’ಅಡ್ಡಣಿಗೆ ನೆನಪಿನಲ್ಲಿ…’ – ಒ೦ದು ಪ್ರಬ೦ಧ

ಅಡ್ಡಣಿಗೆ – ಡಾ. ಎಸ್.ಬಿ.ಜೋಗುರ ಒಂದು ಕಾಲದಲ್ಲಿ ಅಡುಗೆಮನೆಯಲ್ಲಿ ಅವ್ವನ ಸಂಗಾತಿಗಳಾಗಿದ್ದ ಮೊಸರಿಡುವ ನೆಲುವು.. ಮಜ್ಜಿಗೆ ಕಡಿವ ರೇವಿಗೆ.. ಪುಂಡೀಪಲ್ಲೆ ಮುಗುಚುವ ಹುಟ್ಟು.. ತುಪ್ಪ ಹಾಕಿಡುವ ಗಿಂಡಿ.. ನುಚ್ಚು ಮಾಡೊ ಮಡಿಕೆ.. ಹಿಟ್ಟು ನಾದುವ ಕೊಳಪೆಟಿಗೆ.. ಖಾರಾ ಕುಟ್ಟುವ ಕಲಿಗಲ್ಲು.. ರೊಟ್ಟಿ ಹಾಕಿಡುವ ಬುಟ್ಟಿ.. ಕಿಚಡೀ ಮಾಡೊ ಜರ್ಮನೀ ಸಟ್ಟ, ಹೊಗೆ ಮೆತ್ತಿ ಕರೀ ಅಂದ್ರೆ ಕರಿ ಆಗಿರೋ ಜೀರಗಿ ಸಾಸಿವೆ ಡಬ್ಬಿ ಕಂ ಅವ್ವನ ಎಮರ್ಜನ್ಸಿ ಫ಼೦ಡ್ ಇಡುವ ಜಾಗ.. ಬೆಂಕೀ ತಗಿಯೋ ಚಿಮಟಾ.. ನೀರು ತುಂಬಿಡುವ ತಾಮ್ರದ ತಪೇಲಿ.. ವತ್ತಲದಲ್ಲಿ ಕುತ್ತಿಗೆಮಟ ಹುದುಗಿಸಿದ್ದ ಹಂಡೆ ಇವೆಲ್ಲವುಗಳ ಸರದಾರ ಅಡ್ಡಣಿಗೆ. ಇಂತಪ್ಪ ಅಡುಗೆ ಮನೆಯ ಪರಿಕರಗಳು ಈಗ ಬರೀ ನೆನಪು ಮಾತ್ರ. ಗಿಡ್ಡಾಗಿರೋ ಅವ್ವ ಪುಟ್ಟ ಅಡುಗೆ ಮನೆಯಲ್ಲಿ ಹೀಗೇ ಬಾಗಿ ಕೈ ಚಾಚಿದರೂ ಸಾಕು ಕೈಗೆಟಕುವ ಈ ಎಲ್ಲವುಗಳೂ ಈಗ ಪರಂಪರೆಯ ತೆಕ್ಕೆಗೆ ಸೇರಿವೆ. ನನ್ನೂರಿನ ಅಡುಗೆಮನೆಯಲ್ಲಿ ಈಗ ಇವೆಲ್ಲವೂ ಮಂಗಮಾಯ. ಮೈಗೆ ಮೈ ಹಚ್ಚಿ ಕುಳಿತುಕೊಳ್ಳುವ ಮಣ್ಣ ಒಲೆಗಳು ಕೂಡಾ ಅಲ್ಲಿಲ್ಲ. ಅವ್ವ ಇರುವಷ್ಟು ದಿನ ಹಬ್ಬ ಹುಣ್ಣಿವೆಗಳಲ್ಲಿ ಹೊತ್ತಿಗೊದಗುತ್ತಿದ್ದ ಹುಗ್ಗೀ ಮಾಡುವ ಮಡಿಕೆ..ಮುಗುಚುವ ಹುಟ್ಟು..ಊಟಕ್ಕೆ ಕೂಡುವ ಮಣೆ ಹಾಗೂ ಅಡ್ಡಣಿಗೆ.. ಹೋಳಿಗೆಯ ತಗಡು.. ತುಪ್ಪದ ಗಿಂಡಿ ಅವ್ವ ಮರೆಗೆ ಸರಿದ ದಿನದಿಂದಲೇ ಮೂಲೆ ಸೇರಿವೆ. ಅವ್ವನ ಅಡುಗೆ ಮನೆಯೀಗ ತನ್ನ ಪಕ್ಕಾ ಜವಾರೀ ಸೊಗಡಿನಿಂದ ಹೊರಬಂದು ಹೈಬ್ರೀಡ್ ರಂಗು ಕಂಡಿದೆ. ಎಲ್ಲೆಡೆಗೂ ಹೈಬ್ರಿಡ್ ಸಾಮಾನುಗಳದ್ದೇ ಕಾರಬಾರು. ತಾಮ್ರದ ಕೊಡಗಳ ಜಾಗೆ0ುಲ್ಲಿ ಪ್ಲಾಸ್ಟಿಕ್ ಕೊಡ, ಅಡ್ಡಣಿಗೆಯ ಜಾಗೆಯಲ್ಲಿ ಡೈನಿಂಗ್ ಟೇಬಲ್, ಮೊಸರಿಡುವ ನೆಲುವಿನ ಜಾಗೆಯ ಕೆಳಗಡೆಯಲ್ಲಿ ಫ಼್ರಿಡ್ಜು, ಜೋಡಿ ಮಣ್ಣಿನೊಲೆಯ ಜಾಗೆಯಲ್ಲಿ ಗ್ಯಾಸ್ ಒಲೆ, ಅಡಕಲು ಗಡಿಗೆಗಳಿಡುವ ಜಾಗೆಯಲ್ಲಿ ಕೆಂಪು ಬಣ್ಣದ ಸಿಲೆಂಡರ್, ಖಾರಾ ಕುಟ್ಟುವ ಕಲ್ಲಿನ ಜಾಗೆಯಲ್ಲಿ ಗ್ರೈಂಡರ್ ಬಂದಿದೆ, ನೀರು ಕಾಯಿಸುವ ಹಂಡೆಯ ಜಾಗೆಯಲ್ಲಿ ವಾಟರ್ ಹೀಟರ್ ಕುಳಿತಿದೆ. ಆ ತಾಮ್ರದ ತಂಬಿಗೆ.. ಹಿತ್ತಾಳೆ ತಟ್ಟೆ.. ಅದು ನನ್ನದು, ಇದು ನಿನ್ನದು ಎಂದು ಅಣ್ಣ-ತಮ್ಮಂದಿರೊಂದಿಗೆ ಜಗಳ ತೆಗೆದು ನೀರು ತುಂಬಿಟ್ಟುಕೊಳ್ಳುವ ಆ ಪುಟ್ಟ ಪುಟ್ಟ ಗಿಂಡಿಗಳು… ಚಿಕ್ಕ ಕಂಠವಿರುವ ಹಿತ್ತಾಳೆ ತಂಬಿಗೆ, ಅಗಲ ಬಾಯಿಯ ತಾಮ್ರದ ಮಿಳ್ಳಿ ಅವೆಲ್ಲವುಗಳು ಎಲ್ಲಿ ಹೋದವು..? ರೇಡಿಮೇಡ್ ಸೆಲ್ಫ಼ಿನಲ್ಲಿ ಸಾಲಾಗಿ ಹೊಂದಿಕುಳಿತ ಆ ಸ್ಟೀಲ್ ಪಾತ್ರೆಗಳಿಗೆ.. ಲೋಟಗಳಿಗೆ ಯಾಕೆ ಆ ಗತ್ತಿಲ್ಲ..? ಗಮ್ಮತ್ತಿಲ್ಲ..? ಅವ್ವ ಬೆಳ್ಳಂಬೆಳಿಗ್ಗೆ ಎದ್ದು ಎಮ್ಮೆಯ ಬೆನ್ನ ಮೇಲೆ ಚಪ್ಪರಿಸಿ, ಅದರ ಹೊಟ್ಟೆಗೆ ಬೂದಿಯ ಗೆರೆಯೆಳೆದು, ಕೆಚ್ಚೆಗೆ ನೀರು ಸಿಂಪಡಿಸಿ, ತೊಳೆದು ಚೊರ್ರ್..ಚೊರ್ರ್.. ಎಂದು ಹಾಲು ಹಿಂಡುವ, ತಂಬಿಗೆ ತುಂಬುವ, ಬಾಯಿ ಮೆತ್ತುವ ಆ ಬುರಗು.. ಮತ್ತದರ ಪರಿಮಳ, ಹಾಲು ಹಿಂಡುವ ಕೊನೆಯ ಗಳಿಗೆಯವರೆಗೂ ಬಾಯಿಸತ್ತಂತೆ ಸೈಲೆಂಟ್ ಆಗಿ ಕುಳಿತುಕೊಳ್ಳುವ ಆ ಬೆಕ್ಕು ಇವೆಲ್ಲಾ ಎಲ್ಲಿ ಹೋದವು..? ಎಮ್ಮೆ ಕಟ್ಟ್ತುವವರಿಲ್ಲ.. ಹೈನ ಮಾಡುವವರಿಲ್ಲ. ಹಸಿ ಹಾಲು ಕುಡಿದು ಕಸರತ್ತೂ ಮಾಡುವವರಿಲ್ಲ.. ಬೆಳಗಾಗುತ್ತಿದ್ದಂತೆ ನಂದಿನಿ ಹಾಲಿನ ಪಾಕೀಟು ಹೊಸ್ತಿಲಲ್ಲಿ ಬಂದು ತಣ್ಣಗೆ ಅಂಗಾತ ಬಿದ್ದಿರುತ್ತದೆ. ಆ ದಿನಗಳೆಲ್ಲವೂ ಬದಲಾವಣೆಯ ತೆಕ್ಕೆಗೆ ಸೇರಿದವು ಎಂದು ಸಮಾಧಾನಕರ ಉತ್ತರ ಸಿಕ್ಕರೂ ಮನಸು ಸುಮ್ಮನಾಗುವದಿಲ್ಲ. ಕುರಸಾಲ್ಯಾ ಮನಸು ಕರೆದೊಯ್ಯುತ್ತಿದೆ ಬಾಲ್ಯದ ಆ ದಿನಗಳಿಗೆ. ಅವ್ವನ ಸಹವಾಸದಲ್ಲಿರುವ ಅಡುಗೆ ಮನೆಗೆ. ಅವ್ವ ಯಾವಾಗಲೂ ಹೇಳುತ್ತಿದ್ದಳು ‘ಎಚ್ಚ ಇದ್ದರೆ ಹುಚ್ಚಿಯೂ ಅಡುಗೆ ಮಾಡುತ್ತಾಳೆ’ಎಂದು. ನನ್ನವ್ವ ಅಡುಗೆ ಮಾಡುವ ರೀತಿಯೇ ಹಾಗಿತ್ತು. ಮನೆಯಲ್ಲಿ ಕಡುಕಷ್ತ್ಟವಿರುವಾಗಲೂ ಅವಳು ಮಾಡುವ ಶೇಂಗಾ ಕಾರಬ್ಯಾಳಿ ಈಗಲೂ ನನ್ನ ಸ್ವಾದವನ್ನು ಕೆದಕುತ್ತದೆ. ಒಂದಿತ್ತು ಒಂದಿಲ್ಲವೆಂದರೂ ಹಾಗೆ ಹದವಾಗಿ ಅಡುಗೆ ಮಾಡುವ ಅವ್ವನಿಗೆ ಇಡೀ ಓಣಿಯೇ ಶರಣು. ಅಪ್ಪನೂ ಅಷ್ಟೇ ಊಟದಲ್ಲಿ ತುಂಬಾ ಹದಗಾರ ಅದಕ್ಕಾರಣವೇ ಅವ್ವ ಹಾಗೆ ಅಡುಗೆ ಮಾಡುತ್ತಿದ್ದಳೆನೋ..? ಎಂದು ಈಗೀಗ ಅಂದುಕೊಳ್ಳುತ್ತೇನೆ. ಬಾಯಿ ಕೆಟ್ಟವರಂತೆ.. ಹಾಸಿಗೆ ಹಿಡಿದವರಂತೆ ಊಟ ಮಾಡುವ ನಾವೆಲ್ಲಿ..? ಈ ತರಕಾರಿಗೆ ಇಂತದ್ದೇ ವಗ್ಗರಣಿ.. ಇಂಥದೇ ಟೇಸ್ಟು ಬರಬೇಕೆಂದು ಬಯಸಿ ಊಟ ಮಾಡುವ ಅವರೆಲ್ಲಿ..? ಅವ್ವನ ಅಡುಗೆ ಮನೆಯಲ್ಲಿರುವ ಈ ಎಲ್ಲಾ ಸಾಮಾನು ಸರಂಜಾಮುಗಳು, ಗಕ್ಕನೇ ಅವ್ವನ ಕೈಗೆ ಮಾತ್ರ ಸಿಗುತ್ತಿದ್ದವು. ಅದೇ ಮನೆಯಲ್ಲಿ ಹುಟ್ಟಿ ಬೆಳೆದು ದೊಡ್ಡವರಾದ ನನ್ನ ಅಕ್ಕಂದಿರು ಮದುವೆಯಾದ ನಂತರ ತವರಿಗೆ ಬಂದಾಗ, ಅವ್ವನಿಗೆ ಅಡುಗೆಯಲ್ಲಿ ಸಹಾಯ ಮಾಡೋಣವೆಂದರೂ ಅವರ ಕೈಲಾಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವ್ವ ಅಡುಗೆಮನೆಯ ಜೀವಾಳ ಮತ್ತು ತ್ರಾಣವಾಗಿಯೇ ಹೊಂದಿಕೊಂಡಿದ್ದಳು. ನಮ್ಮದು ಮೂಲತ: ಒಕ್ಕಲುತನದ ಕುಟುಂಬ. ಮನೆಯಲ್ಲಿ ಆರು ಮಕ್ಕಳು. ಕರಾರುವಕ್ಕಾಗಿ ಮೂರು ಗಂಡು ಮೂರು ಹೆಣ್ಣು. ಗಂಡು ಮಕ್ಕಳ ಪೈಕಿ ನಾನೇ ಕೊನೆಯವನು. ಹೀಗಾಗಿ ನನಗೆ ಅಡುಗೆ ಮನೆಯಲ್ಲಿರುವ ಸಣ್ಣ ಸಣ್ಣ ಮಿಳ್ಳಿಗಳು.. ತಂಬಿಗೆಗಳು.. ತಟ್ಟೆಗಳು ನಾನಾಗ ಬಯಸಿದಂತೆ ಸಿಗುತ್ತಿದ್ದವು. ಮಿಕ್ಕ ಯಾರಾದರೂ ನನ್ನ ಆ ತಾಮ್ರದ ಗಿಂಡಿಯನ್ನು ಮುಟ್ಟಿದರೆ ದೊಡ್ದ ಕಲಹವೇ ಆಗುತ್ತಿತ್ತು. ಆ ಯುದ್ಧ ವಿರಾಮಕ್ಕಾಗಿ ನನಗೆ ನಾನು ಕೇಳುವ ತಟ್ಟೆ.. ಗಿಂಡಿ.. ತಂಬಿಗೆ ಜೊತೆಗೆ ಅವ್ವ ರೊಟ್ಟಿ ಬಡಿಯುವಾಗ ಕುಳಿತುಕೊಳ್ಳುವ ಸಣ್ಣದೊಂದು ಮಣೆ ಮತ್ತೂ ಹೂವಿನ ಚಿತ್ರದ ಸಣ್ಣ ಅಡ್ಡ್ದಣಿಗೆ ನನ್ನ ಪಾಲಿಗೆ ಒದಗುತ್ತಿದ್ದವು. ಜೊತೆಗೆ ಸಣ್ಣವನು ಎನ್ನುವ ರಿಯಾಯತಿಯೂ ಇತ್ತು. ಆ ರಿಯಾಯತಿಯ ದುರುಪಯೋಗವೂ ಮತ್ತೆ ಮತ್ತೆ ಆಗುತ್ತಿದ್ದುದೂ ಇತ್ತು. ನನಗೆ ಹಿತ್ತಾಳೆಯ ಅಡ್ಡಣಿಗೆಯ ಮೇಲೆ ಮತ್ತು ಆ ಸಣ್ಣ ಮಣೆಯ ಮೇಲೆ ಒಂದು ಬಗೆಯ ವಿಶೇಷ ಮೋಹ. ಅದಕ್ಕೆ ಕಾರಣವೂ ಇತ್ತು. ನನ್ನವ್ವ ಅದನ್ನು ತೊಳೆಯುವಾಗ ಪಕ್ಕದ ಮನೆಯವರ ಎದುರಲ್ಲಿ ಇದು ನನ್ನ ಕೊನೆಯ ಮಗಂದು.. ಎಂದಾಗ ನಾನು ತುಂಬಾ ಬೀಗುತ್ತಿದ್ದೆ. ಹಾಗೆ ಮತ್ತೆ ಮತ್ತೆ ಹೇಳಿದ ಮೇಲೆ ಅದರ ಮೇಲಿನ ಮೋಹವೂ ಹೆಚ್ಚಾಯಿತು. ಆ ಅಡ್ಡಣಿಗೆಯ ರೂಪವೂ ಹಾಗಿತ್ತು. ಅದು ಹಿತ್ತಾಳೆಯದ್ದು. ಮನೆಯಲ್ಲಿರುವ ಮೂರ್ನಾಲ್ಕು ಅಡ್ಡಣಿಗೆಗಳ ಪೈಕಿ ಅದು ಕೊಂಚ ವಿಶೇಷವಾಗಿತ್ತು. ಅದರ ಮೂರು ಕಾಲುಗಳು ಸಿಂಹದ ಕಾಲುಗಳಂತಿದ್ದವು. ಅತ್ಯಂತ ಠಬರಿನಿಂದ ಮೈ ಸೆಟಸಿ ನಿಂತಂತೆ ಕಾಣುವ ಆ ಅಡ್ದಣಗಿಯನ್ನು ಅವ್ವ ನನ್ನನ್ನು ಬಿಟ್ಟರೆ ಯಾರಿಗೂ ಕೊಡುತ್ತಿರಲಿಲ್ಲ. ಅದರೊಂದಿಗೆ ಪುಟ್ಟ ಮಣೆಯೂ ಸಾಥಿಯಾಗಿರುತ್ತಿತ್ತು. ಆ ಮಣೆಗೂ ಮತ್ತು ಆ ಅಡ್ಡ್ದಣಿಗೆಗೂ, ನನಗೂ ಹೇಳಿ ಮಾಡಿಸಿದ ಗೆಣೆತನವಾಗಿತ್ತು. ಆ ಅಡ್ಡಣಿಗೆಯ ಮೈಮಾಟ ತುಂಬಾ ಆಕರ್ಷಕವಾಗಿತ್ತು. ಮಿಕ್ಕ ಅಡ್ಡ್ದ್ದಣಿಗೆಗಳ ಮೇಲೆ ಸುತ್ತಲೂ ಎರಡೆರಡು ಗೆರೆಗಳನ್ನು ಕೊರೆಯಲಾಗಿತ್ತು. ಆದರೆ ಈ ಅಡ್ಡಣಿಗೆ ಹಾಗಲ್ಲ. ಆ ಗೆರೆಗಳ ಜೊತೆಗೆ ಅಲ್ಲಲ್ಲಿ ಒಂದೊಂದು ಪುಟ್ಟದಾದ ಹೂವನ್ನು ಚಿತ್ರಿಸಲಾಗಿತ್ತು. ಅದರ ಕಾಲುಗಳೂ ಅಷ್ಟೇ.. ಹೂವಿನ ಬಳ್ಳಿ ಸುತ್ತಿಕೊಂಡ ರೀತಿಯಲ್ಲಿ ಅತ್ಯಂತ ಆಕರ್ಷಣೀಯವಾಗಿತ್ತು. ಅಪ್ಪ ಪ್ರತಿನಿತ್ಯ ಊಟದಲ್ಲಿ ಮಣೆ ಹಾಗೂ ಅಡ್ಡಣಿಗೆಯನ್ನು ತಪ್ಪದೇ ಬಳಸುತ್ತಿದ್ದ. ನಾನು ಹಾಗಲ್ಲ ನನ್ನ ಸಹೋದರ ಸಹೋದರಿಯರು ಅಡ್ಡಣಿಗೆಯನ್ನು ಬಯಸಿದರೆ ನನಗೂ ಬೇಕಾಗುತ್ತಿತ್ತು. ಅದರ ಮೈಮಾಟ ಚಿಕ್ಕದು ಹಾಗಾಗಿಯೇ ಅದನ್ನು ಅವ್ವ ನನಗೆ ಎಂದು ಹೇಳುತ್ತಿದ್ದಳು. ನಾನು ನಮ್ಮ ಮನೆಯಲ್ಲಿ ಕಡೆಯ ಮಗ ಹೀಗಾಗಿ ಅಡುಗೆ ಮನೆಯಲ್ಲಿರುವ ಎಲ್ಲ ಸಣ್ಣ ಐಟೆಮ್ಗಳು ನನ್ನ ಪಾಲಿನವು. ಅದು ತಟ್ಟೆ.. ತಂಬಿಗೆ.. ವಾಟಿ.. ಗಿಂಡಿ..ಎಲ್ಲವೂ. ನನ್ನ ಆ ಸಣ್ಣ ಸಣ್ಣ ಐಟೆಂಗಳ ಮೇಲೆ ಎರಡು ಸಂದರ್ಭಗಳಲ್ಲಿ ಮಾತ್ರ ಮಿಕ್ಕವರಿಗೆ ಹಕ್ಕಿರುತಿತ್ತು ಒಂದು ನಾನು ಮಲಗಿರುವಾಗ ಇಲ್ಲವೇ ಬೇರೆ ಯಾವದೋ ಊರಿಗೆ ಹೋಗಿದ್ದಾಗ. ಇನ್ನು ಊರಿನಿಂದ ಬಂದ ಮೇಲೆ ಇಲ್ಲವೇ ಮಲಗಿ ಎದ್ದ ಮೆಲೆ ಯಾರಾದರೂ ತಮಾಷೆಗಾಗಿ ನನ್ನ ದಿಂಡಿ.. ತಟ್ಟೆ.. ತಂಬಗಿ ಮುಟ್ತಿದ್ದರ ಒಂದು ಸಣ್ಣ ಸುಳಿವು ಸಿಕ್ಕರೂ ನಾನು ದೊಡ್ದ ರಾದ್ಧಾಂತಮಾಡುತ್ತಿದ್ದೆ. ಅವ್ವಳೆ ಮುಂದಾಗಿ ‘ಅವರು ಸುಮ್ಮ ನಖರೀ ಮಾಡಲಿಕ್ಕ ಅಂತಾರ ತಗೊ.. ಯಾರೂ ಮುಟ್ಟಿಲ್ಲ ಅಲ್ಲೇ ಅದಾವ ನೋಡು’ ಅಂದಾಗಲೇ ಮುನಿದ ಈ ಮನಸು ತಣ್ಣಗಾಗುತ್ತಿತ್ತು. ಹಾಗೆ ತಣ್ಣಗಾಗದೇ ನನ್ನ ವಂಡತನ ಮುಂದುವರೆದರೆ ಅಪ್ಪನ ಬಡತ ಗ್ಯಾರಂಟಿ.. ಸುಮ್ಮನಾಗಲೇಬೇಕಿತ್ತು. ‘ನಿಮ್ಮ ಅಪ್ಪನ ಮುಂದ ಮುಂದ ಹೇಳ್ತೀನಿ ನಿಲ್ಲು’ ಅಂದದ್ದೇ ಹಟ ಅನ್ನೂದು ಹಿಟ್ಟಿನಂಗ ಪುಡಿ ಪುಡಿಯಾಗತಿತ್ತು. ನಾನು ಬಳಸುತ್ತಿದ್ದ ಆ ಪುಟ್ಟ ಹಿತ್ತಾಳೆಯ ಅಡ್ಡಣಿಗೆ ಈಗಲೂ ನಾನು ಡೈನಿಂಗ್ ಟೇಬಲ್ ಮೇಲೆ ಊಟಕ್ಕೆ ಕುಳಿತುಕೊಳ್ಳುವಾಗ ನನ್ನನ್ನು ಕಾಡುತ್ತದೆ. ಆ ಅಡ್ಡಣಗೆಯ ಬಗ್ಗೆ ಎರಡು ಮೂರು ಬಾರಿ ನನ್ನ ಹೆಂಡತಿ ಮತ್ತು ಮಗನ ಮುಂದೆ ಪರಿ ಪರಿಯಾಗಿ ಹೇಳಿದರೂ ನನ್ನ ಬಗ್ಗೆಯಾಗಲೀ.. ನೊಡದಿರುವ ಆ ಅಡ್ದಣಿಗೆಯ ಬಗ್ಗೆಯಾಗಲೀ ಅವರಲ್ಲಿ ಒಂಚೂರೂ ಕುತೂಹಲ ಕಾಣಲಿಲ್ಲ. ಬದಲಾಗಿ ಅದು ಹೀಗಿರುತ್ತಾ..? ಹಾಗಿರುತ್ತಾ..? ಎಂದು ಕೇಳುವದನ್ನು ನೋಡಿದರೆ ಕುರುಡರ ಮುಂದೆ ನಿಂತು ಆನೆಯನ್ನು ವರ್ಣಿಸುವವನ ಪಾಡು ನೆನಪಾಗುತ್ತದೆ. ಸೂಟಿಯಲ್ಲಿ ಊರಿಗೆ ಹೋದಾಗ ತೋರಿಸೋಣವೆಂದರೆ ಅವೆಲ್ಲಾ ಔಟ್ ಡೇಟೆಡ್ ಎಂದು ಸ್ಟೀಲ್ ಪಾತ್ರೆಗಳ ಜೊತೆಗೆ ಅವು ಸ್ಥಾನಪಲ್ಲಟ ಮಾಡಿಕೊಂಡಿವೆ. ಆ ಮಿಳ್ಳಿ.. ಬಟ್ಟಲು.. ತಂಬಿಗೆ.. ತಪೇಲಿಗಳೆಲ್ಲವೂ ಈಗ ಕರಗಿ ಮಾಡ್ರನ್ ಅಲ್ಟ್ರಾಮಾಡ್ರನ್ ರೂಪ ಧರಿಸಿ ಯಾವದೋ ಒಂದು ಬಾಂಡೇ ಅಂಗಡಿಯನ್ನು ಅಲಂಕರಿಸಿವೆ. ಆ ದಿನ ನನಗಿನ್ನೂ ನೆನಪಿದೆ. ಅಂದು ಊರಿನಿಂದ ಕೆಲ ಸಂಬಂಧಿಗಳು ಬಂದಿದ್ದರು. ಅವರ ಜೊತೆಗೆ ಕೆಲವು ಮಕ್ಕಳು ಬಂದಿದ್ದರು. ಊಟದ ಸಮಯದಲ್ಲಿ ತಪ್ಪಿ ಅವ್ವ ನನ್ನದು ಎಂದು ನಾಮಕರಣ ಮಾಡಿದ ಆ ಪುಟ್ಟ ಹಿತ್ತಾಳೆ ಅಡ್ಡಣಿಗೆಯನ್ನು ಹಾಗೆ ಊರಿನಿಂದ ಬಂದ ಆ ಪುಟ್ಟ ಪೋರನ ಬೇಡಿಕೆಗೆ ಮಣಿದು ಅವನ ಮುಂದಿಟ್ಟಳು. ಹೇಳೀ ಕೇಳೀ ನಾನಾಗ ಸಣ್ಣವನು.. ಮನಸು ದೊಡ್ದದಿರಲುಂಟೇ..?.. ಅವನಿಗೇಕೆ ನನ್ನ ಅಡ್ದಣಿಗೆ..? ಎಂದು ಖ್ಯಾತೆ ತೆಗೆದೆ. ಅವ್ವ ಅಪ್ಪನನ್ನು ಕೂಗಿದಳು. ಅಪ್ಪನ ಹೊಡೆತಗಳ ಬಗ್ಗೆ ಚೆನ್ನಾಗಿ ಪರಿಚಯವಿದ್ದ ನಾನು ಆಗ ಮಾತ್ರ ಸುಮ್ಮನುಳಿದು, ಅವರು ಹೋದ ನಂತರ ಮತ್ತೆ ಕಿರಕಿರಿ ಶುರುಮಾಡಿದೆ. ನನ್ನ ಖರೆಖರೆ ಮುಂಡೆರಂಥ ಹಟ ನೋಡಿ ಅವ್ವ ಅಪ್ಪನನ್ನು ‘ಇಲ್ನೋಡ್ರಿ ಇವನ್ನ..’ ಅಂದದ್ದೇ ಅಪ್ಪ ಹಾಜರ್. ನನ್ನ ಎರಡೂ ಕಣ್ಣುಗಳಲ್ಲಿ ಝರಿ ಹುಟ್ಟಿಕೊಂಡದ್ದು ನೋಡಿ ಅಪ್ಪ ಅಲ್ಲೇ ಅಂಗಳದಲ್ಲಿ ಒಣಗಲೆಂದು ಹಾಕಿದ ಎರಡು ಸಜ್ಜೀ ದಂಟುಗಳನ್ನು ಕೈಗೆತ್ತಿ ಮಡಚಿ ಬಿಟ್ಟಾಗಲೇ ಕಣ್ಣ ಝರಿ ಬತ್ತಿಹೋಯಿತು. ಅಡ್ಡಣಿಗೆಯನ್ನು ನೆನೆದಾಗಲೆಲ್ಲಾ ಆ ಹಸೀ ಸಜ್ಜೀ ದಂಟು ನೆನಪಾಗುವದಿದೆ.]]>

‍ಲೇಖಕರು G

May 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

೧ ಪ್ರತಿಕ್ರಿಯೆ

  1. savitri

    ಸರ್ ಈ ಲೇಖನದ ಮೂಲಕ ತಮ್ಮ ಮನಸ್ಥಿತಿ ನನ್ನಂತಹ ಹಳ್ಳಿಗರ/ ರೈತರ ಮಕ್ಕಳಿಗೆ ಬಹಳ ಚೆನ್ನಾಗಿ ಅರ್ಥವಾಗುತ್ತದೆ… ಮನೆ ತೊರೆದು ಹೊರಗಿರುವ ನನ್ನಂತಹ ಹಳ್ಳಿ ಮಕ್ಕಳನ್ನು ಅವ್ವನ ಅಡಿಗೆ ಮನೆ ಕಾಡುತ್ತದೆ ಸರ್. ನಾನಂತೂ ಅವ್ವನ ಅಡಿಗೆ ಮನೆಯ ಹುಳು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: