ಅನುಪಮಾ ಪ್ರಸಾದ್ ಜೊತೆ ‘ಪಕ್ಕಿಹಳ್ಳದ ಹಾದಿಯಲ್ಲಿ’

ಹಳೆಮನೆ ರಾಜಶೇಖರ

ಬದುಕಿನ ಬವಣೆಗಳೊಳಗೆ ಅರಳುವ ಜೀವದಾಯಿಗಳ ಸಂಭ್ರಮ ಮತ್ತು ಕ್ರೌರ್ಯಗಳನ್ನು ಸೂಕ್ಷ್ಮವಾಗಿ, ಗಂಡು ಹೆಣ್ಣಿನ ಸಂಬಂಧದ ನೆಲೆಯಲ್ಲಿ ವಾಸ್ತವದ ದಂದುಗದೊಂದಿಗೆ ಮುಖಾಮುಖಿಯಾಗುವ ಹೊಸ ತಲೆಮಾರಿನ ನೈತಿಕ ಗಟ್ಟಿತನದ ಕಥೆಗಾರ್ತಿ ಅನುಪಮ ಪ್ರಸಾದ್. ಕರವೀರದ ಗಿಡ, ದೂರ ತೀರ, ಜೋಗತಿ ಜೋಳಿಗೆ ಕಥಾ ಸಂಕಲನಗಳ ಮೂಲಕ ತಮ್ಮದೇ ದಾರಿಯ ಕಥನವೊಂದನ್ನು ಸೃಷ್ಟಿಸಿಕೊಂಡಿದ್ದಾರೆ. ಕಥನ ಜಗತ್ತನ್ನು ವಿಸ್ತರಿಸಿದ್ದಾರೆ.

ಈಗ ಪಕ್ಕಿಹಳ್ಳದ ಹಾದಿಗುಂಟ ಎಂಬ ಕಾದಂಬರಿಯನ್ನು ಕನ್ನಡಕ್ಕೆ ನೀಡಿದ್ದಾರೆ. ಈ ಶತಮಾನದಲ್ಲಾದ ಬದುಕಿನ ಪಲ್ಲಟಗಳನ್ನು ಬಹಳ ಸೂಕ್ಷ್ಮವಾಗಿ ಕಾದಂಬರಿ ಶೋಧಿಸುತ್ತದೆ. ಪ್ರಕೃತಿ ಸಾತತ್ಯದೊಂದಿಗಿನ  ಬದುಕಿನ ಲಯಗಳನ್ನು ನಿರ್ನಾಮ ಮಾಡಿಕೊಂಡು ದುರಂತದೆಡೆಗೆ ಚಲಿಸುತ್ತಿರುವ ಮನುಷ್ಯನ ವಿಕಾರಗಳನ್ನು ಕಾದಂಬರಿ ಅಭಿವ್ಯಕ್ತಿಸುತ್ತದೆ. ಒಂದು ಶತಮಾನದ ವಿಸ್ತಾರ ಭೂಮಿಕೆಯನ್ನು ಹೊಂದಿದ ಕಾದಂಬರಿ ಎಲ್ಲಿಯೂ ಲಯ ತಪ್ಪದಂತೆ ಮೂರು ತಲೆಮಾರಿನ ಕಥನವನ್ನು ಹೃದಯಕ್ಕಿಳಿಯುವಂತೆ ಕಟ್ಟಿಕೊಡುತ್ತದೆ.

ಶಿರಸಿ, ಉಜಿರೆ, ಕಾಸರಗೋಡು ಪರಿಸರದಲ್ಲಿ ಜೀವಿಸಿದ ಕಥೆಗಾರ್ತಿ ಅಲ್ಲಿಯ ಭಾಷೆಯನ್ನು ಅರಗಿಸಿಕೊಂಡು ತಮ್ಮದೇ ಸಜೀವದ ಭಾಷಿಕಲಯವೊಂದನ್ನು ಕಾದಂಬರಿಯಲ್ಲಿ ತಂದಿದ್ದಾರೆ. ಕಾವ್ಯಾತ್ಮಕವಾದ ಭಾಷೆ ಬದುಕಿನ ಲಯದೊಂದಿಗೆ ಬೆಸೆಯುತ್ತದೆ. ಇದರಿಂದ ಕಾದಂಬರಿ ಎಲ್ಲಿಯೂ ಹದ ತಪ್ಪದಂತೆ ಪಕ್ಕಿ ಹಳ್ಳದಗುಂಟ ಬದುಕಿನ ನೀರು ಹಲವು ವಿನ್ಯಾಸಗಳಲ್ಲಿ ಹರಿಯುತ್ತದೆ. ಕಥನದಲ್ಲಿ ಮೂರು ತಲೆಮಾರುಗಳ ಜೀವನ ವಿಧಾನ  ಸಂಯೋಗಗೊಳ್ಳುತ್ತದೆ. ಒಂದು ಕೃಷಿಯೊಂದಿಗೆ ಸಹಜವಾಗಿ ಬದುಕುತ್ತಿದ್ದ ತಲೆಮಾರು. ಎರಡು ಆಧುನಿಕ ಬದಲಾವಣೆಗೆ ತೆರೆದುಕೊಂಡು ನಗರ ಸೇರಿದ ತಲೆಮಾರು. ಮೂರು ಕಾರ್ಪರೇಟ್ ಹಿಡಿತಕ್ಕೆ ಒಳಗಾಗಿ ನರಳುವ ತಲೆಮಾರು.  

ರಾಮಶರ್ಮ, ರಾಧಕ್ಕ, ಅಣ್ಣಯ್ಯಬಲ್ಲಾಳ, ಶಂಭುಶರ್ಮ, ಗೋಪಾಲಯ್ಯ,ಶರಬರಾಯ, ಅಬ್ದುಲ್ಲಾ ಹಾಜಿ, ತಿಮ್ಮಪ್ಪ ಭಟ್ಟರ ತಲೆಮಾರಿನ ಜೀವನ ಪ್ರಕೃತಿಯೊಂದಿಗೆ ತದಾತ್ಮಯದಿಂದ ಬದುಕಿದೆ. ಯಕ್ಷಗಾನ, ತಾಳಮದ್ದಳೆ, ಕೃಷಿಯೊಂದಿಗೆ ಜೀವನವನ್ನು ಅನುಭವಿಸಿದೆ. ಪ್ರಾದೇಶಿಕ ಒಡಲ ಸಂಬಂಧಗಳು ಅನೋನ್ಯತೆಯ ಆಳದಲ್ಲಿ ಸಂವೇದನೆಯನ್ನು ಪಡೆದುಕೊಳ್ಳುತ್ತವೆ. ದೈನಂದಿನ ವ್ಯಾಪಾರಗಳು ಸಂಕಟ, ಸಂಭ್ರಮ, ಕೃಷಿಯ ದೈವಿಕ ನಂಬಿಕೆಯಲ್ಲಿ ಮೈಪಡೆಯುತ್ತವೆ. ಬಹಳ ಸಹಜವಾಗಿ ನಿಸ್ವಾರ್ಥದ ಆರ್ದ್ರತೆಯಲ್ಲಿ ಈ ಜೀವಗಳು ಮಿಂದು ಹೋಗುತ್ತವೆ.

ಪ್ರಕೃತಿ ಮನುಷ್ಯ ಸಂಬಂಧ ಮುಕ್ಕಾಗದಂತೆ ಭೂಮಿ ಸಬಂಧವನ್ನು ಜತನದಿಂದ ಕಾಪಿಟ್ಟುಕೊಂಡು ಬದುಕಿನ ಅಸಹಾಕತೆಯನ್ನು ಮೀರುತ್ತವೆ. ಬದುಕನ್ನು ನಿರ್ನಾಮ ಮಾಡುವಷ್ಟು ಇಲ್ಲಿ ಕ್ರೌರ್ಯ ಉಸಿರಾಡುವದಿಲ್ಲ. ಯಾಂತ್ರಿಕತೆ ಬದುಕನ್ನು ಆವರಿಸಿಕೊಂಡು, ಕೃಷಿಯಲ್ಲಾದ ಪಲ್ಲಟಗಳು ಬದುಕಿನ ಗತಿಯನ್ನೇ ಬದಲಿಸಿವೆ. ಬದಲಾದ ಬದುಕುಗಳಿಗೆ ಮೂಕಸಾಕ್ಷಿಯಾಗಿ ಯಾತನೆಯನ್ನನುಭವಿಸುವವರು ಆನಂದಮಠದಲ್ಲಿರುವ ಈ ತಲೆಮಾರು. ಈ ತಲೆಮಾರಿನ ಕಥನದಲ್ಲಿ ಮನುಷ್ಯ ಸಂಬಂಧಗಳು ಬಹಳ ಸೂಕ್ಷ್ಮವಾಗಿ ಹೆಣೆಯಲ್ಪಟ್ಟಿವೆ. ಕೃಷಿ ಚಟುವಟಿಕೆಗಳು, ನಂಬಿಕೆಗಳು, ಆಚರಣೆಗಳು ಸಹಜವಾಗಿ ಕಥನದೊಂದಿಗೆ ಬೆರೆತುಗೊಂಡಿವೆ.

ಎರಡನೆಯ ತಲೆಮಾರಿನ ಶೇಖರ ಬಲ್ಲಾಳ, ಶಿವರಾಮರ ಸ್ನೇಹದ ನಿರೂಪಣೆ ಕನ್ನಡ ಕಥನದಲ್ಲಿಯೇ ಅಪರೂಪ. ಶೇಖರ ಬಲ್ಲಾಳ ಕೃಷಿಯಲ್ಲಿ ಬದುಕನ್ನು ಕಂಡುಕೊಂಡರೆ, ಶಿವರಾಮಯ್ಯ ರಸಾಯನಿಕ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಪುಣೆ ಸೇರುತ್ತಾನೆ.

ಇವರಿಬ್ಬರ ಬದುಕಿನ ದಿಕ್ಕುಗಳು ಬೇರೆ ಬೇರೆಯಾಗುತ್ತವೆ. ಶೇಖರ ಬಲ್ಲಾಳ ಗ್ರಾಮ ಬದುಕಿನಲ್ಲಾಗುವ ಸ್ಥಿತ್ಯಂತರಗಳಿಗೆ ಸ್ಪಂದಿಸುತ್ತಾ ದಿಟ್ಟ ಹೋರಾಟಗಾರನಾಗಿ ಬದುಕುತ್ತಾನೆ.

ಸಾಮೂಹಿಕ ಬದುಕಿನ ತತ್ವದೊಂದಿಗೆ ತನ್ನತನವನ್ನು ಸಾಮಾಜಿಕ ಸಮಸ್ಯೆಗಳೊಂದಿಗೆ ಗುರುತಿಸಿಕೊಳ್ಳುತ್ತಾನೆ. ಆನಂದ ಮಠಕ್ಕೊದಗುವ ಎಲ್ಲಾ ಆಪತ್ತುಗಳಿಗೆ ಸಂವೇದಿಸುವ ಮಾನವೀಯತೆಯನ್ನು ಮೈಗೂಡಿಸಿಕೊಂಡಿದ್ದಾನೆ. ತನ್ನ ಕುಟುಂದಲ್ಲಿಯೇ ಅನೇಕ ದುರಂತಗಳು ಸಂಭವಿಸಿದರೂ ಎಲ್ಲವನ್ನು ಸ್ಥಿತಪ್ರಜ್ಞೆಯಿಂದ ಎದುರಿಸುತ್ತಾನೆ.

ದಾರ್ಶನಿಕನ ನೆಲೆಯಲ್ಲಿ ಬದುಕಿನ ಬಿಕ್ಕಟ್ಟುಗಳನ್ನು ಅನುಭವಿಸುತ್ತಾ ಪಲಾಯನವಾದಿಯಾಗದೆ ಜೀವ ಹಿಡಿದು ಆನಂದಮಠದಲ್ಲಿ ನಿಲ್ಲುತ್ತಾನೆ. ಶಿವರಾಮ ನಗರ ಸೇರಿ ಆನಂದ ಮಠಕ್ಕೆ ಕಂಟಕನಾಗುತ್ತಾನೆ. ಇದು ಕಾಕತಾಳೀಯ. ಅವನು ಕೆಲಸ ಮಾಡುವ ರಾಸಾಯನಿಕ ಕಂಪನಿಯೇ ಆನಂದಮಠದ ಕೃಷಿಯನ್ನು ಅಲ್ಲೋಲ ಕಲ್ಲೋಲಗೊಳಿಸುತ್ತದೆ.

ಗೇರು ಬೀಜಗಳ ಪರಿಚಯ  ಕೃಷಿಕರ ಜೀವನವನ್ನು ಆಮಿಷಕ್ಕೊಡ್ಡಿ ಮೂಲ ಕೃಷಿಯಿಂದ ದೂರ ಸರಿಯುವಂತೆ ಮಾಡುತ್ತದೆ. ಗೇರು ಬೀಜಗಳಿಗೆ ಬಳಸುವ `ಎಂಡೋಸಲ್ಫಾನ್’ ಎಂಬ ಕಾರ್ಕೋಟಕ ವಿಷದ ರಾಸಾಯನಿಕ ಇಡೀ ಆನಂದ ಮಠವನ್ನು ಭಯಾನಕ ರೋಗಗ್ರಸ್ಥವನ್ನಾಗಿ ಮಾಡುತ್ತದೆ.

ಪಕ್ಕಿಹಳ್ಳವನ್ನು ವಿಷವನ್ನಾಗಿಸುತ್ತದೆ. ಈ ವಿಷಯ ಶಿವರಾಮನಿಗೆ ಗೊತ್ತಿದ್ದು ಕಂಪನಿಯನ್ನೇ ಸಮರ್ಥಿಸಿಕೊಳ್ಳುತ್ತಾನೆ ಹೊರತು ಆನಂದಮಠದ ಬವಣೆಗಳಿಗೆ ಸ್ಪಂದಿಸುವದಿಲ್ಲ. ಶೇಖರ ಬಲ್ಲಾಳರ ಜೀವವಾಗಿದ್ದ ಶಿವರಾಮ ಈ ಕಾರಣಕ್ಕೆ ದೂರ ಸರಿಯುತ್ತಾನೆ. ಈ ಸಂಗತಿಗಳು ಕಾದಂಬರಿಯಲ್ಲಿ ಯಾಂತ್ರಿಕವಾಗಿ ಬರದೆ ಜೀವಂತಿಕೆಯನ್ನು ಪಡೆಯುತ್ತವೆ.

ಮೂರನೆಯ ತಲೆಮಾರಿನ ಜಯಂತ ಎಂಡೋಸಲ್ಫಾನ್ ಎಂಬ ಮಹಾಮಾರಿಗೆ ಬಲಿಯಾದವನು. ಉಕ್ಕಿನ ಚೆಂಡಿನಂತಿದ್ದ ಜಯಂತ ಈ ವಿಷದ ಬೇರಿಗೆ ಸಿಲುಕಿ ನಡುವು ಕಳೆದುಕೊಂಡು ಶಾಶ್ವತ ಅಂಗವಿಕಲನಾಗುತ್ತಾನೆ. ಇವನಂತೆ ಇಡೀ ಆನಂದಮಠವೇ ಅಂಗವೈಕಲ್ಯಕ್ಕೆ ಒಳಗಾಗಿ ರೋಗಗ್ರಸ್ಥವಾಗುತ್ತದೆ. ದಿನಕ್ಕೊಂದು ಸಾವು, ನೋವು, ಸಂಕಟ, ರೋದನ ಆನಂದಮಠವನ್ನು ತುಂಬುತ್ತದೆ. ಎಂಡೋಸಲ್ಫಾನ್‌ನ ದುಷ್ಪರಿಣಾವನ್ನು ಜಯಂತನ ಅವಸ್ಥೆಯ ಮೂಲಕ ಕರುಳಿರಿವಂತೆ ಕಾದಂಬರಿ ಚಿತ್ರಿಸುತ್ತದೆ.

ಮುಂಬೈಗೆ ಹೋಗಿ ಬದುಕು ಕಟ್ಟಿಕೊಂಡಿದ್ದ ರಜನೀಶನಿಗೂ ಈ ವಿಷ ತಗಲುತ್ತದೆ. ಅವನಿಗೆ ಹುಟ್ಟಿದ ಮಕ್ಕಳು ಅಂಗವಿಲವಾಗುತ್ತವೆ. ಬಹುದಿನಗಳ ಮೇಲೆ ಆನಂದಮಠಕ್ಕೆ ಬಂದ ಶಿವರಾಮನ ಮಗ ಮಹೇಶ ಇಲ್ಲಿಯ ಸ್ಥಿತಿಯನ್ನು ನೋಡಿ ತನಗೆ ಮಕ್ಕಳೇ ಬೇಡ ಎಂಬ ಕಠೋರ ನಿರ್ಧಾರಕ್ಕೆ ಬರುತ್ತಾನೆ. ಕಾರ್ಪರೇಟ್ ಜಗತ್ತು ಸೃಷ್ಟಿಸುತ್ತಿರುವ ಜೀವನ ವಿಧಾನದ ಪ್ರತೀಕದಂತಿರುವ ಮಹೇಂದ್ರ ಮತ್ತು ಶುಭಾ ಸೃಷ್ಟಿಯ ನೈಜತೆಯಿಂದ ಹೊರಬರುವದು ಅತ್ಯಂತ ಕ್ರೂರವಾಗಿ ಕಾಣುತ್ತದೆ. ಆದರೆ ಇಂತ ಬದುಕನ್ನೇ ವಸಾಹತೋತ್ತರ ಕಾಲಘಟ್ಟ ಹೇರುತ್ತಿದೆ.

ಸಹಜ ಜೀವನ ಗತಿಯನ್ನೇ ನಾಶ ಮಾಡಿದ ಎಂಡೋಸಲ್ಫಾನ್ ಆನಂದಮಠವನ್ನು ನರಕವನ್ನಾಗಿಸುತ್ತದೆ. ಬದುಕಿನ ಜೀವತ್ವವನ್ನೇ ಕಸಿದುಕೊಂಡು ಆನಂದಮಠಕ್ಕೆ ಭವಿಷ್ಯವಿಲ್ಲದಂತೆ ಮಾಡುತ್ತದೆ. ಇದು ಇಡೀ ಭಾರತದ ರೂಪಕದಂತೆ ಕಾಣುತ್ತದೆ. ಆಧುನಿಕ ಅಭಿವೃದ್ದಿಯ ವಿಕಾರಗಳು ಈ ಕಥನದಲ್ಲಿ ಮಾನವೀಯ ನೆಲೆಯಲ್ಲಿ ಶೋಧಕ್ಕೊಳಪಡುತ್ತವೆ.

ಶೇಖರ ಬಲ್ಲಾಳ, ಹರಿಣಾಕ್ಷಿಯರ ಜೀವನಕಥನದ ಸುತ್ತ ಇಡೀ ಕಾದಂಬರಿ ಬೆಳೆಯುತ್ತದೆ. ಇವರಿಬ್ಬರೇ ಕಾದಂಬರಿಗೆ ಕೇಂದ್ರ. ಇಬ್ಬರ ಬಾಳಿನಲ್ಲಿ ಸುಖವೆಂಬುದಿಲ್ಲ. ಬದುಕಿಗಾಗಿ ಹೋರಾಡುತ್ತಾರೆ. ತಮ್ಮದಲ್ಲದ ಮುಳ್ಳುಗಳು ಅವರನ್ನು ಚುಚ್ಚುತ್ತಿರುತ್ತವೆ. ಜಯಂತ ಕಾಯಿಲೆ ಬಿದ್ದಾಗ ಹರಿಣಾಕ್ಷಿ ತನ್ನ ಸಂಸಾರದ ಅಸ್ತಿತ್ವಕ್ಕಾಗಿ ಹೋರಾಡುವುದು ಭಾರತೀಯ ಅಸಹಾಯಕ ಮಹಿಳೆಯರ ಕಥಾನಕವಾಗಿಯೇ ಬರುತ್ತದೆ.

ಗಂಡನಿಂದ, ಸಮಾಜದಿಂದ ಎದ್ದು ನಿಲ್ಲುವ ಅನುಮಾನದ ಹುತ್ತಗಳನ್ನು ಹೊತ್ತುಕೊಂಡು ಜೀವಿಸುವುದು ಹರಿಣಾಕ್ಷಿಗೆ ಮಹಾಭಾರವಾಗುತ್ತದೆ. ಈಕೆಯೊಂದಿಗೆ ಸೇರಿಕೊಳ್ಳುವ ಮುಕ್ತತಾಯಿಯು ಇದೇ ವ್ಯಸನಕ್ಕೆ ಒಳಗಾಗಿ ಒಂದು ಮುಗ್ಧಜೀವಿಯನ್ನು ಹುಡುಕುತ್ತಿರುತ್ತಾಳೆ. ಮುಕ್ತತಾಯಿ ಹಿಂಧೂಸ್ಥಾನಿ ಸಂಗೀತದಲ್ಲಿ ಅನಭೂತಿಯನ್ನು ಸಾಧಿಸಿದವಳು. ಸಂಗೀತದಷ್ಟೇ ಪವಿತ್ರವಾದ ಜೀವಿಗಳ ಹುಡುಕಾಟದಲ್ಲಿ ತೊಡಗಿದವಳು.

ಸಂಗೀತ ಲೌಕಿಕ ಹಂಗುಗಳನ್ನು ತೊರೆದ ಮಹಾನದಿ. ಎಲ್ಲಾ ಜೀವಿಗಳನ್ನು ತನ್ನ ಉಡಿಯಲ್ಲಿ ಹಾಕಿಕೊಳ್ಳುತ್ತದೆ. ಹರಿಣಾಕ್ಷಿಯ ಬವಣೆಯನ್ನು ಹರಿಯುವದು ಮುಕ್ತತಾಯಿಯಿಂದ. ಮುಕ್ತತಾಯಿಯ ಪಾತ್ರ ಮೇಲ್ನೋಟಕ್ಕೆ ಕೃತಕ ಅನಿಸಿದರೂ ಕಾದಂಬರಿಯ ಧ್ವನಿ ಇರುವದೇ ಮುಕ್ತತಾಯಿಯ ಸಂಗೀತ ಸಿದ್ಧಿಯ ಅಲೌಕಿಕ ಆನಂದದಲ್ಲಿ.

‍ಲೇಖಕರು Avadhi

September 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ,...

ಜಯಮೋಹನ್ ಅವರ ‘ನೂರು ಸಿಂಹಾಸನಗಳು’

ಜಯಮೋಹನ್ ಅವರ ‘ನೂರು ಸಿಂಹಾಸನಗಳು’

ಪ್ರಸನ್ನ ಸಂತೆಕಡೂರು 'ನೂರು ಸಿಂಹಾಸನಗಳು' ಮಲಯಾಳಂ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದವಾಗಿರುವ ಒಂದು ಕಿರು ಕಾದಂಬರಿ. ಇದರ ಮೂಲ ಲೇಖಕರು...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: