ಅಂಬೇಡ್ಕರ್ ನೆನಪಿನಲ್ಲಿ ‘ಬುದ್ಧನ ಧರ್ಮ ‘, ಬಸವಣ್ಣನ ‘ಕಾಯಕ ‘ ಮತ್ತು ಗುಲ್ವಾಡಿಯವರ ‘ಭಾಗೀರಥಿಯ ಕಟ್ಟಳೆ’

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ-‎ ಡಾ.ಬಿ.ಆರ್.ಅಂಬೇಡ್ಕರ್ ( ೧೪ ಎಪ್ರಿಲ್ ೧೮೯೧-೬ ದಶಂಬರ ೧೯೫೬ )- ಈದಿನ ಮಾತ್ರ ಅಲ್ಲ ,ಎಲ್ಲ ಕಾಲಕ್ಕೂ ನಮಗೆ ಮುಖ್ಯವಾಗುವುದು -ಅವರು ನಮ್ಮ ದೇಶದ ಕಟ್ಟಕಡೆಯ ಮನುಷ್ಯರ ಮೂಲಕ ಭಾರತವನ್ನು ಕಂಡದ್ದು ಮತ್ತು ಸಾಂಪ್ರದಾಯಿಕ ಸಮಾಜವನ್ನು ಮುರಿದು ಮತ್ತೆ ಹೊಸದಾಗಿ ಕಟ್ಟಿದ್ದು.ಆದ್ದರಿಂದಲೇ ಬುದ್ಧನ ತತ್ವಗಳ ಮೂಲಕ ಈ ದೇಶದ ಎಲ್ಲ ಜನರಿಗೆ ಧರ್ಮ ಎನ್ನುವುದು ಸಮಾನವಾಗಿ ದೊರೆಯಬೇಕು ಎನ್ನುವ ತತ್ವವನ್ನು ಅವರು ಪ್ರತಿಪಾದಿಸಿದರು ಮತ್ತು ಅದಕ್ಕಾಗಿ ಹೋರಾಡಿದರು.ಈ ದೃಷ್ಟಿಯಿಂದ ಕಾರ್ಲ್ ಮಾರ್ಕ್ಸ್ ಗಿಂತ ಬುದ್ಧ ಅವರಿಗೆ ಆದರ್ಶವಾಗಿ ,ಬೆಳಕಿನ ದಾರಿಯಾದ.ಅಂಬೇಡ್ಕರ್ ಅವರು ತಮ್ಮ’Buddha or Karl Marx ‘ ಎಂಬ ಲೇಖನದಲ್ಲಿ ಧರ್ಮವನ್ನು ಕುರಿತ ಬುದ್ಧನ ಚಿಂತನೆಗಳನ್ನು ಚರ್ಚಿಸಿದ್ದಾರೆ. ” ಮುಕ್ತ ಸಮಾಜಕ್ಕಾಗಿ ಧರ್ಮವು ಆವಶ್ಯಕ. ಧರ್ಮವು ಬದುಕಿನ ಸಂಗತಿಗಳಿಗೆ ಸಂಬಂಧಿಸಿರಬೇಕೇ ಹೊರತು ,ದೇವರನ್ನು ಕುರಿತ ಸಿದ್ಧಾಂತಗಳಿಗೆ ಅಲ್ಲ.ಧರ್ಮದ ಕೇಂದ್ರ ದೇವರು ಅಲ್ಲ.ಮನುಷ್ಯ ಮತ್ತು ನೈತಿಕತೆಯೇ ಧರ್ಮದ ಕೇಂದ್ರ.ನಿಜವಾದ ಧರ್ಮವು ಜನರ ಹೃದಯಗಳಲ್ಲಿ ಜೀವಂತವಾಗಿರುತ್ತದೆ.ನೈತಿಕತೆಯು ಬದುಕಿನ ಕೇವಲ ಆದರ್ಶ ಅಲ್ಲ, ಅದು ಬದುಕಿನ ನಿಯಮ.ಎಲ್ಲ ಮನುಷ್ಯರೂ ಸಮಾನರು.ಎಲ್ಲರ ಬಗೆಗೂ ಮೈತ್ರಿಭಾವವನ್ನು ಇಟ್ಟುಕೊಳ್ಳಬೇಕು.ಪ್ರತಿಯೊಬ್ಬರಿಗೂ ಕಲಿಯುವ ಹಕ್ಕು ಇರುತ್ತದೆ.ನಡತೆ ಇಲ್ಲದ ಶಿಕ್ಷಣ ಅಪಾಯಕಾರಿ.ಶಾಶ್ವತವಾದುದು ,ಅಂತಿಮವಾದುದು ಎಂದು ಯಾವುದೂ ಇಲ್ಲ.ಎಲ್ಲವೂ ಬದಲಾವಣೆಗೆ ಒಳಗಾಗುವಂಥದು. ಇರುವುದು ಎಂದರೆ ಆಗುವುದು .” ಧರ್ಮದಲ್ಲಿ ಎರಡು ಅವಯವಗಳು ಇರುತ್ತವೆ : ನಂಬಿಕೆ ಮತ್ತು ಆಚರಣೆ.ಅವು ಒಂದರೊಡನೆ ಇನ್ನೊಂದು ಸೇರಿಕೊಂಡವು.ಅವನ್ನು ಬೇರೆ ಬೇರೆಯಾಗಿ ನೋಡಲಾಗುವುದಿಲ್ಲ.ಆದ್ದರಿಂದಲೇ ನಮ್ಮ ದೇಶದ ಎಲ್ಲ ಸಮಾಜಸುಧಾರಕರು,ಚಿಂತಕರು ,ಸಾಹಿತಿಗಳು ತಮ್ಮ ಬರಹಗಳಲ್ಲಿ ‘ಧರ್ಮ’ ದ ಚಲನಶೀಲತೆಯ ಬಗ್ಗೆ ಹೋರಾಡುತ್ತಾ ಹೇಳುತ್ತಾ ಬರೆಯುತ್ತಾ ಬಂದಿದ್ದಾರೆ.ನಂಬಿಕೆ ಮತ್ತು ಆಚರಣೆಗಳು ‘ಕಟ್ಟಳೆಗಳು’ ಆಗಿ ವ್ಯಕ್ತಿಯ ಮತ್ತು ಸಮಾಜದ ಬದುಕಿನ ಕೆಡುಕುಗಳಿಗೆ ಕಾರಣವಾದಾಗ ಅವುಗಳ ಕುರಿತು ಸಾಮಾಜಿಕವಾಗಿ ಎಚ್ಚರವನ್ನು ಮೂಡಿಸಿದ್ದಾರೆ.ಈ ದೃಷ್ಟಿಯಲ್ಲಿ ಕರ್ನಾಟಕದ ಸಮಾಜ ಸುಧಾರಕರು ಮತ್ತು ಸಾಹಿತಿಗಳು ದೇಶದ ಗಮನ ಸೆಳೆದಿದ್ದಾರೆ. ಹನ್ನೆರಡನೆಯ ಶತಮಾನದ ವಚನಸಾಹಿತ್ಯವು ಧರ್ಮವನ್ನು ವಿವರಿಸಿದ ಕ್ರಮ ಮತ್ತು ಸಾರಿದ ತತ್ವಕ್ಕೆ ಸಂವಾದಿಯಾದ ಆಲೋಚನೆಯು ಜಗತ್ತಿನ ಬೇರೆ ಯಾವುದೇ ಧರ್ಮ ಅಥವಾ ದಾರ್ಶನಿಕತೆಯಲ್ಲಿ ಸಿಗುವುದಿಲ್ಲ.ಬಸವಣ್ಣ ಮತ್ತು ಇತರ ವಚನಕಾರರ ವಚನಗಳು ಪ್ರತಿಪಾದಿಸುವ ‘ಕಾಯಕ ‘ಮತ್ತು ‘ದಾಸೋಹ’ ತತ್ವಗಳು ಮನುಷ್ಯ ಕೇಂದ್ರಿತ ಧರ್ಮವನ್ನು ಸ್ವಾತಂತ್ರ್ಯ ಮತ್ತು ಸಮಾನತೆಯ ನೆಲೆಯಲ್ಲಿ ಕಟ್ಟಿಕೊಡುತ್ತವೆ.ಇಲ್ಲಿ ವ್ಯೂರ್ತ್ಸ್ ಬುರ್ಗಿನ ಇಂಡಾಲಜಿ ವಿಭಾಗದಲ್ಲಿ ‘ಕರ್ನಾಟಕದ ಧಾರ್ಮಿಕ ಪರಂಪರೆ’ ಎಂಬ ವಿಷಯದ ನನ್ನ ಉಪನ್ಯಾಸಗಳಲ್ಲಿ ಕಳೆದ ಎರಡು ವಾರಗಳಿಂದ ಕನ್ನಡ ವಚನಕಾರರು ಮತ್ತು ಧರ್ಮದ ಸಂಬಂಧವನ್ನು ವಚನಗಳ ಇಂಗ್ಲಿಶ್ ಅನುವಾದಗಳ ಮೂಲಕ ವಿವರಿಸುತ್ತಿದ್ದೇನೆ.ಒಳಹೊಕ್ಕಷ್ಟೂ ಈ ವಚನಗಳು ತುಂಬಾ ಹೊಸ ಅರ್ಥಗಳನ್ನು ಕೊಡುತ್ತಿರುತ್ತವೆ. ಕನ್ನಡದ ಮೊತ್ತಮೊದಲ ಸಾಮಾಜಿಕ ಕಾದಂಬರಿ ‘ಇಂದಿರಾಬಾಯಿ’ ( ೧೮೯೯).ಗುಲ್ವಾಡಿ ವೆಂಕಟರಾವ್ (೧೮೪೪-೧೯೧೩) ಅವರ ‘ಇಂದಿರಾಬಾಯಿ’ ಕಾದಂಬರಿಯು ಹೆಣ್ಣನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಸಾಮಾಜಿಕ ಸುಧಾರಣೆಗಳನ್ನು ಪ್ರತಿಪಾದಿಸುವ ಕನ್ನಡದ ಮೊದಲ ಕಾದಂಬರಿ.ಈ ಕೃತಿಯು ಸಾಕಷ್ಟು ಅಧ್ಯಯನಕ್ಕೆ ಒಳಗಾಗಿದೆ.ತರಗತಿಗಳಲ್ಲಿ ಪಾಠವಾಗಿ ವಿದ್ಯಾರ್ಥಿಗಳು ಓದಿದ್ದಾರೆ.ವಿಮರ್ಶಕರು ಅದರ ವೈಶಿಷ್ಟ್ಯ ಗಳನ್ನು ಚರ್ಚಿಸಿದ್ದಾರೆ.’ಇಂದಿರಾಬಾಯಿ’ ಇಂಗ್ಲಿಷಿಗೆ ಕೂಡಾ ಅನುವಾದ ಆಗಿದೆ.ಗುಲ್ವಾಡಿಯವರು ಇನ್ನು ಎರಡು ಕಾದಂಬರಿಗಳನ್ನು ಬರೆದಿದ್ದಾರೆ.’ಭಾಗೀರಥಿ’ ಮತ್ತು’ ಸೀಮಂತಿನಿ ‘.ಇವು ಹೆಚ್ಚು ಪ್ರಚಾರಕ್ಕೆ ಬಂದಿಲ್ಲ.ಇವುಗಳ ಪ್ರತಿಗಳ ಲಭ್ಯತೆಯ ಕೊರತೆಯೂ ಒಂದು ಕಾರಣ. ಗುಲ್ವಾಡಿ ವೆಂಕಟರಾಯರು ತಮ್ಮ ‘ಭಾಗೀರಥಿ’ (೧೯೦೦ ) ಕಾದಂಬರಿಗೆ ’ಮೂರ್ಖತ್ವದ ಯಾತನೆಗಳು’ ಎಂಬ ಬದಲಿ ಉಪಶೀರ್ಷಿಕೆಯನ್ನು ಕೊಡುವುದರ ಮೂಲಕ ಕೃತಿಯ ವಿಡಂಬನೆಯ ಧಾಟಿಯನ್ನು ಸೂಚಿಸುತ್ತಾರೆ.ಕಾದಂಬರಿಯ ಆರಂಭದಲ್ಲಿ ಗುಲ್ವಾಡಿಯವರು ಹೇಳುವ ಪೀಠಿಕೆಯ ಮಾತುಗಳು :”ಸತ್ಯತೆ,ಹೃದಯ ನಿರ್ಮಲತೆ ಇವೆರಡು ಸಾಧನಗಳು ಇಹಪರಗಳ ಸಾರ್ಥಕಗಳೆಂದು ಇಂದಿರಾಬಾಯಿ ಎಂಬ ಕಾದಂಬರಿಯ ಪೀಠಿಕೆಯಲ್ಲಿ ಹೇಳೋಣವಾಯಿತು.ಆದರೆ ನಮ್ಮಲ್ಲಿ ಮೂರ್ಖತನವು ಎಂದಿನವರೆಗೆ ನೆಲೆಸಿರುವುದೋ ಅಂದಿನವರೆಗೆ ಆ ಸಾಧನಗಳು ನಮಗೆ ನಿರ್ವಿಘ್ನವಾಗಿ ಲಭಿಸವು .ಈ ವಿಷಯವು ಭಾಗೀರಥಿಯ ಚರಿತ್ರೆಯಿಂದ ವಿಷ್ಕೃತವಾಗುವುದು.” ಭಾಗೀರಥಿ-ಈ ಕಾದಂಬರಿಯ ಕೇಂದ್ರ ಪಾತ್ರ.ಆಕೆ ಕಾದಂಬರಿಯಲ್ಲಿ ನಿರೂಪಕಿಯೂ ಹೌದು.ಬಡ ವಿಧವೆ ಭಾಗೀರಥಿಯು ತನ್ನ ನೆರೆಯವಳಾದ ಸುಶಿಕ್ಷಿತ ಹೆಣ್ಣು ಲೀಲಾವತಿಗೆ ತನ್ನ ಯಾತನೆಯ ಕತೆಯನ್ನು ಒಂದೊಂದಾಗಿ ಹೇಳುತ್ತಾ ಹೋಗುತ್ತಾಳೆ.ಅವಿಶ್ವಸನೀಯ ನಿರೂಪಕಿಯ ಮಾದರಿಯಾಗಿರುವ ಭಾಗೀರಥಿಗೆ ತಾನು ಹೇಳುವುದರ ಪೂರ್ಣ ಸತ್ಯಾಸತ್ಯತೆಗಳ ಅರಿವೂ ಇರುವುದಿಲ್ಲ. ಈ ಭಾಗೀರಥಿಯು ‘ಕಟ್ಟಳೆ ಭಾಗೀರಥಿ’ ಎಂದೇ ಪ್ರಸಿದ್ಧಳಾದವಳು.ಸಮಾಜದ ಕಟ್ಟುಕಟ್ಟಳೆಗಳನ್ನು ಕುರುಡಾಗಿ ಅವಲಂಬಿಸುವುದರಿಂದ ಆಗುವ ದುರಂತಗಳ ಚಿತ್ರವನ್ನು ಹೇಳುವ ರೂಪದಲ್ಲಿ ಭಾಗೀರಥಿಯ ಯಾತನೆಯ ಬದುಕಿನ ಕತೆ ಆಕೆಯದ್ದೇ ವಿವರಣೆಗಳ ಮೂಲಕ ತೆರೆಯುತ್ತಾ ಹೋಗುತ್ತದೆ. ಹೆಣ್ಣು ಜನಿಸಿದಾಗ ಅದನ್ನು ತಿರಸ್ಕಾರದಿಂದ ಕಾಣುವುದು,ಭಾಗೀರಥಿ ಹೇಳುವ ” ಆನೆಯ ಗರ್ಭದಲ್ಲಿ ಕತ್ತೆ ಎಂಬಂತೆ ನಾನು ಹುಟ್ಟಿದೆನು” ಎಂಬ ಮಾತಿನಲ್ಲಿ ವ್ಯಕ್ತವಾಗುತ್ತದೆ.ಐದು ವರ್ಷದ ಹೆಣ್ಣುಮಗಳು ಭಾಗೀರಥಿಗೆ ಏಳು ವರ್ಷದ ಗಂಡುಮಗುವಿನ ಜೊತೆಗೆ ವಿವಾಹ ಮಾಡಿದ್ದು , ಮಕ್ಕಳಿಗೆ ಮೈತುಂಬ ಚಿನ್ನ ಹೇರಿ ದೊಡ್ಡವರು ಅರ್ತಿಯನ್ನು ಅನುಭವಿಸಿದ್ದು -ಇವು ಬಾಲ್ಯ ವಿವಾಹ ಪದ್ಧತಿ ಮತ್ತು ಸಂಪತ್ತಿನ ದುರ್ವ್ಯಯವನ್ನು ವಿಡಂಬಿಸುವ ವಿವರಗಳು.ಸಾಂಪ್ರದಾಯಿಕವಾಗಿ ಹೆಣ್ಣಿಗೆ ಸಂಬಂಧಿಸಿದಂತೆ ನಡೆದುಕೊಂಡು ಬಂದ ಕಟ್ಟಳೆಗಳನ್ನು ಭಾಗೀರಥಿಯು ಲೀಲಾವತಿಗೆ ತಿಳಿಸುತ್ತಾಳೆ :” ಸಾಯಾನದಲ್ಲಿ ದೀಪ ಹಚ್ಚುವ ಸಮಯದಲ್ಲಿ ಮನೆಯ ಮುಂಬಾಗಿಲನ್ನು ತೆರೆದಿಡಬಾರದು. ತೆಂಗಿನಕಾಯಿಯ ಗಡಿಗಳಲ್ಲಿ ಹೆಣ್ಣು ಗಡಿಯನ್ನೇ ಪ್ರಥಮತಃ ತುರಿಯಬೇಕು .ಆ ಬಳಿಕ ಗಂಡು ಗಡಿಯನ್ನು ತುರಿಯಬೇಕು.ಮುತ್ತೈದೆಯು ಚೆನ್ನೆಮಣೆಯ ಮೇಲೆ ಕುಳಿತುಕೊಳ್ಳಬಾರದು.ಮುತ್ತೈದೆಯು ನಾಲ್ಕನೇ ನೀರು ಮಿಂದು ಮನೆಯೊಳಗೆ ಬರುವಾಗ ,ದುಷ್ಟ ದುರ್ಮಾರ್ಗಿಗಳನ್ನು ಕಾಣದ ಹಾಗೆ ಜಾಗ್ರತೆಯಿಂದ ಬರಬೇಕು .” ಇವು ಭಾಗೀರಥಿಯ ಕಟ್ಟಳೆಗಳಲ್ಲಿ ಅಲಂಘ್ಯ ವಾದುವು.ಅವಳ ಪ್ರಕಾರ ಇವುಗಳನ್ನು ಉಲ್ಲಂಘಿಸಿದವರಿಗೆ ಪ್ರಾಯಶ್ಚಿತ್ತವೇ ಇಲ್ಲ. ಪ್ರಾಯಶ್ಚಿತ್ತ ಇರುವ ಕಟ್ಟಳೆಗಳ ಪಟ್ಟಿಯನ್ನು ಭಾಗೀರಥಿ ಕೊಡುವಾಗ ಮತ್ತು ಆಕೆ ಅವುಗಳಿಗೆ ಪರಿಹಾರವನ್ನು ಸೂಚಿಸುವಾಗ ಕಾದಂಬರಿಯಲ್ಲಿ ವಿಡಂಬನೆಯ ಧಾಟಿ ಇದೆ: “ಮುತ್ತೈದೆಯು ಕಾಲುನೀಡಿ ಕುಳಿತುಕೊಂಡಿರುವಾಗ ಮಗು ಆಕೆಯ ಕಾಲುಗಳನ್ನು ದಾಟಬಾರದು .ದಾಟಿದರೆ ಆಕೆಗೆ ಅಕಾಲ ಗೊಡ್ಡುತನ ಪ್ರಾಪ್ತಿಸುವುದು .ಆ ಮಗುವಿನಿಂದ ಹಿಂದಕ್ಕೆ ಕಾಲು ದಾಟಿಸಿದರೆ ಆ ದೋಷ ಪರಿಹಾರ ಆಗುವುದು.” “ಕ್ಷೌರ ಮಾಡಿಸಿಕೊಂಡ ಒಬ್ಬ ಗಂಡಸು ಅಥವಾ ಹೆಂಗಸು ,ಬಚ್ಚಲಲ್ಲಿ ಸ್ನಾನ ಮಾಡಿದ ಬಳಿಕ ಮುತ್ತೈದೆಯರು ಬಚ್ಚಲಲ್ಲಿ ಸ್ನಾನ ಮಾಡಬಾರದು.ಅವಸ್ಥಾ ವಿಶೇಷದಲ್ಲಿ ಯಾರಾದರೂ ತಪ್ಪಿ ಹಾಗೆ ಮುಂದಾಗಿ ಮಿಂದು ಬಿಟ್ಟರೆ ,ಕ್ಷೌರ ಮಾಡಿಸಿದವನೊಬ್ಬನನ್ನು ಆ ಬಚ್ಚಲಲ್ಲಿ ಮೀಯಿಸಿ , ಆ ಬಳಿಕ ಮುತ್ತೈದೆಗೆ ಸ್ನಾನ ಮಾಡಿಸಬೇಕು.” “ಮುತ್ತೈದೆಯು ಗಂಡನ ಎಂಜಲೆಲೆಯ ಮೇಲೆ ತಾನೇ ಊಟ ಮಾಡಬೇಕು.ಕಾರಣಾಂತರದಿಂದ ಬೇರೆ ಎಲೆಯಲ್ಲಿ ಉಂಡರೆ ,ಆ ದಿವಸ ಹೇಗಾದರೂ ಪ್ರಯತ್ನಿಸಿ ,ಅವನ ಎಂಜಲನ್ನು ತಿಂದರೆ ದೋಷ ಪರಿಹಾರ.” ಹೀಗೆ ದೋಷ ಮತ್ತು ಪರಿಹಾರಗಳ ವಿವರಣೆಯನ್ನು ಕೊಡುತ್ತಾ ಭಾಗೀರಥಿಯು ,ಕಟ್ಟಳೆಗಳನ್ನು ಉಲ್ಲಂಘಿಸಿದ ಕಾರಣವಾಗಿ ತಾನು ಅನುಭವಿಸಬೇಕಾಗಿ ಬಂದ ಸಂಕಷ್ಟಗಳ ವಿವರಣೆಯನ್ನು ಲೀಲಾವತಿಯಲ್ಲಿ ಹೇಳುತ್ತಾಳೆ : ” ಗರ್ಭವತಿ ಸ್ತ್ರೀಯು ನೂತನವಾಗಿ ಕೈಗಳಿಗೆ ಬಳೆಗಳನ್ನು ಇಡಿಸಿಕೊಳ್ಳಬಾರದೆಂದೂ ಗ್ರಹಣ ಕಾಲದಲ್ಲಿ ಈಳಿಗೆಯ ಮೇಲೆ ಕುಳಿತುಕೊಳ್ಳಬಾರದೆಂಬ ಎರಡು ಕಟ್ಟಳೆಗಳಲ್ಲಿ ಮೊದಲನೆಯದನ್ನು ಉಲ್ಲಂಘಿಸಿದುದರಿಂದ ನನಗೆ ಪ್ರಸೂತ ಕಾಲದಲ್ಲಿ ಸಹಿಸಲಸಾಧ್ಯವಾದ ವೇದನೆಗಳು ಉಂಟಾಯಿತು ,ಎರಡನೆಯದನ್ನು ಉಲ್ಲಂಘಿಸಿದುದರಿಂದ ಹುಟ್ಟಿದ ಮಗುವಿಗೆ ಹಂಸಪಾದಗಳು ಆದುವು .” ನಿಷೇಧಾತ್ಮಕ ರೂಪದಲ್ಲಿ ಹುಟ್ಟಿಕೊಳ್ಳುವ ಇಂತಹ ಕಟ್ಟಳೆಗಳೇ ಜನರು ನಿಷೇಧಾತ್ಮಕ ಧೋರಣೆಯನ್ನು ಹೊಂದಲು ಕಾರಣವಾಗುತ್ತವೆ.ಕ್ರಿಯಾಶೂನ್ಯತೆ ವ್ಯಕ್ತಿತ್ವದ ಭಾಗವಾಗುವುದೂ ಇಂತಹ ಕಟ್ಟಳೆಗಳಿಂದಲೇ ಎನ್ನುವ ಧ್ವನಿ ಕಾದಂಬರಿಯುದ್ದಕ್ಕೂ ವ್ಯಕ್ತವಾಗಿದೆ.ಎಲ್ಲರ ಬಗ್ಗೆಯೂ ಸಂಶಯ ಅಪನಂಬಿಕೆ ,ತನ್ನ ಬಗ್ಗೆ ಕೀಳರಿಮೆ -ಇಂಥ ಮೂಢನಂಬಿಕೆಗಳಿಂದ ಭಾಗೀರಥಿಯ ವ್ಯಕ್ತಿತ್ವ ರೂಪುಗೊಂಡು ಆಕೆಯ ಬದುಕು ದುರಂತದಲ್ಲಿ ಪರ್ಯವಸಾನ ಆಗುತ್ತದೆ.ಕಾದಂಬರಿಯ ಒಳಗಡೆ ಬರುವ ಲಘು ಘಟನೆಗಳ ರೂಪದ ಉಪಾಖ್ಯಾನಗಳು ವ್ಯಂಗ್ಯದ ಧಾಟಿಯಲ್ಲಿ ಇವೆ.ಇಂತಹ ಕಟ್ಟಳೆಗಳ ಬಗ್ಗೆ ತಿರಸ್ಕಾರ ಉಂಟುಮಾಡುವ ನಿದರ್ಶನಗಳಾಗಿ ಬೇರೆ ಬೇರೆ ಪ್ರಸಂಗಗಳು ಭಾಗೀರಥಿಯ ನಿರೂಪಣೆಯಲ್ಲಿ ಕಾಣಿಸಿಕೊಳ್ಳುತ್ತವೆ: ” ಹೆಂಡತಿಯು ಗಂಡನ ಜೊತೆಗೇ ಬರಬೇಕು.ಆದರೆ ಗಂಡನಿಗೆ ರಜಾ ಸಿಕ್ಕದ್ದರಿಂದ ಆಕೆಯು ಗಂಡನ ಅಂಗವಸ್ತ್ರದ ಪಂಚೆಯನ್ನು ಸೊಂಟಕ್ಕೆ ಕಟ್ಟಿಕೊಂಡು ಬರುತ್ತಿದ್ದಳು.” “ಒಬ್ಬನು ಒಂದು ಕೆಲಸಕ್ಕೆ ಹೋಗುವಾಗ ‘ ಎಲ್ಲಿಗೆ ಹೋಗುತ್ತಿ ?’ಎಂದು ಮತ್ತೊಬ್ಬನು ಕೇಳಿದರೆ ,ಆ ಕಾರ್ಯ ಎಂದೂ ಕೈಗೂಡದು.ಒಂದು ದಿನ ಯಜಮಾನರು ಬಹಿರ್ ಪ್ರದೇಶಕ್ಕೆ ಹೋಗುವಾಗ ನಮ್ಮ ಶಿವರಾಮನು ಎಚ್ಚರಗೇಡಿತನದಿಂದ ‘ಅಪ್ಪಯ್ಯ ಎಲ್ಲಿಗೆ ಹೋಗುತ್ತಿ ?’ಎಂದು ಕೇಳಿಬಿಟ್ಟನು.ಯಜಮಾನರು ಒಂದು ತಾಸು ಪರ್ಯಂತರ ಚಾರುಚಿಂಬಿಯಲ್ಲಿ ಕುಳಿತರೂ ನಿಷ್ಫಲವಾಗಿ ಮರಳಿ ಬರಬೇಕಾಯಿತು.” “ಇಂಥ ಸಂಗತಿಗಳನ್ನು ಕೇಳಿದರೆ ನಿಮ್ಮಂಥವರಿಗೆಲ್ಲ ನಗೆ ಬರುತ್ತದೆ.ಅದು ಕಲಿಕಾಲದ ಮಹಿಮೆಯಲ್ಲದೆ ಬೇರೇನಲ್ಲ.” ಮಗುವಿನ ಕಾಯಿಲೆಗೆ ಇಂಗ್ರೆಜಿ ಔಷಧವನ್ನು ಕೊಡಿಸಿದರೆ ತಾನು ವಿಷ ತಿಂದು ಸಾಯುವೆನೆಂದು ಭಾಗೀರಥಿ ಯಜಮಾನರಿಗೆ ಹೇಳಿದ್ದರಿಂದ ,ಗಣಪತಿ ದೇವಸ್ಥಾನದಲ್ಲಿ ರಂಗಪೂಜೆ ,ಮಾರಮ್ಮನ ಗುಡಿಯಲ್ಲಿ ಕೋಣಗಳ ಅರ್ಪಣೆ ಮೊದಲಾದ ಆಚರಣೆಯು ನಡೆಯುತ್ತದೆ.ಮಗು ಸಾಯುತ್ತದೆ.ಆದರೆ ಭಾಗೀರಥಿಯ ವಿವರಣೆಯಂತೆ ,ನಚ್ಚ ಭಟ್ಟನು ಇಡೀ ಎಲೆಯನ್ನು ಕಡಿದು ಮನೆಯೊಳಗೆ ತಂದದ್ದೇ ಮಗುವಿನ ಸಾವಿಗೆ ಕಾರಣ. ತಾನು ಉಪದೇಶಿಸುವ ಅನುಸರಿಸುವ ಕಟ್ಟಳೆಗಳನ್ನು ತನಗೆಯೇ ಅನ್ವಯಿಸಿಕೊಳ್ಳುವಾಗ ಭಾಗೀರಥಿ ಕಂಡುಕೊಳ್ಳುವ ಬದಲಿ ವ್ಯವಸ್ಥೆಗಳು ಇಡೀ ವ್ಯವಸ್ಥೆಯ ಪೊಳ್ಳುತನವನ್ನು ಬಯಲುಮಾಡುತ್ತವೆ.ಲೀಲಾವತಿಯು ನಸುನಗುತ್ತಾ ತನ್ನ ಸೆರಗನ್ನು ಬಾಯಿಗಡ್ಡ ಹಿಡಿದು ಭಾಗೀರಥಿಯಲ್ಲಿ ಕೇಳುತ್ತಾಳೆ :”ನಿಮ್ಮ ಪತಿ ಕಾಲವಾದಾಗ ನೀವೇಕೆ ಚಿತೆಯಲ್ಲಿ ಹಾರಿ ಅನುಮೃತಳಾಗದಿದ್ದದ್ದು ?” ಆಗ ಭಾಗೀರಥಿಯು ತುಸು ಹೊತ್ತು ಕೆಟ್ಟ ಮೋರೆ ಹಾಕಿಕೊಂಡು , ಅಧೋವದನಳಾಗಿ ನಿಂತು,ಆಮೇಲೆ ತನ್ನ ನಿಲುವಿಗೆ ಸಮಜಾಯಿಸಿ ಕೊಡುವ ಪ್ರಯತ್ನಮಾಡುತ್ತಾಳೆ: “ಆದರೆ ನಾನು ಹಾಗೆ ಮಾಡಿದ್ದನ್ನು ದೊರೆತನದವರಿಗೆ ಗೊತ್ತಾದರೆ ಏನಾಗುತ್ತಿತ್ತೆಂದು ಬಲ್ಲೆಯಾ ?” ಎಂದು ಮರು ಪ್ರಶ್ನೆ ಹಾಕಿ,ಉತ್ತರಿಸುತ್ತಾಳೆ :” ನನ್ನ ದೆಸೆಯಿಂದ ಲೋಕದ ಬೇರೆ ಸ್ತ್ರೀಯರಿಗೂ ಉಪದ್ರವ ಸಂಭವಿಸಬಹುದೆಂದು ಹೆದರಿ,ಪರೋಪಕಾರಕ್ಕೋಸ್ಕರ ನಾನು ಸಾಯದಿದ್ದುದು ,ಅಲ್ಲದೆ ಮತ್ತೇನಲ್ಲ.ಈ ನಶ್ವರ ದೇಹವಿರುವ ಪರ್ಯಂತರ ನಾವು ಪರೋಪಕಾರ ನಿರತರಾಗಬೇಕಾದುದೇ ಮುಖ್ಯ ಕರ್ತವ್ಯ ” ಎಂದು ಒಂದು ಶ್ಲೋಕದ ಮೊರೆಹೋಗುತ್ತಾಳೆ. ತನ್ನ ಕಟ್ಟಳೆಗಳ ಬಗ್ಗೆ ಪೂರ್ಣ ವಿಶ್ವಾಸ ಇಲ್ಲದಿರುವುದು ಇಂಥ ಪ್ರಸಂಗಗಳಿಂದ ಸ್ಪಷ್ಟವಾಗುತ್ತದೆ. ತನ್ನ ಗಂಡ ಸತ್ತಾಗ ಭಾಗೀರಥಿಯು ತನ್ನ ಪರವಾಗಿ ಬೇರೊಬ್ಬಳಿಗೆ ಸಂಬಳ ಕೊಟ್ಟು ಅವಳಿಂದ ತನ್ನ ಗಂಡನಿಗಾಗಿ ಅಳುವ ಚಾಕರಿಯನ್ನು ಮಾಡಿಸುತ್ತಾಳೆ : ” ಅಳುವುದೆಂದರೆ ಸುಮ್ಮನೆ ಆಗುತ್ತದೆಯೇ ?ಅವರ ಜನ್ಮಚರಿತ್ರೆಯಲ್ಲಿ ಮುಖ್ಯವಾದ ವಿಷಯಗಳನ್ನು ಎತ್ತಿ ,ಹೊಗಳಿ ರಾಗಯುಕ್ತವಾಗಿ ,ಬೇರೆಯವರು ಕೇಳಿದಾಗ ಪದ್ಯಗಾನದಂತೆ ತೋರುವ ಹಾಗೆ ಅಳಬೇಕಷ್ಟೆ ? ಅದು ನನ್ನಿಂದ ಕೇವಲ ಅಸಾಧ್ಯವಿದ್ದುದರಿಂದ ಅವಳಿಗೆ ನಾಲ್ಕು ರೂಪಾಯಿ ಹೋದರೆ ಅಷ್ಟೇ ಹೋಯಿತು,-ಅವಳು ಒಂದು ತಿಂಗಳ ಪರ್ಯಂತರ ದಿವಸಕ್ಕೆ ಎರಡು ಸಾರಿ ನಮ್ಮಲ್ಲಿಗೆ ಬಂದು ದಿವ್ಯವಾಗಿ ಅತ್ತಳು.” ಇಂಥದ್ದೇ ಇನ್ನೊಂದು ಪ್ರಸಂಗ -ದೇವಸ್ಥಾನದ ಸುತ್ತ ಹೊರಳಾಡುವ ಸೇವೆಗೆ ಸಂಬಂಧಿಸಿದ್ದು.ಇಲ್ಲಿ ಕೂಡಾ ಭಾಗೀರಥಿ ತಾನು ಮಾಡಬೇಕಾಗಿರುವ ಸೇವೆಯನ್ನು ಬೇರೊಬ್ಬಳಿಂದ ಸಂಬಳ ಕೊಟ್ಟು ಮಾಡಿಸುತ್ತಾಳೆ :   “ಹೊರಳಾಡುವುದಕ್ಕೆ ನಾನು ಶಕ್ತಿ ಹೀನಳಾಗಿದ್ದುದರಿಂದ ಆ ಸೇವೆಗೆ ಬೇರೊಬ್ಬ ವಿಧವೆಯನ್ನು ಒಂದು ರೂಪಾಯಿ ಸಂಬಳ ಕೊಟ್ಟು ನೇಮಿಸಿದೆ.ಆಕೆಯು ಎಷ್ಟು ಮಾತ್ರವೂ ಕುಂದಿಲ್ಲದೆ ಚೆಂದವಾಗಿ ಹೊರಳಾಡಿ ,ಅದರಿಂದ ಸಿಕ್ಕಿದ ಪುಣ್ಯವನ್ನು ದರ್ಪಣ ತೀರ್ಥದಲ್ಲಿ ನನಗೆ ಧಾರಾದತ್ತವಾಗಿ ಮಾಡಿಕೊಟ್ಟಳು .” ಈ ಎರಡು ಪ್ರಸಂಗಗಳಲ್ಲಿಯೂ ಕಟ್ಟಳೆಗಳ ಆಚರಣೆಯು ತನ್ನ ಪಾಲಿಗೆ ಬಂದಾಗ ಭಾಗೀರಥಿಯು ಅವುಗಳಿಗೆ ಬದಲಿಗಳನ್ನು ಕಂಡುಕೊಳ್ಳುತ್ತಾಳೆ.ಆದರೆ ಬೇರೆಯವರಿಗೆ ಕಟ್ಟಳೆಗಳನ್ನು ಉಪದೇಶಿಸುವಾಗ ,ಅವುಗಳಿಗೆ ಬದಲಿಗಳಾಗಲೀ ರಿಯಾಯಿತಿಗಳಾಗಲೀ ಅವಳ ಶಾಸ್ತ್ರದಲ್ಲಿ ಇರುವುದಿಲ್ಲ. ಗುಲ್ವಾಡಿ ವೆಂಕಟರಾಯರು ತಮ್ಮ ‘ಭಾಗೀರಥಿ’ ಕಾದಂಬರಿಯಲ್ಲಿ ಕಟ್ಟುಕಟ್ಟಳೆಗಳ ನಿರಾಕರಣೆಯನ್ನು ದಾರ್ಶನಿಕ ವ್ಯಂಗ್ಯದ ಮೂಲಕ ಮಾಡುತ್ತಾರೆ.’ಸುಟ್ಟ ಚರಿತ್ರೆ’ ಎಂದು ಭಾಗೀರಥಿ ತನ್ನ ಜೀವನವೃತ್ತಾಂತವನ್ನು ಹಳಿದುಕೊಳ್ಳುವಾಗಲೇ ಇತಿಹಾಸಕ್ಕೆ ಸಂದುಹೋದ ಜೀವನಪದ್ಧತಿಯೊಂದು ಸಮಕಾಲೀನ ಸಂದರ್ಭದಲ್ಲಿ ಅಪ್ರಸ್ತುತ ಆಗುವ ನಿಲುವು ಸ್ಪಷ್ಟವಾಗಿದೆ. ಗುಲ್ವಾಡಿಯವರು ‘ಭಾಗೀರಥಿ’ ( ೧೯೦೦ ) ಕಾದಂಬರಿಯನ್ನು ರಚಿಸಿ ೧೧೧ ವರ್ಷಗಳು ಸಂದುವು.ಭಾಗೀರಥಿ ಈಗ ಬದುಕಿರಲಾರಳು ಅನ್ನಿಸುತ್ತದೆ. ಮೂರು ದಿನಗಳ ದಟ್ಟ ಮೋಡ ಮತ್ತು ಜಿಟಿ ಜಿಟಿ ಮಳೆಯ ಬಳಿಕ ಈದಿನ ವ್ಯೂರ್ತ್ಸ್ ಬುರ್ಗ್ ನಲ್ಲಿ ಸೂರ್ಯ ಬೆಳಗುತ್ತಿದ್ದಾನೆ.ಕತ್ತಲೆಯ ಜಗತ್ತಿನಲ್ಲಿ ಬೆಳಕು ತೋರಿಸಿದ ನನ್ನ ಭಾರತದ ಅಂಬೇಡ್ಕರ್ ,’ನನ್ನ ದೇಹವೇ ದೇಗುಲ ‘ಎಂದು ಕಾಯ ಮತ್ತು ಕಾಯಕವನ್ನು ಹೆಮ್ಮೆಯನ್ನಾಗಿಸಿದ ನನ್ನ ಕನ್ನಡನಾಡಿನ ಬಸವಣ್ಣ , ೧೧೧ ವರ್ಷಗಳ ಹಿಂದೆಯೇ ಕಟ್ಟಳೆಗಳ ಕಟ್ಟುಗಳನ್ನು ಮುರಿಯಲು ಕನ್ನಡದಲ್ಲಿ ಮೊದಲ ಕಾದಂಬರಿಗಳನ್ನು ಬರೆದ ನನ್ನ ದಕ್ಷಿಣ ಕನ್ನಡ ಜಿಲ್ಲೆಯ ಸಮಾಜ ಸುಧಾರಕ ಸಾಹಿತಿ ಗುಲ್ವಾಡಿ ವೆಂಕಟ ರಾವ್ -ಇವರ ಬೆಳಕಿನಲ್ಲಿ ಗ್ರಹಣವಿಲ್ಲದ ಹುಣ್ಣಿಮೆಯ ರಾತ್ರಿಯಂತೆ ಇಲ್ಲಿ ಹಗಲು ಚಾಚಿಕೊಂಡಿದೆ :’ ಬುದ್ಧಂ ಶರಣಂ ಗಚ್ಛಾಮಿ.’  ]]>

‍ಲೇಖಕರು avadhi

April 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಜರ್ಮನಿಯಲ್ಲಿ ಹೀಗೊಂದು ಕನ್ನಡ ಶಿಬಿರ

ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ಪ್ರೊ ಬಿ ಎ ವಿವೇಕ ರೈ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ...

ತುಳು ’ಸಿರಿ’ಯನ್ನು ದಾಖಲಿಸಿದ ಪ್ರೊ .ಲೌರಿ ಹಾಂಕೊ – ಪ್ರೊ ಬಿ ಎ ವಿವೇಕ ರೈ

ಪ್ರೊ ಬಿ ಎ ವಿವೇಕ್ ರೈ ಪ್ರೊ .ಲೌರಿ ಹಾಂಕೊ (1932 -2002 ) ಫಿನ್ ಲೆಂಡ್ ದೇಶದ ತುರ್ಕು ವಿಶ್ವವಿದ್ಯಾಲಯದಲ್ಲಿ ಜಾನಪದ ವಿಜ್ಞಾನ ಮತ್ತು...

4 ಪ್ರತಿಕ್ರಿಯೆಗಳು

 1. Narasimhamurthy Murthy

  ಲೇಖನ ಇಷ್ಟವಾಯಿತು. ಧನ್ಯವಾದಗಳು ಸರ್.

  ಪ್ರತಿಕ್ರಿಯೆ
 2. vimarsha

  ಅಂಬೇಡ್ಕರ್ ಅವರ ಬದುಕು,ಬರಹ ಮತ್ತು ಚಿಂತನೆಗಳ ಮನನದ ಹಾದಿ ಬಹಳ ಕ್ಲೀಶಾತ್ಮಕವಾದ ದಾರಿ ಹಿಡಿದು ವಿರೂಪವಾಗಿ ಹೋಗುತ್ತಿರುವ ಈ ತುರ್ತಿನಲ್ಲಿ,
  ಲೇಖನ ಅಂಬೇಡ್ಕರ್ ಅವರನ್ನ ನಿಜನೆಲೆಯಲ್ಲಿ ಮಿಂದುಕೊಳ್ಳುವ ಮಹಾಧಾರೆಯಂತೆ ಹರಿದು ಬಂದಿದೆ,
  ಥ್ಯಾಂಕ್ಸ್ ಅ ಲಾಟ್ ಸರ್.

  ಪ್ರತಿಕ್ರಿಯೆ
 3. vimarsha rao

  ಅಂಬೇಡ್ಕರ್ ಅವರ ಬದುಕು,ಬರಹ ಮತ್ತು ಚಿಂತನೆಗಳ ಮನನದ ಹಾದಿ ಬಹಳ ಕ್ಲೀಶಾತ್ಮಕವಾದ ದಾರಿ ಹಿಡಿದು ವಿರೂಪವಾಗಿ ಹೋಗುತ್ತಿರುವ ಈ ತುರ್ತಿನಲ್ಲಿ,
  ಲೇಖನ ಅಂಬೇಡ್ಕರ್ ಅವರನ್ನ ನಿಜನೆಲೆಯಲ್ಲಿ ಮಿಂದುಕೊಳ್ಳುವ ಮಹಾಧಾರೆಯಂತೆ ಹರಿದು ಬಂದಿದೆ,
  ಥ್ಯಾಂಕ್ಸ್ ಅ ಲಾಟ್ ಸರ್.
  vimarsha

  ಪ್ರತಿಕ್ರಿಯೆ
 4. ಉದಯಕುಮಾರ್ ಹಬ್ಬು

  ಡಾ ವಿವೇಕ್ ರೈ ಅವರ ಅಂಬೇಡ್ಕರ್ ಮತ್ತು ಬಸವಣ್ಣನವರ ವಿಚಾರಗಳು ಎಂದೆಂದಿಗೂ ಪ್ರಸ್ತುತವೇ ಆಗಿವೆ. ಧರ್ಮ ದೇವರ ಸಿದ್ಧಾಂತಗಳನ್ನು ಅಭ್ಯಾಸಿಸುವ ವಿಷಯವಲ್ಲ. ಮನುಷ್ಯ ಕೇಂದ್ರಿತ ನೀತಿ, ಮತ್ತು ಜೀವನ ಮೌಲ್ಯಗಳೇ ಧರ್ಮದ ಕೇಂದ್ರಬಿಂಧುವಾಗಬೇಕು ಎನ್ನುವದರಲ್ಲಿ ಎರ್ದು ಮಾತಿಲ್ಲ. ಸಮಾನತೆ, ಬಂಧುಬಾಂಧತ್ವ,, ಸಹೋದರತೆ ಇವೆ ತತ್ವಗಳನ್ನು ಬಸವಣ್ಣನವರು ಪ್ರಚುರಪಡಿಸಿದ್ದಾರೆ. ದ ವಿವೇಕ ರೈ ಅವರಿಗೆ ವಂದನೆಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: