸಂಪಾದಕರ ಬಳಿ ಹೋಗಿ, “ಶೀನಣ್ಣ ಹೋಗೋಣವಾ” ಎಂದರು.
“ಅಟೆಂಡನ್ಸ್ ಸೈನ್ ಮಾಡಿದೆಯಾ ನಾರಾಯಣ ಸ್ವಾಮಿ”
“ಮಾಡಿದೆ ಶೀನಣ್ಣ”
“ಸರಿ, ನಡೀರಪ್ಪ ಹೋಗೋಣ”
ಸುದ್ದಿ ಸಂಪಾದಕರು ಮುಂದೆ ಅಡಿ ಇಟ್ಟರು. ಅವರ ಪಕ್ಕದಲ್ಲಿ ನಾರಾಯಣ ಸ್ವಾಮಿ. ಅವರ ಹಿಂದೆ ಮೈ ಸು ಶೇ ಇತ್ಯಾದಿ.
“ಬನ್ರೀ ಕಾಫಿ ಕುಡಿದು ಬರೋಣ” ಎಂದು ಮೈ ಸು ಶೇ ನನ್ನನ್ನೂ ಸೇರಿಸಿಕೊಂಡರು.

ಹತ್ತಿರದ 'ಭಾರತ್ ಭವನ' ಹೋಟೆಲಿಗೆ ನಾರಾಯಣ ಸ್ವಾಮಿ ನಾಯಕತ್ವದಲಿ ನಮ್ಮ ಸವಾರಿ ಸಾಗಿತು. ದೋಸೆ ಇತ್ಯಾದಿ ಎಲ್ಲರೂ ಪುಷ್ಕಳವಾಗಿ ತಿಂದು ಕಾಫಿ ಕುಡಿದಾಯಿತು. ನಾರಾಯಣಸ್ವಾಮಿ ಡಬ್ಬಿಯಿಂದ ವಿಲ್ಸಫ್ಲೇಕ್ ಸಿಗರೇಟನ್ನ ಎತ್ತಿಕೊಂಡರು. ನಾನು ಧೂಂಪಾ ಪ್ರಿಯನಲ್ಲ. ಬಿಲ್ ಬಂತು. ನಾರಾಯಣಸ್ವಾಮಿ ಬಿಲ್ ಕೊಟ್ಟರು. ಹೋಟೆಲಿನಿಂದ ಕಚೇರಿಯ ಗೇಟ್‍ವರೆಗೆ ಬಂದ ನಾರಾಯಣಸ್ವಾಮಿ "ಶೀನಣ್ಣ ನಾನಿನ್ನು ಬರಲಾ" ಎಂದು ಕಾರು ಹತ್ತಿದರು.

ನಾರಾಯಣ ಸ್ವಾಮಿಯ ಈ ಸೇವೆ ನಿತ್ಯದ ಪರಿಪಾಠ ಎಂಬುದು ನನಗೆ ಕ್ರಮೇಣ ಗೊತ್ತಾಯಿತು. ಪ್ರತಿನಿತ್ಯ ಹನ್ನೆರಡೂವರೆ ಒಂದು ಗಂಟೆಗೆ ಸುಮಾರಿಗೆ ಆಗಮಿಸುತ್ತಿದ್ದ ನಾರಾಯಣಸ್ವಾಮಿ,'ಶೀನಣ್ಣ'ನಾದಿಯಾಗಿ ಬೆಳಗಿನ ಪಾಳಿಯಲ್ಲಿ ಯಾರಿರಲಿ ಅವರಿಗೆಲ್ಲರಿಗೂ ತಿಂಡಿ-ಸಿಗರೇಟ್ ಸಮಾರಾಧನೆ ನಡೆಸಿ ಹಾಜರಿ ಹಾಕಿ ಅಂತರ್ಧಾನರಾಗಿ ಬಿಡುತ್ತಿದ್ದರು.

ಹುಟ್ಟುವಾಗಲೇ ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಹುಟ್ಟಿದ ನಾರಾಯಣ ಸ್ವಾಮಿ ಕೋಲಾರ ಜಿಲ್ಲೆಯವರು. ಮೈಸೂರು ವಿಶ್ವವಿದ್ಯಾನಿಲಯದಿಂದ ಪೊಲಟಿಕಲ್ ಸೈನ್ಸೋ ಸೋಶಿಯಾಲಜಿಯಲ್ಲೋ ಎಂ ಎ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದರು. ಎಂಪಿಯೋ ಎಂಎಲ್ಲೆಯೋ ಆಗುವುದು ಅವರ ಮಹತ್ವಾಕಾಂಕ್ಷೆಯಾಗಿತ್ತು. ಇನ್ನೊಬ್ಬರು ಶ್ರೀಧರ ಬೋಂಗಾಳೆ, ವಾಣಿಜ್ಯ ಪುಟ ನೋಡಿಕೊಳ್ಳುತ್ತಿದ್ದರು. ದಿನದಲ್ಲಿ ಅರ್ಧ ಮುಕ್ಕಾಲು ಗಂಟೆ ಬಂದು ಹೋಗುತ್ತಿದ್ದರು. ಅವರ ಮುಖ್ಯ ಕಾಳಜಿ ಶಿಕ್ಷಣವಾಗಿತ್ತು. ಅವರು ಖಾಸಗಿ ಶಾಲೆ ನಡೆಸುತ್ತಿದ್ದರು.

ʼತಾಯಿ ನಾಡು’ನಲ್ಲಿ ನಾನು ಕಂಡ ಬಲು ಅಪರೂಪದ ಪತ್ರಕರ್ತ ಪಿ ಬಿ ಶ್ರೀವಾಸನ್. ಈತ ಪಿ ಆರ್ ರಾಮಯ್ಯನವರ ಕಾಲದಿಂದಲೇ ʼತಾಯಿ ನಾಡು' ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಅಂದಿನ ಸಂಪಾದಕರಿಗಿಂತ ಸೀನಿಯರ್ ಆಗಿದ್ದರು. 1936ರರಲ್ಲಿ ಮೈಸೂರಿನ ಆಗಿನ ದೊರಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಪರಿವಾರ ಸಮೇತ ವಿದೇಶ ಪ್ರವಾಸ ಕೈಗೊಂಡಾಗ ಅವರ ಪ್ರವಾಸವನ್ನು ವರದಿ ಮಾಡಲು ಪಿ ಆರ್ ರಾಮಯ್ಯನವರು ಮಹಾರಾಜರೊಟ್ಟಿಗೆ ಶ್ರೀನಿವಾಸನ್ ಅವರನ್ನು ಕಳುಹಿಸಿದ್ದರು. ಅಷ್ಟು ಹಳಬರು. ಬಹುಶಃ ಪತ್ರಿಕಾ ವರದಿಗಾರನಾಗಿ ವೀದೇಶ ಪ್ರವಾಸ ಮಾಡಿದ ಮೊದಲ ಪತ್ರಕರ್ತರು ಇವರಿರಬೇಕು.

ನಾನು ತಾಯಿನಾಡು ಸೇರಿದಾಗಲೂ ಶ್ರೀನಿವಾಸನ್ ಅಲ್ಲಿ ಕಾರ್ಯನಿರತ ಪತ್ರಕರ್ತರಾಗಿದ್ದರು. ಆ ವೇಳೆಗೆ ಅವರ ವಯಸ್ಸು ಸುಮಾರು ಎಪ್ಪತ್ತರ ಗಡಿಯಲ್ಲಿದಂತೆ ಕಾಣುತ್ತಿತ್ತು. ಆಜಾನುಬಾಹು ವ್ಯಕ್ತಿ ಏನಲ್ಲ. ನಖಶಿಖಾಂತ ಖಾದಿ ಧೋತರ, ಜುಬ್ಬಾಗಳಲ್ಲಿ ಮುಳುಗಿ ಹೋದ ಮಟ್ಟಸ ವ್ಯಕ್ತಿತ್ವ. ಶ್ಯಾಮಲ ವರ್ಣ. ತಲೆಯಲ್ಲಿ ಪುಡಿ ಕ್ರಾಪು. ಯಾವಾಗ ಬರುತ್ತಿದ್ದರೋ ಯಾವಾಗ ಹೋಗುತ್ತಿದ್ದರೋ ಗೊತ್ತಾಗುತ್ತಿರಲಿಲ್ಲ.ಅವರಿಗೊಂದು ಜಾಗವಿತ್ತು. ಅಲ್ಲಿ ಕುಳಿತು ಧ್ಯಾನಮಜ್ಞನಂತೆ ಬರೆಯುತ್ತಿದ್ದರು ಅಥವಾ ಓದುತ್ತಿದ್ದರು.

ʼನಗರ ಸಂಚಾರಿಯ ಡೈರಿ’ ಪಿ ಬಿ ಶ್ರೀನಿವಾಸನ್ ಬರೆಯುತ್ತಿದ್ದ ಭಾನುವಾರದ ಅಂಕಣ. ಪಿ ಬಿ ಬಳಿ ಒಂದು ಹಳೇ ಸೈಕಲ್ ಇತ್ತು. ಈ ಸೈಕಲ್ ನಲ್ಲಿ ಅವರು ಆಫೀಸಿಗೆ ಬರುತ್ತಿದ್ದರು. ಪ್ರತಿ ಶನಿವಾರ ಪಿ ಬಿ ಈ ಸೈಕಲ್ ಏರಿ ಬೆಂಗಳೂರು ನಗರದ ಒಂದೊಂದು ಬಡಾವಣೆಯನ್ನೂ ಸುತ್ತುತ್ತಿದ್ದರು. ಬೆಳಗ್ಗೆ ಏಳು ಗಂಟೆಗೇ ಶುರುವಾಗುತ್ತಿತ್ತು ಈ ಸಂಚಾರ. ಏಳು ಗಂಟೆ ವೇಳೆಗೆ ಕಚೇರಿ ತಲುಪಿ ‘ನಗರಸಂಚಾರಿ ಡೈರಿ’ ಬರೆದು ಸುದ್ದಿ ಸಂಪಾದಕರ ಕೈಯ್ಯಲ್ಲಿಟ್ಟು ನಿರ್ಗಮಿಸುತ್ತಿದ್ದರು.

ಬೆಂಗಳೂರು ನಗರದ ಸಮಸ್ಯೆಗಳು, ಸಾರ್ವಜನಿಕ ಹಿತಾಸಕ್ತಿಯ ವಯಮಾನಗಳು. ಮಾನವಾಸಕ್ತಿ ವಿಷಯಗಳನ್ನು ‘ನಗರಸಂಚಾರಿಯ ಡೈರಿಯಲ್ಲಿ' ಪಿ ಬಿ ಪತ್ಯಕ್ಷದರ್ಶಿಯಾಗಿ ಬರೆಯುತ್ತಿದ್ದರು. ಪ್ರತಿ ಭಾನುವಾರ ʼತಾಯಿನಾಡು’ ಓದುಗರು ಈ ಅಂಕಣಕ್ಕಾಗಿ ಓದುಗರೂ ಸರ್ಕಾರವೂ ಕಾಯುತ್ತಿದ್ದರಂತೆ. ಪಿ ಬಿ ಯವರ ಈ ಅಂಕಣಕ್ಕೆ ಸರ್ಕಾರ ಎಚ್ಚೆತ್ತುಕೊಳ್ಳುತ್ತಿತ್ತು.

ಶ್ರೀ ಕೃಪಾ ಭಾನುವಾರದ ಪುರವಣಿಯ ಸಂಪಾದಕರು. ಕಥೆ, ಕವನ, ನುಡಿ ಚಿತ್ರಗಳು ಮತ್ತು ಸಿನಿಮಾ ಸುದ್ದಿ ಭಾನುವಾರದ ಪುರವಣಿಯ ಆಕರ್ಷಣೆಯಾಗಿತ್ತು. ಬಂದ ಕಥೆ, ಲೇಖನ ಇತ್ಯಾದಿಗಳೆಲ್ಲವನ್ನೂ ಸ್ವಂತ ಕೈಬರಹದಲ್ಲಿ ಪುನರ್ ರಚಿಸುವುದು ಶ್ರೀ ಕೃಪಾ ಅವರ ಪರಿಷ್ಕರಣದ ವೈಶಿಷ್ಟ್ಯವಾಗಿತ್ತು. ಅವರದು ಬಲು ಮುದ್ದಾದ ಗುಂಡನೆ ಕೈಬರಹ. ಸಣ್ಣಪುಟ್ಟ ವ್ಯಾಕರಣ ದೋಷಗಳಿದ್ದರೆ ಅದನ್ನು ತಿದ್ದಿ ಇಡೀ ಕಥೆಯನ್ನು ಪುನಃ ಬರೆಯುತ್ತಿದ್ದರು.

ಒಂದು ದಿನ ನನಗೆ ಲಾಲ್ ಬಾಗ್ ಪುಷ್ಪ ಪ್ರದರ್ಶನದ ಮೇಲೆ ಒಂದು ನುಡಿಚಿತ್ರ ಬರೆಯಲು ಹೇಳಿದರು. ನಾನು ಲಾಲ್ ಬಾಗಿನಲ್ಲಿ ಅರ್ಧದಿನ ಕಳೆದು ಸಂಬಂಧಪಟ್ಟವರನ್ನೆಲ್ಲ ಸಂದರ್ಶಿಸಿ ಫೀಚರ್ ಬರೆದುಕೊಟ್ಟೆ. ಚೆನ್ನಾಗಿದೆ. ಬರವಣಿಗೆ ಕಾವ್ಯಮಯವಾಗಿದೆ. ಸ್ವಲ್ಪ ತಿದ್ದಿ ಪರಿಷ್ಕರಿಸುವುದಿದೆ” ಎಂದರು ಶ್ರೀ ಕೃಪಾ. ನನ್ನ ಕಾಪಿಯನ್ನು ಪೂರ್ತಿಯಾಗಿ ಮತ್ತೆ ಬರೆದಿದ್ದರು. ಪರಿಷ್ಕರಿಸಿದ ಬರಹವನ್ನು ನನಗೆ ತೋರಿಸುತ್ತಾರೆ, ನಾನು ತಪ್ಪುಗಳನ್ನು ತಿದ್ದಿಕೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲಿದ್ದೆ. ಕೃಪಾ ನೇರವಾಗಿ ಕಂಪೋಸಿಂಗ್‍ಗೆ ಕಳುಹಿಸಿದರು. ಕಂಪೋಸ್ ಆಗಿ ಪ್ರೂಫ್ ರೀಡಿಂಗ್ ಗೆ ಬಂದಾಗ ನೋಡಿದೆ, ನಾನು ಬರದದ್ದನ್ನೇ ತಮ್ಮ ಕೈಬರಹದಲ್ಲಿ ಬಟ್ಟಿ ಇಳಿಸಿದ್ದರಷ್ಟೆ. ಒಂದಕ್ಷರವನ್ನೂ ಬದಲಾಯಿಸಿರಲಿಲ್ಲ. ಇದು ಶ್ರೀ ಕೃಪಾ ಅವರ ಶೈಲಿ. ಬೆಳಗಿನಿಂದ ಸಂಜೆಯವರೆಗೆ ಅವರು ಕೆಲಸ ಮಾಡುತ್ತಿದ್ದ ಈ ಶೈಲಿಯನ್ನು ಸಂಪಾದಕರು ʼಹಾರ್ಡ್ ವರ್ಕಿಂಗ್' ಎಂದು ಮೆಚ್ಚಿಕೊಂಡಿದ್ದರು.

ಶ್ರೀ ಕೃಪಾ ಸಿನಿಮಾ ಸುದ್ದಿಗಳನ್ನು,‌ ಚಿತ್ರರಂಗದ ಝಗಮಗಗಳನ್ನು ಬಹಳ ರೋಚಕವಾಗಿ ಬರೆಯುತ್ತಿದ್ದರು. ಶ್ರೀ ಕೃಪಾ ನಮ್ಮಂತೆ ಕುಚೇಲರಾಗಿರಲಿಲ್ಲ. ಹೊಗಳಿಕೆ ಮಾರು ಹೋಗುವುದು ಅವರ ದೌರ್ಬಲ್ಯವಾಗಿತ್ತು. ನಾವು ಕೆಲವರು ನಮ್ಮ ಜೇಬು ಖಾಲಿ ಆದಾಗ ಕೃಪಾ ಅವರ ಬಳಿ ಹೋಗಿ ಎಡಿಟಿಂಗ್‍ನಲ್ಲಿ ಅವರ ಕೈಚಳಕವನ್ನೂ ಅವರ ದುಂಡನೆಯ ಕೈಬರಹವನ್ನೋ ಆ ವಾರದ ಪುರವಣಿಯನ್ನೋ ಹಾಡಿ ಹೊಗಳುತ್ತಿದ್ದೆವು. "ಅಯ್ಯೋ ಬಿಡೀಪ್ಪ. ಏನು ಕಾಫಿ ತಿಂಡಿ ಆಯಿತೋ. ನಡೀರಿ..." ಎಂದು ಭಾರತ ಭವನಕ್ಕೆ ಕರೆದೊಯ್ಯುತ್ತಿದ್ದರು. ಶ್ರೀ ಕೃಪಾ ಒಂದೆರಡು ಕನ್ನಡ ಚಿತ್ರಗಳಿಗೆ ಗೀತೆಗಳನ್ನು ರಚಿಸಿದ್ದರು. ‌

ನಾನು ‘ತಾಯಿ ನಾಡು’ ಸೇರಿದ್ದು 1965ರ ಜನವರಿಯಲ್ಲಿ. ನಾನು ಕೆಲಸಕ್ಕೆ ರಿಪೋರ್ಟ್ ಮಾಡಿಕೊಂಡ ದಿನವೇ ಸುದ್ದಿ ಸಂಪಾದಕರು ಹಾಜರಿ ಪುಸ್ತಕದಲ್ಲಿ ನನ್ನ ಹೆಸರು ದಾಖಲಿಸಿದರು. ಆದರೆ ಒಂದು ವಾರ ಕಳೆದರೂ ನೇಮಕದ ಆಜ್ಞೆ ಬರಲಿಲ್ಲ. ಕೊನೆಗೊಂದು ದಿನ ಬಂತು. ನನಗೆ ಆಘಾತ ಕಾದಿತ್ತು. ನನ್ನ ಜೊತೆ ಒಂದೇ ದಿನ ಟೆಸ್ಟ್ ತೆಗೆದುಕೋಂಡು ಒಂದೇ ದಿನ‌ ಕೆಲಸಕ್ಕೆ ರಿಪೋರ್ಟ್ ಮಾಡಿಕೊಂಡ ಸಹೋದ್ಯೋಗಿಯ ನೇಮಕದ ಆಜ್ಞೆಯೂ ಬಂದಿತ್ತು. ನನಗೆ ಸಂಬಳ 80 ರೂ. ಆತನಿಗೆ 100 ರೂ. ಏಕೀ ಅಂತರ ಎಂದು ಸುದ್ದಿ ಸಂಪಾದಕರನ್ನು ಕೇಳಿದೆ.

“ಅವನು ಹೋಗಿ ಸಂಪಾದಕರ ಮನೇಲಿ ಹುಲಿ ಕಟ್ಟಿಹಾಕಿ ಬಂದ, ಅದಕ್ಕೆ” ಎಂದರು ಮುಗುಮ್ಮಾಗಿ.

ಆಗ ಮಾಸ್ಟರ್ ಹಿರಣ್ಣಯ್ಯನವರ ಲಂಚಾವತಾರ' ನಾಟಕ ಬೆಂಗಳೂರಿನಲ್ಲಿ ಮನೆಮಾತಾಗಿತ್ತು. ಈ ನಾಟಕದ ಪರಿಭಾಷೆಯಲ್ಲಿ ಹೇಳುವುದಾದರೆ, ಹುಲಿ ಕಟ್ಟಿಹಾಕುವುದು ಎಂದರೆ 100 ರೂ, ಸಿಂಹ ಕಟ್ಟಿಹಾಕುವುದು 1000 ರೂ. ಈ ಮಾತನ್ನು ಸುದ್ದಿ ಸಂಪಾದಕರು ತಮಾಷೆಗೆ ಹೇಳಿದರೋ ಅಥವಾ ನಿಜವೋ ತಿಳಿಯದೇ ನಾನು ಅವಕ್ಕಾದೆ.

ತಿಂಗಳು ಕಳೆಯಿತು. ಒಂದನೆಯ ತಾರೀಖು ಸಂಬಳದ ಖುಷಿಯಿಂದ ಆಫೀಸಿಗೆ ಹೋದೆ. ಸಂಜೆಯಾದರೂ ಸಂಬಳದ ಸುಳಿವಿಲ್ಲ.

ಸುದ್ದಿ ಸಂಪಾದಕರ ಬಳಿ "ಇವತ್ತು ಸಂಬಳ.." ಎಂದು ಮೆಲ್ಲನೆ ಉಸುರಿದೆ. ಅವರು ಗಹಗಹಿಸಿ ನಕ್ಕುಬಿಟ್ಟರು. "ನಮ್ಮ ಅದೃಷ್ಟ ಚೆನ್ನಾಗಿದ್ದರೆ ಎಂಟಕ್ಕೋ ಹತ್ತಕ್ಕೋ ಬರುತ್ತೆ" ಎಂದರು. ಸಂಬಳಕ್ಕೆ ನಿಗದಿಯಾದ ದಿನ ಇರಲೇ ಇಲ್ಲ. ನಾವು ಪ್ರತಿ ತಿಂಗಳೂ ಹತ್ತನೆಯ ತಾರೀಕಿನವರೆಗೆ ತಾಳ್ಮೆಯಿಂದ ಕಾಯುತ್ತಿದ್ದೆವು. ಹತ್ತನೆಯ ತಾರೀಖು ಸಂಜೆ, ಸಂಬಳ ಕೊಡುವವರೆಗೆ ಕೆಲಸ ಮಾಡುವುದಿಲ್ಲ, ಎಡಿಷನ್ ತರುವುದಿಲ್ಲ" ಎಂದು ಸಂಪಾದಕೀಯ ವಿಭಾಗದವರೂ ಮುದ್ರಣಾಲಯದ ವಿಭಾಗದವರು ಆಫೀಸ್ ಮುಂದೆ ಧರಣಿ ಕೂರುತ್ತಿದ್ದೆವು.

ಆಗ ಅಯ್ಯ ಓಡಿ ಬರುತ್ತಿದ್ದರು. ಅಯ್ಯ ಆಫೀಸ್ ಮ್ಯಾನೇಜರ್. “ಸಾಹುಕಾರ್ ಹತ್ತಿರ ಮಾತಾಡ್ತೀನಿ, ಕೆಲಸ ನಿಲ್ಲಿಸಬೇಡಿ” ಎಂದು ಗೋಗರೆಯುತ್ತಿದ್ದರು. ನಾವು ಜಗ್ಗುತ್ತಿರಲಿಲ್ಲ. ಅಯ್ಯನವರು ಸಾಹುಕಾರರ ಹತ್ತಿರ ಮಾತನಾಡಿ ಅಂದು ಸಂಬಳ ಖಾತ್ರಿ ಎಂದಾಗುವವರಗೆ ನಮ್ಮ ಮುಷ್ಕರ ನಿಲ್ಲುತ್ತಿರಲಿಲ್ಲ. ಭರವಸೆಯ ನಂತರ ಡಾಕ್ ಎಡಿಷನ್ ತಯಾರಿ. ಡಾಕ್ ಎಡಿಷನ್ ಮುಗಿದರೂ ಅಯ್ಯನವರ ಪತ್ತೆಯಾಗುತ್ತಿರಲಿಲ್ಲ. ಕೊನೆಗೊಮ್ಮ ಒಂಬತ್ತು ಗಂಟೆ ಹೊತ್ತಿಗೆ ಕೈಯಲ್ಲಿ ಚರ್ಮದ ಚೀಲ ಹಿಡಿದು ಅಯ್ಯನವರು ಪ್ರತ್ಯಕ್ಷರಾಗುತ್ತಿದ್ದರು. ಸಂಬಳ ಬಟವಾಡೆ ಮಾಡುತ್ತಿದ್ದರು. ಒಂದೊಂದು ತಿಂಗಳು ಹನ್ನೆರಡನೆಯ ತಾರೀಕು ರಾತ್ರಿ ಹತ್ತು ಗಂಟೆವರಗೂ ಸಂಬಳಕ್ಕೆ ಕಾಯಬೇಕಿತ್ತು.

ನಮಗೆ ಕೊಡುತ್ತಿರುವ ಸಂಬಳ ಕಡಿಮೆ ಅದನ್ನು ಹೆಚ್ಚಿಸಬೇಕು ಎಂದು ಒಂದು ದಿನ ನಾವೆಲ್ಲ ಅಯ್ಯನವರಲ್ಲಿ ಮನವಿ ಮಾಡಿದೆವು. ಈಗಿರುವ ಸಂಬಳವೇ ಕೈಗೆ ಬರುವುದು ಖಾತ್ರಿ ಇಲ್ಲದಿರುವಾಗ, ಸಂಬಳ ಹೆಚ್ಚಳದ ಹಗಲುಗನಸು ಕಾಣುತ್ತಿದಾರೆ ಎಂದು ನಮ್ಮಲ್ಲೇ ಕೆಲವರು ಗೇಲಿ ಮಾಡಿದರು. ಅಯ್ಯನವರು ಸಾಹುಕಾರರಿಗೆ ನಮ್ಮ ಮನವಿ ಮುಟ್ಟಿಸಿದರು. ನಮಗೆ ಈಗ ಕೊಡುತ್ತಿರುವ ಸಂಬಳವೇ ಜಾಸ್ತಿ ಎಂಬುದು ಆಡಳಿತ ವರ್ಗದ ಅಭಿಪ್ರಾಯವಾಗಿತ್ತು. ಯಾರು ಎಷ್ಟೆಷ್ಟು ಕೆಲಸ ಮಾಡುತ್ತಾರೆ ಎಂದು ಸಾಹುಕಾರರರು ತಿಳಿಯ ಬಯಸಿದರು. ಸಂಪಾದಕೀಯ ವಿಭಾಗದಲ್ಲಿ ವರದಿಗಾರರು, ಉಪ ಸಂಪಾದಕರುಗಳ ಕೆಲಸದ ಪ್ರಮಾಣ ತಿಳಿಯಲು ಆಡಳಿತ ವರ್ಗ ಒಂದು ಉಪಾಯ ಮಾಡಿತು. ಇದು ಯಾರ ಕಲ್ಪನೆಯೋ ಆಗ ತಿಳಿಯಲಿಲ್ಲ.

ವರದಿಗಾರರು/ಉಪಸಂಪಾದಕರು ಬರೆದ ಸುದ್ದಿಗಳ ಪ್ರೂಫನ್ನು ಪ್ರತ್ಯೇಕ ಗ್ಯಾಲಿಯಲ್ಲಿ ತೆಗೆಯಬೇಕು. ಈ ಗ್ಯಾಲಿಗಳಿಗೆ ಬರೆದವರ ಹೆಸರಿನ ಮುದ್ರೆ ಒತ್ತಿ ಆ ಗ್ಯಾಲಿಗಳನ್ನು ಅಯ್ಯನವರ ಮೂಲಕ ಸಾಹುಕಾರರಿಗೆ ತಲುಪಿಸಬೇಕು ಎಂದು ಸುದ್ದಿ ಸಂಪಾದಕರಿಗೆ ಫರ್ಮಾನು ಬಂತು. ನಮ್ಮೆಲ್ಲರಿಗೂ ನಮ್ಮ ಇನ್‍ಶಿಯಲ್ ಗಳನ್ನು ಕೆತ್ತಿದ ರಬ್ಬರ್ ಸ್ಟಾಂಪುಗಳನ್ನು ನೀಡಲಾಯಿತು. ಪತ್ರಿಕೆಗೆ ಹೋಗತ್ತೋ ಬಿಡುತ್ತೋ ಎಂದು ಯೋಚಿಸದೆ ಪಿಟಿಐ ನ ಎಲ್ಲ ಸುದ್ದಿಗಳನ್ನೂ ಪೈಪೋಟಿಯಿಂದ ಭಾಷಾಂತರಿಸುವ ಉಮೇದು ಶುರುವಾಯಿತು. ವರದಿಗಾರರೂ ಎಲ್ಲ ಸಮಾರಂಭಗಳಿಗೂ ಎಡೆತಾಕಲಾರಂಭಿಸಿದರು.

ಸಾಮಾನ್ಯವಾಗಿ 'ನಗರದಲ್ಲಿ ಇಂದು' ಬರೆಯುವ ಕೆಲಸವನ್ನು ಕಬ್ ರಿಪೋರ್ಟರ್ ಗೆ ವಹಿಸಲಾಗುತ್ತಿತ್ತು. ಹಿ ಮ ನಾಗಯ್ಯನವರು ಮುಖ್ಯ ವರದಿಗಾರರಾಗಿದ್ದರು. ʼನಗರದಲ್ಲಿ ಇಂದು’ವನ್ನು ಅವರೇ ಬರೆಯಲಾರಂಭಿಸಿದರು. ಎಲ್ಲರಿಗೂ ಗ್ಯಾಲಿ ಬೆಳೆಸುವ ಆತಂಕ.

ನಾಗಯ್ಯನವರು ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದರು, ಕಾಂಗ್ರೆಸ್ ಪಕ್ಷದಿಂದ ನಿಂತು ಕಾರ್ಪೊರೇಟರ್ ಆಗಿದ್ದರು.

September 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್,...

ಕಾಲದಾ ಕನ್ನಡಿ

ಕಾಲದಾ ಕನ್ನಡಿ

ವಿಜಯಾ ಮೋಹನ್ ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ...

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಜಿ ಟಿ ನರೇಂದ್ರ ಕುಮಾರ್ ರಾಷ್ಟ್ರಕವಿ ಕುವೆಂಪು ರವರು ಮೈಸೂರಿನಲ್ಲಿ ಸ್ವತಃ ಕಟ್ಟಿಸಿದ ಬಾಳಿ ಬದುಕಿದ ಮನೆ. ಈ ಮನೆಗೆ ಸರ್ವೋದಯ ಚಳುವಳಿಯ...

2 ಪ್ರತಿಕ್ರಿಯೆಗಳು

 1. Palahalli R Vishwanath

  ನಮಸ್ಕಾರ. ನನಗೆ ‘ ತಾಯಿನಾಡು’ ಪತ್ರಿಕೆಯ್ ಬಗ್ಗೆ ೧೯೫೭ರ್ ನ್ಂತರ್ ಎನಾಯಿತು ಎಂದು ಹೆಚ್ಚು ಗೊತ್ತಿಲ್ಲ. ನಿಮ್ಮ ಲೇಖನದಿಂದ ಸ್ವಲ್ಪ ಮಾಹಿತಿ ಸಿಕ್ಕಿತು. ಧನ್ಯವಾದ್ಗಳು. ಅವದಿಯಲ್ಲಿ ಕೆಲವು ತಿಂಗಳುಗಳ ಹಿಂದೆ ‘ ದಿವಾನರು ಮತ್ತು ಸಂಪಾದಕರು’ ಎಂಬ ಲೇಖನ್ ಬರೆದಿದ್ದೆ. ಸಮಯವಿದ್ದಾಗ ಓದಬಹುದು. ಧನ್ಯವಾದಗಳು — ಪಾಲಹಌ ವಿಶ್ವನಾಥ್ಬ್

  ಪ್ರತಿಕ್ರಿಯೆ
 2. ಸಿ. ಎನ್. ರಾಮಚಂದ್ರನ್

  ಪ್ರಿಯ ರಂಗನಾಥ್ ಅವರಿಗೆ:
  ನಮಸ್ಕಾರ. ನಿಮ್ಮ ಮೂರೂ ಅಂಕಣಗಳನ್ನು ಓದಿ ಈ ಪ್ರತಿಕ್ರಿಯೆ: ಒಂದೇ ಮಾತಿನಲ್ಲಿ ಹೇಳುವುದಾದರೆ, ನಿಮ್ಮ ಪ್ರತಿ ಅಂಕಣವೂ ಪತ್ರಿಕೋದ್ಯಮದ ಚರಿತ್ರೆಯಾಗಿ, ಪತ್ರಕರ್ತನ ಪ್ರಾರಂಭಿಕ ಹಂತದ ದಾಖಲೆಯಾಗಿ, ತುಂಬಾ ಕುತೂಹಲಕರವಾಗಿದೆ, ರೋಚಕವಾಗಿದೆ. ಇಂದಿರಾತನಯರ (ಅವರ ನಿಜವಾದ ಹೆಸರು ನಿಮ್ಮ ಅಂಕಣ ಓದಿದಮೇಲೆಯೇ ಗೊತ್ತಾಯಿತು) “ಮಂತ್ರಶಕ್ತಿ” ಇತ್ಯಾದಿ ತ್ರಿವಳಿ ಕಾದಂಬರಿಗಳನ್ನು ಓದಿ ಮತ್ತೊಂದು ಭ್ರಮಾಲೋಕಕ್ಕೆ ಹೋಗಿದ್ದು ನಾನೊಬ್ಬನೇ ಅಲ್ಲ, ನೀವೂ ಕೂಡಾ ಎಂದು ತಿಳಿದು ಸಂತೋಷವಾಯಿತು. ಯಾವುದು ಮೊದಲು ಎಂಬುದು ಮರೆತುಹೋಗಿದೆ; ಅನಕೃ ಅವರೂ ಅಪರೂಪಕ್ಕೆ ಇಂತಹುದೇ ಒಂದು ಕಾದಂಬರಿ ಆಗ ಬರೆದಿದ್ದರು. ಸಾಹಿತ್ಯಕ-ಚಾರಿತ್ರಿಕ ಸಂಗತಿಗಳನ್ನು ಬಹಳ ಸಮರ್ಪಕವಾಗಿ ಬೆಸೆದಿದ್ದೀರಿ. ನಿಮ್ಮ ಅಂಕಣಕ್ಕಾಗಿ ಪ್ರತಿ ಗುರುವಾರವನ್ನೂ ಎದುರು ನೋಡುತ್ತಿರುತ್ತೇನೆ. ರಾಮಚಂದ್ರನ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: