ಅಂತರಗಂಗೆ ಇಂದಿಗೂ ಹಾಗೇ ನಿಂತಿದ್ದಾಳೆ..

P for…
ಲೀಲಾ ಸಂಪಿಗೆ
ಎರಡು ಆಟೋಗಳು ಸ್ಟಾಟರ್್ ಆದ್ವು. ಒಂದರಲ್ಲಿ ಮಂಗಳ, ಸುಧಾ, ಪಂಕಜ, ಶಂಕರಮ್ಮ ಇದ್ರು. ಇನ್ನೊಂದರಲ್ಲಿ ನಾನು, ಫೀಲ್ಡ್ ವರ್ಕರ್ ಕೃಷ್ಣಪ್ಪ, ನಾಸೀನಾ, ಶಕು ಇದ್ವು. ಸೈಕಲ್ನಲ್ಲಿದ್ದ ರಂಗಣ್ಣ ಮುಂದೆ ಸಾಗುತ್ತಾ ದಾರಿ ತೋರ್ಸುತ್ತಾ ಹೊರಟ. ರಂಗಣ್ಣ ನಮಗೆಲ್ಲಾ ಪರಿಚಿತನೇ. ಕೋಲಾರದ ಕಚೇರಿಯಲ್ಲಿ ಲೈಂಗಿಕ ವೃತ್ತಿ ಮಹಿಳೆಯರ ವಾರದ ಸಭೆಗೆ ಬ್ರೆಡ್ ತಂದುಕೊಡುತ್ತಿದ್ದ. ಸೈಕಲ್ನ ಕ್ಯಾರಿಯರ್ನಲ್ಲಿ ಬ್ರೆಡ್, ಬಿಸ್ಕೆಟ್ಸ್, ಬನ್ಸ್ ಮಾರುವುದೇ ಅವನ ವೃತ್ತಿ. ಈ ಹುಡುಗಿಯರ ಪರಿಚಯವಿದ್ದವನೇ ಅವನು. ನನಗೂ ಕೂಡ. ಬಸ್ ಸ್ಟ್ಯಾಂಡ್ ದಾಟಿ, ಊರೆಲ್ಲಾ ಮುಗಿದು ಒಂದು ಓಣಿಯಲ್ಲಿ ಸೈಕಲ್ ಸಾಗಿತ್ತು. ರಂಗಣ್ಣನಿಗೆ ಆಯಾಸವಾದಂತಿತ್ತು. ಆದ್ರೂ ತನ್ನದೇ ಸ್ಪೀಡಲ್ಲಿ ಮುಂದೆ ಹೋಗ್ತಿದ್ದ. ಮುಖದಲ್ಲಿ ಎಂಥದೋ ವಿಷಾದದ ಛಾಯೆಯಿತ್ತು. ರಂಗಣ್ಣನಿಗಷ್ಟೇ ಅಲ್ಲ, ಆಟೋ ಡ್ರೈವರ್ಗಳಾದ ಸ್ವಾಮಿ ಮತ್ತು ರಾಜನನ್ನೂ ಸೇರಿಸಿ ಅಲ್ಲಿದ್ದ ಎಲ್ಲರಲ್ಲಿಯೂ ಅದೇ ಭಾವವಿತ್ತು.
ಆಟೋಗಳು ತಿರುವುಗಳಲ್ಲಿ ಸುತ್ತುತ್ತಾ ಹೊರವಲಯಕ್ಕೆ ಬಂದೊಡನೆ ಕತ್ತೆತ್ತಿ ನೋಡಿದೆ. ಅಂತರಗಂಗೆಯ ತಪ್ಪಲು, ಒಂದರಹಿಂದೊಂದರ ಬೆಟ್ಟದ ಲೇಯರ್ಗಳು ಚಿತ್ರ ಬರೆದಂತಿತ್ತು. ಮುಳುಗುವ ಸೂರ್ಯ ತನ್ನ ಹೊಂಗಿರಣಗಳಿಂದ ಅದಕ್ಕೊಂದು ಫ್ರೇಂ ಕೊಟ್ಟಿದ್ದ. ವಷರ್ಾಗಾಲ ತನ್ನೊಡಲಿನ ಯಾವುದೋ ಸೆಲೆಯಿಂದ ತಣ್ಣನೆಯ ಗಂಗೆಯನ್ನು ಗುಪ್ತಗಾಮಿನಿಯಾಗಿ ಹರಿಸುತ್ತಾ ಅದಕ್ಕೊಂದು ಐಡೆಂಟಿಟಿ ತಂದು ಕೊಟ್ಟಿರುವ ಅಂತರಗಂಗೆ ಹತ್ತಿರವಾದಳು.
ನಾಸೀನಾ ಜಗಿಯುತ್ತಿದ್ದ ಮಾಣಿಕ್ಚಂದ್, ಶಕು ಲೈಟಾಗಿ ಕುಡಿದು ಬಂದಿದ್ದ ಬಿಯರ್ನ ವಾಸನೆಗಳು ಒಂದಕ್ಕೊಂದು ಬೆರೆತು ಇಡೀ ಆಟೋಗೆ ಒಂದು ಕಮಟು ವಾಸನೆಯನ್ನು ತುಂಬಿದ್ದವು. ನನಗಂತೂ ಹೊಟ್ಟೆ ಕಲಸಿ ಬಂದಂತಾಗಿತ್ತು. ಹೀಗೇ ಸಾವಿರ ಸಲ ಇದೇ ಸಂಕಟ ಅನುಭವಿಸಿದ್ದೇನೆ. ಸಭೆಗಳಲ್ಲಿ, ಫೀಲ್ಡ್ನಲ್ಲಿ, ಪ್ರಯಾಣದಲ್ಲಿ…ಹೀಗೇ ನೂರಾರು ಬಾರಿ ಇಂತಹುದೇ ಹೊಟ್ಟೆಯ ಸಂಕಟ ಅನುಭವಿಸಿದ್ದೇನೆ.
ಆದ್ರೆ ಈ ದಿನದ ಈ ಪಯಣದಲ್ಲಿ ಮತ್ತದೇ  ನೀತಿ ಪಾಠ ಹೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅದೆಂಥಾ ಆತಂಕದಲ್ಲಿ ನನ್ನ ಮನಸ್ಸಿತ್ತು. ಅದೆಷ್ಟು ಪ್ರಶ್ನೆಗಳು ನನ್ನನ್ನು ಮತ್ತೆಮತ್ತೆ ಕೆಣಕುತ್ತಿದ್ದವು.  ಅಂತರಗಂಗೆಯ ಹೊಳಹೊಕ್ಕಿದ್ವು. ಸಂಜೆಯ ಮಬ್ಬು ಕಪ್ಪಾಗುವುದರೊಳಗೆ ನಮ್ಮ ಹುಡುಕಾಟ ಮುಗಿಸಬೇಕಾಗಿತ್ತು.

ಆಟೋಗಳ ದಾರಿ ಮುಗಿದಿತ್ತು. ಸರಸರನೆ ಇಳಿದ ನಾವೆಲ್ಲರೂ ರಂಗಣ್ಣನನ್ನ ಹಿಂಬಾಲಿಸಿದ್ವು. 25ರಿಂದ 30 ಮೀಟರ್ನಷ್ಟು ಗುಡ್ಡ ಇಳಿದೆವು. ಅಲ್ಲೊಂದು ಗುಂಡಿ. ಅದರಲ್ಲೊಂದಿಷ್ಟು ಮಲೆತ ನೀರು, ಹುಳುಗಳೂ ಇದ್ವೇನೋ! `ಅಮ್ಮಾ, ಇದೇ ಗುಂಡಿ ಹತ್ತಿರ ಕುಸುಮಾಳನ್ನ ನೋಡಿದ್ದು. ಇಲ್ಲೇ ಬಿದ್ದಿದ್ಲು. ಇದರಲ್ಲೇ ನೀರು ಕುಡಿದಿರೋದು’, `ಹೌದಾ, ಕೃಷ್ಣಪ್ಪ, ಶಕು, ಸುಧಾ ಇಲ್ಲೇ ಸುತ್ತಲ್ಲೆಲ್ಲಾ ಹುಡುಕಿ, ಹೆಚ್ಗೆ ದೂರ ಏನೂ ಹೋಗ್ಬೇಡಿ, ಅವ್ಳು ಆ ಸ್ಥಿತಿಯಲ್ಲಿ ಹೆಚ್ಚು ದೂರ ತೆವಳೋಕೇನೂ ಆಗಿರೋಲ್ಲ’ ಅಂದೆ. ಈ ನಾಯಕತ್ವದ ಪಾತ್ರವೇ ಒಂದು ಥ್ರಿಲ್. ಆ ಹೊಣೆಗಾರಿಕೆ, ಆ ದುಸ್ಸಾಹಸಗಳು, ಆ ಕಾಳಜಿ, ಆ ಸಿಟ್ಟು, ಆ ಪ್ರೀತಿ, ಆ ಒಡನಾಟ ಇಡಿಯಾಗಿ ನನ್ನಲ್ಲೇ ಉಳಿಪೆಟ್ಟಿನ ರೂಪಕದೊಂದಿಗೆ ಸದಾ ಹೆಣೆದುಕೊಂಡೇ ಇರುತ್ತಿದ್ವು.
`ಮೇಡಂ, ಮೇಡಂ, ಬನ್ನಿ ಇಲ್ಲಿ…’ ಕಿರುಚ್ಕೊಂಡ್ಲು ಶಕು. ಎಲ್ಲರೂ ಓಡಿದ್ವು. ಎದೆ ಝಲ್ಲೆಂತು. ದೇಶದ ತುಂಬೆಲ್ಲಾ ನಿರಂತರವಾಗಿ ಶತಶತಮಾನಗಳಿಂದ್ಲೂ ವೇಶ್ಯಾವಾಟಿಕೆಯ ನೆಪದಲ್ಲಿ ತಮ್ಮ ತೆವಲು ತೀರಿಸಿಕೊಳ್ಳುವ ಈ ವ್ಯವಸ್ಥೆಯ ಸಾವಿರಾರು ಗರ್ಭಪಾತಗಳು ನನ್ನ ಸುತ್ತ ನತರ್ಿಸಿದಂತೆ ಭಾಸವಾಯ್ತು. ಅಬ್ಬಾ! ಇಂಥಾ ಅದೆಷ್ಟು ಗರ್ಭದ ಚೀಲ ಕಳಚದ ಭ್ರೂಣಗಳು ಮಣ್ಣಾಗಿಬಿಟ್ಟವೋ…  ಸಾವರಿಸಿಕೊಳ್ಳಲಾರದಷ್ಟು ಭಾವುಕಳಾಗಿಬಿಟ್ಟೆ. ಹತ್ತಿರ ಹೋದೆ. ಎಲ್ಲರೂ ಸುತ್ತುವರೆದ್ರು. ಅಲ್ಲಿದ್ದ ಗರಿಕೆಯೆಲ್ಲಾ ರಕ್ತಸಿಕ್ತವಾಗಿತ್ತು. ಕುಸುಮ ಬೆರ್ಸೆ ಗರ್ಭಚೀಲದೊಳಗಿನ ಜೀವ, ಜೀವ ತುಂಬುವ ಮೊದಲೇ ಇಲ್ಲವಾಗಿತ್ತು. ಒಂದು ಕ್ಷಣ ಏನೂ ತೋಚಲಿಲ್ಲ. ಮತ್ತೆ ಸಾವರಿಸಿಕೊಂಡೆ. `ಅಮ್ಮಾ, ನಾಯಿ ನರಿ ಎಳ್ದಾಡ್ಬುತ್ತವೆ. ಎಲ್ಲಾದ್ರೂ ಮುಚ್ಚಿ ಹೋಗೋಣ್ವಾ’ ಅಂದ್ಲು ಶಂಕ್ರಮ್ಮ. ಅಲ್ಲಿಯ ಲೈಂಗಿಕ ವೃತ್ತಿ ಮಹಿಳೆಯರ ಗುಂಪಿನಲ್ಲೇ ಹಿರಿಯಳಾದ ಶಂಕ್ರಮ್ಮನಿಗೂ ನೋವಾಗಿತ್ತು. ಎಲ್ರೂ ಸೇರಿ ಕುಸುಮ ನೀರು ಕುಡಿದು ಜೀವ ಉಳಿಸಿಕೊಂಡಿದ್ದ ಆ ಗುಂಡಿಯ ತಟದಲ್ಲೇ ಒಂದಷ್ಟು ಬಗೆದ್ರು. 2-3 ತಿಂಗಳಲ್ಲೇ ಕುಸುಮ ಹೆರ್ತ್ತಾಳೆ ಕಣಮ್ಮ ಅಂತ ಕೇಳ್ಬೇಕಾಗಿದ್ದ ಮಾತುಗಳನ್ನು ಇಲ್ಲವಾಗಿಸಿ ಮಣ್ಣಲ್ಲಿಟ್ಟು ಮೇಲೊಂದಿಷ್ಟು ಮಣ್ಣು ಹಾಕಿದ್ರು.
ಮನಸ್ಸು ಭಾರವಾಯ್ತು. ನಿಸ್ತೇಜವಾಗಿ ಆಸ್ಪತ್ರೆಯಲ್ಲಿ ಮಲಗಿದ್ದ ಕುಸುಮ ನನ್ನನ್ನೇ ತುಂಬಿಕೊಂಡುಬಿಟ್ಟಿದ್ಲು.
ಚಿಕ್ಕ ಪ್ರಾಯದ ಕುಸುಮ ಕೋಲಾರದ ಲೈಂಗಿಕವೃತ್ತಿ ಮಹಿಳೆಯರಲ್ಲೇ ಸುಂದರಿ. ಅವಳ ಹುಡುಗಾಟಿಕೆ ಅವಳ ಆಕರ್ಷಣೆಯನ್ನು ಇನ್ನೂ ಹೆಚ್ಚಿಸಿತ್ತು. ಸ್ವಲ್ಪ ಉಡಾಫೆ ಹುಡ್ಗಿ. ಪ್ರತೀ ಮೀಟಿಂಗ್ನಲ್ಲೂ ಅವಳದ್ದೇ ಒಂದು ಅಜೆಂಡಾ. ಅವಳ ಮೇಲೆ ನೂರು ದೂರು. `ಏನು ಕುಸುಮಾ, ಅವರೆಲ್ಲಾ ಹೇಳ್ತಿರೋದ್ರ ಬಗ್ಗೆ ನೀನೇನು ಹೇಳ್ತೀಯಾ?’ ಅಂತ ಟೀಕೆ, ಸ್ವಯಂಟೀಕೆ, ಕಲಿಸೋಳ ಥರಾ ನಾನು ಕೇಳಿದ್ರೆ `ಅಯ್ಯೋ ಬಿಡಮ್ಮ, ನನ್ನ ಮೇಲಿನ ಹೊಟ್ಟೆಕಿಚ್ಚಿಗೆ ಹಾಗೇಳ್ತಾರೆ. ನಾನಿದ್ರೆ ಗಿರಾಕಿಗಳು ನನ್ನ ಬಿಟ್ಟು ಇವರನ್ನು ಮೂಸೋಲ್ಲ ನೋಡು ಅದನ್ನ ಇಲ್ಲಿ ತೀರುಸ್ಕೊಂತಾ ಅವ್ರೆ’ ಅಂತ ಸಾರಾಸಗಟಾಗಿ ನನ್ನ ಪ್ರಜಾಪ್ರಭುತ್ವದ ಪಾಠಾನ ದಬ್ಬಾಕ್ಬಿಡ್ತಾ ಇದ್ಲು. ಕುಡಿಯದೇ ಇದ್ರೆ ಮಂಕಾದ, ಮುಗ್ಧ ಹುಡುಗಿಯಾಗಿರುತ್ತಿದ್ದ ಕುಸುಮಾ ರೇಗಿಸುತ್ತಿದ್ದ ಪಕರ್ಿಗಳೆದುರು ನಿಲರ್ಿಪ್ತವಾಗಿಯೋ, ನಿರುತ್ತರಳಾಗಿಯೋ ಬಂದ್ಬಿಡ್ತಿದ್ಲು. ಕುಡಿದಿದ್ರೆ ಮಾತ್ರ ಅವರನ್ನು ರೇಗಿಸಿ ಮುಂದೆ ಬರ್ತಿದ್ಲು. ಫೀಲ್ಡ್ನಲ್ಲಿರುವಾಗ ಇವಳ ಜೊತೆ ನಡೆಯೋದು ಅಂದ್ರೆ ಒಂದು ಆತಂಕಾನ ಜೊತೆಯಲ್ಲಿಟ್ಕೊಂಡಂಗೇನೇ. ಆದ್ರೆ ಅದೆಂಥಾ ಸಂಘಟನಾ ಚಾತುರ್ಯ ಇತ್ತು ಅಂದ್ರೆ ಅವಳಿದ್ರೆ ಮಾತ್ರ ಆ ಸಮುದಾಯದ ಒಂದು ಸಭೆ ಯಶಸ್ವಿಯಾಗ್ತಿತ್ತು. ಅವಳಿಲ್ಲಾಂದ್ರೆ ಏನಾದ್ರೂ ನೆಪ ಹೇಳಿ ಸಭೆ ಮುಂದೂಡ್ತಿತ್ತು.
ಆ ದಿನವೂ ಸಂಜೆ ಬಸ್ಸ್ಟ್ಯಾಂಡ್ ಮುಂಭಾಗದಲ್ಲಿ ಗಿರಾಕಿಗಳಿಗಾಗಿ ಕಾಯ್ತಾ ನಿಂತಿದಾಳೆ. ಆಟೋದಲ್ಲಿ ಬಂದ ಒಬ್ಬ ಗಿರಾಕಿ ಕುದುರಿಸಿದ್ದಾನೆ. ಆಟೋ ಹತ್ತಿದಾಳೆ. ಲಾಡ್ಜ್ಗೆ ಹೋಗ್ಬಹುದು ಅಂದ್ಕೊಂಡವಳು ಆಟೋ ಬೇರೆ ದಾರಿ ಹಿಡಿದಿದ್ದನ್ನು ಪ್ರಶ್ನೆ ಮಾಡಿದಾಳೆ. ಅದಕ್ಕವನು `ಎಲ್ಲಾ ವ್ಯವಸ್ಥೆ ಆಗೈತೆ ಬಾ’ ಅಂದವ್ನೆ. ಆಟೋ ತನ್ನ ವೇಗವನ್ನ ಹೆಚ್ಚಿಸ್ಕೊಳ್ಳೋವಾಗ್ಲೇ ಕಾಲಿಗೆ ತಡೆದ ಬಾಕ್ಸ್ ನೋಡ್ತಾಳೆ ಕುಸುಮಾ. ಬಾಟಲ್ಗಳ ಬಾಕ್ಸ್ ಅದು! ಸುಮಾರು ಎರಡು ಫಲರ್ಾಂಗು ಹೋಗೋವಷ್ಟರಲ್ಲಿ ಇನ್ನೊಬ್ಬ ಆಟೋ ಹತ್ತಿದಾನೆ, ಇನ್ನೊಂದು ಸ್ವಲ್ಪ ಹೋಗೋದ್ರಲ್ಲಿ ಇನ್ನೊಬ್ಬ…ಹೀಗೇ ಒಂದು ಕಿ.ಮೀ ಹೋಗೋದ್ರಲ್ಲಿ ಆಟೋದಲ್ಲಿ ಕುಸುಮಾಳನ್ನ ಬಿಟ್ಟು ಆರು ಜನವಾಗಿದ್ದಾರೆ. ಕತ್ತಲಾವರಿಸುತ್ತಿದ್ದ ಸಮಯ, ನಿರ್ಜನ ಪ್ರದೇಶ ಕುಸುಮಾಳ ಧ್ವನಿಯನ್ನು ಅಲ್ಲೇ ಅಡಗಿಸಿಬಿಟ್ಟಿದೆ. ಕುಸುಮಾಳಿಗೆ ತನ್ನ ಪರಿಸ್ಥಿತಿ ಅರಿವಾಗಿದೆ. ಲೈಂಗಿಕವೃತ್ತಿಯ ಬದುಕಿನಲ್ಲಿ ಕೇಳಿದ್ದ ಅದೆಷ್ಟೋ ಇಂಥದ್ದೇ ಕತೆಗಳ ಪಾತ್ರ ಈವತ್ತು ನಾನಾಗಿಬಿಟ್ಟೆ ಅನ್ಸಿದೆ. ಹೋದ ಆಟೋ ಅಲ್ಲೇ ನಿಂತಿದೆ. ಇಳಿದವರು ಕುಸುಮಾಳನ್ನು ದಬ್ಬಿಕೊಂಡೇ ಹೋಗಿದ್ದಾರೆ. ಚೆನ್ನಾಗಿ ಕುಡಿದು ತಂದಿದ್ದ ಬಾಕ್ಸ್ ಅನ್ನು ಬಿಸಾಡಿ ಅವಳ ಮೇಲೆರಗಿದ್ದಾರೆ. ಇವಳೂ ಕುಡಿದಿದ್ದರಿಂದ ಕುಸಿದು ಹೋಗಿದ್ದಾಳೆ. ಆ ರಕ್ಕಸರ ತೃಷೆ ತೀರುವವರೆಗೂ ರಾತ್ರಿಯಿಡೀ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಕುಸುಮಾ ತನ್ನ ದೇಹದ, ಜೀವದ ಹಂಗೇ ತೊರೆದು ನಿಶ್ಚೇಷ್ಟಿತಳಾಗಿದ್ದಾಳೆ. ಅವಳನ್ನು ಅಲ್ಲೇ ಬಿಸಾಡಿ ಅವರೆಲ್ಲಾ ಜಾಗ ಖಾಲಿ ಮಾಡಿದ್ದಾರೆ.
ಕುಸುಮಾಳ ಗರ್ಭದಲ್ಲಿ ಇನ್ನೇನು ಜೀವದ ಪಡಿಯಚ್ಚು ಮೂಡಿ ಹೆರಿಗೆ ಬೇನೆಯೊಂದಿಗೆ ಅಮ್ಮನ ಗರ್ಭದಿಂದ ಜಾರಬೇಕಿದ್ದ ಆ ಪುಟ್ಟ ಜೀವವನ್ನು ಆ ಕಾಮುಕರು ಅತ್ಯಾಚಾರ ಮಾಡಿದ್ದಾರೆ. ಪೈಶಾಚಿಕ ನಡವಳಿಕೆಗೆ ತತ್ತರಿಸಿ ಆ ಜೀವ ಕಿಬ್ಬೊಟ್ಟೆಯ ಸೀಳೊಡೆದು ಹೊರಚಿಮ್ಮಿದೆ. ಆ ರಕ್ತಸ್ರಾವ ಕುಸುಮಾಳನ್ನೇ ತೊಯ್ಸಿದೆ.
ಇದಾವುದರ ಪರಿವೆಯೂ ಇಲ್ಲದ ಕುಸುಮಾಳಿಗೆ ಬೆಳಗಿನ ಜಾವ ಎಚ್ಚರವಾಗಿತ್ತು. ತಡೆಯಲಾರದ ಹೊಟ್ಟೆನೋವು, ನಿಲ್ಲಲಾರದ ರಕ್ತಸ್ರಾವದಿಂದ ನರಳುತ್ತಿದ್ದಳು. ಇನ್ನಿಲ್ಲದ ದಾಹದಿಂದ ತೆವಳಿಕೊಂಡು ಬಂದು ಆ ಗುಂಡಿಯಲ್ಲಿನ ಬೊಗಸೆ ನೀರನ್ನು ಕುಡಿದಿದ್ದಳು.
ಇಂತಹ ನೂರಾರು ಕ್ರೌರ್ಯಗಳಿಗೆ, ಅತ್ಯಾಚಾರಗಳಿಗೆ ಸಾಕ್ಷಿಯೆಂಬಂತೆ…ಅಂತರಗಂಗೆ ಇಂದಿಗೂ ಹಾಗೇ ನಿಂತಿದ್ದಾಳೆ.
 

‍ಲೇಖಕರು avadhi

June 8, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This