ಅಪ್ಪನ ದಿನಕ್ಕಾಗಿ ರಾಮಾನುಜನ್ ಕವನ ..

ಮರಣ ವೃತ್ತಾಂತ ಮೂಲ ಇಂಗ್ಲೀಷ್: a k ರಾಮಾನುಜನ್ ಭಾವಾನುವಾದ: ಉದಯ್ ಇಟಗಿ ಆತ್ಮೀಯರೆ, a .k.ರಾಮಾನುಜನ್ ಭಾರತೀಯ ಪ್ರಸಿದ್ಧ ಇಂಗ್ಲೀಷ್ ಕವಿ. “ಮರಣ ವೃತ್ತಾಂತ” (Obituary) ಎನ್ನುವದು ಅವರು ಅವರಪ್ಪ ಸತ್ತ ಮೇಲೆ ಬರೆದ ಒಂದು ಕವನ. ಸಾಮಾನ್ಯವಾಗಿ ನಾವೆಲ್ಲ ವ್ಯಕ್ತಿ ಸತ್ತ ಮೇಲೆ ಅವರನ್ನು ಹೊಗಳುತ್ತಾ, ಉತ್ಪ್ರೇಕ್ಷಿಸುತ್ತಾ ಅವರ ಬಗ್ಗೆ ಬರೆದು ದಿನ ಪತ್ರಿಕೆಗಳಲ್ಲಿ ಪ್ರಕಟಿಸುತ್ತೇವೆ. ಆದರೆ ಇಲ್ಲಿ ಕವಿ ಅವರಪ್ಪನನ್ನು ಇದ್ದಕ್ಕಿದ್ದಂತೆ ಈ “ಮರಣ ವೃತ್ತಾಂತ”ದಲ್ಲಿ ಸೆರೆ ಹಿಡಿದಿದ್ದಾರೆ. ಬಹುಶಃ ಕವಿಯ ಅಪ್ಪ ತನ್ನ ಕುಟುಂಬದವರ ಜೊತೆ ಅಷ್ಟೊಂದು ಚನ್ನಾಗಿರಲಿಲ್ಲವೆಂದು ಕಾಣುತ್ತದೆ. ಅಥವಾ ಅವನೊಬ್ಬ ಬೇಜವಾಬ್ದಾರಿ ಅಪ್ಪನಾಗಿರಬಹುದು. ಆ ಕಾರಣಕ್ಕೆ ಕವಿ ಅಪ್ಪನ ಮೇಲೆ ಸಿಟ್ಟಾಗಿದ್ದಾನೆ. ಆ ಸಿಟ್ಟು ಕವನದುದ್ದಕ್ಕೂ ಕಾಣುತ್ತದೆ. ಇಲ್ಲಿ ವ್ಯಕ್ತಿ ಸತ್ತ ಮೇಲೆ ಅವನಿರುವಂತೆ ಅವನನ್ನು ಸೆರೆಹಿಡಿದಿರುವದು ಕವಿಯ ನೇರ ಹಾಗೂ ನಿಷ್ಟುರ ನಡವಳಿಕೆಯನ್ನು ತೋರಿಸುತ್ತದೆ. ಅಪ್ಪ ಸತ್ತಾಗ ನಮಗೆ ಅಂತಾ ಬಿಟ್ಟು ಹೋಗಿದ್ದು ಮೇಜಿನ ತುಂಬ ಒಂದಷ್ಟು ಧೂಳು ತುಂಬಿದ ಕಾಗದ ಪತ್ರಗಳು, ಒಂದಿಷ್ಟು ಸಾಲ, ಒಂದಿಬ್ಬರು ಅವಿವಾಹಿತ ಹೆಣ್ಣುಮಕ್ಕಳು ಹಾಗೂ ಇನ್ನೂ ಹಾಸಿಗೆಯಲ್ಲೇ ಉಚ್ಚೇ ಮಾಡುವ ಮೊಮ್ಮಗ. ಸಾಲದ್ದಕ್ಕೆ ಆ ಮೊಮ್ಮಗನಿಗೆ ಅವ ಸತ್ತ ಮೇಲೆ ಆಕಸ್ಮಿಕವಾಗಿ ಇವನ ಹೆಸರನ್ನೇ ಇಡಬೇಕಾಯಿತು. – ಜೊತೆಗೆ ಅವನು ನಮಗೆ ಅಂತಾ ಬಿಟ್ಟು ಹೋಗಿದ್ದು ಮನೆಯಂಗಳದಲ್ಲಿನ ಬಾಗಿದ ತೆಂಗಿನ ಮರಕ್ಕೆ ಆತುಕೊಂಡೇ ನಿಂತಿರುವ ಹಾಗೂ ನಾವು ಮುದುಕರಾಗುವಷ್ಟೊತ್ತಿಗೆ ಬಿದ್ದು ಹೋಗುವ ಮನೆ. ಸದಾ ಒಣಗಿ ಕೃಶವಾಗಿದ್ದ ಅಪ್ಪ ಉರಿಯಲು ತಯಾರಾಗಿದ್ದವನಂತೆ ಆತನ ಹೆಣ ಸುಡುವಾಗ ಪುರಪುರನೆ ಉರಿದುಹೋದ. – ಇದಲ್ಲದೆ ಗಂಡು ಮಕ್ಕಳಿಗೆ ಅಂತಾ ಅವ ಬಿಟ್ಟು ಹೋಗಿದ್ದು ಅರ್ಧ ಸುಟ್ಟ ಒರಟೊರಟಾದ ಬೆನ್ನು ಮೂಳೆಗಳು. ಪುರೋಹಿತರು ಹೇಳಿದಂತೆ ನಾವವನ್ನು ಹುಶಾರಾಗಿ ಆಯ್ದುಕೊಂಡು ಹತ್ತಿರದ ರೈಲು ನಿಲ್ದಾಣದ ಬಳಿಯಿರುವ ತ್ರಿವೇಣಿ ಸಂಗಮದಲ್ಲಿ ಪೂರ್ವಾಭಿಮುಖವಾಗಿ ನಿಂತು ನದಿಯಲ್ಲಿ ತೇಲಿಬಿಟ್ಟೆವು. ಹೀಗಾಗಿ ಅವನ ಹೆಸರು, ಜನನ, ಮರಣದ ದಿನಾಂಕಗಳನ್ನೊಳಗೊಂಡ ಗೋರಿಯನ್ನಾಗಲಿ, ಸಮಾಧಿಯನ್ನಾಗಲಿ ರಚಿಸುವ ಪ್ರಮೇಯ ಬೀಳಲಿಲ್ಲ. – ಅಪ್ಪ ತನ್ನನ್ನೂ ಒಳಗೊಂಡಂತೆ ಯಾವುದನ್ನೂ ಸರಿಯಾಗಿ ನಿಭಾಯಿಸಲಿಲ್ಲ. ಅವನು ಎಷ್ಟು ಸುಲುಭವಾಗಿ ಹುಟ್ಟಿದನೋ ಅಷ್ಟೇ ಸುಲಭವಾಗಿ ಸತ್ತು ಹೋದ. ಒಂದು ಮಟ ಮಟ ಮಧ್ಯಾಹ್ನ ಮದ್ರಾಸಿನ ಬ್ರಾಹ್ಮಣ ಕೇರಿಯೊಂದರಲ್ಲಿ ಸಿಸೇರಿಯನ್ ಮೂಲಕ ಹುಟ್ಟಿದ, ಅಂತೆಯೇ ಹಣ್ಣಿನ ಮಾರ್ಕೇಟೊಂದರಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸತ್ತು ಹೋದ. – ಆದರೆ ನಾಲ್ಕು ದಿನಗಳ ನಂತರ ಯಾರೋ ಒಬ್ಬರು ನನಗೆ ಹೇಳಿದರು ಪತ್ರಿಕೆಯೊಂದರ ಒಳಪುಟಗಳಲ್ಲಿ ಅವನ ಬಗ್ಗೆ ಎರಡು ಸಾಲು ಹೊಗಳಿ ಬರೆಯಲಾಗಿದೆಂದು ಅವ ಸತ್ತು ನಾಲ್ಕು ವಾರಗಳ ನಂತರ ಅದನ್ನೇ ಗುಜರಿ ಅಂಗಡಿಯವನಿಗೆ ಮಾರಲಾಗಿತ್ತು. ಅವನದನ್ನು ತಿರುಗಿ ನಾನು ದಿನಸಿ ಸಾಮಾನುಗಳನ್ನು ಕೊಳ್ಳುವ ಕಿರಾಣಿ ಅಂಗಡಿಯವನಿಗೆ ಮಾರಿದ್ದ. ಆ ಅಂಗಡಿಯವನು ಕಟ್ಟಿಕೊಟ್ಟ ಪೊಟ್ಟಣಗಳಲ್ಲಿ ಬರುವ ಸುದ್ದಿಗಳನ್ನು ನಾನು ಆಗಾಗ ಮೋಜಿಗಾಗಿ ಓದುವದು ರೂಡಿ. ಅಂತೆಯೇ ಅಪ್ಪನ ಮರಣ ವೃತ್ತಾಂತದ ಸಾಲುಗಳು ಇಲ್ಲಿ ಏನಾದರೂ ಸಿಗುತ್ತವೆಯೇನೋ ಎಂದು ಹುಡುಕಾಡುತ್ತೇನೆ. – ಏನಾದರಾಗಲಿ ಅವ ಹೊರಟು ಹೋಗಿದ್ದಾನೆ ನಮ್ಮನ್ನೆಲ್ಲ ಬಿಟ್ಟು ನಮಗೆ ಅಂತಾ ಬೇರೇನನ್ನೂ ಬಿಡದಿದ್ದರೂ ಬಿಟ್ಟು ಹೋಗಿದ್ದಾನೆ ಬದಲಾದ ಅಮ್ಮನನ್ನು ಹಾಗೂ ವರ್ಷ ವರ್ಷವೂ ಮಾಡಲೇಬೇಕಾದ ಅವನ ತಿಥಿಯನ್ನು!]]>

‍ಲೇಖಕರು avadhi

June 20, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

14 ಪ್ರತಿಕ್ರಿಯೆಗಳು

 1. ಡಿ.ಎಸ್.ರಾಮಸ್ವಾಮಿ

  ಅಪ್ಪನ ದಿನ, ಅಮ್ಮನ ದಿನ,ಮಕ್ಕಳ ದಿನ, ಅವರ ದಿನ, ಇವರ ದಿನ ವರ್ಷದುದ್ದಕ್ಕೂ,,,,, ಒಂದೇ ಒಂದು ದಿನವಾದರೂ ನಮ್ಮದೇ ಆದರೆ ಅದೆಷ್ಟು ಚೆನ್ನ?- ಅಪ್ಪನನ್ನು ರಾಮಾನುಜನ್ ಕವಿತೆಯಲ್ಲಿ ಹಿಡಿದ ಹಾಗೇ ಶ್ರೀನಿವಾಸ ವೈದ್ಯರು ಶ್ರಾದ್ಧ ಕತೆಯಲ್ಲಿ ಹಿಡಿದಿದ್ದಾರೆ. ಗಮನಿಸಿ. ಅಪ್ಪನ ದಿನಕ್ಕೆ ಒಳ್ಳೆಯ ಕವಿತೆ,thanks

  ಪ್ರತಿಕ್ರಿಯೆ
 2. ವಸುಧೇಂದ್ರ

  ಮಾನ್ಯರೆ,
  ಜೀವ ನೀಡಿದ ತಂದೆಯ ಬಗ್ಗೆ ಸತ್ತ ಮೇಲೂ ಒಂದಿಷ್ಟೂ ಪ್ರೀತಿ, ಗೌರವ, ಕೊನೆಗೆ ಅನುಕಂಪವೂ ಇಲ್ಲದ ಇಂತಹ ಮನೋಸ್ಥಿತಿಗಳನ್ನು ಹೇಗೆ ಸ್ವೀಕರಿಸಬೇಕೋ ತಿಳಿಯುವದಿಲ್ಲ. ಇವು ಪ್ರಾಮಾಣಿಕವೋ, ಅತಿರಂಜಿತವೋ ಅರ್ಥವಾಗುವದಿಲ್ಲ. ತಂದೆಯ ಬಗ್ಗೆ ಗೌರವ ತರುವ, ಪ್ರೀತಿಯುಕ್ಕಿಸುವ ಯಾವುದಾದರೂ ಒಂದು ಒಳ್ಳೆ ಕವನವನ್ನು ಪ್ರಕಟಿಸಿ.
  ವಸುಧೇಂದ್ರ

  ಪ್ರತಿಕ್ರಿಯೆ
  • ಜೋಗಿ

   ಎ. ಕೆ. ರಾಮಾನುಜನ್ ಅವರ ಅತ್ಯುತ್ತಮ ಕವಿತೆಯೊಂದನ್ನು ವಸುಧೇಂದ್ರ ಕೂಡ ತಪ್ಪಾಗಿ ತಿಳಿದುಕೊಂಡದ್ದು ನೋಡಿ ಬೇಸರವಾಯಿತು. ಅಪ್ಪನ ಬಗ್ಗೆ ಅನುಕಂಪ, ಪ್ರೀತಿ ಇಟ್ಟುಕೊಳ್ಳಬೇಕು ಅನ್ನುವುದು ಆದರ್ಶ. ಹಾಗೇ ಅಪ್ಪನ ಬಗ್ಗೆ ಅನುಮಾನ, ಸಹಜ ಗ್ರಹಿಕೆ, ಬಾಲ್ಯದ ನೆನಪುಗಳು, ಒಂದಿಷ್ಟು ವ್ಯಂಗ್ಯ ಇಟ್ಟುಕೊಂಡು ಬರೆದ ಈ ಪದ್ಯ ನಮ್ಮ ದೇಶದ ಬಹುತೇಕ ಯುವಕರ ಅನಿಸಿಕೆ ಕೂಡ. ನಮ್ಮಪ್ಪನ ಬಗ್ಗೆಯೂ ಇದನ್ನು ಬರೆಯಬಹುದಿತ್ತು ಎಂದು ಎಷ್ಟೋ ಮಂದಿಗೆ ಅನ್ನಿಸದೇ ಹೋದರೆ ಕೇಳಿ. ಅಮ್ಮನ ಬಗ್ಗೆ ಅತಿಭಾವುಕವಾಗಿ ಬರೆಯುವುದು ಬೇರೆ. ಲಂಕೇಶರ ಅವ್ವ, ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆಯ ಸಾಲಿನಲ್ಲಿ ನಿಲ್ಲಬಹುದಾದ ಅತ್ಯುತ್ತಮ ಕವಿತೆ ಇದು. ಅಪ್ಪನ ಬಗ್ಗೆ ನಾನು ಓದಿದ ಕವಿತೆಯೂ ಹೌದು.. ರಾಮಾನುಜನ್ ಗ್ರಹಿಕೆಯಲ್ಲಿ, ಒಳನೋಟಗಳಲ್ಲಿ ಅಲ್ಲಲ್ಲಿ ನಮ್ಮಪ್ಪ ಕೂಡ ಹಣಿಕಿ ಹಾಕಿದರು.
   ಕವಿತೆಯನ್ನು ಯಥಾವತ್ತಾಗಿ ಅರ್ಥಮಾಡಿಕೊಳ್ಳಬಾರದು. ಮೈ ಡ್ಯಾಡ್ ಈಸ್ ಗ್ರೇಟ್ ಎಂಬಂಥ ಬೋಗಸ್ ಧೋರಣೆಯ ಇಂಗ್ಲಿಷ್ ಪದ್ಯಗಳಿಗಿಂತ ಇದು ಭಿನ್ನ ಎನ್ನುವುದು ಗೊತ್ತಾಗಬೇಕಿದ್ದರೆ, ರಾಮನ ಸವಾರಿ ಸಂತೆಗೆ ಹೋದದ್ದು ಕತೆಯನ್ನೂ ಓದಬಹುದು.
   -ಜೋಗಿ

   ಪ್ರತಿಕ್ರಿಯೆ
 3. Savitri

  Antha appandirigu korathe illa bidi. e kavana odutha hodante nan Appa estondu olleyavaru! Namma Avvanannu tamma entu makkala jotheyalli 9ne magalu embante kalajivahisuva nan Appajige krutajnetteyinda manasinalle wandiside. Tiluvalike kadime iddaga Appana mitiyillada kuditha, mitavada duditha nanna kannige dodda doshagalagi kandiddavu. Nantara begane tiliyithu nannappana kudithada karana. Nanage begane buddhi barade hogiddidre Shree Krishnanantha nanna Tandeyannu naan adestu dwesisibiduttiddeno. Thanks God. Hagagalilla. Eega Appa yavagalo omme haley friends sikkaga mathra mithavagi gundu hakuthare. Tamma 71ne vayasinallu kriyasheelaragi, mane makkalu, mommakkalondige nagutha idare. Appaji Bettadanthe maneyaliddare adentha hemme alva? Naavaste alla Ammanu adrustavanthe. Hagagi nange Appa Amma andre nithyada Prathaneya kendrabindu.
  Regards
  savi
  Regard

  ಪ್ರತಿಕ್ರಿಯೆ
 4. Nagraj mukari

  being a poet my self,I AM IMPRESSED but when tha same thinG has read by a common man that too kannadiga they feel so pity on a FATHER..good anuvaada.

  ಪ್ರತಿಕ್ರಿಯೆ
  • Uday Itagi

   ಪ್ರೀತಿಯ ಜೋಗಿಯವರೆ,
   ನೀವು ನನ್ನ ಅನುವಾದಕ್ಕೆ ಪ್ರತಿಕ್ರಿಯಿಸುತ್ತಾ ನನ್ನ ಟಿಪ್ಪಣಿ ತಪ್ಪಾಗಿ ಓದುವಂತೆ ಪ್ರೇರಿಪಿಸುತ್ತದೆ ಎಂದು ಹೇಳಿರುವಿರಿ. ಆದರೆ ನನಗೆ ಹಾಗನಿಸಲಿಲ್ಲ. ಕವನ ಅಪ್ಪನ ಬಗೆಗಿನ ಒಂದಿಷ್ಟು ವ್ಯಂಗ, ಲೇವಡಿ, ತಮಾಷೆ ಮಾಡುತ್ತಾ ಯಾವೊಂದು ಹೊಗಳಿಕೆಯಿಲ್ಲದೆ ಅಪ್ಪನನ್ನು ಇದ್ದಕ್ಕಿದ್ದಂತೆ ಸೆರೆಹಿಡಿಯುವ ಪ್ರಯತ್ನ ಮಾಡುವದರಿಂದ ಕವನ ನಮಗೆ ಹತ್ತಿರವಾಗುತ್ತದೆ, ಆಪ್ತವಾಗುತ್ತದೆ. ಆದರೆ ಆಳದೆಲ್ಲೆಲ್ಲೋ ಅಪ್ಪನ ಬಗೆಗಿನ ಕವಿಯ ಬೇಸರ ವ್ಯಕ್ತವಾಗುತ್ತದೆ. ಆ ಹಿನ್ನೆಲೆಯಲ್ಲಿ ಅವರ ಅಪ್ಪ ಕುಟುಂಬದ ಜೊತೆ ಚೆನ್ನಾಗಿರಲಿಲ್ಲವೇನೋ ಎಂದು ಹೇಳಿದ್ದೇನೆ. ಇದು ನನ್ನೊಬ್ಬನದು ಮಾತ್ರವಲ್ಲ ವಿಮರ್ಶಕರ ಅಭಿಪ್ರಾಯವೂ ಇದೇ ಆಗಿದೆ. ಇನ್ನು ನೀವು ಹೇಳುವ ಹಾಗೆ ಸಂಬಂಧಗಳಲ್ಲಿ ಬೇಸರವನ್ನು ವ್ಯಕ್ತಪಡಿಸುವದು ಸಹ ಒಂದು ರೀತಿಯ ಅನನ್ಯ ಪ್ರೀತಿಯ ಪ್ರಕಟಣೆ ಎಂದು ಪರಿಗಣಿಸಬೇಕೆ?.
   ಆದರೆ ಒಬ್ಬ ಅಪ್ಪ ಬೇಜವಾಬ್ದಾರಿಯಾದಾಗ, ಅಥವಾ ಆತ ಮಾಡಿ ಮುಗಿಸಬೇಕಾದ ಕರ್ತ್ಯವ್ಯಗಳನ್ನು ಮುಗಿಸದೆ ಹಾಗೆ ಹೋದಾಗ ಎಂಥ ಮಕ್ಕಳಿಗೂ ಅಪ್ಪನ ಮೇಲೆ ಬೇಸರ ಮೂಡುವದು ಸಹಜ ಮತ್ತು ಆತನ ಮೇಲೆ ಒಂದು ಅಸಹನೆ ಇದ್ದೇ ಇರುತ್ತದೆ. ಅದು ಕವನದ ಆರಂಭದಲ್ಲಿನ ಸಾಲುಗಳಲ್ಲಿ ಹಾಗೂ “ಅಪ್ಪ ತನ್ನನ್ನೂ ಒಳಗೊಂಡಂತೆ/ಯಾವುದನ್ನೂ ಸರಿಯಾಗಿ ನಿಭಾಯಿಸಲಿಲ್ಲ.” ಎನ್ನುವ ಸಾಲುಗಳಲ್ಲಿ ವ್ಯಕ್ತವಾಗುತ್ತದೆ. ತಂದೆ ಬೇಜವಾಬ್ದಾರಿಯಾದಾಗ ಎಂಥ ಮಕ್ಕಳು ಅಪ್ಪನ ಮೇಲೆ ಕೋಪಗೊಳ್ಳುವದು, ಬೇಸರಗೊಳ್ಳುವದು ಸಹಜ. ಅಂಥ ಅಪ್ಪಂದಿರಿರುವಾಗ ಹೇಗೆ ಸಿಟ್ಟು, ಬೇಸರ ವ್ಯಕ್ತವಾಗುತ್ತದೆ ಎನ್ನುವದಕ್ಕೆ ನನ್ನ ಅಪ್ಪನ ಮೇಲೆ ನಾನು ಬರೆದ ಕವನವನ್ನು ಈ ಲಿಂಕಿನಲ್ಲಿ ಓದಿ. http://bisilahani.blogspot.com/2009/06/blog-post_19.html
   ಇನ್ನುಳಿದಂತೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

   ಪ್ರತಿಕ್ರಿಯೆ
 5. ಜೋಗಿ

  ಅಂದ ಹಾಗೆ ಉದಯ ಇಟಗಿಯ ಟಿಪ್ಪಣಿ ಕೂಡ ಕವಿತೆಯನ್ನು ತಪ್ಪಾಗಿ ಓದುವಂತೆ ಪ್ರೇರೇಪಿಸುತ್ತದೆ. ಬಹುಶಃ ಅವರ ಅಪ್ಪ ಕುಟುಂಬದ ಜೊತೆ ಚೆನ್ನಾಗಿರಲಿಲ್ಲವೇನೋ, ಕವಿಯ ನಿಷ್ಠುರ ಧೋರಣೆ ಅನ್ನುವ ಮಾತುಗಳು ಸರಿಯಲ್ಲ. ಕವಿಗೆ ಅಪ್ಪನ ಮೇಲಿರುವ ಅನನ್ಯ ಪ್ರೀತಿಯನ್ನು ಈ ಕವಿತೆ ತೋರಿಸುತ್ತದೆ.
  ಜೋಗಿ

  ಪ್ರತಿಕ್ರಿಯೆ
 6. ವಸುಧೇಂದ್ರ

  ಪ್ರಿಯ ಜೋಗಿ,
  ತಾಯಿಯನ್ನು ದೇವತೆ, ಕರುಣಾಮಯಿ, ಸಹನಶೀಲೆ ಅಂತೆಲ್ಲಾ ಅತಿಭಾವುಕತೆಯಲ್ಲಿ ಬರೆದರೆ ಹೇಗೆ ಅಸಹನೀಯವಾಗುತ್ತದೆಯೋ, ಹಾಗೇ ತಂದೆಯನ್ನೂ ನಖಶಿಖಾಂತ ದ್ವೇಷಿಸುವ ಮನಸ್ಥಿತಿಯನ್ನು ಕಂಡಾಗಲೂ ನನಗೆ ಅಸಹನೀಯವೆನ್ನಿಸುತ್ತದೆ. ಎರಡೂ ಅತಿರಂಜಿತವಾದ ಬರವಣಿಗೆಗಳು. ಹರೆಯದ ಒಂದು ವಯಸ್ಸಿನಲ್ಲಿ ಎಲ್ಲರೂ ತಂದೆಯನ್ನು ಸಂಪೂರ್ಣವಾಗಿ ದ್ವೇಷಿಸುವದನ್ನು ನಾನು ಕಂಡಿದ್ದೇನೆ. ಆದರೆ ಮದುವೆಯಾಗಿ, ಉಚ್ಚೆ ಹೊಯ್ಯುವ ಮಗ ಹುಟ್ಟಿ, ತಂದೆ ಸತ್ತ ಮೇಲೂ ಅದೇ ಭಾವವನ್ನು ಹೊಂದಿದ್ದರೆ ಅಂತಹ ಮನೋಸ್ಥಿತಿಯನ್ನು ನಾನು ಖಂಡಿತಾ ಅನಾರೋಗ್ಯವೆಂದು ಪರಿಗಣಿಸುತ್ತೇನೆ. ತಂದೆಯ ಬಗ್ಗೆ ಒಂದಿಷ್ಟು ಪ್ರೀತಿ, ಅನುಕಂಪ ಇಟ್ಟುಕೊಳ್ಳಬೇಕು ಎನ್ನುವುದು ಯಾವುದೇ ದೊಡ್ಡ ಆದರ್ಶವಲ್ಲ, ಅದು ಮಾನವೀಯತೆ. ಹಾಗಂತ ’ಮೈ ಗಾಡ್ ಈಜ್ ಗ್ರೇಟ್’ ಎಂಬ ಅತಿಭಾವುಕ ಕವಿತೆ ಬರೆಯಬೇಕು ಎಂದು ಯಾವ ಸೂಕ್ಷ್ಮ ಸಾಹಿತ್ಯಪ್ರೇಮಿಯೂ ಬಯಸುವದಿಲ್ಲ.
  ಕನ್ನಡದಲ್ಲಿ ಒಂದು ಕಾಲಘಟ್ಟದಲ್ಲಿ ತಂದೆಯನ್ನು ದ್ವೇಷಿಸಿ ಬರೆಯುವದು ಒಂದು ಫ್ಯಾಷನ್ ಆಗಿತ್ತು. ಇದು ಅಂತಹದೇ ಒಂದು ಬರವಣಿಗೆ ಎಂದು ನನ್ನ ಅನಿಸಿಕೆ. ಆ ಕಾಲಘಟ್ಟದಲ್ಲಿ ವಯೋಮಾನದ ಬಿಸಿರಕ್ತದ ಸಹಜತೆಯಿಂದಾಗಿ ನಿಮಗೂ ಈ ಕವಿತೆ ಇಷ್ಟವಾಗಿರಬಹುದು. ಆದರೆ ದಯವಿಟ್ಟು ಆ ಹುಸಿ ಭಾವಲೋಕದಿಂದ ಹೊರಬಂದು ಈ ಕವಿತೆಯನ್ನು ಓದಿ. ಈ ಕವಿತೆಯ ಯಾವ ಸಾಲಿನಲ್ಲೂ ನನಗೆ ತಂದೆಯ ಬಗ್ಗೆ ಪ್ರೀತಿ ಕಾಣಲಿಲ್ಲ. ಪ್ರೀತಿಯ ಮನೆ ಹಾಳಾಗಲಿ, ಕನಿಷ್ಟ ಮಾನವೀಯತೆಯ ದೃಷ್ಟಿಕೋನವೂ ಇಲ್ಲಿ ನನಗೆ ಸಿಗಲಿಲ್ಲ. ನನ್ನ ಗ್ರಹಿಕೆಗೆ ನಿಲುಕದ ವಿಷಯಗಳು ಇದರಲ್ಲಿವೆಯೇನೋ ಗೊತ್ತಿಲ್ಲ.
  ದಯವಿಟ್ಟು ಈ ಕವಿತೆಯನ್ನು ಲಂಕೇಶರ ’ಅವ್ವ’ ಕವಿತೆಗೆ ಹೋಲಿಸಬೇಡಿ. ತಾಯಿಯ ಬಗ್ಗೆ ಅತ್ಯಂತ ಪ್ರೀತಿಯಿಂದ ಮತ್ತು ಪ್ರಾಮಾಣಿಕತೆಯಿಂದ ಬರೆದ ಕವಿತೆ ಅದು. ಈ ಕವಿತೆಯಲ್ಲಿ ಪ್ರಾಮಾಣಿಕತೆ ಕಾಣುತ್ತದೆಯೇ ಹೊರತು, ಪ್ರೀತಿ ಹಾಗೂ ಮಾನವೀಯತೆಯಲ್ಲ.
  ವಸುಧೇಂದ್ರ

  ಪ್ರತಿಕ್ರಿಯೆ
  • Uday Itagi

   ಪ್ರೀತಿಯ ವಸುಧೇಂದ್ರರವರೆ,
   ನನ್ನ ಅನುವಾದಕ್ಕೆ ಪ್ರತಿಕ್ರಿಯಿಸುತ್ತಾ ನಿಮ್ಮ ಮತ್ತು ಜೋಗಿಯವರ ವಾದ ವಿವಾದಗಳನ್ನು ಓದಿ ನಾನಿಲ್ಲಿ ಪ್ರತಿಕ್ರಿಯಿಸುತ್ತಿದ್ದೇನೆ. ಜೋಗಿಯವರು ನಿಮಗೆ ಹೇಗೆ ಪ್ರತಿಕ್ರಿಯಿಸುತ್ತಾರೋ ನನಗೆ ಗೊತ್ತಿಲ್ಲ. ಆದರೆ ನಿಮ್ಮ ಪ್ರತಿಕ್ರಿಯೆಯ ಧಾಟಿಯನ್ನು ಓದಿ ಒಂದೆರೆಡು ಸಾಲು ಬರೆಯಬೇಕೆಂದೆನಿಸಿದ್ದರಿಂದ ಇಲ್ಲಿ ಬರೆಯುತ್ತಿದ್ದೇನೆ. <> ವಸುಧೇಂದ್ರರವರೆ, ಈ ಜಗತ್ತಿನಲ್ಲಿ ಒಳ್ಳೆಯ ಅಪ್ಪಂದಿರು ಇರುವಂತೆ ಕೆಟ್ಟ ಅಪ್ಪಂದಿರು ಇರುವದಿಲ್ಲವೆ? ಅಸಲಿಗೆ ತಂದೆಯ ದಿನದಂದು ಬರೀ ಒಳ್ಳೆಯ ಅಪ್ಪಂದಿರನ್ನು ನೆನೆಯಬೇಕೆ? ಅಥವಾ ಕೆಟ್ಟ ಅಪ್ಪಂದಿರನ್ನು ನೆನೆಯುವದು ತಪ್ಪೆ? ತಂದೆಯ ದಿನದಂದು ಅಪ್ಪನ ಬಗೆಗೆ ಪ್ರೀತಿ, ಅಂತಃಕರಣ, ಮಾನವೀಯತೆಯಿರುವಂಥ ಕವನಗಳನ್ನು ಮಾತ್ರ ಏಕೆ ನಿರೀಕ್ಷಿಸಬೇಕು? ಇಂಥ ಕವನಗಳನ್ನು ನಿರೀಕ್ಷಿಸುವದರಲ್ಲಿ ತಪ್ಪೇನು?
   ಇನ್ನು ಜೋಗಿಯವರಿಗೆ ನೀವು ಉತ್ತರ ನೀಡುತ್ತಾ “ತಾಯಿಯನ್ನು ದೇವತೆ, ಕರುಣಾಮಯಿ, ಸಹನಶೀಲೆ ಅಂತೆಲ್ಲಾ ಅತಿಭಾವುಕತೆಯಲ್ಲಿ ಬರೆದರೆ ಹೇಗೆ ಅಸಹನೀಯವಾಗುತ್ತದೆಯೋ, ಹಾಗೇ ತಂದೆಯನ್ನೂ ನಖಶಿಖಾಂತ ದ್ವೇಷಿಸುವ ಮನಸ್ಥಿತಿಯನ್ನು ಕಂಡಾಗಲೂ ನನಗೆ ಅಸಹನೀಯವೆನ್ನಿಸುತ್ತದೆ.” ಎಂದು ಹೇಳುತ್ತಾ ಮದುವೆಯಾಗಿ, ಉಚ್ಚೆ ಹೊಯ್ಯುವ ಮಗ ಹುಟ್ಟಿ, ತಂದೆ ಸತ್ತ ಮೇಲೂ ಅದೇ ಭಾವವನ್ನು ಹೊಂದಿದ್ದರೆ ಅಂತಹ ಮನೋಸ್ಥಿತಿಯನ್ನು ನಾನು ಖಂಡಿತಾ ಅನಾರೋಗ್ಯವೆಂದು ಪರಿಗಣಿಸುತ್ತೇನೆ. ತಂದೆಯ ಬಗ್ಗೆ ಒಂದಿಷ್ಟು ಪ್ರೀತಿ, ಅನುಕಂಪ ಇಟ್ಟುಕೊಳ್ಳಬೇಕು ಎನ್ನುವುದು ಯಾವುದೇ ದೊಡ್ಡ ಆದರ್ಶವಲ್ಲ, ಅದು ಮಾನವೀಯತೆ.” ಸಾಮಾನ್ಯವಾಗಿ ನಾವೆಲ್ಲಾ ವ್ಯಕ್ತಿ ಸತ್ತ ಮೇಲೆ ಅವನನ್ನು ಹೊಗಳುತ್ತಾ, ಉತ್ಪ್ರೇಕ್ಷಿಸುತ್ತಾ ಅವನಿರುವದಕ್ಕೆ ತದ್ವಿರುದ್ಧವಾಗಿ ಬಣ್ಣಿಸುತ್ತಾ ಅವನ ಅಸಲು ರೂಪವನ್ನೇ ಮರೆಮಾಚುತ್ತೇವೆ. ಆದರೆ ಇಲ್ಲಿ ರಾಮಾನುಜನ್ ಅವರು ತಮ್ಮ ತಂದೆಯ ಬಗ್ಗೆ ನೇರವಾಗಿ ಅವರಿರುವಂತೆ ಚಿತ್ರಿಸಿದ್ದಾರೆ. ಆ ದೄಷ್ಟಿಯಿಂದ ಕವನ ನಮಗೆ ಪ್ರಿಯವಾಗುತದೆ, ಆಪ್ತವಾಗುತ್ತದೆ. ವ್ಯಕ್ತಿಯೊಬ್ಬ ಇದ್ದಂತೆ ಇದ್ದುದನ್ನು ಚಿತ್ರಿಸುವದು ಉಗ್ರ ಪ್ರಾಮಾಣಿಕತೆ ಹೇಗಾಗುತ್ತದೆ? ಅಥವಾ ಹಾಗೆ ಮರೆಮಾಚಿ ಬರೆಯುವದು ಆತ್ಮವಂಚನೆಯಾಗುವದಿಲ್ಲವೆ? ಅಸಲಿಗೆ ರಾಮಾನುಜನ್ ಅವರಿಗೆ ಅವರ ತಂದೆಯಿಂದ ಭಾವನಾತ್ಮಕವಾಗಿ, ಅರ್ಥಿಕವಾಗಿ ಯಾವುದೇ ಸಹಾಯ ಸಿಕ್ಕಂತೆ ಕಾಣುವದಿಲ್ಲ. ಹೀಗಾಗಿ ಆ ಸಿಟ್ಟು ಕವನದುದ್ದಕ್ಕೂ ವ್ಯಕ್ತವಾಗಿದ್ದರಲ್ಲಿ ಆಶ್ಚರ್ಯವೇನು? <> ಇಲ್ಲಿ ಕವಿ ಏನನ್ನೂ ಮಾಡದ ತನ್ನ ತಂದೆಯನ್ನು ಪ್ರೀತಿಸಲು ಹೇಗೆ ಸಾಧ್ಯ? ಅಥವಾ ಮದುವೆಯಾಗಿ, ಉಚ್ಚೆ ಹೊಯ್ಯುವ ಮಗ ಬಂದಾದ ಮೇಲೂ ತಂದೆಯ ಬಗೆಗಿನ ಮೊದಲಿನ ಭಾವವು ಬದಲಾಗಲು ಸಾಧ್ಯವೆ? ಪ್ರೀತಿ, ಅಂತಃಕರಣ, ಮಾನವೀಯತೆ ಎನ್ನುವಂಥದು ಇನ್ನೊಬ್ಬರು ನಮಗೆ ತೋರಿಸಿದಾಗಲೆ ನಾವು ಅವರೆಡೆಗೆ ತೋರಿಸುವದು ಸಹಜ. ಇದು ಮಾನವ ಸಹಜ ಪ್ರವೃತ್ತಿ. ಇಲ್ಲವಾದರೆ ದ್ವೇಷಿಸುವದು ಸಹಜವಾಗುವದಿಲ್ಲವೆ? ಆ ನಿಟ್ಟಿನಲ್ಲಿ ರಾಮಾನುಜನ್, ಅವರಪ್ಪನನ್ನು ದ್ವೇಷಿಸಿದ್ದು ಸಹಜ ಎನಿಸುವದಿಲ್ಲವೆ?
   “ದಯವಿಟ್ಟು ಈ ಕವಿತೆಯನ್ನು ಲಂಕೇಶರ ’ಅವ್ವ’ ಕವಿತೆಗೆ ಹೋಲಿಸಬೇಡಿ. ತಾಯಿಯ ಬಗ್ಗೆ ಅತ್ಯಂತ ಪ್ರೀತಿಯಿಂದ ಮತ್ತು ಪ್ರಾಮಾಣಿಕತೆಯಿಂದ ಬರೆದ ಕವಿತೆ ಅದು. ಈ ಕವಿತೆಯಲ್ಲಿ ಪ್ರಾಮಾಣಿಕತೆ ಕಾಣುತ್ತದೆಯೇ ಹೊರತು, ಪ್ರೀತಿ ಹಾಗೂ ಮಾನವೀಯತೆಯಲ್ಲ.” ಇಲ್ಲಿ ನಿಮ್ಮನ್ನು ಸಮರ್ಥಿಸುಕೊಳ್ಳುತ್ತೇನೆ.
   ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

   ಪ್ರತಿಕ್ರಿಯೆ
   • ವಸುಧೇಂದ್ರ

    ಪ್ರಿಯ ಉದಯ ಇಟಗಿಯವರೆ,
    ಮೊದಲಿಗೆ ನಿಮಗೆ ಅಭಿಂದನೆಗಳನ್ನು ತಿಳಿಸಿ ಬಿಡುತ್ತೇನೆ. ನಿಮ್ಮ ಅನುವಾದ ಅತ್ಯಂತ ಸೊಗಸಾಗಿದೆ. ನೀವು ಈ ಹಿಂದೆ ಅನುವಾದಿಸಿದ ಹಲವು ಕವಿತೆಗಳನ್ನು ಅವಧಿಯಲ್ಲಿ ಓದಿ ಮೆಚ್ಚಿಕೊಂಡಿದ್ದೇನೆ.
    ಈಗ ವಿಷಯಕ್ಕೆ ಬರೋಣ. ಜಗತ್ತಿನಲ್ಲಿ ಒಳ್ಳೆಯ ಅಪ್ಪ, ಕೆಟ್ಟ ಅಪ್ಪ ಇದ್ದಾರೆ ಎಂಬುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಬರೀ ಅಪ್ಪಂದಿರೊಂದೇ ಅಲ್ಲ, ಅಕ್ಕ, ಅಣ್ಣ, ಅಮ್ಮ, ತಮ್ಮ, ಸ್ನೇಹಿತ – ಎಲ್ಲರಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತವೆ. ಅವುಗಳ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಆದರೆ ಪೂರ್ತಿ ಕೆಟ್ಟ ಮತ್ತು ಪೂರ್ತಿ ಒಳ್ಳೆಯ ಅಪ್ಪ ಇದ್ದಾರೆಂದು ನಾನು ಒಪ್ಪಿಕೊಳ್ಳುವದಿಲ್ಲ. ಆ ರೀತಿ ಯಾವುದೇ ವ್ಯಕ್ತಿಯನ್ನು ಕಪ್ಪು-ಬಿಳುಪಾಗಿ ನೋಡುವ ದೃಷ್ಟಿಕೋನವೂ ನನಗೆ ಪ್ರಾಮಾಣಿಕವೆನ್ನಿಸುವದಿಲ್ಲ. ಅದೂ ತಂದೆ-ತಾಯಿಯರ ವಿಷಯದಲ್ಲಿ ಅಂತಹ ಮನೋಭಾವವನ್ನು ನಾನು ಖಂಡಿತಾ ಒಪ್ಪುವದಿಲ್ಲ.
    ಅಪ್ಪನ ದಿನದಂದು ಕೆಟ್ಟ ಅಪ್ಪನ ಪದ್ಯ ಪ್ರಕಟಿಸಿದ್ದು ನನಗೆ ತಪ್ಪಾಗಿ ಕಾಣುತ್ತಿಲ್ಲ. ಆದರೆ ತಂದೆಯನ್ನು ಅಮೂಲಾಗ್ರವಾಗಿ ಬರೀ ದ್ವೇಷದ ಭಾವದಿಂದಲೇ ನೋಡುವ ಕವಿಯ ಮನೋಭಾವ ನನಗೆ ಸಮಸ್ಯೆಯಾಗಿ ಕಾಣಿಸಿದೆ.
    ವಸುಧೇಂದ್ರ

    ಪ್ರತಿಕ್ರಿಯೆ
    • ಜೋಗಿ

     ಪ್ರೀತಿಯ ವಸುಧೇಂದ್ರ ಮತ್ತು ಉದಯ್,
     ನಾನು ಹೇಳಲಿಕ್ಕೆ ಇಷ್ಟಪಟ್ಟದ್ದು ಇಷ್ಟೇ. ಕವಿತೆ ಅವರವರಿಗೇ ಇಷ್ಟವಾಗಬೇಕೇ ಹೊರತು, ಬೇರೆಯವರು ಮೆಚ್ಚಿಕೊಂಡಿದ್ದಾರೆ ಎಂಬ ಕಾರಣಕ್ಕಲ್ಲ. ಒಂದು ಕವಿತೆ ಒಳ್ಳೆಯದೋ ಹೌದೋ ಎಂಬ ಕುರಿತ ಚರ್ಚೆಯೇ ಒಂದು ಅರ್ಥದಲ್ಲಿ ತಪ್ಪು. ಸಮಾನಮನಸ್ಕರಿಗೆ ಕೆಲವು ಸಮಾನ ಕಾರಣಗಳಿಗೋಸ್ಕರ ಕೆಲವು ಕವಿತೆಗಳು ಇಷ್ಟವಾಗುತ್ತವೆ.
     ಅಪ್ಪ ಒಳ್ಳೆಯವನೋ ಕೆಟ್ಟವನೋ, ಒಳ್ಳೆಯ ಅಪ್ಪನಲ್ಲಿರುವ ಕೆಟ್ಟ ಗುಣಗಳನ್ನು ತೋರಿಸಬೇಕಿತ್ತು, ಕೆಟ್ಟ ಅಪ್ಪನಲ್ಲಿರುವ ಒಳ್ಳೆಯ ಗುಣಗಳನ್ನೂ ಹೇಳಬೇಕಿತ್ತು ಅಂತ ಬಯಸುವುದಕ್ಕೆ ಕವಿತೆ ಬ್ಯಾಲೆನ್ಸ್ ಶೀಟ್ ಅಲ್ಲ. ತಪ್ಪು ಸರಿಗಳ ಪಟ್ಟಿಯಲ್ಲ. ಕವಿಯ ಗ್ರಹಿಕೆ. ಈ ಕ್ಷಣ ಕೆಟ್ಟವನು ಅನ್ನಿಸಿದವನು, ಮತ್ತೊಂದು ಕ್ಷಣ ತುಂಬ ಒಳ್ಳೆಯವನು ಅನ್ನಿಸಬಹುದು. ಆಗ ಅವನು ಮತ್ತೊಂದು ಪದ್ಯ ಬರೆಯಲೂಬಹುದು. ಅಷ್ಟಕ್ಕೂ ರಾಮಾನುಜನ್ ಪದ್ಯದಲ್ಲಿ ರಾಮಾನುಜನ್ ಮತ್ತು ಅವನ ತಂದೆಯೇ ಇದ್ದಾರೆ ಎಂದು ಯಾಕೆ ಊಹಿಸಬೇಕು. ಒಬ್ಬ ಮಗ, ತನ್ನ ತಂದೆಯ ಕುರಿತು ಬರೆದ ಪದ್ಯ ಅದೇಕೆ ಆಗಬಾರದು.
     ಹೀಗೆ ಪ್ರಶ್ನೆಗಳು ಅನೇಕ ಇವೆ.
     ಅಂದ ಹಾಗೆ ಈ ಇಂಗ್ಲಿಷ್ ಮೂಲ ಓದಿ. ಅಷ್ಟೊಂದು ಕ್ರೂರಿ ಅಪ್ಪ ಎಂದು ಅನ್ನಿಸಲಿಕ್ಕಿಲ್ಲ.
     OBITUARY
     Father, when he passed on,
     left dust
     on a table of papers,
     left debts and daughters,
     a bedwetting grandson
     named by the toss
     of a coin after him,
     a house that leaned
     slowly through our growing
     years on a bent coconut
     tree in the yard.
     Being the burning type,
     he burned properly
     at the cremation
     as before, easily
     and at both ends,
     left his eye coins
     in the ashes that didn’t
     look one bit different,
     several spinal discs, rough,
     some burned to coal, for sons
     to pick gingerly
     and throw as the priest
     said, facing east
     where three rivers met
     near the railway station;
     no longstanding headstone
     with his full name and two dates
     to hold in their parentheses
     everything he didn’t quite
     manage to do himself,
     like his caesarian birth
     in a brahmin ghetto
     and his death by heart-
     failure in the fruit market.
     But someone told me
     he got two lines
     in an inside column
     of a Madras newspaper
     sold by the kilo
     exactly four weeks later
     to streethawkers
     who sell it in turn
     to the small groceries
     where I buy salt,
     coriander,
     and jaggery
     in newspaper cones
     that I usually read
     for fun, and lately
     in the hope of finding
     these obituary lines.
     And he left us
     a changed mother
     and more than
     one annual ritual.

     ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: