ಅದೇಕೋ ಮಣಿದುಬಿಟ್ಟ ಸಿದ್ಧಣ್ಣ!

ಚಂದ್ರಕಾಂತ ವಡ್ಡು

ಬಹುಶಃ 1984ನೇ ಇಸವಿ. ನಾನಾಗ ಇಂಜಿನಿಯರಿಂಗ್ ವಿದ್ಯಾರ್ಥಿ. ಕಾಲೇಜು ತಪ್ಪಿಸಿ ರವಿ ಬೆಳಗೆರೆಯವರ ‘ಬಳ್ಳಾರಿ ಪತ್ರಿಕೆ’ಗೆ ಕೆಲಸ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದೆ. ಬಳ್ಳಾರಿಯ ಬಿರುಬೇಸಿಗೆಯ ಒಂದು ಮಧ್ಯಾಹ್ನ. ಸತ್ಯನಾರಾಯಣ ಪೇಟೆಯ ಬೆಳಗೆರೆಯವರ ಮನೆ ಕಂ ಕಚೇರಿ ಕಂ ಮುದ್ರಣಾಲಯದ ಆವರಣದಲ್ಲಿ ಎಂದಿನಂತೆ ಬೇವಿನಮರದ ಕೆಳಗೆ ಬರೆಯುತ್ತ ಕುಳಿತಿದ್ದೆ. ಗೇಟ್ ಹೊರಗೆ ಒಂದು ಆಟೋ ಬಂದು ನಿಂತಿತು. ಅದರಿಂದ ಇಳಿದ ಆಜಾನುಬಾಹು ವ್ಯಕ್ತಿ ನನ್ನಲ್ಲಿ ಹಿತವಾದ ಅಚ್ಚರಿ ಮೂಡಿಸಿದ. ಆತ ಕೆಲವು ವರ್ಷಗಳಿಂದ ಸಂಪರ್ಕಕ್ಕೆ ಸಿಗದೆ ಮಾಯವಾಗಿದ್ದ ನನ್ನ ಹಾವೇರಿ ದಿನಗಳ ಸಹಪಾಠಿ ಸಿದ್ಧೇಶ್ವರ ಚೂರಿ.

ಆಗಿನ್ನೂ ಮೊಬೈಲ್ ಫೋನು ಹುಟ್ಟಿರಲಿಲ್ಲ. ಲ್ಯಾಂಡ್ ಲೈನ್ ಸಂಪರ್ಕಕ್ಕೆ ವರ್ಷಗಟ್ಟಲೇ ಕಾಯಬೇಕಾದ ದಿನಗಳು. ರವಿ ಬೆಳಗೆರೆ ಆಗತಾನೇ ಶಾಸಕರಾಗಿದ್ದ ಭೂಪತಿ ಅವರ ಕೋಟಾದಲ್ಲಿ ದೂರವಾಣಿ ಸಂಪರ್ಕ ಪಡೆಯಲು ಪ್ರಯತ್ನಿಸಿದ್ದ ನೆನಪು. ನಮಗೆಲ್ಲ ಯಾರದೋ ಮನೆಯ ಅಥವಾ ಕಚೇರಿಯ ಪಿಪಿ ನಂಬರೇ ಗತಿ. ಎಷ್ಟೋ ಸಲ ಮಾಲೀಕರಿಗೇ ಗೊತ್ತಿಲ್ಲದಂತೆ ಅವರ ಫೋನ್ ನಂಬರ್ ಪತ್ತೆ ಹಚ್ಚಿಕೊಂಡು ನಮ್ಮ ವಲಯದಲ್ಲಿ ಹಂಚಿಕೊಂಡು ಬಿಡುತ್ತಿದ್ದೆವು.

ಕೆಲವರು ತಮ್ಮ ವಿಸಿಟಿಂಗ್ ಕಾರ್ಡಿನಲ್ಲಿ ಪಿಪಿ ಸಂಖ್ಯೆ ಅಚ್ಚು ಹಾಕಿಸಿಕೊಂಡಿದ್ದೂ ಉಂಟು. ಆ ನಂಬರಿಗೆ ಯಾರೋ ಕರೆ ಮಾಡಿ ಪರ್ಟಿಕ್ಯುಲರ್ ಪರ್ಸನ್ (ಪಿಪಿ) ಕರೆಯಲು ಹೇಳಿದಾಗ ದೂರವಾಣಿ ಒಡೆಯರು ಕಂಗಾಲು! ಹೀಗಿರುವಾಗ ಈ ಗೆಳೆಯ ನಾನಿರುವ ಜಾಗವನ್ನು ಹೇಗೆ ಪತ್ತೆ ಹಚ್ಚಿ ಎಂಟ್ರಿ ಕೊಟ್ಟ?

ಗದಗ ಬಳಿಯ ಹುಲುಕೋಟಿ ಕಾಲೇಜಿನಲ್ಲಿ ಟೆಕ್ಸ್ ಟೈಲ್ ಇಂಜಿನಿಯರಿಂಗ್ ಸೇರಿದ್ದ ಸಿದ್ಧಣ್ಣ ಅಲ್ಲಿಂದ ಉಡಾಳ ಗೆಳೆಯರ ಒಂದು ಹಿಂಡು ಕಟ್ಟಿಕೊಂಡು ಬಳ್ಳಾರಿಗೆ ಬಂದಿಳಿದಿದ್ದ. ನಗರದ ಕುಬೇರ ಬಾರಿನಲ್ಲಿ ಸೋಮರಸ ಸಮಾರಾಧನೆ ಮುಗಿಸಿ ಹೊರಬಂದಾಗ ಬೆವರು ಬಸಿಯುವ ಬಿಸಿಲಲ್ಲಿ ಆತನಿಗೆ ಈ ಚಂದ್ರ ನೆನಪಾಗಿಬಿಟ್ಟಿದ್ದಾನೆ.

ಹೈಸ್ಕೂಲು ದಿನಗಳಲ್ಲಿ ಹಂಚಿಕೊಂಡು ಓದಿದ್ದ ಪುರುಷೋತ್ತಮನ ಪತ್ತೇದಾರಿ ಕತೆಗಳೂ ಅವನ ಮನದಲ್ಲಿ ಸುಳಿದಿರಬೇಕು. ಅವನಿಗೆ ನನ್ನ ಬರವಣಿಗೆ ಚಟದ ಬಗ್ಗೆ ಮಾಹಿತಿ ಇತ್ತು. ಹಾಗಾಗಿ ಕುಬೇರ ಪಕ್ಕದಲ್ಲಿದ್ದ ಸಂಜೀವನ ಪಾನ್ ಬೀಡಾ ಅಂಗಡಿಯಲ್ಲಿ ತೂಗು ಹಾಕಿದ್ದ ಸ್ಥಳೀಯ ಪತ್ರಿಕೆಗಳನ್ನು ಜಾಲಾಡಿದ್ದಾನೆ. ಬಳ್ಳಾರಿ ಪತ್ರಿಕೆಯಲ್ಲಿ ನನ್ನ ಹೆಸರು ಕಂಡಿದೆ. ಸೀದಾ ಕಚೇರಿ ವಿಳಾಸ ಹುಡುಕಿಕೊಂಡು ಬಂದಿಳಿದಿದ್ದ.

ಸಿದ್ಧಣ್ಣ ಸ್ವಭಾವತಃ ಆಕ್ರಮಣಶೀಲ ಗುಣದವನು. ಗುರಿ ಇಟ್ಟು ಸಾಧಿಸುವ, ಬಯಸಿದ್ದನ್ನು ಗಿಟ್ಟಿಸುವ ನಿಟ್ಟಿನಲ್ಲಿ ಬಹಳ ಗಟ್ಟಿಗ. ಎಲ್ಲಾ ಅರ್ಥದಲ್ಲಿ ವರ್ಣರಂಜಿತ ವ್ಯಕ್ತಿತ್ವ. ಹೈಸ್ಕೂಲಿನಲ್ಲಿದ್ದಾಗ ಒಮ್ಮೆ ನಾವಿಬ್ಬರೂ ಮನೆಯಲ್ಲೇ ಸೈಕಲ್ ಓವರಾಯಿಲ್ ಮಾಡಲು ಎಲ್ಲಾ ಭಾಗಗಳನ್ನು ಬಿಚ್ಚಿ ಕಬ್ಬಿಣಪುಟ್ಟಿಯಲ್ಲಿ ಹಾಕಿದ್ದೆವು.

ಚಿಮಣೀ ಎಣ್ಣೆ ಹಾಕಿ ತೊಳೆದ ನಂತರ ಎಷ್ಟೇ ಪರದಾಡಿದರೂ ಜೋಡಿಸಲು ಸಾಧ್ಯವಾಗದೇ ಸೋಲೊಪ್ಪಿಕೊಂಡು ಸೈಕಲ್ ಅಂಗಡಿ ನರಸಿಂಹನಿಗೆ ಶರಣಾಗಿದ್ದೆವು. ನಮ್ಮನ್ನು ಹೊತ್ತುಕೊಂಡು ಊರೆಲ್ಲಾ ತಿರುಗುತ್ತಿದ್ದ ಸೈಕಲ್ಲನ್ನು ನಾವೇ ಪುಟ್ಟಿಯಲ್ಲಿ ತುಂಬಿಕೊಂಡು ಬಂದಾಗ ಆ ಕಿಡಿಗೇಡಿ ನರಸಿಂಹ ನಕ್ಕು ನಕಲಿ ಮಾಡಿದ ದೃಶ್ಯ ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ.

ಗುದ್ಲೆಪ್ಪ ಹಳ್ಳೀಕೇರಿ ಕಾಲೇಜಿನಲ್ಲಿ ಪಿಯು ಓದುವಾಗ ಕೇರಮ್ ಮತ್ತು ಟೇಬಲ್ ಟೆನ್ನಿಸ್ ಆಟದಲ್ಲಿ ನಾನು ಮತ್ತು ಸಿದ್ಧಣ್ಣ ಜೋಡಿ.  ಒಂದಷ್ಟು ಪರಿಶ್ರಮ ವಹಿಸಿ ಟೂರ್ನ್ ಮೆಂಟ್ ಗಳಲ್ಲಿ ಒಂದು ಹಂತ ತಲುಪುವಷ್ಟು ಪಳಗಿದ್ದೆವು. ವರ್ಷವಿಡೀ ಆಟ, ತುಂಟಾಟ, ಪುಂಡಾಟಗಳಲ್ಲಿ ಕಳೆದುಹೋಗುತ್ತಿದ್ದ ನಾವು ಪರೀಕ್ಷೆ ಹತ್ತಿರ ಬಂದಾಗ ತುಸು ಬೆದರಿಕೆ ಮತ್ತು ಒಂದಿಷ್ಟು ಆಮಿಷ ಒಡ್ಡಿ ವಿಧೇಯ ವಿದ್ಯಾರ್ಥಿಗಳ ಬಳಿ ನೋಟ್ಸ್ ಗಿಟ್ಟಿಸಿಕೊಂಡು ಅದ್ಹೇಗೊ ಪಾಸಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದ್ದೆವು.

ನಾನು ಸಂಯುಕ್ತ ಕರ್ನಾಟಕ ಪತ್ರಿಕೆ ಸೇರಿ ಹುಬ್ಬಳ್ಳಿಯ ತಬೀಬಲ್ಯಾಂಡ್ ನಲ್ಲಿ ಖೋಲಿ ಮಾಡಿದಾಗ ನನ್ನ ಬಳ್ಳಾರಿ ಮತ್ತು ಹಾವೇರಿ ಸ್ನೇಹಿತರ ಬಳಗ ನಿಯಮಿತವಾಗಿ ಭೇಟಿಯಾಗಲೂ ಸಾಕಷ್ಟು ಕಾರಣಗಳು ತಂತಾನೇ ಹುಟ್ಟಿಕೊಂಡವು. ನಾನಿದ್ದ ಹೋಟೆಲ್ಲಿನಲ್ಲಿ ಮ್ಯಾನೇಜರ್ ಆಗಿದ್ದ ಗೋಪಾಲಕೃಷ್ಣ ವಂಡ್ಸೆ ತಮ್ಮ ಕವಿತೆ, ಸಹೃದಯತೆ ಕಾರಣದಿಂದ ನನ್ನೆಲ್ಲಾ ಗೆಳೆಯರ ಪಡೆಗೆ ಪ್ರೀತಿಪಾತ್ರರಾಗಿದ್ದರು. ಉಳ್ಳಾಗಡ್ಡಿ ಓಣಿಯ ಸಾವಜಿ ಖಾನಾವಳಿ ಸಿದ್ಧಣ್ಣನ ಅತಿ ಇಷ್ಟವಾದ ತಾಣ. ವಾರಕ್ಕೊಮ್ಮೆಯಾದರೂ ಹಾಜರಾಗುತ್ತಿದ್ದ.

ಸಿದ್ಧಣ್ಣನ ಮದುವೆ ನಿಗದಿಯಾದಾಗ ಬಟ್ಟೆ ಖರೀದಿಸಲು ಗೆಳೆಯರೊಂದಿಗೆ ಹುಬ್ಬಳ್ಳಿಗೇ ಬಂದ. ಸಂಜೆ ತನಕ ಖರೀದಿ ಮಾಡಿ ರಾತ್ರಿ ಎಲ್ಲರೂ ಒಂದೆಡೆ ಸೇರಿದ್ದೆವು. ಆಗ ಸಂಯುಕ್ತ ಕರ್ನಾಟಕದಲ್ಲೇ ಇದ್ದ ರವಿ ಬೆಳಗೆರೆ ಕೂಡ ನಮ್ಮೊಂದಿಗೆ ಮದುವೆಯ ‘ಪೂರ್ವಭಾವಿ ಸಭೆ’ಯಲ್ಲಿ ಭಾಗವಹಿಸಿದ್ದರು. ಮದುವೆಗೆ ಹಾವೇರಿಯಲ್ಲೇ ಜವಳಿ ಕೊಳ್ಳುವ ಬದಲು ಹುಬ್ಬಳ್ಳಿಗೆ ಬಂದು ಪಾರ್ಟಿಗೆ ಇಷ್ಟೆಲ್ಲಾ ವೆಚ್ಚ ಮಾಡುವ ಅಗತ್ಯವಿತ್ತೇ… ಎಂಬ ಪ್ರಶ್ನೆ ಅಂದು ಎದ್ದಿತ್ತು.

ಹುಬ್ಬಳ್ಳಿಯಲ್ಲಿ ಮುಂಬೈ ದರದಲ್ಲಿ ಅರಿವೆ ಸಿಕ್ಕಿದ್ದರಿಂದ ಇಷ್ಟು ರೊಕ್ಕ ಉಳಿತಾಯ ಆಗಿದೆ, ಅದರಲ್ಲಿ ಪಾರ್ಟಿಗೆ ಇಷ್ಟು ಖರ್ಚಾಗಿ, ಇಂತಿಷ್ಟು ಮೊತ್ತ ಲಾಭ ಮಾಡಿದ್ದೇವೆ ಎಂದು ನಿಖರ ಲೆಕ್ಕ ಕೊಟ್ಟಿದ್ದ ಅಂಗಡಿ ಮಲ್ಲೇಶಿ! ಆನಂತರ ಬಟ್ಟೆ ಉದ್ಯಮ ಪ್ರಾರಂಭಿಸಿ, ನಷ್ಟ ಅನುಭವಿಸಿ, ಮತ್ತೆ ಬಟ್ಟೆ ವ್ಯಾಪಾರದಲ್ಲೇ ಆರ್ಥಿಕವಾಗಿ ಮೇಲೆದ್ದು ಬಂದಿದ್ದು ಸಿದ್ಧಣ್ಣನ ಸುದೀರ್ಘ ಸಾಹಸಗಾಥೆ.

ಅಂದಹಾಗೆ ನನ್ನ ಆತ್ಮೀಯ ಗೆಳೆಯ ಸಿದ್ಧ ನನ್ನ ಪಾಲಿಗೆ ಸಿದ್ಧಣ್ಣನಾಗಿ ಬದಲಾಗಿದ್ದರ ಹಿಂದೆ ಒಂದು ಘಟನೆಯಿದೆ. ಒಮ್ಮೆ ಅವರ ಮನೆಯ ಲ್ಯಾಂಡ್ ಫೋನಿಗೆ ಕರೆ ಮಾಡಿದೆ. ಅವನ ಹೆಂಡತಿ ಕರೆ ಸ್ವೀಕರಿಸಿದರು. ನಾನು ಅಭ್ಯಾಸ ಬಲದಿಂದ ಸಹಜವಾಗಿ, ‘’ಸಿದ್ಧ ಇಲ್ಲವೇ?’’ ಅಂತ ಕೇಳಿದ್ದೆ. ಬಹುಶಃ ಅವನ ಮಡದಿ ಈ ಬಗ್ಗೆ ಹಾಸ್ಯ ಮಾಡಿ ನಕ್ಕಿರಬೇಕು. ಮರುದಿನ ಮಾತನಾಡುವಾಗ, ‘’ಫೋನ್ ಮಾಡಿದಾಗ ಸಿದ್ಧ ಅನ್ನಬೇಡಲೇ ಚಂದ್ರ, ಸಿದ್ಧಣ್ಣ ಅಂತ ಕರಿ’’ ಎಂದು ಸಂಕೋಚವಿಲ್ಲದೆ ತಿದ್ದಿದ್ದ ಸಿದ್ಧಣ್ಣ.

ಇಂದು (ಸೆಪ್ಟೆಂಬರ್ 15) ಸಿದ್ಧಣ್ಣನ ಹುಟ್ಟು ಹಬ್ಬ; ಆಚರಿಸಲು ಅವನೇ ಇಲ್ಲ! ಎಲ್ಲರಿಗೂ ಎಲ್ಲದಕ್ಕೂ ಸವಾಲು ಹಾಕಿ ದಕ್ಕಿಸಿಕೊಳ್ಳುತ್ತಿದ್ದ ಸಿದ್ಧಣ್ಣ ಕೋವಿಡ್ ಎದುರು ಅದೇಕೋ ಮಣಿದುಬಿಟ್ಟ.

‍ಲೇಖಕರು Avadhi

September 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಶೇಷಗಿರಿ’ಯೆಂಬ ರಂಗಪಟ್ಟಣ

‘ಶೇಷಗಿರಿ’ಯೆಂಬ ರಂಗಪಟ್ಟಣ

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This