ಅತ್ರಿ ಮತಾಂತರಗೊಂಡಿದ್ದು..

ಅತ್ರಿ ನಾಮಾಂತರ ಪ್ರಸಂಗ!

ಜಿ ಎನ್ ಅಶೋಕವರ್ಧನ

ಅತ್ರಿ ಬುಕ್ ಸೆಂಟರ್

ಇಂದು, ಅಂದರೆ ೧-೪-೨೦೧೨ರಂದು ಬಲ್-ಮಠದ, ಕರ್ನಾಟಕ ಕ್ರಿಶ್ಚಿಯನ್ ಎಜುಕೇಷನ್ ಸೊಸಾಯಿಟಿಯ ಸಹೋದಯ ಭವನದಲ್ಲಿ ಪ್ರೊ| ಬಿ.ಎ. ವಿವೇಕ ರೈಯವರ ಪೌರೋಹಿತ್ಯದಲ್ಲಿ ಅಲ್ಲೇ ಶರಾವತಿ ಕಟ್ಟಡದಲ್ಲಿ ಇದುವರೆಗೆ ‘ಅತ್ರಿಯೆಂದಿದ್ದ ಪುಸ್ತಕ ಮಳಿಗೆಯನ್ನು ‘ನವಕರ್ನಾಟಕವೆಂದು ನಾಮತಾಂತರಿಸುವುದೆಂದು ನಿಶ್ಚಯಿಸಿಯಾಗಿದೆ. ಆ ಸಂದರ್ಭದಲ್ಲಿ ನವ ಚೇತನಕ್ಕೆ ನಾನು ಪ್ರಸ್ತುತಪಡಿಸಿದ ಶುಭಾಶಂಸನೆಗಳು. ***

ಅತ್ರಿಗೂ ಮೊದಲು ಮಂಗಳೂರಿನಲ್ಲಿ ನವಕರ್ನಾಟಕ ಪಬ್ಲಿಕೇಶನ್ಸ್ ಶಾಖೆ ಇತ್ತು. ಈಗ ಅದು ತನ್ನ ಶಾಖಾಬಲವನ್ನು ಎರಡಕ್ಕೆ ಹೆಚ್ಚಿಸಿಕೊಳ್ಳುತ್ತಿದೆ. ಪುಸ್ತಕೋದ್ಯಮದ ಆರೋಗ್ಯಕ್ಕೆ ಸಂಬಂಧಿಸಿದಂತೆ, ಪ್ರಕಾಶನ ವಿತರಣೆಗಳಲ್ಲಿ, ಸಾರ್ವಜನಿಕ ಉಪಯುಕ್ತತೆಯ ಕುರಿತಾದ ಧೋರಣೆಗಳಲ್ಲಿ ಅತ್ರಿಗೂ ನವಕರ್ನಾಟಕಕ್ಕೂ ವಿಶೇಷ ಬೇಧವಿಲ್ಲ. ಸಹಜವಾಗಿ ನನ್ನ – ತಂದೆ ಜಿಟಿ ನಾರಾಯಣ ರಾಯರ ಕೆಲವು ವಿಜ್ಞಾನ ಕೃತಿಗಳಾದ – ಧೂಮಕೇತು, ಸೂಪರ್ನೋವಾಗಳನ್ನು ಮೊದಲು ಪ್ರಕಟಿಸಿದ್ದೇ ನವಕರ್ನಾಟಕ. ನಾನು ಪ್ರಕಾಶನರಂಗಕ್ಕೆ ಸ್ವಲ್ಪ ತಡವಾಗಿ ಇಳಿದೆ. ಅಲ್ಲಿ ನನ್ನ ಪ್ರಧಾನ ಲಕ್ಷ್ಯವಿದ್ದದ್ದೂ ತಂದೆಯ ಬರವಣಿಗೆಗಳ ಮೇಲೇ. ಹಾಗಾಗಿ ಅತ್ರಿ ಪ್ರಕಾಶನದಲ್ಲಿ ನಾನು ಸ್ವಲ್ಪ ಬಲ ಪಡೆದಾಗ ನವಕರ್ನಾಟಕದಲ್ಲಿದ್ದ ಪುಸ್ತಕಗಳನ್ನೂ ಕೇಳಿದೆ. ಅವರು ಅರೆಮನಸ್ಸಿನಲ್ಲೇ ತಂದೆಯ ‘ಸೂಪರ್ನೋವಾ ಪುಸ್ತಕವನ್ನು ಮಾತ್ರ ಬಿಟ್ಟುಕೊಟ್ಟರು. ಉಳಿದವನ್ನು ತಮ್ಮ ಪ್ರಕಟಣೆಗಳೆಂದು ಹೆಮ್ಮೆಯಲ್ಲಿ ಉಳಿಸಿಕೊಂಡದ್ದೆ ಅಲ್ಲದೇ ಇಂದಿಗೂ ಕಾಲಕಾಲಕ್ಕೆ ಮರುಮುದ್ರಣಗಳನ್ನು ತರುತ್ತಲೇ ಇದ್ದಾರೆ. ಮುಂದುವರಿದು ನನ್ನ ಪ್ರಕಟಣೆಗಳ ಬಲು ದೊಡ್ಡ ಖರೀದಿದಾರರೂ ತಾವಾಗಿ ನಮ್ಮೊಳಗಿನ ವಿಶ್ವಾಸಕ್ಕೆ ಹೆಚ್ಚಿನ ಅರ್ಥ ಕೊಡುತ್ತಲೇ ಬಂದಿದ್ದಾರೆ. ಇಲ್ಲೇ ಒಂದು ಮಾತು ಸೇರಿಸಿಬಿಡುತ್ತೇನೆ: ಇಂದು ನಾನು ಪ್ರಕಾಶನವನ್ನೂ ಮುಚ್ಚಿದ್ದೇನೆ ಮತ್ತು ಎಲ್ಲವನ್ನೂ ನೀವೇ ತೆಗೆದುಕೊಳ್ಳಿ ಎಂದು ಉಡುಪರನ್ನು ಕೇಳಿದ್ದೂ ಆಗಿದೆ! ನನ್ನ ತಂದೆಯ ಇನ್ನೆರಡು ನವಕರ್ನಾಟಕದ ಪ್ರಕಟಣೆಗಳ ಕುರಿತು ವಿಶೇಷ ಉಲ್ಲೇಖ ಮಾಡಲೇಬೇಕು. ವಿಜ್ಞಾನವನ್ನು ಓದಿದವರೆಲ್ಲ ಅಥವಾ ವೃತ್ತಿಪರವಾಗಿ ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ (ಸೈನ್ಸ್ ಆಂಡ್ ಟೆಕ್ನಾಲಜಿ ಎಂಬ ಅರ್ಥದಲ್ಲಿ) ತೊಡಗಿದವರೆಲ್ಲ ವಿಜ್ಞಾನಿಗಳು, ವಿಚಾರಪರರು ಎಂಬ ಮಹಾಭ್ರಮೆ ಪ್ರಚಲಿತದಲ್ಲಿದೆ. ಇಲ್ಲ, ಬಹುತೇಕರಿಗೆ ವಿಜ್ಞಾನ ಹೊಟ್ಟೆಪಾಡು ಮಾತ್ರ, ವೈಚಾರಿಕತೆ ಬರಿಯ ಬೂಟಾಟಿಕೆ. ಕಲಿಕೆ, ಪಾರಂಪರಿಕ ಸಂಸ್ಕಾರ ಏನೇ ಇರಲಿ, ಸಾಮಾಜಿಕ ಅಂತಸ್ತು ಯಾವುದೇ ಇರಲಿ, ತನ್ನ ನುಡಿ-ನಡೆಗೆ ಕಾರ್ಯ-ಕಾರಣವನ್ನು ಪ್ರಕೃತಿಯಲ್ಲಿ ಕಂಡುಕೊಂಡವರಷ್ಟೇ ವೈಜ್ಞಾನಿಕ ಮನೋಧರ್ಮದವರು. ಇದನ್ನು ನನ್ನ ತಂದೆ ತನ್ನ ಅಪಾರ ಓದು ಮತ್ತು ಜೀವನಾನುಷ್ಠಾನದಿಂದಲೇ ಕಂಡುಕೊಂಡಿದ್ದರು, ಬಿಡಿ ಲೇಖನಗಳನ್ನು ಬರೆದಿದ್ದರು ಮತ್ತು ಧಾರಾಳ ಪ್ರಚುರಿಸುತ್ತಿದ್ದರು. ಅದನ್ನೊಂದು ಪುಸ್ತಕದ ಬಂಧದಲ್ಲಿ ತರುವ ಅಗತ್ಯವನ್ನು ಕಂಡು, ನನ್ನ ತಂದೆಯನ್ನು ಪ್ರೇರಿಸಿ, ಬರೆಯಿಸಿ, ನಿಖರತೆಗೆ ವಸ್ತುನಿಷ್ಠವಾಗಿ ಚರ್ಚಿಸಿ, ಕೊನೆಗೆ ಪ್ರಕಟಣೆ ಮತ್ತು ವ್ಯಾಪಕ ಪ್ರಸಾರಕ್ಕೂ ಕಾರಣರಾದವರು ಬಿ.ವಿ ಕಕ್ಕಿಲ್ಲಾಯರು; ಭಾವನಾತ್ಮಕ ಭಾಷೆಯಲ್ಲಿ ಹೇಳುವುದಾದರೆ ನವಕರ್ನಾಟಕದ ಯಜಮಾನರು! ಆ ಪುಸ್ತಕ – ವೈಜ್ಞಾನಿಕ ಮನೋಧರ್ಮ. ಅದು ಮೂಢನಂಬಿಕೆಗಳ ಖಂಡನೆ, ಅವಿಚಾರದ ಎದುರಿನ ಆರ್ಭಟೆಯಾಗಿ ಬಂದಿಲ್ಲ. ಪ್ರಕೃತಿ ಮತ್ತು ಮಾನವಮತಿಯ ಸಹಯೋಗದ ಅಗತ್ಯವನ್ನು ಬಿಡಿಸಿಟ್ಟು ಮುಕ್ತಮನವುಳ್ಳ ಯಾರನ್ನೂ ಅನುನಯಿಸುತ್ತದೆ. ಒಳ್ಳೇ ಅರ್ಥದಲ್ಲಿ ಹೇಳುವುದಾದರೆ ಪಠ್ಯಪುಸ್ತಕದಂತೇ ಒದಗುತ್ತದೆ. ಪ್ರಕಾಶನವಾದರೋ ವೈಜ್ಞಾನಿಕ ಮನೋಧರ್ಮ ಪುಸ್ತಕವನ್ನು ಕಾಲಿಕ ಕಿರು ಪರಿಷ್ಕರಣೆಗಳೊಂದಿಗೆ ಇಂದಿಗೂ ಉಳಿಸಿಕೊಂಡು, ಸತತ ಎಂಟನೇ ಮುದ್ರಣದಲ್ಲಿ ಪ್ರಸರಿಸುತ್ತಲೇ ಇದೆ. (ಮತ್ತು ಅದರ ಆಶಯವನ್ನು ತನ್ನ ಇತರ ಪ್ರಕಟಣೆಗಳಲ್ಲೂ ಪಾಲಿಸುತ್ತಲೇ ಇದೆ)

ಹೀಗೇ ನನ್ನ ತಂದೆಗೇ ಸಂಬಂಧಿಸಿದಂತೆ ನವಕರ್ನಾಟಕದ ಇನ್ನೊಂದು ದೊಡ್ಡ ಪ್ರಕಟಣೆ ಕನ್ನಡ ವಿಜ್ಞಾನ ಪದವಿವರಣ ಕೋಶ. ಮೂಲದಲ್ಲಿ ತಂದೆ ಇದನ್ನು ಏಕವ್ಯಕ್ತಿಯಾಗಿ ಬರವಣಿಗೆ/ಸಂಪಾದನೆಗಿಳಿದಾಗಲೂ ಅದು ಅಸಾಧ್ಯ ಅನ್ನಿಸಿ ಸಂಪಾದಕೀಯ ಬಳಗ ಬಯಸಿದಾಗಲೂ ನವಕರ್ನಾಟಕದ ವ್ಯವಸ್ಥಾಪಕ ನಿರ್ದೇಶಕ ರಾಜಾರಾಮ್ ಅವರು ಇಟ್ಟ ನಂಬುಗೆ, ಕೊಟ್ಟ ಬೆಂಬಲ ಅಸಾಮಾನ್ಯ. ಕನ್ನಡ ಮಾರುಕಟ್ಟೆಯ ಮಿತಿಗಳನ್ನು ಅನುಲಕ್ಷಿಸಿ ಹೇಳುವುದಾದರೆ, ಇಂದು ಅದರ ಮೊದಲ ಮುದ್ರಣದ ಪ್ರತಿಗಳೆಲ್ಲ ಮಾರಿ ಮುಗಿದಿರುವುದೂ ಪರಿಷ್ಕೃತ ರೂಪದಲ್ಲಿ ಮರುಮುದ್ರಣ ಕಂಡು ಕನ್ನಡ ಮನಸ್ಸನ್ನು ಬೆಳಗುತ್ತಿರುವುದು ಒಂದು ಖಾಸಗಿ ಪ್ರಕಾಶನ ಸಂಸ್ಥೆಗೆ ಅದೂ ಯಾವುದೇ ಸರಕಾರೀ ಕೃಪಾಪೋಷಣೆಯನ್ನು ಪಡೆಯದೇ ನಡೆಸುತ್ತಿರುವುದು ಮಹಾ ಸಾಹಸವೇ ಸರಿ. ಈ ಪರಿಷ್ಕೃತ ಮುದ್ರಣ ಪ್ರಕಟಗೊಳ್ಳುವ ಕಾಲಕ್ಕೆ ನಮ್ಮೊಡನಿಲ್ಲವಾದ ತಂದೆಗೇ ಅದನ್ನು ನವಕರ್ನಾಟಕ ಅರ್ಪಣೆ ಮಾಡಿದೆ; ನವಕರ್ನಾಟಕ ಬರಿಯ ಹೆಸರಲ್ಲೋ ಅಣ್ಣಾ ಪ್ರೀತಿಯ ಒಸರು ಕಣೋ! ೧೯೬೦ರಲ್ಲೇ ಸ್ಥಾಪಿತವಾದ ಅಂದರೆ ಅತ್ರಿಗೂ ಹದಿನೈದು ವರ್ಷ ಹಿರಿಯ ಸಂಸ್ಥೆ ನವಕರ್ನಾಟಕ. ಇನ್ನು ಗಾತ್ರ ಚಟುವಟಿಕೆಗಳ ಲೆಕ್ಕ ಹಿಡಿದರೆ ಅತ್ರಿ ತೀರ್ಥ, ಅದು ಸಾಗರ. ಅತ್ರಿಯ ಆಯುಷ್ಯದ ಉದ್ದಕ್ಕೂ ನವಕರ್ನಾಟಕದ ಸಹಯೋಗ ಗಾಢವಿತ್ತು, ತೀರಾ ಆತ್ಮೀಯವೂ ಇತ್ತು. ಮಾರಾಟದಲ್ಲಿ ಅದಕ್ಕೂ ಮುಖ್ಯವಾಗಿ ಲೆಕ್ಕಾಚಾರದಲ್ಲಿ ನಾನು ತಪ್ಪಡಿಗಳನ್ನು ಇಡುತ್ತಿದ್ದ ಕಾಲದಿಂದ ಇಂದಿನವರೆಗೆ ಅವರೆಲ್ಲ ಪ್ರಕಟಣೆ ಮತ್ತು ವಿತರಣೆಯ ಪುಸ್ತಕಗಳನ್ನು ನಾನು ಬಯಸಿದಂತೆ ಕೊಟ್ಟಿದ್ದಾರೆ. ಕೃತಿಯಲ್ಲಿ ಮಾತ್ರವಲ್ಲ ಮಾತಿನಲ್ಲೂ ವ್ಯವಸ್ಥಾಪಕ ನಿರ್ದೇಶಕರಾದ ರಾಜಾರಾಮ್ ಅವರ ಪರವಾಗಿಯೇ ನನಗೆ ಸದಾ ಸಂಪರ್ಕಕಕ್ಕೆ ಒದಗುತ್ತ ಬಂದ ಎ.ಆರ್ ಉಡುಪರು – ಕಂಪೆನಿಯ ಭಾಷೆಯಲ್ಲಿ ಹೇಳಬೇಕಾದರೆ ಸೆಕೆಂಡ್ ಇನ್ ಕಮಾಂಡ್, ಒಂದೇ ಒಂದು ತಪ್ಪುನುಡಿ ಕೊಟ್ಟವರಲ್ಲ. ವ್ಯವಹಾರದಲ್ಲಿ ನನ್ನ ಸ್ವಾಯತ್ತೆಗೆ ಎಂದೂ ಕುಂದು ಮಾಡದೆ, ವಿಶ್ವಾಸದಲ್ಲಿ ತಮ್ಮದೇ ಅಂಗಸಂಸ್ಥೆಯೋ ಎಂಬ ಪ್ರೀತಿಯನ್ನೂ ಕೊಟ್ಟು ನಡೆಸಿಕೊಂಡಿದ್ದಾರೆ. ಇನ್ನು ಮಂಗಳೂರಿನ ಅವರ ಶಾಖಾ ಸಿಬ್ಬಂದಿಗಳೋ ಮೇಲಿನವರತ್ತ ನೋಡಿಕೊಂಡು ತುಳುವಿನಲ್ಲಿ ಹೇಳುವಂತೆ ‘ಪಂಡಿ ಬೇಲೆ ಎಂದು ಕುಳಿತವರಲ್ಲ. ಅವರು ಹೇಳಿದ್ದಕ್ಕೆ ವೈಯಕ್ತಿಕ ಆತ್ಮೀಯತೆಯ ಸಕ್ಕರೆ ಬೆರೆಸಿ ಸಂಬಂಧವನ್ನು ಸದಾ ಮಧುರವಾಗಿ ಉಳಿಸಿಕೊಟ್ಟವರಿವರು. ನನ್ನ ನೆನಪಿನ ಸಣ್ಣ ಮಿತಿಯಲ್ಲೂ ಹೆಸರಿಸುವುದೇ ಆದರೆ ಇಂದಿಲ್ಲವಾದ ಕೃಷ್ಣ ಮತ್ತು ರಾಘವನ್ ಅವರಿಂದ ತೊಡಗಿ ಈಚಿನ ಕಲ್ಲೂರು ನಾಗೇಶ್, ಜನಾರ್ದನ್, ಹರೀಶ್, ರಾಜೇಂದ್ರ, ವಿಶ್ವನಾಥ ಮುಂತಾದವರವರೆಲ್ಲರೂ ನನ್ನ ಬೇಡಿಕೆ, ಕೀಟಲೆಗಳನ್ನು ನಗುಮೊಗದಲ್ಲೇ ಸಮರ್ಪಕವಾಗಿ ನಡೆಸಿಕೊಟ್ಟದ್ದಕ್ಕೆ ಸಾರ್ವಜನಿಕದಲ್ಲೂ ನಾನು ದೊಡ್ಡ ನೆನಕೆ ಸಲ್ಲಿಸಲೇಬೇಕು. ನನ್ನ ಮನಸ್ಸಿನಲ್ಲಿ ನಿವೃತ್ತಿ ಮತ್ತು ಅತ್ರಿಯ ಬರ್ಖಾಸ್ತು ಹುರಿಗಟ್ಟುತ್ತಿದ್ದಂತೆ ನಾನು ಇಲ್ಲಿವರೆಗೆ ಲಕ್ಷ್ಯವಾಗಿರಿಸಿಕೊಂಡ ಪುಸ್ತಕ ಸಂಸ್ಕೃತಿಯನ್ನು ಅನಾಥವಾಗಿಸಬಾರದೆಂಬ ಸಂಕಲ್ಪ ಮೂರನೆಯ ಎಳೆಯಾಗಿ ಸೇರಿಕೊಂಡಿತು. ಆಗ ಗಟ್ಟಿಯಾಗಿ ಕಾಣಿಸಿದ ಒಂದೇ ಹೆಸರು ನವಕರ್ನಾಟಕ. ನಾನು ಯಾವ ಪೂರ್ವ ಸೂಚನೆಯಿಲ್ಲದೆ ಉಡುಪರಿಗೆ ದೂರವಾಣಿಸಿದೆ. ಅವರ ಮೊದಲ ಮಾತು, ಅವರ ವ್ಯಕ್ತಿತ್ವಕ್ಕೆ ಸಹಜವಾಗಿಯೂ ಪ್ರಾಮಾಣಿಕವಾಗಿಯೂ ಇತ್ತು ಇಲ್ಲ, ಅತ್ರಿ ಬರ್ಖಾಸ್ತಾಗಕೂಡದು. ಆದರೆ ನನ್ನ ವ್ಯಕ್ತಿ ಸ್ವಾತಂತ್ರ್ಯವನ್ನು ಅಷ್ಟೇ ಗೌರವಿಸಿ ಎರಡನೇ ಮಾತು ಹೇಳಿದರು ಅಸ್ತು, ಒಪ್ಪಿದೆ, ಅಲ್ಲಿ ಅತ್ರಿಯ ಸಂಪ್ರದಾಯವನ್ನು ತುಂಬಾ ಸಂತೋಷದಿಂದ ನವಕರ್ನಾಟಕ ಮುಂದುವರಿಸುತ್ತದೆ. ಅತ್ರಿ ಬಲ್ಮಠದಲ್ಲಿ ಪ್ರಾರಂಭವಾದಾಗ ಹಂಪನಕಟ್ಟೆಯೇ ಮಂಗಳೂರಾಗಿತ್ತು. ಆದರಿಂದು ಮೂರೂ ದಿಕ್ಕುಗಳ ಸಂಚಾರ ಸಂಗಮ ಈ ಜ್ಯೋತಿ ವಠಾರ. ಮತ್ತೆ ಇಂದಿನ ರಸ್ತೆ ಅಗಲೀಕರಣ ಮತ್ತು ಕಾಂಕ್ರೀಟೀಕರಣದ ಹುಚ್ಚಿನಲ್ಲೂ ಮಂಗಳೂರಿನೊಳಗೆ ಪರಿಪೂರ್ಣವಾಗಿ ರೂಪುಗೊಂಡ ಏಕೈಕ ಸ್ಥಳ ಬಲ್ಮಠ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಇಲ್ಲಿ ಬರಿಯ ವಾಹನಸಂಚಾರದ ನೆಲವೊಂದೇ ಇರುವುದಲ್ಲ. ಬೀದಿದೀಪಗಳನ್ನು ಹೊತ್ತ ವಿಭಾಜಕದೊಡನೆ ದ್ವಿಮುಖ ವಾಹನ ಸಂಚಾರ ವ್ಯವಸ್ಥೆ, ಮಳೆನೀರ ಚರಂಡಿ, ಪುಟ್ಟಪಥ, ಹಸುರೀಕರಣ, ವಾಹನ ನಿಲುಗಡೆಯ ತಾಣ, ಬಸ್ ನಿಲ್ದಾಣಗಳೆಲ್ಲವೂ ಯೋಜನೆಗೆ ಕೊರತೆಯಿಲ್ಲದಂತೆ ಕೆಲಸ ಪೂರೈಸಿವೆ! ಇನ್ನು ನೇತ್ರಾವತಿಯಿಂದ ತೊಡಗಿ ಹೇಮಾವತಿ, ಕುಮುದಾವತಿ ಮತ್ತು ಶರಾವತಿವರೆಗಿನ ಏಕ ಸಂಸ್ಥೆಯ ಮಾಲಿಕತ್ವದ ಇಲ್ಲಿನ ಕಟ್ಟಡ ಸರಣಿಯ ವಿನ್ಯಾಸ ಆಧುನಿಕ ಸೌಕರ್ಯಗಳಿಗೆ ತೆರೆದುಕೊಳ್ಳುವ ಸಾಧ್ಯತೆಗಳು ಗಮನಾರ್ಹ. ಅವಕ್ಕೂ ಮುಖ್ಯವಾಗಿ ಇವುಗಳೆಲ್ಲದರ ಮಾಲಿಕ ಸಂಸ್ಥೆ ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸಾಯಿಟಿ ತನ್ನ ಬಾಡಿಗೆದಾರರೊಡನೆ ಇಟ್ಟುಕೊಂಡ ಸಹೃದಯೀ ಮತ್ತು ಸಹಕಾರದ ಸಂಬಂಧ ಅನ್ಯತ್ರ ನಾನು ಕಂಡಿಲ್ಲ, ಕೇಳಿಲ್ಲ. ಇವೆಲ್ಲದರ ಮೊತ್ತವಾಗಿ ಇಲ್ಲಿ ಇಂದು ಪುಸ್ತಕ ಪ್ರೇಮಿಗಳಿಗೆ ಅತ್ರಿಯ ಕೊರತೆಯನ್ನು ಮೀರುವಂತೆ ನವಕರ್ನಾಟಕ ಪಬ್ಲಿಕೇಶನ್ಸ್ ನೆಲೆನಿಲ್ಲುತ್ತಿದೆ. ಅವರಿಗೆ ನನ್ನ ಕೃತಜ್ಞತೆಗಳು ಮತ್ತು ಹಾರ್ದಿಕ ಶುಭಾಶಯಗಳು.]]>

‍ಲೇಖಕರು G

April 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ. ಶಶಿಧರ ನರೇಂದ್ರ ʼನಿಮಗೆ ಮೊಮ್ಮಗ ಜನಿಸಿದ' ಎಂಬುದನ್ನು ಕೇಳಿ ಸಂತೋಷಗೊಂಡ ರಸೂಲ್ ಖಾನ್ ರು ಆಕಾಶದತ್ತ ಮುಖ ಮಾಡಿ ದೇವರಿಗೆ ಕೃತಜ್ಞತೆ...

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಜಿ.ಎನ್.ರಂಗನಾಥರಾವ್ ಪ್ರಿಯ ಎಚ್ಚೆಸ್ವಿ,ನಿಮ್ಮ 'ಬುದ್ಧಚರಣ'ಮಹಾಕಾವ್ಯವನ್ನುಸಾವಧಾನದಿಂದ ಓದಿ ಸುಖಿಸುತ್ತಾ ಹೋದಂತೆ, "ಹುತ್ತಗಟ್ಟದೆ ಚಿತ್ತ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This