ಅನುಕಂಪದಲ್ಲಿ ಅನುಮಾನ..

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

|ಕಳೆದ ಸಂಚಿಕೆಯಿಂದ|

‘ಸರ್… ನಮಗೆ ಕಷ್ಟ ಆಗ್ತಿದೆ’

ಸುಮಾರು ಒಂದೂವರೆ ವರ್ಷದ ಮೇಲೆ ಬಂದ ಕರೆ. ಮಗುವನ್ನು ಸಾಕಿಕೊಳ್ಳಲು ಒಪ್ಪಿ ಕರೆದೊಯ್ದ ಕುಟುಂಬದಿಂದ ಆ ಐದಾರು ತಿಂಗಳಲ್ಲಿ ಬಹಳ ಖುಷಿಯ, ಆನಂದದ ಮಾತುಗಳು ಕೇಳಿಬರುತ್ತಿತ್ತು. ನಂತರ ಕಡಿಮೆಯಾಗಿತ್ತು. ಆದರೆ ಇಷ್ಟು ಕಾಲ ಕಳೆದ ಮೇಲೆ ಬಂದ ಕರೆ, ‘ಸರ್, ನಮಗೆ ಕಷ್ಟ ಆಗ್ತಿದೆ’.

ಏನು, ಯಾಕೆ…

‘ನಮ್ಮುಡುಗ ತುಂಬಾ ಮಾತಾಡ್ತಾನೆ’ ಆತ ಹೇಳುತ್ತಿದ್ದರು. ನಾನು ‘ಒಳ್ಳೆಯದಲ್ವ. ಇಲ್ಲಿ ಮಾತೇ ಆಡ್ತಿರಲಿಲ್ಲ. ನೀವು ತುಂಬಾ ಮಾತನಾಡಿಸುತ್ತಿರಬೇಕು’ ಎಂದೆ. ‘ಹಂಗಲ್ಲ ಸರ್‌. ಮಾತಾಡ್ಲಿ. ಆದ್ರೆ ಈಗೀಗ ಮಾತಿನ ಮಧ್ಯ ಅವರಪ್ಪ, ಅಮ್ಮನ ಹೆಸರು ಹೇಳ್ತಾನೇ ಇರ್ತಾನೆ. ಅಜ್ಜಿ ಹೆಸರು ಕೂಡಾ. ಜೊತೆಗೆ ಅದೇನೋ ಹಳೆ ಅಮ್ಮ, ಹೊಸ ಅಮ್ಮ ಅಂತಾನೆ…ʼ ನನಗೇನೂ ಅರ್ಥ ಆಗಲಿಲ್ಲ. ಭೇಟಿಯಾಗೋಣ ಎಂದಷ್ಟೇ ಹೇಳಿದೆ.

‘ಸರ್‌, ಹುಡುಗ ಮನೆ ಗೊತ್ತು ತೋರಿಸ್ತೀನಿ ಅಂದ. ಅಲ್ಲೆಲ್ಲೋ ಮಾಗಡಿ ರೋಡ್ನಲ್ಲಿ ಮನೇನೂ ತೋರಿಸಿದ. ಹುಡುಗನ ಅಜ್ಜಿ ಅಲ್ಲಿದ್ದಾರೆ ಅಂತ ಹೇಳಿದ. ಹೊಸ ಅಮ್ಮ ಅಂತ ಒಂದು ಹೆಸರು ಹೇಳ್ತಾನೆ. ನಮಗೆ ಭಯ ಆಯ್ತು ಸರ್‌. ಅಜ್ಜಿ ಮನೆಗೆ ಕರ್ಕೊಂಡು ಹೋಗ್ಲಿಲ್ಲ. ಆದ್ರೆ ಮನೆ ಗೊತ್ತಾಯ್ತು.’ ನಮಗೆ ತಲೆ ಕೆಟ್ಟು ಹೋಯ್ತು. ಈ ಹುಡುಗ ಮೊದಲೇ ಇದೆಲ್ಲಾ ಯಾಕೆ ಹೇಳ್ಲಿಲ್ಲ… ಅಥ್ವಾ ನಮ್ಮಲ್ಲಿ ಸರಿಯಾಗಿ ಕೇಳ್ಲಿಲ್ವಾ… ಅಜ್ಜಿ ಮನೆ ತೋರಿಸ್ತೀನಿ ಅಂತ ಈ ಹುಡುಗ ಒಂದು ದಿನಾ ಕೂಡಾ ಹೇಳಿರಲಿಲ್ಲ!

ಮುಂದಿನದು ಕ್ಷಿಪ್ರ ನಡೆ. ನನ್ನ ಸಹ ಸದಸ್ಯ ಬಸವರಾಜ್‌, ಇಲಾಖೆಯ ಸಂಬಂಧಿತ ಅಧಿಕಾರಿ ಮತ್ತು ಮಗುವನ್ನು ಸ್ವೀಕರಿಸಿದ ಆ ವ್ಯಕ್ತಿ ಎಲ್ಲರೂ ಅಜ್ಜಿಯ ಮನೆಗೆ ಹೋದೆವು. ಮಗುವಿನ ವಿಚಾರ ಪ್ರಸ್ತಾಪ ಮಾಡದೆ ಅವರ ಮಗ, ಸೊಸೆಯ ಬಗ್ಗೆ ವಿಚಾರಿಸಿದೆವು.

ಅಜ್ಜಿ ಹೇಳಿದ ಕತೆ ಸಾಕಷ್ಟು ಕಸಿವಿಸಿ ಉಂಟು ಮಾಡಿತ್ತು. ಆಕೆಯ ಮಗ ಅಂದರೆ, ನಮ್ಮೊಡನಿದ್ದ ಬಾಲಕನ ತಂದೆ ಸರ್ಕಾರದ ಪ್ರಮುಖ ಇಲಾಖೆಯೊಂದರಲ್ಲಿ ತೋಟಗಾರನಾಗಿದ್ದ. ಆ ಮುದುಕಿ ಮತ್ತವಳ ಗಂಡನಿಗೆ ಅವನೊಬ್ಬನೇ ಮಗ. ಗಂಡ ಸರ್ಕಾರದಲ್ಲಿ ಇದೇ ತರಹದ ಯಾವುದೋ ಕೆಲಸದಲ್ಲಿದ್ದಾಗಲೇ ನಿಧನ ಹೊಂದಿದ್ದರಿಂದ ಅನುಕಂಪದ ಆಧಾರದಲ್ಲಿ ಮಗನಿಗೆ ಅದೇ ತರಹದ ಕೆಲಸ ಸಿಕ್ಕಿತ್ತು. ಕಾಲಾನುಕಾಲಕ್ಕೆ ಅವನಿಗೆ ಮದುವೆಯಾಯಿತು. ಕೆಲ ಕಾಲದಲ್ಲಿ ಒಂದು ಮಗುವಾಯಿತು. ಆದರೆ ದುರಾದೃಷ್ಟವಶಾತ್‌ ಹೆರಿಗೆಯಲ್ಲಿ ಆಗಿದ್ದ ಏನೋ ತೊಂದರೆಯಿಂದಾಗಿ ಹೆಂಡತಿ ಕೆಲ ಕಾಲದಲ್ಲಿ ತೀರಿಹೋದಳು.

ಮುಂದಿನ ಒಂದೆರೆಡು ವರ್ಷದ ಕಾಲ ಹಾಗೂ ಹೀಗೂ ತಂದೆಯೂ ಅಜ್ಜಿಯೂ ಸೇರಿಕೊಂಡು ಮಗುವನ್ನು ಸಂಭಾಳಿಸಿದರು.  ಅವರಿವರಿಂದ, ಅಕ್ಕಪಕ್ಕದವರು ಮತ್ತು ಕೆಲಸದ ಸ್ಥಳದಲ್ಲಿ ಸಹ ಕೆಲಸಗಾರರಿಂದ ಒಂದೇ ಒತ್ತಡ. ಮಗುವನ್ನು ನೋಡಿಕೊಳ್ಳಲು ಅವನು ಇನ್ನೊಂದು ಮದುವೆ ಮಾಡಿಕೊಳ್ಳಬೇಕು. ಎರಡನೆ ಮದುವೆ, ಜೊತೆಗೆ ಒಂದು ಮಗುವಿದೆ. ಯಾರು ಮದುವೆಯಾಗುತ್ತಾರೆ?

ಹೀಗೆ ಕಾಲ ಸಾಗುತ್ತಿದ್ದಾಗ, ಇವನೊಡನೆ ತೋಟದ ಕೆಲಸವನ್ನೇ ಮಾಡುತ್ತಿದ್ದ ಒಬ್ಬ ಹಿರಿಯ ಹೆಂಗಸು ಅನುಕಂಪ ತೋರಿದರು. ಅಷ್ಟೇ ಅಲ್ಲ ತಮ್ಮ ಮಗಳಿರುವಳೆಂದೂ ಅವಳನ್ನು ಭೇಟಿ ಮಾಡುವುದು ಒಳ್ಳೆಯದೆಂದೂ ಹೇಳುತ್ತಿದ್ದರು. ಸರಿ, ಈ ಮನುಷ್ಯ ಸ್ವಲ್ಪಸ್ವಲ್ಪವೇ ಕರಗಿದ. ಆಕೆಯ ಭರವಸೆಗೆ ಒರಗಿದ. ಮುಂದೆ ಕೆಲವೇ ದಿನಗಳಲ್ಲಿ ಅವನ ತಾಯಿಗೆ ಸರಿಯಾಗಿ ವಿಚಾರಗಳು ತಿಳಿಯುವ ಮೊದಲೇ ಆ ಹೆಂಗಸು ಹೆಂಡತಿಯಾಗಿ ಮನೆಗೆ ಬಂದೇಬಿಟ್ಟರು. ಮದುವೆ ಗಿದುವೆ? ಎಲ್ಲಾ ಆಗಿದೆಯೆಂದು ಹೇಳಿಬಿಟ್ಟರು.  

ಮಗುವಿಗೆ ಹೊಸ ಅಮ್ಮ ಸಿಕ್ಕಿದರು. ಹೊಸ ಸೊಸೆಯೂ. ಆದರೆ ಈ ಸೊಸೆ ಆದಷ್ಟೂ ಗಂಡನನ್ನ ಕರೆದುಕೊಂಡು ಅವಳಮ್ಮನ ಮನೆಗೇ ಹೋಗಿರುತ್ತಿದ್ದಳು. ಅಜ್ಜಿ ಮೊಮ್ಮಗನನ್ನ ನೋಡಿಕೊಳ್ಳುವುದು ನಡೆದಿತ್ತು. ಅದೇಕೋ ಏನೋ ಕೆಲವು ತಿಂಗಳಲ್ಲಿ ಮಗ ಯಾವಾಗಲೂ ಸುಸ್ತಾಗಿರುತ್ತಿದ್ದನಂತೆ, ಕೆಲಸಕ್ಕೂ ಸರಿಯಾಗಿ ಹೋಗುತ್ತಿರಲಿಲ್ಲ, ಮನೆಯಲ್ಲೇ ಬಿದ್ದಿರುತ್ತಿದ್ದ. ಅಜ್ಜಿಗೆ ಏನೋ ಅನುಮಾನ, ಆದರೆ ಏನು ಹೇಳುವುದು, ಯಾರನ್ನು ಕೇಳುವುದು.

ಒಂದು ದಿನ ಕೆಲಸದ ಸ್ಥಳದಲ್ಲಿ ಅಜ್ಜಿಯ ಮಗ ಸತ್ತೇ ಹೋದ! ಅವನ ಹೆಣವನ್ನು ಮನೆಗೆ ತಂದಂತೆ ಮಾಡಿ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಿಯೇಬಿಟ್ಟರಂತೆ. ಅಜ್ಜಿಗೆ ಏನಾಯಿತು, ಯಾಕಾಯಿತು ಒಂದೂ ತಿಳಿಯಲಿಲ್ಲವಂತೆ.

ಮತ್ತೆ ಮಗು! ನೀವು ಮಗ ಕೆಲಸ ಮಾಡೋ ಕಡೆ ಹೋಗಿ ವಿಚಾರಿಸಲಿಲ್ಲವಾ? ಅಜ್ಜಿಗೆ ಆಗಲೇ ಕೈಲಾಗುತ್ತಿರಲಿಲ್ಲವಂತೆ. ಯಾರನ್ನು ಕೇಳೋದು, ಏನು ಮಾಡೋದು ಗೊತ್ತಿರಲಿಲ್ಲ. ಮಗ ಎಲ್ಲಿ ಕೆಲಸ ಮಾಡ್ತಾನೆ ಅನ್ನೋದು ಸರಿಯಾಗಿ ತಿಳಿದಿರಲಿಲ್ಲ. ಆದ್ರೆ ಯಾವ ಇಲಾಖೆ ಅನ್ನೋದನ್ನ ಸ್ಪಷ್ಟವಾಗಿ ಹೇಳಿದರು. ಬಂಧುಗಳು ಯಾರೂ ಕೈ ಹಿಡಿಯಲಿಲ್ಲ. ಹೊಸ ಸೊಸೆ ತಾನೇ ಮಗುವನ್ನು ನೋಡಿಕೊಳ್ಳುತ್ತೇನೆ ಅಂತ ಕರೆದುಕೊಂಡು ಹೋದವಳು ಮತ್ತೆ ಬರಲೇ ಇಲ್ಲ! ಅವರ ಮನೆ ಬಾಗಿಲು ತಾನು ನೋಡಿಯೇಯಿಲ್ಲ ಎಂದರು ಅಜ್ಜಿ.

ಅಜ್ಜಿ ಒಂದು ಮಾತು ಮಾತ್ರ ಗಟ್ಟಿಯಾಗಿ ಹೇಳ್ತಿದ್ದರು. ನನ್ನ ಮಗನ ಕೆಲಸ ಮೊಮ್ಮಗನಿಗೆ ಸಿಗುತ್ತೆ. ಮೊಮ್ಮಗ ಎಲ್ಲಿದ್ರೂ ಚೆನ್ನಾಗಿರ್ತಾನೆ. ಗೌರ್ಮೆಂಟ್‌ ಕೆಲ್ಸ್‌ ಅಂದ್ರೆ ಸುಮ್ಮನೇನಾ? ಅವನಿಗೇ ಸಿಗಬೇಕು.

ನಾವು ಆಗಲೇ ಮೊಮ್ಮಗನ ವಿಚಾರ ಪೂರ್ತಿ ಹೇಳಲಿಲ್ಲ. ಮಗುವಿನ ಅಧ್ಯಯನ ಮತ್ತು ಮಗುವಿನ ಪೋಷಕರ ಹುಡುಕಾಟ ಮಾಡುವಲ್ಲಿ ಪ್ರಯತ್ನಿಸಿದ್ದ ಅಧಿಕಾರಿಗಳು ಅಯೋಮಯ!

ನಮ್ಮ ಮುಂದಿನ ಭೇಟಿ ಅಜ್ಜಿ ಹೇಳಿದ್ದ ಇಲಾಖೆಗೆ ಮತ್ತು ಅವಳ ಮಗನ ಹೆಸರಿನ ದಾಖಲೆ ಪತ್ತೆಗೆ. ಕಬ್ಬನ್‌ ಪಾರ್ಕಿನ ಸನಿಹದಲ್ಲಿದ್ದ ಕಛೇರಿಯಲ್ಲಿ ಬಹಳ ಸುಲಭವಾಗಿಯೇ ಮಗನಿದ್ದ ಇಲಾಖೆ, ಅಲ್ಲಿನ ಮೇಲಧಿಕಾರಿಗಳು ಸಿಕ್ಕರು. ಇವನ ಹೆಸರು ವಿಚಾರ ಹೇಳುತ್ತಿದ್ದಂತೆಯೇ ಅವರೂ ದಾಖಲೆಗಳನ್ನು ಹುಡುಕಿ ಅವನ ಬಗ್ಗೆ ಹೇಳಿದ್ದಲ್ಲದೆ, ಅವನ ಹೆಂಡತಿಗೆ ʼಅನುಕಂಪದ ಆಧಾರದ ಮೇಲೆ ಇಲ್ಲೇ ಕೆಲಸ ಕೊಟ್ಟಿದ್ದೇವೆʼ ಎಂದೂ ಹೇಳಿದರು. (ಇದು ಅಜ್ಜಿಗೆ ಪಾಪ ಹೇಗೆ ಗೊತ್ತಿರಬೇಕು!) ನಮ್ಮ ಅಧಿಕಾರ, ಸ್ಥಾನಮಾನ ಇತ್ಯಾದಿ ಅರುಹಿದ ಕಾರಣ ನಮಗೆ ಅವರು ಸಂಬಂಧಿತ ದಾಖಲೆಗಳನ್ನು ಅಗೆದಗೆದು ನೋಡಿದರು. ಅನುಕಂಪ ಆಧಾರಿತವಾಗಿ ಉದ್ಯೋಗ ಕೊಡಲು ಬೇಕಾದ ಎಲ್ಲ ಮಾಹಿತಿ ಅದರಲ್ಲಿತ್ತು. ಮೊದಲನೆಯದಾಗಿ ವೈವಾಹಿಕ ದಾಖಲೆಗಳು, ಮದುವೆಯ ಕರೆಯೋಲೆ, ಜೊತೆಯಲ್ಲಿರುವ ಫೋಟೋ, ಗಂಡನ ಮರಣ ದಾಖಲೆಗಳು, ಮುಖ್ಯವಾಗಿ ತನ್ನ ಅವಲಂಬಿತರು ಎನ್ನುವ ಕಡೆ ಕೇವಲ ಈ ಹೊಸ ಹೆಂಗಸಿನ ಹೆಸರು ಮಾತ್ರ! ಎಲ್ಲಿಯೂ ಈತನಿಗೆ ಮೊದಲು ಮದುವೆಯಾಗಿತ್ತು, ಮಗುವಿತ್ತು, ಅಮ್ಮನಿದ್ದಾಳೆ, ಮೊದಲ ಹೆಂಡತಿ ನಿಧನಳಾಗಿದ್ದಾಳೆ  ಎಂಬ ಸುದ್ದಿಯೇ ಇಲ್ಲ.

ಆ ಹೆಂಗಸು ಬೇರೆ ಕಡೆ ಕೆಲಸ ಮಾಡುತ್ತಾರೆ ಎಂದೂ, ಆ ಹೊತ್ತು ನಮಗೆ ಸಿಗುವುದಿಲ್ಲವೆಂದು ತಿಳಿಯಿತು. ತಲೆಕೆಟ್ಟುಹೋದ ಪರಿಸ್ಥಿತಿಯಲ್ಲಿ ನಾವು ಈಗ.

ಆ ಇಲಾಖೆಯ ಕಛೇರಿಯಿಂದ ಹೊರಬಂದು ನಾವು ನಾಲ್ಕೂ ಜನ ಅಲ್ಲಿಯೇ ಒಂದು ಚಿಕ್ಕ ಟೀ ಅಂಗಡಿಯ ಮುಂದೆ ನಿಂತೆವು. ಟೀಗೆ ಹೇಳಿ ಕಟ್ಟೆಯೊಂದರ ಮೇಲೆ ಧಿಗ್ಮೂಢರಾಗಿ ಕುಳಿತಿದ್ದೆವು. ಆಗಲೇ ಅಲ್ಲಿಗೆ ಒಬ್ಬ ಮನುಷ್ಯ ಬಂದು ನಮ್ಮ ಹತ್ತಿರದಲ್ಲೇ ನಿಂತು ಬೀಡಿ ಹಚ್ಚಿದರು. ಸ್ವಲ್ಪ ಹೊತ್ತು ನಮ್ಮನ್ನೇ ನೋಡುತ್ತಿದ್ದರು. ನಾವವರನ್ನ ಮೊದಮೊದಲು ಗಮನಿಸಿರಲಿಲ್ಲ. ನಮಗೆ ಟೀ ಬಂದ ಮೇಲೆ ಅವರೂ ತಮ್ಮ ಟೀ ಕಪ್‌ ಹಿಡಿದುಕೊಂಡು ನಮ್ಮ ಹತ್ತಿರ ಬಂದು ನಿಂತರು. ಸತ್ತು ಹೋಗಿದ್ದ ಆ ಮನುಷ್ಯನ ಹೆಸರು ಹೇಳಿ, ನೀವು ಬಂದದ್ದು ಅವನ ಬಗ್ಗೆ ವಿಚಾರಿಸಲಿಕ್ಕೆ ಅಲ್ವಾ ಎಂದರು. ಹೌದು, ಇಲ್ಲ ಏನು ಹೇಳುವುದು, ಈತ ಯಾರು ಎಂಬ ಹೊಸ ಗೊಂದಲ.

ಆ ಮನುಷ್ಯ ಹೆಚ್ಚೇನೂ ಮಾತನಾಡಲಿಲ್ಲ. ಬದಲಿಗೆ ಸಂಜೆ ಸಿಕ್ಕಿದರೆ ಎಲ್ಲಾ ಹೇಳುವುದಾಗಿ ತಿಳಿಸಿದ, ಜೊತೆಗೆ ತಾನು ಹೇಳಿದ್ದು ಎಂದು ಎಲ್ಲಿಯೂ ಉಸಿರು ಬಿಡಬಾರದು ಎಂದೂ ಎಚ್ಚರಿಸಿದ.

ಅದೇ ಸಂಜೆ ಅವನು ಹೇಳಿದ ಕತೆ ನಮ್ಮನ್ನೆಲ್ಲಾ ಅವಾಕ್ಕಾಗಿಸಿತು. ʼಅದೊಂದು ವ್ಯವಸ್ಥಿತ ಜಾಲವೆಂದೂ, ಇಂತಹ ಹಲವಾರು ಪ್ರಕರಣಗಳು ಇವೆಯೆಂದೂ, ಹಿಂದೆ ಮುಂದೆ ಸರಿಯಾಗಿ ಇಲ್ಲದವರು ಯಾರಾದರೂ ಉದ್ಯೋಗದಲ್ಲಿರುವವರು ಸತ್ತರೆ ಅದನ್ನೆಲ್ಲಾ ಬಳಸಿಕೊಳ್ಳುವವರದ್ದೇ ಈ ಕೆಲಸ ಎಂದ. ಆದರೆ ಎಲ್ಲಿಯೂ ಯಾರು, ಹೇಗೆ, ಏನು ಎನ್ನುವುದನ್ನು ಹೇಳಲೇಯಿಲ್ಲವಾದರೂ ಅವರೆಲ್ಲಾ ಬಾಳಾ ಕೆಟ್ಟೋವ್ರು, ತಲೆ ತೆಗೆಯಕ್ಕೂ ಹೇಸೋವ್ರಲ್ಲ…ʼ ನನ್ನ ಬೆನ್ನಲ್ಲಿ ಛಳಿ ಒಮ್ಮೆ ಹರಿದು ಹೋದದ್ದು ಸುಳ್ಳಲ್ಲ. ʼನೀವೆಲ್ಲಾ ಏನು ಮಾಡಿದ್ರೂ ಇದರಲ್ಲಿ ಸೇರಿರುವವರನ್ನ ಏನೂ ಮಾಡಕ್ಕೂ ಆಗಲ್ಲ. ಅವನ ಮಗನ ಕೈಯಲ್ಲಿ ಪತ್ರ ಹಾಕಿಸಿ, ಆಗೇನಾದರೂ ಆಗುತ್ತಾ ನೋಡಬೋದುʼ ಎಂತಹ ಸಲಹೆ.

ಇಷ್ಟೆಲ್ಲಾ ಗೊತ್ತಾದ ಮೇಲೆ ನಮಗೆ ಸುಮ್ಮನಿರಲಿಕ್ಕೆ ಆಗಲಿಲ್ಲ. ಆಗಿನ್ನೂ ೧೩ರ ಗಡಿ ದಾಟುತ್ತಿದ್ದ ಹುಡುಗನಿಗೆ ಏನು ಹೇಳುವುದು, ಹೇಗೆ ಪತ್ರ ಬರೆಸುವುದು?

ಈ ಮಧ್ಯ ಹುಡುಗ ಅಜ್ಜಿಯನ್ನು ಭೇಟಿಯಾದ. ಅಜ್ಜಿ ಮೊಮ್ಮಗ ಹಲವಾರು ವರ್ಷಗಳು ಪರಸ್ಪರ ನೋಡಿರದಿದ್ದರೂ, ಅದು ಹೇಗೋ ಅವರ ಬಾಂಧವ್ಯ ಗಟ್ಟಿಯಾಯಿತು. ಮುಂದೊಂದು ದಿನ ಈ ಹುಡುಗ ಸಂಬಂಧಿತ ಇಲಾಖೆಗೆ ಪತ್ರ ಬರೆದೇಬಿಟ್ಟ. ತಾನು ಇನ್ನೂ ಅಪ್ರಾಪ್ತನೆಂದೂ, ತಾನು ಪ್ರಾಪ್ತ ವಯಸ್ಸಿಗೆ ಬಂದಾಗ ತನ್ನ ತಂದೆಯ ಕೆಲಸವನ್ನು ತನಗೆ ಕೊಡಬೇಕೆಂದೂ ವಿನಂತಿಸಿದ. ನಾವೆಂದುಕೊಂಡೆವು, ಈ ಪತ್ರ ಅಲ್ಲೋಲಕಲ್ಲೋಲ ಮಾಡುವುದೆಂದು! ಏನೂ ಆಗಲಿಲ್ಲ. ಅಲ್ಲಿಂದ ಒಂದು ಉತ್ತರವೂ ಬರಲಿಲ್ಲ. ಆದರೆ ಆ ಎರಡನೆಯ ಅಮ್ಮನ ಕಡೆಯವರಿಂದ ಹುಡುಗನನ್ನು ಫಾಸ್ಟರ್‌ ಕೇರ್‌ನಲ್ಲಿ ಕರೆದುಕೊಂಡವರಿಗೊಂದು ಮಾತುಕತೆಯ ಆಹ್ವಾನ ಬಂದಿತು. ನಾನೂ ಬಸವರಾಜ್‌ ಅವರೊಡನೆ ಹೋದೆವು. ನಾವು ಹೋದಾಗ ಅವರ್ಯಾರೂ ಬರಲಿಲ್ಲ. ಒಂದೆರೆಡು ಗಂಟೆ ಕಾದು ಹಿಂದಿರುಗಿದೆವು.

ಇದಾಗಿ ಮೂರ್ನಾಲ್ಕು ವಾರಕ್ಕೆ ಹುಡುಗನ ಫಾಸ್ಟರ್‌ ತಂದೆಗೆ ಮತ್ತೆ ಕರೆ ಬಂದಿತ್ತು. ನನಗಾಗಲೀ ಬಸವರಾಜನಿಗಾಗಲೀ ಹೋಗಲಾಗಲಿಲ್ಲ. ಹೇಳಿದವರು ಬಂದಿದ್ದರಂತೆ. ಆಕೆ ಬರಲಿಲ್ಲ. ಬದಲಿಗೆ ಆಕೆಯ ಪರಿಚಿತರೊಬ್ಬರು ಅಲ್ಲಿನ ನೌಕರರ ಸಂಘದ ಪದಾಧಿಕಾರಿಗಳೆಂದು ಹೇಳಿಕೊಂಡವರು ಬಂದಿದ್ದರಂತೆ. ಈಗ ಆಕೆ ಹೇಗೋ ಎಲ್ಲೋ ಇದ್ದಾರೆ. ಈ ಗಲಾಟೆಗಳೆಲ್ಲಾ ಬೇಡ. ಹುಡುಗನಿಗೆ ಏನಾದರೂ ಕೊಡಿಸೋಣ ಎಂಬ ಮಾತುಕತೆಯಾಯಿತಂತೆ. ಯಾಕೋ ಇದು ಸರಿಯಿಲ್ಲ ಎಂಬುದು ನನ್ನ ವಿಚಾರ. ನ್ಯಾಯ ಸಿಗಲೇಬೇಕು ಎಂದಾದರೆ ಹುಡುಗನ ಕಡೆಯಿಂದ ನ್ಯಾಯಾಲಯಕ್ಕೆ ಒಂದು ದಾವೆ ಹಾಕಿಸಲು ನಾನು ಸೂಚಿಸಿದೆ.  ಸರ್ಕಾರದಿಂದಲೇ ಈ ಅನ್ಯಾಯ ಕುರಿತು ವಿಚಾರಣೆ ಮಾಡಿಸಬೇಕೆಂದೂ ಅಂದುಕೊಂಡೆವು.  ಈ ಕುರಿತು ವಿವಿರವಾಗಿ ವಿಚಾರ ಸಂಗ್ರಹಿಸಲು ದಾಖಲೆಗಳನ್ನು ಪಡೆಯಲು ಹುಡುಗನ ಸಾಕು ತಂದೆ ಮುಂದಾದರು.

ಎಷ್ಟೆಷ್ಟೋ ದಾಖಲೆಗಳನ್ನು ಅವರು ಪಟ್ಟು ಬಿಡದೆ ಸಂಗ್ರಹಿಸಿದರು. ಅವರ ತಾಳ್ಮೆ ಮತ್ತು ವಿಚಾರದ ಬೆನ್ನು ಬಿಡದೆ ಹುಡುಕಾಡಿದ್ದೇ ಒಂದು ದೊಡ್ಡ ಕತೆ. ಮಗನಿಂದ ಮೇಲಿಂದ ಮೇಲೆ ಪತ್ರಗಳು, ಅಧಿಕಾರಿಗಳ ಭೇಟಿ, ಪ್ರಶ್ನಿತ ʼತಾಯಿʼಯೊಡನೆಯೂ ಮಾತುಕತೆ. ಆಗೆಲ್ಲಾ ಆಕೆ ಕನಿಕರ ಬರುವಂತೆ ಅತ್ತೂ ಕರೆದು ತನ್ನ ಬಾಳು ಹಾಳು ಮಾಡಬಾರದೆಂದು ಮಗನನ್ನ ಮೇಲಿಂದ ಮೇಲೆ ಕೇಳಿಕೊಳ್ಳುತ್ತಿದ್ದಳಂತೆ.  ಈ ಮಾತುಕತೆಗಳು, ಸಂಧಾನ, ಭರವಸೆಗಳು, ಸಭೆಗಳು ವರ್ಷಗಳ ಕಾಲ  ನಡೆದವು. ಅದೊಂದು ದಿನ ಇವೆಲ್ಲಾ ಆಗುವುದಿಲ್ಲ ಎಂದು ಗೊತ್ತಾಗಿ, ಹುಡುಗನ ಫಾಸ್ಟರ್‌ ತಂದೆ ನ್ಯಾಯಾಲಯಕ್ಕೆ ಹೋಗುವುದು ಎಂದು ನಿರ್ಧರಿಸಿದರು. 

ನ್ಯಾಯಾಲಯದವರೆಗೂ ಹೋಗುವ ಹೊತ್ತಿಗೆ ಹುಡುಗನಿಗೆ ೨೧ರ ಸಮೀಪಕ್ಕೆ ಬಂದುಬಿಟ್ಟಿದ್ದ. ೧೮ ದಾಟಿದ್ದ ಕಾರಣ ಮಕ್ಕಳ ನಿಲಯದಿಂದ ಬಿಡುಗಡೆಯ ಪತ್ರವನ್ನೂ ಅಧಿಕೃತವಾಗಿ ಪಡೆದಿದ್ದ. ಈ ಎಲ್ಲ ಓಡಾಟ, ವಯಸ್ಸಿಗೆ ಮೀರಿದ ಮಾತುಕತೆಯಲ್ಲಿ ಅನಿವಾರ್ಯವಾಗಿ ಬರಬೇಕಾದ ವಿಚಾರಗಳ ಮಧ್ಯ ಶಾಲೆ ಕಾಲೇಜು ಅದೇಕೋ ಅವನಿಗೆ ಪಥ್ಯವಾಗಿರಲಿಲ್ಲ. ಅಷ್ಟು ಹೊತ್ತಿಗೆ ಅವನು ಕೇಶ ಶೃಂಗಾರದ ಪಟ್ಟುಗಳನ್ನೆಲ್ಲಾ ಕಲಿತಿದ್ದ. ತಂದೆಯ ಉದ್ಯಮವನ್ನು ಚೆನ್ನಾಗಿಯೇ ರೂಢಿಸಿಕೊಂಡಿದ್ದ. ಅವನಿಗೊಂದು ಮದುವೆ ಮಾಡುವ ಮಾತುಕತೆ ಮನೆಯಲ್ಲಿ ನಡೆದಿತ್ತು.

ಈಗ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡುವ ಕುರಿತು ಅವನದೇ ನಿರ್ಧಾರ ಎಂದು ಮನೆಯವರು ಬಿಟ್ಟಿದ್ದರು. ಅದೊಂದು ದಿನ ನನಗೊಂದು ಕರೆ ಬಂದಿತು.

‘ಅಂಕಲ್‌, ಆಗಿದ್ದು ಆಗಿ ಹೋಯ್ತು. ಅಜ್ಜಿಯೂ ಇತ್ತೀಚೆಗೆ ಹೋಗಿಬಿಟ್ಟರು. ನನಗೀಗ ಏನೂ ಬೇಡ. ನಮ್ಮ ಅಪ್ಪನಿಗೆ ನೀವು ಹೇಳಿ. ನಾನು ಕೋರ್ಟ್‌ಗೆ ಹೋಗಲ್ಲ. ಆಯಮ್ಮ ಕೆಲಸ ಇಟ್ಟುಕೊಳ್ಳಲಿ. ನಾನು ನನ್ನ ಉದ್ಯೋಗ ಮಾಡಿಕೊಂಡು ಚೆನ್ನಾಗಿರ್ತೀನಿ. ಅಪ್ಪ ಅಮ್ಮನ್ನ ನಾನು ನೋಡ್ಕೋತೀನಿ. ಮುಂದಿನ ವರ್ಷ ಮದುವೆ ಆಗಕ್ಕೆ ನಾನು ರೆಡಿ. ನೀವು ಬರಬೇಕು.’

***

‍ಲೇಖಕರು ವಾಸುದೇವ ಶರ್ಮ

February 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This