ಅನಂತಮೂರ್ತಿ ಹೇಳುತ್ತಾರೆ: ಶಿವಾಪುರ ಅಳಿಯುವುದಿಲ್ಲ

-ಯು ಆರ್. ಅನಂತಮೂರ್ತಿ

ನನ್ನ ಸಮಕಾಲೀನ ಲೇಖಕರಲ್ಲಿ  ವಿಶಿಷ್ಛರಾದ ಚಂದ್ರಶೇಖರ ಕಂಬಾರರ ಕಾವ್ಯದ ಮ್ಯಾಜಿಕನ್ನು  ನಾನು ಯಾವತ್ತು  ವಿಶ್ಲೇಷಿಸದಂತೆ ಅನುಭವಿಸಿದ್ದೇನೆ. ವಿಶ್ಲೇಷಣೆಗೆ ಸಿಗುವಂತೆ ಯೋಚಿಸಿ ಬರೆಯುವ ಕವಿ ಕಂಬಾರರಲ್ಲ. ಇಂಗ್ಲೀಷ್ ನ ಬಹುದೊಡ್ಡ ಕಾದಂಬರಿಕಾರ ಹೆನ್ರಿ ಜೀಮ್ಸ್ ಬಗ್ಗೆ ಎಲಿಯೆಟ್ ಒಂದು ಮಾತು ಹೀಳುತ್ತಾನೆ; ‘ನಮ್ಮ ಕಾಲದಲ್ಲಿ ಈತನೊಬ್ಬನಿಗೆ ಮಾತ್ರ ಅಬ್ ಸ್ಟ್ರಾಕ್ಟ್[abstract]  ಆಗಿ ಯಾವ ಅಭಿಪ್ರಾಯಗಳೂ ಹೊಳೆಯುವುದಿಲ್ಲ. ಅವನು ಎಲ್ಲವನ್ನೂ ನಿಜದ ವಸ್ತುಗಳನ್ನಾಗಿಯೇ  ಕಾಣುತ್ತಾನೆ.
ಕಂಬಾರರನ್ನು ಬೇಂದ್ರೆಗೆ  ಹೋಲಿಸುವುದುಂಟು. ಇದು ಸರಿಯಲ್ಲ. ಕಂಬಾರರು ಮೈಮರೆತು ಆಧ್ಯಾತ್ಮಿಕವಾದ ತುಡಿತದಲ್ಲಿ ಬರೆಯುವವರಲ್ಲ. ಅವರಿಗೆ ಆತ್ಮದಷ್ಠೇ  ದೇಹವೂ ನಿಜ. ಆದರೆ ಜಡವೆಂದು ನಾವು ತಿಳಿಯುವ ಜಗತ್ತು ಇವರ ಕಾವ್ಯದೊಳಗೆ ಕುಣಿದಾಡಿಕೊಂಡು ಪ್ರವೇಶಿಸುತ್ತದೆ. ಬೇಂದ್ರೆಯಲ್ಲಿ-ಹಿನ್ನೆಲೆಯಲ್ಲಿ ಹೊಳೆಯುತ್ತದೆ.
ನಾನು ಅಡಿಗರಲ್ಲೂ, ಕಂಬಾರರಲ್ಲೂ ಒಂದು ಸಂಗತಿಯನ್ನು ಗುರುತ್ತಿಸಿದ್ದೇನೆ. ಅಡಿಗರ ಕವಿತೆಗಳ ನಾಯಕ ಕೆಲವೊಮ್ಮೆ ಸರ್ಕಸ್ ನ ಬಫೂನನಂತೆ ತನ್ನನ್ನೇ ಗೇಲಿಮಾಡಿಕೊಳ್ಳಬಲ್ಲ. ಸರ್ಕಸ್ ನ ಉಳಿದ ಪಾತ್ರಗಳು ದೇಹಪಾಯ ಲೆಕ್ಕಿಸದೇ ಮಾಡುವ ಎಲ್ಲ ಸಾಹಸಗಳನ್ನು ತಾನೇ ಮಾಡಿ ತೋರಿಸಿ ಬಫೂನ್ ಸಾಹಸಪ್ರಿಯರಾದ ನಮ್ಮ ದಡ್ಡತನ ನೋಡಿ ನಗುತ್ತಾನೆ. ಅವನು ಎಲ್ಲರಿಗಿಂತ ಕೀಳೂ ಹೌದು. ಎಲ್ಲರಿಗಿಂತ ಮೇಲೂ ಹೌದು. ಕಂಬಾರರ ಪಾತ್ರಗಳು ಅಡಿಗರಿಗಿಂತಲೂ ಹೆಚ್ಚಾಗಿ ತನ್ನನ್ನೇ ತಾನು ಹಾಸ್ಯಮಾಡಿಕೊಳ್ಳಬಲ್ಲವರು. ಅಡಿಗರಿಗಾದರೂ ನೇರವಾಗಿ ಹೇಳಿಕೊಳ್ಳುವ ವೈಯಕ್ತಿಕ  ಆರ್ತತೆಯ ಹಲವು ಭಾವನಾತ್ಮಕ ವಿಷಯಗಳಿವೆ. ಕಂಬಾರರಿಗೂ ಇವೆ. ಆದರೆ ಅವೆಲ್ಲವೂ ಹಾಸ್ಯದ ಮುಖವಾಡ ತೊಟ್ಟು ನಮಗೆ ಎದುರಾಗುತ್ತವೆ. ಯಾಕೆ ಇಡೀ ಜಗತ್ತನ್ನೇ ಅವಾಕ್ಕಾಗಿಸಿದ ಮಾವೋತ್ಸೆ ತುಂಗ ಈ ಕವಿಯ ನಾಯಕನಿಗೆ ದೇವತಾ ಸದೃಶನಾದ ಆತ್ಮರತ ಮೂರ್ಖನೂ, ಹೀಗೆ ನಮಗೆ ತೋರುವುದಕ್ಕಾಗಿ  ತುಡಿಯುವ ಬಫೂನನೂ  ಆದ ಒಬ್ಬ ವ್ಯಕ್ತಿಯಾಗುತ್ತಾನೆ. ನಾನು ಚೀನಾಕ್ಕೆ ಹೋದಾಗ ನನಗೆ ಅನ್ನಿಸಿತ್ತು-ಕಂಬಾರರಂತೆ ಚೀನಿಯರಿ ಬರೆಯಬಲ್ಲವರಾಗಿದ್ದರೆ ಮಾವೋನಿಂದ ಎಂದಾದರೂ ಬಿಡುಗಡೆ ಪಡೆಬಹುದಿತ್ತು ಎಂದು. ಕಂಬಾರರನ್ನು ಎಲ್ಲಿ ಎತ್ತಿ ಓದಿದರೂ ವಕ್ರ ನೋಟದಿಂದ ಕಂಡ ಸತ್ಯಗಳೇ ಎದುರಾಗುತ್ತವೆ. ಈ ಕಂಬಾರ-ಲೋಕದಲ್ಲಿ ಸತ್ಯವನ್ನು ಯಾರು ಮರೆ ಮೂಚುವಂತಿಲ್ಲ. ಇಲ್ಲಿ ಬರುವ ವ್ಯಕ್ತಿಗಳು ಅತಿ ಹಿಗ್ಗಬಲ್ಲವರೂ ಹೌದು; ಅತಿ ಕುಗ್ಗಬಲ್ಲವರೂ ದೌದು.ಜೊತೆಗೆ ಇವರು ಬಡಪಾಯಿಗಳೂ ಹೌದು. ಈ ಬಗ್ಗುವ\ಕುಗ್ಗುವ ನಿರಹಂಕಾರ ಗುಣದಿಂದಾಗಿ ಇವರು ಬಚಾವ್ ಆಗುತ್ತಾರೆ. ಬಫೂನ್ ಗಿರಿಯೂ ಬಚಾವ್ ಆಗುವ ಒಂದು ಕ್ರಮ.
ಸರ್ವನಾಶವಾಗುತ್ತಿರುವ ಇಂದಿನ ಜಗತ್ತಿನಲ್ಲಿ ನಾವು ಸಾಮಾನ್ಯನೆಂದು ತಿಳಿಯುವ ನರಜೀವಿಗೆ ಪಾರಾಗಬಲ್ಲ ಹಲವು ಉಪಾಯಗಳು ಇವೆ ಎಂಬುದನ್ನು ಕಂಬಾರರ ಇಡೀ ಕಾವ್ಯ ತೋರಿಸುತ್ತದೆ.
ರಾಷ್ಟ್ರಗಳು ಅಳಿದರೂ  ಶಿವಾಪುರ ಅಳಿಯುವುದಿಲ್ಲ.
ನಾನೊಂದು ಪದ್ಯ ಬರೆದಿದ್ದೆ. ಊರು ಮತ್ತು ದೇಶ ಎಂದು ಪದ್ಯದ ಹೆಸರು. ಊರು ಎನ್ನುವುದು ನಿಜದ ಸಂಬಂಧಗಳ ಪ್ರದೇಶ. ದೇಶ ಎನ್ನುವುದು ನಾವು ಭಾವನಾತ್ಮಕವಾಗಿ ಮೇಲು ಕೀಳಿನ ಆಟವಾಡಲು, ಆಳಲು, ಅಳಿಸಿಕೊಳ್ಳಲು ಕಟ್ಟಿಕೊಳ್ಳುವ ವೈಚಾರಿಕತೆಯ ಲೋಕ. ಕಂಬಾರರು ಅಚ್ಚಕನ್ನಡವಾಗಿರುವ ಒಂದು ಸಣ್ಣ ಪ್ರದೇಶದ ಬಾಳುವ ಶಕ್ತಿಯನ್ನು ಬಿಂಬಿಸಬಲ್ಲ ಕವಿ. ನಮ್ಮೂರಿನ-ಗಾಢವಾದ ಲೋಕಪ್ರಜ್ಞೆಯ-ಕವಿ, ಜನರ ನಡುವಿನಿಂದ ಹುಟ್ಟಿಬಂದ, ಹಾಡುವ, ಕುಣಿಯುವ, ಅಣಕಿಸುವ, ಅಪರೂಪದ ಕವಿ ಈ ಕಾಲದಲ್ಲಿ ಕಂಬಾರ ಒಬ್ಬರೇ. ತನ್ನ ಅಣಕದಿಂದ ದೇವರನ್ನೂ ಹೊರತುಪಡಿಸಿದವರು ಇವರು. ಊರಿನವನೇ ಆದ ಈ ದೇವರನ್ನು ಪ್ರೀತಿಸಬಲ್ಲವರೂ ಇವರು.
ಕಾವ್ಯದ ಜೀವಾಳ  ಧ್ವನಿ ಎನ್ನುತ್ತಾರೆ. ತನ್ನ ಧ್ವನಿಯಲ್ಲಿ ಸತ್ಯವನ್ನು ಹೊಮ್ಮುವ ಮಾತಿನ ಪರಿಯಲ್ಲಿ ಒಳಗೊಂದು ಹೊರಗೊಂದು ಎಂಬ ಅಂತರವೇ ಇಲ್ಲ. ಆತಂಕವೂ ಇಲ್ಲ. ಸ್ವಿಕಾರದ ಹಿಗ್ಗಿನಲ್ಲಿ ವಿಸ್ತಾರವಾಗುತ್ತ  ಇರುವ ಕಂಬಾರರ ಲೋಕ ಮೋಹಕವಾದ ನಾಟಕೀಯ ಪ್ರದರ್ಶನದ್ದು. ಈ ಪ್ರದರ್ಶದಲ್ಲಿ ದಯ ದಾಕ್ಷಿಣ್ಯದ ನಾಗರಿಕ ಸಂಕೋಚವಿಲ್ಲ. ಒಂದು ದೇಶ ಹಳ್ಳಿಯಾಗಿಯೂ  ಉಳಿಯದ ನಾಡಿನಲ್ಲಿ ಕಂಬಾರನಂಥ ಕವಿ ಹುಟ್ಟುವುದಿಲ್ಲ.

‍ಲೇಖಕರು avadhi

January 13, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

 1. akshatha.k

  ಸರ್ , ಕಂಬಾರರ ಕಾವ್ಯವನ್ನು ನಾನು ಹೆಚ್ಹು ಓದಿಲ್ಲ. ಆದರೆ ನನ್ನ ಓದಿನ ಮಿತಿಯಲ್ಲೇ ನಂಗು ಕೂಡ ಕಂಬಾರ ಅವ್ರಿಗೆ ದೇಹ ಅನ್ನೋದು ಯಾವತ್ತಿಗೂ ಮನುಷ್ಯ ಪ್ರಜ್ಞೆ ಯೇ ಆಗಿಬಿಡುವ ಮ್ಯಾಜಿಕ್ ಕಾಣತ್ತೆ ಅಂತ ಅನಿಸಿತ್ತು. ಅದ್ಯಾತ್ಮ ಕೂಡ ಕಂಬಾರ ಕಾವ್ಯದಲ್ಲಿ ಅಥವಾ ನಾಟಕದಲ್ಲಿ ಮನುಷ್ಯನ ಮನಸಿಗಿಂತ ದೇಹದ ಮೂಲಕವೇ ವ್ಯಕ್ತವಾಗುತ್ತವೆ ಅನ್ನಿಸುತ್ತದೆ .
  ಅಡಿಗರಿಗೆ ಸಪ್ತ ಸಾಗರಾರದಾಚೆ ಸುಪ್ತ ಸಾಗರ ಕಾದಿದೆ ಅನಿಸಿದರೆ ಕಂಬಾರರಿಗೆ ತೊಗಲಿನಲ್ಲಿ ಹೊತ್ತಿಕೊಂಡ ಕಾದಬೆಂಕಿ ಯನ್ನು ಕುಣಿದು ದಣಿದು ಆರಿಸಿಕೊಳ್ಳುವ ಅಥವಾ ಮತ್ತೆ ಹತ್ತಿಸಿಕೊಳ್ಳುವ ಇರಾದೆ . ನಿಮ್ಮ ಲೇಕನ ಓದಿದ ನಂತರ ನಾನು ಕಂಬಾರ ಅವರ ಪದ್ಯಗಳನ್ನು ಓದಲು ಪ್ರಾರಂಬಿಸಿದ್ದೇನೆ. ಥ್ಯಾಂಕ್ಸ್ ಸರ್ ಓದಿಗೆ ಪ್ರೇರಪಣೆ ನೀಡಿದಕ್ಕೆ .

  ಪ್ರತಿಕ್ರಿಯೆ
 2. ಆನಂದ ಕೋಡಿಂಬಳ

  ಕಂಬಾರರ ಕುರಿತು ಅನಂತಮೂರ್ತಿಯವರು ನಿರೂಪಿಸುವ ಈ ವಿಚಾರಗಳು ಒಬ್ಬ ಕವಿ ತನ್ನ ಸಮಕಾಲೀನನಾದ ಇನ್ನೊಬ್ಬ ಕವಿಯ ಕಾವ್ಯದ ನಿಜಾರ್ಥವನ್ನು ಅಕಲಂಕವಾಗಿ ಹಿಡಿದಿಡುವ ಸಹಜ ಪ್ರಕ್ರಿಯೆಯಾಗಿದೆ. ಕಂಬಾರರ ಬರವಣಿಗೆಯ ಬನಿ ಇರುವುದೇ ತಾನು ಕಟ್ಟಿಕೊಡುವ ಊರಿನ ಮೂಲಕ ಲೋಕಗ್ರಹಿಕೆಯನ್ನು ಪ್ರತಿಪಾದಿಸುವುದರಲ್ಲಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: