ಅಕ್ಕಿ ಕೇಳಿದ ಹುಡುಗರು..

ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ಎಷ್ಟು ಬೇಡ ಅಂದರೂ ಅವರ ಕಣ್ಣುಗಳು ಸಾಲು ಕೆಫೆಟೇರಿಯಾಗಳ ಒಳಗೆ ತಣ್ಣಗೆ ಕುಳಿತು ತಂಪು ಪಾನೀಯಗಳನ್ನು ಹೀರುತ್ತಿದ್ದ ಹುಡುಗರ ಗುಂಪಿನ ಕಡೆಗೆ ಸುಳಿದಾಡುತ್ತಿದ್ದವು. ಒಳಗೆ ಕುಳಿತಿದ್ದ ಅವರಿಗಿಂತ ಸ್ವಲ್ಪವೇ ವಯಸ್ಸಲ್ಲಿ ದೊಡ್ಡವರಿರಬಹುದಾದ ಎಲ್ಲರೂ ಇವರನ್ನು ಬೇರೆ ಯಾವುದೊ ನೆಲದ ಮಕ್ಕಳಂತೆ ದಿಟ್ಟಿಸುತ್ತಿದ್ದರು.

ನಾನು ಮೂರು ನಾಲ್ಕು ದಿನ ಅವರ ಹಿಂದೆ ತಿರುಗಿದರೂ ಹೆಸರು ಕೇಳದೆ ಹೋದ ಆ ‘ಇಬ್ಬರು ಹುಡುಗರು’ ಮಣಿಪಾಲದ ಉರಿ ಬಿಸಿಲ ಬೇಗೆ ಒಂದಿನಿತೂ ತಾಗದವರಂತೆ ಮೊಣಕಾಲಿಗಿಂತ ಮೇಲಿನ ಚಡ್ಡಿ ಮತ್ತು ಸಾಲಿನಲ್ಲಿ ಒಂದೆರಡು ಬಟನ್ ಗಳೇ ಇಲ್ಲದ ಗೆರೆಗೆರೆ ಅಂಗಿಗಳಲ್ಲಿ ಡಿ ಸಿ ಆಫೀಸ್ ಗೆ ಹೋಗುವ ದಾರಿಯ ಉದ್ದಕ್ಕೂ ಸುಳಿದಾಡುತ್ತಿದ್ದರು. ಈಗಷ್ಟೇ ಪ್ರಪಂಚವನ್ನು ಕಣ್ಣು ತೆಗೆದು ಕಾಣುತ್ತಿರುವ ಹತ್ತು ಹದಿನಾಲ್ಕು ವರ್ಷದ ಮಕ್ಕಳು. 

ಕೈಯಲ್ಲಿ ಬೇರೆ ಬೇರೆ ಗೊಂಬೆ ಚಿತ್ರ ಅಂಟಿಕೊಂಡಿರುವ ಕೀ ಚೈನ್ ಗಳನ್ನು ಹಿಡಿದು ಹತ್ತಿರ ಕಂಡವರಿಗೆಲ್ಲ “ಮೂವತ್ತು ರೂಪಾಯಿ ಅಕ್ಕ… ಮೂವತ್ತು ರೂಪಾಯಿ ಅಷ್ಟೇ ಅಣ್ಣ… ಪ್ಲೀಸ್ ತಕ್ಕೊಳ್ಳಿ…” ಎನ್ನುತ್ತಾ ವಾರದಲ್ಲಿ ಮೂರು ದಿನವಾದರೂ ಅದೇ ಜಾಗದಲ್ಲಿ ನನ್ನ ಕಣ್ಣಿಗೆ ಬೀಳುತ್ತಾರೆ. ದುಡಿಮೆಯ ತಲೆ ಬುಡ ಗೊತ್ತೇ ಇಲ್ಲದ ವಯಸ್ಸಿಗೆ ಮಣಿಪಾಲದಂತ ನಗರದಲ್ಲಿ ಇವರ ಕಾರುಬಾರು ಕಂಡು ಆಶ್ಚರ್ಯ ಆಗದೇ ಇರುವುದಿಲ್ಲ.  ಎಂತಾ ಬಿಸಿಲಿಗೂ ಕುಂದದೆ ಇರುವಂತ ಉತ್ಸಾಹ, ಯಾರೆಷ್ಟೇ ದೂಡಿದರೂ ಒಂದಿಷ್ಟೂ ಕುಗ್ಗದ ದೃಢ ಧನಿ ಮಾತ್ರ ಅವರಿಬ್ಬರ ವಯಸ್ಸಿಗೂ ಮೀರಿದ್ದು.

ಮಣಿಪಾಲ ಗುಡ್ಡದ ಮೇಲಾದ ಕಾರಣಕ್ಕಿರಬಹುದು ಇಲ್ಲಿ ಬಿಸಿಲಿನ ಝಳ ಯಾವತ್ತೂ ಅಧಿಕ. ಇಲ್ಲಿನ ಪ್ರಕೃತಿ ಸೌಂದರ್ಯ, ಹದವಾಗಿಯೇ ಇರುವ ಉಳಿದ ಕಾಲಗಳನ್ನು ಮೆಚ್ಚುವ ಎಲ್ಲರೂ ಇಲ್ಲಿನ ಬಿಸಿಲಿಗೆ ಹೆದರಿದವರೇ. ಅಂತಹದೇ ಬಿರು ಬಿಸಿಲಿನ ಮಧ್ಯಾಹ್ನ ಈ ಹುಡುಗರ ಗುಂಪು ಬರಿಗಾಲಲ್ಲಿ ದುಡಿಮೆ ಅಂತ ಬಂದುಬಿಟ್ಟಿದೆ ಅಂದರೆ ಅದಕ್ಕೆ ಏನನ್ನುವುದು? 

ಈ ಎಳೆ ಕಾಲುಗಳು ಬಿಸಿಲಲ್ಲಿ ಚಪ್ಪಲಿ ಇಲ್ಲದೇ ಸುಡುತ್ತ ವ್ಯಾಪಾರ ಮಾಡಲು ಹೆಣಗುತ್ತಿದ್ದ ಕಂಡ ಕೆಲವರು ಅಯ್ಯೋ ಪಾಪ ಅನ್ನುತ್ತಾ ಅವರಿಂದ ಖರೀದಿಗೆ ಮುಂದಾಗುತ್ತಿದ್ದರೆ, ಇದರ ಗೋಜು ಇಲ್ಲದ ಮಕ್ಕಳು ತಮ್ಮ ವ್ಯಾಪಾರ ನೈಪುಣ್ಯತೆಯ ಬಗ್ಗೆ ಹೆಮ್ಮೆಪಡುತ್ತಾ ಮತ್ತಿಷ್ಟು ಉತ್ಸುಕರಾಗುತ್ತಿದ್ದರು. ಅಷ್ಟು ಹೊತ್ತಿಗೆ ಕಾದ ಟಾರು ರೋಡುಗಳು ಅವರ ಕಾಲುಗಳಿಗೆ ಅಭ್ಯಾಸ ಆಗಿದೆ ಅನ್ನೋದೂ ಗೊತ್ತಾಗುತ್ತಿತ್ತು. 

ಶಾಲೆ, ಬಿಟ್ಟರೆ ನೆರೆಕರೆಯವರೊಂದಿಗೆ ಆಟ ಅನ್ನುವ ವಯಸ್ಸಿಗೆ ಇವರದ್ದು ಈ ಸಾಹಸ. ಕಡಿಮೆ ದರಕ್ಕೆ ಹೋಲ್ ಸೆಲ್ ನಲ್ಲಿ  ಕೊಂಡ ಚಿಕ್ಕ ಪುಟ್ಟ ಬಣ್ಣದ ವಸ್ತುಗಳು, ಬಲೂನುಗಳು ಇಲ್ಲಿ ಒಂದಿಷ್ಟು ಲಾಭಕ್ಕೆ ಮಾರಾಟ ಆಗುತ್ತೆ ಅನ್ನೋದನ್ನ ಪರಿಚಯದವರು ಯಾರೋ ಕಂಡುಕೊಂಡು ಇವರನ್ನ ಹುರಿದುಂಬಿಸಿದ್ದಾರಂತೆ. ಅವರ ಮಾತನ್ನೇ ನಂಬಿ ಒಂದಿಷ್ಟು ಸಂಗಾತಿಗಳನ್ನು ಒಟ್ಟುಹಾಕಿಕೊಂಡು ಮಣಿಪಾಲದ ಬಸ್ ಹತ್ತಿ ಬಂದುಬಿಟ್ಟರೆ ಸಂಜೆಯವರೆಗೆ ರೂಪಾಯಿಗಳ ದುಡಿಮೆ ಆಗಲಿ ಎಂದು ತಿರುಗುವುದೇ ಅವರ ದಿನಚರಿ.

ಶಾಲೆಗೆ ಹೋಗುವ ಈ ಜೀವಗಳು ಇಲ್ಲಿ ಏನು ಮಾಡುತ್ತಿದ್ದಾವೆ ಎನ್ನುವುದನ್ನು ತಿಳಿಯದೆ ಮಾತಾಡಿಸಿದರೆ, ನಮ್ಮ ಮಾತು ಮರೆಸುತ್ತ, ಇನ್ನೇನನ್ನೋ ಹೇಳುತ್ತಾ ವ್ಯಾಪಾರ ಮಾತ್ರ ತಮ್ಮ ಕೆಲಸ ಅನ್ನುವಲ್ಲಿಗೆ ನಿಲ್ಲಿಸುತ್ತಿದ್ದರು. ಹಠ ಬಿಡದೆ ಪುನಃ ಪುನಃ ಕೇಳಿದ್ದಕ್ಕೆ ಅವರಿಬ್ಬರ ಜೊತೆಗೆ ಇನ್ನೊಂದಿಷ್ಟು ಗೆಳೆಯರೂ ಅದೇ ದಾರಿಯ ಬೇರೆ ಬೇರೆ ದಿಕ್ಕಿನಲ್ಲಿ ಬಲೂನು, ಕೀ ಚೈನು ಹಿಡಿದು ಮಾರುತ್ತಿದ್ದಾರೆ ಆನುವುದಷ್ಟು ಗೊತ್ತಾಯ್ತು. ಎಲ್ಲರನ್ನು ಕಲೆಹಾಕಿ ನೋಡಿದರೆ ಎಂಟರಿಂದ ಹದಿನಾಲ್ಕು ವರ್ಷ ಮೀರಿದವರು ಯಾರೂ ಇಲ್ಲ.

ಆ ಗುಂಪಿನ ಮಕ್ಕಳೆಲ್ಲರೂ ಉಡುಪಿ ಬೀಡನಗುಡ್ಡೆ ಸಮೀಪ ಜೋಪಡಿಯ ನಿವಾಸಿಗರು. ಕುಟುಂಬ ಉತ್ತರ ಕರ್ನಾಟಕದ ಮೂಲೆ ಮೂಲೆಯಿಂದ ಇಲ್ಲಿಗೆ ದುಡಿಯಲು ಬಂದ ದಿನದಿಂದ ಮಾತ್ರ ಇಲ್ಲಿಯವರು. ಬೆಳಿಗ್ಗೆ ಆದರೆ ದುಡಿಯಲು ಹೊರಡುವ ಅಪ್ಪ ಅಮ್ಮಂದರ ಜೊತೆ ಬೆಳೆದ ಮಕ್ಕಳಿಗೆ ದುಡಿಮೆ ಅನ್ನೋದು ಹುಟ್ಟಿನಿಂದಲೇ ಬಂದದ್ದು.

“ಕೊರೋನಾ ಬಂದು ಶಾಲೆಗೆ ರಜೆ ಆಗಿಬಿಟ್ಟಿದೆ ಅಕ್ಕ. ಮನೆ ಪಕ್ಕದಲ್ಲೇ ಆಡೋಕೆ ಅಂತ ಜಾಗ ಅಂತೂ ಇಲ್ಲ. ಇಲ್ಲಿಗೆ ಎಲ್ಲ ಒಟ್ಟಿಗೆ ಬಂದರೆ ಒಂದಿಷ್ಟು ದುಡಿಮೆ, ಪೇಟೆಯನ್ನು ಕಣ್ಣು ತುಂಬಿಸಿಕೊಳ್ಳೋ ಸುಖ, ನಿಮ್ಮಂತ ಅಕ್ಕ-ಅಣ್ಣ ಯಾರಾದರೂ ಪೇಟೆ ತಿಂಡಿ ಕೊಡಿಸಿದರೆ ಅದೂ ಸೈ. ಅದಕ್ಕೆ ವಾರಕ್ಕೆ ಮೂರು ನಾಲ್ಕು ದಿನ ಈ ಕಡೆ ಬಂದು ಬಿಡೋದು. ಮನೇಲೂ ಇದೇ ಅನ್ನುತ್ತಾರೆ. ಒಂದಿಷ್ಟು ದುಡಿಮೆ ಆದರೂ ಆಗುತ್ತೆ ಅಂತ. ಇಲ್ಲದೆ ಇದ್ದರೆ ನಾವೆಲ್ಲ ಉಡುಪಿಯಲ್ಲಿ ಇರುವುದು ಮತ್ತೆ ಯಾಕೆ ಈ ಗುಡ್ಡ ಹತ್ತಿ ಬರುವ ಕಷ್ಟ ಪಡುತ್ತೇವೆ? ಹೇಳಿ ” ಎಂದರು.  ನನಗೂ ಈ  ಮಾತಿಗೆ ಏನು ಅನ್ನಬೇಕು ಅನ್ನೋದೇ ಗೊತ್ತಾಗಲಿಲ್ಲ.

 ಶಾಲೆಯಲ್ಲಿ ಏನಾದ್ರೂ ಓದೋಕೆ ಬರೆಯೋಕೆ ಕೊಟ್ಟಿಲ್ವಾ? ಕೇಳಿದರೆ, “ಕೊಟ್ಟಿದ್ದಾರಕ್ಕ… ನಾವೆಲ್ಲ ಒಂದೇ ಶಾಲೆ. ಅದೇ ಬಸ್ ಸ್ಟಾಂಡ್ ಪಕ್ಕಕ್ಕೆ ಉಂಟಲ್ಲ ಅದು. ಸಾಯಂಕಾಲ ಹೋಗಿ ಒಟ್ಟಿಗೆ ಓದೋಕೆ ಕೂರುತ್ತೇವೆ. ದಿನ ದಿನ ಸ್ಕೂಲು ಅಂತಿದ್ರೆ. ಓದು, ಸ್ನೇಹಿತರು, ಬಿಸಿಯೂಟ, ಆಟ ಅಂತೆಲ್ಲ ದಿನ ಕಳೆಯುತ್ತಿತ್ತು. ಅಪರೂಪಕ್ಕೆ ಮಾತ್ರ ಈ ತರ ದುಡಿಮೆ ಆಗುತ್ತಿತ್ತು. ಈಗ ಮನೇಲೆ ಇದ್ದೂ ಬೇಜಾರೂ ಬಂದಿದೆ. ಅಪ್ಪನೂ ಗಂಡು ಮಕ್ಕಳು ಈಗಲೇ ದುಡಿಮೆ ಅಭ್ಯಾಸ ಮಾಡಿಕೊಳ್ಳಬೇಕು ಅಂತಾರೆ.” ಎಂದ ಅದರಲ್ಲೊಬ್ಬ.

ಮುಂದಿನ ಮೂರು ದಿನ ಸತತವಾಗಿ ಅವರನ್ನು ಅದೇ ದಾರಿಯಲ್ಲಿ ಕಂಡರು, ಮಧ್ಯದಲ್ಲಿ ಒಂದು ದಿನ ಸಿಕ್ಕಿ ಮಾತಾಡಿಸಿದರು, ಅವರ ಪರಿಸ್ಥಿತಿಯ ಒಳಹೊರಗನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯ ಆಗಲಿಲ್ಲ. ಶಾಲೆಗೆ ಹೋಗುವ ಮಕ್ಕಳಿಗೆ ಅಂಟಿದ ದುಡಿಮೆಯ ಅವಶ್ಯಕತೆ ಅರ್ಥ ಮಾಡಿಕೊಳ್ಳುವುದು ಕಷ್ಟವೇ. ಇದರಲ್ಲಿ ಯಾವುದು ಸರಿ. ಯಾವುದು ತಪ್ಪು ಎಂದು ತೂಕ ಮಾಡುವುದು ನನಗೂ ಕಷ್ಟವೆನಿಸಿತು. ಇವರು ಇದೇ ಕಾಯಕವನ್ನು ಖಾಯಂ ಮಾಡಿಕೊಂಡರೆ? ಎಂದು ಭಯವೂ ಆಯಿತು.

ಸರಿ “ನನಗೆ ಕೀ ಚೈನ್ ಬೇಡ. ಆದರೆ ಬನ್ನಿ… ಏನಾದರು ತಿಂಡಿ ತಿನ್ನುವ..” ಅನ್ನುತ್ತಾ ಕರೆದವಳಿಗೆ, ಇಬ್ಬರು  ಹುಡುಗರೂ ಒಕ್ಕೊರಲಿನಿಂದ “ತಿಂಡಿ ಬೇಡ ಅಕ್ಕ… ಒಂದು ಕೆಜಿ ಅಕ್ಕಿ ಕೊಡಿಸಿ, ಮನೇಲಿ ಹೋಗಿ ತಿನ್ನುತ್ತೇವೆ…”  ಎಂದರು. ಬಗೆ ಬಗೆಯ ತಿನಿಸು ಪಾನೀಯಗಳಲ್ಲಿ ಮುಳುಗಿ ಹೋಗಿದ್ದ ಅವರದ್ದೇ ವಯಸ್ಸಿನ ಮಕ್ಕಳಿಂದ ಅನತಿ ದೂರದಲ್ಲಿ ಇವರು ಹಸಿವಿಗೆ ಮಾತ್ರ ಬಗ್ಗಿದ್ದರು. ಮತ್ತು ಬದುಕಿನ ಸತ್ಯಕ್ಕೆ ನಾನು.

December 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್,...

ಕಾಲದಾ ಕನ್ನಡಿ

ಕಾಲದಾ ಕನ್ನಡಿ

ವಿಜಯಾ ಮೋಹನ್ ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ...

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಜಿ ಟಿ ನರೇಂದ್ರ ಕುಮಾರ್ ರಾಷ್ಟ್ರಕವಿ ಕುವೆಂಪು ರವರು ಮೈಸೂರಿನಲ್ಲಿ ಸ್ವತಃ ಕಟ್ಟಿಸಿದ ಬಾಳಿ ಬದುಕಿದ ಮನೆ. ಈ ಮನೆಗೆ ಸರ್ವೋದಯ ಚಳುವಳಿಯ...

2 ಪ್ರತಿಕ್ರಿಯೆಗಳು

 1. ಗೀತಾ ಎನ್ ಸ್ವಾಮಿ

  ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ ವಸುಧೆಯೊಳಗಾತನೇ ಗಾರುಡಿಗ ಕಾಣಾ ರಾಮನಾಥ.
  ಸುಷ್ಮಿತಾ ಮೇಡಂ ತುಂಬಾ ಕಾಡಿದ ಬರಹ.

  ಪ್ರತಿಕ್ರಿಯೆ
 2. ವಾಸುದೇವ ಶರ್ಮಾ

  ವಾಸ್ತವದ ಚಿತ್ರ. ಆಪ್ತವಾಗಿ ಕೊಟ್ಟಿದ್ದೀರಿ. ಇಡೀ ದೇಶದಲ್ಲಿ ಇಂತಹದೇ ಪರಿಸ್ಥಿತಿ. ಬೆಂಗಳೂರಿನಲ್ಲೂ ತುಂಬಾ ಮಕ್ಕಳು ಬೀದೀ ವ್ಯಾಪಾರದಲ್ಲಿ, ಕೆಲವೆಡೆ ಭಿಕ್ಷೆಯಲ್ಲಿ. ಇದನ್ನು ತಡೆಯಲು ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ. ಅದಕ್ಕಾಗಿ ಈಗ ಎಷ್ಟು‌ ಮಕ್ಕಳಿರಬಹುದು ಎಂದು ಅಂದಾಜಿಸಿ ಅವರ ರಕ್ಷಣೆ, ಪುನರ್ವಸತಿಗೆ ಎಲ್ಲ ಇಲಾಖೆಗಳು ಮತ್ತು ನಗರ ಪಾಲಿಕೆ ಸ್ವಯಂಸೇವಾ ಸಂಘಟನೆಗಳು ಮುಂದಾಗಿವೆ. ಮುಖ್ಯವಾದ ವಿಚಾರ ಆ ಮಕ್ಕಳ ಸುರಕ್ಷತೆ. ಏನಾಗುತ್ತದೆ ನೋಡಬೇಕು.‌
  ನಿಮ್ಮ ಲೇಖನದ ಕೊನೆಯ ಸಾಲು, ‘ತಿಂಡಿ ಬೇಡ. ಒಂದು ಕೆಜಿ ಅಕ್ಕಿ ‌ಕೊಡಿಸಿ’ ವಾಸ್ತವ.
  ಈ ವಿಚಾರ ಬರೆದುದಕೆ ಧನ್ಯವಾದ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: