ಅದೊಂದು ಕಾಂಡೂಮ್ ಸುಟ್ಟ ಘಟನೆ…

P For…

IMG_8235

ಡಾ ಲೀಲಾ ಸಂಪಿಗೆ

ಅದೊಂದು ಕಾಂಡೂಮ್ ಸುಟ್ಟ ಘಟನೆ. ದಿಢೀರ್ ಅಂತ ಹಾಸನಕ್ಕೆ ಹೋದೆ. ರಾಜಿ ಕಾಯ್ತಾ ಇದ್ಲು ಅವಳನ್ನ ಕರ್ಕ್ಕೊಂಡು ನೇರ ಪೋಲೀಸ್ ಸ್ಟೇಷನ್ ಗೆ ಹೋದೆ. ಅವಳು ಬರೆದಂತೆ ಕಂಪ್ಲೆಂಟ್ ಬರೆದು ಕೊಟ್ಟೆ.

ರಾಜಿ ಶಿರಾಡಿ ಘಾಟ್ ನಲ್ಲಿ ಲೈಂಗಿಕವೃತ್ತಿ ನಡೆಸೋಳು. ಹಾಗೇನೇ ಅಲ್ಲಿರುವ ಲೈಂಗಿಕವೃತ್ತಿ ಮಹಿಳೆಯರಿಗೆ ಕಾಂಡೂಮ್ ಸರಬರಾಜು ಮಾಡ್ತಿದ್ಲು. ಕೆಂಪ್ಹಳ್ಳದ ಹತ್ರ ಕಾಂಡೂಮ್ ತೊಗೊಂಡ್ಹೋಗುವಾಗ ಅಲ್ಲಿದ್ದ ಕಾನ್ ಸ್ಟೇಬಲ್ ಮಹದೇವಯ್ಯ ರಾಜಿ ಹತ್ರ ಇದ್ದ ನೂರಾರು ಕಾಂಡೂಮ್ ಪ್ಯಾಕೆಟ್ ಕಸಿದು ಬೆಂಕಿಗೆ ಹಾಕ್ಬಿಟ್ಟಿದ್ದ. ಅದಷ್ಟೇ ಆಗಿದ್ರೆ ರಾಜಿ ನನ್ನವರೆಗೂ ಸುದ್ದಿ ತರ್ತಿರಲಿಲ್ಲವೇನೋ! ಮಹದೇವಯ್ಯ ರಾಜಿ ಮತ್ತು ಅವಳೊಂದಿಗಿದ್ದ ಮೂವರು ಲೈಂಗಿಕ ವೃತ್ತಿ ಮಹಿಳೆಯರನ್ನು ಚೆನ್ನಾಗಿ ಥಳಿಸಿದ್ದ. ಇಷ್ಟೇ ಆಗಿದ್ರೆ ಮಹದೇವಯ್ಯನ ಮೇಲೆ ಖಂಡಿತಾ ಕ್ರಮ ಜರುಗ್ತಾಯಿರ್ಲ್ಲಿಲ್ಲ. ಮಹದೇವಯ್ಯಂಗೆ ಅದೇನು ತಲೆಗತ್ತಿತ್ತೋ ಅಥವಾ ಇವರೆಲ್ಲಾ ಮಹದೇವಯ್ಯಂಗೆ ಮಾಮೂಲಿ ಕೊಡ್ಡೆ ಅವನನ್ನ ರೇಗಿಸಿದ್ರೋ ಏನೋ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಹಿಮಾಡಿ ರಾಜಿಗೆ ಕೊಟ್ಟಿದ್ದ HIV/AIDS ನಿಯಂತ್ರಣದ ಗುರುತಿನ ಚೀಟಿಯನ್ನು ಸುಟ್ಟು ಹಾಕ್ಬಿಟ್ಟಿದ್ದ. ಸರಿ; ಇದನ್ನೇ ನೆಪ ಮಾಡಿ ದೊಡ್ಡ ರಂಪ ಮಾಡಿದ್ವು. ಮಹದೇವಯ್ಯ ಸಸ್ಪೆಂಡ್ ಆಗಿದ್ದ. ಹೀಗೆ ಸಸ್ಪೆಂಡಾಗಿದ್ದು ಶಿರಾಡಿ ಘಾಟಿನ ವೇಶ್ಯಾವಾಟಿಕೆಯ ನೂರಾರು ವರ್ಷಗಳ ಇತಿಹಾಸದಲ್ಲಿ ಸ್ಮರಣೀಯವಾಯ್ತು.

XXL_BabuXavier-L-770816275

ಅಂಥಾ ಘರಂ ವಾತಾವರಣದಲ್ಲಿ ಹೆಚ್ಚೂ ಕಡಿಮೆ ಆ ತಿಂಗಳೆಲ್ಲಾ ಶಿರಾಡಿ ಘಾಟ್ ನಲ್ಲೇ ಠಿಕಾಣಿ ಹೂಡ್ದೆ. ಯಾವಾಗ ಹೋದಾಗ್ಲೂ ಗಡಿಬಿಡಿ. ಆ ದಟ್ಟವಾದ ಕಾನನದೊಳಗಿನ ಶಬ್ಧ ನಿಶ್ಯಬ್ಧಗಳನ್ನ ಅರ್ಥ ಮಾಡ್ಕೊಳ್ಳೋ ಸಾವಧಾನವೇ ಇರ್ತಿರ್ಲಿಲ್ಲ. ಪ್ರತಿ ಭೇಟಿಯಲ್ಲೂ ಲೈಂಗಿಕವೃತ್ತಿ ಮಹಿಳೆಯರ ಭೇಟಿ, ಕಾಂಡೂಮ್ ವಿತರಣೆ, ಕಾಂಡೂಮ್ ಶೇಖರಿಸಿಡೋ ಸ್ಧಳಗಳು, ಉಪಯೋಗಿಸಿದ ಖಾತ್ರಿಗಾಗಿ ಕಾಡಲ್ಲೆಲ್ಲಾ used ಕಾಂಡೂಮ್ ಹುಡುಕಾಟ! ಇಷ್ಟೇ ಆಗ್ಬಿಡ್ತಿತ್ತು. ಈ ಬಾರಿ ಅಲ್ಲೇ ನಿಂತೆ. ಮಾರನಹಳ್ಳಿ ಗೌಡರ ಮನೆಯಲ್ಲಿ ಉಳ್ಕೊಂಡೆ. ಲೈಂಗಿಕವೃತ್ತಿ ನಡೆಸೋರ ಬದುಕು, ಕಾರ್ಯತಂತ್ರಗಳು, ಪೋಲೀಸರಿಂದ ತಪ್ಪಿಸ್ಕೊಳ್ಕೋ ಹರಸಾಹಸಗಳು, ಅಲ್ಲಿಯ ಗಿರಾಕಿಗಳ ಸೈಕಾಲಜಿ, ಆ ಕಾನನದ ಮುಂಜಾವು, ಹಗಲು, ಮುಸ್ಸಂಜೆ, ರಾತ್ರಿಗಳನ್ನ ಆಳವಾಗಿ ನೋಡೋ ಅವಕಾಶ ಆದಾಗಿತ್ತು.

ಎಲ್ಲಿ ಪ್ರಕೃತಿ ತನ್ನ ಛಾಪನ್ನು ಸುಂದರವಾಗಿ ಮೂಡಿಸಿರುತ್ತದೋ ಅಲ್ಲೆಲ್ಲಾ ಮಾನವನ ಪಾತಕತನಗಳೂ ಇದ್ದೇ ಇರುತ್ತವೆ. ಸಾಮಾನ್ಯವಾಗಿ ಎಲ್ಲೆಲ್ಲಿ ಮಾನವನ ಭೂಗತ ಚಟುವಟಿಕೆಗಳೂ, ಪಾತಕಲೋಕದ ತಾಣಗಳು ಇರುತ್ತವೋ ಅಲ್ಲೆಲ್ಲಾ ವೇಶ್ಯಾವಾಟಿಕೆ ಇರುತ್ತದೆ.

ಈ ಶಿರಾಡಿಘಾಟ್ ಬರೀ ದಟ್ಟವಾದ ಕಾನನವಷ್ಟೇ ಅಲ್ಲ, ಕಾಡಿನ ಬೈತಲೆ ಸೀಳಿದಂತೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ. ಸರಿ; ರಾಷ್ಟ್ರೀಯ ಹೆದ್ದಾರಿ ಮತ್ತು ಕಾನನ ಎರಡನ್ನೂ ವೇಶ್ಯಾವಾಟಿಕೆಯ ಜಾಲ ಚೆನ್ನಾಗಿಯೇ ಬಳಸಿಕೊಂಡಿದೆ. ಗಿರಾಕಿಗಳು ಅತಿ ಹೆಚ್ಚು ದೊರೆಯುವ ಸ್ಥಳ, ಹಾಗೆಯೇ ಲೈಂಗಿಕ ಕ್ರಿಯೆಗೆ ತೊಡಗಬಹುದಾದ ನೂರಾರು ಏಕಾಂತ ಸ್ಥಳಗಳು, ದಿನನಿತ್ಯ ನಿರಂತರವಾಗಿ ಓಡಾಡೋ ಸಾವಿರಾರು ಲಾರಿಗಳು, ವಾಹನಗಳು ಅಲ್ಲಲ್ಲಿ ವಿರಮಿಸ್ತಾವೆ. ವಿಶ್ರಾಂತಿಗೇ, ಸ್ನಾನಕ್ಕೆ, ಅಗತ್ಯಗಳಿಗೆ ತಕ್ಕಂತೆ ಸೌಲಭ್ಯಗಳೂ ಅಲ್ಲಿ ಲಭ್ಯ. ಪ್ರಕೃತಿದತ್ತವಾದ ದಟ್ಟ ಕಾಡಿನ ನೆರಳಿನೊಂದಿಗೇ ಹರಿಯೋ ನದಿಗಳ ತಪ್ಪಲಲ್ಲಿಯೇ ವಾಹನಗಳ ನಿಲ್ಲಿಸೋಕೆ ಹಾಗೂ ಊಟ, ತಿಂಡಿ, ಕುಡಿಯೋಕೆ ಅನುಕೂಲ ಇರೋ ಹೋಟೆಲ್ ಗಳೂ ಕೂಡ ಈ ವಾಹನಗಳಿಗೆ ತಂಗುದಾಣವಾಗಿರುತ್ತವೆ. ಗುಂಡ್ಯದಿಂದ ದೋಣಿಗಾಲ್ ವರೆಗೆ ಸುಮಾರು 1800 ಮೀ. ಎತ್ತರದಲ್ಲಿ ರಸ್ತೆ ಹಾದು ಹೋಗುತ್ತೆ ನಿತ್ಯ ಈ ರಸ್ತೆಯಲ್ಲಿ ಓಡಾಡುವ ವಾಹನಗಳು ಸುಮಾರು 35 ಸಾವಿರ. ಈ ಪೈಕಿ ಲಾರಿಗಳು ಹದಿನಾರು ಸಾವಿರಕ್ಕೂ ಹೆಚ್ಚು.

ಹೀಗೆ ನಿಂತ ವಾಹನಗಳ ಸಿಬ್ಬಂದಿ ಅದರಲ್ಲೂ ಮುಖ್ಯವಾಗಿ ಲಾರಿ ಡ್ರೈವರ್ ಗಳು ಮತ್ತು ಕ್ಲೀನರ್ ಗಳು ಲೈಂಗಿಕವೃತ್ತಿ ಮಹಿಳೆಯರೊಂದಿಗೆ ರೇಟು ಫಿಕ್ಸ್ ಮಾಡ್ತಾರೆ. ಆ ಕಾನನದಲ್ಲಿ ಕರಗಿ ಹೋಗ್ತಾರೆ.

ಒಮ್ಮೆ ಆ ಅಡವಿಯೊಳಗೆ ಹೊಕ್ಕರೆ ಸಾಕು. ಎಲ್ಲವೂ ಪ್ರೈವೇಸಿಯೇ! ಆ ದಟ್ಟತೆ ಎಲ್ಲ ಎಲ್ಲವನ್ನೂ ತನ್ನೊಡಲೊಳಗೆ ಮುಚ್ಕೊಂಡು ಬಿಡುತ್ತೆ. ಅಲ್ಲಲ್ಲಿಯೇ ಮರಗಳ ಬುಡಗಳಲ್ಲಿ ಸಮತಟ್ಟಾದ ಜಾಗಗಳಲ್ಲಿ ತಮಗೆ ಅಗತ್ಯವಿರುವಷ್ಟು ಜಾಗ ಸಿದ್ಧ ಮಾಡ್ಕೊಳ್ತಾರೆ. ಎಲೆಗಳ ರಾಶಿಯನ್ನೇ ಹಾಸಿಗೆಯನ್ನಾಗಿಸಿ ಕೊಳ್ಳೋದು, ತಮ್ಮ ದುಪ್ಪಟ್ಟಗಳನ್ನೇ ಹಾಸಿಕೊಳ್ಳೋದು ಸಾಮಾನ್ಯ ಆದ್ರೆ ಹೆಚ್ಚಿನ ಸಂದರ್ಭಗಳಲ್ಲಿ ಏನೂ ಹಾಸಿಕೊಳ್ಳದೇ ಒದ್ದಾಡಿದ ಗುರುತುಗಳು ಅಲ್ಲಲ್ಲಿ ಕಾಣಸಿಗ್ತಾವೆ.

ನೂರಾರು ಅಡಿ ಎತ್ತರದಲ್ಲಿ ಹೆದ್ದಾರಿ. ಇಕ್ಕೆಲಗಳ ಅಡವಿಯು ಇಳಿಜಾರು. ಅದರೊಳಗೆ ಇಳಿದಿಳಿದು ಹೋದಂತೆ ಆಳದಲ್ಲಿ ತಣ್ಣಗೆ ಹರಿಯೋ ಪಾಪನಾಶಿನಿನದಿಗಳು, ಈ ಲೈಂಗಿಕವೃತ್ತಿ ಮಹಿಳೆಯರ ಬದುಕಿನೊಂದಿಗೆ ಬೇರೆ ಬೇರೆ ಪಾತ್ರಗಳನ್ನ ನಿರ್ವಹಿಸ್ತಾವೆ. ದಣಿದ ದೇಹ, ಮನಸ್ಸುಗಳಿಗೆ ತನ್ನ ತಣ್ಣನೆಯ ಸ್ಪರ್ಶದೊಂದಿಗೆ ಮೈದಡವುತ್ತವೆ. ಅನೇಕ ಬಾರಿ ಪೋಲೀಸರಿಂದಲೋ, ಗಿರಾಕಿಗಳಿಂದಲೋ, ಪಾತಕಿಗಳಿಂದಲೋ ರಕ್ತಸಿಕ್ತವಾಗುವುದು, ಘಾಸಿಗೊಳ್ಳುವುದು ಅತಿ ಸಾಮಾನ್ಯ.

ಆಗೆಲ್ಲಾ ಅನಾಥ ಪ್ರಜ್ಞೆಯಿಂದ, ಏಕಾಂಗಿಯಾಗಿ ಓಡಿ ಬಂದು ಈ ಪಾಪನಾಶಿನಿಯ ತೆಕ್ಕೆಗೆ ಬಂದು ಬಿದ್ದು ಬಿಡುತ್ತಾಳೆ. ಸಮಾಧಾನವಾಗುವವರೆಗೂ ಅಥವಾ ದುಗುಡ ಇಳಿಯುವವರೆಗೂ ಅಲ್ಲೇ ಅವಳ ಮಡಿಲಲ್ಲೇ ಇದ್ದು ಬಿಡುತ್ತಾಳೆ. ಕೆಲವೊಮ್ಮೆ   ಮನಸ್ಸು ಉಲ್ಲಸಿತವಾದಾಗಲೂ (ಬಹಳ ಅಪರೂಪವಾಗಿ) ಕಾಲುಗಳನ್ನು ಇಳಿಬಿಟ್ಟು ಪಾಪನಾಶಿನಿಯ ಸ್ಪರ್ಶದೊಂದಿಗೆ ಉಲ್ಲಸಿತಳಾಗ್ತಾಳೆ. ಬಹುಶ ಇದೊಂದೇ ಏನೋ ಅವಳು ಮಾನಸಿಕವಾಗಿ ರಿಫ್ರೆಷ್ ಆಗಲು ತೊಡಗಿಸಿಕೊಳ್ಳುವ ದಾರಿ.

ಇಲ್ಲಿ ಲೈಂಗಿಕ ವೃತ್ತಿಯಲ್ಲಿ ತೊಡಗುವ ಶೇ. 100 ರಷ್ಟು ಮಹಿಳೆಯರೂ ವಲಸೆ ಬಂದವರೇ! ಅದೇ ಜಿಲ್ಲಾ ಕೇಂದ್ರದಿಂದ, ನೆರೆ ಜಿಲ್ಲೆಗಳಿಂದ, ನೆರೆ ರಾಜ್ಯಗಳಿಂದಲೂ ಇಲ್ಲಿಗೆ ವಲಸೆ ಬರ್ತ್ತಾರೆ. ಕೆಲವೊಮ್ಮೆ ಅದೆಲ್ಲೋ ಲಾರಿ ಹತ್ತುತ್ತಾರೆ, ಹೋದ ಮಹಿಳೆ ಇನ್ನೆಲ್ಲೋ ಇಳೀತಾಳೆ. ಕೆಲವೊಮ್ಮೆ ನಗರಗಳಲ್ಲಿ ರೈಡ್ ಹೆಚ್ಚಾದರೋ, ಗಲಭೆಗಳಾದರೋ, ಗಂಭೀರ ಪರಿಸ್ಥಿತಿ ಉಂಟಾದಾಗಲೋ, ಸ್ಟ್ರೆಕ್ ಗಳಾದಾಗಲೋ, ಅಯ್ಯಪ್ಪನ ಭಕ್ತರೆಲ್ಲಾ ಯಾತ್ರೆ ಹೋದಾಗಲೋ, ತನ್ನನ್ನು ರೌಡಿಗಳಿಂದಲೋ, ಪುಡಿ ಪೋಕರಿಗಳಿಂದಲೋ ರಕ್ಷಿಸಿ ಕೊಳ್ಳಲು ….. ಹೀಗೆ ನೂರಾರು ಕಾರಣಗಳಿಂದಾಗಿ ಇಲ್ಲಿಗೆ ಈ ಮಹಿಳೆಯರು ಬರ್ತ್ತಾನೇ ಇರ್ತ್ತಾರೆ. ಆಗೆಲ್ಲಾ ಗಿರಾಕಿಗಳಿಗೆ ಸುಗ್ಗಿ. ಹೊಸ ಹೊಸ ಮಾಲುಗಳ ರುಚಿ ನೋಡೋಕೆ ಹವಣಿಸ್ತಾರೆ. ನಿರ್ಲಿಪ್ತವಾಗಿ ಹೋಗಬೇಕೂಂತ ನಿರ್ಧಾರ ಮಾಡಿ ಬಂದಿದ್ದ ವಿಟರೂ ಕೂಡ ಮನಸ್ಸು ಬದಲಿಸಿ ಬಿಡ್ತಾರೆ.

ಒಮ್ಮೆ ರಾಜಿ, ಶಾಂತ, ಸಾಕಮ್ಮ ಹಾರಾಡ್ಕೊಂಡು ಬಂದ್ರು. ಯಾವುದೋ ದೊಡ್ಡ ಮಾರಾಮಾರಿಯೇ ಆಗಿರ್ಬ್ಬೇಕೂಂತ ನನಗೆ ಅನ್ನಿಸ್ತು. ಯೂಕೇಂತ ವಿಚಾರಿಸಿದ್ರೆ ಎಲ್ಲಿಂದಲೋ ಗುಂಪುಗುಂಪಾಗಿ ಹುಡ್ಗೀರು ಬಂದ್ಬಿಟೌವ್ರೆ ಅಂದ್ರು. ಬಂದಿದ್ದ ಹುಡ್ಗೀರು ಲಾಟುಪೂಟಾಗಿದ್ರೆ ಈ ಹಳೇ ಹುಲಿಗಳು ಬಿಟ್ಟು ಬಿಡ್ತಿದ್ರೇನೋ. ಆದ್ರೆ ಬಂದ ಗುಂಪಿನ ಹುಡ್ಗೀರು ಥಳಕು ಬಳುಕಿನೋರು. ಬೇರೆ ಬೇರೆ ಭಾಷೆ ಗೊತ್ತಿದ್ದೋರು. ದಪ್ಪ ಪುಷ್ಟವಾದ, ನವನವೀನವಾದ ಈ ಹುಡ್ಗೀರು ಇರೋ ಬರೋ ಗಿರಾಕಿಗಳ್ನೆಲ್ಲಾ ಔಟ್ ಮಾಡ್ಬಿಟ್ಟಿದ್ರು.

ಇಂಥಾ ಸಂದರ್ಭ ಬಂದಾಗೆಲ್ಲಾ ಒಬ್ಬರಿಗೊಬ್ಬರ್ಗ್ಗೆ ಅತಂತ್ರ ಕಾಡಿಬಿಡುತ್ತೆ. ವೃತ್ತಿ ವೈಷಮ್ಯ ತಾರಕಕ್ಕೇರ್ಬಿಡುತ್ತೆ. ಸದಾ ಹೆಡೆಯೆತ್ತಿ ಬುಸುಗುಡುತ್ಲೇ ಇರುತ್ತೆ. ಎಷ್ಟೋ ಬಾರಿ ದುರ್ಬಲವಾದವಳು ಬಂದ್ರೆ ಓಡಿಸಿಯೇ ಬಿಡ್ತಾರೆ. ಪ್ರಬಲವಾಗಿದಾದ ಈ ಜಾಗ ಏನು ‘ನಿಮ್ಮಪ್ಪಂದಾ’ ಅಂದೋಳು ಅಲ್ಲಿ ನಿಲ್ತಾಳೆ.

ಆದ್ರೆ ಎಷ್ಟೆಲ್ಲಾ ವೈರುಧ್ಯತೆಗಳು, ದ್ವೇಷಾಸೂಯೆಗಳು, ವೃತ್ತಿ ಸ್ಪರ್ಧೆಗಳು ಇದ್ದರೂ ಇಡೀ ಸಮುದಾಯಕ್ಕೆ ಏನಾದ್ರೂ ಅಪಾಯ ಒದಗುವ ಸೂಚನೆ ಬಂದ್ರೆ ಒಟ್ಟಾಗಿ ಬಿಡ್ತಾರೆ. ಇವರಲ್ಲಿಯೂ ಎಲ್ಲಾ ಪಾಲಿಟಿಕ್ಸ್ ಇರುತ್ತೆ. ಕೆಲವೊಮ್ಮೆ ಇಂತಹ ಅಪಾಯಗಳ ಹುನ್ನಾರದಲ್ಲಿ ಈ ಸಮುದಾಯದವರೇ ಕೆಲವರು ಒಳಸೇರಿರ್ತಾರೆ, ಉದಾ: ಪೋಲೀಸ್ರಿಗೆ ಮಾಹಿತಿ ನೀಡೋದು, ಕಾಡಿಗೆ ಬೆಂಕಿ ಹೊತ್ತಿಸೋದು, ಕಾಡಾನೆ ಬಂತು ಅಂತ ವದಂತಿ ಹಬ್ಬಿಸೋದು…… ಹೀಗೆ.

ಇನ್ನೂ ಊಟ, ತಿಂಡಿ, ಕೆಲವೊಮ್ಮೆ ಆಶ್ರಯಕ್ಕಾಗಿ ಹೆದ್ದಾರಿಯಲ್ಲಿರುವ ಹೋಟೆಲ್ ಶಾಂಭವಿ, ಹೋಟೆಲ್ ಫ್ರೆಂಡ್ಸ್, ಹೋಟೆಲ್ ತ್ರಿಸ್ಟಾರ್, ಹೋಟೆಲ್ ರಂಗೋಲಿ, ಹೋಟೆಲ್ ಶಾನುಭೋಗ್, ಅಹಮದ್ ಹೋಟೆಲ್ಗಳೊಂದಿಗೆ ಇವರ ಒಡನಾಟ. ಆದ್ರೆ ಎಲ್ಲ ಹೋಟೆಲ್ ಗಳಲ್ಲಿಯೂ ಇವರಿಗೆ ಸಹಕರಿಸೋಲ್ಲ. ಕೆಲವು ಹೋಟೆಲ್ ಗಳು ಪಕ್ಕ ಸಸ್ಯಹಾರಿಯಂತೆ ವರ್ತಿಸ್ತಾವೆ. ಇವರ ಒಡನಾಟ ಅಂದ್ರೆ ಆ ಹೋಟೆಲ್ ಗಳಿಗೆ ಪೋಲೀಸರ ಬೀಟ್, ರೌಡಿಗಳ, ಪರ್ಕಿಗಳ ಹಾವಳಿ, ಅರಣ್ಯ ರಕ್ಷಕರ ಕಾಟ

ಅಂತ ಕೆಲವು ಹೋಟೆಲ್ ಗಳವರು ಇವರನ್ನು ಸೋಕಿಸಿಕೊಳ್ಳೋದೇ ಇಲ್ಲ. ಇನ್ನು ಕೆಲವು ಹೋಟೆಲ್ ಗಳವರು ಇವರನ್ನು ಲಾಭಗಳಿಕೆಯ ಒಂದು ಮುಖವಾಗಿ ನೋಡ್ತಾರೆ.

ಈ ಕಾಡಲ್ಲಿ ಲೈಂಗಿಕ ವೃತ್ತಿಯಲ್ಲಿ ಮಹಿಳೆಯರು ಎರಡು ರೀತಿ ಪೋಲೀಸರನ್ನು ಸಂಭಾಳಿಸ್ಬೇಕು. ಒಂದು ಸಿವಿಲ್ ಪೋಲೀಸ್, ಇನ್ನೊಂದು ಅರಣ್ಯ ಪೋಲೀಸ್ ಪಡೆಯೋರು. ಇಬ್ಬರಿಗೂ ಮಾಮೂಲಿ ಕೊಡ್ಬೇಕು. ಇಬ್ಬರಿಗೂ ಅವರು ಬಯಸಿದಾಗೆಲ್ಲಾ ದೇಹವನ್ನು ಕೊಡ್ಬೇಕು. ಇಷ್ಟೆಲ್ಲಾ ಆದ್ರೂ ಕ್ಷಣಂ ಚಿತ್ತಂ ಎಂಬಂತೆ ಲಾಟಿ ಹಿಡಿದು ಮುಖ ಗಂಟಿಕ್ಕಿ ನಡೆಯುತ್ತಲೇ ಇರ್ತಾರೆ.

ಆದ್ರೆ ಇಲ್ಲಿಯ ಲೈಂಗಿಕ ವೃತ್ತಿ ಮಹಿಳೆಯರು – ಪೋಲೀಸರು, ರೌಡಿಗಳು ಹಿಂಬಾಲಿಸಲು ಸಾಧ್ಯವಾಗದಂತೆ ತಮ್ಮದೇ ಕಾರ್ಯತಂತ್ರ ರೂಪಿಸ್ಕೊಂಡಿರ್ತಾರೆ. ಇವರು ರೂಪಿಸಿರೋ  ಕಿರುದಾರಿಗಳಲ್ಲಿ, ಮೆಟ್ಟಿಲುಗಳಲ್ಲಿ ಇನ್ನಾರೂ ಇಳಿಯಲು ಸಾಧ್ಯವೇ ಇಲ್ಲ. ಹಾಗೇನಾದ್ರೂ ನುಗ್ಗಿದರೆ ಬೂಟುಕಾಲಿನ ಸಮೇತ ಆಸ್ಪತ್ರೆ ಸೇರ್ಬೇಕಾಗುತ್ತೆ. ಸುಮಾರು 40-50 ಅಡಿಯವರೆಗೂ ಮೇಲಿಂದ ಕೆಳಗೆ ಇಂಥಾ ವ್ಯೂಹಗಳನ್ನು ಕಾಡಿನ ತುಂಬೆಲ್ಲಾ ಮಾಡ್ಕೊಂಡಿರ್ತಾರೆ.

ಈ ಹೆಣ್ಣುಗಳು ಸದಾ ಕಾಡಿನೊಂದಿಗೇ, ಅದರ ಬಾಹುವಿನೊಳಗೇ ಹೆಣೆದುಕೊಂಡಿರುತ್ತಾರೆ.  ತಮ್ಮ ವೃತ್ತಿಯೊಂದಿಗೆ ಲೈಂಗಿಕ ಕ್ರಿಯೆಗೋ, ಅಥವಾ ತಮ್ಮನ್ನು ತಾವು ಬಚ್ಚಿಟ್ಟುಕೊಳ್ಳಲೋ, ವಿಶ್ರಮಿಸಲೋ ದಟ್ಟಡವಿಯೆಳಗೆ ಹೋಗಲೇ ಬೇಕಾಗುತ್ತೆ. ಅವರೇ ಅದಕ್ಕಾಗಿ ನಿರ್ಮಿಸಿಕೊಂಡಿರುವ ತಂಗುದಾಣಗಳು ಅಲ್ಲಲ್ಲೇ ಇರುತ್ವೆ. ಗೂಡುಗಳಂತೆ ಬೆಳೆದಿರೋ ಪೊದೆಗಳನ್ನ ಗುಡಿಸಿ ಚೊಕ್ಕಮಾಡಿ ಮೃದುವಾದ ಮಣ್ಣನ್ನು ಹಾಸಿ ಗೂಡು ಕಟ್ಕೊಳ್ತಾರೆ. ಒಂದು ಪೊದರಿನ ಗಿಡವನ್ನೂ ಬಾಗಿಲಾಗಿ ಬಳಸಿಕೊಳ್ಳುತ್ತಾರೆ.  ಈ ಗೂಡುಗಳೇ ಅವರ ತಾಣಗಳು!

ಸಾಮಾನ್ಯವಾಗಿ ಹಸಿರು, ತಂಗಾಳಿ, ಹರಿಯೋ ನದಿಗಳು, ದಟ್ಟಡವಿಯೆಂದಷ್ಟೇ ಶಿರಾಡಿಘಾಟನ್ನು ನೋಡ್ತಿದ್ದೆ. ಆದ್ರೆ ಈಗ ನಾನು ಕಾಲಿಟ್ಟಲ್ಲೆಲ್ಲಾ ರಾಶಿರಾಶಿ ಸಿಗುವ used ಕಾಂಡೂಮ್ಗಳನ್ನ ನೋಡ್ತಿದ್ದೀನಿ.

ಇದೆಲ್ಲದರ ನಡುವೆ ಇನ್ನೊಂದು ವಿಚಾರ ನನ್ನನ್ನು ಬಲವಾಗಿ ಕಾಡಿದ್ದು ಅಂದ್ರೆ ಇದ್ದಕ್ಕಿದ್ದಂತೆ ನುಗ್ಗುವ ಆನೆಗಳ ಕಾಲ್ತುಳಿತಕ್ಕೆ ಒಳಗಾಗುವ ಅಪಾಯ, ಹೆಜ್ಜೆ ತಪ್ಪಿ ಪ್ರಪಾತಕ್ಕೆ ಬಿದ್ದು ಬಿಡುವ ಅಪಾಯ, ಅರ್ಧರಾತ್ರಿಯಲ್ಲಿ ಲಾರಿ ಹತ್ತುವವರು ಅಪಘಾತಕ್ಕೀಡಾಗಬಹುದಾದ ಅಪಾಯ….. ಹೀಗೆ ಸದಾ ತೂಗುಕತ್ತಿಯ ಮೇಲೆ ನಡೆಯುವ ನಡಿಗೆಯಾಗೇ ಇವರ ಬದುಕಿರುತ್ತೆ. ಹೀಗೆ ಅಕಸ್ಮಿಕಗಳಿಗೆ ಪ್ರಾಣತೆತ್ತ ಅದೆಷ್ಟೋ ಹೆಣ್ಣುಗಳ ಅಸ್ಠಿಪಂಜರಗಳು ಇಲ್ಲಿ ಸಾಕ್ಷಿಯಾಗಿವೆ.

ಸದಾ ಕತ್ತಲು-ಬೆಳಕು-ಬೆತ್ತಲುಗಳ ಗುಂಗಿನಲ್ಲೇ ಇರುವ ಈ ಹೆಣ್ಣುಗಳಿಗೆ ಇಲ್ಲಿನ ಬದುಕೂ ಕೂಡ ಅಕಸ್ಮಿಕ, ಅನಿವಾರ್ಯ!

‍ಲೇಖಕರು avadhi

April 24, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳ ಮೈಮೇಲೆ ನೋಟುಗಳ ಮಳೆ ಸುರಿದಿತ್ತು

ಅವಳ ಮೈಮೇಲೆ ನೋಟುಗಳ ಮಳೆ ಸುರಿದಿತ್ತು

P For… -ಲೀಲಾ ಸಂಪಿಗೆ ಇತ್ತೀಚಿಗೆ ಕನ್ನಡ ಕಟ್ಟಾಳುಗಳ ಪಡೆಯೊಂದು ಲೈವ್ ಬ್ಯಾಂಡ್ ಗಳ ಮುಂದೆ ಘೋಷಣೆ ಕೂಗ್ತು. ಇಲ್ಲೆಲ್ಲಾ  ಬೇರೆ ರಾಜ್ಯದ...

14 ಪ್ರತಿಕ್ರಿಯೆಗಳು

 1. PRAKASH HEGDE

  ಶಿರಾಡಿ ಘಾಟಿನಲ್ಲಿ ಪ್ರಕ್ರತಿ ಸೌಂದರ್ಯದ ಹಿಂದೆ …
  ಇಷ್ಟೆಲ್ಲ ಭಯಾನಕವಿದೆಯಾ…?
  ಇಂಥಹ ಬದುಕು ತೀರಾ ಮಾಮೂಲು ಅನ್ನುವ ಹಾಗಿದೆಯಾ…?

  ನಮ್ಮ ಸಭ್ಯ ಸಮಾಜದ..
  ಕ್ರೂರ ಮುಖವನ್ನು ನಗ್ನವಾಗಿ ಬಿಡಿಸಿಟ್ಟಿದ್ದೀರಿ…

  ಓದಿ ಬಹಳ ಬೇಸರವಾಯಿತು…

  ಪ್ರತಿಕ್ರಿಯೆ
 2. ಸುಶ್ರುತ

  ಓದಿ ಮೂಕನಾಗಿದ್ದೇನೆ. ಇನ್ನು ಶಿರಾಡಿಯ ಘಾಟಿಯಲ್ಲಿ ಸಾಗುವಾಗಲೆಲ್ಲ ನೆನಪಾಗಿ ಕಾಡುತ್ತೆ ಇದು. ನೋ ಡೌಟ್. 🙁

  ಪ್ರತಿಕ್ರಿಯೆ
 3. ಟೀನಾ

  ಲೀಲಾ,
  ಅನೂಹ್ಯ ರೀತಿಯಲ್ಲಿ ಶಿರಾಡಿಘಾಟಿಯ ಈ ಹೆಣ್ಣುಮಕ್ಕಳ ಬದುಕನ್ನ ನಿರೂಪಿಸಿದೀರಿ.
  ದಂಗಾಗಿಹೋಗಿದೇನೆ. ಕೊನೆಯ ಸಾಲುಗಳಂತೂ ಇವರ ವಿಶೇಷ ಬದುಕಿನ ಬಗ್ಗೆ
  ಹೇಳುತ್ತಲೆ ಭೀತಿ,ಅಚ್ಚರಿ, ವಿಷಾದ, ಎಲ್ಲವನ್ನೂ ಮೂಡಿಸಿದವು.
  ಇಂಥವರ ಕಾಣದ ಬದುಕಿನ ಬಗ್ಗೆ ಬರಿಯೋ ಒಬ್ಬ ಲೀಲಾ ಆದರು ನಮ್ಮ ನಡುವೆ ಇದೀರಲ್ಲ!!

  ಪ್ರತಿಕ್ರಿಯೆ
 4. ಶ್ರೀನಿವಾಸಗೌಡ

  ಶಿರಾಡಿಯ ಮೋಹಕತೆಯನ್ನ, ಹಸಿರು ವನರಾಶಿಯನ್ನ ಕಂಡು ನಾನು ಬೆಕ್ಕಸ ಬೆರಗಾಗಿದ್ದೇನೆ ಆದರೆ ಲೀಲಾ ಸಂಪಿಗೆ ಅವರು ಬರೆದಿರುವ ಘಾಟಿಯ ಈ ಮುಖದ ಬಗ್ಗೆ ನನಗೆ ಕಿಂಚಿತ್ತೂ ತಿಳಿದಿರಲಿಲ್ಲ, ಶಿರಾಡಿ ಘಾಟಿ ಅನ್ನೊನು ನೀವು ಹೇಳಿದಂತೆ ಸೌಂದರ್ಯ ಮತ್ತು ಪಾತಕದ ಸಂಕೇತ ಹೌದು ಅನಿಸುತ್ತದೆ…
  ಎಂ,ಬಿ,ಶ್ರೀನಿವಾಸಗೌಡ

  ಪ್ರತಿಕ್ರಿಯೆ
 5. h n eshakumar

  ನಿಜಕ್ಕೂ ಶಿರಾಡಿಯ ಹಿಂದೆ ಇಂತಹ ರಾಡಿ ಇದೆ ಅನ್ನೋದನ್ನ ಓದುತಿದ್ದ ಹಾಗೆ ಅದರ ಹಿಂದಿರುವ ನೋವಿನ,ದಾರುಣ ಬದುಕು ಮನವನು ಕಾಡುತ್ತದೆ.ಕಾಡಿನ ಅಗಾಧ ನೀರವ ಕೂಪದೊಳಗೆ ದಿನದ ಬವಣೆಗಳನು ದೂಡುತಿರುವ ಜೀವಗಳ ನೋವಿನಂದರವನು ಮನ ಕಲಕುವಂತೆ ವಿಷದಪಡಿಸಿರುವ ಲೀಲಾ ಅವರೇ ಧನ್ಯವಾದಗಳು…ಎಚ್.ಎನ್.ಈಶಕುಮಾರ್

  ಪ್ರತಿಕ್ರಿಯೆ
 6. ಆಲಾಪಿನಿ

  ಲೀಲಾ ಮೇಡಮ್‌, ಈಗ ಮತ್ತೆ ಶಿರಾಡಿ ಘಾಟ್‌ಗೆ ಹೋದ್ರೆ ಸುಶ್ರುತ ಹೇಳಿದ್ದೇ ನನಗೂ ಅನ್ನಿಸುತ್ತೆ…

  ಪ್ರತಿಕ್ರಿಯೆ
 7. Amar

  Kempu hoLe area is famous for prostituion.
  Any how, concern of author towards prostitutes and prostituion is appreciated. 🙂 It is like author is urging that good facility should be provided for prostitutes there and police should take action so that prostitution will go smoothly there ! Thank you.

  ಪ್ರತಿಕ್ರಿಯೆ
 8. Sughosh S. Nigale

  ಸುಂದರ ಪ್ರಕೃತಿ ಹಾಗೂ ನೈಸರ್ಗಿಕ ಸಂಪತ್ತನ್ನು ಮನುಷ್ಯ ತನ್ನ ಸ್ವಾರ್ಥ ಹಾಗೂ ತೆವಲಿಗಾಗಿ ವಿಕೃತವಾಗಿ ಬಳಸಿಕೊಳ್ಳುತ್ತಾನೆ. ಶಿರಾಡಿ ಘಾಟ್ ನ ಚಿತ್ರಣ ಬೆಚ್ಚಿಬೀಳಿಸುತ್ತದೆ. ತಮ್ಮ ಲೇಖನಗಳ ಮೂಲಕ ಸದಾ ಹೊಸ ಹೊಸ ವಿಷಯಗಳನ್ನು, ಮಾಹಿತಿಯನ್ನೂ ಮೊಗೆದು ಕೊಡುವ ಲೀಲಾ ಮೇಡಂಗೆ ಥ್ಯಾಂಕ್ಸ್.
  ಸುಘೋಷ್ ಎಸ್. ನಿಗಳೆ

  ಪ್ರತಿಕ್ರಿಯೆ
 9. ranganna k

  nijavagalu adbhuthavaagide nimma baravanige. shiradi ghat’ endare eno andokodidde, ghat mathe highway’gala thumba bhayanaka mukhavannu prastutha padisiddiri. nimma baravanige vasthavathe’ge kaigannadiayagide.

  ಪ್ರತಿಕ್ರಿಯೆ
 10. harshavardhan sheelavant

  ‘ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾ:’ – ಬಹುಶ: ಪುನರ್ ವ್ಯಾಖ್ಯಾನಿಸುವ ಕಾಲ ಬಂದಿದೆ. ನನ್ನ ತಾಯಿಯೋ, ತಂಗಿಯೋ, ಅಕ್ಕನೋ ಅಥವಾ ಹೆಂಡತಿಯನ್ನೋ ಅವರ ಸ್ಥಾನದಲ್ಲಿ ಕಲ್ಪಿಸಿಕೊಂಡರೆ, ಅವರಿಗೊಂದು ಗೌರವದ ಬದುಕು ಕಟ್ಟಿಕೊಳ್ಳಲು ಈ (ಅ) ನಾಗರಿಕ ಸಮಾಜ ಅವಕಾಶ ಕಲ್ಪಿಸಿದರೆ..ನಾವೂ ಕೈಲಾದ ಸಹಾಯ ಮಾಡಲು ಅಣಿಯಾದರೆ..ಏನು ಮಾಡಬಹುದು ಎಂದು ಕ್ಷೇತ್ರ ಪರಿಣತರು ಸುಳಿವು ನೀಡಿದರೆ ಮಾಧ್ಯಮ ಮಿತ್ರರು ಒಟ್ಟಾಗಿ ಶ್ರಮಿಸಬಹುದು.

  ಹರ್ಷವರ್ಧನ್ ವಿ. ಶೀಲವಂತ, ಧಾರವಾಡ.

  ಪ್ರತಿಕ್ರಿಯೆ
 11. Muralidhar Sajjan

  ಕಾದಂಬರಿಗಳಲ್ಲಿ ಓದಿದ್ದೆ. ಆದ್ರೆ ನಿಜವಾಗ್ಲೂ ಹೀಗಿದೆ ಅಂತ ಗೊತ್ತಿರಲಿಲ್ಲ. ಭಯವಾಗುತ್ತೆ ಮೇಡಂ. ನನಗನ್ನಿಸುತ್ತೆ ಇದಕ್ಕೆ ಅಂತ್ಯವಿಲ್ಲವೆಂದು. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡುತ್ತಿದ್ದರೆ ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು ನೆನಪಾಗುತ್ತವೆ. ಅಂದ್ರೆ ಕಲಿಯುಗದ ಅಂತ್ಯ ಆರಂಭವಾಗಿದೆ . ಬಹಳ ಬೇಸರದ ಸಂಗತಿ. ಇನ್ನೂ ಏನೇನೋ ನಡೆಯುತ್ತೆ ದೇವರೆ ಕಾಪಾಡಪ್ಪಾ.

  – ಮುರಳೀಧರ ಸಜ್ಜನ,ಹುಬ್ಬಳ್ಳಿ.

  ಪ್ರತಿಕ್ರಿಯೆ
 12. ಮಹೇಶ್ ಮೂರ್ತಿ ಸುರತ್ಕಲ್

  ಡಾ. ಲೀಲಾ ಸಂಪಿಗೆ ಯವರೇ …
  ತುಂಬಾ ಅದ್ಭುತ …. ರೋಮಾಂಚನ ಮೂಡಿಸಿತು ನೀವು ಬರೆದ ಲೇಖನ …. ಓದುತ್ತಾ ಹೋದಂತೆ ಕುತೂಹಲ ಮೂಡಿಸಿತು …. ತುಂಬಾ ಚಂದಗಿನ ನಿರೂಪಣೆ … ಆದ್ರೆ ಇದು ನಿಜ ಕತೆ ಅನ್ನೋವಾಗ ಮಾತ್ರ ಎದೆಯೊಳಗೆ ಅವಲಕ್ಕಿ ಕುಟ್ಟಿದಂತಾಗುತ್ತದೆ …. …. ಅಲ್ಲಾ ಆ ದೇವರು ಅದೆಷ್ಟು ಕ್ರೂರಿ …

  ಪ್ರತಿಕ್ರಿಯೆ
 13. ranganna k

  ಶಿರಾಡಿಯ ಜೊತೆಯಲ್ಲಿ ಅಸ್ಟೊಂದು ರಾಡಿ ಇದೆಯೆಂದು ತಿಳಿದಿರಲಿಲ್ಲ.
  ಕೆಲೆವೊಮ್ಮೆ ಘಟುಗಳಲ್ಲಿ ನಡೆಯಬೇಕೆಂಬ ಅಸೆ ಮೂಡಿ ಬರುತ್ತೆ,
  ಆದೆರೆ ಇಂಥ ಕತೆಗಳನ್ನು ಶಿರಾಡಿಯ ಸೆರಗಿನಲ್ಲಿ ಸುತ್ತಿಕೊಂಡಿದೆ ಅಂತ ತಿಳಿದು ಭಯಾನಕವಾಗಿದೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: