ಅನ್ನದಾತ ಅರಳಲಿ ಮಣ್ಣು ಉಳಿಯಲಿ

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. 

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. 

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಊರಿನಲ್ಲಿ ಎಲ್ಲಾ ರೈತರೇ. ನಮ್ಮೂರಿನ ಸುತ್ತೇಳು ಗ್ರಾಮಗಳಲ್ಲೂ ರೈತರಿದ್ದಾರೆ. ಹಾಗೆಯೇ ಜೀವಿಸಲು ರೈತರ ಜೊತೆಗೂಡಿ ಹಗಲಿಡೀ ಶ್ರಮಿಸಿ ದುಡಿವವರಿದ್ದಾರೆ. ರೈತರು ನೆಲದೊಟ್ಟಿಗೆ ಅರ್ಪಿಸಿಕೊಳ್ಳುವ ವಿವೇಕವೇ ಚಂದದ್ದು. ದೀರ್ಘಕಾಲ ಅನ್ನದೇವನ ಜೊತೆಗೆ ಬಾಳಿದ ಪುಣ್ಯ ದಕ್ಕಿದ್ದು ಸುದೈವ ನನಗೆ.

ಎದ್ದ ಕೂಡಲೇ ಎತ್ತುಗಳನ್ನು ಎದುರುಗೊಂಡೇ ಕಣ್ಣು ಬಿಟ್ಟವಳು ನಾನು. ಎರಡು ಪಡಸಾಲೆಗಳು ದೊಡ್ಡ ಹಜಾರಗಳು ಇರುವ ನನ್ನ ಮನೆಯಲ್ಲಿ ಪಡಸಾಲೆಗೆ ಜೊತೆಗೂಡಿಯೇ ಗ್ವಾಂದ್ಗೆ ಇದ್ದದ್ದು. ಇರುಳಾದ ಕೂಡಲೇ ನಮ್ಮ ಮನೆಯ ಬೇಸಾಯದ ಚೇತನಗಳಾದ ಎತ್ತುಗಳನ್ನು ಮನೆಯೊಳಗೆ ಕಟ್ಟುತ್ತಿದ್ದೆವು.

ನಮ್ಮ ಬಾಳಿಗೆಲ್ಲ ಜೋಡಿ ದೈವಗಳಾದ ಈ ದನಗಳ ಉಸಿರನ್ನು ನಾವು ಉಸಿರಾಡಿ ನಲಿದೆವು. ಹೆಚ್ಚು ಕಮ್ಮಿ ಬಹುಪಾಲು ನೆಲಚೇತನಗಳಾದ ರೈತರ ಮನೆಗಳಲ್ಲಿ ಎತ್ತುಗಳಿಗೆ ಅವಕ್ಕೆಂದು ಕಟ್ಟಿದ ಅನ್ಯ ಕೊಟ್ಟಿಗೆಗಳು ಇರಲಿಲ್ಲ. ಊರಿನಲ್ಲಿ ಎತ್ತುಗಳಿರುವ ಯಾರ ಮನೆಗೋದರು ಮನೆಯೊಳಗಿನ ಕೊಟ್ಟಿಗೆಯಲ್ಲಿ ಕೊರಳಿಗೆ ಪುಟ್ಟ ಗಂಟೆಗಳನ್ನು ಧರಿಸಿದ ಮಹಾ ದೈವಜೀವಿಗಳು ಕಾಣುತ್ತಿದ್ದವು. ಇವುಗಳ ಗಂಟೆಯ ನಿನಾದದೊಳಗೆ ಅರಳಿ ನಕ್ಕ ರೈತರ ಮಕ್ಕಳು ನಾವು.

ಮುಸುರೆ ಇಕ್ಕುವುದು, ಮೇವು ನೀರು ಆಗಾಗ ಸಡಗರದಿಂದ ಕೊಡುವ ಸಂತಸಗಳ ಮೂಲಕವೇ ಹೊಸದೊಂದು ವಿಕಾಸ ದರ್ಶನವಾಗಿದೆ. ನಮ್ಮ ಬಾಲ್ಯದ ಬಯಲೆಂದರೆ ಊರ ಸುತ್ತಲಿನ ಹೊಲಗಳೇ.. ಇಲ್ಲಿಯ ಹಸಿರಬ್ಬ ನಮ್ಮ ಕಣ್ಗಳಿಗೆ ಕೊಟ್ಟ ಫಲ ದೊಡ್ಡದು.

“ಎಲ್ಲೋ ಅಂಗೈ ಅಗಲ ಹಸಿರು ಕಂಡರೆ ಸಾಕು ಮನದ ಆಸೆಗಳಲ್ಲಿ ಸೇರುತಿಹವು” ಎಂಬ ಮಾತೊಂದಿದೆ…. ಹಾಗೆಯೇ ಹಸಿರಂಗಳಕ್ಕೆ ಬೆಸೆದುಕೊಂಡು ಹಸಿರಾದೆವು.

ಪ್ರತೀದಿನವೂ ನಸುಕಿನಲ್ಲಿ ನಮ್ಮ ಮನೆಗಳ ಜಗಲಿಯ ತುಂಬಾ ಸೆಪ್ಪೆ ಇರೋದು. ಬೇಸಾಯಕ್ಕೆ ಬಲ ತುಂಬುವ ಇವುಗಳಿಗೆ ನಸುಕಿನಿಂದಲೂ ಮೂಡ ಕೆಂಪತ್ತುವತನಕವೂ ಸೆಪ್ಪೆ ತಿನ್ಸೋ ಕಾಯಕ ನಮಗೆ. ಎಲ್ಲ ರೈತರ ಒಲವು ನಮ್ಮೆತ್ತಿನ ಬಲಹೆಚ್ಚಲೆಂಬುದು. ಹಸಿರು ಜೊಲ್ಲಿಳಿಸಿಕೊಂಡು ಹಸಿ ಸೆಪ್ಪೆ ತಿನ್ನುವುದನ್ನು ಅಪ್ಪ ದೊಡ್ಡಪ್ಪನೊಡಗೂಡಿ ಕಣ್ಗಿಳಿಸಿಕೊಂಡ ಕಾಲವೆಲ್ಲ ಮಣ್ಣಿನ, ಹಸಿರಿನ ಕನಸಿಗೆ ಪುಷ್ಟಿ ತಂದು ಹಸನಾದ ಮೆದುಗೊಂಡ ನೆಲದ ಜೀವಕ್ಕೆ ನಮ್ಮನ್ನು ತುಂಬಿಕೊಂಡಿದೆ. ನೆಲದೊಡಲಿನ ಫಸಲ ಬೇರಿನ ಸಾರವೆಲ್ಲ ಜೀವಕೋಟಿಗೆ ಹರಣಶಕುತಿ.

ರೈತನೆಂಬ ಕಣ್ದಿಟ್ಟಿ  ಕಳೆದುಕೊಂಡರೆ “ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದರೆ ವಿಷವೇರಿತ್ತಯ್ಯಾ ಆಪಾದಮಸ್ತಕಕ್ಕೆ” ಎಂಬ ಶರಣರ ಮಾತು ದಿಟವಾಗಿ ಲೋಕದ ನರಳಾಟ ಕಾಣಬೇಕಿದೆ. ನೈಜತೆಯ ಕೇಡಿಲ್ಲದ ದುಡಿಮೆಯ ಜೀವಿಗಳ ಬಾಳು ಹಾಳು ಕಾನೂನುಗಳಿಂದ ಹೈರಾಣಾಗಿ ಬಿಡುವ ದುಸ್ಥಿತಿ ಹರಡಬಾರದು.

ತಮ್ಮಷ್ಟಕ್ಕೆ ಧ್ಯಾನ ದೀಕ್ಷೆ ಗಳಿಸಿದವರಂತೆ ಮಣ್ಣಲ್ಲಿ ಕಣ್ಣು ಮೂಡಿಸುವ ರೈತರ ಮನೆಮಗಳಾದ ನನಗೆ ಜಾಗತೀಕರಣದ ಸೆಳೆತಗಳ ನಡುವೆ ನೆಲಗಳು ಅವಸಾನಗೊಳ್ಳುವುದನ್ನು ಕಂಡಾಗಲೆಲ್ಲ ಧೃತಿಗೆಡುತ್ತೇನೆ. ನನ್ನ ಊರಿನಲ್ಲಿ ಸಣ್ಣ ಮಲ್ಲಪ್ಪ ಅಂತ ಗೌಡರಿದ್ದರು. ಅಪ್ಪನಿಗೂ ಇವರಿಗೂ ಮಹಾಸಖ್ಯ. ಅಪ್ಪ ಅಮ್ಮನ ಜಮೀನು ಕೊಳ್ಳುವ ಪ್ರಜ್ಞೆಗೆ ಬೆಂಬಲಿಸಿದವರು. ನನ್ನ ಅಪ್ಪ ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಬೇಲಿ ಬಂಕಕ್ಕೆ ಆಸರೆಯಾಗಿದ್ದ ಹತ್ತು ಎಕರೆ ನೆಲಕೊಂಡರಂತೆ. ಇದಕ್ಕೆಲ್ಲ ಆರ್ಥಿಕ ನೆರವು ನೀಡಿದವರು ಅಪ್ಪನ ಆಪ್ತರಾದ ಸಣ್ಣ ಮಲ್ಲಪ್ಪನವರೆ.

ಇಡೀ ಊರು ನೆರೆಯೂರುಗಳನ್ನು ಜೊತೆ ಮಾಡಿಕೊಂಡು “ಓತಿಕ್ಯಾತನು ತತ್ತಿ ಇಕ್ಕಲ್ಲ” ಅಂತ ನೆಲ ಬಗಿಸ್ಕಂಡು ತಗಂಡವ್ರೆ ಮೂರ್ತಪ್ಪ ಆ ಬಿಳೆತಲೆನ್ ಮಾತ್ ಕೇಳಿ ಎಂದೆಲ್ಲಾ ಲೇವಡಿ ಮಾಡಿದ್ದನ್ನು ಆಗಾಗ ಅಪ್ಪ ನಮಗೆ ಹೇಳೋರು. ದೊಗ್ರು, ದಿಬ್ಬ, ಮೆಳೆ ಇದ್ದ ಬೆದ್ಲು ನೆಲ ಇವತ್ತು ಕಲಿಸ್ಕಂಡು ಉಂಬವಷ್ಟು ಮೆಟ್ಟವಾಗಿ ಹಸನಾಗಿ ತೆಂಗಿನ ನೆಲೆಯಾಗಿದೆ. ಆ ಹತ್ತು ಎಕರೆ ಭೂಮಿ ಅಪ್ಪನಿಗೆ ಬಂಗಾರದ ಮನುಷ್ಯ ಎಂದೇ ಕೀರ್ತಿ ತಂದಿದ್ದು ಇತಿಹಾಸ. ಮ್ಯಾಗ್ಲು ತುಂಡ, ನಡುತ್ತಗ್ಲು ತುಂಡ, ಕೆಳಗ್ಲು ತುಂಡ ಎಂದು ವಿಂಗಡಿಸಿ ಸಮಮಾಡಿ ಉದ್ದನೆಯ ಬಿಗ್ಯಾದ ಕಲ್ಲಣೆ ಕಟ್ವವತ್ಗೆ ವರ್ಷವರೆ ಕಳೀತಂತೆ.

ದೊಡ್ಡಳ್ಳದ ಒಳಪಸ್ಮೆಯನ್ನು ತನ್ನ ಬೆನ್ನಿಗೆ ಹೊತ್ತ ನೆಲಕ್ಕೆ ಜಲ ಒದಗಿದ್ದು ಕೂಡ ಅಪ್ಪನ ಬೇಸಾಯದ ತಪಸ್ಸಿಗೆ ಸಿಕ್ಕ ಫಲ. ನೂರೈವತ್ತು ಜನರ ನೆರವು ಗಳಿಸಿ ಈ ನೆಲದಲ್ಲಿ ಬಾವಿ ತೋಡಿದ್ದಾರೆ. ಇಪ್ಪತ್ತು ಅಡಿಗಷ್ಟೆ ಇಳಿದ ಬಾವಿಯಲ್ಲಿ ಜಲವುಕ್ಕುವುದನ್ನು ನೋಡಲು ಜನಜಾತ್ರೆ ನೆರೆಯೋದು ಕಂಡಿದ್ದೇನೆ. ಅಪ್ಪನಿಗೆ ನೀರಿನ ಬಲ ಸಿಕ್ಕ ಮೇಲೆ ಏಳು ಎಕರೆಯಷ್ಟು ನೆಲಕ್ಕೆ ಕಬ್ಬು ಹಾಕಿಸಿದರು. ವರ್ಷ ತುಂಬುವುದರೊಳಗೆ ಕಬ್ಬಿನ ದಟ್ಪ ಮೆಳೆಬೆಳೆದು ನೂರಾರು ಜನ ಸೇರಿ ಕೆಲಸ ನಡೀತಿರೋದು.

ಕಬ್ಬನ್ನು ಕಡಿದು ಲಾರಿಗಳಲ್ಲಿ ಹಿರಿಯೂರಿನ ಸಕ್ಕರೆ ಕಾರ್ಖಾನೆಗೆ ಕಳಿಸೋರು. ಅಲ್ಲಿನ ಮಾಲಿಕರು ಸರಿಯಾಗಿ ಬೆಲೆ ನಿಗದಿ ಮಾಡಿಕೊಡದೆ ದೊಡ್ಡ ವಂಚನೆ ಮಾಡಿದ್ದು ಅಪ್ಪನಂತೆ ನೆಲಕ್ಕೆ ಅರ್ಪಿಸಿಕೊಂಡವರಿಗೆಲ್ಲ ನೋವಾಯಿತು. ಮರುವರ್ಷ ತಾನೇ ಬೆಲ್ಲ ಮಾಡಿಸಲು ಸಜ್ಜಾಗಿ ಕಬ್ಬಿದ್ದ ಹೊಲದ ಬಡ್ಡೆಗೆ “ಆಲೆಮನೆ’ ಹುಟ್ಟಿತು.. ಬೆಲ್ಲ ಮಾಡುವಲ್ಲಿ ಪಳಗಿದ ತಂಡ ನಮ್ಮ ಜಮೀನಿಗೆ ಬಂತು. ಕಬ್ಬರೆಯುವ ಯಂತ್ರಗಳು ಬಂದವು. ಬೆಲ್ಲದ ಮನೆಯ ಪಾಕದ ಗಮಲು ಸುತ್ತೇಳು ಊರಿಗೂ ಹಬ್ಬಿ ಬೆಳಗಾದರೆ ಈ ಸಿರಿಯನ್ನು ನೋಡಲು ಜನೊಂದು ಜನ್ವೆಲ್ಲ ತುಂಬಿರೋರು.

ನಾವೆಲ್ಲ ಶಾಲೆ ಮುಗಿಸಿ ಹೊತ್ತಿಳಿಯುವ ವೇಳೆಗೆ ಊರಿನೆಲ್ಲ ಮಕ್ಕಳ ಬಳಗವನ್ನು ಕಟ್ಟಿಕೊಂಡು ಕಬ್ನಾಲು ಕುಡೀತಿದ್ವಿ ದಿನಾಲೂ ಇಲ್ಲಿ. ದೊಡ್ಡ ಕೊಪ್ಪರಿಗೆಗಳಲ್ಲಿ ಬೆಲ್ಲ ಹದಗೊಂಡು ಉಂಡೆಯಾಗುವ ಪರಿ ನಮ್ಮ ಲೋಚನಗಳಿಗೆ ವಿಸ್ಮಯ ತುಂಬಿದೆ. ಹಗಲಿರುಳೆನ್ನದೆ ಕಣ್ಗೆಣ್ಣೆ ಒಯ್ಕಂಡು ದುಡೀತಾನೆ ಆ ನಮ್ಮಪ್ಪ ಅಂತ ಎಲ್ಲೆಲ್ಲಿಯವರೋ ಬಂದು ಅಪ್ಪನನ್ನು ಕೊಂಡಾಡೋರು.

ಶಿರಾ ಭಾಗದಲ್ಲಿ ಮೊದಲು ಕಬ್ಬು ಬೆಳೆದು ಆಲೆಮನೆ ತಂದು ಬೆಲ್ಲ ಕಡೆಸಿದ್ದು ನನ್ನ ಅಪ್ಪ. ಇಷ್ಟೆಲ್ಲಾ ನೆಲದೊಡಲು ಫಲಕೊಡಲು ಇವರು ನಿದ್ದೆ ತ್ಯಾಗ ಮಾಡಿ ಶ್ರಮಿಸಿದ ಪರಿ, ನೆರವು ಕೊಟ್ಟ ನೂರಾರು ಜನ ದುಡಿಮೆಗಾರರೇ ನನಗೀಗಲೂ ಮಹಾತ್ಮರು. ಇವರಿಗೆಲ್ಲ ಕಾಲಕಾಲಕ್ಕೆ ನೆತ್ತಿ ಸವೆಯುವಂತೆ ಬುತ್ತಿ ಹೊತ್ತ ಅಮ್ಮ ಅಪ್ಪನ ಕೃಷಿ ಬಕುತಿಯ ಶಕುತಿ.

ಹೀಗೆ ಮೊದಲಾದ ಆಲೆಮನೆಯಲ್ಲಿ ಮೂಟೆಗಟ್ಲೆ ಬೆಲ್ಲದ ಗುಡ್ಡ ಮೂಡಿತು. ಬೆಲ್ಲ ತಗಳಕೆ ಮನೆಬಳಿ ಜನಬರೋರು. ಕೆ.ಜಿ.ಗೆ ಮೂರು ರುಪಾಯಿ ಬೆಲೆ ಅವತ್ತಿಗೆ. ಬೆಲ್ಲದ ಗುಡ್ಡದಲ್ಲಿ ಆಡಿ ನಾವೆಲ್ಲಾ ಸಿಹಿಯಾಗುತ್ತಿದ್ದೆವು. ಇದೊಂದು ಮಹಾಪರ್ವ. ಓತಿಕ್ಯಾತ ತತ್ತಿ ಇಕ್ಕಲ್ಲವೆಂದು ಲೇವಡಿಗೊಳಗಾದ ಅಪ್ಪನೂ ನೆಲವೂ ಹಸಿರಾಗಿ ನಳನಳಿಸಿ ದಕ್ಕಿಸಿಕೊಂಡ ಕೀರುತಿ ವಿಶಾಲ. ಇದೇ ನೆಲದಲ್ಲಿ ಸುತ್ತ ಅರ್ಗಿನಲ್ಲಿ ಹಣ್ಣಿನ ತರುಗಳೆದ್ದು ಹೊಸದೊಂದು ಲಕ್ಷಣವೂ ಹೊಲಕ್ಕೆ ಜೊತೆಯಾಯ್ತು. ಎಷ್ಟೋ ವರ್ಷ ಈ ನೆಲಕಾದ ಪಕ್ಕದೂರಿನ ಗಿರಿಯಜ್ಜ ಅಪ್ಪನಿಗೆ ಅಪ್ಪನಂತೆಯೇ ನೆರವಾದವರು.

ಇಲ್ಲಿಯ ಮಣ್ಣು ನಮ್ಮ ಕಣ್ಣಾಗಿ ಅಪ್ಪಟ ರೈತರ ಮನೆಯೊಡಲ ಕೂಸುಗಳಾಗಿ ಬೆಳೆದ ನಮಗೆ ಎತ್ತು, ತಿಪ್ಪೆ, ಸಗಣಿ, ಮಣ್ಣು, ಮಜ್ಜಿಗೆ, ಆಜ್ಯವಾಗಿ ಬಲಕೊಟ್ಟದ್ದು. ನಮ್ಮ ಮನೆಯಲ್ಲಿ ಕಟ್ಟುಮಸ್ತಾದ ಚೇತನ ಹೊಸಕೆರೆ ಓರಿ ಇವನಿಗೆ ಜೊತೆಯಾಗಿದ್ದು ಓಬ್ಳೇಹಳ್ಳಿಯ ಮತ್ತೊಂದು ಚೇತನ. ಇವರಿಬ್ಬರು ಅಪ್ಪ ದೊಡ್ಡಪ್ಪನಂತೆಯೇ ಮೃಚ್ಛದ ದೃಢ ಮಕ್ಕಳಾಗಿ ದುಡಿದರು. ಉಳ್ಳಿಗೆಡ್ಡೆ, ಬೆಳ್ಳುಳ್ಳಿ ಗೊಂಚಲುಗಳಾಗಿ ಇವರು ಇರುಳಲ್ಲಿ ಇರುವ ಗ್ವಾಂದ್ಗೆಯ ಗಳದಲ್ಲಿ ತೂಗವು.

ವರ್ಷೊಂಭತ್ತು ಕಾಲವೂ ಹಸಿವು ಕಳೆದು ಫಲ ಕೊಟ್ಟ ಈ ಎತ್ತುಗಳು ಕಾಲವಾದ ಮೇಲೆ ಅಜ್ಜನ ಗುಡ್ಡೆಯ ಬಳಿ ಇವರು ಬಂದು ನೆಲೆಸಿದರು. ಈಗಲೂ ಹಿರಿಯರ ಹಬ್ಬದ ದಿನ ಇವರನ್ನು ಪೂಜುವಾಗ ಮನೋಬಲ, ನೆಲಬಲ, ಅನ್ನಬಲ ಎಲ್ಲವೂ ಹೊಸದಾಗಿ ದಕ್ಕುವ ದಿವ್ಯಾನುಭೂತಿ ಕೈಹಿಡಿದು ಮುನ್ನಡೆಸಿದಂತೆಯೇ ನಮ್ಮ ಮುಂದಿನ ದಾರಿಗಳಲ್ಲಿ ಬೆಳಕುಟ್ಟುತ್ತದೆ.

ಎಲ್ಲ ಬೆಳೆಗಳು ಕಣಜ, ವಾಡೇವುಗಳಲ್ಲಿ ಜೀವಗೊಂಡು ಮುಲುಗುಟ್ಟುವಾಗಲೇ ನಮ್ಮ ಗಂಗಳ ಕುಕ್ಷಿಗಳಿಗೆ ತಾಕತ್ತು ಬಂದಿದ್ದು. ನನಗೊಂದು ನಿಚ್ಚ ಸಡಗರವಿದೆ. ಬಸ್ಸು ಸೌಕರ್ಯ ಇಲ್ಲದೆ ಸುತ್ತಲಿನ ಊರುಗಳಿಗೆ ಓಡಾಡಿಕೊಂಡು ಓದಿದ ಊರುಗಳ ತುಂಬೆಲ್ಲಾ ಅನ್ನದೇವರುಗಳು ನೇಗಿಲೊಳಗೆ ಮುಳುಗಿ ಮಣ್ಣಿಗೆ ಅನ್ನವಾಗುವ ಕಸುವು ಕೊಟ್ಟಿದ್ದಾರೆ. ಇವರೆಲ್ಲರ ಮಣ್ ಪ್ರೇಮದ ಸ್ವಪ್ನಗಳು ನಮ್ಮಕ್ಷಿಗಳಲ್ಲಿ ನಡೆದಾಡಿದ ಸಲುವಾಗಿ ಮಣ್ಣಮಡಿಲಿಗೆ ಬಿದ್ದು ಮುದಗೊಳ್ಳುವುದೆಂದರೆ ನಮಗೆ ಭವ್ಯವಾದದ್ದು.

ನಮ್ಮ ಭಾಗದಲ್ಲಿ ಅಹರ್ನಿಶಿ ನೆಲಕ್ಕಾಗಿಯೇ ತೇಯ್ದುಕೊಂಡ ಅನ್ನದೊಡೆಯರಿದ್ದಾರೆ. ನಾವೆಲ್ಲ ಹೊಲಮಾಳದ ಬದಗಳನ್ನೇರಿ ನಡೆದೇ ಅಕ್ಷರ ಕಲಿತವರು. ಆ ದಿನಗಳಲ್ಲಿ ಹೊಲದ ಜಂಗಮರು ತಾವು ಬೆಳೆದ ಹಣ್ಣು ಹೂಗಳನ್ನು ಕರೆದು ಕೊಡುತ್ತಿದ್ದ ಮಹಾಸಿರಿ ಧರಿಸಿದ್ದೇವೆ. ವರ್ಷದಲ್ಲಿ ಎಷ್ಟೋ ದಿನ ಶಾಲೆಗೆ ಹೋಗದೆ ಹೊಲಗಳಲ್ಲಿ ಹಸಿಶೇಂಗಾ, ಕ್ಯಾಕರ್ಕೆ ಹಣ್ಣು ತಿಂದ್ಕಂಡು ಹೊತ್ಮುಣುಕ್ಸಿ ಒದೆ ತಿಂದಿದ್ದೇವೆ. ಇವತ್ತಿಗೂ ಊರಿಗೆ ಹೋದರೆ ಸಿಗುವ ಎಲ್ಲಾ ಮುಪ್ಪಿನವರು ಹೊಲ್ಮಾಳ್ದಗೆ ಆಡ್ಕಂಡೆ ಕಲ್ತ ಮಕ್ಳು ಉಜ್ಜುಗವಿಡಿದು ನಗರ ಹೊಕ್ಕಿದೀರ ನಮ್ಮುನ್ನ ಮರೀಬೇಡ್ರಿ ಕಣವ್ವ; ಭಗ್ವಂತ ನಿಮ್ಮ ಸಿರಿಕಾಯಲಿ ಎಂದು ಹರಸುವ ರೈತರೇ ನಮಗೆ ದಿಟದೇವ ಜಂಗಮರು. ಇವರೆಲ್ಲರ ಶ್ರಮಶಕ್ತಿಯೇ ಲೋಕದ ಹರಣಬಲ.

ರಜೆಯ ದಿನಗಳಲ್ಲಿ ನಮ್ಮ ಪ್ರಜ್ಞೆ ಮಣ್ಣಲ್ಲಿ ಊಣಿಕೊಂಡದ್ದಕ್ಕೆ ಮಣ್ಣುದರದ ಪದರಗಳಲ್ಲಿನ ಅಚ್ಚರಿಗಳು ಅರ್ಥವಾಗಿದ್ದು. ಮಣ್ಣೆಂಬ ಹೊನ್ನಿಗೆ ಜೀವಕೊಟ್ಟ ಜಂಗಮ ಅನ್ನದಾತ. ಇವನೊಂದು ಕಾರುಣ್ಯವೇ ಅರಾಜಕತೆಯನ್ನು ಎಚ್ಚರಿಸುವಂತೆ ಕಾಣುತ್ತದೆ.

ರೈತರ ಕಣ್ಣಲ್ಲಿನ ಶ್ರಮದ ವ್ಯಥೆಯನ್ನು ಗ್ರಹಿಸುವವರಿಗಷ್ಟೇ ತಿಂದನ್ನ ಕರಗಲಾದೀತು. ಲೋಕಕಾಯುವ ಅನ್ನಜಂಗಮರನ್ನು ಗೌರವಿಸದ ಪೊಳ್ಳು ಮನಸುಗಳು ಅಳಿದು ಮಣ್ಣುಳಿಯಲು ಕಣ್ಣಾಗೋಣ. ಎಲ್ಲ ರೈತಜಂಗಮರ ಜೊತೆಗೆ ನಿಂತು ಅನ್ನ ತಿನ್ನುವ “ನನ್ನಿ” ಎಂದೆಂದಿಗೂ ನಮ್ಮ ಜ್ಞಾನ ಬಯಲಾಗಲಿ…

ಅನ್ನದಾತ ಅರಳಲಿ
ಮಣ್ಣು ಉಳಿಯಲಿ
ಉಸಿರಾಡಲು ಹಸಿರುಕ್ಕಲಿ
ರೈತಕುಲದ ಶ್ರಮವೇ ನಮಗೆಲ್ಲ
ಚರ್ಮ, ರುಧಿರ, ಎದೆಯಾಗಿ ಬಾಳು
ಹಬ್ಬಲೆಂಬ ಹಂಬಲದಲ್ಲಿ ನಮ್ಮುಳಿವು…….

“ಜೈ ಜವಾನ್ ಜೈ ಕಿಸಾನ್”

December 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳಿಗೆ ಕೊಡುವ ಪರ್ಫೆಕ್ಟ್ ಗಿಫ್ಟ್…

ಅವಳಿಗೆ ಕೊಡುವ ಪರ್ಫೆಕ್ಟ್ ಗಿಫ್ಟ್…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್,...

ಕಾಲದಾ ಕನ್ನಡಿ

ಕಾಲದಾ ಕನ್ನಡಿ

ವಿಜಯಾ ಮೋಹನ್ ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ...

೧ ಪ್ರತಿಕ್ರಿಯೆ

  1. Kavya

    ಬರಡಾದ ಭೂಮಿಯಲ್ಲೂ ಬಂಗಾರದ ಬೆಳೆ ಬೆಳೆಯುವ ರೈತನ ಶ್ರಮಕ್ಕೆ ಸಾಟಿಯಿಲ್ಲ. ಭೂಮಿ ತಾಯಿಯ ಮೇಲಿನ ನಂಬಿಕೆ ಶ್ರದ್ಧೆ ಶ್ರಮದ ದುಡಿಮೆಗೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ನಮ್ಮ ದೇಶದ ಬೆನ್ನೆಲುಬಾದ ರೈತ ಎಲ್ಲರಿಗೂ ಅನ್ನವನ್ನು ಉಣಿಸುತ್ತಾ ಅವನು ಮಾತ್ರ ಉಪವಾಸ ಉಳಿಯುವ ಸ್ಥಿತಿ ಬಂದಿದೆ. ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತ ಸಾಲದ ಹೊರೆಯಿಂದ ತನ್ನ ಜೀವನವನ್ನು ಅಂತ್ಯ ಮಾಡುತ್ತಿದ್ದಾನೆ. ಅಷ್ಟೊಂದು ಪರಿಶ್ರಮಪಟ್ಟು ದುಡಿದರು ರೈತನ ಬದುಕು ಸುಧಾರಿಸಿಲ್ಲ. ಈ ಕಾರಣಕ್ಕಾಗಿ ಈಗಿನ ಯುವ ಸಮುದಾಯ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಪೇಟೆ ಚಿಕ್ಕಪುಟ್ಟ ಕೆಲಸದಲ್ಲಿ ತೊಡಗುತ್ತಾರೆ. ಸಿರಾದಂತಹ ಬರದ ನಾಡಿನಲ್ಲಿ ಕಬ್ಬು ಬೆಳೆದ ನಮ್ಮ ಮುತ್ತಾತಂದಿರು ನಿಜಕ್ಕೂ ಮಣ್ಣಿನ ಮಕ್ಕಳು. ರೈತನ ಬದುಕು-ಬವಣೆಗಳನ್ನು ತಿಳಿಸಿದ ನಿಮಗೆ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: