ಅಣ್ಣನ ಎದೆಯಲ್ಲಿ ಕಾಳಿಂಗರಾಯರು..

ಸಂಪ್ರದಾಯವನ್ನು ಹೆಜ್ಜೆ ಹೆಜ್ಜೆಗೂ ಮುರಿದು ನಿಂತ ದಿಟ್ಟ ಜೀವಿ

mysore-anantaswamy-column1“ಕಾಳಿಂಗರಾಯರ ಪ್ರವೇಶವಾದನಂತರ ಸುಗಮ ಸಂಗೀತ ಉಗಮವಾಯಿತು” ಅಂತ ಹೇಳ್ತಿದ್ರು ಅಣ್ಣ.

ಅಣ್ಣನಿಗೆ ಚಿಕ್ಕವರಿದ್ದಾಗ ಹೆಚ್ಚಾಗಿ ಅವರ ತಾಯಿ ಹಾಡುತ್ತಿದ್ದ ದೇವರನಾಮಗಳ ಕಡೆ ಆಕರ್ಷಣೆ ಇತ್ತು.  ಅವರ ಮನೆಗೆ ಬರುತ್ತಿದ್ದ ನೆಂಟರ ಪೈಕಿ ಕೆಲವರು  ಕನ್ನಡ ಪದ್ಯಗಳನ್ನು ರಾಗವಾಗಿ ಹಾಡುತ್ತಿದ್ದರಂತೆ. ಅಣ್ಣ LS ಮುಗಿಸುವಷ್ಟರಲ್ಲಿ ಹಿಂದಿ ಸಿನೆಮಾ ಗೀತೆಗಳು ಪ್ರಸಿದ್ಧವಾಗಿದ್ದವು. ಆ ಹಾಡುಗಳನ್ನೆಲ್ಲಾ ಕಲಿತು ಕೊಳಲಲ್ಲಿ ನುಡಿಸುತ್ತಿದ್ದರು, ಆದರೆ  ಶ್ರೀ ರಾಮಚಂದ್ರ ರಾವ್  ಅವರ ಭಾವಗೀತ ಗಾಯನಕ್ಕೆ ಇನ್ನೂ ಹೆಚ್ಚು ಆಕರ್ಷಿತರಾದರು. ನಂತರ ಕಾಳಿಂಗರಾಯರ ‘ಉದಯವಾಗಲಿ..’ ಕೇಳಿದ ಮೇಲಂತೂ, “I was totally mesmerized and transformed ” ಅಂತ ಹೇಳ್ತಿದ್ದಾಗೆಲ್ಲ ಅವರ ಮುಖ  ಒಂದು ನೆನಪಿನ- nostalgiaವನ್ನು  ಪ್ರತಿಬಿಂಬಿಸುತ್ತಿತ್ತು.

ಕಾಳಿಂಗರಾಯರು ಅಣ್ಣನ ಜೀವನದ ಒಂದು ಅತಿ ಮುಖ್ಯವಾದ ತಿರುವು. ಪಾಂಡೇಶ್ವರ ಕಾಳಿಂಗರಾಯರ ಬಗ್ಗೆ ಅಣ್ಣನ ಬರಹದಲ್ಲೇ ಓದೋಣ ಬನ್ನಿ:

Tradition Breaker

ರಾಜ ಮಹಾರಾಜರ ಆಳ್ವಿಕೆಯ ದಿವಸಗಳಲ್ಲಿ, ಶಾಸ್ತ್ರೀಯ ಸಂಗೀತ ಬಿಟ್ಟರೆ ಇನ್ನ್ಯಾವ ಸಂಗೀತಕ್ಕೂ ಬೆಲೆಯೇ ಇಲ್ಲದ ಕಾಲದಲ್ಲಿ, ಒಂದು ನೂತನ ತಾರೆಯಾಗಿ ಹುಟ್ಟಿದವರು ಕಾಳಿಂಗರಾಯರು. ಸಂಪ್ರದಾಯವನ್ನು ಹೆಜ್ಜೆ ಹೆಜ್ಜೆಗೂ ಮುರಿದು ನಿಂತ ದಿಟ್ಟ ಜೀವಿ. ಈ ತಾರೆ ಮಿಂಚಲು ಶುರುವಾದ ಮೇಲೆ ಬೇರೆ ತಾರೆಗಳ ಅಧಃಪತನ ಪ್ರಾರಂಭವಾಯಿತು. ಒಂದು ನೂತನ ಯುಗವೇ ಪ್ರಾರಂಭವಾಯಿತು. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದ ನನ್ನಂಥ ಹಲವಾರು ಯುವಕರು ಶಾಸ್ತ್ರೀಯ ಸಂಗೀತಕ್ಕೆ ತರ್ಪಣೆ ನೀಡಿ ಇವರ ಹಿಂಬಾಲಕರಾದೆವು.

ಸುಂದರ ಯುವಕ, ಆಂಗ್ಲರಂತೆ ಟೈ ಧರಿಸಿ, ಸೂಟು ಬೂಟು ಹಾಕಿ, ವೇದಿಕೆಗೆ ಬಂದರೆ, ಜನರಿಗೆ ಈತ ಎಲ್ಲೊ ಗಂಧರ್ವಲೋಕದಿಂದ ಬಂದವನೋ ಎಂಬಂತಿತ್ತು, ಹಾಡಲು ಶುರು ಮಾಡಿದರೆ ಜನ ಹುಚ್ಚು ಹುಚ್ಚಾಗಿ ಕುಣಿದು ಕುಪ್ಪಳಿಸುತ್ತಿದ್ದರು. ಆ ಕಾಲದ ಮೈಕಲ್ ಜ್ಯಾಕ್ಸನ್ ಅನ್ನಬಹುದು.

ಬಾಲ್ಯದಲ್ಲೆ ಕರ್ನಾಟಕ ಸಂಗೀತ ಪಾಠ ನಂತರ ಹಿಂದೂಸ್ತಾನಿ ಸಂಗೀತ ಪಾಠ, ಎರಡರಲ್ಲೂ ಸಾಕಷ್ಟು ವಿದ್ವತ್ ಪಡೆದು ನಾಟಕದ ಕಂಪನಿಯಲ್ಲಿ ಪಾತ್ರ ಮಾಡಿಕೊಂಡೇ ಬೆಳೆದ ಪಾಂಡೇಶ್ವರ ಕಾಳಿಂಗರಾಯರಿಗೆ ರಂಗ ಸಂಗೀತದ ಅನುಭವವೂ ಆಗಿತ್ತು.

ಕಾಳಿಂಗರಾಯರ ಜನ್ಮ ದಿನ, ಅವರ ನಕ್ಷತ್ರ, ಅವರ ಬಾಲ್ಯ ದಿವಸಗಳು, ಅವರು ಹುಟ್ಟಿದ ಊರು, ಅವರ ತಂದೆ ತಾಯಿ, ಅವರ ವಿದ್ಯಾರ್ಹತೆ, ಅವರ ಸಂಗೀತದ ಹಿನ್ನೆಲೆ, ಅವರು ನಡೆಸುತ್ತಿದ್ದ ಜೀವನ, ಇವೆಲ್ಲ, ಅವರನ್ನು ನೋಡಿದ ಎಷ್ಟೋ ಮಂದಿಗೆ ತಿಳಿದಿಲ್ಲ. ಮಂದಿಗೇನು, ಅವರ ನಿಕಟ ಸಂಪರ್ಕಿಯಾದ ನನಗೂ ಮೊನ್ನೆ ಮೊನ್ನೆಯವರೆಗೂ ತಿಳಿದಿರಲಿಲ್ಲ. ರಾಯರನ್ನು ನೋಡಿದವರಿಗೆ, ಅವರ ಸಂಗೀತವನ್ನು ಮೆಚ್ಚಿಕೊಂಡವರಿಗೆ, ಅವರ ಹಾಡುಗಳನ್ನು ಕೇಳುವವರಿಗೆ, ಇದ್ಯಾವುದೂ ಬೇಕಿರಲಿಲ್ಲ. ಕಾಳಿಂಗರಾಯರಿಗೂ ಅಷ್ಟೇ, ನಿನ್ನೆ ಎಂಬ ಪದ ಮರೆತೇ ಹೋಗಿತ್ತು. ನಾಳೆಯ ಬಗ್ಗೆ ಅವರಿಗೆ ಚಿಂತೆಯೇ ಇರಲಿಲ್ಲ.

ಕರ್ನಾಟಕ ಸಂಗೀತ ಅಕ್ಯಾಡಮಿ  ಅಧ್ಯಕ್ಷರು ಹಾಗು ಕರ್ನಾಟಕದ ಸುಪ್ರಸಿ ದ್ಧ ಹಿಂದೂಸ್ತಾನಿ ವಿದ್ವಾಂಸರು ಆದ ಪಂಡಿತ್ ಶ್ರೀ ಶೇಷಾದ್ರಿ ಗವಾಯ್ ಅವರ ಹೃದಯಾಳದಿಂದ ಬಂದ ಮಾತು ” ನನ್ನ ಅಭಿಪ್ರಾಯದಲ್ಲಿ, ಕಾಳಿಂಗರಾಯರು ಏನಾದರೂ ಹಿಂದುಸ್ತಾನಿ ಸಂಗೀತದಲ್ಲೇ ಉಳಿದಿದ್ದರೆ ಅವರು ಇಂದು ಭಾರತದಲ್ಲೇ ಹಿರಿಯ ಗಾಯಕರಾಗುತ್ತಿದ್ದರು.”
ಅಂದಮೇಲೆ ರಾಯರಿಗೆ ಉತ್ತರಾದಿ ಸಂಗೀತದಲ್ಲಿ ಎಷ್ಟು ಅರ್ಹತೆ ಇತ್ತು ಎಂಬುದು ವ್ಯಕ್ತವಾಗುತ್ತದೆ. ಪಂಡಿತ್ ಶ್ರೀ ಡಿ. ಬಿ. ಹರೀಂದ್ರ ಅವರ ಮಾತಿನಲ್ಲಿ “ರಾಯರು ಉತ್ತರಾದಿಯಲ್ಲಿ ಬಹಳ ಶ್ರೇಷ್ಠ ವಿದ್ವಾಂಸರು. ಅವರೇನಾದರು ಅದೇ ದಾರಿಯಲ್ಲಿ ಮುನ್ನುಗಿದ್ದರೆ ಅವರನ್ನು ಮೀರಿಸುವ ಗಾಯಕ ಇನ್ನೊಬ್ಬನಿರುತ್ತಿರಲಿಲ್ಲ.

ಕರ್ನಾಟಕ ಸಂಗೀತ ವಿದ್ವಾಂಸರ ಅಭಿಪ್ರಾಯದಂತೆ, ರಾಯರು ಕರ್ನಾಟಕ ಸಂಗೀತದಲ್ಲೂ ವಿದ್ವಾಂಸರು ಎಂಬುದು. ಇವರನ್ನು ಕೆಣಕಿದವರು ಕೆಲವರು ಅದರ ಏಟಿನ ಅನುಭವ ಪಡೆದಿದ್ದಾರೆ.

%e0%b2%95%e0%b2%be%e0%b2%b3%e0%b2%bf%e0%b2%82%e0%b2%97%e0%b2%b0%e0%b2%be%e0%b2%af%e0%b2%b0%e0%b3%81ಕಾಳಿಂಗರಾಯರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಜಾನಪದ ಗೀತೆಗಳನ್ನೇ ಹಾಡುತ್ತಿದ್ದರು. ಮದುವೆ ಅಥವಾ ವ್ಯವಸ್ಥಿತ ಕಾರ್ಯಕ್ರಮಗಳಲ್ಲಿ ಒಂದೆರೆಡು ಭಾವಗೀತೆಗಳು, ವಚನಗಳು ಮತ್ತು ರತ್ನನ ಪದಗಳನ್ನು ಹಾಡುತ್ತಿದ್ದರು. ಒಮ್ಮೆ ನಾನು ಅವರನ್ನು “ನೀವೇಕೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಜಾನಪದವನ್ನೇ ಹಾಡುತ್ತೀರಿ, ಭಾವಗೀತೆಯನ್ನು ಅಷ್ಟಾಗಿ ಹಾಡುವುದಿಲ್ಲ” ಎಂದು ಕೇಳಿದಾಗ, ಅದಕ್ಕುತ್ತರವಾಗಿ “ಜಾನಪದದ ಲಯ ಕೊಡೊ ಮಜ ಭಾವಗೀತೆಯಲ್ಲಿ ಬರುವುದು ಕಷ್ಟ. ಅದೇನಿದ್ದರೂ ಸಾಹಿತಿ-ಪಂಡಿತರ ಮುಂದೆ ಹಾಡಲಿಕ್ಕೆ ಸರಿ” ಎಂದಿದ್ದರು.

ಇನ್ನೊಮ್ಮೆ “ನಿಮಗೇಕೆ ಜಾನಪದದ ಮೇಲೆ ಒಲವು” ಎಂದು ಕೇಳಿದಾಗ ” ಜಾನಪದ ಏನು ಅರಿಯದ ಶುದ್ಧ ಮನಸ್ಸಿನ, ಸತ್ಯ ಪ್ರೇಮಿಯ ಹೃದಯವಿದ್ದಂತೆ. ಇದರಲ್ಲಿ ವಂಚನೆ, ಮೋಸ, ಕಪಟ ಯಾವುದೂ ಇಲ್ಲ, ಪತಿವ್ರತೆಯಷ್ಟು ಪವಿತ್ರವಾದುದು. ಅದರಿಂದಲೇ ನನಗೆ ಜಾನಪದದ ಮೇಲೆ ಮೋಹ. ಬೇರೆಲ್ಲ ಸಂಗೀತ ನೋಡಿದಾಗ, ನಾ ಮಾಡಿದ ಭಾವಗೀತೆಯಲ್ಲಿ, ನೀನು ತಪ್ಪು ಕಂಡುಹಿಡಿಯಬಲ್ಲೆ, ವಿಮರ್ಶಿಸಬಲ್ಲೆ. ಆದರೆ ಜಾನಪದಕ್ಕೆ ವಿಮರ್ಶೆ ಎಲ್ಲಿದೆ. Monotony is the beauty of Folk , ಹೆಚ್ಚು ಆಡಂಬರವಿಲ್ಲದ ಲಯ ಮಾಧುರ್ಯದ ಜಾನಪದವೇ ನನ್ನ ಉಸಿರು” ಎಂದರು. ಆದರೂ ಕಾಳಿಂಗರಾಯರು, ಅ. ನ. ಕೃ. ಅವರ ಬಲವಂತಕ್ಕೆ ಕೆಲವು ಭಾವಗೀತೆಗಳ ರಾಗ ಸಂಯೋಜಿಸಿದ್ದರು. ಸುಗಮ ಸಂಗೀತದ ಆದಿಪುರುಷನಾಗಿ ಅದರ ಹುಟ್ಟಿಗೆ ಕಾರಣರಾದವರು, ಪಿ. ಕಾಳಿಂಗರಾಯರು.

ಇಳಿದು ಬಾ ತಾಯಿ

‘ಅಬ್ಬಾ ಆ ಹುಡುಗಿ’ ಚಿತ್ರಕ್ಕಾಗಿ ಪಿ. ಕಾಳಿಂಗ ರಾಯರು ಸಂಗೀತ ನಿರ್ದೇಶಕರಾದರು. ಇಷ್ಟು ಹೊತ್ತಿಗೆ ಮದ್ರಾಸಿನಲ್ಲಿ ನಾನು ಕೊಳಲು, ಮ್ಯಾಂಡೊಲಿನ್ ವಾದಕನಾಗಿ ಹಲವಾರು ಕನ್ನಡ ಚಿತ್ರದಲ್ಲಿ ಸೇವೆ ಸಲ್ಲಿಸಿದ್ದೆ. ಕಾಳಿಂಗರಾಯರು ವಾದ್ಯಗಾರರನ್ನ ಬರಹೇಳಿದಾಗ ನನಗೂ ಆಹ್ವಾನ ಬಂತು. ಅದೇ ಪ್ರಥಮ ಬಾರಿ ನಾನು ಅವರನ್ನ ಭೇಟಿ ಮಾಡಿದ್ದು. ರಾಗ ಸಂಯೋಜನೆಯ ಸಮಯದಲ್ಲಿ ನಾನು ಅಲ್ಲೇ ಇರುತ್ತಿದ್ದೆ. ಒಮ್ಮೆ ರಾಯರು ಬಿಡುವಾದಾಗ, ನಾನು ಅವರನ್ನು ಮಾತನಾಡಿಸಿ, ನಾನು ರಾಗ ಸಂಯೋಜಿಸಿರುವ ಭಾವ ಗೀತೆಗಳನ್ನು ಕೇಳಿಸಬೇಕೆಂದು ಆಸೆ ಪಟ್ಟೆ. ರಾಯರು ಕೂಡಲೇ ಒಪ್ಪಿದರು. ನಾನು ಹಾಡಿದ ಕುವೆಂಪು, ಬೇಂದ್ರೆ, ರತ್ನನ ಪದಗಳು, ಎಲ್ಲ ಕೇಳಿ ರಾಯರು, ಕೂತಿದ್ದ ಕುರ್ಚಿ ಬಿಟ್ಟು ನನ್ನ ಪಕ್ಕಕ್ಕೆ ಸರಿದು, ನನ್ನ ಬೆನ್ನಮೇಲೆ ಕೈಯಾಡಿಸಿ, ಮತ್ತೊಮ್ಮೆ ಇಳಿದು ಬಾ ತಾಯಿ ಹಾಡುವಂತೆ ಕೇಳಿದರು. ರಾಯರು ಬಹಳ ಸಂತೋಷ ಪಟ್ಟು ತಾವು ಅದೇ ಧಾಟಿಯಲ್ಲಿ ಹಾಡುವುದಾಗಿ ಹೇಳಿದರು. ಅಂದಿನಿಂದ ನಾವಿಬ್ಬರು ತೀರ ಹತ್ತಿರದ ಬಂಧುಗಳಾದೆವು.

50/50

ಒಮ್ಮೆ ನಾನು ರಾಯರು ಇಬ್ಬರೂ ಮದ್ರಾಸಿನಿಂದ ಮೈಸೂರಿಗೆ ಬಂದು ತಲುಪಿದೆವು. ಸುಮಾರು ಸಂಜೆ 5.30 ಆಗಿರಬೇಕು. ಪ್ರಯಾಣ ಮಾಡಿದ್ದ ಆಯಾಸ ಇಬ್ಬರಿಗೂ ಇತ್ತು. ಮನೆ ತಲುಪಿದಾಗ ಮನೆಯಲ್ಲಿ ಸೋಹನ್, ಮೋಹನ್ ಇಬ್ಬರೂ ಇರಲಿಲ್ಲ. ಮನೆಯಲ್ಲೇ ಇದ್ದ ಮತ್ತೊಬ್ಬರು ರಾಯರಿಗೆ ಒಂದು ಕಾಗದ ಕೊಟ್ಟರು. ಅದರಲ್ಲಿ ಇಂದು ಸಂಜೆ ನಿಮ್ಮ ಕಾರ್ಯಕ್ರಮ ಇಂಥ ಜಾಗದಲ್ಲಿ ಏರ್ಪಡಿಸಲಾಗಿದೆ, ನೀವು ಹೋಗಿ ಅಲ್ಲಿ ಹಾಡುವುದು ಎಂದು ಬರೆದಿತ್ತು. ಅದು ಮದುವೆ ಮನೆಯ ಕಾರ್ಯಕ್ರಮ. ರಾಯರಿಗೆ ಹುಚ್ಚುಹಿಡಿದಂತಾಯಿತು. ವಾದ್ಯಗಾರರಿಗೆ ಹೇಳಿಲ್ಲ, ಸೋಹನ್, ಮೋಹನ್ ಬೇರೆ ಇಲ್ಲ, ಹೇಗೆ ಈ ಕಾರ್ಯಕ್ರಮ ಮಾಡುವುದು? ರಾಯರಿಗೆ ದಿಕ್ಕೇ ತೋಚದಂತಾಯಿತು. “ಏನಯ್ಯ ಮಾಡೋದು? ಹೇಗೆ ಇದನ್ನ ನಿಭಾಯಿಸೋದು?” ಅಂತೆಲ್ಲಾ ತಲೆ ಕೆದರಿಕೊಂಡರು.

mysore-anantaswamy-by-on-kalingaraoನಾನಾಗ ಅವರಿಗೆ ಒಂದು ಸಲಹೆ ಕೊಟ್ಟೆ, ” ಸಾರ್ ನಾನು ಮನೆಗೆ ಹೋಗಿ ಹಾರ್ಮೋನಿಯಂ ಮತ್ತು ತಬಲ ತರುತ್ತೇನೆ. ನೀವು ಹಾರ್ಮೋನಿಯಂ ನುಡಿಸಿಕೊಂಡು ಹಾಡಿ. ನಾನು ತಬಲದಲ್ಲಿ ಬರೇ ಠೇಕಾ ಕೊಟ್ಟು ಮ್ಯಾನೇಜ್ ಮಾಡ್ತೇನೆ” ಎಂದು.  ರಾಯರು ಒಪ್ಪಿದರು. ಒಂದು ಟಾಂಗಾ ಮಾಡಿಕೊಂಡು ನಮ್ಮ ಮನೆಗೆ ಹೋಗಿ ಅರ್ಜೆಂಟ್ ಅರ್ಜೆಂಟಾಗಿ ರೆಡಿಯಾಗಿ, ಇಬ್ಬರೂ ಮದುವೆ ಮನೆಗೆ ಹೋದೆವು. ನಾವಿಬ್ಬರೂ ಮದುವೆ ಮನೆಗೆ ಕಾಲಿಡುತ್ತಿದ್ದಂತೆ ನಮ್ಮನ್ನು ಸ್ವಾಗತಿಸಲು ಒಬ್ಬ ವ್ಯಕ್ತಿ ಬಂದರು. ನಾವಿಬ್ಬರೂ ಒಂದು ಕಡೆ ಕುಳಿತೆವು. ಆ ವ್ಯಕ್ತಿ, “ರಾಯರೇ, ನಿಮ್ಮ ತಂಡದವರು ಬರಲು ಇನ್ನೂ ವೇಳೆ ಆಗುತ್ತದೆಯೇ?” ಎಂದಾಗಲೇ ರಾಯರಿಗೆ ಮುಜುಗರ. “ಇಲ್ಲ, ಇವತ್ತು singles match” ಎಂದರು. ಆ ವ್ಯಕ್ತಿಗೆ ಅರ್ಥವಾಗಲಿಲ್ಲ. “ನಿಮ್ಮ ಜೊತೆ ಹಾಡುವ ಹೆಂಗಸರು ಏಕೆ ಬರಲಿಲ್ಲ?” ಮತ್ತೊಂದು ಪ್ರಶ್ನೆ. ರಾಯರು, “ನೀವು ಯಾರ ಕಾರ್ಯಕ್ರಮ ಇಂದು ಇಟ್ಟುಕೊಂಡಿದ್ದೀರಿ?” ಎಂದು ಕೇಳಿದರು. “ನಿಮ್ಮದೇ ” ಎಂಬ ಉತ್ತರ. ” ಹಾಗಾದ್ರೆ, ನಾನು ಬಂದಿದ್ದೇನಲ್ಲ, ಕಾರ್ಯಕ್ರಮ ಪ್ರಾರಂಭಿಸಲೇ? ” ಎಂದು ಸ್ವಲ್ಪ ಒರಟಾಗಿಯೇ ಉತ್ತರಿಸಿದರು. ಅಷ್ಟರಲ್ಲೇ ಇನ್ನ್ಯಾರೋ, (ಮನೆ ಯಜಮಾನರೆ ಇರಬೇಕು) ಬಂದು, “ಪರ್ವಾಗಿಲ್ಲ ರಾಯ್ರೆ, ಬನ್ನಿ ಹಾಡುವಿರಂತೆ” ಎಂದು ಸಮಾಧಾನ ಮಾಡಿದರು.

ಕಾರ್ಯಕ್ರಮ “ಪರಚಿಂತೆ ಏಕೆ ಅಯ್ಯ” ಎಂದು ಬಸವಣ್ಣನವರ ವಚನದಿಂದ ಪ್ರಾರಂಭವಾಯಿತು. ಕರ್ನಾಟಕಿ , ಹಿಂದೂಸ್ತಾನಿ, ಜಾನಪದ ಮತ್ತು ಪಾಶ್ಚ್ಯಾತ ಶೈಲಿಯಲ್ಲಿ ಸುಮಾರು ಒಂದು ಗಂಟೆಗೂ ಮೀರಿ ಹಾಡಿದರು. ಇಡೀ ಮದುವೆಯ ಮನೆಯಲ್ಲಿ ಸಡಗರ ಅಡಗಿ ಎಲ್ಲರೂ ನಿಶಬ್ಧವಾಗಿ ಕಕ್ಕಾಬಿಕ್ಕಿಯಾಗಿ ಕುಳಿತ್ತಿದ್ದರು.

ಮನೆ ಯಜಮಾನರು ಮೆತ್ತಗೆ ನನ್ನ ಬಳಿ ಬಂದು ಕಿವಿಯಲ್ಲಿ ” ಸ್ವಲ್ಪ ಅವರನ್ನು ಸಮಾಧಾನ ಪಡಿಸಯ್ಯ” ಎಂದರು. ಕೂಡಲೇ ಅವರಿಗೆ ಹಾಲು ತರಲು ಹೇಳಿ ರಾಯರಿಗೆ ವಿರಾಮ ತೆಗೆದುಕೊಳ್ಳುವಂತೆ ಹೇಳಿದೆ. ಆದರೆ ಅವರು ತಯಾರಿರಲಿಲ್ಲ. ಕಡೆಗೆ ನಾನು ಅವರಿಗೆ ಹೀಗೆ ಹೇಳಿದೆ “ರಾಯರೇ,  ಪರಚಿಂತೆ ನಿಮಗಿಲ್ಲ. ನಾನೇನು ವೃತ್ತಿ ತಬಲಾ ನುಡಿಸುವವನೇ? ನನ್ನ ಕೈಯೆಲ್ಲ ಬಿದ್ದು ಹೋಗಿದೆ. ಬರೀ ಠೇಕಾ ಹಿಡೀತೀನಿ ಅಂದೇ ಅಷ್ಟೇ. ನಿಮಗೆ ಸಾಥಿ ಕೊಡ್ತೀನಿ ಅಂತ ಹೇಳಲಿಲ್ಲ. ಅಟ್ ಲೀಸ್ಟ್ ನನ್ನ ಚಿಂತೆಯಾದರೂ ನಿಮಗೆ ಇರಬೇಕು” ಎಂದದ್ದೇ , ರಾಯರು ಗೊಳ್ಳೆಂದು ನಕ್ಕರು. ಅಷ್ಟೇ ಅಲ್ಲ, ಬಿದ್ದು ಬಿದ್ದು ನಕ್ಕರು. ಅವರು ಅಷ್ಟು ನಕ್ಕಿದು ನಾನು ನೋಡಿರಲಿಲ್ಲ, ಅವರ ಕೋಪವನ್ನೂ ನೋಡಿರಲಿಲ್ಲ. ಆ ಕಾರ್ಯಕ್ರಮದ ನಂತರ ಬಂದ ದುಡ್ಡಲ್ಲಿ ರಾಯರು  ” ಸಿಂಗಲ್ಸ್ ಮ್ಯಾಚ್ ಆದ್ರಿಂದ ಇಬ್ಬರಿಗೂ 50/50″ ಎಂದು ಹಂಚಿದರು.
kalingaraayaru

ವಾಪಸ್ಸು ಕರ್ನಾಟಕಕ್ಕೆ

ಕಾಳಿಂಗರಾಯರು ನನ್ನನ್ನು ಶ್ರೀ. ಜಿ. ಕೆ. ವೆಂಕಟೇಶ್ ಅವರ ಹತ್ತಿರ ಬಿಟ್ಟು ಅವರಲ್ಲಿ ರಾಗ ಸಂಯೋಜನೆ, ಹಿನ್ನೆಲೆ ಸಂಗೀತ ಎಲ್ಲವನ್ನು ಕಲಿ ಎಂದು ಹೇಳಿದರು. ಶ್ರೀ. ಜಿ. ಕೆ. ವೆಂಕಟೇಶ್ ಅವರ ಹತ್ತಿರ ಎರಡು ವರ್ಷ ಪಳಗಿದೆ. ಆದರೂ ನನ್ನ ಮನಸೆಲ್ಲಾ ಭಾವಗೀತೆಗಳ ಕಡೆಗೆ ಒಲಿದಿತ್ತು. ಅಷ್ಟರ ಹೊತ್ತಿಗೆ ಬಂದ ಕಾಳಿಂಗರಾಯರು, ಅವರ ಒಂದು  ಧ್ವನಿ ಮುದ್ರಣಕ್ಕೆ ನನ್ನನ್ನು ಕರೆದುಕೊಂಡು ಹೋದರು.

Recording ಮುಗಿದ ಮರುದಿವಸ ಶ್ರೀ. ಜಿ. ಕೆ. ವೆಂಕಟೇಶ್ ಅವರ ಹತ್ತಿರ ನಾವಿಬ್ಬರೂ ಹೋದೆವು. ಕಾಳಿಂಗರಾಯರು ನನ್ನನು ಮೈಸೂರಿಗೆ ವಾಪಸ್ಸು ಕರೆದುಕೊಂಡು ಹೋಗುವುದಾಗಿ ಶ್ರೀ. ಜಿ. ಕೆ. ವೆಂಕಟೇಶ್ ಅವರನ್ನು ಒಪ್ಪಿಸಿದರು.  ಅಲ್ಲಿಂದ ಮೈಸೂರಿಗೆ ಬಂದ ಮೇಲೆ ಕಾಳಿಂಗರಾಯರ ಅನೇಕ ಕಚೇರಿಗಳಲ್ಲಿ ನುಡಿಸಿದೆ.

ನಂತರ ನಾನೇ ಸ್ವತಃ ಒಂದು ತಂಡ ಕಟ್ಟಿ ಮೈಸೂರಿನಲ್ಲಿ ಕಾರ್ಯಕ್ರಮ ಕೊಡಲು ಪ್ರಾರಂಭಿಸಿದೆ. ಕಾಳಿಂಗರಾಯರು ಒಮ್ಮೆ ನಾನು ಹಾಡುತ್ತಿದ್ದ ಚಪ್ಪರಕ್ಕೆ ಬಂದು ನನ್ನ ಬೆನ್ನು ತಟ್ಟಿ ಆಶೀರ್ವಾದಿಸಿದರು. ಅಂದಿನಿಂದ ನಾನು ರಾಯರ ರಾಯಭಾರಿಯಾಗಿ ಬಿಡುವಿಲ್ಲದ ಸೇವೆ ಭಾವಗೀತ ಗಾಯನಕ್ಕೆ ಸಲ್ಲಿಸಿದೆ

‍ಲೇಖಕರು admin

December 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೇರೀನ ಮೈಮೇನಿನ ಗಿಣಿಯಲ್ಲ ಗರ‌್ ತೇರೆ|ಇದು ನಾ ಬರ್ದ ಒಂದು ಕೈಕುಸುಲು

ತೇರೀನ ಮೈಮೇನಿನ ಗಿಣಿಯಲ್ಲ ಗರ‌್ ತೇರೆ|ಇದು ನಾ ಬರ್ದ ಒಂದು ಕೈಕುಸುಲು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಗಿಫ್ಟ್’ ಕೊಡ್ತಾರೆ ಹುಷಾರ್..!!

‘ಗಿಫ್ಟ್’ ಕೊಡ್ತಾರೆ ಹುಷಾರ್..!!

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This