ಅನಿಶ್ಚಿತತೆಯ ಈ ಕಾಲದಲ್ಲಿ..

ವಸಂತ ಬನ್ನಾಡಿ

1

ಈಗ ನಾವೊಂದು ಅನಿಶ್ಚಿತತೆಯ
ತುತ್ತತುದಿಯಲ್ಲಿ ಕುಳಿತಿದ್ದೇವೆ
ಬೆಂಕಿಯ ಮೇಲೆ ಕೂತಂತೆ
ಎಲ್ಲರೂ ತಮ್ಮ ಉಳಿವಿನ ಬಗ್ಗೆ ಮಾತ್ರ
ಯೋಚಿಸುತ್ತಿರುವ ಈ ಕಾಲದಲ್ಲಿ

ಯಾರು ಹಾಳಾದರೇನಂತೆ
ತಾನು ಉದ್ಧಾರವಾದರೆ ಸಾಕು
ಎಂಬುದೇ ಇಲ್ಲಿಯ ಸ್ವಾರ್ಥಲೇಪಿತ ಮಂತ್ರಘೋಷ
ಇಡೀ ಸಮಾಜಕ್ಕೆ ಸಮಾಜವೇ
ಇಂತಹ ವೈವಿಧ್ಯಮಯ
ವಿಷಜಂತುಗಳಿಂದಲೂ
ವಕ್ರಬುದ್ಧಿಯ ಪ್ರಾಣಿಗಳಿಂದಲೂ
ಇಡಿಕಿರಿದು ಹೋಗಿದೆಯೇ
ಹಾಗೆನಿಸುವ ಈ ಕಾಲದಲ್ಲಿ

ನಾನೂ ಈ ಎಲ್ಲ ಗುಣಲಕ್ಷಣಗಳನ್ನು
ಮೈತುಂಬ ಬಳಿದುಕೊಂಡಿದ್ದೇನೆಯ
ಹಾಗೆನಿಸುವುದು ಒಮ್ಮೊಮ್ಮೆ

2
ಒಂದಂತೂ ನಿಜ
ಸತ್ಯ ಹರಿಶ್ಚಂದ್ರರೆಂದು ತೋರಿಸಿಕೊಳ್ಳುವವರು
ಸತ್ಯ ಹರಿಶ್ಚಂದ್ರರೇನಲ್ಲ
ಹಾಗೆಂದು ಹೇಳುತ್ತಲೇ ಸುಳ್ಳುಗಳನ್ನು ಹರಡುವವರು
ವಿನಾಶಕಾರಿ ಬಾಂಬುಗಳಂತಹ
ಯೋಚನೆಗಳನ್ನು
ಸೊಂಟಕ್ಕೆ ಕಟ್ಟಿಕೊಂಡಿರುವವರು
ಉದ್ದೇಶದೆಡೆಗೆ ಗುಟ್ಟಾಗಿ ಹೊಂಚು ಹಾಕುವವರು

ಬದಲಾಯಿಸಿಕೊಳ್ಳುತ್ತಿದ್ದಾರೆ ಈಗವರು
ಕ್ಷಿಪ್ರಗತಿಯಲ್ಲಿ
ತಮ್ಮ ನಡೆ ನುಡಿಗಳನ್ನು
ನಯ ವಿನಯ ತೋರದಿರುವುದೇ
ಈಗಿನ ಹೊಚ್ಚ ಹೊಸ ಮಾದರಿ
ವ್ಯರ್ಥ ಖರ್ಚು ಮಾಡುವಂತಿಲ್ಲ ನಗೆಯನ್ನೂ

ಹಾಗಂತ ಸಂದರ್ಭ
ತುಂಬಿದ ನಗುಮೊಗವನ್ನು ಬಯಸುತ್ತಿದ್ದರೆ
ಅದಕ್ಕೂ ಇವೆ ಕಾರ್ಯಾಗಾರಗಳು
ಅಂಟಿಸಿಕೊಳ್ಳಲು ತಕ್ಕುದಾದ
ನಗೆ ಮಾದರಿಯೊಂದನ್ನು
ಕಲಿಸಿಕೊಡಲಾಗುತ್ತದೆ ಅಲ್ಲಿ
ತುಸುವೇ ಮೈಬಗ್ಗಿಸಿ ನಯವನ್ನೂ
ಹುಬ್ಬು ಸಡಿಲಿಸಿ ವಿನಯವನ್ನೂ
ಅಭಿನಯಿಸುವ ಕಲೆಯನ್ನು
ತೋರಿಕೆ ಪ್ರೀತಿ ತೋರಿ ಬಿಗಿದಪ್ಪುವುದನ್ನೂ

ಎದುರಿಗೆ ಇರುವವನು
ಅಧಿಕಾರಬಲದಲ್ಲಿಯೂ ತೋಳಬಲದಲ್ಲಿಯೂ
ಬಲಶಾಲಿ
ಎಂಬುದು ಖಾತ್ರಿಯಾದರಂತೂ
ತಯಾರಾಗಿ ಬಿಡಬೇಕಲ್ಲವೇ
ಎಲ್ಲ ಬಗೆಯ ವೇಶಾಂತರಗಳಿಗೂ

ಪ್ರಯೋಜನಕ್ಕೆ ಬರುವುದಿದೆ ಇವೆಲ್ಲ
ಜೊತೆಯಾಗಿ ಸಮಾನ ಶತ್ರುವನ್ನು ಸದೆಬಡಿಯುವಾಗಲೂ

3

ಈಗ ತುಸು ಕೇಳಿಸಿಕೊಳ್ಳಿ
ನನ್ನ ನಿವೇದನೆಯನ್ನೂ

ಕಲಿತಿದ್ದೇನೆ ನಾನೂ ಈಚೆಗೆ
ಕೆಲವೊಂದು ಬಹುಮುಖಿ ಉಪಾಯಗಳನ್ನು

ಮೇಲೆ ಹೇಳಿದ ಸತ್ಯ ಹರಿಶ್ಚಂದ್ರರು
ಮುಗಿಬೀಳುವುದಿದೆ ನನ್ನ ಮೇಲೆ
ಎಲ್ಲಿ ತಪ್ಪಿ ಬೀಳುತ್ತೇನೆಂದು ಕಾಯುತ್ತಿರುವವರಂತೆ
ಆಗ ನಾನು ಹೇಳುವುದಿದೆ
‘ಪಟ್ಟಿಮಾಡಿ ನನ್ನೆಲ್ಲಾ
ಅವಗುಣಗಳನ್ನು’
ಮತ್ತೆ ಹೇಳುತ್ತೇನೆ
‘ಅವು ಸತ್ಯವೇ ಇರಬಹುದಾದ್ದರಿಂದ
ಹಿಡಿದಿಡುವುದಿಲ್ಲ ನನ್ನ ಆಸಕ್ತಿಯನ್ನು’
ಕಲಿತಿದ್ದೇನೆ ನಾನು ಇದನ್ನೆಲ್ಲಾ
ಯಾವ ತರಬೇತಿಯ ಸಹಾಯವೂ ಇಲ್ಲದೆ

ನಿಜ ಹೇಳಬೇಕೆಂದರೆ
ನಾನೆಂದೂ
ಸತ್ಯ ಹರಿಶ್ಚಂದ್ರನಾಗಿರಲಿಲ್ಲ
ಆಗಲು ಬಯಸಿಯೂ ಇರಲಿಲ್ಲ
ಮೇಲೆ ಕಾಣಿಸಿದವರು
ಕೇಡಿಗರು ಎಂದಾದರೆ
ಇರಬಹುದು ಅಂತಹ ಒಂದೆರಡು ಅಂಶ ನನ್ನಲ್ಲೂ
ಎಂಬ ಅನುಮಾನದಲ್ಲೇ ಬದುಕಿದವನು

4

ಎದುರು ಬೀಳುವುದೆಂದರೆ
ತಲೆ ಜಜ್ಜಿ
ಬಂಡೆಯನ್ನು ಪರೀಕ್ಷಿಸುವುದಲ್ಲವಲ್ಲ
ಹರಿಶ್ಚಂದ್ರನಂತೆ ಹ್ಯಾಪು ಮೋರೆ ಧರಿಸುವುದಂತೂ
ಮಹಾರಗಳೆಯ ಕೆಲಸ

ಜಗತ್ತು ಕೆಟ್ಟುಹೋಗಿದೆ, ಹೌದು
ಆದುದರಿಂದಲೇ
ದಾಳಿಕೋರರಿಂದ
ತಪ್ಪಿಸಿಕೊಳ್ಳಬೇಕಾಗಿ
ಬಂದಿರುವುದು
ತಪ್ಪಿಸಿಕೊಂಡು ಮತ್ತೆ
ಮುನ್ನುಗ್ಗಬೇಕಾಗಿ ಬಂದಿರುವುದು
ಸತ್ಯವನ್ನು ಬಿತ್ತನೆ ಬೀಜದಂತೆ
ಜಾಗ್ರತೆ ಕಾಪಾಡಿಕೊಳ್ಳಬೇಕಾದ
ತುರ್ತು ಇರುವುದು

ಅಷ್ಟು ಒಳ್ಳೆಯವನಲ್ಲದ ನನ್ನಿಂದ
ಉಜ್ವಲ ಕಿಡಿಗಳಂತಹ
ಉಪಯುಕ್ತ ಕಲ್ಪನೆಗಳೇನಾದರೂ ಬರುವುದಿದ್ದರೆ
ಇಂತಹ ಉದ್ವಿಗ್ನ ಗಳಿಗೆಗಳಲ್ಲಿಯೇ
ಎಂಬ ನಂಬಿಕೆಯೂ
ನನ್ನಲ್ಲಿ ಈಚೆಗೆ ಬಲಗೊಳ್ಳುತ್ತಿರುವುದು

‍ಲೇಖಕರು Avadhi

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲೋಕದ ಕಣ್ಣು ಮರುಗಲೂಬಹುದು!

ಲೋಕದ ಕಣ್ಣು ಮರುಗಲೂಬಹುದು!

ಕೆ.ಜೆ.ಕೊಟ್ರಗೌಡ ತೂಲಹಳ್ಳಿ ಊರ ಬಯಲಿನ ದಿಬ್ಬದ ಮೇಲೆಈ ಮಳೆಗಾಲಕ್ಕೆಚಿಗುರೊಡೆದ ಹುಲ್ಲು ಗಂಬಳಿಯಹಾಸಿನಲಿನಾವಿಬ್ಬರೇ ಸಾನಿಧ್ಯವಹಿಸೋಣಅದೆಷ್ಟು...

ಸ್ಯಾನಿಟೈಜ್ ಆಗಬೇಕಾಗಿದೆ ಹೃದಯ

ಸ್ಯಾನಿಟೈಜ್ ಆಗಬೇಕಾಗಿದೆ ಹೃದಯ

ರಾಘವೇಂದ್ರ ದೇಶಪಾಂಡೆ ವಯಸ್ಸೊಂದಿತ್ತು ಆ ದಿನಗಳಲ್ಲಿಜಾದೂವಿನಲ್ಲು ನಂಬಿಕೆಯಿತ್ತು...ವಯಸ್ಸೊಂದಿದೆ ಇವಾಗವಾಸ್ತವತೆಯಲ್ಲು ಸಂಶಯವಿದೆ......

ಲಂಗರು ಕಚ್ಚಿದ ದೋಣಿ

ಲಂಗರು ಕಚ್ಚಿದ ದೋಣಿ

ಶ್ರೀಕಾಂತ್ ಪ್ರಭು ಲಂಗರು ಕಚ್ಚಿದ ದೋಣಿ ಮರಳ ಮೇಲೆಲ್ಲ ಹಾಯ್ದು ತೋಯಿಸಿ ಮೆತ್ತಗಾಗಿಸಿ ಮತ್ತೆ ಮತ್ತೆ ಮರಳುವ ಅಲೆ ಬೆಚ್ಚನೆಯ ಪಿಸು ಮಾತು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This