ಅತ್ತಾರೆ ಅತ್ತು ಬಿಡು ಹೊನಲು ಬರಲಿ…

 door_number1422.jpg

“ಡೋರ್ ನಂ 142”

ಬಹುರೂಪಿ

“ಇಲ್ಲಾ, ನಾನು ಅಳ್ಲಿಲ್ಲ”
“ನಾನು ನೋಡ್ದೆ ನೀನು ಅತ್ತೆ”
“ಅಳಲಿಲ್ಲ ಅಂದ್ರೆ ಅಳ್ಲಿಲ್ಲ…”
“ಗಾಡ್ ಪ್ರಾಮಿಸ್ ಖಂಡಿತಾ ಅಳಲಿಲ್ಲ…”

ಇಬ್ಬರು ಪುಟಾಣಿಗಳ ನಡುವೆ ವಾದ ವಿವಾದ ನಡೀತಿತ್ತು. “ತಾರೆ ಜಮೀನ್ ಪರ್” ಚಿತ್ರ ಚೆನ್ನಾಗಿದೆ ನೋಡ್ಲೇಬೇಕು ಅಂದಿದ್ರು. ಫಿಲಂ ಮುಗಿದ ಮೇಲೆ ಥಿಯೇಟರ್ ನಿಂದ ಆಚೆ ಹೆಜ್ಜೆ ಹಾಕಿದ್ವಿ. ಆಗ ಶುರುವಾಯ್ತು ಈ ಆರ್ಗ್ಯುಮೆಂಟ್.

“ತಾರೆ ಜಮೀನ್ ಪರ್” ನೋಡುವವರನ್ನೆಲ್ಲಾ ಭಾವನೆಗಳ ಲೋಕದಲ್ಲಿ ಎತ್ತಿ ಎತ್ತಿ ಹಾಕಿತ್ತು. ಅಲ್ಲೊಂದು ಸಲ, ಇಲ್ಲೊಂದು ಸಲ ನಾವು ಕಳಕೊಂಡ ಬಾಲ್ಯಾನ ನೆನಪಿಸಿಬಿಟ್ಟಿತು. ಯಾಕೆ ನಮ್ಮಪ್ಪ ಅಮ್ಮ ನಮ್ಮನ್ನ ಅರ್ಥಾನೇ ಮಾಡ್ಕೊಳ್ಳಲ್ಲ, ಸುಮ್ನೆ ಕಿರುಚಾಡ್ತಾರೆ ಅನ್ನಿಸ್ತಿತ್ತಲ್ಲ, ಅದಕ್ಕೆ ಒಂದು ಸ್ವಲ್ಪನಾದ್ರೂ ಉತ್ತರ ಕೊಟ್ಟಿತ್ತು.

p12big.gif

ಅಷ್ಟೇ ಅಲ್ಲ, ಮಕ್ಕಳಾಗಿದ್ದ ನಾವು ಅಪ್ಪ ಅಮ್ಮ ಆಗಿ ಬದಲಾದೆವಲ್ಲಾ ಈಗ ನಾವು ಹೇಗಾಡ್ತೀವಿ, ಅದನ್ನೂ ನಮ್ಮ ಮುಖಕ್ಕೆ ಕನ್ನಡಿ ಹಿಡಿದು ಈ ಫಿಲಂ ತೋರಿಸಿತ್ತು. ನಾವು ಬಾಲ್ಯಾನೂ ಪಡೀಲಿಲ್ಲ, ಅತ್ಲಾ ಕಡೆ ಮಕ್ಕಳಿಗೂ ಕೊಡ್ತಿಲ್ಲ ಅನಿಸಿತ್ತು.

ನನ್ನ ತಲೆ ಒಳಗೆ ಇದೆಲ್ಲಾ ಸೂರ್ಯನ ಸುತ್ತ ರೆಗ್ಯುಲರ್ ಆಗಿ ಸುತ್ತೋ ಗ್ರಹಗಳ ಥರಾ ಸುತ್ತುತ್ತಾ ಇರೋವಾಗ್ಲೇ ಮಕ್ಕಳ ಈ ವಾದ ಕೇಳಿಸಿದ್ದು. ನಾನು ಫಿಲಂ ನೋಡ್ತಾ ಇದ್ದಾಗ್ಲೂ ಗೊತ್ತಿಲ್ಲದೆ ಕಣ್ಣಂಚು ಒದ್ದೆಯಾಗಿ ಹೋಗಿತ್ತು. ಒಂದೆರಡು ಸಲ ಅಂತೂ ಇನ್ನೂ ತಡಿಲಾರೆ ಅಂತ ಬಿಕ್ಕಳಿಸಿ ಅಳೋ ಥರ ಆಗಿತ್ತು. “ತಾರೆ ಜಮೀನ್ ಪರ್” ನಮ್ಮ ಮನಸ್ಸಿಗೆ ಕೈ ಹಾಕುತ್ತೆ. ಹಾಗಾಗೀನೆ ಬಿಕ್ಕುಗಳು ಹುಟ್ಟೋದಕ್ಕೆ ಯಾವ ಅಡೆತಡೇನೂ ಇರ್ಲಿಲ್ಲ.

ಮಕ್ಕಳು ಮಾತ್ರ ಇನ್ನೂ ಗುದ್ದಾಡ್ತಾನೇ ಇದ್ರು. ನಾನು ಅಳ್ಲಿಲ್ಲ, ನಾನು ಅಳ್ಲಿಲ್ಲ ಅಂತ ತಮಗೆ ತಾವೇ ನಂಬೋದಿಕ್ಕೆ, ನಂಬಿಸೋದಿಕ್ಕೆ ಒದ್ದಾಡ್ತಿದ್ರು. ಹೌದಲ್ಲ, ಯಾಕೆ ಹೀಗಾಗುತ್ತೆ? ಅತ್ರೆ ನಮ್ಮ ಸ್ಟಾಂಡರ್ಡ್ ಕಡಿಮೆ ಆಗಿಬಿಡುತ್ತಾ ಅಥವಾ ಅತ್ರೆ ನಾವು ಹುಡುಗೀರ ಥರ ಅಂತ ಎಲ್ಲಾ ಅಂದುಕೊಂಡು ಬಿಡ್ತಾರಾ? ನಗು ಮಾತ್ರ ಎಲ್ಲೆಂದರೆ ಅಲ್ಲಿ ಯಾರ ಮುಂದೆ ಬೇಕಾದ್ರೂ, ಪಕ್ಕೆ ಹಿಡಕೊಂಡು ನಗ್ತೀವಿ. ಆದ್ರೆ ಅಳು ಯಾಕೆ ಮುಚ್ಚಿಟ್ಟುಕೊಳ್ತೀವಿ?

ಈ ಪ್ರಶ್ನೆ ನನಗೂ ಹುಟ್ಟಿದೆ. ಬರೀ ಮಕ್ಕಳಿಗೆ ಅಲ್ಲ, ಎಲ್ಲೇ ಆಗಲಿ ನನಗೂ ಅಳು ಬರುತ್ತೆ. ಯಾವುದೋ ಕಥೆ ಓದುವಾಗ, ಧಾರಾವಾಹಿ ನೋಡುವಾಗ, ಫಿಲಂನಲ್ಲಿ ಆದ್ರೆ ಎಲ್ಲರ ಮುಂದೆ ಕಾನ್ಫಿಡೆಂಟ್ ಆಗಿ ನಗ್ತೀವಲ್ಲ ಹಾಗಲ್ಲ.. ನಾವು ಅಳ್ತೀರೋದು ಯಾರಿಗಾದ್ರೂ ಗೊತ್ತಾಗಿಬಿಡುತ್ತೇನೊ, ನೋಡಿಬಿಟ್ರೇನೋ ಅಂತ ಅಕ್ಕಪಕ್ಕ ನೋಡ್ತೀವಿ. ಯಾರಿಗೂ ಗೊತ್ತಿಲ್ಲದ ಹಾಗೆ ಕಣ್ಣು ಒರೆಸಿಕೊಂಡು ಬಿಡ್ತೀವಿ.

ಯಾಕೆ ಹೀಗೆ? ನಾನು ಅತ್ತ ರಾತ್ರಿಗಳಿಗೆ, ಹಗಲುಗಳಿಗೆ ಲೆಕ್ಕವೇ ಇಲ್ಲ. ಕಾದಂಬರಿಗಳಲ್ಲಿ ಬರುತ್ತಲ್ಲ, ಅವಳು ಅತ್ತು ಅತ್ತು ದಿಂಬು ತೋಯಿಸಿದಳು ಅಂತ ಹಾಗೇ ನಾನೂ ಸುಮಾರು ದಿಂಬು ತೋಯ್ಸಿದೀನಿ. ನಾನು ಒಂಟಿಯಾಗಿ ಇದೀನಲ್ಲ. ಹಾಗಾಗಿ ನನಗೆ ಹೇಳೋರಿಲ್ಲ ಕೇಳೋರಿಲ್ಲ, ಅಳ್ತಿದೀಯಾ ಅಂತ ನೋಡೋರಿಲ್ಲ. ಯಾಕೆ ಅತ್ತೆ ಅಂತಾ ಕೇಳೋರಿಲ್ಲ. ಹಾಗಾಗಿ ನನಗೆ ಬೇಕಾದ ಹಾಗೆ ಅತ್ತು ಹಗುರಾಗ್ತೀನಿ.

ನಾನು ಅತ್ತಿದ್ದು, ಬಿಕ್ಕಿ, ಬಿಕ್ಕಿ ಅತ್ತಿದ್ದು ಯಾವಾಗ ಅಂತ ಜ್ಞಾಪಿಸಿಕೊಳ್ಳೋಕೆ ಪ್ರಯತ್ನ ಪಟ್ಟೆ.

ಅಕ್ಕನ ಮದುವೆ ನಡೀತಿತ್ತು. ನಮ್ಮ ಮನೆಯ ಮೊದಲ ಮದುವೆ. ಏನೇನೋ ನೂರೆಂಟು ಸಮಸ್ಯೆಗಳ ಮಧ್ಯೆ ಬೆಳೆದು ಬಂದಿದ್ವಿ. ಇಷ್ಟೆಲ್ಲ ಸಮಸ್ಯೆ ಇತ್ತಲ್ಲ, ಹಾಗಾಗೀನೆ ಬಹುಶಃ ಬೇರೆ ಮನೆಯವರಿಗಿಂತ ಹೆಚ್ಚಾಗಿ ಕ್ಲೋಸ್ ನಿಟ್ ಆಗಿದ್ವಿ. ಅಂತಹದರಲ್ಲಿ ಅಕ್ಕ ಇನ್ನು ಮುಂದೆ ನಮ್ಮ ಮನೇಲಿರೊಲ್ಲ ಅನ್ನೋದೇ ಶಾಕ್ ಕೊಟ್ಟುಬಿಟ್ಟಿತ್ತು. ಒಳಗಿನಿಂದ ಇದು ಮತ್ತೆ ಮತ್ತೆ ಒದೀತಿತ್ತು. ಮದುವೆ ಮನೆಯಿಂದ ಅಕ್ಕಿ ತರಬೇಕು ಅಂತ ನಮ್ಮನೆಗೆ ಬಂದಿದ್ದೆ. ಅಕ್ಕಿ ಅಳೀತಾನೆ ಅಳು ಉಕ್ಕಿ ಬಂದ್ಬಿಡ್ತು. ಜೋರು ಅಳೋದಿಕ್ಕೆ ಶುರು ಮಾಡಿದೆ. ಯಾವ ಮಾಯದಲ್ಲಿ ಅಮ್ಮ ಒಳಗೆ ಬಂದ್ರೋ… ನನ್ನ ನೋಡಿ ಅವರೂ ಕಣ್ಣೀರಾಗಿ ಹೋದ್ರು.

ನನ್ನ ಮದುವೆ ಅಂತಾ ಮದುವೆ ಆಯ್ತಲ್ವಾ, ಒಂದು ಪುಟ್ಟ ಮನೆ ಇರ್ಲಿ ಅನಿಸ್ತು. ಬೇರೆ ಮನೆ ಇರ್ಲಿ ಅನ್ನೋದಕ್ಕಿಂತಾ ಹಾಗೆ ಹೋಗ್ಲೇಬೇಕಾದ ಪರಿಸ್ಥಿತಿ ಇತ್ತು. ಕಣ್ಣು ಬಿಟ್ಟಾಗಿನಿಂದ ಈ ಮನೇಲಿ ಬೆಳೆದಿದ್ದೆ. ನನ್ನ ಬಾಲ್ಯ, ಯೌವ್ವನ ಎಲ್ಲಾ ಈ ಮನೆಯ ಮೂಲೆಮೂಲೆಗೂ ಗೊತ್ತು. ಆದ್ರೆ ಈಗ ಈ ಮನೆ ಬಿಟ್ಟು ಹೋಗಬೇಕು.

“ಏನು ಮಾಡಿದೆಯೋ ಶಿವನೆ ಮರೆ ಮೋಸ… ಯಾಕೆ ತಂದ್ಯೋ ಇಂತಾ ದಿವಸ… ಏನು ಮಾಡಿದೆಯಪ್ಪ ಶಿವನೇ ನಿನ್ನ ಗುಡಿಗೆ ಬೆಂಕಿ ಹೊತ್ತಿಸಾ…” ಅಂತಾ ಕೇಳ್ಬೇಕು ಹಾಗಾಗಿತ್ತು ನನ್ನ ಸ್ಥಿತಿ. ಪ್ರತೀ ದಿನಾ ಆಫೀಸಿನಿಂದ ಮನೇಗೆ ಹೋಗುವಾಗ ನನ್ನ ಕೈನೆಟಿಕ್ ಹೋಂಡಾ ಗೊತ್ತಿಲ್ಲದ ಹಾಗೇ “ನನ್ನ” ಮನೆ ದಾರಿನೇ ಹಿಡೀತಿತ್ತು. ಎಲ್ಲಿ ಬಿಟ್ರೂ ನಾಯಿ ಆ ಮನೇಗೆ ವಾಪಸ್ ಬರುತ್ತೆ ಅಂತಾರಲ್ಲ ಅದು ನನ್ನ ವಿಚಾರದಲ್ಲೂ, ನನ್ನ ಕೈನೆಟಿಕ್ ವಿಚಾರದಲ್ಲೂ ನೂರಕ್ಕೆ ನೂರು ಪರ್ಸೆಂಟ್ ನಿಜ. ಎಲ್ಲಿ ಬಿಟ್ಟರೂ “ಮನೆ” ಅನ್ನೋ ಮನೆಗೇ ಬಂದು ನಿಲ್ತಿತ್ತು. ಅಂತಾದ್ರಲ್ಲಿ ನಾನೀಗ ದಿಢೀರನೆ ನನ್ನದಲ್ಲದ ಕಾರಣಕ್ಕೆ ಬೇರೆ ರೂಟ್ ಹಿಡೀಬೇಕು ಅಂತಾದಾಗ ಕಣ್ಣೀರಾಗಿ ಹೋಗ್ತಿದ್ದೆ. ಕಣ್ಣೀರು ಕೋಡಿಯಾಗಿ ಹರೀತು ಅಂತಾರಲ್ಲ, ಅದು ಎಷ್ಟೋ ಜನಕ್ಕೆ ಕಾದಂಬರೀನಲ್ಲಿರೋ ವರ್ಣನೆ ಮಾತ್ರ ಅಂತ ಅನ್ಸುತ್ತೆ. ಆದ್ರೆ ಅಂತಾ ಸಮಯಾನೂ ಇರುತ್ತೆ ಅನ್ನೋದೂ ನನಗೆ ಗೊತ್ತಾಗಿದೆ.

ಈ ಥರದ ಎಮೋಷನಲ್ ಕಾರಣ ಬಿಟ್ಬಿಡಿ ಅಥವಾ ಅಳೋದೆಲ್ಲ ಹಳೇ ಕಥೆ ಆಗೋಯ್ತು ಅಂತಾರಲ್ವಾ, ನನ್ನ ಕಥೇನೇ ಬೇರೆ. ಮೊನ್ನೆ ಆಫೀಸ್ನಲ್ಲಿ, ಆಫೀಸ್ ನವರ ಮುಂದೆ ಆಫೀಸ್ ಕಾರಣಕ್ಕೆ ನಾನು ಕಣ್ಣೀರಾಗಿ ಹೋಗಿದ್ದೆ. ನನಗೆ ಹರ್ಟ್ ಆಗಿತ್ತು. ಸಿಂಪಲ್ ರೀಸನ್. ಕಣ್ಣೀರು ಧಾರಾಕಾರ ಇಳೀತು. ಹೀಗೂ ಇರುತ್ತಾ?

ನನಗೆ ಮೊದಲಿಂದಲೂ ಅಳಬೇಕು ಅನಿಸಿದಾಗ ಅಳಬೇಕು ಅಷ್ಟೆ. ಎಲ್ಲಿ, ಏನೂ, ಹೇಗೆ, ಯಾಕೆ ಇದೆಲ್ಲ ನನ್ನ ಮುಂದೆ ಸುಳಿಯೋದೆ ಇಲ್ಲ. ಈ ಕಾರಣಕ್ಕೇನೆ ನನಗೆ ಬೇಂದ್ರೆ ತುಂಬಾ ಇಷ್ಟ. “ಅತ್ತಾರ ಅತ್ತು ಬಿಡು ಹೊನಲು ಬರಲಿ ನಕ್ಯಾಕ ಮರಸತೀ ದುಃಖ” ಅಂತ ಕೇಳಿದವ್ರು ಅವ್ರೇ ಅಲ್ವಾ… “ನಗು ನೀ ನಗು, ಕಿರುನಗೆ ನಗು” ಅಂತನ್ನೋ ಬೇಕಾದಷ್ಟು ಹಾಡುಗಳಿವೆ. ಆದ್ರೆ ಅಳು ಅಂತ ಹೇಳೋದು ನಾನಂತೂ ಕೇಳಿಲ್ಲ.

ನಾನು ನನ್ನ ಗೆಳತಿ ಹೀಗೆ ಒಂದಿನಾ ಯಾವುದೋ ಬಸ್ ಸ್ಟಾಪ್ ಹಿಂದಿನ ಕತ್ತಲಲ್ಲಿ ಕೂತಿದ್ವಿ. ಅವಳಿಗೆ ಯಾಕೋ ಸಿಕ್ಕಾಪಟ್ಟೆ ದುಃಖ ಆಗಿತ್ತು. ಆಗ್ಲೇ ನಾನು ಅವಳಿಗೆ ಈ ಬೇಂದ್ರೆ ಸಾಲು ಹೇಳಿದ್ದು. ಹೇಳಿದ್ದೇ ತಡ ಎಷ್ಟು ದಿನದಿಂದ ತಡೆದು ಇಟ್ಟಿದ್ಲೋ ಧಾರಾಕಾರ ಕಣ್ಣೀರು ಉರುಳಿತು. ಅತ್ತು ಹಗುರಾದ್ಲು.

ಹಾಗೆ ನೋಡಿದ್ರೆ ನನಗೆ ನನ್ನ ಸಂಗಾತೀನ ಗಂಟು ಹಾಕಿದ್ದು ಕೂಡಾ ಈ ಅಳುವೇ. ಇನ್ನೂ ನಾವು ಸಂಗಾತಿಗಳು ಅಂತ ಗೊತ್ತು  ಮಾಡಿಕೊಂಡಿರಲಿಲ್ಲ. ಸುಮ್ನೆ ಫ್ರೆಂಡ್ಸ್. ಬೀದಿ ಬೀದಿ ಸುತ್ತುತ್ತಾ ಇದ್ವಿ. ಅವಳ ಮನೆ ಕಥೆ ಹೇಳ್ತಾ ಇದ್ಲು. ಅಪ್ಪನ ಕಥೆ ಆಚೆ ಬಂತು. ಸಡನ್ನಾಗಿ ಕಣ್ಣೀರಾಗಿ ಹೋದಳು. ನನ್ನ ಮನೆ, ನನ್ನ ಅಪ್ಪನ ಕಥೇನೂ ಇದಕ್ಕಿಂತ ಡಿಫರೆಂಟಾಗೇನೂ ಇರ್ಲಿಲ್ಲ. ನನ್ನ ಹೃದಯಾನೂ ಒದ್ದೆಯಾಗಿ ಹೋಯಿತು. ಎಲ್ಲೋ ನಮ್ಮಿಬ್ಬರ ಮಧ್ಯೆ ಸಮಾನ ಕಥೆ ಇದೆ ಅಂತ ಅನಿಸ್ತೇನೋ. ಆಮೇಲೆ ನಾನೇ ಪ್ರಪೋಸ್ ಮಾಡ್ದೆ.

ಎದುರುಗಡೆ ಮನೆಯವರು ತೆಲುಗು ಮಾತಾಡೋರು. ಅವರ ಮನೇಲಿ ಯಾವುದಾದ್ರೂ ಸಾವಾದ್ರೆ ಅಳೋರ್ನ ಕರೆಸ್ತಾ ಇದ್ರು. ರುಡಾಲಿ ಫಿಲಂ ಕೇಳಿದಿರಲ್ವಾ? ಅಳೋದಕ್ಕೆ ಅಂತ ಇರೋರ ಬಗ್ಗೇನೇ ಇರೋ ಫಿಲಂ ಅದು. ಎದುರು ಮನೆಗೆ ತಂಡ ತಂಡಾನೇ ಬರ್ತಿತ್ತು. ಬರ್ತಾ ಇದ್ದಾಗೇನೇ ಅಳು ಸಹಾ ಬರಿಸ್ತಿದ್ರು. ಬಿಕ್ಕಿಬಿಕ್ಕಿ ಅಳೋರು. ಅವರ್ನ ನೋಡ್ತಾ ಇದ್ರೆ ಸಾವಿನ ಮನೆಗೆ ಬರೋ ಒಬ್ಬೊಬ್ರ ಕಣ್ಣೂ ಒದ್ದೆ ಆಗೋಗಿ ಬಿಡೋದು. ಪಾಪ ಅಳೋರು, ಅಳೋದೇ ಕೆಲ್ಸ ಆಗಿರೋರು ಅವರಿಗೆ ದುಃಖ ಆದಾಗ ಏನು ಮಾಡ್ತಿದ್ರು ಅನ್ಸುತ್ತೆ?

ರಂಗನಾಯಕಿ ಸಿನಿಮಾ ನೋಡಿ. ಅದ್ರಲ್ಲಿ ರಂಗದ ಹಿಂದೆ ಮಾತಾಡ್ತಾ ಕಣ್ಣೀರು ಸುರಿಸ್ತಾ ಇರ್ತಾರೆ. ಆದ್ರೆ ಅವ್ರ ಸೀನ್ ಬಂತಾ, ಬಂದು ಸ್ಟೇಜ್ ಮೇಲೆ ರಿಂಗಣ ಹಾಕಿ ನಗು ಹುಟ್ಟಿಸಿಬಿಡ್ತಾರೆ. ತಾವು ನಗ್ತಾರೆ. ಮತ್ತೆ ಸ್ಟೇಜಿಂದ ಮರೆಯಾದ್ರೋ, ಕಣ್ಣೀರಲ್ಲಿ ಕೈ ತೊಳೀತಾ ಇರ್ತಾರೆ. ನನಗೆ ಯಾವಾಗ್ಲೂ ಆಶ್ಚರ್ಯ: ಈ ಅಳು ಅನ್ನೋದು ಇದೆಯಲ್ಲಾ ಅದು ಯಾಕೆ ನಗುವಿನ ಮರೇನಲ್ಲಿ ಕೂತಿರುತ್ತೆ ಅಂತ. ಇವತ್ತು ಎಷ್ಟು ನಗ್ತಾ ಇದೀವಪ್ಪ, ಏನು ಕಾದಿದೆಯೋ, ಎಷ್ಟು ಅಳಬೇಕೋ… ಅಂತ ಮನಸ್ಸು ಆತಂಕ ಪಡ್ತಾನೇ ಇರುತ್ತೆ.

“ಯಾಕಬೇ…ಮುದುಕಿ…ಯಾಕಳ್ತಿದೀ…ಎದೇ ಎದೇ ಬಡ್ಕೋತಿದೀ…ಬಿಟ್ಟು ಬಿಡದಾ ಹೊಯ್ಕೋತಿದೀ…ಗಂಡಾ ಸತ್ರೇನಾತು…ಯಾಕಳ್ತಿದೀ…” ಅಣ್ಣನ ಕನ್ನಡ ಪಾಠದಲ್ಲಿದ್ದ ಪದ್ಯ ಇದು. ಆತ ಉರು ಹೊಡೀತಾ ಇರುವಾಗ ನನ್ನ ಕಿವೀಗೆ ಬೀಳೋದು. ಅಳು ಅನ್ನೋದು ಹಾಡಾಗಿ ನನ್ನ ಕಿವೀಗೆ ಬಿದ್ದಿದ್ದು ಹೀಗೆ…

ಪ್ರತಿ ಪಾರ್ಕಲ್ಲಿ ನೋಡಿ. ನಗೋರ ಸಂಘ. ನಗ್ತಾ ಇರ್ತಾರೆ. ಗಹಗಹಿಸಿ ನಗ್ತಾರೆ, ಹುಲಿ ಥರಾ, ಗಂಭೀರವಾಗಿ, ಬಿದ್ದೂ ಬಿದ್ದೂ… ಹೀಗೆ ಏನೇನೋ ವೆರೈಟಿ ಕಂಡು ಹಿಡ್ಕೊಂಡಿದ್ದಾರೆ. ಅವ್ರನ್ನ ನೋಡ್ತಾ ಇದ್ರೆ ಮಾತ್ರಾ ಸಹಜವಾಗಿ ನಗು ಬರೋದು ಅನ್ನೋ ಥಿಯರಿ ನನ್ನದು. ಅಳೋ ಸಂಘ ಯಾಕಿಲ್ಲ… ಪಾರ್ಕ್ ನಲ್ಲಿ ಎಲ್ಲಾರ ಮುಂದೆ ಥರಾವರಿಯಾಗಿ…

ಒಂದಿನಾ ರೈಲ್ವೇ ಸ್ಟೇಷನ್ ನಲ್ಲಿ ನಿಂತಿದ್ದೆ. ಯಾರನ್ನೋ ಡೆಲ್ಲಿಗೆ ಕಳಿಸ್ಬೇಕಿತ್ತು. ಅದೇ ಬೋಗಿನಲ್ಲಿ ಒಂದು ಕುಟುಂಬ ಇತ್ತು. ಅವ್ರನ್ನ ಕಳಿಸೋಕೆ ಅಂತ ಇನ್ನೊಂದು ದಂಡೇ ಬಂದಿತ್ತು. ಪಾಪ, ಕಳಿಸಲಾಗದೆ ಕಣ್ಣೀರು ಸುರಿಸ್ತಾ ಇದ್ರು. ಬಿಕ್ಕಿಬಿಕ್ಕಿ ಅಳ್ತಾ ಇದ್ರು. ಆ ಕುಟುಂಬದ ಹಿರಿಯರು ಎಲ್ಲಾರ್ಗೂ ಗದರ್ತಾ ಇದ್ರು. ಎಲ್ಲಿಗೆ ಹೋಗ್ತಾರೆ ಅಂತ ಅಳ್ತೀರಾ ಸುಮ್ಮನಿರಿ ಅಂತ. ಎಷ್ಟು ಗಟ್ಟಿಯಪ್ಪ ಅನ್ಕೊಂಡೆ. ಆದ್ರೆ… ಟ್ರ್‍ಏನ್ ಹೊರಡ್ತೂ ನೋಡಿ, ಆ ಹಿರಿಯರು ಗೋಳೋ ಅಂತ ಅಳೋಕೆ ಶುರು ಮಾಡಿದರು. ಅಳು ತಡೆಯೋದಿಕ್ಕೆ ಆಗುತ್ತಾ?

ನಮ್ಮ ಪುಟಾಣಿಗಳಿಗೂ ಇದನ್ನು ಹೇಳಬೇಕು.

‍ಲೇಖಕರು avadhi

January 29, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

4 ಪ್ರತಿಕ್ರಿಯೆಗಳು

 1. ಜೋಗಿ

  ಎಷ್ಟು ಕಂಟೆಂಪರರಿ ಲೇಖನ. ನಾವಿನ್ನೂ ಕಾವ್ಯದ ಗುಂಗಿನಲ್ಲಿರುವ ಹೊತ್ತಿಗೆ, ನೀವು ನಮ್ಮನ್ನೆಲ್ಲ ದಾಟಿ ತುಂಬ ಮುಂದೆ ಹೋಗಿದ್ದೀರಿ. ನಮ್ಮನ್ನೂ ಜೊತೆಗೆ ಕರಕೊಂಡು ಹೋಗಿ ಸರ್.

  ಪ್ರತಿಕ್ರಿಯೆ
 2. ಅಪಾರ

  ಚೆನ್ನಾಗಿದೆ ಲೇಖನ. ನಾನು ಕಡೇ ಬಾರಿ ಅತ್ತಿದ್ದು ಯಾವಾಗ ಅಂತ ನೆನಪು ಮಾಡಿತು..
  ಅಳು ಅಂತ ಯಾರೂ ಹೇಳಲ್ಲ ಅಂದಿದ್ದೀರಿ. ಸಿನಿಮಾ ಡೈಲಾಗಲ್ಲಿ ಅಳು
  ಬರದವರನ್ನೂ ‘ಅತ್ತುಬಿಡು, ಅತ್ತುಬಿಡು’ ಅಂತ ಕಾಡುತ್ತಾರೆ ಅಲ್ಲವೆ? ಸಿನಿಮಾ ನೋಡುತ್ತಾ ಅಳುವುದರ ಬಗ್ಗೆ ಹೇಳಬೇಕೆಂದರೆ ಒಮ್ಮೊಮ್ಮೆ ಸಿಲ್ಲಿ ಸಿನಿಮಾದ ಸಿಲ್ಲಿ ದೃಶ್ಯಕ್ಕೂ
  ಕಣ್ಣಂಚು ಒದ್ದೆಯಾಗುತ್ತದೆ. ಆಗ ನನ್ನ ಮೇಲೆ ನನಗೇ ಕೋಪ ಬರುತ್ತದೆ.

  ಪ್ರತಿಕ್ರಿಯೆ
 3. shari

  navu ellara jotenu matadtivi.avara jote…
  ivara jote.aadare nammondige navu matadikollalla. sangitada jotege matra navu sadakala matadta irtivi anta ninne tane yaro yaro helida nenapu.nanagu sangita ishtane.
  adre takshanakke andukonde nanu nannondige
  matadikollodu kannirina mulaka maatra.
  nanaganisida mattige sarvakalakku nammondige
  iruva ekaika geleya endre kanniru matra.life
  is beautiful nodidaga obbale edeyodedu
  hoguvashtu attidde.nantara attiddu monne
  monne taare jamin par nodidaga..cinemaduddakku
  attu bittidde. article chennagide. odi matte
  kannugalu hanigudidavu….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: