ಅಂದಹಾಗೆ ಆ ವಿಠೋಬನ ಕೊನೆಯ ಮಗ ನಾನು..

ಗಡಿಗಳು ಅಳಿದು ಹೋಗಲಿ; ಯುಧ್ಧಗಳು ನಿಲ್ಲಲಿ

lakshman-370x315ಡಾ.ಲಕ್ಷ್ಮಣ ವಿ ಎ

1984 ಇಸ್ವಿಯ ಅದೊಂದು ಮಾಮೂಲೀ ದಿನ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮೋಳೆ ಗ್ರಾಮದ ವಿಠೋಬ ಎಂಬ ಬಡ ರೈತನ ಹಟ್ಟಿಯಲ್ಲಿ  ಸಣ್ಣ ಆತಂಕದ ನಡುವೆಯೂ ಸಂಭ್ರಮ ಮನೆಮಾಡಿತ್ತು.

ಆತಂಕವೇನೆಂದರೆ ಅವನ ಮೂರನೇಯ ಮಗ ಭೀಮಪ್ಪ ಮಿಲಿಟರಿಗೆ ಆಯ್ಕೆಯಾಗಿದ್ದ. ಏನು ಕಷ್ಟವೋ ಏನೋ ಯುದ್ಧ, ದಂಗೆ, ಗಲಾಟೆಯಲ್ಲಿ ಏನಾದರೂ ಹೆಚ್ಚೂ ಕಡಿಮೆಯಾದರೆ ಎನ್ನುವ ಆತಂಕ ಒಂದೆಡೆಯಾದರೆ, ಆಗಲೋ ಈಗಲೋ mountainಮುರಿದು ಬೀಳಬಹುದಾಗಿದ್ದ ತನ್ನ ಗುಡಿಸಲಿನಿಂದ ಬದುಕು ಒಂದು ಚಿಕ್ಕ ಮನೆ ಕಟ್ಟಿ ಕೊಳ್ಳಬಹುದೆಂಬ ಸಣ್ಣ ಕನಸಿಗೆ ಜೀವ ಬಂದಂತಹ ಸಂಭ್ರಮ.

ವಿಠೋಬನದು ದೊಡ್ಡ ಕೂಡು ಕುಟಂಬ. ನಾಲ್ಕೂ ಮಕ್ಕಳು ಕೂಲಿ ಮಾಡಿ ಬದುಕಬೇಕಿತ್ತು ಇದ್ದುದರಲ್ಲೇ ಭೀಮಪ್ಪ ಮನೆ ಕೆಲಸ, ಕೂಲಿ ಕೆಲಸ ಮುಗಿಸಿ ಕಷ್ಟ ಬಿದ್ದು ಏಳನೇಯ ತರಗತಿಯ ಪಾಸು ಮಾಡಿ ನಂತರ ಓದು ಅರ್ಧ ಕ್ಕೆ ನಿಲ್ಲಿಸಿ ಸೈಕಲ್ ಮೇಲೆ ಮಾವಿನಹಣ್ಣು, ಪೇರಳೆ ಹಣ್ಣು, ನೇರಳೆ ಹಣ್ಣು ಮಾರುತ್ತ ಊರೂರು ತಿರುಗುತಿದ್ದ. ಅವನಿಗೆ ಇಪ್ಪತ್ತು ವರ್ಷ ತುಂಬುವಷ್ಟರಲ್ಲಿ ಅವನ ಓರಗೆಯವರಿಬ್ಬರು ಮಿಲಿಟರಿ ಸೇರಿ ಮನೆಗೆ ಸಂಬಳ ಕಳಿಸುವುದು ನೋಡಿ ಇವನಿಗೂ ಮಿಲಟರಿ ಸೇರಬೇಕೆಂಬ ಆಸೆ ಹುಟ್ಟಿತೇನೋ?

ಅವನಲ್ಲಿ ಶ್ರಮದಿಂದ ದಕ್ಕಿದ ಆರೋಗ್ಯ ಹಾಗು ಏಳನೇಯ ತರಗತಿಯಲ್ಲಿ ಓದಿದ ಸರ್ಟಿಫಿತೆಟ್ ಮತ್ತು ಕಣ್ಣುಗಳಲ್ಲಿ ಅರೆಪಾವು ಕನಸು ಬಿಟ್ಟರೆ ಹೇಳಿಕೊಳ್ಳುವಂತದ್ದೇನೂ ಇರಲಿಲ್ಲ. ವಾರಕ್ಕೊಮ್ಮೆ ಅವನು ಹಣ್ಣುಗಳ ಸಗಟು ವ್ಯಾಪಾರಕ್ಕೆಂದು ಬೆಳಗಾವಿಗೆ ಹೋಗುತಿದ್ದ. ಹೀಗೊಮ್ಮೆ ಬೆಳಗಾವಿಗೆ ಹೋದವನಿಗೆ ಯಾರೋ ಭರ್ತಿಯ ಬಗ್ಗೆ ಹೇಳಿರಬೇಕು, ದೈಹಿಕ, ಲಿಖಿತ ಪರೀಕ್ಷೆ ಪಾಸು ಮಾಡಿ ಮಿಲಿಟರಿ ಸೇರಿದ.

“ಲಡಾಯಿ ಯೇನಾದರೂ ಆದರ ನಿಮ್ಮ ಮಗನ ಹೆಣಾನೂ ಬರಾಂಗಿಲ್ಲೋ, ಬರೆ ಅವರು ಹಾಕೊಳ್ಳುವ ಅರಿವಿ ಕೊಟ್ಟು ಕಳಿಸಿ ಅಲ್ಲೇ ಮಣ್ಣ ಮಾಡ್ತಾರೋ ಇಠ್ಯಾ”ಅಂತ ನಮ್ಮಪ್ಪನಿಗೆ ಊರವರು ಮಾತಾಡಿದ್ದು ಇನ್ನೂ ಚೆನ್ನಾಗಿ ನೆನಪಿದೆ. ಅಂದಹಾಗೆ ಆ ವಿಠೋಬನ ಕೊನೆಯ ಮಗ ನಾನು. ನಾನಾವಾಗ ಮೂರನೆಯ ತರಗತಿಯಲ್ಲಿ ಓದುತಿದ್ದೆ. ದೊಡ್ಡವರೆಲ್ಲ ಕೂಲಿಗೆ ಹೋಗುತ್ತಿದ್ದರಿಂದ ನನ್ನ ಓದಿಗೆ ಅಷ್ಟೇ ನೂ ಕಷ್ಟವಿರಲಿಲ್ಲ.

ಮಗನ ಮಿಲಿಟರಿ ಕಳಿಸಿದ್ದು ಮನೆಯವರಿಗೆಲ್ಲ ಆತಂಕವೇನೊ ಇತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ಸರಕಾರಿ ಸಂಬಳದಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದೆಂಬ ಆಸೆ ಬಹಳವಾಗಿತ್ತು. ಸಾಲು ಸಾಲು ಬರಗಾಲ, ಕೈ ಕೊಡುವ ಬೆಳೆ, ತುಂಬಿದ ಮನೆಯ ಹೊಟ್ಟೆ ತುಂಬಿಸಿಕೊಳ್ಳುವುದು ಸವಾಲಿನ ಕೆಲಸವೇ ಆಗಿತ್ತು. ದಿನನಿತ್ಯ ಕೂಲಿ ಸಿಗುತ್ತದೆ ಎಂಬ ಯಾವ ಗ್ಯಾರಂಟಿ ಯೂ ಇಲ್ಲ. ಹೀಗಾಗಿ ಏಳನೇಯ ತರಗತಿ ಓದಿದ ನಮ್ಮಣ್ಣನಿಗೆ ಸಿಗಬಹುದಾದ ಏಕೈಕ ಕೆಲಸವೆಂದರೆ ಸೈನ್ಯ ಸೇರಿ ಜವಾನನಾಗುವುದು. ಆ ಕಾಲಕ್ಕೆ ನಮ್ಮ ಮನೆಯ ವಾತಾವರಣಕ್ಕೆ ದೇಶಪ್ರೇಮ, ದೇಶಭಕ್ತಿ, ದೇಶಸೇವೆ ಎನ್ನುವ ಶಬ್ದಗಳು ಕೇವಲ ಪಂಡಿತರ ಪಾಲಿಗಷ್ಟೇ ಅರ್ಥ ವಾಗುವ ಪದಪುಂಜಗಳು. ಸದ್ಯ ನಮ್ಮ ಹೊಟ್ಟೆ ತುಂಬಿದರೆ ಸಾಕಿತ್ತು.

ಅಣ್ಣ ಕಷ್ಟಬಿದ್ದು ಆರು ತಿಂಗಳ ತರಬೇತಿ ಪಡೆದು ಮೊದಲ ಪೋಸ್ಟಿಂಗ್ ಭೂಪಾಲನಲ್ಲಿ ಆಯಿತು. ವಾರಕ್ಕೊಂದು ಎರಡು ಪತ್ರ ನಿಯಮಿತವಾಗಿ ಬರುತಿದ್ದವು. ಅಕ್ಷರ ತಿಳಿಯದ ನಮ್ಮಮ್ಮ ಓದಿದ ಪತ್ರಗಳನ್ನೇ ನಾಲ್ಕೈದು ಬಾರಿ ನನ್ನಿಂದ ಓದಿಸುತ್ತ ಕಣ್ಣೀರಾಗುತಿದ್ದಳು. ಮಿಲಿಟರಿ ಸೇರಿದ ಸುದ್ದಿ ಕೇಳಿ ಅವಳೆಷ್ಟು ಅಧೀರಳಾಗಿದ್ದಳೆಂದರೆ ಒಂದೊಂದು ಸಲ ಊಟ ಕೆಲಸ ಬಿಟ್ಟು ಕತ್ತಲ ಕೋಣೆಯಲ್ಲಿ ಬಿಕ್ಕುತಿದ್ದಳು. ನನಗೆ ಇದೆಲ್ಲ ತಮಾಷೆಯೆನಿಸುತಿತ್ತು. ನನಗೆ ಪುಸ್ತಕಗಳಿಗೆ ಬಟ್ಟೆಗೆ ಈಗ ಯಾವ ತೊಂದರೆಯೂ ಇರಲಿಲ್ಲವಾದ್ದರಿಂದ ಅಣ್ಣ ಕೆಲಸಕ್ಕೆ ಸೇರಿದ್ದು ನನಗೆ ಖುಷಿಯೇ ಆಗಿತ್ತು.

ಆಗಿನ ಕಾಲದಲ್ಲಿ ಟಿ.ವಿ.ಗಳಿರಲಿಲ್ಲ. ನಮ್ಮೂರಿನ ಪಂಚಾಯಿತಿ ಆಫೀಸಿಗೆ ‘ಸಂಯುಕ್ತ ಕರ್ನಾಟಕ’ ಪತ್ರಿಕೆ ಬರುತಿತ್ತು ಉಳಿದಂತೆ ಸಾಯಂಕಾಲ ಧಾರವಾಡ ಆಕಾಶವಾಣಿ ಕೇಂದ್ರದಿಂದ ಬರುವ ವಾರ್ತೆಗಳು ನಮ್ಮ ಸುದ್ದಿಯ ಮೂಲಗಳು. ಅಕಸ್ಮಾತ್ತಾಗಿ ಗsoldierಡಿಯಲ್ಲಿ ಯುದ್ಧದ ಸಂದರ್ಭ ಕಾಶ್ಮೀರದ ಕೊಳ್ಳದಲ್ಲಿ ರಕ್ತಪಾತ ಅನ್ನುವ ಸುದ್ದಿಗಳಿದ್ದರೆ ಆತಂಕದಿಂದ ಕೇಳಿಸಿಕೊಳ್ಳುತಿದ್ದೆ ಮತ್ತು ಅಪ್ಪಿತಪ್ಪಿಯೂ ಕೂಡ ಅವ್ವನ ಎದುರಿಗೆ ಹೇಳಿಕೊಳ್ಳುತ್ತಿರಲಿಲ್ಲ. ಏನಾದರೂ ಈ ತರಹದ ಗುಸು ಗುಸು ಮಾತುಗಳು ಅವ್ವ ಕೇಳಿಸಿಕೊಂಡರಂತೂ ಮುಗಿದೇ ಹೋಯಿತು. ಗೋಳೋ ಅಂತ ಅಳು ಶುರುವಿಟ್ಟುಕೊಳ್ಳುತಿದ್ದಳು.

ಹೀಗಾಗಿ ಆದಷ್ಟು ನಾವು ಮನೆಯವರು ಇಂತಹ ಗಾಳಿ ಸುದ್ದಿಗಳನ್ನು ದೂರವೇ ಇಡುತಿದ್ದೆವು. ಆದರೆ ನಾವೂ ಕೂಡಾ ಆತಂಕಗಳಲ್ಲೇ  ದಿನ ದೂಡುತಿದ್ದೆವು. ವಾರಕ್ಕೊಮ್ಮೆ ಅವನ ಪತ್ರ ಬಂದಾಗ ಮನೆಯವರೆಲ್ಲ ಒಟ್ಟಿಗೆ ಕುಳಿತು ಪತ್ರ ಓದಿ ಖುಷಿಪಡುತಿದ್ದೆವು ಮತ್ತು ಆರು ತಿಂಗಳಿಗೊಮ್ಮೆ ರಜ ಪಡೆದು ಮಿಲಟರಿಯ ಕಪ್ಪು ದೊಡ್ಡದಾದ ಟ್ರಂಕ್ ಹೊತ್ತಕೊಂಡು ಬರುವಾಗ ನಮ್ಮಣ್ಣ ನಮ್ಮ ಮನೆತನದ ಎಲ್ಲ ಕಷ್ಟಗಳ ಭಾರ ಹೆಗಲ ಮೇಲೆ ಹೊತ್ತು ಬರುವ ದೇವ ಮಾನವನಂತೆ ಕಾಣಿಸುತಿದ್ದ. ಮತ್ತು ಈ ಸಂಭ್ರಮದ ದಿನಗಳು ಕೇವಲ ಹದಿನೈದು ದಿನ ಹೆಚ್ಚೆಂದರೆ ಒಂದು ತಿಂಗಳಿರುತಿದ್ದವು. ರಜೆ ಮುಗಿದು ವಾಪಸು ಹೋಗುವಾಗ ಮನೆಯವರೆಲ್ಲ ಅಕ್ಷರಶಃ ಬಿಕ್ಕಿ ಬಿಕ್ಕಿ ಅಳುತಿದ್ದೆವು.

ಈ ಎಲ್ಲ ಸಂಕಟ, ಸಂಭ್ರಮದ ಮಧ್ಯೆ ಯೇ ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿತು ಅಣ್ಣನ ಮದುವೆಯಾಯಿತು ಮಕ್ಜಳಾದುವು. ಅವನ ಸಂಬಳದ ಉಳಿಕೆ ದುಡ್ಡಿನಲ್ಲಿ ಹೊಲದಲ್ಲಿ ಭಾವಿ ಕೊರೆದೆವು ವರ್ಷಕ್ಕೆರಡು ಬೆಳೆಯುವಂತಾಯಿತು ನಾನೂ ಓದಲು ಧಾರವಾಡಕ್ಕೆ ಹೋಗುವಂತಾಯಿತು. ಅಣ್ಣ ಅತ್ತಿಗೆ ಮಕ್ಕಳು ಆಗ ಗ್ವಾಲಿಯರನಲ್ಲಿದ್ದರು ಅದು 1999 ನೆಯ ಇಸ್ವಿ. ಇದ್ದಕಿದ್ದಂತೆ ಕಾರ್ಗಿಲ್ ಯುದ್ಧ ಶುರುವಾಗಿ ಬಿಟ್ಟಿತು.

ಊರಿನ ತುಂಬೆಲ್ಲ ಯದ್ದದ ಪುಕಾರು ಎದ್ದಿತು. ಪತ್ರಿಕೆ, ರೇಡಿಯೋ, ಟಿ.ವಿ.ಗಳಲ್ಲೆಲ್ಲಾ ಯುದ್ಧ ದ ಸುದ್ದಿ. ಈ ಹೊತ್ತು ಹತ್ತು ಜವಾನರು ಹುತಾತ್ಮರಾದರು, ಮರುದಿನ ನಲವತ್ತು ಜನ, ಮಾರನೆಯ ದಿನ ನೂರು ಹೀಗೆ ಹುತಾತ್ಮ ಯೋಧರ ಕಳೇಬರಗಳು ಶವಪೆಟ್ಟಿಗೆಯಲ್ಲಿ ಮೆರವಣಿಗೆ ಹೊತ್ತು ಬಂದಾಗ ಊರು ಅಕ್ಷರಶಃ ಕಣ್ಣೀರಾಗುತಿತ್ತು ಇವೆಲ್ಲ ಎಲ್ಲೋ ದೂರದಲ್ಲಿ ನಡೆಯುತ್ತಿದ್ದವಾದುದರಿಂದ ಅವ್ವನಿಗೆ ಈ ಸುದ್ದಿ ಗೊತ್ತಾಗುತ್ತಿರಲಿಲ್ಲ. ಆದರೆ ಯಾವಾಗ ಪಕ್ಕದೂರು ನವಲೀಹಾಳಿನ ಯೋಧನ ಶವ ಪೆಟ್ಟಿಗೆ ಬಂತೋ ನಮ್ಮವ್ವ ಧರಾಶಾಹಿಯಾದಳು.

ಇಲ್ಲಿ ನಮ್ಮೂರು ಹಾಗು ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಯುವಕರ ಏಕೈಕ ಕನಸೆಂದರೆ ಮಿಲಟರಿ ಸೇರುವುದು ಅದು ಬದುಕಿಳಿಯುವ ಅನಿವಾರ್ಯತೆಯೋ ದೇಶಪ್ರೇಮವೊ ಇದು ಹೀಗೆ ಎಂದು ಧೈರ್ಯವಾಗಿ ಹೇಳಲಾರೆ. ಹೀಗಾಗಿ ಇಲ್ಲಿರುವ ಹೆಚ್ಚೂ ಕಡಿಮೆ ಪ್ರತಿಯೊಂದು ಮನೆಯಲ್ಲಿ ಯೋಧರು, ನಿವೃತ್ತ ಯೋಧರು, ಅಥವ ಅದರ ಕನಸಿನಲ್ಲಿ ತಯಾರಾಗುತ್ತಿರುವ ಯುವಕರಿದ್ದಾರೆ.

ಅಣ್ಣ, ಅತ್ತಿಗೆ ಮಕ್ಕಳನ್ನು ಬಿಟ್ಟು ಕಾಶ್ಮೀರದ ಗಡಿಗೆ ಹೋದ. ಯುದ್ಧ ತೀವ್ರಗತಿಯಲ್ಲಿ ನಡೆದಿತ್ತು ಹೀಗೆ ಸಾಲು ಸಾಲು ಶವಗಳು ಊರೂರು ತಲುಪತಲಿದ್ದವು. ಕರ್ನಾಟಕದಲ್ಲೇ ಸುಮಾರು ಇಪ್ಪತ್ತು ಯೋಧರು ಹುತಾತ್ಮರಾದರೆಂಬುದು ನನ್ನ ಅಂದಾಜು. ನಮ್ಮನೆಯವರ ಪಾಲಿಗೆ ನಮ್ಮ ಅಣ್ಣನ ಹೆಣದ ದಾರಿ ಕಾಯುವವರಂತೆ ಎಲ್ಲರ ಮುಖದಲ್ಲಿ ಶೋಕದ ಛಾಯೆಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು. ಅವ್ವನ ಸಮಾಧಾನ ಮಾಡುತ್ತ ಅತ್ತಿಗೆ, ಅತ್ತಿಗೆಯನ್ನು ಸಮಾಧಾನ ಮಾಡುತ್ತ ನಾವು ಮತ್ತು ಅಂಗಳದಲ್ಲಿ ಆಡುತ್ತಿರುವ ಎರಡು ಮಕ್ಕಳನ್ನು ಹೇಗೆ ಸಮಾಧಾನ ಪಡಿಸುವುದು?

no-warಯುದ್ಧವೆಂದರೇನೆಂದು ಮಕ್ಕಳಿಗೆ ತಿಳಿಹೇಳುವುದು ಹೇಗೆ?

ದೇವರು ದೊಡ್ಡವನಿದ್ದ. ನಮ್ಮ ಅಣ್ಣ ಕಾರ್ಗಿಲ್ ಕದನದಲ್ಲಿ ಭಾಗವಹಿಸಿ ಧೀರ ಯೋಧನಾಗಿಯೇನೋ ಬಂದ. ಆದರೆ ಖುಷಿ ಪಡುವುದು ಹೇಗೆ? ನಮ್ಮ ಅಣ್ಣಂದಿರಂತ ಸುಮಾರು ಐದುನೂರು ಸೈನಿಕರು ಹುತಾತ್ಮರಾಗಿದ್ದರು.

ಇದೆಲ್ಲ ನೆನಪಾಗಲು ಕಾರಣವೇನೆಂದರೆ ಸಧ್ಯ ದೇಶದ ಮೇಲೆ ನೆರೆದಿರುವ ಯುದ್ಧದ ಕರಾಳ ನೆರಳು. ಯುದ್ಧ ಸರಿಯೋ ತಪ್ಪೋ ಎನ್ನುವುದು ಇಲ್ಲಿ ನನ್ನ ವಿಶ್ಲೇಷಣೆಯಲ್ಲ ಅದು ಪ್ರಭುತ್ವಕ್ಕೆ ಬಿಟ್ಟ ವಿಚಾರ ಆದರೆ ಯುದ್ಧವೊಂದು ಬಡ ಕುಟುಂಬದ ಮೇಲೆ ತಂದೊಡ್ಡುವ ಭಯಾನಕ ದುಸ್ವಪ್ನಗಳು ಹೇಗಿರುತ್ತವೆಯೆಂದು ಹೇಳಲಷ್ಟೇ ಈ ಬರಹದ ಉದ್ದೇಶ. ಮತ್ತೂ ಹೇಳಬೇಕೆಂದರೆ ಪಾಕಿಸ್ತಾನದ ನೆಲದ ಸಾವಿರಾರು ಸೈನಿಕರು ಪ್ರಾಣ ಕಳೆದುಕೊಂಡರು.

ಗಡಿಯಾಚೆಗಿನ ಅವರಿಗೂ ತಂದೆ ತಾಯಿ ಮಡದಿ ಮಕ್ಕಳು ಹಸುಳೆಗಳು ಇರಬಹುದಲ್ಲವೇ? ಅಲ್ಲಿಯೂ ಕೂಡ ನಮ್ಮ ಅಣ್ಣನಂತೆ ಕೇವಲ ಬಡತನ ನೀಗಲು ಮಿಲಿಟರಿ ಸೇರಿರಬಹುದಲ್ಲವೇ?

ಈ ಗಡಿಗಳು ಅಳಿಸಿ ಹೋಗಲೆಂದು ಆಶಿಸುವ ನಾನು ಇಲ್ಲಿ ಮೂರ್ಖನಂತೆ ಕಾಣುತಿದ್ದೇನೆಯೇ? ರಕ್ತ ಪಿಪಾಸು ಮನಸಿಗಳಿಗೆಲ್ಲ ಇದು ಯಾವಾಗ ಅರ್ಥ ವಾಗುತ್ತದೆಯೋ?

‍ಲೇಖಕರು Admin

October 5, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This