ಅಪರಾಧ, ಅನುಮಾನ ಮತ್ತು ಅವಮಾನ

gali.gif

“ಗಾಳಿ ಬೆಳಕು” ಕಾಲಂ 

ನಟರಾಜ್ ಹುಳಿಯಾರ್

ಮೊನ್ನೆ ಸಂಜೆ ಐದೂ ಮೂವತ್ತರ ಹೊತ್ತಿಗೆ ಬೆಂಗಳೂರಿನ ರಸ್ತೆಯೊಂದರಲ್ಲಿ ಇಬ್ಬರು ತರುಣರು ಬೈಕೊಂದರಲ್ಲಿ ಹೋಗುತ್ತಿದ್ದರು. ಸವಾರನ ತಲೆಯಲ್ಲಿ ಹೆಲ್ಮೆಟ್ ಇರಲಿಲ್ಲ. ಹೊಯ್ಸಳ ಪೊಲೀಸರು ಈ ಬೈಕನ್ನು ನಿಲ್ಲಿಸಿದರು. ಹೊಯ್ಸಳ ಜೀಪಿನಲ್ಲಿ ಪಹರೆಯಲ್ಲಿರುವ ಪೊಲೀಸರ ವ್ಯಾಪ್ತಿಗೆ ಸಾಮಾನ್ಯವಾಗಿ ಈ ಹೆಲ್ಮೆಟ್ ವಿಚಾರಣೆ ಬರುವುದಿಲ್ಲ. ಅದು ಟ್ರಾಫಿಕ್ ಪೊಲೀಸರ ಕೆಲಸ. ಆದರೂ ತಪ್ಪು ತಪ್ಪೇ. ಆ ತರುಣರನ್ನು ಪೊಲೀಸರು ನಿಲ್ಲಿಸಿದ್ದು ಸರಿಯಿರಬಹುದು. ಇದು ಕಾನೂನಿನ ಉಲ್ಲಂಘನೆಯ ಪ್ರಶ್ನೆಯಾಗಿದ್ದರೆ ಅದು ಹೆಲ್ಮೆಟ್ ಗೆ ಮಾತ್ರ ಸೀಮಿತವಾಗಬೇಕಿತ್ತು. ಟ್ರಾಫಿಕ್ ಪೊಲೀಸರನ್ನು ಕರೆಸಿ ಆ ತರುಣರಿಗೆ ದಂಡ ಹಾಕಿಸಬಹುದಿತ್ತು. ಆದರೆ ವಿಚಾರಣೆ ಆ ದಿಕ್ಕು ಹಿಡಿಯಲಿಲ್ಲ. ಯಾಕೆಂದರೆ ಆ ತರುಣರು ಮುಸ್ಲಿಮರಾಗಿದ್ದರು. ಮುಸ್ಲಿಮರ ಬಗೆಗಿನ ಪೂರ್ವಗ್ರಹವೆಲ್ಲ ಆ ಪೊಲೀಸರ ಬಾಯಿಂದ ಹರಿದುಬರತೊಡಗಿತು.

ಮೊದಲೇ ನಮ್ಮ ನಾಲಗೆಗಳು ಯಾರ ಮೇಲೆ ಬೇಕಾದರೂ ಹೇಗೆಂದರೆ ಹಾಗೆ ಮಾತಾಡಲು ಹಾತೊರೆಯುತ್ತಿರುತ್ತವೆ. ಅದು ಸರಿಯೋ ತಪ್ಪೋ ಬಾಯಿಗೆ ಬಂದಂತೆ ಬೊಗಳಲು ನಮ್ಮ ಗಂಟಲು ಕಾತರಿಸುತ್ತಿರುತ್ತದೆ. ಅದರ ಜೊತೆಗೆ ನಮ್ಮ ಕೊಳಕು ಪೂರ್ವಗ್ರಹಗಳೂ ಸೇರಿಕೊಂಡರೆ ನಾವು ಏನು ಮಾತಾಡುತ್ತಿದ್ದೇವೆ ಎಂಬ ನೆದರೇ ನಮಗೆ ಇಲ್ಲವಾಗತೊಡಗುತ್ತದೆ. ದಿನನಿತ್ಯ ಮೇಲಿನ ಅಧಿಕಾರಿಗಳಿಂದ ಬೈಸಿಕೊಳ್ಳುವ ಪೊಲೀಸರಲ್ಲಿ ಈ ಪ್ರವೃತ್ತಿ ಇನ್ನೂ ಹೆಚ್ಚಾಗಿರುತ್ತದೆ. ಅವತ್ತು ಈ ಪೊಲೀಸರ ಬಾಯಿಗೆ ಸಿಕ್ಕಿಕೊಂಡವರಲ್ಲಿ ನನ್ನ ಕಲಾವಿದ ಮಿತ್ರನೂ ಒಬ್ಬ. ಸಾಹಿತ್ಯ, ನಾಟಕಗಳ ಜಗತ್ತಿನ ಸೂಕ್ಷ್ಮಜೀವಿಯಾದ ಈತನಿಗೆ ಪೊಲೀಸರ ಮಾತು ಕೇಳಿದ ಮೇಲೆ ಈ ದೇಶದಲ್ಲಿ ಹುಟ್ಟಿದ್ದೇ ತಪ್ಪಾಯಿತೇ ಎಂಬ ದುಗುಡ ಶುರುವಾಯಿತು. ಮಾರನೆಯ ದಿನ ಆತನಿಗೆ ಸಮಾಧಾನ ಹೇಳುತ್ತಾ ಕರೆತಂದ ಟೀವಿ ನಟನಿಗಾಗಲೀ, ಈ ಪ್ರಕರಣದ ವಿವರ ಕೇಳಿಸಿಕೊಂಡ ನನಗಾಗಲೀ ಅವನ ಅನಾಥ ಸ್ಥಿತಿ ಸುಲಭವಾಗಿ ಅರ್ಥವಾಗುವುದು ಸಾಧ್ಯವಿರಲಿಲ್ಲ. ಒಬ್ಬಿಬ್ಬರು ಪೊಲೀಸರ ಮಾತಿನಿಂದಾಗಿ ಒಂದು ತಲೆಮಾರಿನ ಹುಡುಗರ ಆತ್ಮವಿಶ್ವಾಸವೇ ಕುಸಿಯುವ ಅಪಾಯದ ಅಳತೆ ನಮಗೆ ದಕ್ಕುವಂತಿರಲಿಲ್ಲ.

ಇವತ್ತು ಲಂಡನ್ನಿನಲ್ಲಿ ವ್ಯಕ್ತಿಯೊಬ್ಬ ಮಾಡಿದ ತಪ್ಪಿಗೆ ಆತನ ಸಮುದಾಯವನ್ನೇ ಹೀಯಾಳಿಸುವವರು ಆ ಬಾಣ ತಮಗೇ ತಿರುಗಿದಾಗ ಏನೆನ್ನಿಸುತ್ತದೆ ಎಂಬುದನ್ನು ಯೋಚಿಸಿದಂತಿಲ್ಲ. ಯಾವನೋ ಒಬ್ಬ ಪೊಲೀಸ ಮಾಡಿದ ತಪ್ಪಿಗೆ ಜನರು “ಈ ಪೊಲೀಸರೆಲ್ಲ ಭ್ರಷ್ಟರು” ಎಂದರೆ ಪೊಲೀಸ್ ವರ್ಗಕ್ಕೆ ಏನನ್ನಿಸಬಹುದು? ಅದರಲ್ಲೂ ನೀವು ಪೊಲೀಸ್ ಕ್ವಾರ್ಟಸ್ಸುಗಳಲ್ಲಿ ಬದುಕುವ ಕಾನ್ ಸ್ಟೇಬಲ್ ದರ್ಜೆಯವರ ಮನೆಯ ದಯನೀಯ ಪರಿಸ್ಥಿತಿ, ಅವರ ಮನೆಮಕ್ಕಳ ವಿದ್ಯಾಭ್ಯಾಸದ ಸ್ಥಿತಿ, ಟ್ರಾಫಿಕ್ ಪೊಲೀಸರು ದಿನನಿತ್ಯ ಕುಡಿಯುವ ಹೊಗೆಯಿಂದ ಬರುವ ಕಾಯಿಲೆಗಳು… ಇವನ್ನೆಲ್ಲ ನೋಡಿದ್ದರೆ ಪೊಲೀಸರೆಲ್ಲ ಭ್ರಷ್ಟರು ಎಂಬ ಜನರ ಆಡುಮಾತು ಎಷ್ಟು ಕ್ರೂರವಾದುದು ಎಂಬುದು ಗೊತ್ತಾಗುತ್ತದೆ. ಆದ್ದರಿಂದ ಈ ಬಗೆಯ ಮಾತುಗಳು ಪೊಲೀಸರಿಗೆ ಚುಚ್ಚಿದರೆ ಅದು ತೀರಾ ಸಹಜ. ಈ ಥರದ ಅವಮಾನ ಉಂಡಿರುವ ಪೊಲೀಸರಾದರೂ ತಮಗೆ ಅಪರಾಧಿ ಎಂದು ಅನುಮಾನ ಬಂದ ವ್ಯಕ್ತಿಯನ್ನು ಒಬ್ಬ ವ್ಯಕ್ತಿಯಾಗಿ ನೋಡಬೇಕೇ ಹೊರತು ಒಂದು ಜಾತಿ, ಧರ್ಮದ ಪ್ರತಿನಿಧಿಯಾಗಿ ಅಲ್ಲ. ನಾನು ಚಿಕ್ಕವನಾಗಿದ್ದಾಗ ನನ್ನ ಪರಿಚಯಸ್ಥರ ಊರೊಂದನ್ನು “ಕಳ್ಳ ತಾವರೆಕೆರೆ” ಎನ್ನುತ್ತಿದ್ದರು. ಯಾರೋ ತಲೆ ಕೆಟ್ಟವನೊಬ್ಬ ಇಟ್ಟ ಈ ಅಡ್ಡ ಹೆಸರು ಹೇಗೆ ಹಬ್ಬಿತ್ತೆಂದರೆ, ಆ ತಾವರೆಕೆರೆ ಎಂಬ ಊರಿನವರು ಯಾರು ಸಿಕ್ಕರೂ ನಾವು ಅವರನ್ನು ಕಳ್ಳರಂತೆ ನೋಡತೊಡಗಿದ್ದೆವು. ಆ ಊರಿನ ಬಗೆಗಿನ ಜನಾಭಿಪ್ರಾಯವನ್ನು ನಾವೂ ಮತ್ತೆ ಮತ್ತೆ ಹೇಳಿ ಅವರ ಕಳ್ಳತನವನ್ನು ನಾವೇ ಕಂಡುಹಿಡಿದವರಂತೆ ಕತೆ ಹಬ್ಬಿಸುತ್ತಿದ್ದೆವು. ಆಮೇಲೆ ಚರಿತ್ರೆಯ ಪುಸ್ತಕಗಳಲ್ಲಿ “ಗೊಬೆಲ್ಸ್ ಒಂದು ಸುಳ್ಳನ್ನು ಪದೆಪದೇ ಹೇಳಿ ಅದನ್ನು ಸತ್ಯವಾಗಿಸಿ ಹಿಟ್ಲರ್ ಗೆ ನೆರವಾದ” ಎಂಬುದನ್ನು ಓದಿಕೊಂಡೆವು. ಆದರೆ ಕ್ರಮೇಣ ನಾವೆಲ್ಲರೂ ನಂನಮ್ಮ ಕೈಲಾದ ಮಟ್ಟಿಗೆ ಆ ಗೊಬೆಲ್ಸ್ ನ ಪುಟ್ಟ ರೂಪದಂತಿದ್ದೇವೆ ಎಂಬುದರ ಅರಿವಾಗತೊಡಗಿತು. ಯಾವುದೋ ಸಂದರ್ಭದಲ್ಲಿ ಯಾರೋ ನೀಚನೊಬ್ಬ ಹೇಳಿದ ಮಾತನ್ನು ಪುನರುಚ್ಚರಿಸುತ್ತಾ ಹೋಗುವ ನಾವು ಅನೇಕ ಸಲ ಗೊಬೆಲ್ಸ್ ನ ಅಣ್ಣನಂತೆಯೋ ತಮ್ಮನಂತೆಯೋ ಆಡುತ್ತಿರುವುದಿಲ್ಲವೆ?

ಇನ್ನೊಬ್ಬರನ್ನು ಬೈಯುವ ಸಂದರ್ಭದಲ್ಲಂತೂ ಎಂದೋ ಎಲ್ಲೋ ಕೇಳಿದ ಕೊಳಕನ್ನೆಲ್ಲಾ ಒಗ್ಗೂಡಿಸಿ ಬೈಯುವುದು ನಮಗೆ ರೂಢಿಯಾಗಿಬಿಟ್ಟಿದೆ; ವರ್ಗಗಳನ್ನು ಇಡಿಯಾಗಿ ಹೀಯಾಳಿಸುವುದು ಸಲೀಸಾಗಿಬಿಟ್ಟಿದೆ. ಆಟೋದವನೊಬ್ಬ ತೊಂದರೆ ಕೊಟ್ಟರೆ “ಈ ಆಟೋದವರೇ ಹೀಗೆ” ಎನ್ನುವ ಮಾತು ಆರಾಮಾಗಿ ನಮ್ಮ ಬಾಯಿಂದ ಬರುತ್ತದೆ. ಆದರೆ ಆಟೋ ಚಾಲಕನೊಬ್ಬ ಪ್ರಯಾಣಿಕರು ಆಟೋದಲ್ಲಿ ಬಿಟ್ಟು ಹೋದ ಹಣದ ಬ್ಯಾಗೊಂದನ್ನು ಹಿಂದಿರುಗಿಸಿದಾಗ “ಆಟೋದವರೆಲ್ಲ ಪ್ರಾಮಾಣಿಕರು” ಎಂಬ ಮಾತು ಮಾತ್ರ ನಮ್ಮ ಬಾಯಲ್ಲಿ ಬರುವುದಿಲ್ಲ! ಇಂದಿರಾಗಾಂಧಿಯವರನ್ನು ಬೆಯಾಂತ್ ಸಿಂಗ್ ಮತ್ತು ಅವನ ಸಹಚರ ಕೊಂದಾಗ ಸರದಾರಜಿಗಳನ್ನೆಲ್ಲ ಅನುಮಾನದಿಂದ ನೋಡುವ ಹೀನ ಧೋರಣೆ ಕೆಲಕಾಲ ಇಂಡಿಯಾದಲ್ಲಿತ್ತು. ಈ ಹೊರೆಯಿಂದ ಸಿಖ್ಖರು ಪಾರಾಗಲು ಎಷ್ಟೋ ವರ್ಷ ಹಿಡಿಯಿತು. ಈ ನಡುವೆ ಈ ಬಗೆಯ ಅನುಮಾನದ ಹೊರೆಯಿಂದ ಅಪಾಯಗಳೂ ಆಗುತ್ತಿರುತ್ತವೆ. ಯಾವುದೋ ವ್ಯಕ್ತಿಯ ತಪ್ಪನ್ನು ಅವನ ಸಮುದಾಯದಲ್ಲಿ ತಮ್ಮ ಪಾಡಿಗೆ ತಾವಿರುವವರ ಮೇಲೆಲ್ಲಾ ಹೊರಿಸಿದರೆ, ಅವರಲ್ಲಿ ಕೆಲವರಾದರೂ ರೊಚ್ಚಿಗೆದ್ದು ಆ ತಪ್ಪನ್ನು ಮಾಡಿಯೇ ತೀರುತ್ತೇವೆ ಎಂದು ಸೆಟೆದೆದ್ದರೆ ಆಶ್ಚರ್ಯವಲ್ಲ.

ಇದನ್ನು ಊಹೆಯ ಮೇಲೆ ಹೇಳುತ್ತಿಲ್ಲ. ಪ್ರತಿಯೊಂದು ಅಪರಾಧದ ಪ್ರಕರಣವನ್ನು ಹತ್ತಿರದಿಂದ ನೋಡಿದಾಗಲೂ, ಅದರಲ್ಲಿ ಭಾಗಿಯಾದ ವ್ಯಕ್ತಿ ಸಾಮಾನ್ಯವಾಗಿ ಯಾವುದೋ ಅವಮಾನ ತನ್ನನ್ನು ಈ ಅಪರಾಧಕ್ಕೆ ದೂಡಿದೆ ಎಂದು ತಿಳಿದಿರುವುದು ಗೊತ್ತಾಗುತ್ತದೆ. ಮಾನವ ಮನಸ್ಸು ತನ್ನ ತಪ್ಪಿಗೆ ಬಗೆಬಗೆಯ ನ್ಯಾಯಬದ್ಧತೆ ಸೃಷ್ಟಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಅಪರಾಧ ಮಾಡದೇ ಇರುವವನ ಬಗ್ಗೆ ನಾವು ಆಡುವ ಕೊಂಕು ಇಡೀ ಸಮಾಜಕ್ಕೇ ಹಾನಿಕಾರಕವಾಗಬಲ್ಲುದು. ಒಂದು ಕಾಲಕ್ಕೆ ಬಹುಸಂಖ್ಯಾತರ ದುರಹಂಕಾರದಿಂದಾಗಿ ಶ್ರೀಲಂಕಾದಲ್ಲಿ ತಮಿಳರಿಗೆ ಆದ ಸಣ್ಣ ಪುಟ್ಟ ಅವಮಾನಗಳು ಕೂಡ ಕತೆಯಂತೆ ಹಬ್ಬಿ ಬೆಳೆದದ್ದರ ಪರಿಣಾಮ: ಶ್ರೀಲಂಕಾ ಹತ್ತಾರು ವರ್ಷಗಳಿಂದೀಚೆಗಂತೂ ಪೂರ್ಣ ನಾಶವಾಗುವ ಹಾದಿಯಲ್ಲಿ ನಡೆದಿದೆ. ಮೊದಲು ಸಣ್ಣ ಸಣ್ಣ ಅವಮಾನಗಳಿಗೆ ಪ್ರತಿಭಟನೆಯಂತೆ ಆರಂಭವಾದದ್ದು ಕ್ರಮೇಣ ಒಂದು ಜನಾಂಗದ ಸ್ವಾತಂತ್ರ್ಯ ಚಳುವಳಿಯ ಸ್ವರೂಪವನ್ನೇ ಪಡೆದಿದೆ. ಈ ನಡುವೆ ಶ್ರೀಲಂಕಾದ ಆರ್ಥಿಕತೆಯೇ ಕುಸಿದು ಹೋಗಿದೆ.

ಚರಿತ್ರೆಯ ಘಟನಾವಳಿಗಳನ್ನು ಸರಿಯಾಗಿ ನೋಡಿದರೆ, ಎಷ್ಟೋ ಸಲ ಸಣ್ಣಪುಟ್ಟ ಸಮಸ್ಯೆಗಳೇ ಮುಂದೆ ನಾಡನ್ನು ನುಂಗುವ ರಾಕ್ಷಸನಾಗಿ ಬೆಳೆದಿರುವುದು ಗೊತ್ತಾಗುತ್ತದೆ. ಇವುಗಳಲ್ಲಿ ಕೆಲವು ಸಮಸ್ಯೆಗಳಂತೂ ಜನರ ಹರಕು ನಾಲಗೆಯಿಂದ ಕೂಡ ನೀರು, ಗೊಬ್ಬರ ಪಡೆದಿವೆ. ಆದ್ದರಿಂದಲೇ ಲಂಡನ್ ಸ್ಫೋಟದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಾಬರ ಹುಡುಗರನ್ನು ಹೀಯಾಳಿಸುವ ಪ್ರವೃತ್ತಿ ನಮ್ಮ ಕಾನೂನು ರಕ್ಷಕರಲ್ಲಿ ಬೆಳೆದಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಕಾನೂನು ಕಾಪಾಡುವವರು ಹದ್ದು ಮೀರಿ ಮಾತಾಡುವ ಸ್ವಾತಂತ್ರ್ಯ ಪಡೆದ ತಕ್ಷಣ ಪ್ರಜಾಪ್ರಭುತ್ವ ಕುಸಿಯತೊಡಗುತ್ತದೆ. ನಮ್ಮ ಸುತ್ತ ಹಿಂಸೆ, ಪ್ರತಿಹಿಂಸೆ ಹೆಚ್ಚಾದಷ್ಟೂ ವಿಧಾನಸೌಧದ ಸುತ್ತ ಹೊಸ ಹೊಸ ಬೇಲಿಗಳೂ ಹೊಸ ಹೊಸ ರಕ್ಷಣಾಪಡೆಗಳೂ ಹೆಚ್ಚತೊಡಗುತ್ತವೆ. ಪರಿಣಾಮ: ಶಾಸಕರು, ಮಂತ್ರಿಗಳು ಜನರಿಂದ ಇನ್ನಷ್ಟು ದೂರವಾಗತೊಡಗುತ್ತಾರೆ.

ಆದರೆ ಈ ಶಾಸಕರು, ಮಂತ್ರಿಗಳು ಐದು ವರ್ಷಗಳ ಕಾಲ ಬೇಲಿ ಹಾಕಿಕೊಂಡು ಹಾಗೂ ಹೀಗೂ ಜನರಿಂದ ದೂರ ಇರಬಹುದಾದರೂ ಅವರು ಅಂತಿಮವಾಗಿ ಜನರ ಬಳಿ ಹೋಗಲೇಬೇಕಾಗುತ್ತದೆ. ಆದ್ದರಿಂದಲೇ ತಮ್ಮ ಪ್ರಭುಗಳಾದ ಪ್ರಜೆಗಳನ್ನು ಅವರ ಜಾತಿ, ಧರ್ಮದ ಮೇಲೆ ಹೀಯಾಳಿಸುವ ಹಕ್ಕು ಪೊಲೀಸರಿಗಿಲ್ಲ ಎಂಬುದನ್ನು ಈ ನಾಯಕರು ಪೊಲೀಸರಿಗೆ ಮತ್ತೆ ಮತ್ತೆ ಮನವರಿಕೆ ಮಾಡಬೇಕು. ಜನರಿಗಾಗುವ ಸಣ್ಣಪುಟ್ಟ ಅವಮಾನಗಳಿಂದ ಹುಟ್ಟುವ ಸಿಟ್ಟು ಅಂತಿಮವಾಗಿ ಪ್ರಭುತ್ವದ ವಿರುದ್ಧವೇ ತಿರುಗುತ್ತದೆ ಎಂಬ ವಾಸ್ತವವನ್ನು ಆಳುವವರು ನೆನಪಿನಲ್ಲಿಡಬೇಕು. ಯಾವುದೇ ಪೊಲೀಸರಿಗೆ ಬಾಯಿಗೆ ಬಂದಂತೆ ಮಾತಾಡುವ ಹಕ್ಕನ್ನು ಯಾವ ಸಂವಿಧಾನವೂ ಕೊಟ್ಟಿಲ್ಲ ಎಂಬುದನ್ನು ಜನರು ಮನವರಿಕೆ ಮಾಡಿಕೊಳ್ಳಬೇಕು. ಈ ನಡುವೆ ಕೂಡ ಸಾಮಾನ್ಯ ಪೊಲೀಸರ ದೈನಂದಿನ ಕಷ್ಟದ ಬಗ್ಗೆಯೂ ನಾವು ಸಹಾನುಭೂತಿಯಿಂದ ಇರೋಣ: ಅವರ ಮೇಲಿನ ಒತ್ತಡವನ್ನು ಕೂಡ ಅರ್ಥ ಮಾಡಿಕೊಳ್ಳೋಣ. ಅವರ ತನಿಖೆಗಳಿಗೆ ಸಹಕರಿಸೋಣ. ಅದರ ಜೊತೆಗೇ ಒಂದು ಘಟನೆಯನ್ನು ತಡೆಯುವಲ್ಲಿನ ತಮ್ಮ ಇಂಟಲಿಜೆನ್ಸ್ ವ್ಯವಸ್ಥೆಯ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಸಿಕ್ಕಸಿಕ್ಕವರ ಮೇಲೆ ನಿರ್ನಿಮಿತ್ತವಾದ ಕ್ರೂರ ಭಾಷೆಯನ್ನು ಬಳಸದಿರುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಳ್ಳೋಣ.

ಈ ಹಿನ್ನೆಲೆಯಲ್ಲಿ, ಈ ಬರಹದ ಶುರುವಿನಲ್ಲಿ ಹೇಳಿದ ಘಟನೆಗೆ ವಾಪಸ್ಸಾಗೋಣ. ಆ ತರುಣರನ್ನು ನಮ್ಮ ಪೊಲೀಸರು ವಿನಾ ಕಾರಣ ಅವಮಾನಿಸಲು ಲಂಡನ್ನಿನಲ್ಲಿ ಆದ ಸ್ಫೋಟ ಕಾರಣ ತಾನೆ? ಈ ಬಗ್ಗೆ ಇನ್ನಷ್ಟು ವಿಸ್ತಾರವಾಗಿ ಯೋಚಿಸಿ ನೋಡಿ: ಇಂದಿನ ಭಯೋತ್ಪಾದನೆ ಹಾಗೂ ಬಗೆಬಗೆಯ ಜಾಗತಿಕ ಹಿಂಸೆಗಳು ಪಶ್ಚಿಮವೇ ಆರಂಭಿಸಿದ ಜಾಗತೀಕರಣದ ಜೊತೆಗೇ ಬೆಳೆದ ಪೀಡೆಗಳೂ ಹೌದು. ಅಮೆರಿಕಾದಲ್ಲಿ ನಡೆದ ಸ್ಫೋಟಕ್ಕೆ ಇಡೀ ಜಗತ್ತು ಸ್ಪಂದಿಸಬೇಕೆಂದು ಅಮೆರಿಕಾ ಬಯಸುತ್ತದೆ. ಇಂಗ್ಲೆಂಡಿನಲ್ಲಿ ಆದ ಸ್ಫೋಟದ ಸಂಚನ್ನು ಸ್ಫೋಟಿಸಲು ಇಡೀ ಜಗತ್ತು ಕೈಜೋಡಿಸಬೇಕೆಂದು ಇಂಗ್ಲೆಂಡ್ ನಿರೀಕ್ಷಿಸುತ್ತದೆ. ಆ ಬಗ್ಗೆ ನಾವೆಲ್ಲ ಅನುಕಂಪದಿಂದ ಸಹಕರಿಸೋಣ. ಆದರೆ ಇದೇ ಪಶ್ಚಿಮದ ನೀತಿಗಳಿಂದಲೇ ಭಾರತದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಗಳು ಪಶ್ಚಿಮದ ಮಾರುಕಟ್ಟೆ ಹಾಗೂ ಪಶ್ಚಿಮದ ಸರ್ಕಾರಗಳು ತಮ್ಮ ಲಾಭಕ್ಕಾಗಿ ಮಾಡಿದ ಕೊಲೆಗಳಲ್ಲದೆ ಮತ್ತಿನ್ನೇನು? ಕಳೆದ ಐದು ವರ್ಷಗಳಿಂದ ರೈತರ ಆತ್ಮಹತ್ಯೆಗಳನ್ನು ತಡೆಯಲು ನಮ್ಮ ಸಮಾಜ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಅಮೆರಿಕಾ, ಇಂಗ್ಲೆಂಡ್ ಗಳು ಎಂಥ ಕಳ್ಳಮೌನ ವಹಿಸಿವೆಯೆಂಬುದನ್ನು ನೀವು ಗಮನಿಸಿರಬಹುದು.

ಇದರರ್ಥ ಇಷ್ಟೆ: ಇಂಗ್ಲೆಂಡಿನಲ್ಲಿ ಆದ ಸ್ಫೋಟದಲ್ಲಿ ಬೆಂಗಳೂರಿನ ಇಬ್ಬರು ವ್ಯಕ್ತಿಗಳು ಭಾಗಿಯಾಗಿದ್ದರೆ, ಇಂಗ್ಲೆಂಡಿನ ಪೊಲೀಸರಿಗೆ ಸಹಕಾರ ನೀಡುವುದು ನಮ್ಮ ಪೊಲೀಸರ ಕರ್ತವ್ಯ. ಆದರೆ ಅದನ್ನು ಮೀರಿ, ಅತ್ಯುತ್ಸಾಹದಿಂದ ಯಾವುದೇ ಸಮುದಾಯವನ್ನು ಭಯೋತ್ಪಾದಕತೆಯೊಂದಿಗೆ ಬ್ರ್ಯಾಂಡ್ ಮಾಡಿ ಹೊಸ ಹೊಸ ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳುವುದು ಅಪ್ಪಟ ಮೂರ್ಖತನ ಹಾಗೂ ಅತ್ಯಂತ ಅಪಾಯಕಾರಿ. ಅದರ ಜೊತೆಗೇ, ಅಪರಾಧ ಮತ್ತು ಶಿಕ್ಷೆಗಳ ಜೂಜಾಟದಲ್ಲಿ ಅಪರಾಧಿ ಹಾಗೂ ತೀರ್ಪುಗಾರನ ಸ್ಥಾನ ಯಾವಾಗ ಬೇಕಾದರೂ ಅದಲು ಬದಲಾಗಬಹುದು ಎಂಬ ಕಠೋರ ಸತ್ಯದ ಅರಿವು ಪೊಲೀಸರೂ ಸೇರಿದಂತೆ ಎಲ್ಲರಿಗೂ ಇರಬೇಕಾದದ್ದು ಅನಿವಾರ್ಯವಾಗಿದೆ.

‍ಲೇಖಕರು avadhi

July 17, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

4 ಪ್ರತಿಕ್ರಿಯೆಗಳು

 1. Dr. Sathyanarayana Bhat

  It is an excellent argument. Nice piece of freedom in communicating.

  keep it up Nataraj.

  regards
  BHAT SN

  ಪ್ರತಿಕ್ರಿಯೆ
 2. bmhaneef

  Dr Haneef obba bhayotpadaka endu namma aneka patrikegalu teerpu needi Agide. Avana kutumbada mana beedi palagide. Avanu kalita shalegala mana beedi palagide.

  Avanu Jaminu padedu hora bandaroo iga agivruva ghora avamanadinda hora baruvudu kasta. Hage hora baralu A kutumbakke dhairya tumbona.
  BmHaneef

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: