ಅತ್ರಿ ಅಶೋಕವರ್ಧನ ಅವರ ಬೈಸಿಕಲ್ ಡೈರಿ!

ಬೆಂಗಳೂರು – ಮಂಗಳೂರು ಸೈಕಲ್ ಸವಾರಿ

ಅತ್ರಿ ಅಶೋಕವರ್ಧನ


ಅದೊಂದು ಮಂಗಳೂರಿನ ಮಾಮೂಲೀ ಸುಡು-ಸಂಜೆ. ಜಂಟಿ ಸೈಕಲ್ ಸವಾರಿಯಲ್ಲಿ (ಹೆಚ್ಚಿನ ವಿವರಗಳಿಗೆ ಸೈಕಲ್ ಸಾಹಸಗಳು ಹಳೆ ಲೇಖನಗಳನ್ನು ನೋಡಿ) ಮುಂದೆ ಮೀಸೆಧ್ವಜನಾದ ನಾನು ಏನೋ ಘನ ಕಾರ್ಯವಿರುವವನಂತೆ ಪೆಡಲೆರಡನ್ನು ಒತ್ತೊತ್ತಿ ತುಳಿಯುತ್ತಾ ಆಗಾಗ ಹಳೆಗಾಲದ ಬೆಂಝ್ ಗಾಡಿಯಂತೆ ಠೊಶ್ಶೆಂದು ನಿಟ್ಟುಸಿರು ಬಿಡುತ್ತಾ ಸಾಗಿದ್ದಂತೆ, “ಇನ್ನು ನಿವೃತ್ತಿ” ಎಂದು ಅಂಗಡಿ ಮುಚ್ಚಿ ಮನೆಯಲ್ಲಿ ಕುಳಿತವನಿಗೆ “ದಿನವಹಿ ಲೆಕ್ಕ ಬರೆಯುವ ಕೆಲಸ ನಿಮ್ಮದೇ” ಎಂದು ಮನೆಯಲ್ಲಿ ವರಾತ ಹಚ್ಚಿದ್ದು ಸಾಲದೆಂದು ಇಲ್ಲೂ ಬೆನ್ನು ಬಿದ್ದವಳಂತೆ, ದೇವಕಿ ತನ್ನದೇ ಲಯದಲ್ಲಿ ಅವಳ ಪೆಡಲುಗಳನ್ನೂ ತುಳಿತುಳಿಯುತ್ತ ಜೊತೆಯಲ್ಲೇ ಸಾಗುತ್ತಾ ಮಂಗಳೂರಿನ ಗಲ್ಲಿ ಗಲ್ಲಿ ಸುತ್ತಿ, ಗುರುಪುರ ನದಿಗುಂಟ ಏರಿ, ಹೆದ್ದಾರಿಗೆ ಹತ್ತಿ ಆಕಾಶವಾಣಿ ಚಡಾವಿನ ಬುಡದಲ್ಲಿ, ಬಹುತೇಕ ನಿರ್ಜನ ಪ್ರದೇಶದಲ್ಲಿ ನೀರು ಕುಡಿಯಲೆಂದು ನಿಂತೆವು. ಚತುಷ್ಪಥದಲ್ಲಿ ಘಡಘಡಾಯಿಸುತ್ತ ಹೋಗುವ ಭಾರೀ ಲಾರಿಗಳಿಂದ, ರೊಯ್ಕೆಂದು ಮಿಂಚಿಮರೆಯಾಗುವ ಬೈಕುಗಳವೆರೆಗೂ ನಮ್ಮದು ದಿವ್ಯ ನಿರ್ಲಕ್ಷ್ಯ. ಆದರೂ ಅದೊಂದು ಬೈಕು – ಮುಖ ಶಿರಸ್ತ್ರಾಣದೊಳಗೆ ಹೂತ ಸವಾರ, ಕಡಿವಾಣ ಬಿಗಿಮಾಡಿ ನಮ್ಮಿಂದ ತುಸು ಮುಂದಕ್ಕೆ ಎಡ ಸರಿದು ನಿಂತ. ಇಳಿದು, ಹತ್ತಿರ ಬರುತ್ತಾ ಮುಸುಕು ತೆಗೆಯುವಾಗ “ಅರೆ, ನಮ್ಮ ಪಾರೆಯ ಶ್ಯಾಮ ಭಟ್ರೂ” ಎಂದು ನಾನು ಸಹಜವಾಗಿ ಉದ್ಗರಿಸಿದೆ. ಈತ ಸುಳ್ಯದ ಬಳಿಯ, ನನಗಿಂತಲೂ ಯುವಕನಾದ (– ನಲ್ವತ್ತೊಂಬತ್ತರ ಹರಯ!) ಕೃಷಿಕ, ಹಿಂದೆ ನನ್ನಂಗಡಿಯ ಒಳ್ಳೆಯ ಗಿರಾಕಿ, ಎಲ್ಲಕ್ಕೂ ಮಿಗಿಲಾಗಿ ನನ್ನ ಎರಡನೆಯ ಭಾರತ ಬೈಕ್ ಯಾನಕ್ಕೆ (೧೯೯೦ ರ ದಶಕದಲ್ಲಿ) ಸೇರಿಯೇ ಸೇರುತ್ತೇನೆಂದು ಛಲದಲ್ಲಿ ಹೆಸರು ಕೊಟ್ಟು ಅನಿವಾರ್ಯ ಮತ್ತು ಪ್ರಾಮಾಣಿಕ ಕಾರಣದಿಂದ ತಪ್ಪಿಹೋದ ಉತ್ಸಾಹಿ. `ತುಂಬಾ ಸಮಯವಾಯ್ತು ಕಾಣ್ಲೇ ಇಲ್ಲಾ’ ದೃಷ್ಟಿ ಕೊಡುತ್ತಾ ಮುಖವೆಲ್ಲಾ ನಗೆಯಾಗುತ್ತಾ ಸಮೀಪಿಸಿದರು. ನಮ್ಮ ಸೈಕಲ್ ಉತ್ಸಾಹಕ್ಕೆ ಪೂರಕವಾಗುವಂತೆ ಒಂದೇ ಉಸಿರಿನಲ್ಲಿ ಶ್ಯಾಮೋದ್ಗಾರ “ನನ್ನತ್ರ ಹೀಗಲ್ಲ. ಗೇರಿರುವ ವಿದೇಶೀ (ಒಂಟಿ) ಸೈಕಲ್ಲಿದೆ. ಸುಮಾರು ಎರಡೂವರೆ ವರ್ಷಗಳಿಂದ ಬಳಸುತ್ತಿದ್ದೇನೆ. ಸದ್ಯ ಅದನ್ನು ಬೆಂಗಳೂರಿನಲ್ಲಿ ರಿಪೇರಿಗೆ ಬಿಟ್ಟಿದ್ದೇನೆ. ಅಂದಾಜು ಇನ್ನೊಂದು ವಾರದಲ್ಲಿ ಅಲ್ಲಿಗೆ ಬಸ್ನಲ್ಲಿ ಹೋಗಿ ಸವಾರಿ ಮಾಡಿಕೊಂಡೇ ತರ್ತಾ ಇದ್ದೇನೆ.” ಅವರದು ಸವಾಲು, ಆಮಂತ್ರಣಗಳೇನೂ ಅಲ್ಲ, ಸಮಾನಾಸಕ್ತರೊಡನೆ ಹಂಚಿಕೊಳ್ಳುವ ಹಂಬಲವಷ್ಟೇ. ಆದರೆ ಅರವತ್ತೆರಡರ ಮುಪ್ಪಿದ್ದರೂ `ಹುಳಿ’ ಕಳೆಯದ (ಗಾದೆ – ಮರಮುಪ್ಪಾದರೂ ಹುಳಿ ಮುಪ್ಪೇ) ನಾನು, ನೀಲಾಕಾಶದಲ್ಲಿ ಹಿಂಜಿದ ಅರಳೆಯಂತಿದ್ದ ನನ್ನ ಯೋಚನೆಗಳನ್ನು ಒಮ್ಮೆಲೆ ಸುಳಿಗೊಳಿಸಿ, ಸಂದರ್ಭಕ್ಕೆ ಚೂಪಾಗಿಸಿ “ನಾನೂ ಒಳ್ಳೇ ಒಂಟಿ ಸೈಕಲ್ ಕೊಳ್ಳಬೇಕೆಂದಿದ್ದೆ. ಅಲ್ಲೇ ಕೊಂಡು, ನಿಮಗೆ ಜೊತೆಗೊಟ್ಟರೆ ಹೇಗೆ?” ಎಂದುಬಿಟ್ಟೆ. ಕೂತು ಮಾತಾಡಿ, ಹತ್ತು ಅಭಿಪ್ರಾಯಗಳ ತುಲನಾತ್ಮಕ ಕೋಷ್ಠಕ ಹಾಕಿ, ಆದರೂ ಆಗೀಗ ಮೋಸಹೋಗುವ ದೇವಕಿಗೆ ಬದ್ಧ ವಿರೋಧೀ ಪ್ರವೃತ್ತಿ ನನ್ನದು. ದೇವಕಿ ಆ ಕ್ಷಣದಲ್ಲಿ ಸೌಜನ್ಯಕ್ಕೆ ಅನುಮೋದನೆಯ ಭಾವ ಮುದ್ರೆ ಮುಖದಲ್ಲಿ ಹೊತ್ತಿದ್ದಂತೆ ನನಗೂ ಶ್ಯಾಮಭಟ್ರಿಗೂ ಒಪ್ಪಂದ ಆಗಿಯೇ ಹೋಯ್ತು.
ತೆರೆಮರೆಯಲ್ಲಿ ದೇವಕಿ “ಮುನ್ನೂರೂ ಚಿಲ್ರೆ ಕಿಮೀ ಅಂತರ, ಹಿರಿಯ ಪ್ರಾಯ, ಅಭ್ಯಾಸದ ಕೊರತೆ, ಬೇಸಗೆಯ ಉರಿ ಒಂದೂ ಯೋಚಿಸದೇ ಒಪ್ಪಿದ್ದು ಯಾಕೆ? ಅಷ್ಟಕ್ಕೂ ಅವರು ನಿಮ್ಮನ್ನು ಕರೆದದ್ದಲ್ಲ; ಪಾಪ, ಸ್ವತಂತ್ರವಾಗಿ ಬರುವ ಯೋಚನೆ ಇತ್ತೋ ಏನೋ. ಯಾವ ನಮೂನೆಯ ಸೈಕಲ್ಲಾದರೂ ಮಂಗಳೂರಿನಲ್ಲಿ ಸಿಕ್ಕೇ ಸಿಗುತ್ತದೆ. ಮತ್ತೆ ನಾನು ಸುಮ್ಮನೇ ಬೆಂಗಳೂರಿಗೆ ಬಂದು, ಒಂಟಿಯಾಗಿ ಬಸ್ಸಿನಲ್ಲಿ ಮರಳುವುದು ವ್ಯರ್ಥ ಖರ್ಚು…” ಎಂದಿತ್ಯಾದಿ ಬಲವಾಗಿಯೇ ವಾದ ಮಂಡಿಸಿದಳು. ಅವಳ ಮಾತುಗಳು ನಿಜವೇ ಆದರೂ `ಮೈಸೂರು ಮಲ್ಲಿಗೆ’ಯ ಲಯ ಹಿಡಿದು “ಎಲ್ಲಿಗೂ ಹೋಗದೆ ತುಂಬ ದಿನವಾಯ್ತೂಂತ ಕೊರಗ್ತಿದ್ದವಳು ನೀನಲ್ಲವೇ? ಅ(-ಭಯ) ರ(-ಶ್ಮಿಯರ)ಮನೆಗೆ ನಾವು ಆಗಾಗ ಹೋಗದೇ ಇದ್ದರೆ ಅವರು ನಮ್ಮನ್ನೇ ಮರ್ತಾರೂಂತ ಆತಂಕಿಸಿದವಳು ನೀನಲ್ಲವೇ? ಆ ಹೊಸಮನೆಗೆ ಬೆಂಗಳೂರಿನಲ್ಲೇ ಇರುವ ಕೊಂದ್ಲಕಾನ ಪುಳ್ಳಿಗಳನ್ನೆಲ್ಲ (ದೇವಕಿಯ ತೌರ್ಮನೆ) ಒಂದು ಅನೌಪಚಾರಿಕ ಊಟಕ್ಕೆ ಒಟ್ಟುಗೂಡಿಸಬೇಕೆಂದು ಬಯಸಿದವಳು ನೀನಲ್ಲವೇ? (ಸಣ್ಣ ಧ್ವನಿಯಲ್ಲಿ) ಸಂದೀಪ, ಸುಂದರ್ರಾವ್ ಎಲ್ಲರ ಸೈಕಲ್ ನೋಡಿ ಅಷ್ಟು ಆಸೆಯಾದರೆ ನೀವೂ ಒಂದು ಕೊಂಡರಾಯ್ತು ಎಂದವಳೂ ನೀನೇ ಅಲ್ಲವೇ? ಕದ್ರಿ ಗುಡ್ಡೇ ಇಳಿಜಾರಿನಲ್ಲಿ ಬ್ರೇಕ್ ಹತ್ತದೇ ಅಂಧಾ ಸವಾರಿಯಲ್ಲಿ ಬಚಾವಾಗಿ ಬೆವರೊರೆಸಿಕೊಳ್ಳುವಾಗ, ನಮ್ಮ ಜಂಟಿ ಸೈಕಲ್ ಇಪ್ಪತ್ತು ಕಿಮಿ ಸವಾರಿಯೂ ಒಳ್ಳೇ ಒಂಟಿ ಸೈಕಲ್ ಇನ್ನೂರು ಕಿಮೀ ತುಳಿಯುವುದೂ ಒಂದೇ ಎಂದು ಕಟಕಿದವಳು ನೀನೇ ಅಲ್ಲವೇ? ನನಗೆಲ್ಲಿ ಅಸಾಧ್ಯವೆಂದು ಕಂಡರೂ ಸೈಕಲ್ ಬಸ್ಸಿಗೇರಿಸಿ ಮರಳುವ ಸ್ವಾತಂತ್ರ್ಯ ಹೇಗೂ ಉಂಟು, ಧೈರ್ಯಕ್ಕೆ ಶ್ಯಾಮ ಭಟ್ಟರು, ಚರವಾಣಿ, ದಾರಿಯುದ್ದಕ್ಕೂ ಮಿತ್ರರು, ಸಂಬಂಧಿಕರು ಎಲ್ಲಾ ಇದ್ದೇ ಇದೆ…” ಎಂದಿತ್ಯಾದಿ ಮಸಲತ್ತು ನಡೆಸಿ ದೇವಕಿಯನ್ನು ಒಪ್ಪಿಸಿಬಿಟ್ಟೆ. ಇದೇ ಮೇ ಹದಿನೆಂಟರ ಬೆಳಗ್ಗಿನ ಬಸ್ಸು ಹಿಡಿದು ನಾವಿಬ್ಬರು ಬೆಂಗಳೂರಿಸಿದೆವು.

ಜಾಗತಿಕ ಪರಿಸರ ಸಮಸ್ಯೆಗೆ ಒಂದು ಮುಖದ ಪರಿಹಾರವಾಗಿ ಜಾಗೃತಗೊಂಡ ಸೈಕಲ್ ಬಳಕೆಯ ಹೊಸ ಯುಗ ಇಂದು ಬೆಂಗಳೂರಿನಲ್ಲೂ ಗಟ್ಟಿಗೊಳ್ಳುತ್ತಿದೆ. ಬಾಹ್ಯ ಶಕ್ತಿಮೂಲಗಳ (ಪೆಟ್ರೋಲ್ ಡೀಸಲ್‍ಗಳಲ್ಲದೆ, ಗ್ಯಾಸ್, ವಿದ್ಯುತ್, ಸೌರ, ಜೈವಿಕ ಅನಿಲ, ವಾಯು ಇತ್ಯಾದಿ) ಮತ್ತು ಯಂತ್ರ ಕೌಶಲಗಳ ಉತ್ಕ್ರಾಂತಿಯ ಗದ್ದಲದಲ್ಲಿ ಮನುಷ್ಯ ಶಕ್ತಿಯನ್ನು ಸಾರ್ಥಕಗೊಳಿಸುವ ಹಾಗೂ ಹಿಂದಿನ ತಂತ್ರಗಳನ್ನು ಸ್ಪರ್ಧಾತ್ಮಕವಾಗಿ ಇಂದಿನ ಅಗತ್ಯಗಳಿಗೆ ಸಮಭುಜವಾಗಿ ಸ್ಥಾಪಿಸುವ ಕೆಲಸವನ್ನು ಈ ಸೈಕಲ್ ಕ್ರಾಂತಿ ನಿಶ್ಶಬ್ದವಾಗಿ ನಡೆಸುತ್ತಿದೆ. ನಮ್ಮ ಬಿಸಿಲೆಯ ಕಪ್ಪೆ ಶಿಬಿರಗಳಲ್ಲಿ ಆತ್ಮೀಯ ಪರಿಚಯಕ್ಕೆ ಬಂದಿದ್ದ ಸುಧೀರ್ ಇದರಲ್ಲಿ ತೀವ್ರವಾಗಿ ತೊಡಗಿರುವುದು ನನಗೆ ಹೆಮ್ಮೆಯ ವಿಷಯವೇ ಆಗಿತ್ತು. ಇನ್ಫೋಸಿಸ್, ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ವಠಾರಗಳೊಳಗಿನ ಉಚಿತ ಸೈಕಲ್ ಸವಾರಿ ಸೌಲಭ್ಯ, ಜಯನಗರ ವಲಯದಲ್ಲಿ ದಾರಿಯಂಚುಗಳಲ್ಲಿ ಸೈಕಲ್ ಓಣಿ ಎಂದೇ ಬಿಳಿಗೀಟು ಹಾಕಿ ಗುರುತಿಸಿ, ನಗರಾಡಳಿತದ ಮಾನ್ಯತೆ ಒದಗಿಸಿದ್ದು ಎಲ್ಲಾ ನಾನು ಕೇಳಿ ತಿಳಿದಿದ್ದೆ. (ಮೈಸೂರಿನಲ್ಲಿ ಸ್ವತಃ ಜಿಲ್ಲಾಧಿಕಾರಿಯೇ ಸೈಕಲ್ ಸವಾರಿಯ ಉತ್ಸಾಹ ತೋರಿದ್ದರು. ಸೈಕಲ್ ವಿಶ್ವಯಾನಿ ನೆಲ್ಯಾರು ಗೋವಿಂದನಿಗಂತೂ ಸಂಪರ್ಕ, ಸಂಬಂಧ ಹಾಗೂ ಜಾಲ ಶೋಧಗಳಲ್ಲಿ ಸೈಕಲ್ ಮಹಿಮೆ ಪ್ರಚುರಿಸಿದಷ್ಟೂ ಅಮಲು ಜಾಸ್ತಿಯಾಗುತ್ತಲೇ ಇತ್ತು! ಇಲ್ಲಿ ಗೇರ್ ಬದಲಾವಣೆಗಳ ಕುರಿತು ಕೆಳಗೆ ಲಗತ್ತಿಸಿದ ಮಾಹಿತಿ ಪತ್ರ ಹೆಕ್ಕಿ ಕೊಟ್ಟವನೂ ಗೋವಿಂದನೇ) ಆ ಎಲ್ಲಾ ಸಂಪರ್ಕಗಳನ್ನು ಬಿಟ್ಟು, ನನ್ನ ಒಂದು ಸೈಕಲ್ ಅಗತ್ಯಕ್ಕೆ ಮತ್ತು ಅಗತ್ಯ ಬಂದರೆ ಮುಂದುವರಿದ ಸೇವಾ ಸೌಕರ್ಯಕ್ಕೆ ಸದ್ಯದ ಸಂಗಾತಿ ಶ್ಯಾಮ ಪಾರೆ ನಂಬಿದ ವೃತ್ತಿಪರ ಮಳಿಗೆ ಸಾಕು ಎಂದು ನಾನು ಸುಮ್ಮನಿದ್ದೆ. ಆದರೆ ಸಂಪರ್ಕವಾದಂದಿನಿಂದ ಶ್ಯಾಮ, ಬೆಂಗಳೂರಿನ ತನ್ನ ಸೈಕಲ್ ಮಳಿಗೆಯ ವಿಳಾಸ, ದೂರವಾಣಿ ಕೊಡುತ್ತೇನೆ ಎಂದು ಹೇಳಿದ್ದೇ ಬಂತು. ಆಗೀಗ ತುಂಡು ತುಂಡಾಗಿ ಚರವಾಣಿ, ಸ್ಥಿರವಾಣಿಗಳಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ ಕೊಟ್ಟ ಮಾಹಿತಿಯಾದರೂ ಎಂಥದ್ದು? “ಚರವಾಣಿಗೆ ವ್ಯಾಪ್ತಿ ಇಲ್ಲ, ಸ್ಥಿರವಾಣಿಗೆ ಅಕಾಲಿಕ ಸಿಡಿಲಿನ ಭಯ, ಬೀಯೆಸ್ಸೆನ್ನೆಲ್ ಅಂತರ್ಜಾಲದ ಮಿಂಚಂಚೆ ಸೇವೆ ತಿಂಗಳ ಬಿಲ್ಲಿನಲ್ಲಷ್ಟೇ ಶೇವೆ!”

ನಾನು ಅಭಯನ ಜೊತೆಮಾಡಿಕೊಂಡು ಒಟ್ಟಾರೆ ಆಧುನಿಕ ಸೈಕಲ್ ಮಳಿಗೆಯೊಂದಕ್ಕೆ ನುಗ್ಗಿ ನೋಡುವುದೆಂದುಕೊಂಡಿದ್ದೆ. ಆಗ ಅಭಯನ ಸಿನಿಮಾವೃತ್ತಿ ಒದಗಿಸಿದ ಸಂಪರ್ಕ – ಮುರಳಿ, ನೆನಪಿಗೆ ಬಂದರು. ಈತ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸಿನಲ್ಲೇ ಗಣಕ ತಂತ್ರಜ್ಞ, ಸುಧೀರರ ಗೆಳೆಯ, ನವ ಸೈಕಲ್ ಕ್ರಾಂತಿ ಬಳಗದಲ್ಲಿ ಬಲು ದೊಡ್ಡ ಕಾರುಭಾರಿ ಮತ್ತು ವಕ್ತಾರ. ಆ ಸಂಜೆ ಅಭಯ ಒಂದು ಕರೆ ಮಾಡಿದ್ದೇ ಸಾಕಾಯಿತು. ಪುಣ್ಯಾತ್ಮ ಎಷ್ಟೆಲ್ಲ ಗಂಭೀರ ಕೆಲಸವಿತ್ತೋ ಎಲ್ಲ ಬಿಟ್ಟು, ಕೇವಲ ಅರ್ಧ ಗಂಟೆಯ ಸೂಚನೆ ಕೊಟ್ಟು, ಸ್ವಂತ ಸೈಕಲ್ಲೇರಿಕೊಂಡು ಬಂದು ಜಯನಗರದ ಒಂದು ಸೈಕಲ್ ಮಳಿಗೆಯಲ್ಲೇ ಸಿಕ್ಕಿದರು!
ಸೈಕಲ್ಲುಗಳಲ್ಲಿ ಹತ್ತೆಂಟು ವೈವಿಧ್ಯವನ್ನಷ್ಟೇ ಇಟ್ಟುಕೊಂಡು ಯಾವುದೇ ಆಧುನಿಕ ಕಾರು, ಬೈಕುಗಳ ಮಳಿಗೆಗೆ ಬಿಟ್ಟಿಲ್ಲದಂತೆ ಪ್ರದರ್ಶನ, ಮಾರಾಟ ಮತ್ತು ಸೇವೆ ನೀಡುತ್ತಿದ್ದ ಆ ಮಳಿಗೆಯ ಹೆಸರೇ ಸಾಕು – ಬಮ್ಸ್ ಆನ್ ದ ಸ್ಯಾಡಲ್ (ತಡಿಯ ಮೇಲೆ ಕುಂಡಿ!), ಕೆಲಸದ ವ್ಯಾಪ್ತಿ ಪರಿಚಯಿಸಲು! ಶ್ರೀಸಾಮಾನ್ಯನ ಪರಮ ವಾಹನವೆಂದೇ ಖ್ಯಾತವಾದ ಸೈಕಲ್ ಇಲ್ಲಿನ ಅವತಾರದಲ್ಲಿ ಯಾವ ಮೋಟಾರು ಸೈಕಲ್, ಕಾರುಗಳಿಗೆ ಬಿಟ್ಟಿಲ್ಲ – ಕನಿಷ್ಠ ಇಪ್ಪತ್ನಾಲ್ಕು ಸಾವಿರದಿಂದ ತೊಡಗಿ ಒಂದೂಕಾಲು ಲಕ್ಷದವರೆಗಿನ ಬೆಲೆಯ ಸೈಕಲ್ಲನ್ನೂ ಇಲ್ಲಿ ಆಕರ್ಷಕ ಭಂಗಿಗಳಲ್ಲಿ ಪ್ರದರ್ಶಿಸಿದ್ದರು. ಮಳಿಗೆಯ ಯಜಮಾನ – ಮುರಳಿಯ ಗೆಳೆಯ – ರೋಹನ್ ಕಿಣಿ, ಕತೆಯೇ ರೋಚಕ. ಎಲ್ಲಾ `ಬುದ್ಧಿವಂತ’ರಂತೆ ಈತನೂ ಗರಿಷ್ಠ ಆದಾಯ-ಸುಖದ ಗಣಕ ತಜ್ಞ. ಆದರೆ ಈತನಲ್ಲಿದ್ದ ಸೈಕಲ್ ಹವ್ಯಾಸದ ಕಸಿ-ಗೆಲ್ಲು ಭಾರೀ ಫಲದಾಯಿಯಾಯ್ತಂತೆ. ಅದ್ಭುತ ವಿದೇಶೀ ಮಾದರಿ ಸೈಕಲ್ಲುಗಳನ್ನು ಸ್ವಂತಕ್ಕೆ ತರಿಸಿಕೊಂಡು ದೀರ್ಘ ಮತ್ತು ಸ್ಪರ್ಧಾ ಓಟಗಳಲ್ಲಿ ಪ್ರಯೋಗಿಸಿದ್ದಲ್ಲದೆ, ಕೇಳಿಬಂದ ಮಿತ್ರರಿಗೆ ಹೊಸತನ್ನು ತರಿಸಿ ಜೋಡಿಸಿ ಒದಗಿಸುವಲ್ಲೂ ಮುಂದೆ ದುರಸ್ತಿಗೊಳಿಸುವಲ್ಲಿಂದ `ಮಾಡು, ಮಾಣ್’ (ಡೂಸ್ ಆಂಡ್ ಡೂನಾಟ್ಸ್) ಮಾರ್ಗದರ್ಶಿಸುವಲ್ಲೂ ಈತನ ಜನಪ್ರಿಯತೆ ವಿಪರೀತಕ್ಕೆ ಏರಿತಂತೆ. ಸಹಜವಾಗಿ ತಾಪೇದಾರಿ ಕಳಚಿಕೊಂಡು (ವೃತ್ತಿ ಕವಲು ಸಾಯಿಸಿ, ಪ್ರವೃತ್ತಿಯ ಕಸಿಗವಲನ್ನೇ ಪೋಷಿಸಿ) ಜಯನಗರದ ಈ ಮಳಿಗೆ, ಪುಣೆಯಲ್ಲೊಂದು ಶಾಖೆ ತೆರೆಯುವಷ್ಟು ಇಂದು ಬೆಳೆದಿದ್ದಾರೆ! (ತಡವಾಗಿ ತಿಳಿಯಿತು – ನನ್ನ ಪ್ರಸ್ತುತ ದೀರ್ಘ ಸವಾರಿಯ ಪ್ರೇರಕ ಶ್ಯಾಮನೂ ಇವರದೇ ಗಿರಾಕಿ) ಅಲ್ಲಿ ಯಜಮಾನನಿರಲಿಲ್ಲ ಮತ್ತು ನನ್ನ ಹದಿನೈದು ಸಾವಿರದ ಬೆಲೆಯಂದಾಜಿಗೆ ಬರುವ ಸೈಕಲ್ಲೇ ಇರಲಿಲ್ಲ.
ಮುರಳಿ ತನ್ನ ಸೈಕಲ್ ಅಲ್ಲೇ ಬಿಟ್ಟು, ನಮ್ಮ ಕಾರೇರಿ ಚಾಮರಾಜಪೇಟೆಗೊಯ್ದರು. ದಾರಿಯಲ್ಲಿ ಮುರಳಿಯ ಮಾತಿನ ಪ್ರವಾಹದಲ್ಲಿ ನಾನು ಗ್ರಹಿಸಿದ್ದಿಷ್ಟು. ವ್ಯಾಪಾರವನ್ನು ಎರಡನೆಯದಾಗಿಟ್ಟುಕೊಂಡು ಆದರೆ ಸೈಕಲ್ ಮಾರಾಟದ (ಮೂಲತಃ ಯೋಗ್ಯತೆ ಹಾಗೂ ವೃತ್ತಿಯಲ್ಲಿ ಅನ್ಯಶಿಸ್ತಿನಲ್ಲಿದ್ದವರು) ಮೂಲಕ ಈ ಆಂದೋಲನವನ್ನು ಪ್ರಖರವಾಗುಳಿಸಿದವರಲ್ಲಿ `ಬಮ್ಸ್’ನ ರೋಹನ್ನಿನಷ್ಟೇ ಸದ್ಯ ಭೇಟಿಗೆ ಹೋಗುತ್ತಿದ್ದ ವೀಲ್ ಸ್ಪೋರ್ಟ್ಸಿನ ವೆಂಕಟೇಶ್ ಕೂಡಾ ಮುಖ್ಯರು. ಸೈಕಲ್ ಕುರಿತ ಮುರಳಿಯ ಬರಹಗಳ (ನಾನು ಓದಿಲ್ಲ) ಬಗ್ಗೆ ಕೇಳಿ ತಿಳಿದೆವು. ಅವರ ಭವಿಷ್ಯತ್ತಿನ ಯೋಜನೆಗಳ ಬಗ್ಗೆಯೂ ಸಾಕಷ್ಟು ವಿವರಗಳಲ್ಲೇ ಕೇಳುತ್ತಾ ಹೋದೆವು. ಅವರ ಪಂಚಸೂತ್ರಗಳ ಸಾರವಂತೂ ಸೈಕಲ್ಲನ್ನು ವಿಶ್ವಕೇಂದ್ರದಲ್ಲೇ ನಿಲ್ಲಿಸಿಬಿಡುತ್ತದೆ! (“ಅಸಮಾನತೆ ತೊಡೆಯಲು, ಪರಿಸರ ಉಳಿಸಲು, ಆರೋಗ್ಯ ವರ್ಧಿಸಲು, ಏಕಾಗ್ರತೆ ಸಾಧಿಸಲು, ದೇಶಾಂತರ ಸಂಚರಿಸಲು, ಆತ್ಮಶಕ್ತಿ ವೃದ್ಧಿಸಲು…” ಎಂದಿತ್ಯಾದಿ ಮುರಳಿ ಹರಿಸಿದ ಸೈಕಲ್ ಮಹಾತ್ಮ್ಯೆಯನ್ನು ಬಣ್ಣಿಸಲು ನಿಜಕ್ಕೂ ನನ್ನಲ್ಲಿ ಶಬ್ದಗಳು ಇಲ್ಲ.)
ವೆಂಕಟೇಶರ ಮನೆಯ ಮಾಳಿಗೆಯೇ ವ್ಯಾಪಾರ ಮಳಿಗೆ. ಸಪುರ ಗಲ್ಲಿಯೊಳಗೆ ಮತ್ತಷ್ಟು ಸಪುರ ಮೆಟ್ಟಿಲ ಸಾಲೇರಿದಾಗ ಸಿಗುವ ರೊಪ್ಪದಂಥ ಕೋಣೆಯೇ ಇವರ ಮಳಿಗೆ – ವೀಲ್ ಸ್ಪೋರ್ಟ್ಸ್. ವೆಂಕಟೇಶ್ ಅಥವಾ ಅವರ ಮುಖ್ಯ ಸಹಾಯಕನೂ ಅಲ್ಲಿರಲಿಲ್ಲ. ಆದರೇನು ಅವರ ಯಜಮಾಂತಿ ಮತ್ತು ಇನ್ನೂ ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿರುವ ಅವರ ಎರಡು ಮಕ್ಕಳು ಮಳಿಗೆಯ ಬಾಗಿಲು ತೆರೆದು, ಸೇವೆ ಕೊಡುವಲ್ಲಿ ಸಮರ್ಥರಿದ್ದರು. ಅಲ್ಲಿ ವ್ಯಾಪಾರೀ ಥಳಕುಗಳೇನೂ ಇರಲಿಲ್ಲ. ಗುದಾಮು ಅಥವಾ ಕಾರ್ಯಾಗಾರ ಎನ್ನುವಂತೆ ಅರ್ಧಂಬರ್ಧ ಜೋಡಣೆಯ ಹಲವು ಮಾದರಿಗಳು, ಸೀಲೊಡೆಯದ ಹಲವು ರಟ್ಟಿನ ಡಬ್ಬಿಗಳೂ ಎಲ್ಲಂದರಲ್ಲಿ ಬಿಡಿಭಾಗ, ಪೂರಕ ಸಲಕರಣೆಗಳೂ ಕಸ ದೂಳೂ ಧಾರಾಳವಿತ್ತು. ದನ ನೋಡುವವರಿಗೆ ಗಂಜಳ ಸೆಗಣಿಯ ಹೇವರಿಕೆ ಇಲ್ಲ, ಬಿಡಿ.

ನನ್ನ ಕಿಸೆ, ನನ್ನುದ್ದೇಶಗಳನ್ನು ಒಂದೊಂದಾಗಿ ಬಿಡಿಸುತ್ತ ಮುರಳಿ ಮೆರಿಡ ಕಂಪೆನಿಯ ಸೈಕಲ್ಲನ್ನು ನನಗಾಗಿ ಆರಿಸಿದರು. ಅದು ಹಲವು `ಗೇರು’ಗಳಿರುವ ಎಂಟಿಬಿ (ವಿಸ್ತೃತ ರೂಪ – ಮೌಂಟೇನ್ ಟೆರೇನ್ ಬೈಕ್). ಅಂದರೆ, ವೇಗದ ಸ್ಪರ್ಧಾತ್ಮಕ ಓಟಗಳಿಗೆ ಹೇಳಿದ್ದಲ್ಲ. ಆದರೆ ಭಾರೀ ಗಟ್ಟಿ ಮತ್ತು ನಿಧಾನಿಯಾದ ಪೂರ್ಣ ಕಚ್ಚಾ ಕಾಡು-ಕಾಲ್ದಾರಿಗಷ್ಟೇ ಮಾಡಿದ್ದೂ ಅಲ್ಲ – ಮಧ್ಯಂತರದ ಸ್ಥಿತಿಯ ಸೈಕಲ್ಲು. ಅದರಲ್ಲೂ ನನ್ನ ಎತ್ತರಕ್ಕೆ ಹೊಂದುವ ಚೌಕಟ್ಟು, ಹ್ಯಾಂಡಲ್ಲಿನ ಬಾಗು ಎಲ್ಲಾ ಮುರಳಿ ಚೌಕಾಸಿ ನಡೆಸುವಾಗ, ನನಗೆ ಮಂಗಳೂರಿನ ನಮ್ಮ ಜಂಟಿ ಸೈಕಲ್ಲಿನ ದುರವಸ್ಥೆ ನೆನೆದು ನಗೆ ಬಾರದಿರಲಿಲ್ಲ!
ಅಂತಃದಹನ ಯಂತ್ರಗಳಲ್ಲಿ ಓಟಕ್ಕೆ ವಿವಿಧ ಹಂತದ ಶಕ್ತಿ ಅಥವಾ ಕಸುವನ್ನು ನೀಡುವ ಗೇರ್ (ಕಚ್ಚು ಗಾಲಿಗಳ ಸಂಯೋಜನೆ) ಸೈಕಲ್ಲುಗಳಲ್ಲಿ ಕೇವಲ ತುಳಿಯುವ ಶ್ರಮದ ಮಿತವ್ಯಯಕ್ಕಾಗಿ ಬಳಕೆಯಾಗುತ್ತದೆ. ಸೈಕಲ್ಲುಗಳಲ್ಲಿ ಪೆಡಲೆರಡರ ಕೇಂದ್ರದಲ್ಲಿ ತಿರುಗುವ ದೊಡ್ಡ ಕಚ್ಚು ಚಕ್ರವನ್ನು ಕ್ರ್ಯಾಂಕೆನ್ನುವುದೂ ಅದರಿಂದ ಸರಪಳಿಯಲ್ಲಿ ಹಿಂದಿನ ಚಕ್ರದ ಕೇಂದ್ರದಲ್ಲಿ ಶಕ್ತಿಯನ್ನು ಪಡೆಯುವ ಸಣ್ಣ ಕಚ್ಚು ಚಕ್ರವನ್ನು ಫ್ರೀವೀಲ್ ಎನ್ನುವುದೂ ಮತ್ತದರ ಕಾರುಭಾರು ನಿಮಗೆಲ್ಲ ತಿಳಿದ ವಿಷಯ; ನಾನು ವಿವರಿಸುವುದಿಲ್ಲ. ವಿಶಿಷ್ಟ ಗೇರುಗಳ ಸಂಯೋಜನಾ ಸೈಕಲ್ಲುಗಳಲ್ಲಿ ಈ ಒಂದು ಕ್ರ್ಯಾಂಕ್ ಮತ್ತು ಒಂದು ಫ್ರೀವೀಲ್ ಎನ್ನುವ ಲೆಕ್ಕಾಚಾರ ಬದಲಾಗುತ್ತದೆ. ಎರಡೂ ಕೇಂದ್ರಗಳಲ್ಲಿ ಹಲವು ಗಾತ್ರದ ಕಚ್ಚುಗಾಲಿಗಳ ಸಂಯುಕ್ತವನ್ನೇ ಅಳವಡಿಸಿರುತ್ತಾರೆ. ಸೈಕಲ್ ಓಡುತ್ತಿರುವಂತೆಯೇ ಸವಾರರ ಆಯ್ಕೆಯ ಮೇರೆಗೆ ಇರುವ ಒಂದೇ ಸರಪಳಿಯನ್ನು ಅವುಗಳೊಳಗೆ ಪಲ್ಲಟಿಸುವ ವ್ಯವಸ್ಥೆಯಿರುತ್ತದೆ. ಈ ಸಂಯುಕ್ತಗಳು ಕ್ರ್ಯಾಂಕಿಗೆ ಕಡಿಮೆ, ಫ್ರೀವೀಲಿಗೆ ಹೆಚ್ಚು ಇರುತ್ತವೆ. ಸೈಕಲ್ ಚಲಾವಣೆಯಲ್ಲಿ ಅವುಗಳ ಪರಿಣಾಮವನ್ನು ಲೆಕ್ಕಿಸುವುದಕ್ಕೆ ಸ್ಪೀಡ್ ಎನ್ನುತ್ತಾರೆ. ನನಗಾರಿಸಿದ ಸೈಕಲ್ಲಿನಲ್ಲಿ ಕ್ರ್ಯಾಂಕಿಗೆ ಮೂರೂ ಫ್ರೀವೀಲಿಗೆ ಏಳೂ ಕಚ್ಚುಗಾಲಿಗಳ ಸಂಯುಕ್ತವಿದೆ. ಇದು ಪರಿಣಾಮದಲ್ಲಿ ೨೧ ಸ್ಪೀಡಿನ ಅಥವಾ ಗೇರಿನ ಸೈಕಲ್ಲೆಂದೇ ಗುರುತಿಸಲ್ಪಡುತ್ತದೆ. ಇದರ ಶಕ್ತಿ ನಿರ್ವಹಣೆ (ಭಾರೀ ಗಾತ್ರದ ಮೋಪನ್ನು ಸರಪಳಿ ಪೋಣಿಸಿದ ಸರಣಿ ರಾಟೆಗಳ ಮೂಲಕ ಒಬ್ಬನೇ ನಿಧಾನಕ್ಕೆ, ಆದರೆ ಹಗುರವಾಗಿ ಎತ್ತಿದಂತೇ) ಮತ್ತು ಗಣಿತೀಯ ವಿವರಗಳು ನನ್ನ ಗ್ರಹಿಕೆಗೆ ಮೀರಿದ್ದಾದ್ದರಿಂದ ವಿವರಿಸ ಹೊರಟು ನಿಮ್ಮ ತಲೆ ತಿನ್ನುವುದಿಲ್ಲ! ಇದರ ಬ್ರೇಕುಗಳ ಸಾಮರ್ಥ್ಯ, ಚಕ್ರಗಳ ದಪ್ಪ, ಚೌಕಟ್ಟಿನ ತಾಕತ್ತು (ತೂಕ ಅಲ್ಲ! ಈ ನಮೂನೆಯ ಸೈಕಲ್ಲುಗಳನ್ನು ಹೊಸ ತೆರನ ಮಿಶ್ರಲೋಹಗಳಿಂದ ಮಾಡುವುದರಿಂದ ತೂಕದಲ್ಲಿ ತುಂಬ ಹಗುರವೆನಿಸಿದರೂ ದೃಢತೆಯಲ್ಲಿ ಅಪಾರ ಕ್ಷಮತೆಯಿರುತ್ತದೆ) ಇದರ ಯೋಗ್ಯತೆಗೆ ಹೆಚ್ಚಿನ ಮೆರುಗನ್ನು ಕೊಡುತ್ತದೆ.
ವೆಂಕಟೇಶ್ ಅವರ ಮಕ್ಕಳಿಬ್ಬರು – ಇನ್ನೂ ಪ್ರೌಢಶಾಲಾ ಹಂತದಲ್ಲಷ್ಟೆ ಇರುವವರು, ನಡುವೆ ಬಂದು ಸೇರಿಕೊಂಡ ಅವರಮ್ಮನೂ ವಿವಿಧ ಮಾದರಿಗಳನ್ನು ತೋರಿಸಿದರು, ನನ್ನ ಆಯ್ಕೆಗೆ ಒಗ್ಗಿದ್ದನ್ನು ಹುಡುಗರೇ ಹೊಸದಾಗಿ ರಟ್ಟಿನ ಪ್ಯಾಕಿನಿಂದಲೇ ಬಿಚ್ಚಿ ಪರಿಣಿತಿಯೊಡನೇ ಜೋಡಿಸತೊಡಗಿದರು. ಬೆಲೆ ಮತ್ತು ಬರಬಹುದಾದ ಹೊಸ ಮಾದರಿಗಳ ಮಾಹಿತಿ ಇತ್ಯಾದಿಗಳಿಗೆ ಮಾತ್ರ ಆಗಾಗ ಚರವಾಣಿ ಮೂಲಕ ತಂದೆಯನ್ನೋ ಮಳಿಗೆಯ ಹಿರಿಯ ತಂತ್ರಜ್ಞನನ್ನೋ ಸಹಜವಾಗಿ ಸಂಪರ್ಕಿಸಿ ಸಮಾಧಾನವನ್ನೂ ಕೊಟ್ಟರು. ಇಷ್ಟಾದರೂ ಮುರಳಿಗೆ, ನಮ್ಮ ಹೆಚ್ಚಿನ ಅವಕಾಶಗಳನ್ನು ನಿರಾಕರಿಸಿದಂತಾಗುವುದೋ ಎಂಬ ಸಂಕೋಚ. “ಜೋಡಿಸಕ್ಕೆ ಹೆಂಗೂ ಅರ್ಧ ಗಂಟೇ ಬೇಕಲ್ಲಾ. ಮಾಡಿಡಿ, ನಾಳೆ ನೋಡ್ತೀವಿ…” ಎಂದು ಪ್ರಕಟವಾಗಿ ಹೇಳುತ್ತಾ ನಮ್ಮನ್ನು ಆಪ್ತ ಮಾತುಗಳಲ್ಲಿ ಮೂರನೇ ಮಳಿಗೆಗೆ ಹೊರಡಿಸಿದರು.
ಮುರಳಿ ನನ್ನ ಅಶೋಕವನದ ಕುರಿತು ಕೇಳಿದ ಕೂಡಲೇ “ಅಲ್ಲಿ ಒಂದು ಸೈಕಲ್ ಬಿಡಣಾ” ಅಂದರು. ಒಮ್ಮೆಗೆ ನನ್ನ ಮನಸ್ಸಿನಲ್ಲಿ “ಏನು ಆನೆಗೋ ಹುಲಿರಾಯನಿಗೋ” ಎಂದು ಗೇಲಿಮಾತು ಮಾತು ಮೂಡಿತ್ತು. ಆದರೆ ವಾಸ್ತವದಲ್ಲಿ ಮುರಳಿ ಇಂಥದ್ದೇ ಬಹುವ್ಯಾಪ್ತಿಯ ಸೈಕಲ್ ಜಾಲವೊಂದನ್ನು ಹೆಣೆಯುತ್ತಲೇ ಇದ್ದಾರೆ. ಅದು ನಿಜವಾದ ಕಾಲಕ್ಕೆ ಬಿಸಿಲೆ ಹಳ್ಳಿಯ ಕರೀಗೌಡರು `ಸಾರ್ವಜನಿಕ ಸೈಕಲ್’ ಹಿಡಿದು ಕೂಡುರಸ್ತೆಗೆ ಹೋಗಿ, ಬಾಡಿಗೆ ಕೊಟ್ಟು, ಮೊಮ್ಮಗಳನ್ನು ನೋಡಲು ಹಾಸನಕ್ಕೆ ಬಸ್ಸು ಹಿಡಿಯಬಹುದು. ಬೆಳಿಗ್ಗೆ ರಂಗೇಗೌಡ್ರ ಬೈಕ್ ಬೆನ್ನೇರಿ ಡೂಟಿಗೆ ಬಂದ ಗ್ರಾಮಲೆಕ್ಕಿಗ ಮಧ್ಯಾಹ್ನಕ್ಕೆ ಅದೇ `ಸಾರ್ವಜನಿಕ ಸೈಕಲ್’ ಹಿಡಿದು ಹೆತ್ತೂರಿಗೆ ಮರಳಿ ಬಾಡಿಗೆ ಕೊಟ್ಟರಾಯ್ತು. ಸಂಜೆ ವಿರಾಮದ ಮೂಡ್ ಬಂದ ಉಮೇಶಣ್ಣ ಇನ್ನೂ ಮೂರು ಗೆಳೆಯರನ್ನು ಹೊರಡಿಸಿ, ನಾಲ್ಕು `ಸಾರ್ವಜನಿಕ ಸೈಕಲ್ಲೇ’ ಮೆಟ್ಟುತ್ತಾ ಹೊನ್ನಾಟ್ಳು ವಿರಾಮದ ಮನೆ ಸೇರಬಹುದು. ಅಲ್ಲಿಗೆ ಊಟವಾದ ಮೇಲೆ ಹರಟಲು ಬಂದ ಮಲ್ಲೇಶಪ್ಪ, ತಡವಾಯ್ತೆಂದು ಮರಳುವ ಅನುಕೂಲಕ್ಕೆ ಒಂದು ಸೈಕಲ್ ಹಿಡಿದು ಸವಾರಿಯೊಡನೆ ಅದನ್ನು ಮತ್ತೆ ಬಿಸಿಲೆ ಸೇರಿಸಬಹುದು. ಸೈಕಲ್ ಸವಾರಿ ಬರಿಯ ಮೋಜು ಅಥವಾ ವ್ಯಾಯಾಮವಾಗಬೇಕಿಲ್ಲ, ನಮ್ಮ ದೈನಂದಿನ ಓಡಾಟಗಳಿಗೂ ಸಹಜವಾಗಿ ಒಡ್ಡಿಕೊಳ್ಳುವ ಸೌಕರ್ಯ ಎಂದೇ ಮುರಳಿ ನಂಬಿದ್ದಾರೆ. ಅವರ ಓರ್ವ ಗೆಳೆಯನಂತೂ ಬೆಳಿಗ್ಗೆ ಸೈಕಲ್ಲೇರಿ ಬೆಂಗಳೂರು ಬಿಟ್ಟು ಮೈಸೂರಿನಲ್ಲಿ ಮಿತ್ರನ ಮದುವೆಯೋ ಕಛೇರಿ ಕಾರ್ಯವೋ ಸಾಂಗವಾಗಿ ಭಾಗವಹಿಸಿ, ಸಂಜೆಗೆ ಬೆಂಗಳೂರಿಗೇ ಮರಳುವುದು ಮಾಡುತ್ತಲೇ ಇರುತ್ತಾನಂತೆ! [ಇದನ್ನು ನೆನಪಿಸಿಕೊಂಡ ಮೇಲೆ, `ಬೆಂಗಳೂರು ಮಂಗಳೂರು ಒಂದು ಸೈಕಲ್ ಸಾಹಸಯಾನ’ ಎಂದೇನೇನೋ ಈ ಲೇಖನಕ್ಕೆ ಕೊಟ್ಟಿದ್ದ ತಲೆಬರಹವನ್ನು ನಾನು ಕೂಡಲೇ ಕತ್ತರಿಗೀಟು ಹಾಕಿ, ಅಡಿಯಲ್ಲೊಂದು ಮೊಳಕೆ ಕೊಟ್ಟು, `ಪ್ರವಾಸ (/ಪ್ರಯಾಸ?) ಕಥನ’ ಎಂದೇ ಪರಿಷ್ಕರಿಸಿಬಿಟ್ಟೆ!]
ಮಡಿವಾಳದಲ್ಲಿದ್ದ ಮೂರನೇ ಸೈಕಲ್ ಮಳಿಗೆ ತೋರಲು ಮುರಳಿ ನಮ್ಮ ಕಾರಿಗೆ ಮುಂದಿನಿಂದ ಸ್ವಂತ ಸೈಕಲ್ಲಿನಲ್ಲೇ ಸಮರ್ಥವಾಗಿ ಮಾರ್ಗದರ್ಶಿಸಿದರು. ಅದೊಂದು ಹಳಗಾಲದ ವೃತ್ತಿಪರ ಸರ್ವ ಸೈಕಲ್ ವ್ಯಾಪಾರ ಮಳಿಗೆ. ವೈವಿಧ್ಯ ಮೊದಲೆರಡಕ್ಕಿಂತಲೂ ಭಾರೀ ಹೆಚ್ಚೇ ಇತ್ತು. ಆದರೆ ಮುರಳಿ ಹೇಳಿದಂತೆ `ನನ್ನ ಸಂಕೀರ್ಣ’ ಅಗತ್ಯ’ಗಳಿಗೆ ಸ್ಪಂದಿಸುವ ಪರಿಣತಿ ಅಲ್ಲಿರಲಿಲ್ಲ. ಬೇಗನೆ ಹೊರಬಿದ್ದು, ಚದುರಿದೆವು. ಮಾರಣೇ ದಿನ ಬೆಳಿಗ್ಗೆ ನಾನು, ಅಭಯನಷ್ಟೇ ಹೋಗಿ ಹುಡುಗರಿಬ್ಬರು ಸರಿಯಾಗಿಯೇ ಜೋಡಿಸಿದ್ದ ಮೆರಿಡ ಸೈಕಲ್ಲನ್ನು ಕೊಂಡೆವು.
ಕೆಲ ಸಮಯ ಹಿಂದೆ, ಗೆಳೆಯ ಸಂದೀಪ ಅರೆ-ಮೆರಥಾನ್ ಅಭ್ಯಾಸ ಓಟವನ್ನು ಹೆದ್ದಾರಿಯ ಅಂಚಿನಲ್ಲಿ ಮಾಡುತ್ತಿದ್ದರು. ಬೆಳಿಗ್ಗೆ ನಿಜ ತೀರ್ಥದ ಬದಲು ಇನ್ನೊಂದನ್ನು ಕುಡಿದು ಹೊರಟ ಕಾರಿನವನೊಬ್ಬ ಈ ನಿಷ್ಪಾಪಿಯ ಮೇಲೇರುವವನಂತೆ ಬಂದ. ಸಂದೀಪ ಚರಂಡಿ ಹಾರಿ ಗೀರುಗಾಯವೂ ಇಲ್ಲದೆ ಬಚಾವಾದ; ಒಂದು ಪಾದ ಮಾತ್ರ ಉಳುಕಿತ್ತು. ಆ ಹದಿನೈದು ದಿನ “ಓಟವೂ ಇಲ್ಲ, ಸೈಕಲ್ಲೂ ಸಲ್ಲ” ಎಂದು ವೈದ್ಯರು ಕಟ್ಟಪ್ಪಣೆ ಮಾಡಿದಾಗ, ಅವರ ಗೇರಿನ ಸೈಕಲ್ಲು ನಾನು ಸ್ವಲ್ಪ ಬಳಸಿದ್ದೆ. ಆದರೆ ಮಂತ್ರೋಪದೇಶ ಅಥವಾ ಸಿದ್ಧಿ ಪಡೆದಿರಲಿಲ್ಲ.
ವೆಂಕಟೇಶ ಪುತ್ರರು ಕೊಟ್ಟ ಕಿರುಸೂಚನೆಗಳೊಡನೆ ಮನೆಯ ಐದು ಕಿಮೀ ಸವಾರಿಯಲ್ಲೇ ಹೋದೆ. ಸಂಜೆ, ಕನಕಪುರ ರಸ್ತೆ ಹಿಡಿದು ಮತ್ತೆ ಹದಿನೈದು ಕಿಮೀ ಸುತ್ತು ಹೊಡೆದೆ. ಮಾರಣೇ ದಿನ ಬೆಳಿಗ್ಗೆ ಬಿಡದಿಯ ಚಾ ಕುಡಿಯುವ ಚಪಲಿಗನಂತೆ ಮೂವತ್ನಾಲ್ಕು ಕಿಮೀ ಸುತ್ತು ನಿರಾತಂಕವಾಗಿಯೇ ಮುಗಿಸಿದೆ. ವಿಶೇಷ ಏರಿಳಿತಗಳಿಲ್ಲದ ನುಣುಪು ದಾರಿ, ಹಗುರ ಸೈಕಲ್ಲು, ಮೂರನೇ ದಿನದಲ್ಲೇ ಮುನ್ನೂರಕ್ಕೂ ಮಿಕ್ಕು ಕಿಮೀ ಉತ್ತರಿಸುವ ಉತ್ಸಾಹ, ಸುಮಾರು ಐದು ದಶಕ ಪ್ರಾಯದ ಸೈಕಲ್ ಅನುಭವಗಳೆಲ್ಲಾ ಹುರಿಗಟ್ಟಿ ಗೇರೋ ಶಕ್ತಿಯೋ ಎಂಬ ವಿಶೇಷ ವ್ಯತ್ಯಾಸ ಹೇಳಲಾಗದ ಸ್ಥಿತಿಯಲ್ಲಿ ಸಜ್ಜುಗೊಂಡಿದ್ದೆ.
ರಿಪೇರಿಗೊಂಡ ಶ್ಯಾಮರ ಸೈಕಲ್ಲನ್ನು ಬೆಂಗಳೂರಿನಲ್ಲೇ ಇದ್ದ ಅವರ ಅಳಿಯ ತನ್ನ ಮನೆ ಸೇರಿಸಿದ್ದ. ಶ್ಯಾಮ ಸೋಮವಾರ ರಾತ್ರಿ ಬಸ್ಸೇರಿ ಬೆಂಗಳೂರಿಸಿದರು. ಮಂಗಳವಾರ ವಿಶ್ರಾಂತಿ. ಬುಧವಾರ ಬೆಳಿಗ್ಗೆ ಐದೂವರೆಗೆ ನಮ್ಮ `ಮಹಾಯಾನ’ಕ್ಕೆ ಮುಹೂರ್ತ. ಕತ್ತಲೆಗೆ ಮುನ್ನ ಸಕಲೇಶಪುರ, ಮಾರಣೇ ದಿನ ಘಟ್ಟ ಇಳಿದು ಅವರವರ ಮನೆ ಎಂದು ಶ್ಯಾಮರ ಅಂದಾಜು. ಮೊದಲ ದಿನಕ್ಕೇ ಸುಮಾರು ಇನ್ನೂರಾ ಇಪ್ಪತ್ತೈದು ಕಿಮೀ, ಅದೂ ಹಾಸನದವರೆಗಿನ ಶುದ್ಧ ಬೆಂಗಾಡಿನಂಥಾ ದಾರಿ ಮತ್ತೆ ಯಾವುದೇ ಹಿತವಂದಿಗರ ಸಂಪರ್ಕವಿಲ್ಲದ ಸ್ಥಳಗಳು ಬೇಕೇಂತ ನಾನು ಅಪಸ್ವರ ತೆಗೆದೆ. ಶ್ಯಾಮ ಮೈಸೂರು ಮಡಿಕೇರಿ ದಾರಿ ಒಪ್ಪಿದರು. (ವಾಸ್ತವದಲ್ಲಿ ಹಾಸನದ ದಾರಿ ಅನುಸರಿಸಿದ್ದರೆ ನಾವು ಸುಮಾರು ಎಂಬತ್ತು ಕಿಮೀ ಸವಾರಿಯನ್ನೇ ಉಳಿತಾಯ ಮಾಡುತ್ತಿದ್ದೆವು.) ಆದರೆ ಮುನ್ನಾದಿನದ ಸಂಜೆ ತನಿಖೆಯಲ್ಲಿ ಅವರ ಸೈಕಲ್ಲೇನೋ ಸಣ್ಣ ಸಮಸ್ಯೆ ಕಾಣಿಸಿತು. ಬೆಂಗಳೂರಿನ ಸೈಕಲ್ ಉತ್ಸಾಹಿಗಳ ಅನುಕೂಲಕ್ಕಾಗಿ ಆದಿತ್ಯವಾರದಂದು ತೆರೆದಿರುವ ಎಲ್ಲಾ ಸೈಕಲ್ ಮಳಿಗೆಗಳು ಕಡ್ಡಾಯವಾಗಿ ಮಂಗಳವಾರ ವಾರದ ರಜಾ ಅನುಭವಿಸುತ್ತವೆ. ಬುಧವಾರ ಮಳಿಗೆ ತೆರೆದು, ರಿಪೇರಿ ಮುಗಿಸಿ, ನಾವು ಮೈಸೂರು ದಾರಿಗಿಳಿಯುವಾಗ ಗಂಟೆ ಹತ್ತೂಮುಕ್ಕಾಲು.
ಉತ್ತರಹಳ್ಳಿ ಕೆಂಗೇರಿ ರಸ್ತೆಯ ಆರೆನ್ನೆಸ್ ಐಟಿ ಎದುರು ನಾನು ಕಾದಿದ್ದೆ. ಅಭಯ ದೇವಕಿಯನ್ನು ಮಂಗಳೂರು ಬಸ್ಸು ಹತ್ತಿಸಿ ಬಂದ. ಜಯನಗರದಿಂದ ಶ್ಯಾಮ ಅಳಿಯನ ಸೈಕಲ್ಲನ್ನನುಸರಿಸಿ ಬಂದು ಸೇರಿಕೊಂಡರು. ಚಕಚಕ ಎರಡು ಚಿತ್ರ ತೆಗೆದು ನಾವು ಅವರಿಗೂ ಬೆಂಗಳೂರಿಗೂ ಬೆನ್ನು ಹಾಕಿ ಪೆಡಲೊತ್ತಿದೆವು. ತಲೆಗೆ ಸೈಕಲ್ ಸವಾರರ ಮಾದರಿಯದೇ ಶಿರಸ್ತ್ರಾಣ ಇಬ್ಬರಿಗೂ ಇತ್ತು. ಇದು ತುಂಬ ಹಗುರದ ಆದರೆ ಗಟ್ಟಿ ಹಾಗೂ ತಲೆಗೆ ಸ್ವಚ್ಛ ವಾತಾಯನ ಕಲ್ಪಿಸುವ ವಿಶಿಷ್ಟ ಮಾದರಿ. ಶ್ಯಾಮ ಬಿಗಿ ಚಡ್ಡಿ, ಬನಿಯನ್ನು, ಶೂ, ಕೈಗವುಸು, ತಂಪು ಕನ್ನಡಕ ಉಳಿದಂತೆ ತೆರೆ ಭಾಗಗಳಿಗೆಲ್ಲಾ ಬಿಸಿಲ-ಮುಲಾಮು ಬಳಿದುಕೊಂಡಿದ್ದರು. ನನ್ನದು ಮಾಮೂಲೀ ಪ್ಯಾಂಟ್, ದಗಳೆ ಜುಬ್ಬಾ, ಚಪ್ಪಲಿ ಮಾತ್ರ. ಉಳಿದಂತೆ ಇಬ್ಬರೂ ಸೈಕಲ್ಲಿನ ಕೆಳ ಬಾರಿಗೆ ದೊಡ್ಡ ನೀರಂಡೆ ಕಟ್ಟಿ, ಬೆನ್ನಿನ ಮೇಲೆ ತೀರಾ ಅಗತ್ಯದ ಸಾಮಾನು ತುಂಬಿದ ಚೀಲ ಹೊತ್ತಿದ್ದೆವು.
ಮೊದಲ ಸುಮಾರು ಹದಿನೇಳು ಕಿಮೀ ಅಥವಾ ಬಿಡದಿಯವರೆಗೆ ಅಭ್ಯಾಸದ ಓಟದಲ್ಲಾಗಲೇ ನಾನು ನೋಡಿದ್ದ ದಾರಿ. ಒಟ್ಟಾರೆ ಚತುಷ್ಪಥವೇ ಆದರೂ ನಮ್ಮ ಲೆಕ್ಕಕ್ಕದು ಏಕಮುಖ ಸಂಚಾರದ ಭರವಸೆ. ಸಾಮಾನ್ಯವಾಗಿ ಒಮ್ಮೆಗೆ ಎರಡು ವಾಹನಗಳು, ಸಲೀಸಾಗಿ ಸಮಭುಜವಾಗಿ ಚಲಿಸಬಹುದಾದಷ್ಟು ಅಗಲವಿದ್ದರೂ ಇದ್ದರೂ ಡಾಮರಿನ ಎಡ ಅಂಚಿನ ಬಿಳಿರೇಖೆ ಮೀರಬಾರದ ಜಾಗ್ರತೆ ನಾವು ವಹಿಸಲೇಬೇಕಿತ್ತು. ವೇಗದ ವಾಹನಗಳು ರಸ್ತೆ ವಿಭಾಜಕದ ಸಮೀಪ, ಉಳಿದವು ರಸ್ತೆಯಂಚಿನಲ್ಲಿ ಚಲಿಸಬೇಕು – ಇದು ನಿಯಮ. ಇದರಿಂದ ಹೆಚ್ಚಾಗಿ ಅನ್ಯರನ್ನು ಹಿಂದಿಕ್ಕಿ ಚಲಿಸುವ ವಾಹನಗಳು ಸಂದರ್ಭ ನೋಡಿಕೊಂಡು ಪಕ್ಷಾಂತರದಾಟ ನಡೆಸುತ್ತಿದ್ದುವು. ನಮ್ಮ ಗ್ರಹಚಾರಕ್ಕೆ ಅಂಥವೆರಡೂ ಘನವಾಹನಗಳಾಗಿ, ಆಗೀಗ ನಮ್ಮ ಪಕ್ಕಕ್ಕೆ ಬರುವುದಿತ್ತು. ಆಗೆಲ್ಲ ಶಬ್ದ ಅದಕ್ಕೂ ಮಿಗಿಲಾಗಿ ಹಾರ್ನಿನ ಬೈಗುಳ ಗ್ರಹಿಸಿ, ಅಂಚು ಎಷ್ಟೇ ಅವ್ಯವಸ್ಥಿತವಾಗಿರಲಿ, ನಾವೇ ಡಾಮರ್ ವಲಯವನ್ನೇ ಬಿಟ್ಟರೆ ಸರಿ. ಇಲ್ಲವಾದರೆ `೧೦೮’ ವಾಹನಕ್ಕೆ ಕರೆ ಹೋಗುವುದು ನಿಶ್ಚಿತವಿತ್ತು! ನಗರಗಳಲ್ಲಿ ಪಾದಚಾರಿಗಳನ್ನು ಉಪೇಕ್ಷಿಸಿದಷ್ಟೇ ಸಹಜವಾಗಿ ಹೆದ್ದಾರಿಗಳು ಬರಿಯ ಸೈಕಲ್ಲೇನು, ಎಲ್ಲಾ ನಿಧಾನಗತಿಯ `ಕ್ಷುದ್ರ’ ವಾಹನಗಳನ್ನೂ ಒರೆಸಿಹಾಕುವಲ್ಲಿ ನಿಸ್ಸಂದೇಹವಾಗಿ ಸಜ್ಜುಗೊಂಡಿವೆ. ಬಿಳಿ ಪಟ್ಟೆಯನ್ನು ನಿಷ್ಠೆಯಿಂದಲೇ ಅನುಸರಿಸುತ್ತಾ ಒಮ್ಮೊಮ್ಮೆ ನನಗೆ ಇದೂ ಒಂದು ಲೆಕ್ಕದ ಅಸಿಧಾರಾವ್ರತ ಎಂದನ್ನಿಸಿದ್ದು ಸುಳ್ಳಲ್ಲ!

ಇತರ ವಾಹನಗಳಿಗೆ ಮಾತ್ರವಲ್ಲ ನಡಿಗೆಗೇ ಆದರೂ ಸಮತಟ್ಟಿನ ನೆಲವೆನ್ನುವಂತೇ ತೋರಿದರೂ ನಮ್ಮ ತುಳಿತವಿದ್ದಷ್ಟು ಪ್ರಗತಿ ಚುರುಕು ಎನ್ನುವ ಭಾವ ಮೂಡಿಸುತ್ತಿತ್ತು. ಯಾಂತ್ರಿಕ ಪೆಡಲ್ ಸುತ್ತಾಟ ಸಾಲದೆನ್ನುವಂತೆ ನಸು ಏರು ಬರುತ್ತಿತ್ತು; ಕಾಲಿನ ಕಸುವು ಹೆಚ್ಚು ಬಳಸುತ್ತಿದ್ದೆ. `ನೆತ್ತಿ’ ಬಂತೆನ್ನಿಸಿದಾಗ `ಹಾ. .’ಯೆನ್ನಿಸಿ, ಮೆಟ್ಟುವುದು ನಿಲ್ಲಿಸಿ, ಎರಡು ಗಳಿಗೆ ಸೊಂಟ ನೆಟ್ಟಗೆ ಮಾಡಿ, ತೀಡುವ ಗಾಳಿಯ ಸಾಂತ್ವನ ಪಡೆಯುವಷ್ಟರಲ್ಲಿ, ಓಟ ನಿಧಾನಿಸಿದ ಭಾವ; ಮತ್ತೆ ತುಳಿ, ತುಳಿ. ಬಿಸಿಲು ರಣಗುಡುತ್ತಿತ್ತು. ನಾವು ಹಳಗಾಲದ ಸಾಲುಮರಗಳ ನೆನಪಿನಲ್ಲಷ್ಟೇ ತಂಪು ಕಾಣಬೇಕಿತ್ತು. ಒಂದೋ ಎರಡೋ ಗಂಟೆಯನಂತರ ತುಸು ನಿಂತು, ಕೈಕಾಲು ಕೊಡಹಿ, ನೀರು ಕುಡಿಯೋಣವೆಂದರೆ ಸಿಕ್ಕುತ್ತಿದ್ದದ್ದು ಪೆಟ್ರೋಲ್ ಬಂಕ್ ಅಥವಾ ಜೋಪಡಾ ಧಾಬಾ.
ಪುಟ್ಟ ಹಳ್ಳಿ, ಪೇಟೆ, ಡಾಮರಿನ ವಿಪರೀತಗಳು ಒಂದೂ ಬಿಡದೆ ನಮ್ಮ ಪ್ರಗತಿಯನ್ನು ಪರೀಕ್ಷಿಸುತ್ತಲೇ ಇರುತ್ತವೆ. ಎಲ್ಲೋ ಮಣ್ಣದಾರಿಯಿಂದ ಎದ್ದ ಬೈಕೋ ಟೆಂಪೊವೋ ರಸ್ತೆ ವಿಭಾಜಕದ ಮುಂದಿನ ಎಡೆ ಹುಡುಕಿಕೊಂಡು ಎದುರಾಗುವುದುಂಟು. ಜನ, ಶಿಸ್ತಿಲ್ಲದೆ ವಿರಮಿಸಿದ ವಾಹನಗಳೆಲ್ಲ ನಮ್ಮನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಅಲ್ಲಿಲ್ಲಿ ರಸ್ತೆಗೆ ನುಗ್ಗಿದ ಬದಿಯ ಮಣ್ಣು, ಮರಳು, ಕಲ್ಲು ಮತ್ತೆ ಅಯಾಚಿತವಾಗಿ ಉದ್ಭವಿಸಿದ ಹೊಂಡ ಉಬ್ಬು, ಉದ್ದೇಶಪೂರ್ವಕವಾಗಿಯೇ ಮಾಡಿದ ಆದರೆ ಒಂದೂ ವೈಜ್ಞಾನಿಕ ಆಯ ಅಳತೆ (ಅಥವಾ ಬಣ್ಣವನ್ನೂ ಸೇರಿಸಬಹುದು. ಇದು ಮೋಟಾರು ವಾಹನಗಳಿಗೆ ಮಾಡಿದಷ್ಟು ದ್ರೋಹವನ್ನು ನಿಧಾನಿಗಳಾದ ನಮಗೆ ಮಾಡುವಲ್ಲಿ ಸೋಲುತ್ತವೆ!) ಇಲ್ಲದ ವೇಗ ನಿರೋಧೀ ತರಹೇವಾರಿ ಡುಬ್ಬಗಳೆಲ್ಲಾ ನಮ್ಮ ವೇಗವನ್ನು ಕದಿಯುವುದರೊಡನೆ ನಮ್ಮ ಪ್ರಕೃತಿದತ್ತ `ಶಾಕ್ ಅಬ್ಸಾರ್ಬರ್’ಗಳನ್ನು (ಗೆಳೆಯ ಗಡ್ಡದುಪಾಧ್ಯಾಯರಿಗೋಸ್ಕರ – ಆಘಾತ ನಿರೋಧಕಗಳು, ಅಥವಾ ಪ್ರಷ್ಠದ್ವಯಗಳು, ಸರಳವಾಗಿ ಹೇಳುವುದಾದರೆ ಕುಂಡಿಗಳನ್ನು) ನಿರಂತರ ಕಾಡುತ್ತಲೇ ಇದ್ದುವು. ಅವಕಾಶ ಸಿಕ್ಕಲ್ಲೆಲ್ಲಾ ಪೆಡಲುಗಳ ಮೇಲೆ ನಿಂತೋ ಸೀಟಿನ ಮೇಲೇ ಒಂದು ಪಕ್ಕಕ್ಕೆ ಜಾರಿ ತುಸು ತೊಡೆಯ ಮೇಲೇ ವಿರಾಜಿಸಿದಾಗ ನಮ್ಮ ಚೈತನ್ಯ ಇಮ್ಮಡಿಸುತ್ತಿತ್ತು.
ಶ್ಯಾಮರಿಗೆ ತನ್ನ ಸೈಕಲ್ ಸವಾರಿ ಪ್ರಮಾಣಿಸಲು ವಿಶೇಷ `ಹೊರೆ’ಗಳೇನೂ ಇರಲಿಲ್ಲ; ನಾನು ಹೊರಡದಿದ್ದರೂ ಅವರು ಏಕಾಂಗಿಯಾಗಿ ಬರುವವರೇ. ನಾನು ಪ್ರಾಯದಲ್ಲಿ ಹಿರಿಯ, ಒಟ್ಟಾರೆ ಸಾಹಸೀ ಚಟುವಟಿಕೆಗಳ ಅನುಭವದ ಹಿನ್ನೆಲೆಯಲ್ಲೂ ದೊಡ್ಡವ ಮತ್ತು ಶ್ಯಾಮ ಎಷ್ಟೇ ಮುಕ್ತವಾಗಿದ್ದರೂ ನನ್ನಷ್ಟಕ್ಕೇ `ಈ ಸವಾರಿಯಲ್ಲಿ ಸಮ-ಶಕ್ತ’ ಎಂದು ಪ್ರಮಾಣಿಸಬೇಕೆನ್ನುವ ಒಳತುಡಿತ (ಒಣಜಂಭ ಎನ್ನಿ ಬೇಕಾದರೆ!) ಹೊಂದಿದವ. ನಮ್ಮಿಬ್ಬರ ಒಡನಾಟವೇನಿದ್ದರೂ ಅಂಗಡಿಯೊಳಗೆ ಮತ್ತು ಔಪಚಾರಿಕ ಭೇಟಿಗಳಲ್ಲಷ್ಟೇ ಇದ್ದುದರಿಂದ ಮೊದಮೊದಲು ಪರಸ್ಪರ ತುಸು ಹೆಚ್ಚೇ ಕಾಳಜಿವಹಿಸಿದೆವು. ನಾನವರನ್ನು ಹಿಂಬಾಲಿಸುತ್ತಿದ್ದೆ. ಅಂತರ ಹೆಚ್ಚಿದಾಗ ಅವರು ತಿರುತಿರುಗಿ ನೋಡಲು ಪ್ರಯತ್ನಿಸುತ್ತಿದ್ದರು. ವಿಪರೀತ ವಾಹನಸಮ್ಮರ್ದದ ನಡುವೆ ಹೀಗೆ ಮುಂದಿನ ರಸ್ತೆಯ ಗಮನ ತಪ್ಪಿಸುವುದು ಸರಿಯಲ್ಲ. ನಾನು ಉಸಿರು ಕಟ್ಟಿ ವೇಗ ವರ್ಧಿಸಿಕೊಂಡು ಮುಂದೆ ಹೋಗುತ್ತಿದ್ದೆ. ಸಂಶಯಿಸುವುದು ಈಗ ನನ್ನ ಪಾಳಿ: ನಾನು ಹೆಚ್ಚುಹೋದೆನೋ ಶ್ಯಾಮರಿಗೇನಾದರೂ ತೊಂದರೆಯಾಯ್ತೋ ಇತ್ಯಾದಿ.
ನಾನು ಯಾವುದೇ ಪ್ರವಾಸದಲ್ಲಿ ಚಾಲನೆಯ ಹೊಣೆಯಲ್ಲಿಲ್ಲದಿದ್ದರೂ (ಸಾಮಾನ್ಯವಾಗಿ ನಿದ್ರೆ ಮಾಡುವವನಲ್ಲ, ಬರಿಯ ಯಾಂತ್ರಿಕ ಮಾರ್ಗಕ್ರಮಣವನ್ನು ಇಷ್ಟಪಟ್ಟವನಲ್ಲ.) ದಾರಿ ಮತ್ತು ಕನಿಷ್ಥ ಆಚೀಚಿನ ಆಗುಹೋಗುಗಳಿಗೆ ಸ್ಪಂದಿಸುವ ಸ್ವಭಾವದವನು. ಬಿಡದಿ ಪೇಟೆಯಲ್ಲಿ ಕೆಲವು ದಶಕಗಳ ಹಿಂದೆಯೇ ಹೆದ್ದಾರಿಗಡ್ಡಲಾಗಿ ಪಾದಚಾರಿಗಳಿಗಾಗಿ ಮೇಲ್ಸೇತುವೆ ಮಾಡಿದ್ದು, ಜನ ಅದರೆತ್ತರಕ್ಕೇರದೇ ಒಳದಾರಿ ಹುಡುಕಿದ್ದನ್ನು ಒಂದು ಸಾಮಾಜಿಕ ಸಮಸ್ಯೆಯಾಗಿಯೇ ಗಮನಿಸಿದ್ದೆ. ಈ ಬಾರಿ ಪೇಟೆಯ ಹಿನ್ನೆಲೆಯಲ್ಲಿನ ಭಾರೀ ಕಲ್ಲಿನ ಗುಡ್ಡೆ ನಾಗರಿಕ ಉಪಯೋಗಗಳಿಗಾಗಿ ಹೆಚ್ಚು ಕಡಿಮೆ ಅರೆವಾಸಿ ಇಲ್ಲವೇ ಆದ ಚಿತ್ರ ಕಣ್ಸೆಳೆಯಿತು. ವಿಖ್ಯಾತ ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್ಟರ ಮರಿಮಗ – ಸೇಡಿಯಾಪು ಶ್ಯಾಮಸುಂದರ ಭಟ್ಟ ಬಿಡದಿಯಲ್ಲೇ ನೆಲೆಸಿ, ಸುಂದರ ಮೂರ್ತಿ ಶಿಲ್ಪಿಯಾಗಿ ವಿಕಸಿಸಿದ್ದೂ ನೆನಪಿಗೆ ಬಾರದಿರಲಿಲ್ಲ. ಮುಂದುವರಿದಂತೆ ರಾಮನಗರದ ಬಂಡೆಗಳು ದಿಗಂತದಲ್ಲಿ ಮೊಳೆತವು. ಒಂದೇ ಉಸಿರಿಗೆ ದೀರ್ಘ ಓಟದ ಗುರಿಯಲ್ಲದಿದ್ದರೆ ಒಂದಷ್ಟು ಸುತ್ತಿ, ಮುಂದುವರಿಯಬಹುದಿತ್ತು ಎಂದನ್ನಿಸಿತು. ಏನಲ್ಲದಿದ್ದರೂ ದಾರಿಯಲ್ಲೇ ಆಯಕಟ್ಟಿನ ಜಾಗದಲ್ಲಿ ನಿಂತು ನಮ್ಮ `ಸಾಹಸಯಾತ್ರೆ’ಯ ಒಂದೆರಡು ಸ್ಮರಣೀಯ ಚಿತ್ರಗಳನ್ನಾದರೂ ತೆಗೆದುಕೊಳ್ಳಬೇಕೆಂದು ಅಂದಾಜಿಸಿದ್ದೆ. ಆದರೆ ಆ ವಲಯದಲ್ಲಿ ಶ್ಯಾಮ ನನ್ನ ಕಣ್ಣಿಗೆಟಕದಷ್ಟು ಮುಂದುವರಿದಿದ್ದುದರಿಂದ ಖಾಲಿ ಬಂಡೆಗಳ ಒಂದೆರಡು ದೃಶ್ಯ ಅವಸರವಸರವಾಗಿ ಹಿಡಿಯುವುದಷ್ಟೇ ಸಾಧ್ಯವಾಯ್ತು. ದೊಡ್ಡಾಲ, ಗೊಮ್ಮಟಗಿರಿ, ನಾಗೇಗೌಡರ ಜಾನಪದಲೋಕ, ಕೊಕ್ಕರೆ ಬೆಳ್ಳೂರು, ಪಾಂಡವಪುರದ ಕುಂತಿಬೆಟ್ಟ, ಕರಿಘಟ್ಟದ ಬಂಡೆ, ನದೀ ತೀರ, ಶ್ರೀರಂಗಪಟ್ಟಣದ ಐತಿಹಾಸಿಕ ರಚನೆಗಳು, ರಂಗನತಿಟ್ಟು ಎಂದಿತ್ಯಾದಿ ಮೈಸೂರಿನವರೆಗೂ ನನ್ನ ಅರೆಬರೆ ಭೇಟಿಯ, ಒಡನಾಟದ ವಿಶೇಷಗಳ ಪಟ್ಟಿ ತಲೆಯೊಳಗೆ ಸುಳಿಯುತ್ತಲೇ ಇತ್ತು. ಆದರೆ ದಿನದ ಕನಿಷ್ಠ ಗುರಿಯನ್ನು ನಾವು ಮೈಸೂರಾಗಿಸಿಕೊಂಡಿದ್ದೆವು. ಹಗಲ ಬೆಳಕಿನ ಸುಮಾರು ಎಂಟುಗಂಟೆಯ ಅವಧಿಯಲ್ಲಿ ನೂರಾಮೂವತ್ತೈದು ಕಿಮೀ ಅಂದರೆ ಗಂಟೆಗೆ ಸರಾಸರಿಯಲ್ಲಿ ನಾವು ಹದಿನೇಳು ಕಿಮೀ ಕ್ರಮಿಸಲೇ ಬೇಕಿತ್ತು. ಹಿಂದಿನೆರಡು ದಿನದ ಅಭ್ಯಾಸದೋಟದಲ್ಲಿ ನನ್ನ ಸಾಧನೆಯಾದರೋ ಹದಿನೈದು ಕಿಮೀ ಮೀರಿರಲಿಲ್ಲ. ಇನ್ನು ಸ್ಥಳ ವೀಕ್ಷಣೆಯಿರಲಿ, ಹೆಚ್ಚು ವಿಶ್ರಾಂತಿ ಬಯಸಿದರೂ ಶ್ಯಾಮರ ಲೆಕ್ಕಕ್ಕೆ ಖೋತಾ ತಂದೀತೆಂಬ ಭಾವದಲ್ಲಿ ಮಂತ್ರ ಒಂದೇ ತುಳಿ, ತುಳಿ ಮತ್ತೂ ತುಳಿ!
ಹಳಗಾಲದಲ್ಲಿ ಚೆನ್ನಪಟ್ಟಣಕ್ಕೆ ಮರದ ಗೊಂಬೆಗಳು, ಮಂಡ್ಯಕ್ಕೆ ಸಕ್ಕರೆ ಕಾರ್ಖಾನೆ, ರಾಮನಗರಕ್ಕೆ ಗಬ್ಬಾರ್ ಖಾನ್ ಅಥವಾ ಶೋಲೆ ಸಿನಿಮಾ, ಮದ್ದೂರಿಗೆ ವಡೆ ಇತ್ಯಾದಿ ಸ್ಥಳನಾಮದ ಭಾಗವಾಗಿಯೇ ಸೇರಿಬರುತ್ತಿದ್ದುವು. ಆದರೆ ಇಂದು ಅಂಥ ವಿಶೇಷಗಳೆಲ್ಲಾ ವಾಣಿಜ್ಯೀಕರಣದ ಸುಳಿಯಲ್ಲಿ ಬಿದ್ದು ಒಂದೋ ಸ್ಥಳದ ಮಿತಿಯನ್ನು ಮೀರಿದ್ದುವು ಅಥವಾ ಆಕರ್ಷಣೆಯನ್ನೇ ಕಳೆದುಕೊಂಡಿದ್ದುವು. ಚತುಷ್ಪಥದಲ್ಲಿ ಚಿಮ್ಮುವ ಅಸಂಖ್ಯ ಬೈಕು, ಕಾರುಗಳ `ಅತಿಕುಲವಂತಿಕೆಗೆ’ ಸರಿಯಾಗಿ ಜಲವಿಹಾರದ ವಂಡರ್ಲಾ, ರಿಸಾರ್ಟುಗಳು, ಭಾರೀ ಬಾರುಗಳು ಶೋಭಿಸುತ್ತಿವೆ. ಹಾಗೇ ಉದ್ಭವಿಸಿದರೂ ಸಸ್ಯಾಹಾರದ ಶುಚಿ, ರುಚಿಗಳಿಗೆ ಖ್ಯಾತವಾದ ಚೆನ್ನಪಟ್ಟಣದ ಬಳಿಯ ಅಡಿಗಾಸ್ ಅಥವಾ ಕಾಮತ್ಸ್ ಹೋಟೆಲನ್ನು ನಾವು ಮಧ್ಯಾಹ್ನದ ಹೊಟ್ಟೆಪಾಡಿಗೆ ಮಾನಸಿಕವಾಗಿ ನಿಗದಿಸಿಕೊಂಡೇ ಹೊರಟಿದ್ದೆವು. ಬಳಲಿಕೆಯಲ್ಲಿ ಮೀನಖಂಡ ಸೆಟೆಯದಂತೆ ನೀರು ಕುಡಿಯುವಲ್ಲಿ ಲವಣಯುಕ್ತ ಎಲೆಕ್ಟ್ರಾಲೈಟ್ ಪುಡಿ ಬೆರೆಸಿಕೊಳ್ಳುತ್ತಿದ್ದೆವು. ಹೊತ್ತ ನೀರೇ ಸಾಲದಾದಾಗ ಒಂದೆಡೆ ಢಾಬಾ ಒಂದರ ತೋರಿಕೆಗೆ ಶುದ್ಧ ನೀರನ್ನೇ ಕಟವಾಯಿಯಲ್ಲಿ ತುಳುಕುವಷ್ಟೂ ಎರೆದುಕೊಂಡಿದ್ದೆ. ಆದರೆ ಗಂಟೆ ಎರಡಾಗುತ್ತಿದ್ದಂತೆ ಉದ್ದೇಶಿತ ಹೋಟೆಲ್ ಸಿಗದೆ ಚೆನ್ನಪಟ್ಟಣ ಬಂದಾಗ ಅವ್ಯಕ್ತ ಹಸಿವು, ಬಳಲಿಕೆಗಳ ಮೊತ್ತಕ್ಕೆ ದಾರಿ ಬದಿಯ ಬೊಂಡದ (ಎಳನೀರು) ನೀರು, ಕಾಯಿ ಗಿಡಿದೆವು. ಶ್ಯಾಮ ಇನ್ನೊಂದೇ ಏರಿಸುವ ಉತ್ಸಾಹದಲ್ಲಿದ್ದರು. ಆದರೆ ನನಗ್ಯಾಕೋ ಹೊಟ್ಟೆ ತಳಮಳಿಸತೊಡಗಿತು. ಮುಂದುವರಿದಂತೆ, ಅದು ಆತಂಕಕಾರಿಯಾಗುವ ಮೊದಲು `ಕಾಮತ್ಸ್ ಉಪಚಾರ’ ತಲಪಿದ್ದೆವು.
ನಾನು ನಿರೀಕ್ಷೆ ಮೀರಿ ಬಳಲಿದ್ದೆ. ಫೂರ್ಣ ಊಟ ಹೊಡೆಯುವ ಮನಸ್ಸು ಇಬ್ಬರಿಗೂ ಇರಲಿಲ್ಲ. ಜೋಳದ ರೊಟ್ಟಿ, ಮಜ್ಜಿಗೆನೀರಲ್ಲಷ್ಟೇ ಸುಧಾರಿಸಿದರೂ ನನ್ನ ಹೊಟ್ಟೆಯ ತಳಮಳ ಯಾಕೋ ಮುಂದುವರಿದೇ ಇತ್ತು. ಸುಮಾರು ಒಂದು ಗಂಟೆಯ ಬಿಡುವು ಚೇತೋಹಾರಿಯೇ ಆಯ್ತು. ಇಲ್ಲಿ ಶ್ಯಾಮ ಬಹಳ ಸಂಕೋಚದಲ್ಲೇ ನನ್ನ ಬಳಲಿಕೆಯ ಕಾರಣವನ್ನು ನನ್ನ ಸವಾರಿ ಶೈಲಿಗೇ ಅನ್ವಯಿಸಿ ವಿಮರ್ಶಿಸಿದರು. ಹೌದು, ನಾನು ಹೊಸಗಾಲದ ಸೈಕಲ್ ಏರಿದ್ದರೂ ಅರೆ ಜ್ಞಾನದಲ್ಲಿ `ಪರ್ವತಾರೋಹಿ’ಯ ಸೊಕ್ಕಿನಲ್ಲೇ ಬಳಸಿಕೊಂಡು ಬಂದಿದ್ದೆ. ಗೇರಿನ ಸದುಪಯೋಗ ಪಡೆದು, ಶ್ರಮ ಉಳಿಸುವ ಹಿಕ್ಮತ್ತು ನನಗೆ ಗೊತ್ತಿರಲಿಲ್ಲ, ಸಿಕ್ಕವರೆಲ್ಲ ನನ್ನ ಪ್ರಾಯ (ಮತ್ತು ಅನ್ಯ ಅನುಭವ) ನೋಡಿ ಹೇಳಿರಲೂ ಇಲ್ಲ! ಕುರುಕ್ಷೇತ್ರದಲ್ಲಿ ಯೋಧಭಾವವನ್ನು ನೀಲಮೇಘಶ್ಯಾಮ ಅರ್ಜುನನಿಗೆ ಕೊಟ್ಟಂತೆ, ಕಾಮತ್ಸ್ ಸತ್ಕಾರಿನಲ್ಲಿ ಪಾರೆ ಶ್ಯಾಮ ನನಗೆ ಗೇರ್ ಮಹಾತ್ಮ್ಯವನ್ನು ಉಪದೇಶಿಸಿದರು! ಬಹುಶಃ ಇದಲ್ಲದಿದ್ದರೆ ಅಂದು ನನ್ನ ಸವಾರಿ ಉದ್ದೇಶಿತ ಲಕ್ಷ್ಯಕ್ಕೂ ಮೊದಲೇ ನಿಲ್ಲುತ್ತಿತ್ತು ಖಾತ್ರಿ!!
ಅಪರಾಹ್ನ ಮೂರು ಗಂಟೆಯ ಸುಮಾರಿಗೆ ನಾವು ದಾರಿಗಿಳಿದೆವು. ನಮಗೆ ಅತ್ತ ಬೆಂಗಳೂರಿನಲ್ಲಿ ಮಳೆ, ಮೈಸೂರಿನಲ್ಲಿ ದಟ್ಟ ಮೋಡಗತ್ತಲೆಯ ಸುದ್ಧಿ ಸಿಕ್ಕಿತು. ಮಳೆಯ ಪೂರ್ಣ ತಣ್ಪನ್ನೆ ನಾವು ಬಯಸಿದರೂ ಉರಿಬಿಸಿಲ ಕಾಟ ಕಡಿಮೆಯಾಗುವಂತೆ ಮೋಡಗಳು ನಮಗೆ ಛತ್ರಿ ಹಿಡಿದು ಪ್ರೋತ್ಸಾಹಿಸಿದುವು. ಆದರೂ ನಮ್ಮ ದಿನದ ಕನಿಷ್ಠ ಲಕ್ಷ್ಯ (ಮೈಸೂರು) ಸಾಧನೆ ದೂರದ ಮಾತಾಗಿಯೇ ಕಾಣತೊಡಗಿತು. ಸಂಜೆ ಐದು ಗಂಟೆಗೆ ಮುನ್ನ ಮೈಸೂರು ಅಂದುಕೊಂಡವರು, ಕತ್ತಲೆಗೆ ಮುನ್ನ, ಎಂದೇ ಅಘೋಷಿತ ತಿದ್ದುಪಡಿ ಮಾಡಿಕೊಂಡು ಪೆಡಲಿದೆವು. ಈ ವಿಳಂಬ ಅನಿವಾರ್ಯ ಎಂದು ಒಪ್ಪಿಕೊಂಡ ಹಂತದಲ್ಲಿ, ಅದುವರೆಗೆ ನನ್ನೊಡನೆ ಹೇಳಿಕೊಳ್ಳುವಂಥ ದೊಡ್ಡ ವಿಚಾರವೇನೂ ಅಲ್ಲವೆಂದು ಬಿಟ್ಟದ್ದನ್ನು ಶ್ಯಾಮ ಹೇಳಿದರು. “ಶ್ರೀರಂಗಪಟ್ಟಣದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ನಾದಿನಿ – ಅಶ್ವಿನಿ ಭಟ್, ಇದ್ದಾಳೆ. ನಾನು ಸ್ವಲ್ಪ ಮುಂದೆ ಹೋಗಿ (ನಿಮ್ಮ ಆಮೆ ವೇಗ ಮೀರಿ ಎಂದು ಹೇಳಿ ನನ್ನ ಮರ್ಯಾದೆ ತೆಗೆಯಲಿಲ್ಲ, ಪುಣ್ಯಾತ್ಮ), ಆಕೆಯನ್ನು ಮಾತಾಡಿಸಿ, ನಿಮಗೆ ಸಿಕ್ತೇನೆ.” ಅಭ್ಯಾಸದ ಕೊರತೆಯಲ್ಲಿ ನಾನು ತುಸು ಬಳಲಿದ್ದರೂ ಬೇರೇನೂ ಸಮಸ್ಯೆ ಇರಲಿಲ್ಲವಾದ್ದರಿಂದ ಧಾರಾಳ ಒಪ್ಪಿದೆ. ಮಿನಿಟು ಎರಡು ಕಳೆಯುವುದರೊಳಗೆ ಆ ಉದ್ದೋ ಉದ್ದ ಕಾಣುವ ದಾರಿಯಲ್ಲೂ ಶ್ಯಾಮ ಮರೆಯಾದರು.
ಮಂಡ್ಯ ಪೇಟೆಯುದ್ದಕ್ಕೆ ಹೆದ್ದಾರಿ ಹೋಗಿ ಸಂತೆಪೇಟೆಯೇ ಆಗಿತ್ತು. ಒಂದೋ ಎರಡೋ ಕಿಮೀ ಉದ್ದಕ್ಕೆ ಮಾರ್ಗಕ್ರಮಣದ ಚಿಂತೆಯೇ ನನ್ನಲ್ಲುಳಿಯದಂತೆ ಆ ಗೊಂದಲದ ಹರಿವಿನಲ್ಲಿ ತೇಲಿಹೋದೆ! ಸಾಲದ್ದಕ್ಕೆ ಈ ಬೇಸಗೆ ರಜಾಕಾಲದಲ್ಲೂ ಅದ್ಯಾವುದೋ ಶಾಲಾ ಮಕ್ಕಳ ಸೈಕಲ್ ಹಿಂಡೂ ಸಿಕ್ಕಿತು. ಒಂಟಿ, ಜಂಟಿ ಸವಾರರೆಲ್ಲ ನನ್ನ ಹಿಂದು ಮುಂದು ಸುಳಿಯುತ್ತ “ಏ ತಾತಾ ನೋಡೋ, ಬೆಂಗ್ಳೂರು – ಮಂಗ್ಳೂರಂತೆ” ಎಂದು ಉದ್ಗರಿಸುತ್ತಾ ಹೆಬ್ಬೆರಳು ಚಿಮ್ಮುವುದೇನು, ಶುಭಾಶಯ ಕೋರುವುದೇನು. ಅಲ್ಲೇ ಒಂದು ಸಿಗ್ನಲ್ ಕಾದು ನಾನು ನಿಂತಿದ್ದೆ. ಪುಟ್ಟಪಥದಲ್ಲಿ ಯಾರೋ ನನ್ನತ್ತ ಓಡಿ ಬಂದು, ಮುಖ ಇಣುಕಿ ನೋಡಿ “ಅರೇ ಅಶೋಕವರ್ಧನ್” ಎನ್ನಬೇಕೇ; ನೋಡಿದರೆ ಡಾ| ವಾಸು. ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಕನ್ನಡದಲ್ಲಿ ಶಿಕ್ಷಣದ ಮಹತ್ವವನ್ನು ಪ್ರಚುರಿಸಲು ಒಮ್ಮೆ, (ನೇತ್ರಾವತಿ ನಿಜಕ್ಕೂ ತಿರುಗಿದ್ದೇ ಆದರೆ ಫಲಾನುಭವಿಗಳ ಪಟ್ಟಿಯಲ್ಲಿರುವ ಊರು – ಕೋಲಾದರದವರೇ ಆಗಿಯೂ) ನದೀ ತಿರುಗಿಸುವ ಮೂರ್ಖತನದ ವಿರುದ್ಧ ಆಂದೋಲನದಲ್ಲೊಮ್ಮೆ ಮಾತಾಡಲು ಸಿಕ್ಕಿದ್ದು ನೆನಪಿಗೆ ಬಂತು. ಅವರು ನಮ್ಮ ಸೈಕಲ್ ಯಾತ್ರೆ ಕೇಳಿದ ಮೇಲಂತೂ ನನಗೆ ಅಲ್ಲೇ ಪುಟ್ಟಪಥದಲ್ಲಿ ಸಮ್ಮಾನ ಸಭೆ ಏರ್ಪಡಿಸಿಬಿಡುತ್ತಾರೋ ಎಂದು ಹೆದರುವಷ್ಟು ಸಂಭ್ರಮಿಸಿಬಿಟ್ಟರು. (ನಾನು ಒಪ್ಪಿದ್ದರೆ ಕಾಫಿ, ಎಳನೀರು ಅಭಿಷೇಕ ಮಾಡಲಿದ್ದರು. ಪಕ್ಕದಲ್ಲಿದ್ದ ಮಿತ್ರನಿಗೆ ಉತ್ರೇಕ್ಷಿತ ಪರಿಚಯ ಮಾಡಿದರು, ಚರವಾಣಿಸಿ ಹೆಂಡತಿಗೆ `ಅದ್ಭುತ ಕಾಣಿಸು’ತ್ತೇನೆಂದು ಆಹ್ವಾನ ನೀಡಿದರು, ದಾಟಿ ಹೋಗುತ್ತಿದ್ದ ಪತ್ರಕರ್ತನೊಬ್ಬನನ್ನು ಅಡ್ಡ ಹಾಕಿ, ನನ್ನ ಜಾತಕ ಬಿಡಿಸಿದರು) ಅವರಿಂದ ಹೇಗೋ ಕಳಚಿಕೊಂಡು ಮುಂದುವರಿದೆನಾದರೂ ಇವೆಲ್ಲ ಪರೋಕ್ಷವಾಗಿ ಜಗ್ಗುಬಿದ್ದ ನನ್ನ ಮನೋಬಲಕ್ಕೆ ಅಪಾರ ಶಕ್ತಿ ಕೊಟ್ಟದ್ದಂತೂ ನಿಜ.
ಮಂಡ್ಯ ಕಳೆದ ಮೇಲೆ ಕೆಲವು ದೀರ್ಘ ಏರು ದಾರಿಗಳು ಸಿಕ್ಕಿ ನನ್ನ ಪ್ರಗತಿ ಇನ್ನಷ್ಟು ಕುಂಠಿತವಾಯ್ತು. ಶ್ರೀರಂಗಪಟ್ಟಣ ಇನ್ನೂ ಆರೇಳು ಕಿಮೀ ಇರುವಾಗಲೇ ಸೂರ್ಯಾಸ್ತ ಸಮೀಪಿಸುತ್ತಿದ್ದಂತೆ ನಾನು ಅನ್ಯ ಯೋಚನೆಯೊಡನೆ ಶ್ಯಾಮರ ಪ್ರಗತಿಯನ್ನು ತಿಳಿಯಲು ಚರವಾಣಿಸಿದೆ. ಅವರಾಗಲೇ ಪಟ್ಟಣ ತಲಪಿ, ಅಶ್ವಿನಿಯನ್ನು ಸಂಪರ್ಕಿಸಿದ್ದಾಗಿತ್ತು. ಹೀಗೊಂದು ಆಶ್ರಯದ ಅವಕಾಶ ಒದಗುತ್ತಿದ್ದಂತೆ ನಾವು ಮತ್ತೆಯೂ ಹದಿನೈದು ಕಿಮೀ ದೂರದ ಮೈಸೂರಿಗೆ ಕತ್ತಲಲ್ಲಿ ಮುಂದುವರಿಯುವುದನ್ನು ರದ್ದುಪಡಿಸಿದೆವು. ನಾನೂ ಅಶ್ವಿನಿಯವರ ದೊಡ್ಡ ಮನಸ್ಸಿನ, ಪುಟ್ಟ ಮನೆಗೆ ನಿಜಾರ್ಥದ ಅತಿಥಿಯಾಗುವಾಗ ಗಂಟೆ ಏಳು ಕಳೆದಿತ್ತು.
ಅಶ್ವಿನಿಯ ಆತಿಥ್ಯದಲ್ಲಿ ನಾವು ಸ್ನಾನ, ಊಟ ಮುಗಿಸಿಯಾದ ಮೇಲೆ ಮರುದಿನದ ನಮ್ಮ ಕಲಾಪವನ್ನು ನಿಶ್ಚೈಸಿಕೊಂಡೆವು. ಆ ಪ್ರಕಾರ ಉಷಃಕಾಲದಲ್ಲೇ ನಾವಿಬ್ಬರೂ ಮತ್ತೆ ಸೈಕಲ್ಲೇನೋ ಏರಿದೆವು. ಆದರೆ ಪಟ್ಟಣದ ಹೊರವಲಯದಲ್ಲಿ ಶ್ಯಾಮ ರಂಗನತಿಟ್ಟಿನ ಬಳಿಯಿಂದಾಗಿ ಸಾಗುವ ಒಳದಾರಿ ಅನುಸರಿಸಿ ಹುಣಸೂರು ಮತ್ತೆ ಕ್ರಮವಾಗಿ ಮಡಿಕೇರಿ ಮೂಲಕ ಸುಳ್ಯವೆಂದು ದೃಢವಾಗಿ ಮುಂದುವರಿದರು. ಒಂಟಿಯಾಗಿಯೇ ಪೂರ್ಣ ಯಾನ ನಡೆಸುವ ಯೋಜನೆ ಹಾಕಿದ್ದ ಶ್ಯಾಮರಿಗೆ ಮೊದಲ ನೂರಿಪ್ಪತ್ತು ಕಿಮಿಯಾದರೂ ನನ್ನ ಜೊತೆ ಸಿಕ್ಕಿದ್ದು ಕುಶಿ ಕೊಟ್ಟಿತ್ತು. ಹಾಗೇ ಮುಂದಿನ ದಾರಿಯನ್ನು ಒಂಟಿಯಾಗಿಯೇ ಪೂರೈಸುವಲ್ಲಿ ಯಾವ ಸಂದೇಹವೂ ಇರಲಿಲ್ಲ ಎಂದು ನನಗೆ ತಿಳಿದಿತ್ತು. ನಾನು ಅವರ ಉತ್ಸಾಹದ ಕೊರಳಿಗೆ ಕಟ್ಟಿದ ದಂಟೆಯಾಗದ ಎಚ್ಚರದಲ್ಲಿ ಸುಲಭವಾಗಿ ಮೈಸೂರಿಗೆ ನೇರ ಪೆಡಲಿಸಿ ಬೆಳಗ್ಗಿನ ತಿಂಡಿಗೆ ಅತ್ರಿ ಮನೆಯಲ್ಲಿ ಹಾಜರಾದೆ!
ನನ್ನ `ಸಾಹಸ’ದ ಅಮಲು ಇಳಿದಿತ್ತು. ಇನ್ನು ವಿರಾಮದಲ್ಲಿ ಸೈಕಲ್ಲನ್ನು ಲಾರಿಗೆ ಹಾಕಿ, ರಾತ್ರಿ ಬಸ್ಸಿನಲ್ಲಿ ಮಂಗಳೂರಿಸುವುದೆಂದೇ ಯೋಚಿಸಿದ್ದೆ. ಅಷ್ಟರಲ್ಲಿ ಅಯಾಚಿತವಾಗಿ ನನ್ನ ತಮ್ಮ – ಅನಂತನ ಭಾವ (ರುಕ್ಮಿಣಿಯ ಅಣ್ಣ)- ಸತೀಶ (ಮೈಸೂರಿನಲ್ಲಿ ವಕೀಲ) ಸಂಜೆ ಕಾರಿನಲ್ಲಿ ಕೇವಲ ಪತ್ನಿ ಸಹಿತ ಅವರ ಮೂಲ ಮನೆಗೆ (ಒಡಿಯೂರು) ಹೊರಡಲಿದ್ದವರು “ಪುತ್ತೂರಿನವರೆಗೆ ಬೇಕಾದರೆ ನಮ್ಮ ಕಾರಿನಲ್ಲಿ ಬರಬಹುದು. ಡಿಕ್ಕಿ, ಹಿಂದಿನ ಸೀಟೆಲ್ಲಾ ಖಾಲಿಯಿದೆ” ಎಂದು ಗಾಳ ಹಾಕಿದರು. ನಾನು ಕಚ್ಚಿದೆ.
ಹೊಸ ತಲೆಮಾರಿನ ಸೈಕಲ್ಲು ಹುಡುಗರಿಬ್ಬರು ಆಟದಂತೆ ಜೋಡಿಸಿದ್ದನ್ನು ಆಗಲೇ ಹೇಳಿದ್ದೇನೆ. ಅಷ್ಟೇ ಸುಲಭದಲ್ಲಿ ಮತ್ತೆ ಬಿಚ್ಚಿ ಜೋಡಿಸುವುದೂ ಸಾಧ್ಯ ಎನ್ನುವುದನ್ನು ನಾನು ತಿಳಿದಿದ್ದೆ. ಸಂಜೆ ಸತೀಶರ ಕಾರು ಬಂದಾಗ ಅದನ್ನು ಪ್ರಯೋಗಿಸಲು ಅವಕಾಶವೂ ಒದಗಿತು. ಐದೇ ಮಿನಿಟಿನಲ್ಲಿ ಎರಡು ಚಕ್ರ, ಸೀಟು ಪ್ರತ್ಯೇಕಿಸಿ ಡಿಕ್ಕಿಯಲ್ಲಿ ತುಂಬಿ, ಬರಿಯ ಫ್ರೇಮನ್ನು ಹಿಂದಿನ ಸೀಟಿನ ಎಡೆಯಲ್ಲಿಟ್ಟದ್ದಾಯ್ತು. ಕಾರು ನಾಲ್ಕು ಗಂಟೆಗೆ ಮೈಸೂರು ಬಿಟ್ಟು ಸಾಕಷ್ಟು ವೇಗದಲ್ಲೇ ಮಡಿಕೇರಿ ಸಮೀಪಿಸುತ್ತಿದ್ದಂತೆ ನನಗೆ ಮತ್ತೆ ಶ್ಯಾಮದರ್ಶನದ ನಿರೀಕ್ಷೆ ಬಲಿದಿತ್ತು. ಅದು ಹುಸಿಯಾಗದಂತೆ, ಆದರೆ ನಾವೆಲ್ಲ ಹೆಮ್ಮೆ ಪಡುವಂತೆ ಅವರು ಮಡಿಕೇರಿಯಲ್ಲ, ಘಟ್ಟವಿಳಿದು ಸಂಪಾಜೆಯನ್ನೂ ಕಳೆದು ದರ್ಶನ ಕೊಟ್ಟರು. ಇನ್ನೂ ಪೂರ್ಣ ಕತ್ತಲಾವರಿಸಿರಲಿಲ್ಲ. ಕ್ಷಣ ಮಾತ್ರ ನಿಲ್ಲಿಸಿದೆವು. ಅವರು ಎಂಟು ಗಂಟೆಯಂದಾಜಿಗೆ ಸುಳ್ಯದ ಬಳಿಯ ಸ್ವಂತ ಮನೆ ಸೇರುವ ಗಟ್ಟಿತನದಲ್ಲೇ (ದಿನದಲ್ಲಿ ೧೭೫ ಕಿಮಿಗೂ ಮಿಕ್ಕ ಅಂತರ!) ಮುಂದುವರಿದಿದ್ದರು. ಹಾರ್ದಿಕ ಶುಭಾಶಯ ಕೋರುವುದಷ್ಟೇ ನಮಗೆ ಉಳಿದಿತ್ತು. [ಮತ್ತೆ ಅವರೇ ತಿಳಿಸಿದಂತೆ ಸಣ್ಣ ಎಡವಟ್ಟಿನೊಡನೆ ಆದರೆ ಕ್ಷೇಮವಾಗಿ ರಾತ್ರಿ ಒಂಬತ್ತು ಗಂಟೆಗೆ ಮನೆ ಮುಟ್ಟಿದರಂತೆ. ಅವರ ಅನುಭವ ಅವರದೇ ಶೈಲಿಯಲ್ಲಿ ಸದ್ಯದಲ್ಲೇ ಬರವಣಿಗೆಗಿಳಿಸುತ್ತಾರಂತೆ. ಅದನ್ನು ಇಲ್ಲಿ ಅವಶ್ಯ ಪ್ರಕಟಿಸುತ್ತೇನಾದ್ದರಿಂದ ಹೆಚ್ಚಿನ ವಿವರಗಳನ್ನು ಸದ್ಯ ಕೊಡುತ್ತಿಲ್ಲ]
ರಾತ್ರಿ ಎಂಟೂವರೆಗೆ ಒಡಿಯೂರು ಸತೀಶ ದಂಪತಿ ನನ್ನನ್ನು ಪುತ್ತೂರಿಗೂ ಐದು ಕಿಮೀ ಮೊದಲೇ ಸಿಗುವ ನನ್ನ ಮಾವ – ಎ.ಪಿ. ಗೋವಿಂದಯ್ಯರ ಮನೆಯಲ್ಲಿಳಿಸಿ ಹೋದರು. ಅಲ್ಲಿ ರಾತ್ರಿ ಕಳೆದು, ಬೆಳಿಗ್ಗೆ ಐದೇ ಮಿನಿಟಿನಲ್ಲಿ ಮತ್ತೆ ಸೈಕಲ್ ಸರಿಯಾಗಿಯೇ ಜೋಡಿಸಿ ನಾನು ಮತ್ತೆ ದಾರಿಗಿಳಿದೆ. ಐದೂಮುಕ್ಕಾಲಕ್ಕೆ ಸಂಟ್ಯಾರಿನ ಚೇತನ ಮನೆ ಬಿಟ್ಟವನು ಅರವತ್ತು ಕಿಮೀ ಅಂತರವನ್ನು ಬಹು ಸುಲಭದಿಂದ ಕೇವಲ ಮೂರು ಗಂಟೆಯ ಅವಧಿಯಲ್ಲಿ ಮುಗಿಸಿ ಮಂಗಳೂರ ಮನೆ ಸೇರಿಕೊಂಡೆ. ಮತ್ತೆ ಆ ಅವಧಿಯಲ್ಲೇ ಕಲ್ಲಡ್ಕದಲ್ಲಿ ತಿಂಡಿ ತಿನ್ನುವ, ಸುಂಕದ ಕಟ್ಟೆಯ ಚಿತ್ರ ತೆಗೆಯುವ ಸಮಯ, ಅರ್ಥಾತ್ ವಿರಾಮವನ್ನೂ ಹೊಂದಿಸಿಕೊಂಡಿದ್ದೆ! ಬೆಂಗಳೂರು-ಹಾಸನ-ಮಂಗಳೂರಿನ ೩೪೭ ಕಿಮೀ ಮೀರಿ ಬೆಂ-ಮಡಿಕೇರಿ-ಮಂನ ೪೨೩ ಕಿಮೀಯನ್ನೇ ಆರಿಸಿಕೊಂಡವ, ಒಟ್ಟಾರೆ ತುಣುಕುಗಳಲ್ಲಿ ಸುಮಾರು ಎರಡು ದಿನದ ಒಟ್ಟಾರೆ ೧೫ ಗಂಟೆಗಳಲ್ಲಿ ೧೯೫ ಕಿಮೀಯನ್ನಷ್ಟೇ ಸವಾರಿಯಲ್ಲಿ ಕಳೆದು ಮಂಗಳೂರು ಸಾಧಿಸಿದ್ದೆ. ಅದಕ್ಕೂ ಹೆಚ್ಚಿಗೆ ಇನ್ನೊಂದೇ ನಿಜಕ್ಕೂ ಸೈಕಲ್ ಮಹಾಯಾನ ಹೋಗುವುದಿದ್ದರೆ ಅಗತ್ಯವಾದ ಪ್ರಾಥಮಿಕ ಪಾಠಗಳನ್ನು ಕಲಿತಿದ್ದೆ.
 

‍ಲೇಖಕರು G

July 9, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

  1. ಪಂಡಿತಾರಾಧ್ಯ ಮೈಸೂರು

    ಬೆಂಗಳೂರು ಮಂಗಳೂರು ಸೈಕಲ್ ವಿವರಗಳನ್ನು ಓದಿ ಸಂತೋಷವಾಯಿತು. ನಡೆದು ನೋಡು ಕೊಡಗಿನ ಬೆಡಗ ಎನ್ನುವಂತೆ ನಮಗೆ ಪರಿಚಿತವಾದ ಸ್ಥಳಗಳಾಗಿದ್ದರೂ ಸೈಕಲ್ ಏರಿ ಹೋಗುವಾಗ ಹೊಸ ರೀತಿಯಲ್ಲಿ ಕಾಣುತ್ತವೆ. ಬೆಂಗಳೂರು ಮೈಸೂರು ನಾಲ್ಕು ಸಾಲಿನ ಹೆದ್ದಾರಿಯಾದಾಗ ಮೊದಲಿನ ರಸ್ತೆ ಪ್ರಯಾಣದ ನೋಟಗಳೆಲ್ಲ ಬದಲಾದಂತೆ ಅನಿಸುತ್ತಿತ್ತು. ಎಲ್ಲ ಹೆಗ್ಗುರುತುಗಳು ರೂಪವಳಿದಂತೆ ತೋರುತ್ತಿದ್ದವು. ಸೈಕಲ್ ಏರಿದಾಗ ಆವು ಹೊಸ ರೂಲ ಹೊಸ ಜೀವ ಪಡೆದಂತೆ ಅನಿಸಿತು. ನಿಮಗೆ ಅಭಿನಂದನೆಗಳು.

    ಪ್ರತಿಕ್ರಿಯೆ
  2. maheshwari.u

    asooyeyaayitu nimma barahavannu odi.niroopaneya shaili nanage gatiaisida hiriyaraada G.T.yavarannu nenapisitu.abinandanegalu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: