ʼಬಸವಣ್ಣನ ಗುಡ್ಡೆʼ

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ,  ರಂಗಭೂಮಿ,  ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ.  ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು: ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ:

ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ:

(ಆಯ್ದಕ್ಕಿ ಲಕ್ಕಮ್ಮ)

ಆಚರಣೆಗಳು ಸಂಸ್ಕೃತಿಯ ಭಾಗವಾಗಿ ಚಲಿಸುತ್ತ ಊರೂರುಗಳಲ್ಲು ಪರಂಪರೆಯ ಜಾಡುಗಳನ್ನು ರೂಪಿಸುವ ಮೂಲಕವೇ ದೇವರೆಂಬ ಭೌತಿಕವಲ್ಲದ ನೆಲೆಗೆ ಜೀವದಾನ ಮಾಡಿಕೊಂಡು ಕಾಲವನ್ನು ತಮ್ಮದೇ ಹಿಡಿತದ ಜೀವಿ ಎಂಬಂತೆಯೇ ಭಾವಿಸಿಕೊಳ್ಳುವುದು ಹೊಸದಲ್ಲ.

ನನ್ನೂರು ಅನೇಕ ಪರ್ಸೆಗಳ ಆಚರಣೆಯಲ್ಲಿ ತನ್ನದೇ ಕುರುಹುಗಳನ್ನು ನೆಯ್ದುಕೊಂಡು ನಮಗೆಲ್ಲ ಭಿನ್ನ ಅನುಭೂತಿಗಳನ್ನು ಕಾಣಿಸಿದೆ. ಬಹುತ್ವವೇ ಬಾಳು ಎಂಬಂತೆ ಸುತ್ತಲಿನ ಸಮೀಪದ ಊರುಗಳಲ್ಲಿ ನಡೆಯುವ ಎಲ್ಲಾ ಪರ್ಸೆಗಳು ನಮ್ಮವೇ ಆಗಿ ಹಲವು ನೇಮ ಮಾಡಿಕೊಂಡು ಬೆಳೆದೆವು.

ನನ್ನ ಊರಿನೊಂದಿಗೆ ನಂಟು ಬೆಳೆಸಿದ ಅನೇಕ ಸಮೀಪದ ಗ್ರಾಮಗಳಲ್ಲಿ ಬಿಜ್ಜಿಂಬೆಳ್ಳ ಅನ್ನೋ ಗ್ರಾಮವಿದೆ. ಇಲ್ಲಿಯೂ ಸಣ್ಣದೊಂದು ಅಡವಿ ಕುಡಿಯೊಡೆದು ಹಬ್ಬಿ ಹಸಿರಾಗಿ ಅರಳಿದೆ. ಇದನ್ನು ಬಿಜ್ಜಿಂಬೆಳ್ಳ ಕಾವಲು ಎಂದೇ ಕರೆಯುವುದು ವಾಡಿಕೆ. ಇದೇ ಕಾವಲಿನಲ್ಲಿ “ಬಸವನ ಗುಡ್ಡೆ” ಇರುವುದು. ವರ್ಷಕ್ಕೆ ಒಮ್ಮೆ ದೀವ್ಣ್ಗೆ ಹಬ್ಬ ಬಂತೆಂದರೆ ಈ ಕಾವಲಿನಲ್ಲಿ ಪರ್ಸೆ ನಡೆಯುತ್ತದೆ. ಪೂರ್ವಜರು ನೆಲಭಾವದೊಳಗೆ ಕಟ್ಟಿ ಬೆಳೆಸಿದ ಹಲವು ಬಂಧಗಳು ಇಲ್ಲಿ ಉಸಿರೊಯ್ಯುತ್ತಿವೆ.

ಸ್ಥಳೀಯರು ಇಲ್ಲಿ ಬಸವನ ಗುಡ್ಡೆ ರೂಪುಗೊಂಡ ಕುರಿತಾಗಿ ಸ್ಮೃತಿಯೊಂದನ್ನು ಉಳಿಸಿದ್ದಾರೆ. ಹಿಂದೆ ಒಮ್ಮೆ ಕ್ಷಾಮ ಬಡಿದಾಗ ಜಾನುವಾರುಗಳ ಉಳಿವಿಗಾಗಿ ಹಾಲೇಗೌಡ ಎಂಬ ವ್ಯಕ್ತಿ ಗೂಡು ದನಗಳನ್ನು ಸಾಗಿಸಿಕೊಂಡು ಬಂದು ಈ ಗಿಡದಲ್ಲಿ ಗೂಡಾಕಿಕೊಂಡು ದನ ಮೇಯಿಸಿಕೊಂಡು ವಾಸವಿದ್ದರಂತೆ. ಸುತ್ತಲಿನ ಸಣ್ಣ ಬಿತ್ತರ ಹೊಂದಿದ ಕಾಡುಗಳಲ್ಲಿ ಗೂಡಾಕಿಕೊಂಡು ದನ ಉಳಿಸಿಕೊಳ್ಳಲು ಶ್ರಮಿಸಿದ ಹಾಲೇಗೌಡ ಇಲ್ಲಿದ್ದ ಜುಂಜಪ್ಪನಿಗೆ ಬಸವನನ್ನು ಬಿಟ್ಟಿದ್ದುದಾಗಿ ಕಥೆ ಇದೆ. ದನಕರುಗಳ ಮೇವಿಗಾಗಿ ವಲಸೆ ಬಂದ ಇವರು ಒಂದಷ್ಟು ಕಾಲ ವನದಲ್ಲಿದ್ದು ಕ್ರಮೇಣ ಬಸವ ಮತ್ತು ಒಡೆಯ ಇಬ್ಬರೂ ಗತಿಸಿ ಅವರಿಬ್ಬರ ಗುಡ್ಡೆಗಳನ್ನು ನಿರ್ಮಿಸಲಾಗಿದೆ. ಜುಂಜಪ್ಪನಿಗೆ ಬಿಟ್ಟ ಬಸವನಿಗೂ ಇಲ್ಲಿ ಪೂಜೆ ಸಲ್ಲುತ್ತದೆ.

ಜುಂಜಪ್ಪನಿಗೆ ದೀವ್ಣ್ಗೆ ಪರ್ವದ ಕಾಲಕ್ಕೆ ಪರ್ಸೆ ನಡೆಯುತ್ತದೆ. ಸಮುದಾಯ ಈ ಅಪ್ಪನಿಗೆ ಹರಕೆ ಸಲ್ಲಿಸಿ ನಡೆದುಕೊಳ್ಳುವ ಬಗೆಯೇ ವಿಶೇಷದ್ದು. ವರ್ಷವಿಡೀ ಉತ್ತು ಬಿತ್ತುವಾಗ ಮೀಸ್ಲು ಕಟ್ತರೆ. ಔಡ್ಲು ಗಿಡಕ್ಕೆ ಕೊಂಡ್ಲಿ ಉಳ ಬಿದ್ರೆ ಪಸ್ಲು ದಕ್ಕಲ್ಲ. ಆಗ ಮನೆಗಳಲ್ಲಿ ಸ್ವಾಮಿ ಜುಂಜಪ್ಪ ಉಳ್ಬೀಳ್ದಂಗೆ ಕಾಯ್ಕಳಪ್ಪ ಪಸ್ಲುನ; ನಿನ್ನ ಪರ್ಸೆ ನಡಿವಾಗ ಔಡ್ಲ ಅಳ್ದಾಕಿ ನಿನ್ನ ಋಣ ತೀರುಸ್ತೀನಿ ಅನ್ನೋ ಹರಕೆಗಳು ಹೆಚ್ಚು ಕಡಿಮೆ ಪ್ರತಿ ಮನೆಯಲ್ಲೂ ಇರುತ್ತವೆ.

ಪರ್ಸೆ ಬಂತೆಂದರೆ ನಾವು ಊರಿಗೆ ಆತುಕೊಂಡ ಮೀಸಲು ಅರಣ್ಯದ ಕಾಡಾದಿಯಲ್ಲಿ ನಡೆದೇ ಈ ಬಸವನ ಗುಡ್ಡೆಗೆ ಹೋಗ್ತಾ ಇದ್ವಿ. ಬೆಳಗಿನಿಂದ ಇಳಿಸಂಜೆಯವರೆಗೂ ಕಾನನದುದ್ದಕ್ಕೂ ಜನಸಂಚಾರ. ಎಲ್ಲರೂ ಪರ್ಸೆಯ ಅಮಲಿಡಿದವರೆ. ತಲೆಮೇಲೆ ಒಂದು ಔಡ್ಲುಗಂಟು ಇರ್ತಾ ಇತ್ತು. ಗುಡಿತಲ್ಪಿದ್ಮೇಲೆ ಔಡ್ಲುಸುರ್ದು ಹರಕೆ ತೀರ್ಸೋರು. ಬೈಗಾಗೋವತ್ಗೆ ಔಡ್ಲುರಾಶಿ ಬಿದ್ದಿರುತ್ತದೆ. ಜುಂಜಪ್ಪನ ಬಕುತರು ಕೊಟ್ಟ ಔಡ್ಲುಕಾಳು ಮಾರಾಟವಾಗಿಯೋ ಇಲ್ಲವೇ ಗಾಣಕ್ಕೆ ಹೋಗಿ ಎಣ್ಣೆಯಾಗಿ ಸೊಡರು ಬೆಳಗುವುದು.

ಇದಿಷ್ಟಕ್ಕೇ ಮುಗಿಯಲ್ಲ ಯಾತ್ರೆ. ಕಂಡಂಗೋ ಕಾಣ್ದಂಗೋ ಹೊಲಮನೆಗಳಲ್ಲಿ ಅಂಟ್ಮುಂಟು ಆದ್ರೆ ನೀನೇ ನೋಡ್ಕಳಪ್ಪ ನಿನ್ನಂಗ್ಲುಕೆ ಬಂದು ನೀನ್ಬಗ್ಸಿದ್ದು ಕೊಡ್ತಿವಿ ಅನ್ನೋ ಅರ್ಕೆಯು ಇರುತ್ತೆ. ನಾವು ಚಿಕ್ಕವರಿದ್ದಾಗ ಎಂಥದೋ ಒಂದು ಲೋಹವಾದರೂ ಸರಿ ಸಸ್ತ ಬೆಲೆಯ ಉರಗ, ಚೇಳು, ಮಂಡ್ರುಗಪ್ಪೆ, ಎಲ್ಲವನ್ನೂ ಮಾಡ್ಸಿ ಜುಂಜಪ್ಪನ ಸಂಘಬಿಟ್ಟು ಬರೋರು.

ಜಡಲೋಹಗಳು ಜೀವಂತ ಜೀವಿಗಳ ಹಾವಳಿ ತಡೆಯುತ್ತವೆಂಬ ವಿಶ್ವಾಸ ಇವತ್ತಿಗೂ ನಮ್ಮ ಭಾಗದಲ್ಲಿ ಉಳಿದಿದೆ. ಕಾಲಾಂತರದಲ್ಲಿ ಐಷಾರಾಮಿ ಪ್ರಜ್ಞೆಯ ಅರ್ಚಕರು ಬಂದ ಮೇಲೆ ರಜತದ್ದೋ,ಹೇಮದ್ದೋ ಹಾವು ಚೇಳು ಮಾಡ್ಸಾಕಿರೆ ಒಳಿತಾಗುತ್ತದೆ ಎಂಬ ಭ್ರಮೆ ಚೆಲ್ಲಿದ್ದಾರೆ. ಯಾರಂತೆ ಅಂದ್ರೆ ಊರಂತೆ ಅನ್ನೋ ಭ್ರಾಂತಿ ಹಿಡಿದು ಜನೊಂದು ಜನ್ವೆಲ್ಲ ಕೈಲಾಗ್ದಿದ್ರು ಬೆಳ್ಳಿ ಬಂಗಾರ್ದಿಂದೆ ಬಿದ್ದು ಸಾಲಸೋಲ ಮಾಡಿ ಉಳ ಮಾಡ್ಸಾಕೋ ಭೀತಿ ಆವರಿಸಿದೆ.

ದೇವರು ಇವತ್ತಿಗೆ ಜೀತವಾಗಿ, ಶೋಷಣೆಯಾಗಿ, ಆಕ್ರಮಣವಾಗಿ ಸಂಗ್ರಾಮಗಳ ಲಕ್ಷಣಕ್ಕೆ ರೂಪಾಂತರಗೊಂಡು ನಿಂತಿದ್ದಾನೆ. ಜನ ನಂಬಿ ನಿಲ್ಲುವ ನಂಬಿಕೆಯ ಸ್ಥಳಗಳು ಯಾರು ಯಾರದೋ ಕಡಿವಾಣಕ್ಕೆ ಸಿಕ್ಕಿ ಛಿದ್ರಗೊಂಡಿವೆ.

ಮುಗುದರಿಗೆ ದೈವದ ಹೆದರಿಕೆ ಹೊದಿಸಿ ಜೀತಜೀವಂತಕ್ಕೂ ಮುಂದಾದ ಜಮೀನ್ದಾರರು ಹೆಚ್ಚಾಗಿದ್ದಾರೆ. ನಮ್ಮ ನೆಲದ ಜುಂಜಪ್ಪನಾದರೂ ಇವುಗಳಿಂದ ಮುಕುತಿ ಹೊಂದಿ ಗುಂಪುಗೂಡುವ ಜನರೊಳಗೆ ತಿಳಿಯಾದ ಆನಂದ ಉಳಿಸುತ್ತಾನೆಂದರೆ ಪೂಜಾರಿಗಳ ಕೊಕ್ಕೆಯಲ್ಲಿ ಜಾಲಗಳಿವೆ. ಮನೆಮನೆಗಳಲ್ಲಿ ಜುಂಜಪ್ಪನ ಛಾಪು, ಕಾಯುವ ವಿಶ್ವಾಸಾರ್ಹತೆಯಾಗಿ ಇದ್ದದ್ದು ಈಗೀಗ ವಣಿಕರಿಗೆ ಮಾತ್ರ ಹೆಚ್ಚು ಲಾಭತರುವ ಮಾರುಕಟ್ಟೆಯಂತಾಗಿವೆ.

“ತೇರು ಪರ್ಸೆ ತಿಂದು ದೇವ್ರಿಗೆ ಕೈಯ್ಯಾಕಿರಂತೆ” ಅನ್ನೋ ಗಾಥಾದಂತೆ ಧರ್ಮವ್ಯಸನಿಗಳು ದೇವರನ್ನು ಮುಂದು ಮಾಡಿಕೊಂಡು ಏಕದಾಚರಣೆಗಳ ಅವಿವೇಕಕ್ಕೂ ಮೊದಲಾಗಿ ಬಹುತ್ವ ಪರಂಪರೆಗಳ ಮೆರುಗಿಗೆ ಗೆದ್ದಲಿಡಿಸುವುದು ತೀವ್ರ ಆಗ್ತಾ ಇರುವ ಹೊತ್ತಿಗೆ ಜುಂಜಪ್ಪ ಸಾಮಾನ್ಯರ ಭಾವನೆಯ ಆಚಾರಗಳಿಂದ ಹೊರನಡೆದಿದ್ದಾನೆ. ಕೊಟ್ಟು ತಂದ ಬಳಗವನ್ನೆಲ್ಲಾ ಊರಿಗೆ ತುಂಬಿಕೊಂಡು ಗಿಜ್ಗುಡ್ತಿದ್ದ ಮಣ್ಣೆಮಾರಿಯ ಪರ್ಸೆ ಮೀಡಿಯಾಗಳ ಅಬ್ಬರದ ಹಿಡಿತಕ್ಕೊಲಿದು ಶಹರದ ಜನಗಳನ್ನು ತುಂಬಿಕೊಳ್ತ ಭ್ರಮೆ ಮೆತ್ತಿವೆ.

ಗೂಡಿನ ದನಗಳ ಉಳಿವಿಗಾಗಿ ಕಾಡಿನ ಆಸರೆ ಪಡೆದ ಹಾಲೇಗೌಡ ಕಳುವರಳ್ಳಿಯಿಂದ ಬಂದ ಜುಂಜಪ್ಪನ ಹೆಸರಿನಲ್ಲಿ ಬಿಟ್ಟ ಬಸವನನ್ನು ತನ್ನೊಡಗೂಡಿದ ಎಲ್ಲಾ ದನಗಳನ್ನು ಸಲಹಿ ಬಾಳುಮುಗಿದ ಕಾಲಕ್ಕೆ ಪೂಜುವ, ಸಹಜಾನಂದಗಳ ಪರ್ಸೆ ಹುಟ್ಟಿ ದಿನ್ಪರ್ತಿ ಮೇಲೆ ಇದೇ ಬಸವ ಜುಂಜಪ್ಪನಿಗೆ ಹೊನ್ನಿನ ಹೊಂಬಾಳೆ, ಹೊನ್ನಿನದೇ ಕಳಸಗಳು ಬಂದು ವೈಭವವಿಡಿದು ಎಲ್ಲವೂ ಅದಲುಬದಲಾಗಿವೆ. ದೇವಾನುದೇವತೆಗಳಿಗೆಲ್ಲ ಬಂಗಾರದ ಮಾಯೆಯಿಡಿಸಿದವರ ಗುಂಪು ದೊಡ್ಡದಾಗುತ್ತಿದೆ.

ಹುಡುಕುತ್ತಿರುವೆ ಎಲ್ಲವನು ಚೆಲ್ಲಿ ಬೆಳೆದ ಹಸಿರಲ್ಲಿ
ನಿಟ್ಟುಸಿರುಬಿಡಲು
ಸಿಕ್ಕುತ್ತಿಲ್ಲ, ಸಿಕ್ಕಿದರೂ…..
ಇಂಚಷ್ಟೇ ಹಸನು
ತಳಕೆಲ್ಲ ಹಾಸುಬಂಡೆ!

(ಎನ್.ಕೆ.ಹನುಮಂತಯ್ಯ)

January 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್,...

ಕಾಲದಾ ಕನ್ನಡಿ

ಕಾಲದಾ ಕನ್ನಡಿ

ವಿಜಯಾ ಮೋಹನ್ ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ...

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಜಿ ಟಿ ನರೇಂದ್ರ ಕುಮಾರ್ ರಾಷ್ಟ್ರಕವಿ ಕುವೆಂಪು ರವರು ಮೈಸೂರಿನಲ್ಲಿ ಸ್ವತಃ ಕಟ್ಟಿಸಿದ ಬಾಳಿ ಬದುಕಿದ ಮನೆ. ಈ ಮನೆಗೆ ಸರ್ವೋದಯ ಚಳುವಳಿಯ...

5 ಪ್ರತಿಕ್ರಿಯೆಗಳು

 1. ರೇಣುಕಾ ರಮಾನಂದ

  ಅದೆಷ್ಟು ಸುಪುಷ್ಟವಾಗಿ ಭಾಷೆ,ಸಂಗತಿಯನ್ನು ಬಳಸಿ ಬರೆಯುತ್ತೀರಿ ಮೇಡಂ..ನಿಮ್ಮ ಅಂಕಣವನ್ನು ಒಂದೂ ಬಿಡದೆ ಓದುತ್ತೇನೆ ನಾನು.. ಪೂರ್ವಜರು ಬೆಳೆಸಿದ ಹಲವು ಬಂಧಗಳು,ಪರಂಪರೆಯ ಜಾಡುಗಳು ಇಂದು ಹೇಗೆ ಕುಲಗೆಟ್ಟು ಹೋಗಿವೆ ಎಂಬುದನ್ನು ಅದೆಷ್ಟು ಸರಿಯಾಗಿ ಹೇಳಿದ್ದೀರಿ

  ಪ್ರತಿಕ್ರಿಯೆ
 2. ಗೀತಾ ಎನ್ ಸ್ವಾಮಿ

  ಧನ್ಯವಾದಗಳು ರೇಣುಕಾ ಮೇಡಂ ನಿಮ್ಮ ಪ್ರೀತಿಯ ಓದಿಗೆ… ಬೆಂಬಲಕ್ಕೆ.
  ಮೋಹನ್ ಸರ್ ಗೆ ಎಲ್ಲಾ ಸಲ್ಲಬೇಕು ಮೇಡಂ. ಮೊದಲಿಗೆ ಅಮ್ಮನಂತೆ ಬೆಂಬಲಿಸಿ ನನ್ನಿಂದ ಬರೆಸಿದರು ಮೇಡಂ.

  ಪ್ರತಿಕ್ರಿಯೆ
 3. Shruthi Shivakumar

  ನಿಮ್ಮ ಅನಂತ ಶಿಷ್ಯರ ಬಳಗದಲ್ಲಿ , ನಾನು ಒಬ್ಬಳು।
  ಕನ್ನಡ ಭಾಷೆಯ ಮೇಲೆ ನಿಮಗಿರುವ ಒಲವು ಎಷ್ಟೋ ಜನರಿಗೆ ಸ್ಪೂರ್ತಿ।

  ಈ ಅಂಕಣ ಓದಿದವರಿಗೆ ಒಂದು ವಿಹಾರವು ಖಂಡಿತ।
  ಭಾಷೆಯ ಪ್ರಯೋಗ ಹಾಗು ಸನ್ನಿವೇಶಗಳ ವಿವರಣೆ ನಮ್ಮೆಲರನ್ನು ಪರೋಕ್ಷವಾಗಿ ಅಲ್ಲಿಗೆ ಕರೆದುಕೊಂಡು ಹೋದಂತಿದೆ।

  ಪ್ರತಿಕ್ರಿಯೆ
 4. N.Ravikumar telec

  ಗತಪರಂಪರೆಯ ಮನನ. ಮುಂದಿನ ಪೀಳಿಗೆಗೆ ಜ್ಞಾನಬುತ್ತಿಯ ಬರಹ

  ಪ್ರತಿಕ್ರಿಯೆ
 5. Vidyadhare

  ನಿಮ್ಮ ಕನ್ನಡ ಓದೋದೆ ಒಂದು ಸಿರಿ ಗುರುಗಳೇ… ನಿಮ್ಮ ಮಾತಲ್ಲಿ ಸಂದರ್ಭದ ವಿವರಣೆ ಹೇಗಿದೆ ಅಂದರೆ, ಇಲ್ಲೇ ಎಲ್ಲೋ ನನ್ನ ಸುತ್ತ ಪರ್ಸೆ ನಡೀತಿದೆ ಅನ್ನಿಸುತ್ತೆ… ನಿಮ್ಮ ಅಂಕಣ ಓದುವಾಗ ಪ್ರತಿ ದಿನದ ಜೀವನನು ಎಷ್ಟೋ ಸಂಭ್ರಮ ಅನ್ನಿಸುತ್ತೆ.

  ನೀವು ಹೇಳಿರುವ ರೀತಿ ನಿಜಕ್ಕೂ ಎಷ್ಟೋ ಆಚರಣೆಗಳು, ಸಂಪ್ರದಾಯಗಳು ವ್ಯಾವಹಾರಿಕ ರೂಪ ತಾಳಿ ತನ್ನ ತನವನ್ನೇ ಕಳೆದುಕೊಂಡು ರೂಪಾಂತರಗೊಂಡ, ತನ್ನ ಮುಖ್ಯ ಉದ್ದೇಶವನ್ನೇ ಕಳೆದುಕೊಂಡಿವೇ.
  ಆದರೆ ನಿಮ್ಮ ಈ ತರಹದ ಬರೆವಣಿಗೆಯ ಮೂಲಕ ಸ್ವಲ್ಪ ನೈಜತೆ ಬಗ್ಗೆ ಜನರ ನೆನಪು ಉಳಿಯಲಿ. ಈ commercialisation ಬರದಲ್ಲಿ, ಕಳೆದು ಹೋಗಿರೋ ರೂಡಿ ಕನ್ನಡ ನಿಮ್ಮ ಇನ್ನು ಹೆಚ್ಚು ಹೆಚ್ಚು ದಿನ ಬಳಕೆ ಕನ್ನಡ ನಿಮ್ಮ ಈ ಲೇಖನಗಳಿಂದ ಜನರ ಮನದಲ್ಲಿ ತಮ್ಮ ಹಳೇ ದಿನಗಳ ನೆನಪು ತರಲಿ.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ರೇಣುಕಾ ರಮಾನಂದCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: