ಅಂಗಿ ಮೇಲೆ ನಿನ್ನ ತುಟಿಮುದ್ರೆ ಇಲ್ಲ…

-ಅಪಾರ
ನಡುರಾತ್ರಿ ಜತೆಯಾಗಿ ಕೇಳಿದ
ಹಾಡಿನ ವಿಷಾದ ರಾಗ
ಎಲ್ಲಿಂದ ತೇಲಿ ಬಂದು
ನಡುಗಿಸಿತು ಮನವ ಈಗ?
*
ಎಷ್ಟೊಂದು ಸಲೀಸಾಗಿ
ಹೊಳೆದಿತ್ತು ಹೆಸರದು ಅಂದು
ಏನೆಂದು ಕರೆಯುತಿರುವೆಯೊ
ಪುಟ್ಟ ಮಗಳನು ಇಂದು
*
ಅವನ ಜತೆ ಬೆಚ್ಚಗೆ ನೀನು
ಮಲಗಿರುವೆ ಮನೆಯ ಒಳಗೆ
pop_art_kiss
ಮಳೆಯ ರಾತ್ರಿ ನಡುಗುತ್ತಾ
ನಿಂತಿರುವೆ ನಾನು ಹೊರಗೆ
ಮಳೆ ಬರುತ್ತಲೇ ಇರಲಿ ಹೀಗೇ
ನನ್ನ ನಡುಕ ನಿನಗೆ ನಿನ್ನ
ನಡುಕ ನನಗೆ ಕೇಳಿಬರದಿರಲಿ
*
ಎಷ್ಟೋ ಹೊತ್ತು
ಬರೀ ಸೂರ್ಯಕಾಂತಿ ಹೂವನೇ
ನೋಡಿದ ಬಳಿಕ ಕಂಡ
ಹಳದಿ ಚಿಟ್ಟೆ
ಯಾತಕೋ ಸರಕ್ಕನೆ
ನೀನು ತಿರುಗಿದಾಗ
ಕಂಡ ನುಣುಪು ಬಿಳಿ ಹೊಟ್ಟೆ
*
ಮುಸ್ಸಂಜೆ ಹೊತ್ತಲ್ಲಿ
ಕಣ್ಣಿಂದ ಒಳತೂರಿದ
ಚಿಟ್ಟೆ ನೀನು
ಈ ನಡು
ರಾತ್ರಿ ವೇಳೆ ಮೈತುಂಬಿ
ಫಡಫಡಿಸುವೆ ಏನು?
*
blue_landscape
ಮಾತು ಕತೆ ಒಂದೂ ಬೇಡ
ಸುಮ್ಮನೆ ಬಂದು ಕೂಡು
ಮಿಸುಕಾಡದೆ ಮಧುವ
ಹೀರೊ ಚಿಟ್ಟೆಯ
ಒಮ್ಮೆ ನೋಡು
*
ಮಧ್ಯಾಹ್ನವ ಕಳೆಯುತಿದ್ದ
ಉದ್ಯಾನದ ಬೆಂಚು
ಮಳೆಯ ರಾತ್ರಿ ಹೊಳೆಯುತಿದ್ದ
ಒದ್ದೆ ಮುಖದ ಮಿಂಚು
ಒಬ್ಬರಿಗೆ ಇನ್ನೊಬ್ಬರು
ಕಾದು ಕೆಂಪಾದ ತಿರುವು
ಕಾಡಿದರೂ ಇರಲಿ ನೆನಪು
ಬೇಡ ಜಾಣ ಮರೆವು
ನಿನ್ನ ನೆನಪಲೆ ಕೊರಗುತಿರುವೆ
ಎನುವರೆಲ್ಲ ಜನ
ನಿನ್ನ ನೆನೆದೇ ಬದುಕುತಿರುವೆ
ಅರಿಯರೆನ್ನ ಮನ
*
ಶುಭಾಶಯ ಕೋರುವ ಹೆಸರಲ್ಲಿ
ಮೃದು ಅಂಗೈಯ ಮುಟ್ಟಿದೆ
ಸುಣ್ಣ ಆಗಿದೆ ಎಂದು ಸುಳ್ಳು ಹೇಳಿ
ಬೆನ್ನನೊಮ್ಮೆ ಮುಟ್ಟಿದೆ
ರಸ್ತೆ ದಾಟುವಾಗ ‘ಎಚ್ಚರ’ ಎಂದು
ತೋಳು ಮುಟ್ಟಿ ಕಂಪಿಸಿದೆ
ಯಾವ ನೆಪವೂ ಇಲ್ಲದೆ ತಬ್ಬಿ
ಮನವ ಮುಟ್ಟುವ ಹಂಬಲ ಮಾತ್ರ
ಉಳಿದೇ ಹೋಯ್ತು
*
love_birds
ನಿನ್ನ ಕರೆಗೆ ಹಾಡುತ್ತಿತ್ತು
ನಿನ್ನ ಕೋಪಕೆ ಕಂಪಿಸುತ್ತಿತ್ತು
ಮುದ್ದು ಮಾಡಿದರೆ ಬಿಸಿಯಾಗುತಿತ್ತು
ಈಗ ಕ್ರೆಡಿಟ್‌ ಕಾರ್ಡಿನವರ ಕಾಟಕ್ಕೆ
ಕಂಗೆಟ್ಟಿದೆ ನನ್ನ ಮೊಬೈಲು
ನಿನ್ನ ನಂಬರು ಚಾಲ್ತಿಯಲ್ಲಿಲ್ಲ
*
ನೀನು ತೊರೆದು ಹೋದ ಮೇಲೆ
ನಾನು ಗಡ್ಡ ಬಿಟ್ಟಿಲ್ಲ, ಕುಡಿವುದ ಕಲಿತಿಲ್ಲ
ಕೆಲಸಕ್ಕೆ ಹೋಗುವುದನ್ನೂ ಬಿಟ್ಟಿಲ್ಲ
ನಿನ್ನ ನೆನಪಲ್ಲಿ ಕಣ್ಣೀರು ಸುರಿಸುತಿಲ್ಲ
ಈ ಪದ್ಯ ಬರೆಯುವಾಗಲೂ ಕಂಪಿಸುತಿಲ್ಲ
ಹೇಳು, ನಿನಗೆ ಖುಷಿಯಾಯಿತೆ?
*
ನಿನ್ನ ಮುದ್ದಿಸಿ ಮರಳುತಿದ್ದೆ
ಜೋರುಮಳೆಗೆ ಸಿಕ್ಕಿಬಿದ್ದೆ
ಒಳಗೂ ಒದ್ದೆ ಹೊರಗೂ ಒದ್ದೆ
ಕಣ್ಣ ತುಂಬ ಸುಖದ ನಿದ್ದೆ
*
joyful_moment
ಬಟನ್‌ಗೆ ಸಿಲುಕಿದ ಕೂದಲು ಇಲ್ಲ
ಅಂಗಿ ಮೇಲೆ ನಿನ್ನ ತುಟಿಮುದ್ರೆ ಇಲ್ಲ
ನಾವು ಕೂಡಿದ್ದಾದರೂ ನಿಜವೆ ತಿಳಿಯುತಿಲ್ಲ
ಒಂದೇ ಸಾಕ್ಷಿ, ಆಗಿನಿಂದ ನಿದ್ರೆ ಇಲ್ಲ
*
ಬೀಡಾ ಹಾಕಿಕೊಂಡು ತುಟಿ ಕೆಂಪ ಮರೆಸಿದೆ
ಸೆಂಟು ಪೂಸಿಕೊಂಡು ಮೈಕಂಪನಳಿಸಿದೆ
ಗೆಳತಿ, ನಿನ್ನ ಕೂಡಿ ಮನೆಗೆ ಮರಳಿದವನು
ಎಷ್ಟು ನಟಿಸಿದರೂ ಕಣ್ಣ ಹೊಳಪನಡಗಿಸದಾದೆ
*
ನಾವು ಅಷ್ಟೊಂದು ಮೈ ಮರೆಯಬಾರದಿತ್ತು
ಈಗ ನೋಡು ಮೆಲುಕುಹಾಕಲು ಕೂತರೆ
ಕೂಟದ ಒಂದು ವಿವರವೂ ನೆನಪಾಗುತಿಲ್ಲ
ಈ ತುಟಿಯ ಗಾಯವೂ ಏನೂ ಹೇಳುತಿಲ್ಲ

‍ಲೇಖಕರು avadhi

June 3, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

15 ಪ್ರತಿಕ್ರಿಯೆಗಳು

 1. ಶೆಟ್ಟರು (Shettaru)

  ಸಖತ್ತಾಗಿವೆ ಅಪಾರ
  ಯಾರೋ ಕೀ ಮೇಹಫೀಲ್ ನಮ್ದು ಒಂದು
  ನಿನ್ನ ಕಾಯುವುದಕ್ಕಿಂತ
  ಬೇರೆ ಸುಖವೆಲ್ಲಿಯದು ಗೆಳತಿ
  ನೀ ಬಂದ ಮೇಲೆ
  ನಮಗೆಲ್ಲಿಯ ವಿಶ್ರಾಂತಿ.
  -ಶೆಟ್ಟರು

  ಪ್ರತಿಕ್ರಿಯೆ
 2. Tina

  ಅಪಾರ,
  ಬಹಳ ಖುಶಿಯಿಂದ ಮತ್ತೆ ಓದಿಕೊಂಡೆ.
  ಕವಿತೆಗಳು ಹೀಗಿರಬೇಕು.
  ಸರಳವಾಗಿ ಹರಿದುಹೋಗಬೇಕು.
  ತಡವರಿಸದ ಹಾಗೆ.
  ಏನೂ ಹೇಳದೆಯೆ ಏನೆಲ್ಲ ಹೇಳಬೇಕು.
  ಅಂಗಿಯ ಮೇಲಿರದೆ ಕಾಡುವ
  ತುಟಿಯ ಮುದ್ರೆಯ ಹಾಗೆ.

  ಪ್ರತಿಕ್ರಿಯೆ
 3. armanikanth

  hanigalu ista aaadavu…
  vaara vaara beredu odugarannu khushi padisi…
  halavara haleya premaprasanga nenapaaguvante maadi…avaru hani odutaa onderadu kambani udurisuvantaagali…

  ಪ್ರತಿಕ್ರಿಯೆ
 4. malathi S

  ’ಅಪಾರ’ ಪ್ರತಿಭೆ ಇದೆ ಇವರಲ್ಲಿ. ಕಥೆ ಕೂಡ ಚೆನ್ನಾಗಿ ಬರೀತಾರೆ.
  🙂
  ms

  ಪ್ರತಿಕ್ರಿಯೆ
 5. Santhosh Ananthapura

  ಆಪ್ತತೆ ಮತ್ತು ಆರ್ದ್ರತೆಯನ್ನು ಜೊತೆ ಜೊತೆಗೆ ತರುವ “ಹನಿ”ಗಳು ಇವು……. ಅಪಾರ ಹೀಗೆ ಬರೀತಾ ಇರಿ.
  — ಸಂತೋಷ್ ಅನಂತಪುರ

  ಪ್ರತಿಕ್ರಿಯೆ
 6. ಸುಘೋಷ್ ಎಸ್ ನಿಗಳೆ

  ನವ್ಯದ ಹೆಸರಿನಲ್ಲಿ ಏನೇನೋ ಬರೆದು (ಅಥವಾ ಗೀಚಿ ಬಿಸಾಕಿ), ಓದುಗರ ಕೊರೆವ, ಪ್ರಾಣ ತಿನ್ನುವ, ಅರ್ಥಮಾಡಿಕೊಳ್ಳಲು ಮ್ಯೂಚೂವಲ್ ಫಂಡ್ ಗಳ ಬ್ರೋಷರ್ ಗಳಷ್ಟೇ ಕಠಿಣವಾದ ಕವಿತೆಗಳ ಮಧ್ಯದಲ್ಲಿ ಅಪಾರ ಮಾತ್ರ ತುಂಬಾ ಡಿಫರೆಂಟ್ ಆಗಿ ನಿಲ್ಲುತ್ತಾರೆ. ತುಂತುಂತುಂತುಂತುಂಬಾಬಾಬಾಬಾ ಚೆನ್ನಾಗಿದೆ ಕವಿತೆಗಳು ಅಪಾರ. ಕೀಪ್ ರೈಟಿಂಗ್….ಸುಫೋಷ್ ಎಸ್. ನಿಗಳೆ

  ಪ್ರತಿಕ್ರಿಯೆ
 7. ಜೋಗಿ

  ಕೂಡಿ ಕಳಕೊಂಡವನ ಬಡತನದ ಗಳಿಗೆಗಳು ನೆನಪಿಸಿದ್ದು ಏನನ್ನು? ಎಂದೋ ಸಂದುಹೋದ ಕಾಲದ ಹೆಜ್ಜೆಗುರುತುಗಳನ್ನು, ನಖಕ್ಷತಗಳನ್ನು, ಫಳಕ್ಕನೆ ಮರೆಯಾದ ಕಂಗಳನ್ನು, ಅವಳ ಕಂಠದಿಂದ ಹೊರಟು ದೇಶಕಾಲದಲ್ಲಿ ಕಣ್ಮರೆಯಾದರೂ ನನ್ನಲ್ಲೇ ಉಳಿದಿರುವ ಶಿಶುನಾಳರ ಹಾವು ತುಳಿದೇನೇ ಮಾನಿನಿ ಹಾಡನ್ನು.
  ಎಲವೋ ಕುಂಟಿನಿ ಗೋಪಾಲಕೃಷ್ಣನೇ, ಇದನ್ನು ಓದು. ನೀನೂ ವಿರಹದಿಂದ ಪರಿತಪಿಸು. ಈ ಮುಂಜಾನೆ ಇದೇ ನಿನಗೆ ಹಿಡಿಶಾಪ.

  ಪ್ರತಿಕ್ರಿಯೆ
 8. ಶಮ, ನಂದಿಬೆಟ್ಟ

  ಅಂಗಿಯ ಮೇಲಿರದೇ ಕಾಡುವ ತುಟಿಯ ಮುದ್ರೆ… ಸಿಗದೇ ಹೋದ ಪ್ರೇಮಿಯ ನೆನಪು ನಿರಂತರ ಮಧುರ ಯಾತನೆಯೇ ಹೌದು…
  ಎಷ್ಟೊಂದು ಸಲೀಸಾಗಿ ಹೊಳೆದಿತ್ತು ಹೆಸರದು ಅಂದು ಏನೆಂದು ಕರೆಯುತಿರುವೆಯೊ
  ಪುಟ್ಟ ಮಗಳನು ಇಂದು – ಹೀಗೆಲ್ಲ ಕೇಳಿದರೆ ಏನೆಂದು ಹೇಳುವುದು ?
  ಯಾವ ನೆಪವೂ ಇಲ್ಲದೆ ತಬ್ಬಿ ಮನವ ಮುಟ್ಟುವ ಹಂಬಲ ಮಾತ್ರ ಉಳಿದೇ ಹೋಯ್ತು ಎಂದರೆ ಕಣ್ಣು ಹನಿಗೂಡದೇ ಅಪಾರ ?
  ಏನಿಲ್ಲ.. ಏನಿದೆ ಇದರಲ್ಲಿ ಎಂದರೆ ಹೇಳುವುದು ಕಷ್ಟ.. ಹೀಗೆ ಆಗಾಗ ಬರೆಯಲು ನಿಮಗೇನು ಕಷ್ಟವೋ ಅರಿಯೆ..
  ಅಂದ ಹಾಗೆ ಜೋಗಿಯವರು ಕುಂಟಿನಿಯವರಿಗೆ ಮಾತ್ರ ಹೇಳಿದ್ದು ಯಾಕೆ ? ನಾವೆಲ್ಲಾ ಮನುಷ್ಯರ ಹಾಗೆ ಕಾಣುತ್ತಿಲ್ಲವೋ ? ಎಂಬುದನ್ನು ಕೇಳಿ ಹೇಳುವಿರಾ ಪ್ಲೀಸ್..?

  ಪ್ರತಿಕ್ರಿಯೆ
 9. Chitra

  ಅಪಾರ ಸರ್..ಹನಿಗಳು ಚೆನ್ನಾಗಿವೆ. ವಂದನೆಗಳು
  “ಎಲವೋ ಕುಂಟಿನಿ ಗೋಪಾಲಕೃಷ್ಣನೇ, ಇದನ್ನು ಓದು. ನೀನೂ ವಿರಹದಿಂದ ಪರಿತಪಿಸು. ಈ ಮುಂಜಾನೆ ಇದೇ ನಿನಗೆ ಹಿಡಿಶಾಪ…”
  ಜೋಗಿ ಸರ್..ಕುಂಟಿನಿ ಸರ್ ಇದನ್ನು ಓದಿದ್ದಾರೆ. ಹರಿಪ್ರಸಾದ್ ಹೊಟೇಲ್ ನಲ್ಲಿ ಪರಿತಪಿಸುತ್ತಾ ಮಸಾಲೆ ದೋಸೆ ಮೆಲ್ಲುತ್ತಿದ್ದಾರೆ.!!!!:)))))
  ಯಾರದು ನೆನಪಾಯಿತು ನಿಮಗೆ?!! ಹೆಹೆಹೆಹ!
  -ಚಿತ್ರಾ

  ಪ್ರತಿಕ್ರಿಯೆ
 10. PRAKASH HEGDE

  ಕವಿತೆಯ ನೇರವಂತಿಕೆ…
  ಬಹಳವಾಗಿ ಇಷ್ಟವಾಗುತ್ತದೆ…
  ಚಂದದ ಕವನಕ್ಕೆ ಅಭಿನಂದನೆಗಳು…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: