ಅನಂತರಾಮ ಉಪಾಧ್ಯ ಮತ್ತು ಅರಬಿಂದ ಸಿಂಗ್

burger.jpg

vnew3.jpg“ವೆಂಕಿ ಬರ್ಗರ್”

 

 

 

ವೆಂಕಿ

“ಪಕ್ಷಿನೋಟ” ಎಂಬುದರ ಅರ್ಥ ನಿಜಕ್ಕೂ ನನಗೆ ಗೊತ್ತಾದದ್ದು ಆಗ. ಒಂದು ಸೋಮವಾರದ ಬೆಳ್ಳಂಬೆಳಗ್ಗೆ ನಾನು ಕಂಡ ಆ ದೃಶ್ಯ ನನ್ನೊಳಗೆ ಬಹು ದಿನಗಳ ಕಾಲ ಉಳಿಯಲಿದೆ. ನಾನು ವರ್ಜೀನಿಯಾದಿಂದ ನ್ಯೂಯಾರ್ಕಿಗೆ ಹಾರುತ್ತಿದ್ದೆ. ನಾನು ಇರುವ ವಿಮಾನ ನ್ಯೂಯಾರ್ಕಿನ ಹೃದಯ ಭಾಗದ ಮೇಲೆ ಹಾರುತ್ತಿತ್ತು. ಮ್ಯಾನ್ ಹಟ್ಟನ್ ಪ್ರವೇಶಿಸುತ್ತಿದ್ದಂತೆ ಪೈಲಟ್ “ಅಗೋ ನೋಡಿ ಸ್ವಾತಂತ್ರ್ಯದೇವಿಯ ಪ್ರತಿಮೆ ಕಾಣುತ್ತಿದೆ” ಎಂದು ನಮ್ಮ ಗಮನ ಅತ್ತ ಸೆಳೆದ.

ಸ್ವಾತಂತ್ರ್ಯದೇವಿಯ ಪ್ರತಿಮೆ ಅರ್ಥಾತ್ ಸ್ಟ್ಯಾಚ್ಯೂ ಆಫ್ ಲಿಬರ್ಟಿ ನ್ಯೂಯಾರ್ಕಿನ ವಿವಾದಾತೀತ ಹೆಗ್ಗುರುತು. ಬೆಳಗ್ಗೆ ಏಳು ಗಂಟೆಗೆ ಆಗತಾನೇ ಅರಳುತ್ತಿದ್ದ ಆ ಹೊಂಗಿರಣಗಳ ಹಿನ್ನೆಲೆಯಲ್ಲಿ, ಸೆಂಟ್ರಲ್ ಪಾರ್ಕಿನ ಹಸಿರು ಹಾಗೂ ನ್ಯೂಯಾರ್ಕಿನ ಗಗನಚುಂಬಿ ಕಟ್ಟಡಗಳ ಮಧ್ಯೆ ಸ್ಟ್ಯಾಚ್ಯೂ ನೋಡುತ್ತಿದ್ದಂತೆಯೇ ಒಂದು ಧನ್ಯತಾ ಭಾವ ಸುಳಿದುಹೋಯಿತು. ಮೊತ್ತ ಮೊದಲ ಬಾರಿಗೆ ವಿಮಾನದ ಕಿಟಕಿಯ ಸೀಟು ಸಿಕ್ಕಿದ್ದಕ್ಕೆ ಸಂತೋಷ ನನ್ನೊಳಗೆ ಹರಡಿಕೊಂಡಿತು. ಪಕ್ಷಿನೋಟದ ತಾಕತ್ತು ಗೊತ್ತಾಯಿತು.

ಇಂತಹ ದೃಶ್ಯಗಳು ಯಾವಾಗಲೂ ನಮಗೆ ಕಾಣಸಿಗುವುದಿಲ್ಲ. ಅದಿರಲಿ, ನಾನು ಈ ವಾರ ಎರಡು ವಿಭಿನ್ನ ರೀತಿಯ “ಪಯಣ”ದಲ್ಲಿ ಪಾಲ್ಗೊಂಡೆ. ಅದೊಂದು “ಕಾಲನ ಜೊತೆಗೆ ಪಯಣ”. ಭಾರತದ ಎರಡು ಭಿನ್ನ ದಿಕ್ಕುಗಳಿಗೆ ಪಯಣಿಸಿದೆ. ನ್ಯೂಯಾರ್ಕಿಗೆ ಬಂದಿಳಿದ ಇಬ್ಬರು ಅತಿಥಿಗಳು ನನ್ನನ್ನು ಈ ಎರಡು ದಿಕ್ಕಿಗೆ ಕರೆದೊಯ್ದರು. ಅವರಿಬ್ಬರೂ ಅಲ್ಲಿನ ಎರಡು ಭಿನ್ನ ಭೌಗೋಳಿಕ ಪ್ರದೇಶದಿಂದ, ಉದ್ದೇಶದಿಂದ ಇಲ್ಲಿಗೆ ಬಂದಿದ್ದರು. ಒಬ್ಬರು ಕರ್ನಾಟಕದ ಅತ್ಯಂತ ಮುಂದುವರಿದ ಎಂಬ ಹಣೆಪಟ್ಟಿ ಹೊಂದಿರುವ ಉಡುಪಿಯಿಂದ ಬಂದಿದ್ದರೆ, ಇನ್ನೊಬ್ಬರು ಅತ್ಯಂತ ಹಿಂದುಳಿದ ಎಂಬ ತಾತ್ಸಾರಕ್ಕೆ ಗುರಿಯಾಗಿರುವ ಪಾಟ್ನಾದಿಂದ ಬಂದಿದ್ದರು. ಆದರೆ ಅವರಿಬ್ಬರಲ್ಲೂ ತಾವು ನಂಬಿದ್ದರ ಬಗ್ಗೆ ಒಂದು ಅಳಿಸಲಾಗದ ಹುಮ್ಮಸ್ಸಿತ್ತು.

ಕಡಿಯಾಳಿ ಉಡುಪಿಯಲ್ಲಿರುವ ಯಾರಿಗೆ ತಾನೇ ಗೊತ್ತಿಲ್ಲ? ಉಡುಪಿಯ ಖ್ಯಾತಿಯ ಮಧ್ಯೆ ಕಡಿಯಾಳಿ ಎಂಬುದೊಂದು ಇದೆ ಎಂಬುದು ಹಲವರಿಗೆ ಗೊತ್ತಿಲ್ಲದೆಯೂ ಇರಬಹುದು. ಈ ಕಡಿಯಾಳಿಯಿಂದಲೇ ೮೮ ವರ್ಷದ ಹಿರಿಯರಾದ ಅನಂತರಾಮ ಉಪಾಧ್ಯ ತಮ್ಮ ಮಕ್ಕಳನ್ನು ನೋಡಲು ನ್ಯೂಯಾರ್ಕಿಗೆ ಬಂದಿಳಿದಿದ್ದರು. ಕಡಿಯಾಳದಲ್ಲಿ ಪಿತೃಸಮಾನ ಗೌರವ ಹೊಂದಿರುವ ಉಪಾಧ್ಯ ಅಲ್ಲಿನ ಎಲ್ಲಾ ಕೆಲಸ ಕಾರ್ಯದಲ್ಲೂ ವಿಶೇಷ ಮನ್ನಣೆ ಪಡೆದವರು. ಸಮಾಜಸೇವೆ, ಪ್ರತಿಯೊಬ್ಬರ ಕಷ್ಟಕ್ಕೆ ಒದಗಿಬರುವುದು ಉಪಾಧ್ಯರ ಗುಣ.

ಉಪಾಧ್ಯರು ದಕ್ಷಿಣಕನ್ನಡದ ಸ್ವಾತಂತ್ರ್ಯಪೂರ್ವ ದಿನಗಳನ್ನು ನಮ್ಮೆದುರು ಬಿಚ್ಚಿಟ್ಟರು. ಕಡಲತಡಿಯ ಪ್ರದೇಶದ ಶಾಂತ ಬದುಕಿನ ತಮ್ಮ ಅಜ್ಜಂದಿರನ್ನು ಕಾಣಲು ಕಾಡಿನೊಳಗೆ ಹಲದೂರ ನಡೆಯುತ್ತಾ ಹೋಗುತ್ತಿದ್ದುದು, ಹಾಗೆ ಹೋಗುವಾಗ ಹಾವು, ಕಾಡುಪ್ರಾಣಿಗಳು ಎದುರಾಗುತ್ತಿದ್ದುದು ಎಲ್ಲವನ್ನೂ ಬಣ್ಣಿಸಿದರು. ತಮ್ಮ ಅಪೂರ್ವ ಕಥೆ ಹೇಳುವ ಶೈಲಿಯಿಂದ ಹಾಗೂ ಮೈ ಜುಮ್ಮೆನ್ನಿಸುವ ಅನುಭವಗಳಿಂದ ನಮ್ಮನ್ನು ಸುಮಾರು ಸಮಯ ಕಟ್ಟಿಹಾಕಿದ್ದರು. ಇದೇ ಉತ್ಸಾಹವೇ, ಇಂಥವರ ಉತ್ಸಾಹವೇ ಈಗ ಮಣಿಪಾಲ ಎಂಬುದನ್ನು ಹುಟ್ಟಿಹಾಕಿತು ಎಂಬುದನ್ನು ಮರೆಯಲು ಸಾಧ್ಯವಿಲ್ಲ.

ಜನರ ಒಳಿತಿಗಾಗಿ ಮುನ್ನುಗ್ಗುವ ಸ್ವಭಾವ ಈ ಇಳಿವಯಸ್ಸಿನಲ್ಲೂ ಉಪಾಧ್ಯರಲ್ಲಿ ಒಂದಿಷ್ಟೂ ಕುಗ್ಗಿಲ್ಲ. ಈಗಲೂ ಕಡಿಯಾಳಿಯ ೧೨೦೦ ವರ್ಷಗಳಷ್ಟು ಹಳೆಯ ಪಾರಂಪರಿಕ ಸ್ಥಳಗಳನ್ನು ರಕ್ಷಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

arbindsingh.jpg

ಈಗ ಉತ್ತರ ದಿಕ್ಕಿಗೆ ಪ್ರಯಾಣ ಮಾಡೋಣ. ಬಿಹಾರ ಎಂಬುದರ ಬಗ್ಗೆ ನಮ್ಮೊಳಗೆ ಯಾವೆಲ್ಲಾ ಕಲ್ಪನೆಗಳಿವೆಯೋ ಅದನ್ನು ಒಂದೇ ಏಟಿಗೆ ತುಂಡರಿಸಿ ಹಾಕಬಲ್ಲವರು ಅರಬಿಂದ್ ಸಿಂಗ್. ಕೇವಲ ತಮ್ಮ ಮಾತಿನ ಮೂಲಕ ಮಾತ್ರವಲ್ಲ, ಕೃತಿಯ ಮೂಲಕವೂ ಅರಬಿಂದ್ ಸಿಂಗ್ ಬಿಹಾರವನ್ನು ಬದಲಿಸುತ್ತಿದ್ದಾರೆ. ಬಿಹಾರ ಕಾಲನ ಪಯಣದಲ್ಲಿ ಎಲ್ಲೋ ಒಂದು ಕಡೆ ಓಡಲಾಗದೆ ನಿಂತುಬಿಟ್ಟಿದೆ ಎನಿಸುತ್ತದೆ. ಆದರೆ ಅರಬಿಂದ್ ಸಿಂಗ್ ರಂಥವರು ಇರುವುದೇ ಬದಲಾವಣೆಗಾಗಿ. ತಮ್ಮ “ನಿಧಾನ್” ಎಂಬ ಸಂಸ್ಥೆಯ ಮೂಲಕ ಬಿಹಾರದ ಸಾವಿರಾರು ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದಾರೆ. ಕೆಲಸವಿಲ್ಲದ, ಬದುಕಲು ದಾರಿ ಗೊತ್ತಿಲ್ಲದ ಹಲವರಿಗೆ ಆಶಾಕಿರಣವಾಗಿದ್ದಾರೆ.

ಅರಬಿಂದ ಸಿಂಗ್ ಬರೀ ಭಾಷಣ ಹೊಡೆಯುವ ವ್ಯಕ್ತಿಯಲ್ಲ. ಮಾಡಿ ತೋರಿಸುವವರೂ ಕೂಡ. ಲಲ್ಲೂ ಪ್ರಸಾದ್ ಯಾದವ್ ಹಾರ್ವರ್ಡ್ ನಲ್ಲಿ ಸುದ್ದಿ ಮಾಡಿರಬಹುದು. ಆದರೆ ಅರಬಿಂದ್ ಇಡೀ ಅಮೆರಿಕಾದಲ್ಲೇ ಸುದ್ದಿ ಮಾಡಿದ್ದರು. ೨೫ಕ್ಕೂ ಹೆಚ್ಚು ನಗರಗಳಲ್ಲಿ ನಗರದ ದಾರಿದ್ರ್ಯ ಹಾಗೂ ಅದರ ಸವಾಲುಗಳು, ನಿಧಾನ್ ಸಂಸ್ಥೆ ಈ ಸವಾಲುಗಳನ್ನು ಎದುರಿಸುತ್ತಿರುವ ಬಗೆ, ಎಲ್ಲದರ ಬಗ್ಗೆಯೂ ಮಾತನಾಡಿದರು. ಅಮೆರಿಕಾದ ನಗರ ಯೋಜಕರೊಂದಿಗೆ ಬಿಹಾರಕ್ಕೇನಾದರೂ ಪರಿಹಾರ ಇದೆಯೇ ಎಂದು ಚರ್ಚಿಸುತ್ತಿದ್ದರು. ವಿಶ್ವಸಂಸ್ಥೆ ಬಳಿ ಇರುವ ಹೊಟೇಲಿನಿಂದ ನಡೆಯುತ್ತಾ ಅದು ಹೇಗೆ ನ್ಯೂಯಾರ್ಕಿನ ವಿಶ್ವವಿಖ್ಯಾತ ಟೈಮ್ಸ್ ಸ್ಕ್ವ್ರ್‍ಏರ್ ಗೆ ಬಂದುಬಿಟ್ಟೆ ಎಂದು ಅರಳಿದ ಕಣ್ಣಿನಿಂದ ಬಣ್ಣಿಸುತ್ತಿದ್ದರು.

ನ್ಯೂಯಾರ್ಕಿನ ಬರಹಗಾರರೊಬ್ಬರು ತಮಾಷೆಯಿಂದ ನ್ಯೂಯಾರ್ಕಿನಲ್ಲಿ ಅತ್ಯಂತ ಶ್ರೀಮಂತರು, ಅತ್ಯಂತ ಬಡವರು ಹಾಗೂ ಇವರಿಬ್ಬರನ್ನು ಪ್ರತ್ಯೇಕವಾಗಿಡಲು ಶ್ರೀಮಂತರೆಂಬ ಮೂರೇ ಮೂರು ವರ್ಗಗಳಿವೆ ಎಂದು ಬಣ್ಣಿಸುತ್ತಿದ್ದರು. ನಾನು ಬಿಹಾರ್ ಅಥವಾ ಭಾರತದ ಬಗ್ಗೆಯೂ ಯೋಚನೆ ಮಾಡುತ್ತಿದ್ದೆ. ಆದರೆ ಇಲ್ಲಿ ಮಾತ್ರ ಒಂದು ಬದಲಾವಣೆಯಿದೆ. ಏನೆಂದರೆ ಭಾರತದಲ್ಲಿ ಶ್ರೀಮಂತರು, ಬಡವರು ಹಾಗೂ ಅವರಿಬ್ಬರನ್ನು ಪ್ರತ್ಯೇಕವಾಗಿಡಲು ಪೊಲೀಸರು, ಸಾರಿ… ಅಲ್ಲ ಅಲ್ಲ, ರಾಜಕಾರಣಿಗಳು ಇದ್ದಾರೆ! 

‍ಲೇಖಕರು avadhi

November 28, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This