ಅಂಗಕೆ ರಂಗದು ಮೆತ್ತಿದವೆಂದರೆ . .

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು.

ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು.

ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು ಕೇಳುಗರಿಗೆ ಒಂದು ರೀತಿಯ ಕಾಲಕೋಶ.

ಈ ಹಾಡುಗಳ ಸಿ ಡಿ ಯನ್ನು ‘ಲಹರಿ’ ಹಾಗೂ ‘ಅವಧಿ’ ಜಂಟಿಯಾಗಿ ಹೊರತಂದಿದೆ. ಈಗ ಸಿರಿ ಪಾದ ಹೆಸರಿನಲ್ಲಿ ಶ್ರೀಪಾದ್ ಭಟ್ ತಮ್ಮ ವಿಶೇಷ ರಂಗ ಅನುಭವವನ್ನು ಮುಂದಿಡಲಿದ್ದಾರೆ.

ಯಾವುದೇ ಸಂಸ್ಥೆಯಿರಲಿ ಅಲ್ಲಿ ರಂಗಭೂಮಿಯ ಆಸಕ್ತಿ ಹೊಂದಿದ ಒಬ್ಬರಿದ್ದರೆ ಸಾಕು ಇಡಿಯ ವಾತಾವರಣವೇ ಬದಲಾಗಲಾರಂಭಿಸುತ್ತದೆ. ಅದು ರಂಗಭೂಮಿಯ ಸ್ವಭಾವ. ಏಕೆಂದರೆ ರಂಗಭೂಮಿಯ ಅಭಿವ್ಯಕ್ತಿಯ ಸ್ವರೂಪದಲ್ಲಿಯೇ ಬಹುತ್ವವಿದೆ.  ಆಸಕ್ತಿ ಇರುವ ಒಬ್ಬರಿದ್ದರೆ ಸಾಕು ಅವರ ಜತೆ ಸಮಾನ ಮನೋಭಾವದ ಭಿನ್ನ ಭಿನ್ನ ಕೌಶಲದ ಸಮೂಹವೇ ಆ ವಾತಾವರಣದಲ್ಲಿ ಹೊಸ ಉಸಿರು ಸೇರಿಸಲು ಆರಂಭಿಸುತ್ತವೆ. ಹಲವು ಭಿನ್ನ ಭಿನ್ನ ರುಚಿಗಳ ಸಮಾರಾಧನೆಗೆ ನೆಲ ಸಜ್ಜಾಗಿಬಿಡುತ್ತದೆ. ಅದರ ಅಂಗಗಳಿಗೆ ರಂಗು ಮೆತ್ತಿಕೊಳ್ಳಲಾರಂಭಿಸುತ್ತದೆ.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಅದ್ಯಾಪಕರಾಗಿರುವ ಕಾವ್ಯ, ನಾಟಕಗಳ ಒಲವಿನ ಖ್ಯಾತ ವಿಮರ್ಶಕ ಡಾ.ಕೇಶವಶರ್ಮ ಅವರು ಯಕ್ಷಗಾನ, ತಾಳಮದ್ದಲೆಯ ಪ್ರಸಿದ್ಧ ಕಲಾವಿದರೂ ಹೌದು. ನಮ್ಮಿಬ್ಬರಲ್ಲಿ ಸಮಾನವಾಗಿರುವ ನಾಟಕ ಹಾಗೂ ಯಕ್ಷಗಾನಗಳ ಸಹಬಾಳ್ವೆಯ ಸಹಜಶೀಲ ಗುಣಗಳಿಂದಾಗಿ ನಾನವರ ಮನೆಯಲ್ಲಿ ನಿಯಮಿತ ಅತಿಥಿ ಆದೆ.

ಅವರ ಆಸ್ಥೆಯ ಕಾರಣದಿಂದಾಗಿ ವಿಶ್ವವಿದ್ಯಾನಿಲಯದಲ್ಲಿ ನಾಟಕ ಚಟುವಟಿಕೆ ಆರಂಭವಾಯಿತು. ಮೊದಮೊದಲು ಕನ್ನಡವಿಭಾಗದ ವಿದ್ಯಾರ್ಥಿಗಳಿಗೆ ಅಂತ ಶುರುವಾದ ನಮ್ಮ ನಾಟಕ ಚಟುವಟಿಕೆ ಕ್ರಮೇಣ ವಿಶ್ವವಿದ್ಯಾಲಯದ ಉಳಿದ ವಿಷಯ ವಿಭಾಗಗಳ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಕಾರಣದಿಂದಾಗಿ ವಿಸ್ತಾರವನ್ನೂ ಪಡೆಯಿತು. ನಾಟಕ ಆಡಿಸಲು ಬಂದ ನಾನು ಮತ್ತು ನನ್ನೊಡನೆ ಬಂದ ರಂಗಪರಿವಾರವೆಲ್ಲ ಉಳಿಯುವದು, ಉಣ್ಣುವದು ಅವರ ಮನೆಯಲ್ಲಿಯೇ.

ಅವರ ಸಂಗಾತಿ ಸಬಿತಾ ಬನ್ನಾಡಿಯವರು ಪಠ್ಯಚರ್ಚೆ, ವಿಮರ್ಶೆ ಎಲ್ಲಕ್ಕೂ ನಮಗೆ ನೆರವಾಗುತ್ತ  ಭೌತಿಕ, ಬೌದ್ಧಿಕ ಅನ್ನದಾತೆಯಾಗಿಬಿಟ್ಟಿದ್ದರು. ಅವರ ಮಕ್ಕಳಾದ ನಹುಶ, ನಿಯತಿ ನಮ್ಮ ಮೊದಲ ನಟರು ಮತ್ತು ಪ್ರೇಕ್ಷಕರೂ ಆಗಿರುತ್ತಿದ್ದರು. ವಿಶ್ವವಿದ್ಯಾಲಯದ ಆವರಣದಲ್ಲಿಯ ಎನ್.ಎಸ್.ಎಸ್.ರೂಮಿನಲ್ಲಿಯೋ ಅಥವಾ ಮರಗಳ ಕೆಳಗೋ ರಿಹರ್ಸಲ್‍ಗಳು ನಡೆದರೆ, ಅಧ್ಯಯನ ವಿಭಾಗದ ಅಂಗಳ, ಕಾರಿಡಾರ್ ಅಥವಾ ಇಂಡೋರ್ ಸ್ಟೇಡಿಯಮ್ ಹೀಗೆ ಹಲವು ಕಡೆಗಳಲ್ಲಿ ರಂಗ ಪ್ರದರ್ಶನಗಳು  ನಡೆಯುತ್ತಿದ್ದವು.

ನಮಗೆ ಎಲ್ಲ ತಾಣವೂ ರಂಗತಾಣವೇ! ಸಿದ್ಧ ಮಾದರಿಯ ಸ್ಥಳ ಇಲ್ಲದಿದ್ದಷ್ಟೂ ಕಲ್ಪನೆಗಳಿಗೆ ಒಳ್ಳೆಯ ‘ತಾವು’ ಸಿಗುವುದು, ಒತ್ತಡವಿದ್ದಷ್ಟೂ ಅರಳಿಕೊಳ್ಳುವದು ರಂಗಭೂಮಿಯ ಗುಣವಿಶೇಷವೇ ಆಗಿವೆ. ಮೂರು ಮೆಟ್ಟಿಲ ಕತೆ, ಬದುಕು ಬಂಧೀಖಾನೆ, ಪುರೂರವ ಊರ್ವಶಿ, ಹೇಳಿನೀವ್ಯಾರ ಕಡೆ, ಮಹಾಭಾರತ, ಹೀಗೆ ಹಲವು ನಾಟಕಗಳು ಅಲ್ಲಿ ಮೈತಾಳಿದವು ಮತ್ತು ಅಲ್ಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರು ಪ್ರಯೋಗ ಕಂಡವು. ಸರಿ ರಾತ್ರಿಯಲ್ಲಿ ಕ್ಯಾಂಪಸ್ಸಿನ ರಸ್ತೆಗಳ ಮೇಲೆ ತಮಟೆ ಹೊಡೆಯುತ್ತ ‘ ನಾವು ಬೆವರನು ಸುರಿಸಿ ..’ ಎನ್ನುತ್ತ ವಿದ್ಯಾರ್ಥಿನಟರು ಹಾಡುತ್ತಿದ್ದರೆ ವಿಶ್ವವಿದ್ಯಾಲಯದ ಅಂಗಾಂಗ ಪುಳಕಗೊಂಡಿರುತ್ತಿದ್ದವು.

ಇಂತಹ ದಿನಗಳಲ್ಲಿಯೇ ಕುವೆಂಪು ಜನ್ಮಶತಮಾನೋತ್ಸವ ವರ್ಷ ನಮಗೆ ಒದಗಿಬಂದಿದ್ದು. ಆಗ ಕುವೆಂಪು ಅವರ ಅಳಿಯ ಚಿದಾನಂದ ಗೌಡರು ವಿಶ್ವವಿದ್ಯಾಲಯದ ಉಪಕುಪತಿಗಳಾಗಿದ್ದರು ಮತ್ತು ಆ ಕಾರಣದಿಂದಾಗಿ ಕುವೆಂಪುರವರ ಮಗಳಾದ ತಾರಿಣಿಯವರೂ ನಮಗೆ ಕಾಣಸಿಕ್ಕರು. ವಿಶ್ವವಿದ್ಯಾಲಯದಿಂದ ನಾಟಕವೊಂದನ್ನು ಸಿದ್ಧಪಡಿಸುವುದೆಂತಲೂ ಮತ್ತು ಅದನ್ನು ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಟ್ಟ ಕಾಲೇಜುಗಳಲ್ಲಿ ಪ್ರಯೋಗಮಾಡುವುದೆಂತಲೂ ತೀರ್ಮಾನವಾಯಿತು.

ಕನ್ನಡದ ಕನ್ನಡಿಯಲ್ಲಿ ವಿಶ್ವವನ್ನು ಕಾಣಿಸಹೊರಡುವ ಕುವೆಂಪು ಕಾವ್ಯಪ್ರತಿಮೆಗಳನ್ನು ದೃಶ್ಯಪ್ರತಿಮೆಯಾಗಿ ಓದಹೊರಡುವ ರಂಗಪ್ರಯೋಗವನ್ನು ಕಟ್ಟಲು ಚಿಂತನೆ ಸಾಗಿತು. ಕುವೆಂಪುರವರ ದಶಾನನನ ಸ್ವಪ್ನಸಿದ್ಧಿಯೇ ಕಿಂದರ ಜೋಗಿಯನ್ನು ಎಲ್ಲಿಯೂ ನಿಲ್ಲಲೊಪ್ಪದೇ ಮನುಜಮತ ಸಾರುತ್ತ ಸಾಗುವ ವಿಶ್ವಪಥಿಕನನ್ನಾಗಿಸಿದೆಯಲ್ಲವೇ. ಅವರ ಕೃತಿಗಳ ಈ ಬಗೆಯ ಓದನ್ನು ರಂಗಪಠ್ಯವನ್ನಾಗಿ ನಿರ್ಮಿಸುವ ಜವಾಬ್ದಾರಿ ಹೊತ್ತವರು ಕುಮಟಾ ಕಾಲೇಜಿನ ಉಪನ್ಯಾಸಕರೂ, ವಿಮರ್ಶಕರೂ ಆದ ಡಾ. ಎಂ.ಜಿ.ಹೆಗಡೆಯವರು.

ಅಸಮಾನತೆಯ ವಿರುದ್ಧ ಎದ್ದ ಬಡಬಗ್ಗರ ಜಠರಾಗ್ನಿಯನ್ನು ಕಲ್ಕಿಯ ಮೂಲಕ, ಯುದ್ಧದಲ್ಲಿ ನಲುಗುವ ಜನಸಾಮಾನ್ಯರ ಬವಣೆಯನ್ನು ಶ್ಮಶಾನಕುರುಕ್ಷೇತ್ರಂ ಮೂಲಕ, ಯುದ್ಧದ ನಿರರ್ಥಕತೆ ಮತ್ತು ಮಾತೃತ್ವದ ಕಾಣ್ಕೆಯನ್ನು ರಾಮಾಯಣದ ದರ್ಶನಂ ಮೂಲಕ, ದೇವರಿಗಿಂತ ಮಿಗಿಲಾದ ತಾಯ್ತನವನ್ನು ಪೆಪ್ಪರಮೆಂಟ್ ಚಂದ್ರನಮೂಲಕ ಹೀಗೆ ಇವೆಲ್ಲವನ್ನೂ ಕೊಲಾಜ್ ಮಾದರಿಯಲ್ಲಿ ಕಟ್ಟಿದ ನಾಟಕ ಕುವೆಂಪು ಕಾವ್ಯದೃಶ್ಯ ಸಿದ್ಧಗೊಂಡಿತು.

ಗಾತ್ರದಲ್ಲಿ ವಾಮನನಾದರೂ ಕಲಾಪ್ರತಿಭೆಯಲ್ಲಿ ತ್ರಿವಿಕ್ರಮನಾಗಿರುವ ಹೊನ್ನಾವರದ ದಾಮೋದರನಾಯ್ಕ ನಾಟಕದ ಸೆಟ್,ಪ್ರಾಪರ್ಟಿ,ಕಾಸ್ಟ್ಯೂಮ್ ಎಲ್ಲದರ ಜವಾಬ್ದಾರಿ ಹೊತ್ತಿದ್ದ. ಸದಾ ನನ್ನೊಂದಿಗೆ ರಂಗಭೂಮಿಯ ಎಲ್ಲ ಕೆಲಸಗಳಲ್ಲಿಯೂ ಜತೆಗಾರನಾಗಿ ಬರುವ ಶಿರಸಿಯ ಚಂದ್ರು ಉಡುಪಿಯೂ ಜತೆ ಸೇರಿದ. ಸುಮಾರು 25 ವಿದ್ಯಾರ್ಥಿನಟರೊಂದಿಗೆ ಕೇಶವಶರ್ಮರ ನೇತ್ರತ್ವದಲ್ಲಿ ನಾಟಕ ಸಿದ್ಧಗೊಂಡು ರಾಜ್ಯದ ಹಲವು ಕಡೆ ಪ್ರಯೋಗ ನಡೆಯಿತು.

ಕುವೆಂಪು ಜನ್ಮಶತಮಾನೋತ್ಸವದ ಸಂದರ್ಭವೂ ಆದಕಾರಣ ಬಹುತೇಕ ಶನಿವಾರ, ರವಿವಾರ ನಾಟಕ ಪ್ರಯೋಗಗಳು ಇದ್ದೇ ಇರುತ್ತಿದ್ದವು. ಆ ತಿರುಗಾಟವೇ ತುಂಬ ವಿಶಿಷ್ಟವಾದದ್ದು; ಹಲವು ನೆನಪುಗಳು, ಹಲವು ಕಲಿಕೆಗಳು. ಹರಿಹರದ ಸ್ಲಂ ಏರಿಯಾ ಒಂದರ ಬೀದಿಯಲ್ಲಿ ನಾಟಕ ಪ್ರದರ್ಶಿಸಿದ್ದು, ತರಿಕೆರೆಯ ಪ್ರಯೋಗವೊಂದರಲ್ಲಿ ವೇಷಭೂಷಣದ ಬ್ಯಾಗ್ ಸಿಗದೇ ಅರ್ಧಗಂಟೆಯಲ್ಲಿ ಆ ಊರಿನ ದರ್ಜಿಯಿಂದ ಸಣ್ಣಪುಟ್ಟ ಅಗತ್ಯ ಕಾಸ್ಟ್ಯೂಮ್ ಸಿದ್ಧಪಡಿಸಿಕೊಂಡಿದ್ದು, ಯಾವುದೋ ಒಂದು ಶೋದಲ್ಲಿ ಕಿಂದರಜೋಗಿ ಪಾತ್ರ ಮಾಡುತ್ತಿರುವ ರಾಜೇಶ್ವರಿ ಎನ್ನುವ ಹುಡುಗಿಗೆ ಗಡ್ಡ ಅಂಟಿಸಲು ಏನೂ ವ್ಯವಸ್ಥೆ ಆಗದೇ ಕೊನೆಗೆ ಸೈಕಲ್ ಪಂಚರ್ ತೆಗೆಯುವ ಟ್ಯೂಬ್ ಸೊಲೂಷನ್ ಹಾಕಿ ಗಡ್ಡ ಅಂಟಿಸಿ ಅವಳ ಕೆನ್ನೆ ಸುಟ್ಟಿದ್ದು, (ಈಗವರು ಶೃಂಗೇರಿಯ ಹತ್ತಿರದ ಬೇಗೂರು ಕಾಲೇಜಿನಲ್ಲಿ  ಉಪನ್ಯಾಸಕರಾಗಿದ್ದಾರೆ), ಕುವೆಂಪು ಹುಟ್ಟಿದ ಊರು ದೇವಂಗಿಯಲ್ಲಿ ಅತ್ಯುತ್ತಮ ಪ್ರದರ್ಶನ ನಿಡಲೆಂದು ನಮ್ಮ ಟೆಕ್ನೀಶಿಯನ್ ದಾಮೋದರ ಬೊಂಬಿನ ನಳಿಕೆಯೊಂದರಲ್ಲಿ ಟಾರ್ಚ್ ಇಟ್ಟುಕೊಂಡು, ದಿಬ್ಬದ ಮೇಲೆ ಮಲಗಿ, ಸ್ಮಶಾನ ಕುರುಕ್ಷೇತ್ರಂ ದೃಶ್ಯದಲ್ಲಿ ‘ಸ್ಪಾಟ್‍ಲೈಟ್’ ಬಿಟ್ಟಿದ್ದು ಹೀಗೆ ನೆನಪುಗಳ ಸರಮಾಲೆಯೇ ಇದೆ.

ಬೆಂಗಳೂರಿನ ಚಿತ್ರಕಲಾಪರಿಷತ್ತಿನಲ್ಲಿ ಪ್ರಯೋಗನಡೆದಾಗ ಅಲ್ಲಿಯ ಆವರಣದ ಕಲ್ಲುಬಂಡೆಗಳ ಹಿಂದಿನಿಂದೆಲ್ಲ ನಮ್ಮ ನಾಟಕದ ಪಾತ್ರಗಳನ್ನು ತಂದಿದ್ದೆವು. ನಾಟಕ ಮುಗಿದ ಮೇಲೆ ಯಾರೋ ಹಿರಿಯರು ಬಳಿಬಂದು, ‘ಶಂಕರನಾಗ್ ನಾಗಮಂಡಲದಲ್ಲಿ ಇಂತಹ ಪ್ರಯೋಗಮಾಡಿದ್ದು ಬಿಟ್ಟರೆ ಈಗ ನೀವೇ ಮಾಡಿದ್ದು ಕಣಪ್ಪ’ ಅಂತ ಹೇಳಿ ಬೆನ್ನುತಡವಿದ್ದರು. ಅಂದಿನ ರಾತ್ರಿ, ಸಕ್ಸಸ್ ಸೆಲಿಬ್ರೇಷನ್ ಸಮಯದಲ್ಲಿ, ನಿಜವಾಗಿಯೂ ಅಂಗಕ್ಕೆಲ್ಲ ರಂಗು ಮೆತ್ತಿಕೊಂಡ ಸಂದರ್ಭದಲ್ಲಿ ಶಂಕರ್‍ನಾಗನೇ ಬಂದು ಉತ್ತರಕನ್ನಡದ ಬಾಂಧವ್ಯ ನೆನಪಿಸಿ ಬೆನ್ನು ತಟ್ಟಿಹೋದಂತಾಗಿ. . . !  ಹೀಗೆ, ಒಂದೇ ಎರಡೇ!

ಆದರೆ ಬಣ್ಣದ ಹೆಜ್ಜೆ ಎದೆಯಲ್ಲಿ ಗುರುತುಮೂಡಿಸಿದ ಆ ದಿನವನ್ನು ಮಾತ್ರ ಮರೆಯಲಾಗದು. ಅಂದಿನ ದಿನದ ರೋಚಕತೆಯಿಂದಾಗಿ ನಾನು ಇಂದಿಗೂ ಕಂಪಿಸುವುದಿದೆ. ಆ ಸಂದರ್ಭದ ಭಾವನಿರೂಪಣೆಗೆ ನಾನು ಇದುತನಕ ಕಲಿತ ಪದಗಳೆಂದಿಗೂ ನೆರವಿಗೆ ಬರಲಾರವು ಎಂಬ ದಟ್ಟನಂಬಿಕೆ ಇದೆ ನನಗೆ. ಇರಲಿ. ಆ ದಿನದ ಕತೆ ಹೇಳುವೆ.

ಕುವೆಂಪು ಕಾವ್ಯ ದೃಶ್ಯವನ್ನು ಶಿವಮೊಗ್ಗದಲ್ಲಿ ನೋಡಿದ ಕಡಿದಾಳ ಶಾಮಣ್ಣನವರಿಗೆ ಈ ನಾಟಕವನ್ನು ತೇಜಸ್ವಿಗೆ ತೋರಿಸಲೇ ಬೇಕು ಅನಿಸಿಬಿಟ್ಟಿತು. ತಾರಿಣಿಯವರು ಮತ್ತು ಶಾಮಣ್ಣ ತೇಜಸ್ವಿಯವರಲ್ಲಿ ಮಾತನಾಡಿ ದಿನವೊಂದನ್ನು ನಿಶ್ಚಯಿಸಿಯೂಬಿಟ್ಟರು ಮತ್ತು ಮೂಡಿಗೆರೆಯ ಕನ್ನಡಸಂಘವೊಂದು ನಾಟಕ ಪ್ರದರ್ಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿತು. ನಮಗೆಲ್ಲ ಪುಳಕವೋ ಪುಳಕ. ನಾಟಕ ನೋಡಿ ತೇಜಸ್ವಿ ಬಯ್ದರೆ ಅಂತ ಅನುಮಾನವಿದ್ದರೂ, ತೇಜಸ್ವಿಯವರಿಂದ ‘ಬೈಸಿಕೊಳ್ಳುವ ಭಾಗ್ಯ’ಕ್ಕಾಗಿ ನಾವೆಲ್ಲ ತಯಾರಾಗಿ ಬಿಟ್ಟೆವು!

ನಿಶ್ಚಿತ ದಿನಾಂಕದಂದು ನಟರಸಮೂಹದ ಜತೆ ಮೂಡಿಗೆರೆ ತಲುಪಿದಾಗ ಮಧ್ಯಾಹ್ನ 2 ಘಂಟೆ. ಬಸ್ಸಿನಿಂದಿಳಿಯುವಾಗಲೇ ನಮ್ಮೆಲ್ಲರೊಳಗೆ ತವಕ, ಉತ್ಸುಕ ಉದ್ವೇಗ ಎಲ್ಲ ಜತೆಯಾಗಿತ್ತು. ಆಗಲೇ ಹುಡುಗರು ಅಲ್ಲೆಲ್ಲಿಯಾದರೂ ತೇಜಸ್ವಿ ಕಾಣ್ತಾರಾ ಅಂತ ಹಣಕಿ ಹಾಕಲು ಆರಂಭಿಸಿಬಿಟ್ಟಿದ್ದರು. ಆ ಉತ್ಸಾಹವೆಲ್ಲ ಪಾತಾಳಕ್ಕೆ ಇಳಿದುಹೋಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಸಂಘಟಕರು ನಾಟಕದ ಪ್ರದರ್ಶನದ ಜಾಗ ತೋರಿಸಿದಾಗ ನಾವೆಲ್ಲ ಎಚ್ಚರತಪ್ಪಿ ಕೆಳಗೆ ಬೀಳದಿದ್ದುದೊಂದೇ ಭಾಗ್ಯ.!

ಅವರು ತೋರಿದ ರಂಗಸ್ಥಳ ಎಂದರೆ ಸೊಸೈಟಿಯ ಹೊರಗಿನ ವರಾಂಡ ಆಗಿತ್ತು. ಆ ವರಾಂಡದ ಮೇಲೆ ನಾಟಕ ಮಾಡಿದರೆ ಕೆಳಗಿನವರಿಗೆ ಚೆನ್ನಾಗಿ ಕಾಣತ್ತೆ ಅನ್ನುವದೊಂದೇ ಅವರ ತಲೆಯಲ್ಲಿರುವುದು! ಅಲ್ಲಿ ನಾಟಕ ಮಾಡಲು ಸ್ಥಳ ಸಾಲುತ್ತದೋ ಇಲ್ಲವೋ ಎಂಬುದಲ್ಲ. ಆ ವರಾಂಡದ ಮೇಲೆ ಒಟ್ಟಿಗೇ 10 ಜನ ನಿಲ್ಲಲು ಆಗುತ್ತಿರಲಿಲ್ಲ.. ಮತ್ತು ಅದರ ಅಗಲ 6 ಅಡಿ ಇತ್ತು ಅಷ್ಟೆ! ಆ ರಂಗಸ್ಥಳದ ಮೇಲೆ ಎರಡು ಮೈಕ್ ಸ್ಟ್ಯಾಂಡು, ಎರಡು ಹೆಲೋಜನ್ ಬುರುಡೆಗಳು ನೆಲದ ಮೇಲೆ ಕುಳಿತು ನಮ್ಮ ಕಾಯುತ್ತಿತ್ತು.!

ಕರೆಂಟ್ ಇಲ್ಲದ್ದರಿಂದ ಒಂದು ಸೀಮೆಎಣ್ಣೆಯಿಂದ ಆರಂಭವಾಗುವ ಜನರೇಟರ್ ಒಂದನ್ನು ವೇದಿಕೆಯೆಂಬ ವರಾಂಡದ ಮೇಲೆಯೇ ಇಟ್ಟಿದ್ದರು. ಅದನ್ನು ಸ್ಟಾರ್ಟ್ ಮಾಡಿದ ಕೂಡಲೇ ಅದು ಹಾಕಿದ ಬೊಬ್ಬೆಗೆ ನಮ್ಮ ಮಾತು ನಮಗೇ ಕೇಳುತ್ತಿರಲಿಲ್ಲ!! ಅದನ್ನು ತುಸು ದೂರ ಒಯ್ದು ಇಡುವ ಅಂತ ನೋಡಿದರೆ ಅಗತ್ಯ ವೈರ್ ಸಹ ಇರಲಿಲ್ಲ!!! ಇಷ್ಟೆಲ್ಲದರ ಜತೆ ಸಂಘಟಕರು ನಾಟಕ 5 ಘಂಟೆಗೆ ಅಂತ ಪ್ರಿಂಟ್ ಮಾಡಿದ ಕರಪತ್ರ ಕೈಗಿತ್ತರು!! ಅದಲ್ಲದೇ “ಸ್ವಲ್ಪ ಕತ್ತಲಾಗಲಿ ಸರ್ ಆ ಮೇಲೇ ಶುರು ಮಾಡಿ, ಇಲ್ಲವಾದರೆ ಲೈಟಿಂಗ್ ಕಾಣುವುದಿಲ್ಲ” ಅಂದರು.

ನಾನು ಆ ಎರಡು ಹ್ಯಾಲೋಜಿನ್ ಬುರುಡೆಗಳನ್ನು ನೋಡಿ ತಲೆ ಹಿಡಿದು ಕುಳಿತು ಬಿಟ್ಟೆ. ಅಷ್ಟು ಹೊತ್ತಿಗೆ 4 ಘಂಟೆ ಆಗಿತ್ತು. ನನಗೆ ಅಳುಬರುತ್ತಿತ್ತು. ನಾನು ಆರಾಧಿಸುವ ವ್ಯಕ್ತಿಗೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾಟಕವನ್ನು ತೋರಿಸುವುದಾರೂ ಎಂತು?  ರಂಗಮಂಚವೆಂಬ ಆ ಸ್ಥಳದ ಮೇಲೆ ನನ್ನ ಇಪ್ಪತ್ತು ಜನ ಕಲಾವಿದರನ್ನು ಹತ್ತಿಸಿ ನಿಲ್ಲಿಸುವುದಾದರೂ ಹೇಗೆ? ಆ ಡಗಡಗ ಸದ್ದಿನ ಜನರೇಟರ್ ಎದುರು ನಮ್ಮ ನಾಟಕದ ಸಂಭಾಷಣೆ, ಹಾಡು ಕೇಳುವುದಾದರೂ ಹೇಗೆ? ಅದರಲ್ಲಿಯೂ ನಾವು ಕುವೆಂಪು ನಾಟಕದ ಭಾಷೆಯನ್ನು ಹಾಗೆಯೇ ಉಳಿಸಿಕೊಂಡಿದ್ದೆವು.

ಆ ಕಾಲಕ್ಕೆ ಜಿ.ಎಸ್.ಶಿವರುದ್ರಪ್ಪನವರು ಹೊಸಗನ್ನಡದ ರೂಪಾಂತರವನ್ನು ತಂದಿದ್ದರೂ ನಾವು ಅದನ್ನು ಬಳಸಿರಲಿಲ್ಲ. ಇಲ್ಲಿ ನೋಡಿದರೆ!! ಆ ಮಾತುಗಳು ಒಂದೂ ಪ್ರೇಕ್ಷಕರಿಗೆ ಕೇಳಲು ಸಾಧ್ಯವಿರಲಿಲ್ಲ!! ಒತ್ತಡದಿಂದ ಎದ್ದ ಪಿತ್ತ ನೆಲಕ್ಕಿಳಿಯುವವರೆಗೂ ಮೈ ಅದುರುತ್ತಿತ್ತು. ನಂತರ ಕೇಶವ ಶರ್ಮ ಮತ್ತು ನಾನು ಹತ್ತು ಸಿಗರೇಟು ಸುಟ್ಟು ಒಂದು ತೀರ್ಮಾನಕ್ಕೆ ಬಂದೆವು. ‘ಇರುವ ಪರಿಸ್ಥಿತಿ ಒಪ್ಪಿ ನಾಟಕ ಮಾಡೋದು ಅಂತ’. ಚಕಚಕನೆ ಒಂದಿಷ್ಟು ‘ಬ್ಲಾಕಿಂಗ್’ ಬದಲಾದವು.. ಪಾತ್ರಗಳ ಓಡಾಟದ ನಮೂನೆ ಬದಲಾಯಿತು.. ವರಾಂಡದ ಅಲ್ಲಲ್ಲ ವೇದಿಕೆಯ ಮೇಲೆ 6 ಕ್ಕೂ ಹೆಚ್ಚು ಪಾತ್ರಗಳು ಒಮ್ಮೆಲೇ ಬರದಂತೆ ಯೋಜನೆ ತಯಾರಾಯಿತು..

ಸೆಟ್ ಗಳನ್ನು ಅಲ್ಲಲ್ಲಿ ಮುರಿದು ಮತ್ತೆ ಜೋಡಿಸಲು ಮೊಳೆಹೊಡೆಯಲಾರಂಭಿಸಿದ್ದೆವು. . ಅಷ್ಟರಲ್ಲಿ ತೇಜಸ್ವಿಯವರ ದೊಗಳೆ ಪ್ಯಾಂಟು ಕಂಡಿತು. “ಏನ್ರಯ್ಯಾ 5 ಘಂಟೆಗೆ ನಾಟಕ ಅಂತ ಹೇಳಿ ಇನ್ನೂ ಮೊಳೆ ಹೊಡೇತಿದೀರಲ್ಲ” ಅಂದ್ರು. ನಾವು ನಮ್ಮ ಕಷ್ಟಗಳನ್ನು ಅರೆಬರೆ ವಾಕ್ಯಗಳಲ್ಲಿ ನಿವೇದಿಸಿಕೊಂಡ ಮೇಲೆ “.. ಮತ್ತೇನು ನಿಮಗೆ ಇಲ್ಲಿ ಕಲಾಕ್ಷೇತ್ರ ದೊರೀತದೆ ಅಂದ್ಕೊಂಡ್ರಾ.” ಅಂದ್ರು. ಕೊನೆಗೆ  ಕೇಶವಶರ್ಮರ ಮೂಲಕ ‘ಶಾಮಣ್ಣನವರ ಜತೆ ತೇಜಸ್ವಿ ಮನೆಯಲ್ಲಿರುವುದು, ನಾಟಕ ಆರಂಭವಾಗುವ ತುಸು ಮೊದಲು ಅವರಿಗೆ ಫೋನ್ ಮಾಡಿ ಕರೆಯುವುದು, ಮತ್ತು ವೇದಿಕೆಗೆ ಅವರನ್ನು ಯಾವಕಾರಣಕ್ಕೂ ಆಮಂತ್ರಿಸದಿರುವುದು ಎಂಬಿತ್ಯಾದಿ ಮಾತುಕತೆಯನ್ನು ಯಶಸ್ವಿಯಾಗಿ ಮುಗಿಸಿ ನಾವು ನಾಟಕಕ್ಕೆ ಸಿದ್ಧವಾಗತೊಡಗಿದೆವು.

7 ಘಂಟೆಯಾಯಿತು. ಇನ್ನೇನು ನಾಟಕ ಆರಂಭಿಸಬೇಕು ಅನ್ನುವಷ್ಟರಲ್ಲಿ ಕನ್ನಡ ಸಂಘದ ಮುಖ್ಯಸ್ಥರು ಬಂದು ತೇಜಸ್ವಿಯವರು ಬಂದಮೇಲೆ ಶುರು ಮಾಡೋಣ ಅಂತ ತಾಕೀತು ಮಾಡಿದರು. ನಾವು ಅದಕ್ಕೆ ಒಪ್ಪದೇ, ನಾಟಕ ಶುರು ಮಾಡ್ತೇವೆ, ತೇಜಸ್ವಿಯವರು ವೇದಿಕೆಯ ಮೇಲೆ ಬಂದರೆ ಆಗ ನಿಲ್ಲಿಸ್ತೇವೆ ಅಂತ ಅವರಿಗೆ ಹೇಳಿ ಅವರನ್ನು ಒಪ್ಪಿಸಿದೆವು. ನಮಗೆ ಮೊದಲೇ ಆದ ಕರಾರು ಗೊತ್ತಿತ್ತಲ್ಲ.! ನಾಟಕ ಶುರುವಾಗುವಾಗ ರಾಜೇಶ್ವರಿಯವರು ಮತ್ತು ಶಾಮಣ್ಣ ಮುಂದೆ ಬಂದು ಕುಳಿತರು. ತೇಜಸ್ವಿ ಅಲ್ಲೆಲ್ಲೋ ಒಂದೆಡೆ ನಿಂತಿದ್ದಾರೆ ನೀವು ಮುಂದುವರಿಸಿ ಅಂತ ಶಾಮಣ್ಣನವರಿಂದ ಸೂಚನೆ ಬಂತು.

ನಾಟಕ ಆರಂಭವಾಯ್ತು. ವರಾಂಡದ ಮೆಟ್ಟಿಲ ಮೇಲೆ ಸಂಗೀತ ಉಪಕರಣಗಳನ್ನು ಹರಡಿಕೊಂಡು ಸಹಕಲಾವಿದರೊಂದಿಗೆ ಕುಳಿತ ನಾನು ನಾಟಕದ ಹಾಡುಗಳನ್ನು ಮಾತ್ರವಲ್ಲದೇ ಅದರ ಎಲ್ಲ ಪಾತ್ರಗಳ ಮಾತನ್ನೂ ಗಟ್ಟಿಯಾಗಿ ಹೇಳುತ್ತಿದ್ದ್ದೆನಂತೆ. ನಾಟಕದ ಮಾತುಗಳನ್ನು ಸೀಮೆ ಎಣ್ಣೆಯ ಮೆಷಿನ್‍ನ ಗುಡುಗುಡು ಸದ್ದು ನುಂಗಿಹಾಕುತ್ತದೆ ಎಂಬ ಭಯದಿಂದ ಸಂಗೀತವನ್ನೂ ಏರು ಶೃತಿಯಲ್ಲಿಯೇ ನೀಡಿದ್ದೆ ಆವತ್ತು.

ಅಂತೂ ನಾಟಕ ಮುಗಿಯಿತು. ನನಗೆ ತಲೆ ಎತ್ತಲೂ ನಾಚಿಕೆ. ಶಿಷ್ಟಾಚಾರದ ಕೆಲಸಗಳೆಲ್ಲ ಮುಗಿದ ಮೇಲೆ ಶಾಮಣ್ಣನವರಲ್ಲಿ ಮೆತ್ತಗೆ ‘ಸರ್ ತೇಜಸ್ವಿ ಬಯ್ತಾರಾ?’ ಅಂತ ಕೇಳಿದೆ. “ಅವನ್ಯಾಕೆ ಸುಮ್ ಸುಮ್ನೆ ಬಯ್ತಾನೆ? ಅವನಿಗಿಷ್ಟ ಆಗದಿದ್ರೆ ಹಾಗೇ ಹಿಂದೆಲ್ಲೋ ನಿಂತು ಹೋಗ್ತಾನೆ ತಲೆಕೆಡಿಸಿಕೊಳ್ಳಬೇಡ” ಅಂದ್ರು. ಅಷ್ಟು ಹೊತ್ತಿಗಾಗಲೇ ಅಲ್ಲಿಯ ಗೂಡಂಗಡಿಯಿಂದ ಒಂದಿಷ್ಟು ಚಾಕಲೇಟ್‍ಗಳನ್ನು ಕಿಸೆತುಂಬ ತುಂಬಿಕೊಂಡು ಬಂದ ತೇಜಸ್ವಿ ‘ಇಲ್ಲಿ ಸಿಗೋದು ಇಷ್ಟೇ ಕಣ್ರೋ, ಇದನ್ನೇ ಆ ನಿಮ್ಮ ರಾವಣನಿಗೂ ತಿನ್ಸಿ’ ಅಂತ ನಮ್ಮ ಬೊಗಸೆಗಳಲ್ಲಿ ಪೆಪ್ಪರಮೆಂಟು, ಚಾಕಲೇಟುಗಳನ್ನು ಇಟ್ಟರು!  ಅಬ್ಬಾ! ಒಂದು ದೊಡ್ಡ ಸಂತಸದ ನಿಟ್ಟುಸಿರು ಬಂತು!!

“ ಸರ್ ತಪ್ಪು ಮಾಡಿದ್ನಾ?” ಅಂದೆ. “ನೋಡು, ನನಗೂ ಕೆಲವರು, ನೀನು ಬರೆದ ಆ ಕತೆ ಚೆನ್ನಾಗಿಲ್ಲ ಅಂತಾರೆ. ನೀವು ಚೆನ್ನಾಗಿದೆ ಅಂತ ಹೇಳಲಿ ಅಂತ ನಾನು ಬರೆಯೋದಿಲ್ಲಯ್ಯ ಅಂತೀನಿ. ಇನ್ನೊಬ್ಬರ ಮೆಚ್ಚುಗೆಗೆ ಅಂತಲೇ ನಾವ್ಯಾಕೆ ದಿಗಿಲು ಬೀಳಬೇಕು. ನಿಮಗೆ ನೀವು ಮಾಡೋ ಕೆಲಸದ ಮೇಲೆ ಪ್ರೀತಿ ಇದ್ಯಾ? ನಂಬಿಕೆ ಇದ್ಯಾ? ಮಾಡ್ತಾ ಹೋಗಬೇಕು ಅಷ್ಟೆ” ಅಂದರು.

ಮಾತು, ನಾಟಕದಲ್ಲಿ ಬಳಕೆಯಾದ ಭಾಷಾ ಪ್ರಯೋಗದತ್ತ ಹೊರಳಿತು. “ಅಲ್ಲಯ್ಯ, ನಿನಗಿರೋವಷ್ಟು ಬುದ್ದಿ ಆ ಜಿ.ಎಸ್.ಎಸ್.ಗೆ ಇಲ್ವಲಯ್ಯಾ. ಕುವೆಂಪುಗೆ ಹೊಸ ಕನ್ನಡ ಬರೆಯೋಕೆ ಬರಲ್ವಾ? ಅದು ಒಂದು ಕೃತಿಯ ಭಾಷೆ. ನೀವು ಅದನ್ನು ಹಾಗೆಯೇ ಬಳಸಿ ಸರಿಯಾದುದನ್ನೇ ಮಾಡಿದ್ರಿ” ಅಂತ ಬೆನ್ನು ತಟ್ಟಿದರು. “ಸರ್ ಆ ಮೆಷೀನಿನ ಗದ್ದಲದಲ್ಲಿ ನಿಮಗೆ ನಾಟಕದ ಒಂದು ಮಾತಾದರೂ ಕೇಳಿಸ್ತಾ” ಅಂದೆ. “ ನೋಡು ಅದು ಇದೆ ಅಂತ ನೀನು ಅಂದ್ಕೊಂಡೇ ಇದ್ದೆ ಅದಕ್ಕೆ ಅದು ನಿನ್ನ ಪಾಲಿಗೆ ಇದ್ದೇ ಇತ್ತು. ಅಷ್ಟೆ. ಅದು ಇರೋದೇ ಹಾಗಲ್ವಾ? ಅದನ್ನು ಒಪ್ಪಿಕೊಂಡ್ಮೇಲೆ ಅದೇನು ಮಾಡುತ್ತೆ? ನನಗೆ ಅದೇನೂ ತೊಂದ್ರೆ ಕೊಡಲಿಲ್ಲ” ಅಂದ್ರು.

ಶ್ಯಾಮಣ್ಣನವರೂ “ಆರಂಭದಲ್ಲಿ ತುಸು ತೊಂದರೆ ಅನಿಸ್ತು. ಆಮೇಲೆ ಅದು ಮರೆತೇ ಹೋಯ್ತು”ಅಂದರು.  ಅಂದರೆ! ಅದನ್ನು ತಲೆಯ ಮೇಲೆ ಹೊತ್ಕೊಂಡವನು ನಾನೇ??!!. ಮಾತುಕತೆಯ ಕೊನೆಯಲ್ಲಿ “ನೋಡಿ ನಿಮಗೆಲ್ಲ ಕಾವ್ಯದ ಅಭಿನಯದ ಭಾಷೆ ದಕ್ಕಿದೆ, ಆದರೆ  ಕನ್ನಡದಲ್ಲಿ ಗದ್ಯದ ಅಭಿನಯಕ್ಕೆ ಒಳ್ಳೆಯ ಮಾದರಿಗಳಿಲ್ಲ. ಅದನ್ನೂ ಹುಡುಕಿಕೊಳ್ಳಬೇಕು. ಆ ಏರಿಯಾದಲ್ಲಿ ಕೆಲಸಮಾಡಲಿಕ್ಕಿದೆ, ಪ್ರಯತ್ನಿಸಿ” ಎಂದರು.

ನನ್ನ ಮಿತಿಯಿಂದಾಗಿ ನನಗೆ ಇನ್ನೂ ಅಂತಹ ಮಹತ್ವದ ಹುಡುಕಾಟ ಆ ವಿಭಾಗದಲ್ಲಿ ಸಾಧ್ಯವಾಗಲಿಲ್ಲ.

ತೇಜಸ್ವಿ ಅಂದು ಒಳ್ಳೆಯ ಮೂಡಿನಲ್ಲಿದ್ದರು. ವಿದ್ಯಾರ್ಥಿಗಳೆಲ್ಲರೂ ‘ಫೋಟೋ ಬೇಕು ಸಾರ್’ ಎಂದರು. ‘ಹೊಡ್ಕೊಳ್ರಯ್ಯಾ ನಂದೇನು ಖರ್ಚು?’ ಅಂದ್ರು. ತೇಜಸ್ವಿಯವರೊಡನೆ ನಾವೆಲ್ಲ ಗ್ರುಪ್‍ಫೋಟೋ ತೆಗೆಸಿಕೊಳ್ಳುತ್ತಿದ್ದುದನ್ನು ಬ್ಯಾನರ್ ಹಿಡಿದು ಆಸೆಯಿಂದ ನೋಡುತ್ತಿದ್ದ ಮೂಡಿಗೆರೆಯ ಕನ್ನಡ ಸಂಘದವರನ್ನೂ ನಾವೇ ಕರೆದು ಫೋಟೋಕ್ಕೆ ನಿಲ್ಲಿಸಿ ಅವರನ್ನೂ ಕೃತಾರ್ಥರನ್ನಾಗಿಸಿದೆವು!!!

ಆ ರಾತ್ರಿ ಶಿವಮೊಗ್ಗಕ್ಕೆ ಮರಳುವಾಗ ಘಾಟು ಇಳಿಯುತ್ತಿದ್ದ ನಮ್ಮ ಬಸ್, ಚಾಲಕನ ನಿದ್ದೆಗಣ್ಣಿನಿಂದಾಗಿ ಕೆಳಗುರುಳಬೇಕಿತ್ತು. ಆದರೆ ಅವನ ಪಕ್ಕದಲ್ಲಿಯೇ ಕುಳಿತ ನಮ್ಮ ನಟರಲ್ಲೊಬ್ಬ, ಆತ ಚಾಲಕನೂ ಆಗಿದ್ದುದರಿಂದ ಸಿನಿಮೀಯ ಮಾದರಿಯಲ್ಲಿ ನಮ್ಮನೆಲ್ಲ ಉಳಿಸಿದ್ದ. ನಿಜಕ್ಕೂ ಸಾವು ಬದುಕಿನ ನಡುವೆ ನಡೆದ ರೋಚಕ ಘಟನೆಯಾಗಬೇಕಿತ್ತು ಅದು! ಆದರೆ ಆ ದಿನದ ತೇಜಸ್ವಿಯವರ ಭೇಟಿಯ ರೋಚಕತೆಯ ಮುಂದೆ ಆ ಘಟನೆ ಸಪ್ಪೆಯಾಗಿ ಕಂಡಿತ್ತು.

‍ಲೇಖಕರು ಶ್ರೀಪಾದ್ ಭಟ್

September 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!

ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

5 ಪ್ರತಿಕ್ರಿಯೆಗಳು

 1. SUDHA SHIVARAMA HEGDE

  ಎಷ್ಟು ಚಂದದ ಅನುಭವ! ಓದುವಾಗಲೇ ಥ್ರಿಲ್ ಅನಿಸ್ತು..

  ಪ್ರತಿಕ್ರಿಯೆ
 2. Ahalya Ballal

  ಅಬ್ಬಾ! ತೇಜಸ್ವಿಯವ್ರನ್ನು ಕಂಡ ಹಾಗಾಯ್ತು.

  “ವರಾಂಡದ ಮೆಟ್ಟಿಲ ಮೇಲೆ ಸಂಗೀತ ಉಪಕರಣಗಳನ್ನು ಹರಡಿಕೊಂಡು ಸಹಕಲಾವಿದರೊಂದಿಗೆ ಕುಳಿತ ನಾನು ನಾಟಕದ ಹಾಡುಗಳನ್ನು ಮಾತ್ರವಲ್ಲದೇ ಅದರ ಎಲ್ಲ ಪಾತ್ರಗಳ ಮಾತನ್ನೂ ಗಟ್ಟಿಯಾಗಿ ಹೇಳುತ್ತಿದ್ದೆನಂತೆ. ”

  ನಾಟ್ಕ ನಡೀತಿರುವಾಗ ನಟರ ಜೊತೆ ನೀವೂ ಸಂಭಾಷಣೆ ಒಪ್ಪಿಸ್ತಾ ಇದ್ದದ್ದು ಸ್ವಾರಸ್ಯಕರವಾಗಿದೆ. 🙂 🙂

  ಪ್ರತಿಕ್ರಿಯೆ
 3. ಕಿರಣ್ ಭಟ್

  ಈ ಪ್ರದರ್ಶನಕ್ಕೆ ನಾನೂ ನಿಮ್ಮ ಜೊತೆ ಬಂದ ಹಾಗೆ ನೆನಪು.
  ಈ ಪ್ರಯೋಗ ನಿನ್ನ ರಂಗ ದಾರಿಯ ಮಹತ್ವದ ಮೈಲಿಗಲ್ಲು.

  ಪ್ರತಿಕ್ರಿಯೆ
 4. avadhi

  ಶ್ರೀಪಾದ ಭಟ್ ಅವರ ʼಸಿರಿಪಾದʼ ಅಂಕಣಕ್ಕೆ ಸುಷ್ಮಾ ರಾಘವೇಂದ್ರ ಅವರಿಂದ ಬಂದ ಪ್ರತಿಕ್ರಿಯೆ

  ಅವಧಿಗೆ ನಮಸ್ಕಾರ ನಾನು ಸುಷ್ಮಾ ರಾಘವೇಂದ್ರ ಮೈಸೂರು. ಸಿರಿಪಾದದ ಶ್ರೀಪಾದ್ ಭಟ್ ರವರ ಕುವೆಂಪು ವಿವಿಯ ನಾಟಕಗಳಲ್ಲಿ ಅಭಿನಯಿಸಿದ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬಳು. ಕನ್ನಡ ವಿಭಾಗದಲ್ಲಿ ಅಭ್ಯಾಸ ಮಾಡ್ತಿದ್ದೆ. ಕುವೆಂಪು ದೃಶ್ಯ ಕಾವ್ಯದ ನಾಟಕದ ಸ್ಲಮ್ ನಿಂದ ಚಿತ್ರಕಲಾಪರಿಷತ್ ರವರೆಗಿನ ಸುಮಾರು ಇಪ್ಪತ್ತೈದು ಪ್ರದರ್ಶನ ಗಳಲ್ಲೆವೂ ವಿಶೇಷ ಅನುಭವಗಳೇ. ಆದರೆ ಸಾಹಿತ್ಯ ದ ವಿದ್ಯಾರ್ಥಿಯಾದ ನಮಗೆ ಪೂರ್ಣ ಚಂದ್ರ ತೇಜಸ್ವಿಯವರ ಸಾನಿಧ್ಯದ ಮೂಡಿಗೆರೆ ಯ ಪ್ರದರ್ಶನ ವಿಶಿಷ್ಟತೆಯಲ್ಲಿ ವಿಶಿಷ್ಟತೆ.

  ಮೂಡಿಗೆರೆ ತಲುಪಿದ್ದೆ ಶ್ರೀಪಾದ ಗುರು ಗಳು ಹೇಳಿದಂತೆ ನಮ್ಮ ಕಣ್ಣುಗಳು ಅದಾಗಲೇ ತೇಜಸ್ವಿಯವರ ದರ್ಶನ ಕ್ಕಾಗಿ ಹುಡುಕಾಡುತ್ತಿದ್ದೆವು. ತಾಲೀಮು ನಡೆಸುವಾಗ ಬಜಾಜ್ ಚೇತಕ್ ಬೈಕ್ ನಲ್ಲಿ ತಣ್ಣಗೆ ಬಂದಿಳಿದ ಅವರನ್ನು ನೋಡಿದಾಗ ಪರಮಾಶ್ಚರ್ಯ. ಇವರೇ ನಾ ತೇಜಸ್ವಿಯವರು! ಅಂತ. ಅಸಾಮಾನ್ಯ ವ್ಯಕ್ತಿತ್ವದ ಸಾಮಾನ್ಯ ಬದುಕು. ಹಾಗೇ ನೋಡುತ್ತಲೇ ನಿಂತು ಬಿಟ್ಟೆವು. ನಮ್ಮನ್ನು ಮಾತಾಡಿಸಿಕೊಂಡು ಪ್ರದರ್ಶನಕ್ಕೆ ಬರುವುದಾಗಿ ಹೊರಟರು ಸಂಜೆ ನಾಟಕ ಪ್ರಾರಂಭವಾದರೂ ವೇದಿಕೆಯ ಮುಂಭಾಗದಲ್ಲಿ ತೇಜಸ್ವಿಯವರ ಉಪಸ್ಥಿತಿ ಯಿಲ್ಲ. ನಾಟಕ ಮುಗಿದ ಮೇಲೆ ತಿಳಿದಿದ್ದು.ಅದೆಲ್ಲೋ ಹಿಂದೆ ಜನರ ನಡುವೆ ಸುಮಾರು ಒಂದು ಗಂಟೆಯ ಕಾಲ ನಿಂತುಕೊಂಡೇ ನಾಟಕ ನೋಡಿ ವೇದಿಕೆಯ ಮೇಲೆ ಬಂದು ನಮ್ಮನೆಲ್ಲ ಅಭಿನಂದಿಸಿದ್ದು ಅವಿಸ್ಮರಣೀಯ.

  ಪ್ರತಿಕ್ರಿಯೆ
 5. Kavya Kadame

  ಬರಹ ಚಿತ್ರವತ್ತಾಗಿ ಮೂಡಿ ಬಂದಿದೆ ಸರ್, ಇಡೀ ಘಟನೆ ಕಣ್ಣಮುಂದೆ ನಡೆದಂತಾಗಿ ಪುಳಕವಾಯಿತು.  ತೇಜಸ್ವಿಯವರ ಭೇಟಿಯ ಸೊಗಸು, ಪ್ರಪಾತಕ್ಕೆ ಬೀಳಬಹುದಾಗಿದ್ದ ಸಾಧ್ಯತೆಯ ರೋಚಕತೆಯನ್ನೂ ಕಡಿಮೆ ಮಾಡಿದ್ದು unquestionable! 

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: