ಅಂಬೆಯ ಅಳಲು

ರಾಜು ಹೆಗಡೆ

ಗೆದ್ದವನೂ ಬಿಟ್ಟ
ಗೆಲ್ಲುತ್ತೇನೆ ಎಂದವನೂ
ಬಿಟ್ಟ
ಆಸೆ ಕನಸುಗಳೆಲ್ಲ
ಕಲಕಿ ಹೋದವು

ಕಾಡಿನ ಬೇಡನ
ಕರತಂದೆ
ನಾಡಿನಲ್ಲಿ ಹೊಡೆಯಲಾರದೇ
ಹೋದ
ತಾಯ ಕೊಂದವನೇ
ಬಂದ
ಸೋತೆ ಎಂದು
ಕೂತ

ಈಗ ಸುತ್ತಲೂ
ಧಗಧಗ ನಗುವ
ಬೆಂಕಿ

ಹೆಣ್ಣೂ ಅಲ್ಲದ
ಗಂಡೂ ಅಲ್ಲದ
ಶಿಖಂಡಿಯೇ ಆಗಬೇಕೇ
ಇದನೆಲ್ಲ ಎದುರಿಸಲು.

ಗಾಳಿ ಮಾತ್ರ

ಒಂದು ನಿತಾಂತ ಮೌನ
ನಿಂತು ಬಿಟ್ಟಿದೆ
ಕತ್ತಲೆಯ ಬೆಳಕಿನಲ್ಲಿ

ಅಲ್ಲಿ
ಚಿಲಿಪಿಲಿಯು ಬಾಲ್ಯ
ಬಲ ಕಳೆದುಕೊಂಡಿದೆ
ಯೈವನದ ದಾಹ
ಬಿಸಿಲಲ್ಲಿ
ಪದ ಕುಸಿದ
ನೆಲದಲ್ಲಿ
ಹಸಿರಾಗಿ ಹಾಡುವಾಗ
ಮಧ್ಯಾಹ್ನ ಮಾತಾಡುತ್ತದೆ
‘ ಅತ್ತಣಿಂದ ಬೇಟೆಗಾರ….’

ಅವಳು ಇವಳು
ಅವನು ಇವನು
ನಾನು ನೀನು
ಅದು ಇದು ಎಲ್ಲ
ಕತ್ತಲೆಯ ಬೆಳಕಿನಲ್ಲಿ
ಗಾಳಿ ಮಾತ್ರ
ಉಸಿರಾಡುತ್ತಿದೆ.

ಮನೆ, ದಾರಿ

ನಮ್ಮನೆಗೆ ಹೋಗಲು
ಮುಖ್ಯವಾಗಿ ಎರಡು ದಾರಿಗಳಿವೆ
ಒಂದು, ಜಟ್ಕನ ಬಲೆಯಲ್ಲಿ
ಇಳಿದು, ರಸ್ತೆಯಂಥ ದಾರಿಯಲ್ಲಿ
ಹಸ್ಲೋರ ಕೇರಿ ಮೇಲಿಂದ
ಮುಂದೆ ಹೋದರೆ
ಗೊಬ್ಬರ ಕುಳಿ, ಅದರ ಹಿಮ್ಮೇಳವಾಗಿರುವ
ಅಪ್ಪಪ್ಪನ ಮನೆ ಕೊಟ್ಟಿಗೆ ಪರಿಮಳ
ಮೂಗಿಗೆ ರಾಚುತ್ತದೆ
ಅಲ್ಲೇ, ಗೆಂಚಿಗೆಯಾಗಿರುವ
ಹಾರುಮನೆಗಳ ನಡುವೆ,
‘ಈಗ ಬಂದ್ಯಾ ಈಗ ಬಂದ್ಯಾ’
ಎನ್ನುವ ಪ್ರಶ್ನೆಗೆ ಉತ್ತರ ಇಡುತ್ತಾ
ಹಿಂದೆ
ಅಡಿಕೆ ತೆಂಗಿನ ತೋಟದಲ್ಲಿ
ಸಂಕ, ಬೇಲಿಗಳನ್ನು ದಾಟುತ್ತಾ ಹೋದರೆ
ಮರಕ್ಕೆ ಸುತ್ತಿದ ಬಳ್ಳಿಯಂತ ಗುಡ್ಡದ ಕೊರಕಲು
ದಾರಿ
ಹತ್ತಿ ಹತ್ತಿ ಹತ್ತಿ
ಕತ್ತೆತ್ತಿದರೆ ಅಂಗಳದಲ್ಲಿ
ಭೂತದಂಥೆ ಕಾಣುತ್ತದೆ
ನಮ್ಮನೆ!

ಇನ್ನೊಂದು ದಾರಿ,
ತುಸು ಹಿಂದೆಯೇ ಬಸ್ಸಿಳಿದು
ಏಕ್‍ದಂ ಏರಬೇಕಾದ ಗುಡ್ಡದ ರಸ್ತೆ
ಆಚೆ ಈಚೆ ಮರಗಿಡಗಳು
ಮುಳ್ಳುಹಿಂಡು
ಹುರ್ಸಾನ ಹಕ್ಕಿಯ ಕೂಗು, ಸರಕ್ಕನೆ ಹರೆದು
ಹೋಗುವ ಹಾವು ಹರಣೆಗಳು, ಅಪರೂಪಕ್ಕೆ ಜನದನ
ಹೀಗೇ ಹೋಗಿ
ಎಡಕ್ಕಿರುವ ಕರೆಂಟ್ ಬೇಲಿ
ದಾಟಿದರೆ ಗೇರು, ಹಲಸಿನ ಬೇಣ
ಒಣಗಿದ ಎಲೆಗಳಡಿಯಲ್ಲಿ
ಮಲಗಿರುವ ರಸ್ತೆ
ಇಲ್ಲಿಯೂ
ನಮಗೆ ಮೊದಲು ಸಿಗುವುದು
ಗೊಬ್ಬರಕುಳಿ ಕೊಟ್ಟಿಗೆಯೇ!
ಆದರೆ
ಮನೆಯ ಹಿಂಬದಿಗೆ ಬಂದಿದ್ದೇವೆ
ನಾವೀಗ
ಅಲ್ಲಿರುವ ಎಜ್ಜೆಯ ದಾರಿಯಲ್ಲಿ
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಪಡಮಾಡಿನ ಕೆಳಗೆ ನಡೆದರೆ
ಮುಳುಗುತ್ತಿರುವ ಹಡಿಗಿನಂತೆ
ಕಾಣುತ್ತದೆ ಮನೆ
ಎದರು
ಚೂಪಾದ ಇನ್ನೊಂದು ಗುಡ್ಡ,
ಕೆಳಗೆ
ಮಂಡೆ ಕೆದರಿ ನಿಂತಿರುವ
ಅಡಿಕೆ, ತೆಂಗುಗಳ ಚಂಡೆ
ಮನಸ್ಸು ಮಾಡಿದರೆ ನಾವು
ಅಲ್ಲೇ ನಿಂತು
ಅದನು ಹಿಡಿದು ಆಡಬಹುದು
ಗಾಳಿಯ ಹಾಗೆ.

ಅಗೋ ನೋಡಿ,
ಆಗಸದಿಂದ ಏನೋ ಇಳಿದು
ಬರುತ್ತಿದೆ
ಆಕಾರ ಬಣ್ಣ ಗುಣಗಳಿಲ್ಲದೆ.

‍ಲೇಖಕರು Avadhi

September 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲೋಕದ ಕಣ್ಣು ಮರುಗಲೂಬಹುದು!

ಲೋಕದ ಕಣ್ಣು ಮರುಗಲೂಬಹುದು!

ಕೆ.ಜೆ.ಕೊಟ್ರಗೌಡ ತೂಲಹಳ್ಳಿ ಊರ ಬಯಲಿನ ದಿಬ್ಬದ ಮೇಲೆಈ ಮಳೆಗಾಲಕ್ಕೆಚಿಗುರೊಡೆದ ಹುಲ್ಲು ಗಂಬಳಿಯಹಾಸಿನಲಿನಾವಿಬ್ಬರೇ ಸಾನಿಧ್ಯವಹಿಸೋಣಅದೆಷ್ಟು...

ಸ್ಯಾನಿಟೈಜ್ ಆಗಬೇಕಾಗಿದೆ ಹೃದಯ

ಸ್ಯಾನಿಟೈಜ್ ಆಗಬೇಕಾಗಿದೆ ಹೃದಯ

ರಾಘವೇಂದ್ರ ದೇಶಪಾಂಡೆ ವಯಸ್ಸೊಂದಿತ್ತು ಆ ದಿನಗಳಲ್ಲಿಜಾದೂವಿನಲ್ಲು ನಂಬಿಕೆಯಿತ್ತು...ವಯಸ್ಸೊಂದಿದೆ ಇವಾಗವಾಸ್ತವತೆಯಲ್ಲು ಸಂಶಯವಿದೆ......

ಲಂಗರು ಕಚ್ಚಿದ ದೋಣಿ

ಲಂಗರು ಕಚ್ಚಿದ ದೋಣಿ

ಶ್ರೀಕಾಂತ್ ಪ್ರಭು ಲಂಗರು ಕಚ್ಚಿದ ದೋಣಿ ಮರಳ ಮೇಲೆಲ್ಲ ಹಾಯ್ದು ತೋಯಿಸಿ ಮೆತ್ತಗಾಗಿಸಿ ಮತ್ತೆ ಮತ್ತೆ ಮರಳುವ ಅಲೆ ಬೆಚ್ಚನೆಯ ಪಿಸು ಮಾತು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This